ಬಾಲ ಕಾರ್ಮಿಕರ ಪುನರ್ವಸತಿ ಮತ್ತು ಕಲ್ಯಾಣ ನಿಧಿ

ಪ್ರತಿ ಒಂದು ಅಥವಾ ಎರಡು ಜಿಲ್ಲೆಗಳಿಗೆ ಬಾಲ ಕಾರ್ಮಿಕರ ಪುನರ್ವಸತಿ ಮತ್ತು ಕಲ್ಯಾಣ ನಿಧಿ ಎಂಬ ನಿಧಿಯನ್ನು ಸರ್ಕಾರ ರಚಿಸಿದೆ. ಬಾಲ ಕಾರ್ಮಿಕರನ್ನು ಕೆಲಸಕ್ಕಿಟ್ಟುಕೊಂಡಿರುವ ಉದ್ಯೋಗದಾತರು ಕೊಟ್ಟ ಜುಲ್ಮಾನೆಯನ್ನು ಈ ನಿಧಿಗೆ ಪಾವತಿಸಲಾಗುತ್ತದೆ. ಇದಾಗ್ಯೂ, ಉದ್ಯೋಗದಾತರು ಎಷ್ಟೆಷ್ಟು ಮಕ್ಕಳು ಅಕ್ರಮವಾಗಿ ಕೆಲಸಕ್ಕಿಟ್ಟುಕೊಂಡು ಜುಲ್ಮಾನೆ ಕಟ್ಟಿದ್ದಾರೋ, ತಲಾ ಒಂದರಂತೆ ಪ್ರತಿ ಮಗುವಿನ ಹೆಸರಲ್ಲಿ ೧೫೦೦೦ ರೂಪಾಯಿಗಳನ್ನು ಸರ್ಕಾರ ಈ ನಿಧಿಗೆ ಪಾವತಿಸಬೇಕು. ಈ ನಿಧಿಯನ್ನು ಬ್ಯಾಂಕ್ ನಿರ್ವಹಿಸುತ್ತದೆ. ಬ್ಯಾಂಕಿನಲ್ಲಿರುವ ಹಣದ ಮೇಲಿನ ಬಡ್ಡಿ ಮಗುವಿಗೆ ಸೇರುತ್ತದೆ.

 

ಬಾಲ ಕಾರ್ಮಿಕರ ಪುನರ್ವಸತಿ

ಯಾವುದೇ ಮಗು/ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿ ಬಾಲ ಕಾರ್ಮಿಕರಾಗಿದ್ದರೆ, ಮಕ್ಕಳ ಪುನರ್ವಸತಿಗೆ ಸಂಬಂಧಿಸಿದ ಕಾನೂನಾದ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ೨೦೧೫ರ ಪ್ರಕಾರ ಅವರಿಗೆ ಪುನರ್ವಸತಿ ನೀಡಲಾಗುತ್ತದೆ.

ಕೌಟುಂಬಿಕ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳು

೧೪ ವರ್ಷಗಳ ಕೆಳಗಿನ ಮಕ್ಕಳು ಮತ್ತು ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳಿಗೆ ಕೌಟುಂಬಿಕ ಉದ್ಯಮದಲ್ಲಿ ಕೆಲಸ ಮಾಡುವ ಅನುಮತಿ ಇದೆ.

ಕೌಟುಂಬಿಕ ಉದ್ಯಮ:

ಕುಟುಂಬದ ಸದಸ್ಯರಿಂದ ನಡೆಸಲಾದ/ನಿರ್ವಹಿಸಲಾದ ಯಾವುದೇ ಕೆಲಸ/ಉದ್ಯಮಕ್ಕೆ ಕೌಟುಂಬಿಕ ಉದ್ಯಮ ಎನ್ನುತ್ತಾರೆ. ಈ ಉದ್ಯಮ ಕುಟುಂಬದ ನಿಕಟ ಸದಸ್ಯರಿಂದ (ಅಮ್ಮ, ಅಪ್ಪ, ಅಕ್ಕ, ಅಣ್ಣ), ಅಥವಾ ದೂರದ ಸದಸ್ಯರಿಂದ (ಅಪ್ಪನ ಅಕ್ಕ/ಅಣ್ಣ, ಅಮ್ಮನ ಅಕ್ಕ/ಅಣ್ಣ) ನಡೆಸುತ್ತಿರಬಹುದು, ಅಥವಾ ಅವರಿಗೆ ಸೇರಿರಬಹುದು.

ಕೆಲಸದ ತರಹಗಳು:

 • ಅಪಾಯಕಾರಿ ಪದಾರ್ಥಗಳು ಅಥವಾ ಪ್ರಕ್ರಿಯೆಗಳು
 • ಗಣಿಗಳು, ದಹಿಸಬಲ್ಲ ಪದಾರ್ಥಗಳು ಮತ್ತು ಸ್ಫೋಟಕ ವಸ್ತುಗಳು

ಮಕ್ಕಳಿಗೆ ಕೌಟುಂಬಿಕ ಉದ್ಯಮದಲ್ಲಿ ಕೆಲಸ ಮಾಡುವ ಹಕ್ಕಿದೆ, ಆದರೆ ಅವರ ಶಿಕ್ಷಣಕ್ಕೆ ಇದರಿಂದ ಕುತ್ತು ಬರಬಾರದು. ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:

 • ಮಕ್ಕಳಿಗೆ ಶಿಕ್ಷಣದ ಹಕ್ಕಿದೆ
 • ಕೇವಲ ಶಾಲಾ ವೇಳೆಯ ನಂತರ ಅಥವಾ ರಾಜಾ ದಿನಗಳಲ್ಲಿ ಅವರನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಕು
 • ಕಾನೂನಿನಡಿಯಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವುದು ತಂದೆ-ತಾಯಿಯರ ಕರ್ತವ್ಯ.

ಕೆಲಸ ಮಾಡುತ್ತಿರುವ ಮಕ್ಕಳ ಆರೋಗ್ಯ ಮತ್ತು ಸುರಕ್ಷೆ

ಕೆಲಸ ಮಾಡುತ್ತಿರುವ ಮಕ್ಕಳ ಆರೋಗ್ಯ ಮತ್ತು ಸುರಕ್ಷೆಯನ್ನು ಕಾಪಾಡುವುದು ಮುಖ್ಯ. ಮಕ್ಕಗಳನ್ನು / ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳನ್ನು ನೀವು ಮಾನ್ಯವಾಗಿ ಉದ್ಯೋಗಕ್ಕಿಟ್ಟುಕೊಂಡಲ್ಲಿ, ಕೆಳಗಿನ ಕ್ರಮಗಳನ್ನು ತೆಗೆದುಕೊಂಡು ಕಾಳಜಿ ಮತ್ತು ಸುರಕ್ಷತೆಯ ಅತ್ಯುನ್ನತ ಮಾನದಂಡಗಳನ್ನು ನೀವು ಪಾಲಿಸಬೇಕು:

ಪರಿಸರ:

 • ಕೆಲಸದ ಸ್ಥಳ ಶುಚಿಯಾಗಿರಬೇಕು, ಮತ್ತು ಯಾವುದೇ ರೀತಿಯ ಹೇಸಿಗೆಯಿಂದ ದೂರವಿರಬೇಕು.
 • ತ್ಯಾಜ್ಯಗಳು ಮತ್ತು ವಿಸರ್ಜನೆಗಳು ಸರಿಯಾದ ರೀತಿಯಲ್ಲಿ ವಿಲೇವಾರಿಗೊಳ್ಳಬೇಕು (ಅನೈರ್ಮಲ್ಯವಾಗಿ ಅಥವಾ ಮುಕ್ತವಾಗಿ ಅಲ್ಲ)
 • ಕೆಲಸದ ಸ್ಥಳದಲ್ಲಿ ಸರಿಯಾದ ವಾತಾಯನ ಮತ್ತು ಬೆಳಕು ಇರಬೇಕು.
 • ಬೆಂಕಿ ಅಪಘಾತಗಳ ವಿರುದ್ಧ ಮುನ್ನೆಚ್ಚರಿಕೆಗಳನ್ನು ವಹಿಸಿ, ಕಟ್ಟಡವನ್ನು ನಿರ್ವಹಿಸಬೇಕು.
 • ಎಲ್ಲ ಯಂತ್ರೋಪಕರಣಗಳ ಸುತ್ತ ಅಪಘಾತಗಳನ್ನು ತಡೆಗಟ್ಟಲು ಬೇಲಿಗಳನ್ನು ಹಾಕಬೇಕು.

ಸೌಲಭ್ಯಗಳು:

 • ಕುಡಿಯುವ ನೀರು, ಶೌಚಾಲಯಗಳು, ಮೂತ್ರಾಲಯಗಳು, ಮತ್ತು ಪೀಕದಾನಿಗಳ ಸೌಲಭ್ಯಗಳಿರಬೇಕು.
 • ಕಣ್ಣುಗಳು ಮತ್ತು ದೇಹಕ್ಕೆ ರಕ್ಷಣಾತ್ಮಕ ಉಪಕರಣಗಳನ್ನು ಕೊಡಬೇಕು.
 • ನೆಲ, ಮೆಟ್ಟಿಲುಗಳು, ಮತ್ತು ಪ್ರವೇಶದ ದಾರಿ ನೀಡಬೇಕು.
 • ಯಂತ್ರೋಪಕರಣಗಳು ಮತ್ತು ಕಟ್ಟಡವನ್ನು ಸರಿಯಾಗಿ ನಿರ್ವಹಿಸಬೇಕು.

ಸೂಚನೆಗಳು:

 • ಅಪಾಯಕಾರಿ ಯಂತ್ರೋಪಕರಣಗಳನ್ನು ಬಳಸುವ ಮೊದಲು ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳಿಗೆ ಸರಿಯಾದ ಸೂಚನೆಗಳನ್ನು ನೀಡಬೇಕು.
 • ಅಪಾಯಕಾರಿ ಯಂತ್ರೋಪಕರಣಗಳನ್ನು ಬಳಸಲು ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳಿಗೆ ತರಬೇತಿ ಮತ್ತು ಮೇಲುಸ್ತುವಾರಿ ನೀಡಬೇಕು.
 • ಉದ್ಯೋಗದಾತರಾಗಿ ನೀವು ಆರೋಗ್ಯ ಮತ್ತು ಸುರಕ್ಷೆಗೆ ಸಂಬಂಧಿಸಿದ ನಿಯಮಗಳನ್ನು ನೀವು ಉಲ್ಲಂಘಿಸಿದರೆ, ನಿಮಗೆ ಗರಿಷ್ಟ ೧ ತಿಂಗಳ ಸೆರೆಮನೆ ವಾಸ ಮತ್ತು/ಅಥವಾ ೧೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸಲಾಗುವುದು.

ಕೆಲಸ ಮಾಡುತ್ತಿರುವ ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳ ಕೆಲಸದ ಗಂಟೆಗಳು ಮತ್ತು ದಿನಗಳು

ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳನ್ನು ಕೆಲಸಕ್ಕಿಟ್ಟುಕೊಂಡಾಗ ಪಾಲಿಸಬೇಕಾದ ನಿಯಮಗಳು (ಅವರು ಕೌಟುಂಬಿಕ ಉದ್ಯಮ ಅಥವಾ ಸರ್ಕಾರದ ಬಂಡವಾಳ/ಮಾನ್ಯತೆ ಪಡೆದ ಶಾಲೆಗಳಲ್ಲಿ ಕೆಲಸ ಮಾಡುವುದನ್ನು ಹೊರತುಪಡಿಸಿ):

ಒಂದು ದಿನದಲ್ಲಿ ಒಬ್ಬ ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗೆ:

 • ನಿರಂತರವಾಗಿ ಕೇವಲ ೩ ಗಂಟೆಗಳ ಕಾಲ ಕೆಲಸ ಮಾತ್ರ ಮಾಡಿಸಬಹುದು
 • ೧ ಗಂಟೆಯ ವಿರಾಮದ ಹಕ್ಕಿದೆ
 • ೬ ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ (ಅವರ ವಿರಾಮ ಮತ್ತು ಕೆಲಸಕ್ಕೆ ಕಾಯುವ ಅವಧಿಯನ್ನು ಸೇರಿದಂತೆ)
 • ಸಂಜೆ ೭ ಗಂಟೆಯಿಂದ ಬೆಳಿಗ್ಗೆ ೮ ಗಂಟೆಯವರೆಗೆ ಕೆಲಸ ಕೊಡುವಂತಿಲ್ಲ
 • ಸಾಮಾನ್ಯ ಕೆಲಸದ ಗಂಟೆಗಳಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿಸುವಂತಿಲ್ಲ.
 • ಒಬ್ಬರಿಗಿಂತ ಹೆಚ್ಚು ಉದ್ಯೋಗದಾತರ ಕೆಳಗೆ ಕೆಲಸ ಮಾಡಿಸುವಂತಿಲ್ಲ

ಇದಾಗ್ಯೂ, ಪ್ರತಿ ವಾರ ಒಂದು ದಿನ ವಾರದ ರಜೆ ಕೊಡತಕ್ಕದ್ದು!

ಈ ದಿನವನ್ನು ಕೆಲಸದ ಸ್ಥಳದಲ್ಲಿ ಸೂಚನೆಯ ಮೂಲಕ ಉದ್ಯೋಗದಾತರು ನಿರ್ದಿಷ್ಟಪಡಿಸಬೇಕು. ಈ ನಿರ್ದಿಷ್ಟಪಡಿಸಿದ ರಾಜಾ ದಿನವನ್ನು ಉದ್ಯೋಗದಾತರು ಪ್ರತಿ ೩ ತಿಂಗಳಿಗೊಮ್ಮೆ ಕೇವಲ ಒಮ್ಮೆ ಬದಲಿಸಬಹುದು.

ಉದ್ಯೋಗದಾತರಾಗಿ ನೀವು ಕೆಲಸದ ಗಂಟೆಗಳು ಮತ್ತು ದಿನಗಳ ಸಂಬಂಧಿತ ಕಾನೂನನ್ನು ಉಲ್ಲಂಘಿಸಿದರೆ ಗರಿಷ್ಟ ೧ ತಿಂಗಳ ಸೆರೆಮನೆ ವಾಸ ಮತ್ತು/ಅಥವಾ ೧೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸಲಾಗುವುದು.

ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳನ್ನು ಕೆಲಸಕ್ಕಿಟ್ಟುಕೊಳ್ಳಬೇಕಾದರೆ ಉದ್ಯೋಗದಾತರು ಪಾಲಿಸಬೇಕಾದ ಕರ್ತವ್ಯಗಳು

ಉದ್ಯೋಗದಾತರಾಗಿ ನೀವು ಕೆಳಗಿನ ವಿವರಗಳುಳ್ಳ ದಾಖಲಾ ಪುಸ್ತಕವನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕಾಗಿರುತ್ತದೆ:

ದಾಖಲಾ ಪುಸ್ತಕವನ್ನು ಇಟ್ಟುಕೊಳ್ಳುವುದು:

 • ನಿಮ್ಮ ಕೆಲಸದ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳ ಹೆಸರು ಮತ್ತು ಜನ್ಮ ದಿನ
 • ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳ ಕೆಲಸದ ಗಂಟೆಗಳು ಮತ್ತು ಅವಧಿ
 • ವಿರಾಮದ ಮಧ್ಯಂತರಗಳು ೪. ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳ ಕೆಲಸದ ಪ್ರಕಾರಗಳು

ಕೆಲಸದ ಪರಿಸ್ಥಿತಿಗಳು:

ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಯನ್ನು ಕೆಲಸಕ್ಕಿಟ್ಟುಕೊಂಡಿದ್ದಾಗ ಅವರ ಕೆಲಸದ ಗಂಟೆಗಳು ಹಾಗು ದಿನಗಳು, ಮತ್ತು ಆರೋಗ್ಯ ಮತ್ತು ಸುರಕ್ಷತೆಯ ಹೊಣೆ ಉದ್ಯೋಗದಾತರದ್ದು. ಹೀಗೆ, ಅವರನ್ನು ನ್ಯಾಯಯುತವಾಗಿ, ಮತ್ತು ಮಾನವೀಯವಾಗಿ ನೋಡಿಕೊಳ್ಳುವುದು ಉದ್ಯೋಗದಾತರ ಜವಾಬ್ದಾರಿ.

ಪರಿಶೀಲನಾಧಿಕಾರಿಗಳಿಗೆ ಸೂಚನೆ ನೀಡುವುದು:

ನೀವು ಉದ್ಯೋಗದಾತರಾಗಿ ಬಾಲ ಕಾರ್ಮಿಕರನ್ನು ಕೆಲಸಕ್ಕಿಟ್ಟುಕೊಂಡಿದ್ದರೆ, ಪರಿಶೀಲನಾಧಿಕಾರಿಗಳಿಗೆ ಸೂಚನೆ ಕಳುಹಿಸಬೇಕಾಗುತ್ತದೆ. ಆ ಕಿಶೋರಾವಸ್ಥೆಯಲ್ಲಿನ ವ್ಯಕ್ತಿಯನ್ನು ಕೆಲಸಕ್ಕೆ ನೇಮಿಸಿದ ೩೦ ದಿನಗಳ ಒಳಗೆ ಈ ಸೂಚನೆಯನ್ನು ಕಳುಹಿಸಬೇಕು. ಈ ಸೂಚನೆಯಲ್ಲಿ ಕೆಳಗಿನ ವಿವರಗಳಿರಬೇಕು:

 • ಸಂಸ್ಥೆಯ ಹೆಸರು ಮತ್ತು ವಿಳಾಸ
 • ಉದ್ಯೋಗದಾತರ ಹೆಸರು
 • ಕೆಲಸದ ಪ್ರಕಾರಗಳು
 • ಸಂಸ್ಥೆ ಮಾಡುವ ಕೆಲಸ

ಉದ್ಯೋಗದಾತರಾಗಿ ನೀವು ನಿಮ್ಮ ಕರ್ತವ್ಯಗಳನ್ನು ಪಾಲಿಸದಿದ್ದರೆ, ಒಂದು ತಿಂಗಳ ಗರಿಷ್ಟ ಸೆರೆಮನೆ ವಾಸ ಮತ್ತು/ಅಥವಾ ೧೦೦೦೦ ರೂಪಾಯಿಗಳ ಗರಿಷ್ಟ ಜುಲ್ಮಾನೆಯ ದಂಡ ನಿಮ್ಮ ಮೇಲೆ ವಿಧಿಸಲಾಗುವುದು.

ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ತಂದೆ-ತಾಯಿ

ಕೌಟುಂಬಿಕ ಉದ್ಯೋಗಸ್ಥರು ಮತ್ತು ಬಾಲ ಕಲಾವಿದರನ್ನು ಹೊರತುಪಡಿಸಿ, ಇನ್ನಿತರ ಕೆಲಸಕ್ಕೆ ೧೪ ವರ್ಷಗಳ ಕೆಳಗಿನ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ತಂದೆ-ತಾಯಂದಿರಿಗೆ ದಂಡ ವಿಧಿಸಲಾಗುವುದು. ಕಾನೂನಿನ ವಿರುದ್ಧವಾಗಿ ಕಿಶೋರಾವಸ್ಥೆಯಲ್ಲಿನ ವ್ಯಕ್ತಿಗಳನ್ನು ಕೆಲಸ ಮಾಡಿಸಿದರೆ, ಅವರ ತಂದೆ-ತಾಯಂದಿರಿಗೆ ಶಿಕ್ಷೆ ವಿಧಿಸಲಾಗುವುದು.

 • ಅವರು ಮೊದಲ ಬಾರಿ ಅಪರಾಧವನ್ನು ಮಾಡಿದರೆ ಅವರಿಗೆ ದಂಡ ವಿಧಿಸಲಾಗುವುದಿಲ್ಲ.
 • ನಿಷೇಧಿತ ಉದ್ಯೋಗಗಳಲ್ಲಿ ಕಿಶೋರಾವಸ್ಥೆಯಲ್ಲಿನ ವ್ಯಕ್ತಿಗಳನ್ನು ಇದಾಗ್ಯೂ ಕೆಲಸಕ್ಕೆ ಕಳಿಸಿದರೆ ಅವರ ಮೇಲೆ ೧೦೦೦೦ ರೂಪಾಯಿಗಳ ದಂಡ ವಿಧಿಸಲಾಗುವುದು.

ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಉದ್ಯೋಗದಾತರಿಗೆ ಶಿಕ್ಷೆ

ಯಾವುದೇ ವ್ಯಕ್ತಿ ೧೪ ವರ್ಷಗಳ ಕೆಳಗಿನ ಮಕ್ಕಳನ್ನು ಕೆಲಸಕ್ಕಿಟ್ಟುಕೊಂಡರೆ, ಅವರಿಗೆ ೬ ತಿಂಗಳಿಂದ ೨ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೨೦೦೦೦ದಿಂದ ೫೦೦೦೦ ರೂಪಾಯಿಗಳ ವರೆಗೆ ದಂಡ ವಿಧಿಸಲಾಗುವುದು. ನ್ಯಾಯಾಲಯವು ಬರೀ ಸೆರೆಮನೆ ವಾಸ ಸಾಕೋ ಅಥವಾ ಜುಲ್ಮಾನೆಯೂ ವಸೂಲಿ ಮಾಡಬೇಕೋ ಎಂದು ತೀರ್ಮಾನಿಸುತ್ತದೆ.

ಯಾವುದೇ ವ್ಯಕ್ತಿ, ೧೪ರಿಂದ ೧೮ ವರ್ಷಗಳೊಳಗಿನ ಮಕ್ಕಳನ್ನು ಅಕ್ರಮ ಕೆಲಸಗಳನ್ನು ಮಾಡಲು ಇಟ್ಟುಕೊಂಡಿದ್ದರೆ, ಅವರಿಗೆ ೬ ತಿಂಗಳಿಂದ ೨ ವರ್ಷಗಳ ವರೆಗೆ ಸೆರೆಮನೆ ವಾಸ ಮಾತು/ಅಥವಾ ೨೦೦೦೦ರಿಂದ ೫೦೦೦೦ ರೂಪಾಯಿಗಳ ದಂಡ ವಿಧಿಸಲಾಗುವುದು. ಹಾಗು, ಒಮ್ಮೆ ಶಿಕ್ಷೆಯಾದ ನಂತರವೂ ಬಾಲ ಕಾರ್ಮಿಕರನ್ನು ಕೆಲಸಕ್ಕಿಟ್ಟುಕೊಂಡಿದ್ದರೆ, ಇಂತಹ ಉದ್ಯೋಗದಾತರಿಗೆ ಒಂದರಿಂದ ಮೂರು ವರ್ಷಗಳ ಸೆರೆಮನೆ ವಾಸದ ಶಿಕ್ಷೆ ವಿಧಿಸಲಾಗುತ್ತದೆ.

ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ದೂರು ನೀಡುವುದು

ಕೆಳಗಿನ ರೀತಿಗಳಲ್ಲಿ ನೀವು ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ದೂರು ನೀಡಬಹುದು:

ದೂರವಾಣಿ ಸಂಖ್ಯೆ – ೧೦೯೮ಕ್ಕೆ ಕರೆ ಮಾಡಿ:

೧೦೯೮ ಶುಲ್ಕ-ರಹಿತ ದೂರವಾಣಿ ಸಂಖ್ಯೆಯಾಗಿದ್ದು, ಭಾರತದಾದ್ಯಂತ ಚಾಲನೆಯಲ್ಲಿ ಇದೆ. ಮಕ್ಕಳ ಹಕ್ಕು ಮತ್ತು ಸಂರಕ್ಷಣೆಯತ್ತ ಕೆಲಸ ಮಾಡುತ್ತಿರುವ ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್ ಸಂಸ್ಥೆಯು ಈ ಸಂಖ್ಯೆಯನ್ನು ಚಾಲನೆಯಲ್ಲಿಟ್ಟಿದೆ. ಈ ಸಂಖ್ಯೆಗೆ ಯಾರಾದರೂ, ಖುದ್ದಾಗಿ ಮಕ್ಕಳು ಕೂಡ ಕರೆ ಮಾಡಿ ದೂರು ನೀಡಬಹುದು. ಬಾಲ ಕಾರ್ಮಿಕ ಪದ್ಧತಿಗಳನಂತಹ ಅಕ್ರಮ ಚಟಿವಟಿಕೆಗಳನ್ನು ನಿಲ್ಲಿಸಲು, ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಅಥವಾ ಕೆಲಸ ಮಾಡುತ್ತಿರುವ ಮಕ್ಕಳಿಗೆ ಈ ದೂರವಾಣಿ ಸಂಖ್ಯೆಯ ಬಗ್ಗೆ ತಿಳಿಹೇಳಬೇಕು.

ನೀವು ೧೦೯೮ಕ್ಕೆ ಕರೆ ಮಾಡಿದಾಗ, ಕರೆಯನ್ನು ಉತ್ತರಿಸಿದ ವ್ಯಕ್ತಿಗೆ ಕೆಳಗಿನ ವಿವರಗಳನ್ನು ನೀಡಬೇಕು:

 • ಮಗುವಿನ ಹೆಸರು (ಗೊತ್ತಿದ್ದರೆ)
 • ವಯಸ್ಸು (ಅಂದಾಜು)
 • ಮಗುವಿನ ವಿವರಣೆ
 • ವಿಳಾಸ (ಖಚಿತವಾದ ಸ್ಥಳ ಮತ್ತು ಹೆಗ್ಗುರುತನ್ನು ನೀಡಬೇಕು)

೧೦೯೮ಕ್ಕೆ ಕರೆ ಮಾಡಿದ ನಂತರ:

ನೀವು ನೀಡಿದ ವಿವರಗಳನ್ನು ಕರೆ ಉತ್ತರಿಸಿದ ವ್ಯಕ್ತಿ ಮಗು ಇರುವ ಜಿಲ್ಲೆಯಲ್ಲಿ ಕಾರ್ಯಗತವಾದ ಕೆಳಮಟ್ಟದ ಸಿಬ್ಬಂದಿಗಳಿಗೆ ತಿಳಿಸುತ್ತಾರೆ. ಈ ಕೆಳಮಟ್ಟದ ಸಿಬ್ಬಂದಿಗಳು, ಸಮಾಜ ಕಲ್ಯಾಣದತ್ತ ಕೆಲಸ ಮಾಡುತ್ತಿರುವ ಸಂಸ್ಥೆ ಮತ್ತು ಚೈಲ್ಡ್ ಲೈನ್ ಫೌಂಡೇಶನ್ ಸಂಸ್ಥೆಯ ಸದಸ್ಯರಾಗಿರುತ್ತಾರೆ. ಇವರು ಮಗುವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮಗೆ ಕರೆ ಮಾಡಬಹುದು. ವಿಚಾರಣೆ ನಡೆಸಿದ ನಂತರ, ಕೆಳಗಿನ ವಿಭಾಗಗಳ ಸಂಯೋಜನೆಯಲ್ಲಿ ಅಗತ್ಯವಾದ ಕ್ರಮ ತೆಗೆದುಕೊಳ್ಳುತ್ತಾರೆ:

 • ಕಾರ್ಮಿಕ ವಿಭಾಗ
 • ಪೊಲೀಸ್
 • ಮಾನವ ಕಳ್ಳಸಾಗಾಣಿಕೆ ವಿರೋಧ ವಿಭಾಗ
 • ಸರ್ಕಾರೇತರ ಸಂಸ್ಥೆಗಳು

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಕರೆ ಮಾಡುವುದು:

ಈ ಲಿಂಕಿನಲ್ಲಿ (https://kscpcr.karnataka.gov.in/page/Contact+Us/en) ಕೊಟ್ಟ ದೂರವಾಣಿ ಸಂಖ್ಯೆಗೆ ಕೂಡ ನೀವು ಕರೆ ಮಾಡಿ ದೂರು ನೀಡಬಹುದು.

ಆನ್ಲೈನ್ ದೂರು ನೀಡುವುದು:

ಕೇಂದ್ರೀಯ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಜಾಲತಾಣದಲ್ಲಿ ಬಾಲ ಕಾರ್ಮಿಕ ವಿಭಾಗದಲ್ಲಿ ನೀವು ಆನ್ಲೈನ್ ದೂರು ನೀಡಬಹುದು. ಇಲ್ಲಿ ಬಹುಮುಖ್ಯವಾಗಿ ಕೆಳಗಿನ ವಿವರಗಳನ್ನು ನೀಡಬೇಕಾಗುತ್ತದೆ:

 • ಕೆಲಸ ಮಾಡುತ್ತಿರುವ ಮಗುವಿನ ಚಿತ್ರಣ/ವಿವರಣೆ
 • ಮಗು ಕೆಲಸ ಮಾಡುತ್ತಿರುವ ರಾಜ್ಯ ಮತ್ತು ಜಿಲ್ಲೆ
 • ನಿಮ್ಮ ವಿವರಗಳು – ಹೆಸರು, ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ, ಇತ್ಯಾದಿ.

ಪೊಲೀಸ್ ಠಾಣೆ:

ನೀವು ಕೇಳಿದ ಅಥವಾ ನೋಡಿದ ಬಾಲ ಕಾರ್ಮಿಕ ಪ್ರಕರಣದ ಬಗ್ಗೆ ದೂರು ನೀಡಲು ನೀವು ಪೊಲೀಸ್ ಠಾಣೆಗೆ ಹೋದರೆ, ಅಲ್ಲಿ ನಿಮಗೆ ಎಫ್.ಐ.ಆರ್.ಅನ್ನು ದರ್ಜಿಸಲು ಕೋರಲಾಗುತ್ತದೆ. ನೀವು ನೋಡಿದ ಬಾಲ ಕಾರ್ಮಿಕ ಪ್ರಕರಣದ ಬಗ್ಗೆ ಗೊತ್ತಿದ್ದ ಎಲ್ಲ ವಿವರಗಳನ್ನು ಇಲ್ಲಿ ನೀವು ನೀಡಬೇಕಾಗುತ್ತದೆ.

ಅಂಚೆ:

ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗಕ್ಕೆ, ಯಾವ ಭಾಷೆಯಲ್ಲಾದರೂ, ಶುಲ್ಕರಹಿತವಾಗಿ ನೀವು ದೂರು ಸಲ್ಲಿಸಬಹುದು. ಕೆಳಗಿನ ವಿಳಾಸಕ್ಕೆ ನಿಮ್ಮ ದೂರನ್ನು ಕಳಿಸಬಹುದು:

ಅಧ್ಯಕ್ಷರು, ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ, ೫ನೆ ಮಹಡಿ, ಚಂದ್ರಲೋಕ ಕಟ್ಟಡ, ೩೬, ಜನಪಥ್, ನವ ದೆಹಲಿ- ೧೧೦೦೦೧.