೧೪ರಿಂದ ೧೮ ವರ್ಷಗಳೊಳಗಿನ ಕಿಶೋರರನ್ನು ಕೆಲಸಕ್ಕಿಟ್ಟುಕೊಳ್ಳುವುದು

ದುಡ್ಡಿಗೋಸ್ಕರ ರಸ್ತೆ ಬದಿಗಳಲ್ಲಿ ಮಕ್ಕಳು ಪ್ರದರ್ಶನ ನೀಡುವುದು ಬಾಲ ಕಾರ್ಮಿಕ ಪದ್ಧತಿ ಎಂದು ಪರಿಗಣಿಸಲಾಗುತ್ತದೆ. ಇಂತಹ ನಿದರ್ಶನಗಳನ್ನು ನೀವು ನೋಡಿದಲ್ಲಿ ದಯವಿಟ್ಟು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ.

ಅಪಾಯಕಾರಿ ಅಲ್ಲದ ಕೆಲಸದ ಸ್ಥಳಗಳಲ್ಲಿ ಕಿಶೋರರು ಕೆಲಸ ಮಾಡಬಹುದು. ಇಂತಹ ಅಪಾಯಕಾರಿ ಅಲ್ಲದ ಕೆಲಸದ ಸ್ಥಳಗಳನ್ನು ಸರ್ಕಾರ ಸೂಚಿಸುತ್ತದೆ. ಕಿಶೋರರು ಕೆಳಗಿನ ಕೆಲಸಗಳಲ್ಲಿ ಕೂಡ ತೊಡಗಬಹುದು:

  • ಕೌಟುಂಬಿಕ ಉದ್ಯೋಗ: ಉದಾಹರಣೆಗೆ, ಆಭಾರಣಗಳನ್ನು ಮಾರಾಟ ಮಾಡುವ ನಿಮ್ಮ ಕೌಟುಂಬಿಕ ಉದ್ಯೋಗದಲ್ಲಿ ತೊಡಗುವುದು
  • ಬಾಲ ಕಲಾವಿದರು: ಉದಾಹರಣೆಗೆ, ಚಲನಚಿತ್ರಗಳಲ್ಲಿ ಅಥವಾ ಜಾಹಿರಾತುಗಳಲ್ಲಿ ನಟಿಸುವುದು

೧೪ರಿಂದ ೧೮ರ ನಡುವಿನ ಕಿಶೋರರು ಕೆಳಗಿನ ಉದ್ಯೋಗಗಳಲ್ಲಿ ತೊಡಗುವಂತಿಲ್ಲ:

  • ಗಣಿಗಳು ಅಥವಾ ದಹಿಸಬಲ್ಲ ವಸ್ತುಗಳು/ಸ್ಫೋಟಕಗಳನ್ನು ಉಪಯೋಗಿಸುವ ಸ್ಥಳಗಳು
  • ಕಾರ್ಖಾನೆಗಳ ಕಾಯಿದೆ, ೧೯೪೮ರ ಅಡಿಯಲ್ಲಿ ನೀಡಲಾದ ಅಪಾಯಕಾರಿ ಪ್ರಕ್ರಿಯೆಗಳನ್ನು ಉಪಯೋಗಿಸುವ ಕೈಗಾರಿಕೋದ್ಯಮಗಳು. ಉದಾಹರಣೆಗೆ, ಕಲ್ಲಿದ್ದಲು, ವಿದ್ಯುತ್ಶಕ್ತಿಯ ಉತ್ಪಾದನೆ, ಕಾಗದ, ರಾಸಾಯನಿಕ ಗೊಬ್ಬರ, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು, ಕಲ್ನಾರಿನ, ಇತ್ಯಾದಿ.

೧೪ರ ಒಳಗಿನ ಮಕ್ಕಳನ್ನು ಕೆಲಸಕ್ಕಿಟ್ಟುಕೊಳ್ಳುವುದು

೧೪ರ ಕೆಳಗಿನ ಮಕ್ಕಳನ್ನು ಯಾವುದೇ ರೀತಿಯ ಉದ್ಯೋಗದಲ್ಲಿ ಕೆಲಸಕ್ಕಿಟ್ಟುಕೊಳ್ಳುವುದು, ಅಥವಾ ಅವರಿಗೆ ಕೆಲಸ ಮಾಡಲು ಅನುಮತಿ ಕೊಡುವುದು ಕಾನೂನು ಬಾಹಿರವಾಗಿದೆ. ಉದ್ಯೋಗದಾತರು, ತಂದೆ-ತಾಯಿಯರು, ಅಥವಾ ಮಗುವಿನ ಪೋಷಕರು ಮಗುವನ್ನು ಯಾವುದೇ ರೀತಿಯ ಉದ್ಯೋಗದಲ್ಲಿ ತೊಡಗುವ ಅನುಮತಿ ನೀಡಿದಲ್ಲಿ ಅವರಿಗೆ ದಂಡ ವಿಧಿಸಲಾಗುತ್ತದೆ.

ಆದಾಗ್ಯೂ, ಈ ನಿಯಮಕ್ಕೆ ಎರಡು ಅಪವಾದಗಳಿವೆ. ಮಕ್ಕಳು ಕೆಳಗಿನ ಉದ್ಯೋಗಗಳಲ್ಲಿ ತೊಡಗಲು ಸರ್ಕಾರ ಅನುಮತಿ ನೀಡಿದೆ:

  • ಬಾಲ ಕಲಾವಿದರಾಗಿ
  • ಕೌಟುಂಬಿಕ ಉದ್ಯೋಗದಲ್ಲಿ

೧೪ರ ಕೆಳಗಿನ ಮಕ್ಕಳು ಇನ್ನ್ಯಾವುದೇ ರೀತಿಯ ಉದ್ಯೋಗದಲ್ಲಿ ತೊಡಗಿದ ನಿದರ್ಶನ ನಿಮಗೆ ಗೊತ್ತಿದ್ದಲ್ಲಿ, ಕೂಡಲೇ ಅದರ ಬಗ್ಗೆ ದೂರು ನೀಡಿ.

ಮಗುವಿನ ವಯಸ್ಸು ನಿರ್ಧರಿಸುವುದು

ನೀವು ಉದ್ಯೋಗದಾತರಾಗಿದ್ದು, ಮಗುವಿನ ವಯಸ್ಸು ೧೪ರ ಮೇಲಿದೆಯೋ ಅಥವಾ ಕೆಳಗಿದೆಯೋ ಎಂಬುದು ನಿಮಗೆ ಖಾತರಿ ಇಲ್ಲದಿದ್ದರೆ, ಕೆಳಗಿನ ೩ ದಾಖಲೆಗಳ ಆಧಾರದ ಮೇಲೆ ವೈದ್ಯಕೀಯ ಅಧಿಕಾರಿಗಳು ಮಗುವಿನ ವಯಸ್ಸನ್ನು ನಿಗದಿ ಪಡಿಸುತ್ತಾರೆ:

  • ಮಗು/ಕಿಶೋರನ ಆಧಾರ್ ಕಾರ್ಡ್
  • ಶಾಲೆಯಿಂದ ಪಡೆದ ಜನ್ಮ ಪ್ರಮಾಣಪತ್ರ ಅಥವಾ ಪರೀಕ್ಷಾ ಮಂಡಳಿಯಿಂದ ಪಡೆದ ಪ್ರಮಾಣಪತ್ರ
  • ಪಂಚಾಯತಿ, ಪುರಸಭೆ, ಅಥವಾ ನಗರ ಪಾಲಿಕೆ ನೀಡಿದ ಮಗುವಿನ ಜನ್ಮ ಪ್ರಮಾಣಪತ್ರ

ಈ ಮೂರು ದಾಖಲೆಗಳು ಇಲ್ಲದಿದ್ದಲ್ಲಿ, ವೈದ್ಯಕೀಯ ಅಧಿಕಾರಿಗಳು ಅಸ್ಥೀಭವನ ಪರೀಕ್ಷೆ ಅಥವಾ ಇನ್ಯಾವುದಾದರೂ ಇತ್ತೀಚಿನ ವಯಸ್ಸು ನಿರ್ಣಯಿಸುವ ಪರೀಕ್ಷೆಯನ್ನು ಮಾಡಿ ಮಗುವಿನ ವಯಸ್ಸನ್ನು ಕಂಡು ಹಿಡಿಯುತ್ತಾರೆ.

ತನಿಖಾಧಿಕಾರಿಗಳಿಗೆ ಮಗುವಿನ ವಯಸ್ಸನ್ನು ನಿರ್ಣಯ ಮಾಡುವುದಿದ್ದಲ್ಲಿ, ನಿಮ್ಮ ಹತ್ತಿರ. ಉದ್ಯೋಗದಾತರಾಗಿ, ಮಗುವಿನ ವಯಸ್ಸಿನ ಪ್ರಮಾಣಪತ್ರ ಇರಬೇಕಾಗುತ್ತದೆ. ನೀವು ಮಗುವಿನ ವಯಸ್ಸಿನ ಪ್ರಮಾಣಪತ್ರ ಪಡೆದಿಲ್ಲ ಎಂದು ತನಿಖಾಧಿಕಾರಿಗಳಿಗೆ ತಿಳಿದು ಬಂದಲ್ಲಿ, ಕೂಡಲೇ ವೈದ್ಯಕೀಯ ಅಧಿಕಾರಿಗಳಿಂದ ಪಡೆಯಲು ನಿಮಗೆ ಸೂಚಿಸಲಾಗುತ್ತದೆ.

ಬಾಲ ಕಲಾವಿದರ ಪ್ರತಿ ಉದ್ಯೋಗದಾತರ ಕರ್ತವ್ಯಗಳು

ನೀವು ಬಾಲ ಕಲಾವಿದರಿಗೆ ಉದ್ಯೋಗ ನೀಡಿದ್ದಲ್ಲಿ, ಬಾಲ ಕಾರ್ಮಿಕ ಪದ್ಧತಿ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, ೧೯೮೬ರ ಅಡಿಯಲ್ಲಿನ ಫಾರಂ ಸೀ ಅನ್ನು ತುಂಬಿ ಅಧಿಕಾರಿಗಳಿಗೆ ನೀಡುವ ಕರ್ತವ್ಯ ನಿಮ್ಮದಾಗಿದೆ. ಈ ರೀತಿ ಫಾರಂ ಸೀ ಅನ್ನು ತುಂಬಿ ಕೆಳಗಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಾಗಿ ಉದ್ಯೋಗದಾತರು ಒಪ್ಪುತ್ತಾರೆ:

  • ಮಗುವಿನ ಶಿಕ್ಷಣಕ್ಕೆ ಧಕ್ಕೆ ಬರುವಂತಿಲ್ಲ
  • ಬಾಲ ಕಲಾವಿದರ ಕಾಳಜಿ ಹಾಗು ರಕ್ಷಣೆಯ ಹೊಣೆ, ಮತ್ತು ಅವರ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ
  • ಬಾಲ ಕಾರ್ಮಿಕ ಪದ್ಧತಿ ಕಾನೂನನ್ನು ಉಲ್ಲಂಘಿಸುವಂತಿಲ್ಲ
  • ಮಗುವಿನ ಮೇಲೆ ಯಾವ ರೀತಿಯ ಲೈಂಗಿಕ ಶೋಷಣೆಯಾಗದಂತೆ ಉದ್ಯೋಗದಾತರು ನೋಡಿಕೊಳ್ಳಬೇಕು

ಅನುಮತಿಗೆ ಅರ್ಜಿ ಯಾವ ಜಿಲ್ಲೆಯಲ್ಲಿ ಉದ್ಯೋಗ ನಡೆಯಲಿದೆಯೋ, ಆ ಜಿಲ್ಲೆಯ ಜಿಲ್ಲಾಧಿಕಾರಿಗಳು ಮಗುವಿನ ಉದ್ಯೋಗದ ಒಪ್ಪಿಗೆಯ ಪರವಾನಗಿ ನಿಮಗೆ ಕೊಡಬೇಕು. ಮಗುವಿನ ತಂದೆ-ತಾಯಿಯರು ಅಥವಾ ಪೋಷಕರು ಕೂಡ ಮಗುವಿನ ಉದ್ಯೋಗದ ಒಪ್ಪಿಗೆ ನಿಮಗೆ ನೀಡಬೇಕು. ಈ ಪರವಾನಗಿಯಲ್ಲಿ ಕೆಳಗಿನ ಶರತ್ತುಗಳಿರುತ್ತವೆ:

  • ಮಗುವಿನ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಸೌಲಭ್ಯಗಳು
  • ಮಗುವಿಗೆ ಪೌಷ್ಟಿಕ ಆಹಾರ ಒದಗಿಸುವುದು
  • ಮಗುವಿಗೆ ವಾಸಿಸಲು ಸ್ವಚ್ಛ ಹಾಗು ಸುರಕ್ಷಿತ ಆಶ್ರಯ
  • ಮಕ್ಕಳ ರಕ್ಷಣೆ, ಶಿಕ್ಷಣದ ಹಕ್ಕು, ಮತ್ತು ಲೈಂಗಿಕ ಅಪರಾಧಗಳಿಂದ ರಕ್ಷಣೆಯ ಕಾನೂನುಗಳ ಅನುಸರಣೆ

ಕೆಲಸದ ಸಮಯ: ಉದ್ಯೋಗದಾತರು ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:

  • ಮಗುವಿನಿಂದ ದಿನಕ್ಕೆ ೫ ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ
  • ಮಗುವನ್ನು ವಿಶ್ರಾಂತಿಯಿಲ್ಲದೆ ಸತತ ೩ ಗಂಟೆಗಳಿಗಿಂತ ಹೆಚ್ಚಿನ ಕಾಲ ಕೆಲಸ ಮಾಡಿಸುವಂತಿಲ್ಲ
  • ಮಗುವನ್ನು ಸತತವಾಗಿ ೨೭ ದಿನಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ

ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ಶಾಲೆಗಳ ಪಾತ್ರ

ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ಶಾಲೆಗಳದ್ದು ಮಹತ್ತರ ಪಾತ್ರವಿದೆ. ಮಕ್ಕಳ ಶಿಕ್ಷಣದ ಹಕ್ಕು ಅವರು ಬಾಲ ಕಲಾವಿದರಾಗಿ, ಅಥವಾ ಕೌಟುಂಬಿಕ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಅವರಿಗೆ ಅನ್ವಯಿಸುತ್ತದೆ.

ಮಗು ಕೌಟುಂಬಿಕ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದು, ಸತತವಾಗಿ ೩೦ ದಿನಗಳ ಕಾಲ ಶಾಲೆಗೆ ಬರಲಿಲ್ಲವಾದಲ್ಲಿ, ಆ ಶಾಲೆಯ ಪ್ರಾಂಶುಪಾಲರು ಮಗುವಿನ ಅನುಪಸ್ಥಿತಿಯ ಬಗ್ಗೆ ತನಿಖಾಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ.

ಇನ್ನು, ಯಾವುದೇ ಮಗು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ ವಿಷಯ ಶಾಲೆಯ ಸದಸ್ಯರಿಗೆ ಗೊತ್ತಿದ್ದಲ್ಲಿ, ಅದರ ವರದಿ ನೀಡುವುದು ಅವರ ಜವಾಬ್ದಾರಿಯಾಗಿದೆ.

ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ತನಿಖಾಧಿಕಾರಿಗಳ ಕರ್ತವ್ಯಗಳು

ಮಕ್ಕಳ ಅಕ್ರಮ ಉದ್ಯೋಗವನ್ನು ತಡೆಗಟ್ಟಲು, ಮತ್ತು ಕಿಶೋರರ ಅನುಮತಿಸಲಾದ ಉದ್ಯೋಗ ಕಾನೂನುಬದ್ಧವಾಗಿ ನಡೆಯುತ್ತಿದೆ ಎಂದು ನೋಡಿಕೊಳ್ಳಲು ಸರ್ಕಾರ ತನಿಖಾಧಿಕಾರಿಗಳನ್ನು ನೇಮಿಸುತ್ತದೆ. ಇಂತಹ ತನಿಖಾಧಿಕಾರಿಗಳು ಅಥವಾ ಪೊಲೀಸ್ ಅಧಿಕಾರಿಗಳ ಕರ್ತವ್ಯಗಳು ಹೀಗಿವೆ:

  • ೧. ಮಕ್ಕಳ ಉದ್ಯೋಗ ನಿಷೇಧವಿರುವ ಜಾಗಗಳ ನಿಯತಕಾಲಿಕವಾಗಿ ತನಿಖೆ ಮಾಡುವುದು
  • ೨. ಮಕ್ಕಳು ಅಥವಾ ಕಿಶೋರರು ಕೆಲಸ ಮಾಡುತ್ತಿರುವ ಕಾರ್ಖಾನೆಗಳ ಸಾಮಯಿಕ ತನಿಖೆ ಮಾಡುವುದು
  • ೩. ಕೌಟುಂಬಿಕ ಉದ್ಯಮಗಳಲ್ಲಿ ಮಕ್ಕಳ ಉದ್ಯೋಗದ ಪರಿಸ್ಥಿತಿಯ ಬಗ್ಗೆ ತಪಾಸಣೆ ಮಾಡುವುದು
  • ೪. ಬಾಲ ಕಾರ್ಮಿಕ ಪದ್ಧತಿಯ ಬಗ್ಗೆ ಬರುವ ದೂರುಗಳನ್ನು ಸ್ವೀಕರಿಸುವುದು, ಮತ್ತು ಅಕ್ರಮ ಚಟುವಟಿಕೆಗಳ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದು
  • ೫. ಮಗುವಿನ ವಯಸ್ಸು ೧೪ಕ್ಕಿಂತ ಹೆಚ್ಚೋ ಕಮ್ಮಿಯೋ ಎಂಬ ಅನುಮಾನವಿದ್ದಲ್ಲಿ, ವಯಸ್ಸನ್ನು ಕಂಡು ಹಿಡಿಯುವುದು
  • ೬. ಉದ್ಯೋಗದಾತರು ತಮ್ಮ ಕೆಲಸದ ಸ್ಥಳದಲ್ಲಿ ಇಟ್ಟುಕೊಂಡ ದಾಖಲಾ ಪುಸ್ತಕವನ್ನು ಪರಿಶೀಲಿಸುವುದು. ಆ ಪುಸ್ತಕದಲ್ಲಿ ಕೆಳಗಿನ ವಿವರಗಳು ಇರುತ್ತವೆ:
    • – ಆ ಜಾಗದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳ ಹೆಸರು, ಜನ್ಮ ದಿನಾಂಕ, ಮತ್ತು ಜನ್ಮ ದಿನಾಂಕಕ್ಕೆ ಸಂಬಂಧ ಪಟ್ಟ ದಾಖಲೆಗಳು
    • – ಕೆಲಸದ ಗಂಟೆಗಳು ಮತ್ತು ಅವಧಿ (ವಿಶ್ರಾಮದ ಗಂಟೆಗಳನ್ನು ಸೇರಿಸಿ)
    • – ಮಕ್ಕಳು ಮಾಡುತ್ತಿರುವ ಕೆಲಸದ ಪ್ರಕೃತಿ

ಒಂದು ವೇಳೆ ಮಕ್ಕಳು ಕಾನೂನು ಬಾಹಿರವಾಗಿ ಇಲ್ಲಿ ಕೆಲಸ ಮಾಡುತ್ತಿದ್ದಲ್ಲಿ, ಉದ್ಯೋಗದಾತರು “ಬಾಲ ಕಾರ್ಮಿಕರ ಪುನರ್ವಸತಿ ಮತ್ತು ಕಲ್ಯಾಣ ನಿಧಿ” ಎಂಬ ನಿಧಿಗೆ ೨೦೦೦೦ ರೂಪಾಯಿಗಳ ದಂಡ ಕಟ್ಟುವಂತೆ ತನಿಖಾಧಿಕಾರಿಗಳು ನೋಡಿಕೊಳ್ಳಬೇಕು. ಈ ಹಣವನ್ನು ಮಕ್ಕಳು ವಯಸ್ಕರಾದ ಮೇಲೆ ಮರು ಪಡೆದುಕೊಳ್ಳಬಹುದು.

ಬಾಲ ಕಲಾವಿದರನ್ನು ಕೆಲಸಕ್ಕಿಟ್ಟುಕೊಳ್ಳುವ ಸಮಯದಲ್ಲಿನ ಕರ್ತವ್ಯಗಳು

ಬಾಲ ಕಲಾವಿದರನ್ನು ಕೆಲಸಕ್ಕಿಟ್ಟುಕೊಳ್ಳುವ ಸಮಯದಲ್ಲಿ, ಉದ್ಯೋಗದಾತರ ಕರ್ತವ್ಯಗಳು ಕೆಳಗಿನಂತಿವೆ:

ಶಿಕ್ಷಣ:

ಕಲಾವಿದರಾಗಿ ಕೆಲಸ ಮಾಡುತ್ತಿರುವಾಗಲೂ ಸಹ ಸರಿಯಾದ ಶಿಕ್ಷಣ ಮಕ್ಕಳಿಗೆ ಒದಗಿಸಬೇಕು. ಮಗು ಶಾಲೆಗೆ ಹೋಗುವುದನ್ನು ನಿಲ್ಲಿಸದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು.

ಆದಾಯ:

ಬಾಲ ಕಲಾವಿದರಾಗಿ ಮಗು ಗಳಿಸಿದ ಆದಾಯದ ಶೇಖಡಾ ೨೦% ಮೊತ್ತವನ್ನು ಯಾವುದೇ ರಾಷ್ಟ್ರೀಕೃತವಾದ ಬ್ಯಾಂಕಿನಲ್ಲಿ ಎಫ್.ಡಿ.ಯಾಗಿ ಠೇವಣಿ ಮಾಡಬೇಕು. ಮಗು ೧೮ನೆ ವಯಸ್ಸು ದಾಟಿದ ಮೇಲೆ ಈ ಹಣವನ್ನು ಪಡೆಯಬಹುದು.

ಒಪ್ಪಿಗೆ:

ಒಂದು ವೇಳೆ ಮಗುವಿಗೆ ಯಾವುದೇ ಚಟುವಟಿಕೆ ಅಥವಾ ಕ್ರೀಡೆಯಲ್ಲಿ ಭಾಗವಹಿಸಲು ಇಷ್ಟವಿಲ್ಲದಿದ್ದಲ್ಲಿ, ಅಥವಾ ತೊಂದರೆಯಿದ್ದಲ್ಲಿ ಅವನ/ಅವಳ ಒಪ್ಪಿಗೆ ಇಲ್ಲದೆ ಭಾಗವಹಿಸುವಂತೆ ಒತ್ತಾಯ ಮಾಡಬಾರದು.

ಚಲನಚಿತ್ರಗಳು/ದೂರದರ್ಶನ/ಕ್ರೀಡೆಗಳಲ್ಲಿ ಮಕ್ಕಳು

ಮಕ್ಕಳು ನಾಟಕೀಯ ಧಾರಾವಾಹಿಗಳು, ಚಲನಚಿತ್ರಗಳು, ದೂರದರ್ಶನದಲ್ಲಿ ಬರುವ ಸಾಕ್ಷ್ಯಚಿತ್ರಗಳು, ಪ್ರದರ್ಶನದ ಮುಖ್ಯ ಸಂಚಾಲಕರಾಗಿ, ಅಥವಾ ಆಯಾ ಸಂದರ್ಭಗಳಲ್ಲಿ ಕೇಂದ್ರೀಯ ಸರ್ಕಾರ ಅನುಮತಿ ಮಾಡಿಕೊಟ್ಟ ಇನ್ನಿತರ ಕಲಾತ್ಮಕ ಪ್ರದರ್ಶನಗಳಲ್ಲಿ ಭಾಗವಹಿಸಬಹುದು. ಆದರೆ, ಬೀದಿ ಬದಿಗಳಲ್ಲಿ ದುಡ್ಡಿಗೋಸ್ಕರ ಪ್ರದರ್ಶನಗಳನ್ನು ಮಾಡುವುದು ಈ ಅನುಮತಿಸಲಾದ ಚಟುವಟಿಕೆಗಳಲ್ಲಿ ಬರುವುದಿಲ್ಲ.

ಮಕ್ಕಳು ಚಲನಚಿತ್ರಗಳಲ್ಲಿ/ದೂರದರ್ಶನದಲ್ಲಿ/ಕ್ರೀಡೆಗಳಲ್ಲಿ ಭಾಗವಹಿಸಿ ದುಡ್ಡು ಗಳಿಸಬಹುದು. ಇಂತಹ ಮಕ್ಕಳಿಗೆ ಬಾಲ ಕಲಾವಿದರು ಎನ್ನುತ್ತಾರೆ. ಚಲನಚಿತ್ರಗಳು/ದೂರದರ್ಶನ/ಕ್ರೀಡೆಗೆ ಸಂಬಂಧಿಸಿದಂತೆ, ಅನುಮತಿಸಲಾದ ಮನೋರಂಜನಾ ಮತ್ತು ಕ್ರೀಡಾ ಚಟುವಟಿಕೆಗಳ ಪಟ್ಟಿ ಇಲ್ಲಿದೆ:

  • ಚಲನಚಿತ್ರಗಳು
  • ದೂರದರ್ಶನದಲ್ಲಿನ ಕಾರ್ಯಕ್ರಮಗಳು/ರಿಯಾಲಿಟಿ ಶೋ/ರಸಪ್ರಶ್ನೆ ಕಾರ್ಯಕ್ರಮಗಳು/ಪ್ರತಿಭಾ ಕಾರ್ಯಕ್ರಮಗಳು
  • ಕ್ರೀಡೆಗಳಿಗೆ ಸಂಬಂಧಿಸಿದ ಸ್ಪರ್ಧೆಗಳು, ಒಕ್ಕೂಟಗಳು, ತರಬೇತಿ ಶಿಬಿರಗಳು
  • ಜಾಹಿರಾತುಗಳು
  • ಸಿನಿಮಾ/ಸಾಕ್ಷ್ಯಚಿತ್ರಗಳು
  • ಆಕಾಶವಾಣಿ
  • ಸಮಾರಂಭಗಳ ಮುಖ್ಯ ಸಂಚಾಲಕರಾಗಿ ಭಾಗವಹಿಸುವುದು ಮೇಲೆ ಉಲ್ಲೇಖಿಸಲಾಗದ ಕೆಲವು ಕಲಾತ್ಮಕ ಪ್ರದರ್ಶನಗಳನ್ನು ಕೇಂದ್ರೀಯ ಸರ್ಕಾರ ಅನುಮತಿಸಬಹುದು.

ಕಾನೂನು ನಿಶ್ಚಿತವಾಗಿ ಕೆಳಗಿನ ಚಟುವಟಿಕೆಗಲ್ಲಿ ಮಕ್ಕಳ ಭಾಗವಹಿಸುವಿಕೆಯನ್ನು ನಿಷೇಧಿಸಿದೆ:

  • ಸರ್ಕಸ್ ನಲ್ಲಿ ಪ್ರದರ್ಶನ ನೀಡುವುದು
  • ಬೀದಿ ಬದಿಯಲ್ಲಿ ದುಡ್ಡಿಗೋಸ್ಕರ ಪ್ರದರ್ಶನ ನೀಡುವುದು

ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಸರ್ಕಾರದ ಕರ್ತವ್ಯಗಳು

ಬಾಲ ಕಾರ್ಮಿಕ ಪದ್ಧತಿ ಆಚರಣೆಯಲ್ಲಿಲ್ಲ ಮತ್ತು ಕಾನೂನಿನ ನಿಬಂಧನೆಗಳ ಪಾಲನೆ ಆಗುತ್ತಿದೆ ಎಂಬುದನ್ನು ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ಈ ಕರ್ತವ್ಯಗಳನ್ನು ಸಾಕಾರಗೊಳಿಸುವುದಕ್ಕಾಗಿ, ಸರ್ಕಾರ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ:

  • ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವುದು
  • ಅರಿವು ಮೂಡಿಸುವುದಕ್ಕಾಗಿ ಮಾಧ್ಯಮ ವರ್ಗದ ಉಪಯೋಗ ಮಾಡುವುದು
  • ಬಾಲ ಕಾರ್ಮಿಕ ಪದ್ಧತಿಯ ಬಗ್ಗೆ ವರದಿ ನೀಡುವುದನ್ನು ಪ್ರೋತ್ಸಾಹ ಮಾಡುವುದು
  • ಬಾಲ ಕಾರ್ಮಿಕ ಪದ್ಧತಿಯ ಕಾನೂನನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು
  • ಶಾಲಾ ಪಠ್ಯಕ್ರಮಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ಕಾನೂನನ್ನು ಅಳವಡಿಸುವುದು
  • ಬಾಲ ಕಾರ್ಮಿಕ ಪದ್ಧತಿ ಕಾನೂನು ಮತ್ತು ಅದರ ಉಪಯುಕ್ತತೆಯ ಬಗ್ಗೆ ಪೊಲೀಸ್, ನ್ಯಾಯಿಕ ಸೇವಾ ಅಕಾಡೆಮಿಗಳು, ಶಿಕ್ಷಕರು, ಮತ್ತು ಕೇಂದ್ರೀಯ ಕಾರ್ಮಿಕ ಸೇವೆ – ಇವರಿಗೆ ತರಬೇತಿ ನೀಡುವುದು

ಬಾಲ ಕಾರ್ಮಿಕ ಪದ್ಧತಿ ಅಪರಾಧದಲ್ಲಿ ರಾಜಿ

ನೀವು ಬಾಲ ಕಾರ್ಮಿಕ ಪದ್ಧತಿಯ ಕಾನೂನಿನ ಯಾವುದೇ ನಿಬಂಧನೆಗಳನ್ನು ಅಥವಾ ನಿಯಮಗಳನ್ನು ಪಾಲಿಸದಿದ್ದರೆ, ಕ್ರಿಮಿನಲ್ ಅಭಿಯೋಜನೆಯ ಬದಲು ಕಾನೂನು ನಿಮಗೆ ಆಯ್ಕೆಗಳನ್ನು ನೀಡುತ್ತದೆ. ಕಾನೂನಿನ ಭಾಷೆಯಲ್ಲಿ ಇದಕ್ಕೆ “ಕಂಪೌಂಡಬಲ್ ಅಪರಾಧ” ಎನ್ನುತ್ತಾರೆ. “ಕಂಪೌಂಡಿಂಗ್” ಅಂದರೆ ರಾಜಿ ಮಾಡಿಕೊಳ್ಳುವುದು. ನೀವು ಕೆಳಗಿನ ಎರಡು ತರಹದ ವ್ಯಕ್ತಿಗಳಾಗಿದ್ದಾರೆ, ನಿಮ್ಮ ಅಪರಾಧವನ್ನು ನ್ಯಾಯಾಲಯದಲ್ಲಿ “ಕಂಪೌಂಡಿಂಗ್” ಮಾಡಿಕೊಳ್ಳಬಹುದು:

೧. ಮೊದಲ ಬಾರಿ ಅಪರಾಧವನ್ನು ಮಾಡಿದ್ದರೆ:

ಪಾಲಕರು/ಪೋಷಕರು ಬಾಲ ಕಾರ್ಮಿಕ ನಿಷೇಧಕ್ಕೆ ಸಂಬಂಧಿಸಿದ ಕಾನೂನು ಮತ್ತು ಅದರ ನಿಬಂಧನೆಗಳನ್ನು ಉಲ್ಲಂಘಿಸಿದ್ದರೆ, ಮತ್ತು ಈ ಅಪರಾಧವನ್ನು ರಾಜಿ ಮಾಡಿಕೊಳ್ಳಬೇಕಿದ್ದರೆ:

  • ಕೇಂದ್ರೀಯ ಸರ್ಕಾರಕ್ಕೆ ಅರ್ಜಿಯ ಜೊತೆ ಕೊಡತಕ್ಕದ್ದ ಹಣ: ಅಪರಾಧದ ಗರಿಷ್ಟ ದಂಡದ ೫೦%. ನಿರ್ದಿಷ್ಟಪಡಿಸಲಾದ ಸಮಯದಲ್ಲಿ ಈ ಮೊತ್ತವನ್ನು ಪಾವತಿಸದಿದ್ದರೆ, ಈ ಮೊತ್ತವಲ್ಲದೆ, ಅಪರಾಧದ ಗರಿಷ್ಟ ದಂಡದ ಮೇಲೆ ಹೆಚ್ಚುವರಿ ೨೫% ಹಣ ವಸೂಲಿ ಮಾಡಲಾಗುವುದು.
  • ಈ ಹಣವನ್ನು ಪಾವತಿಸಿದ ಮೇಲೆ ಜಿಲ್ಲಾಧಿಕಾರಿಗಳು ನಿಮಗೆ “ಕಂಪೌಂಡಿಂಗ್ ಪ್ರಮಾಣಪತ್ರ” ನೀಡುತ್ತಾರೆ.
  • ಒಂದು ವೇಳೆ ನೀವು ಹಣ ಕೊಡದಿದ್ದಲ್ಲಿ, ಬಾಲ ಕಾರ್ಮಿಕ ನಿಷೇಧಕ್ಕೆ ಸಂಬಂಧಿಸಿದ ಕಾನೂನಿನ ಪ್ರಕಾರ ನಿಮ್ಮ ಮೇಲೆ ಮೊಕದ್ದಮ್ಮೆ ನ್ಯಾಯಾಲಯದಲ್ಲಿ ಚಲಾಯಿಸಿ ದಂಡವನ್ನು ವಿಧಿಸಲಾಗುತ್ತದೆ. ಆದರೆ ನೀವು ಈ ಹಣವನ್ನು ಪಾವತಿಸಿದ್ದಾರೆ, ನಿಮ್ಮನ್ನು ನ್ಯಾಯಾಲಯಕ್ಕೆ ಕರೆದೊಯ್ಯಲು ಆಗುವುದಿಲ್ಲ, ಏಕೆಂದರೆ ನೀವು ಆಗಲೇ ಹಣವನ್ನು ಪಾವತಿಸಿ ಅಪರಾಧವನ್ನು ರಾಜಿ ಮಾಡಿಕೊಂಡಿದ್ದೀರಿ.