ನ್ಯಾಯ ಗೆಸ್ಟ್ ಬ್ಲಾಗ್

ನ್ಯಾಯಾ ಮತ್ತು ನಮ್ಮ ಕೆಲಸದ ಕುರಿತು ಅಪ್‌ಡೇಟ್‌ಗಳ ಜೊತೆಗೆ ಕಾನೂನು ಕ್ಷೇತ್ರದಲ್ಲಿ ತಜ್ಞರಿಂದ ಅಭಿಪ್ರಾಯಗಳು, ಸಂಶೋಧನೆ, ಇನ್ಫೋಗ್ರಾಫಿಕ್ಸ್ ಇತ್ಯಾದಿಗಳನ್ನು ನಿಮ್ಮ ಮುಂದೆ ತರಲಿದ್ದೇವೆ.

Mar 10, 2022

“ಪಮ್ಮಾಳ್ ಕೆ. ಸಂಬಂಧಮ್” ಚಲನಚಿತ್ರ ಮದುವೆಯನ್ನು ನೋಂದಾಯಿಸುವ ಪ್ರಕ್ರಿಯೆಯನ್ನು ಎಷ್ಟು ಸರಿಯಾಗಿ ಚಿತ್ರಿಸಿದೆ?

Nyaaya

ಪ್ರಖ್ಯಾತ ಸಿನಿಮಾ ನಟರಾದ ಕಮಲ್ ಹಾಸನ್ ಅವರು ನಟಿಸಿದ "ಪಮ್ಮಾಳ್ ಕೆ. ಸಂಬಂಧಮ್" ಎಂಬ ತಮಿಳು ಭಾಷೆಯ ಹಾಸ್ಯ ಚಲನಚಿತ್ರದಲ್ಲಿ ಹಲವಾರು ದಂಪತಿಗಳು ಓಡಿ ಹೋಗಿ ಪೊಲೀಸ್ ಠಾಣೆಗಳಲ್ಲಿ ಮದುವೆಯಾಗುವುದನ್ನು ತೋರಿಸಲಾಗಿದೆ. ಇಂತಹ ಮದುವೆಗಳು ಕೇವಲ ಒಂದು ದಾಖಲಾ ಪುಸ್ತಕದಲ್ಲಿ ಸಹಿ ಮಾಡಿ, ಹೂಮಾಲೆಗಳನ್ನು ಒಬ್ಬರಿಗೊಬ್ಬರು ಹಾಕಿ, ಹಾಗು ಪವಿತ್ರವಾದ ತಾಳಿಯನ್ನು ಕೊರಳಿಗೆ ಕಟ್ಟಿ ನೆರವೇರುತ್ತವೆ ಎಂದು ಈ ಚಲನಚಿತ್ರದಲ್ಲಿ ತೋರಿಸಲಾಗಿದೆ. ಆದರೆ, ನಿಜ ಜೀವನದಲ್ಲಿ ವಿಶೇಷ ವಿವಾಹ ಕಾನೂನಿನಡಿಯಲ್ಲಿ ವಿವಾಹವನ್ನು ನೋಂದಾಯಿಸುವುದು ಮತ್ತು ನೆರವೇರಿಸುವುದು ಇಷ್ಟು ಸುಲಭವಲ್ಲ.   [video width="1080" height="1080" mp4="https://kannada.nyaaya.org/wp-content/uploads/2022/03/Nyaaya-lite-PKS.mp4" autoplay="true"][/video]   ಮೊದಲನೆಯದಾಗಿ, ಮದುವೆಯಾಗಬಯಸುವ ದಂಪತಿಗಳು ಒಂದು ಲಿಖಿತ ಸೂಚನೆಯನ್ನು ನೀಡಬೇಕಾಗುತ್ತದೆ. ಈ ಲಿಖಿತ ಸೂಚನೆಯನ್ನು ಹುಡುಗ ಅಥವಾ ಹುಡುಗಿ ವಾಸಿಸುವ ಜಿಲ್ಲೆಯ ವಿವಾಹಾಧಿಕಾರಿಗೆ ಕಳಿಸಬೇಕು. ಈ ಹುಡುಗ ಅಥವಾ ಹುಡುಗಿ, ಆ ಜಿಲ್ಲೆಯಲ್ಲಿಸೂಚಿನೆ ನೀಡುವ ಮುನ್ನ ಕನಿಷ್ಠಪಕ್ಷ ೩೦ ದಿನಗಳಿಗಾದರೂ ಆ ಜಿಲ್ಲೆಯಲ್ಲಿ ವಾಸವಾಗಿರಬೇಕು. ಮದುವೆಯಾಗುವ ಮುನ್ನ ಹುಡುಗ, ಹುಡುಗಿ, ಮತ್ತು ಮೂರು ಸಾಕ್ಷಿದಾರರು ಒಂದು ಧೃಡೀಕರಣ ಪತ್ರಕ್ಕೆ ಸಹಿ ಹಾಕಬೇಕು. ಈ ಧೃಢೀಕರಣ ಪತ್ರಕ್ಕೆ ವಿವಾಹಾಧಿಕಾರಿಗಳೂ ಸಹ ಸಹಿ ಹಾಕುತ್ತಾರೆ. ವಿವಾಹಾಧಿಕಾರಿಗಳ ಕಚೇರಿಯಲ್ಲಿಯೇ ಈ ದಂಪತಿಗಳ ಮದುವೆ ನೆರವೇರಿಸಬಹುದು. ಇದಲ್ಲದೆ, ಕಚೇರಿಯ ಸನಿಹವೇ ಇನ್ನೋರ್ವ ಜಾಗದಲ್ಲೂ ಸಹ, ಹೆಚ್ಚುವರಿ ಶುಲ್ಕವನ್ನು ನೀಡಿ, ಮದುವೆಯನ್ನು ನೆರವೇರಿಸಬಹುದು. ಈ ದಂಪತಿಗಳು ಅವರ ವಿವಾಹವನ್ನು ಯಾವುದಾದರೂ ರೀತಿ ಅಥವಾ ಧಾರ್ಮಿಕ ಸಂಪ್ರದಾಯದ ಪ್ರಕಾರ ನೆರವೇರಿಸಬಹುದು. ಉದಾಹರಣೆಗೆ, ಈ ಮದುವೆಯು ಹಿಂದೂ ಸಂಪ್ರದಾಯದ ಪ್ರಕಾರ ಆಚರಿಸಬಹುದು ಅಥವಾ ಚರ್ಚಿನ ಸಂಪ್ರದಾಯದ ಪ್ರಕಾರ ನೆರವೇರಿಸಬಹುದು. ಆದಾಗ್ಯೂ, ವಿಶೇಷ ವಿವಾಹ ಕಾಯಿದೆಯಡಿ ಆಗುವ ಯಾವುದೇ ಮದುವೆ ದಂಪತಿಗಳು, ವಿವಾಹಾಧಿಕಾರಿ ಮತ್ತು ೩ ಸಾಕ್ಷಿದಾರರ ಸಮಕ್ಷಮ ಈ ಕೆಳಕಂಡ ಹೇಳಿಕೆಯನ್ನು ಹೇಳಿದರೆ ಮಾತ್ರ ಪೂರ್ಣಗೊಳ್ಳುತ್ತದೆ: "ನಾನು (ಒಬ್ಬರ ಹೆಸರು), (ಇನ್ನೊಬ್ಬರ ಹೆಸರು)ರನ್ನು ಕಾನೂನುಬಧ್ಧವಾಗಿ ನನ್ನ ಗಂಡ/ಹೆಂಡತಿ ಎಂದು ಸ್ವೀಕರಿಸುತ್ತೇನೆ." ಈ ಒಂದು ಹೇಳಿಕೆಯನ್ನು ಸಂಬಂಧಪಟ್ಟ ವ್ಯಕ್ತಿಗೆ ಅರ್ಥವಾಗುವ ಯಾವ ಭಾಷೆಯಲ್ಲಾದರೂ ಹೇಳಬಹುದು. ಮದುವೆಯಾದ ನಂತರ, ವಿವಾಹಾಧಿಕಾರಿಗಳು ವಿವಾಹ ಪ್ರಮಾಣಪತ್ರ ಪುಸ್ತಕದಲ್ಲಿ ಒಂದು ಪ್ರಮಾಣಪತ್ರವನ್ನು ದಾಖಲಿಸುತ್ತಾರೆ. ಈ ಪ್ರಮಾಣಪತ್ರಕ್ಕೆ ನವದಂಪತಿಗಳು ಹಾಗು ಅವರ ೩ ಸಾಕ್ಷಿದಾರರು ಸಹಿ ಹಾಕಬೇಕು. ಈ ಪ್ರಮಾಣಪತ್ರವನ್ನು ಪುಸ್ತಕದಲ್ಲಿ ವಿವಾಹಾಧಿಕಾರಿಗಳು ದಾಖಲಿಸಿದ ನಂತರ ಅದು ಮದುವೆಯ ನಿರ್ಣಾಯಕ ಪುರಾವೆಯಾಗುತ್ತದೆ. ಈ ಕಾನೂನಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಅಂತರ್ ಧಾರ್ಮಿಕ ವಿವಾಹ ಕುರಿತು ನಮ್ಮ ವಿವರಣೆಯನ್ನು ಪರಿಶೀಲಿಸಿ.
Read More >

ನೀವು ವಕೀಲಿ ವೃತ್ತಿಯಲ್ಲಿದ್ದೀರಾ ಅಥವಾ ಪತ್ರಿಕೋದ್ಯಮದಲ್ಲಿದ್ದೀರಾ? ನಮಗಾಗಿ ಬ್ಲಾಗ್‌ಪೋಸ್ಟ್‌ಗಳನ್ನು ಬರೆಯಲು ಬಯಸುವಿರಾ?