ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ ೧೨೫ರ ಪ್ರಕಾರ ಸಾಕಾದಷ್ಟು ಸಂಪನ್ಮೂಲವಿರುವ ಯಾವುದೇ ವ್ಯಕ್ತಿಯು ತನ್ನ ಅವಲಂಬಿತ ತಂದೆ-ತಾಯಿಯನ್ನು ನಿರ್ಲಕ್ಷಿಸಿದರೆ, ಅಥವಾ ಅವರ ಪೋಷಣೆ ಮಾಡಲು ನಿರಾಕರಿಸಿದರೆ, ಪ್ರಥಮ ಶ್ರೇಣಿಯ ಹಿರಿಯ ನ್ಯಾಯಾಧೀಶರು ಅವರಿಗೆ ಜೀವನಾಂಶದ ರೂಪದಲ್ಲಿ ಮಾಸಿಕ ಭತ್ಯೆ ಕೊಡಬೇಕೆಂದು ಆದೇಶಿಸಬಹುದು. ಇಂತಹ ದೂರು ನೀಡಿ ಜೀವನಾಂಶದ ಆದೇಶವನ್ನು ಪಡೆಯುವ ಕ್ರಮವನ್ನು ತಿಳಿಯಲು ತಮ್ಮ ವಕೀಲರನ್ನು ಸಂಪರ್ಕಿಸಿ.
Theme: Family & Marriage
ಬಾಲ್ಯ ವಿವಾಹವನ್ನು ರದ್ದುಗೊಳಿಸುವುದು
ಬಾಲ್ಯ ವಿವಾಹ ನೆರವೇರಿದ್ದಲ್ಲಿ, ವಿವಾಹದ ಸಮಯದಲ್ಲಿ ಯಾರು ಅಪ್ರಾಪ್ತ ವಯಸ್ಸಿನವರಾಗಿದ್ದರೋ, ಅವರಿಗೆ ಆ ವಿವಾಹವನ್ನು ರದ್ದುಗೊಳಿಸುವ ಆಯ್ಕೆ ಇರುತ್ತದೆ. ಆ ಬಾಲ್ಯ ವಿವಾಹವನ್ನು ಈ ಕೆಳಕಂಡ ರೀತಿಗಳಲ್ಲಿ ರದ್ದುಗೊಳಿಸಬಹುದು:
ಪ್ರಕರಣವನ್ನು ಎಲ್ಲಿ ದಾಖಲಿಸಬೇಕು?
ಬಾಲ್ಯ ವಿವಾಹವನ್ನು ರದ್ದುಗೊಳಿಸಿ ಎಂಬ ಮನವಿಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಬೇಕು.
ಪ್ರಕರಣವನ್ನು ಯಾರು ದಾಖಲಿಸಬೇಕು?
ಮನವಿದಾರರು ಅಪ್ರಾಪ್ತ ವಯಸ್ಕರಾಗಿದ್ದರೆ ಅರ್ಜಿಯನ್ನು ಅವರ ಪೋಷಕರು ಅಥವಾ ಹಿತೈಷಿಗಳಿಂದ ಸಲ್ಲಿಸಬೇಕು. ಇವರು ಬಾಲ್ಯ ವಿವಾಹ ನಿಷೇಧಾಧಿಕಾರಿಗಳೊಡನೆ ಈ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಪ್ರಕರಣವನ್ನು ಯಾವಾಗ ದಾಖಲಿಸಬಹುದು?
ಈ ಅರ್ಜಿಯನ್ನು ಸಲ್ಲಿಸಲು ಕಾನೂನಿನಡಿ ನಿರ್ದಿಷ್ಟವಾದ ಸಮಯದ ಮಿತಿಯಿದೆ. ಸಂಬಂಧಪಟ್ಟ ಅಪ್ರಾಪ್ತ ವಯಸ್ಕರು ಪ್ರಾಪ್ತ ವಯಸ್ಕರಾದ ಬಳಿಕ ೨ ವರ್ಷಗಳವರೆಗೆ ಮಾತ್ರ ಈ ಅರ್ಜಿಯನ್ನು ಸಲ್ಲಿಸಬಹುದು. ಅಂದರೆ, ಹುಡುಗಿಯರು, ಅವರ ಬಾಲ್ಯ ವಿವಾಹ ರದ್ದು ಪಡಿಸಲು ಮನವಿಯನ್ನು ೨೦ ವರ್ಷದೊಳಗೆ, ಹಾಗು ಹುಡುಗರು ೨೩ ವರ್ಷದೊಳಗೆ ಮಾತ್ರ ಸಲ್ಲಿಸಬಹುದಾಗಿದೆ.
ನ್ಯಾಯಾಲಯವು ಏನು ಮಾಡುತ್ತದೆ?
ಬಾಲ್ಯ ವಿವಾಹವು ರದ್ದುಗೊಂಡಾಗ, ವಿವಾಹದ ಸಮಯದಲ್ಲಿ ವಿನಿಮಯಗೊಂಡ ಎಲ್ಲ ಬೆಲೆಬಾಳುವ ವಸ್ತುಗಳು, ಹಣ, ಆಭರಣಗಳು, ಹಾಗು ಇತರೆ ಉಡುಗೊರೆಗಳನ್ನು ಪರಸ್ಪರ ಹಿಂತಿರುಗಿಸಿ ಎಂದು ಜಿಲ್ಲಾ ನ್ಯಾಯಾಲಯವು ಆದೇಶಿಸುತ್ತದೆ. ಉಡುಗೊರೆಗಳನ್ನು ಹಿಂತಿರುಗಿಸಲಾರದಂತಿದ್ದಲ್ಲಿ, ಅವುಗಳ ಮೌಲ್ಯದ ಹಣದ ಮೊತ್ತವನ್ನು ಹಿಂತಿರುಗಿಸುವುದಾಗಿ ನ್ಯಾಯಾಲಯವು ಆದೇಶಿಸುತ್ತದೆ.
ಹಿಂದೂ ವಿವಾಹ ಕಾನೂನಿನಡಿ ವಿಚ್ಛೇದನವನ್ನು ಎಲ್ಲಿ ಪಡೆಯಬಹುದು?
ನೀವು ಹಾಗು ನಿಮ್ಮ ಸಂಗಾತಿ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸಬಹುದು. ವಿಚ್ಛೇದನದ ಪ್ರಕರಣಗಳನ್ನು “ಕುಟುಂಬ ನ್ಯಾಯಾಲಯ” ಎಂಬ ಪ್ರತ್ಯೇಕ ನ್ಯಾಯಾಲಯಗಳು ನಿರ್ಧರಿಸುತ್ತವೆ. ಈ ಕೆಳಕಂಡ ಸ್ಥಳಗಳ ಕುಟುಂಬ ನ್ಯಾಯಾಲಯಗಳಲ್ಲಿ ನೀವು ವಿಚ್ಛೇದನದ ಅರ್ಜಿ ಸಲ್ಲಿಸಬಹುದು:
೧. ನಿಮ್ಮ ಮದುವೆಯಾದ ಊರು:
ನೀವು ಅಥವಾ ನಿಮ್ಮ ಸಂಗಾತಿ, ನೀವು ಮದುವೆಯಾದ ಊರಿನಲ್ಲಿರುವ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ನೀವು ಹಾಗು ನಿಮ್ಮ ಸಂಗಾತಿ ಬೆಂಗಳೂರಿನಲ್ಲಿ ಮದುವೆಯಾಗಿದ್ದಲ್ಲಿ, ಬೆಂಗಳೂರಿನ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿ ಸಲ್ಲಿಸಬಹುದು.
೨. ನಿಮ್ಮ ಸಂಗಾತಿ ವಾಸಿಸುವ ಊರು:
ನಿಮ್ಮ ಸಂಗಾತಿಯು ವಾಸಿಸುವ ಊರಿನಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ಉದಾಹರಣೆಗೆ, ನಿಮ್ಮ ಸಂಗಾತಿಯು ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದಲ್ಲಿ, ಹುಬ್ಬಳ್ಳಿಯ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿಯನ್ನು ಸಲ್ಲಿಸಬಹುದು.
೩. ನೀವಿಬ್ಬರೂ ಕೊನೆಯದಾಗಿ ಜೊತೆಗೆ ವಾಸಿಸಿದ್ದ ಊರು:
ನೀವು ಅಥವಾ ನಿಮ್ಮ ಸಂಗಾತಿಯು, ನೀವಿಬ್ಬರೂ ಕೊನೆಯದಾಗಿ ಜೊತೆಗೆ ವಾಸಿಸಿದ್ದ ಊರಿನಲ್ಲಿ ನಿಮ್ಮ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ನೀವು ಹಾಗು ನಿಮ್ಮ ಸಂಗಾತಿ ಮೈಸೂರಿನಲ್ಲಿ ಕೊನೆಯದಾಗಿ ಜೊತೆಗೆ ವಾಸಿಸಿದ್ದಲ್ಲಿ, ಮೈಸೂರಿನ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿಯನ್ನು ಸಲ್ಲಿಸಬಹುದು.
೪. ನೀವು ವಾಸಿಸುವ ಊರು:
ಹೆಂಡತಿ: ನೀವು ನಿಮ್ಮ ಗಂಡನಿಂದ ವಿಚ್ಛೇದನ ಬಯಸಿದ್ದಲ್ಲಿ, ನೀವು ವಾಸಿಸಿರುವ ಊರಿನಲ್ಲೇ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ನೀವು ಮಂಗಳೂರಿನಲ್ಲಿ ನೆಲೆಸಿದ್ದರೆ, ಮಂಗಳೂರಿನ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿಯನ್ನು, ನಿಮ್ಮ ಪತಿ ಮಂಗಳೂರಿನಲ್ಲಿ ಇಲ್ಲದಿದ್ದರೂ ಸಹ, ಸಲ್ಲಿಸಬಹುದು. ಗಂಡ ಹಾಗು ಹೆಂಡತಿ: ನಿಮ್ಮ ಸಂಗಾತಿ ವಿದೇಶಕ್ಕೆ ಹೋಗಿದ್ದಾಗ, ನೀವು ನೆಲೆಸಿದ್ದ ಊರಿನ ಕೋರ್ಟಿನಲ್ಲಿ ನಿಮ್ಮ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ದಯವಿಟ್ಟು ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ವಕೀಲರೊಂದಿಗೆ ವಿಚಾರಿಸಿ.
ವಿವಾಹ ಕುಲಸಚಿವರಿಂದ ಮದುವೆ ನೆರವೇರಿಸುವ ಕಾರ್ಯವಿಧಾನವೇನು?
ವಿವಾಹ ಕುಲಸಚಿವರಿಂದ ನೆರವೇರುವ ಮದುವೆ ೪ ಹಂತಗಳಲ್ಲಿ ನಡೆಯುತ್ತದೆ:
ಹಂತ ೧: ಪೂರ್ವಭಾವಿ ಸೂಚನೆಯನ್ನು ಹೊರಡಿಸುವುದು:
ದಂಪತಿಗಳಿಬ್ಬರು ವಿವಾಹ ಕುಲಸಚಿವರ ನೇತೃತ್ವದಲ್ಲಿ ಮದುವೆಯಾಗಬೇಕೆಂದರೆ, ಅವರಲ್ಲಿ ಒಬ್ಬರು ಖುದ್ದಾಗಿ ಅವರು ವಾಸಿಸುವ ಜಿಲ್ಲೆಯ ವಿವಾಹ ಕುಲಸಚಿವರಿಗೆ ವಿವಾಹ ಉದ್ದೇಶದ ಸೂಚನೆ ನೀಡಬೇಕು. ದಂಪತಿಗಳಿಬ್ಬರೂ ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸ ಮಾಡುತ್ತಿದ್ದರೆ, ಆ ಎರಡೂ ಜಿಲ್ಲೆಗಳ ಕುಲಸಚಿವರಿಗೆ ಸೂಚನೆಯನ್ನು ನೀಡಬೇಕಾಗುತ್ತದೆ. ಈ ಸೂಚನೆಯು ನಿಗದಿತ ಸ್ವರೂಪದಲ್ಲಿದ್ದು, ಅದರಲ್ಲಿ ವಿವಾಹದ ಉದ್ದೇಶ ತಿಳಿಸಲಾಗಿರಬೇಕಾಗುತ್ತದೆ, ಹಾಗು ಕೆಳಗಿನ ವಿವರಗಳನ್ನು ಹೊಂದಿರಬೇಕಾಗುತ್ತದೆ:
- ೧. ದಂಪತಿಗಳ ಹೆಸರು, ಅಡ್ಡ ಹೆಸರು, ಹಾಗು ವೃತ್ತಿ
- ೨. ಅವರ ಪ್ರಸ್ತುತ ವಿಳಾಸ
- ೩. ಈ ವಿಳಾಸದಲ್ಲಿ ವಾಸಿಸಿದ್ದ ಸಮಯಾವಧಿ. ಒಂದು ತಿಂಗಳಿಗಿಂತ ಹೆಚ್ಚು ಈ ವಿಳಾಸದಲ್ಲಿ ವಾಸಿಸಿದ್ದರೆ, ಅದನ್ನು ಸೂಚನೆಯಲ್ಲಿ ತಿಳಿಸಬೇಕಾಗುತ್ತದೆ.
- ೪. ಮದುವೆ ನಡೆಯುವ ಸ್ಥಳ.
ಕೆಳಗೆ ಸೂಚನೆಯ ನಮೂನೆ ನೀಡಲಾಗಿದೆ:
ಈ ಸೂಚನೆಯನ್ನು ವಿವಾಹ ಕುಲಸಚಿವರು ತಮ್ಮ ಕಚೇರಿಯಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಲಗತ್ತಿಸುತ್ತಾರೆ, ಮತ್ತು ವಿವಾಹ ಸೂಚನಾ ಪುಸ್ತಕದಲ್ಲಿ ನೋಂದಾಯಿಸುತ್ತಾರೆ.
ಹಂತ ೨: ಸೂಚನಾ ರಶೀದಿ ಪಡೆದ ಪ್ರಮಾಣಪತ್ರ ನೀಡುವುದು:
ಕುಲಸಚಿವರಿಗೆ ವಿವಾಹ ಸೂಚನೆ ಕೊಟ್ಟು ಕನಿಷ್ಟ ೪ ದಿನಗಳ ಬಳಿಕ, ಮದುವೆಯಾಗ ಬಯಸುವ ದಂಪತಿಗಳಲ್ಲಿ ಒಬ್ಬರು, ವಿವಾಹದಲ್ಲಿ ಯಾವ ರೀತಿಯ ಕಾನೂನಾತ್ಮಕ ಸಮಸ್ಯೆಗಳೂ ಇಲ್ಲ, ಮತ್ತು ಅವರು ವಿವಾಹ ಕುಲಸಚಿವರ ಅಧಿಕಾರದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯಲ್ಲಿಯೇ ವಾಸಿಸುತ್ತಿದ್ದಾರೆ ಎಂದು ಕುಲಸಚಿವರಿಗೆ ಪ್ರಮಾಣ ವಚನ ನೀಡಬೇಕು. ದಂಪತಿಗಳಲ್ಲಿ ಒಬ್ಬರು ಅಲ್ಪವಯಸ್ಕರಾಗಿದ್ದರೆ, ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡಾಗಿದೆ ಎಂದು ಪ್ರಮಾಣ ವಚನ ನೀಡಬೇಕು.
ಇಂತಹ ಧೃಢೀಕರಣವಾದ ಮೇಲೆ ಕುಲಸಚಿವರು ನಿಗದಿತ ಸ್ವರೂಪದಲ್ಲಿ ದಂಪತಿಗಳಿಗೆ ಪ್ರಮಾಣ ಪಾತ್ರ ನೀಡುತ್ತಾರೆ. ಹೀಗೆ ಪ್ರಮಾಣ ಪಾತ್ರ ಪಡೆದು ಎರಡು ತಿಂಗಳುಗಳ ಒಳಗೆ ಆ ದಂಪತಿಗಳು ಕುಲಸಚಿವರ ಉಪಸ್ಥಿತಿಯಲ್ಲಿ, ಅಥವಾ ಇನ್ನೋರ್ವ ವಿವಾಹ ಕುಲಸಚಿವರ ನೇತೃತ್ವದಲ್ಲಿ ಮದುವೆಯಾಗಬಹುದು. ಕೆಳಗೆ ಸೂಚನಾ ರಶೀದಿ ಪಡೆದ ಪ್ರಮಾಣ ಪಾತ್ರದ ನಮೂನೆ ನೋಡಿ:
ಹಂತ ೩: ಮದುವೆಯ ಆಚರಣೆ:
ಮೇಲೆ ಕಂಡ ಪ್ರಮಾಣ ಪತ್ರವನ್ನು ಮದುವೆಯ ಸಮಯದಲ್ಲಿ ಕುಲಸಚಿವರಿಗೆ ಒಪ್ಪಿಸಬೇಕಾಗುತ್ತದೆ. ಮದುವೆಯನ್ನು ಖುದ್ದಾಗಿ ವಿವಾಹ ಕುಲಸಚಿವರೇ, ಅಥವಾ ಅವರಿಂದ ನೇಮಕಗೊಂಡ ಅಧಿಕೃತ ವ್ಯಕ್ತಿ ನೆರವೇರಿಸುತ್ತಾರೆ. ಕುಲಸಚಿವರಲ್ಲದೆ, ಇಬ್ಬರು ಸಾಕ್ಷಿದಾರರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಒಂದು ವೇಳೆ ಪ್ರಮಾಣ ಪತ್ರ ಪಡೆದು ಎರಡು ತಿಂಗಳುಗಳಾಗಿಹೋಗಿದ್ದರೆ, ಈ ಸಂಪೂರ್ಣ ಪ್ರಕ್ರಿಯೆ ಹೊಸ ಸೂಚನಾ ಪತ್ರದಿಂದ ಪುನಃ ಆರಂಭಿಸಬೇಕಾಗುತ್ತದೆ.
ಹಂತ ೪: ಮದುವೆಯ ನೋಂದಣಿ:
ಮದುವೆ ನಡೆದ ಮೇಲೆ ಅದರ ವಿವರಗಳನ್ನು ವಿವಾಹ ಕುಲಸಚಿವರು ದಾಖಲಾ ಪುಸ್ತಕದಲ್ಲಿ, ನಿಗದಿತ ಸ್ವರೂಪದಲ್ಲಿ ನಮೂದಿಸಬೇಕಾಗುತ್ತದೆ. ಈ ದಾಖಲೆಗೆ ಆ ಕುಲಸಚಿವರು, ಮದುವೆ ನೆರವೇರಿಸಿದ ಅಧಿಕೃತ ವ್ಯಕ್ತಿ (ಕುಲಸಚಿವರಲ್ಲದೆ ಇನ್ನೋರ್ವ ವ್ಯಕ್ತಿ ಮದುವೆ ನೆರವೇರಿಸಿದ್ದಲ್ಲಿ) ನವ ದಂಪತಿಗಳು, ಹಾಗು ಮದುವೆ ಸಮಾರಂಭದಲ್ಲಿ ಹಾಜರಿರುವ ಇಬ್ಬರು ಸಾಕ್ಷಿದಾರರು ಸಹಿ ಹಾಕಬೇಕು.
ವಿವಾಹ ದಾಖಲಾ ಪುಸ್ತಕದಲ್ಲಿನ ಈ ನೋಂದಣಿಯ ಪ್ರಮಾಣೀಕೃತ ಪ್ರತಿಯ ಮೇಲೆ, ಯಾವ ಅಧಿಕಾರಿಗಳ ಅಧೀನದಲ್ಲಿ ಈ ದಾಖಲಾ ಪುಸ್ತಕ ಇರುತ್ತದೆಯೋ, ಅವರ ಸಹಿ ಬೇಕಾಗುತ್ತದೆ. ಆ ಸಹಿಯಾದ ಬಳಿಕ, ದಂಪತಿಗಳು ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ ಎಂಬ ಪುರಾವೆಯಾಗುತ್ತದೆ ಈ ಪ್ರಮಾಣೀಕೃತ ಪತ್ರ.ವಿವಾಹ ಕುಲಸಚಿವರಿಗೆ ನಿಗದಿತ ಶುಲ್ಕವನ್ನು ನೀಡಿ, ಅವರ ಅಧೀನದಲ್ಲಿ ಇರುವ ವಿವಾಹ ದಾಖಲಾ ಪುಸ್ತಕವನ್ನು ಯಾವಾಗಾದರೂ ಪರಿಶೀಲಿಸಬಹುದು.
ದತ್ತು ಸ್ವೀಕಾರದ ರೀತಿಗಳು
ಧಾರ್ಮಿಕೇತರ ದತ್ತು ಸ್ವೀಕಾರಗಳ ಹಲವಾರು ರೀತಿಗಳು ಕೆಳಗಿನಂತಿವೆ. ಇನ್ನು ನೀವು ಹಿಂದೂ ದತ್ತು ಸ್ವೀಕಾರ ಕಾನೂನನ್ನು ಪಾಲಿಸಿದರೆ, ದತ್ತು ಪಡೆಯುವ ಹಲವಾರು ರೀತಿಗಳು ಅದರಲ್ಲಿಲ್ಲ.
ದತ್ತು ಸ್ವೀಕಾರ ಪ್ರಕ್ರಿಯೆಯ ವಿಭಾಗಗಳು ಕೆಳಗಿನಂತಿವೆ:
- ನಿವಾಸಿ ಭಾರತಿಯಾರಿಂದ ದತ್ತು ಸ್ವೀಕಾರ
- ಭಾರತೀಯ ನಾಗರಿಕರಿಂದ ವಿದೇಶಿ ಮಗುವಿನ ದತ್ತು ಸ್ವೀಕಾರ
- ಭಾರತದ ಸಾಗರೋತ್ತರ ನಾಗರಿಕರು, ಅಥವಾ ಭಾರತದಲ್ಲಿ ನೆಲೆಸಿರುವ ವಿದೇಶಿಗಳಿಂದ ದತ್ತು ಸ್ವೀಕಾರ
- ಭಾರತದ ಸಾಗರೋತ್ತರ ನಾಗರಿಕರು, ಅನಿವಾಸಿ ಭಾರತೀಯರು, ಅಥವಾ ಪ್ರದೇಶದಲ್ಲಿರುವ ವಿದೇಶಿಯರಿಂದ ದತ್ತು ಸ್ವೀಕಾರ
- ಮಲ ತಂದೆ-ತಾಯಂದಿರಿಂದ ದತ್ತು ಸ್ವೀಕಾರ
- ನೆಂಟರಿಂದ ದತ್ತು ಸ್ವೀಕಾರ: ಭಾರತದಲ್ಲಿಯೇ, ಮತ್ತು ಅಂತರ್-ದೇಶೀಯ ದತ್ತು ಸ್ವೀಕಾರ
ಗಂಡ ಕಾಣೆಯಾದ ಸಂದರ್ಭದಲ್ಲಿ ಮುಸ್ಲಿಂ ವಿಚ್ಛೇದನ
ಗಂಡ ಕಾಣೆಯಾಗಿದ್ದರೆ, ಮುಸ್ಲಿಂ ಕಾನೂನಿನಡಿ ವಿಚ್ಛೇದನಕ್ಕೆ ಅನುಕೂಲವಿದೆ.
ನಾಲ್ಕು ವರ್ಷಗಳ ವರೆಗೆ ನಿಮಗೆ ನಿಮ್ಮ ಗಂಡನ ಪತ್ತೆ ಇಲ್ಲದಿದ್ದರೆ ನೀವು ವಿಚ್ಛೇದನಕ್ಕೆ ಮನವಿ ಸಲ್ಲಿಸಬಹುದು.
ಮರಣದ ನಂತರ ಜೀವನಾಂಶ
ನಿಮ್ಮ ಮಕ್ಕಳು/ಉತ್ತರಾಧಿಕಾರಿಗಳು ಸತ್ತ ಮೇಲೂ ಸಹ ನಿಮಗೆ ಜೀವನಾಂಶದ ಹಕ್ಕಿದೆ. ನೀವು ಅಶಕ್ತ ಅಥವಾ ಇಳಿ ವಯಸ್ಸಿನಲ್ಲಿದ್ದಲ್ಲಿ, ನಿಮ್ಮ ಅರ್ಜಿಯ ಮೇರೆಗೆ ನಿಮ್ಮ ಮಕ್ಕಳ/ಉತ್ತರಾಧಿಕಾರಿಗಳ ಸಂಪತ್ತು ಮತ್ತು ಆಸ್ತಿಯ ಒಂದು ಭಾಗ ನಿಮಗೆ ಕೊಡಬೇಕೆಂದು ನ್ಯಾಯಾಲಯವು ಆದೇಶಿಸಬಹುದು. ಇಂತಹ ಸಂದರ್ಭಗಳಲ್ಲಿ ನಿಮ್ಮ ಮಕ್ಕಳು/ಉತ್ತರಾಧಿಕಾರಿಗಳು ಸತ್ತ ನಂತರ ಅನ್ವಯವಾಗುವ ಉತ್ತರಾಧಿಕಾರದ ನಿಯಮಗಳನುಸಾರ ನಿಮ್ಮ ಜೀವನಾಂಶದ ಮೊತ್ತವನ್ನು ನಿರ್ಧರಿಸಲಾಗುತ್ತದೆ. ನಿಮಗೆ ದಕ್ಕುವ ಜೀವನಾಂಶದ ಮೊತ್ತವನ್ನು ಕೆಳಗಿನ ಅಂಶಗಳ ಮೇಲೆ ನ್ಯಾಯಾಲಯವು ನಿರ್ಧರಿಸುತ್ತದೆ:
- ತಮ್ಮ ಸಾಲಗಳನ್ನು ತೀರಿಸಿದ ನಂತರ, ನಿಮ್ಮ ಮಕ್ಕಳು/ಉತ್ತರಾಧಿಕಾರಿಗಳ ಆಸ್ತಿಯ ಸಂಪೂರ್ಣ ಮೌಲ್ಯ (ಆಸ್ತಿಯಿಂದ ಬರುವ ಆದಾಯ ಸೇರಿದಂತೆ)
- ಅವರ ಉಯಿಲಿನ (will) ನಿಬಂಧನೆಗಳು
- ನಿಮ್ಮ ಜೊತೆಗಿನ ಅವರ ಸಂಬಂಧದ ಸ್ವರೂಪ ಮತ್ತು ನಿಕಟತೆ
- ನಿಮ್ಮ ಅವಶ್ಯಕತೆಗಳು (ಸಮಂಜಸವಾಗಿ ಲೆಕ್ಕ ಹಾಕಲಾಗುತ್ತದೆ)
- ಜೀವನಾಂಶಕ್ಕಾಗಿ ಅವರ ಮೇಲೆ ಅವಲಂಬಿಸಿರುವ ವ್ಯಕತಿಗಳ ಸಂಖ್ಯೆ
ಅಮಾನ್ಯ ಬಾಲ್ಯ ವಿವಾಹಗಳು
ಬಾಲ್ಯ ವಿವಾಹ ಕೆಲವು ಸಂದರ್ಭಗಳಲ್ಲಿ ಸಂಪೂರ್ಣವಾಗಿ ಅಮಾನ್ಯವಾಗಿರುತ್ತವೆ. ಅಂದರೆ, ಕಾನೂನಿನ ದೃಷ್ಟಿಯಲ್ಲಿ ಈ ವಿವಾಹಗಳು ಆಗೇ ಇಲ್ಲ ಎಂದರ್ಥ. ಇಂತಹ ಅಮಾನ್ಯ ವಿವಾಹಗಳು ಈ ಕೆಳಕಂಡಂತಿವೆ:
- ಮದುವೆಯ ಸಲುವಾಗಿ ಅಲ್ಪವಯಸ್ಕರನ್ನು ಅಪಹರಿಸುವುದು
- ಅಲ್ಪವಯಸ್ಕರನ್ನು ಪ್ರಲೋಭನೆಗೊಳಿಸಿ ಮದುವೆಗೆ ಕೊಂಡೊಯ್ಯುವುದು
- ಅಲ್ಪವಯಸ್ಕರನ್ನು ಮದುವೆಯ ಸಲುವಾಗಿ ಮಾರಾಟ ಮಾಡುವುದು
- ಮದುವೆಯಾದ ಮೇಲೆ ಅಲ್ಪವಯಸ್ಕರ ಮಾರಾಟ ಅಥವಾ ಕಳ್ಳಸಾಗಾಣಿಕೆ ಮಾಡುವುದು
- ನ್ಯಾಯಾಲಯ ಬಾಲ್ಯ ವಿವಾಹದ ವಿರುಧ್ಧ ಆದೇಶ ಹೊರಡಿಸಿದ್ದರೂ ಸಹ ಇಂತಹ ವಿವಾಹವನ್ನು ನೆರವೇರಿಸುವುದು
ಕ್ರೂರ ನಡವಳಿಕೆ ಹಾಗು ಹಿಂದೂ ವಿವಾಹ ಕಾಯಿದೆ
ಕ್ರೂರ ನಡವಳಿಕೆ ವಿಚ್ಛೇದನಕ್ಕೆ ಆಧಾರ. ಯಾವುದೇ ಒಂದು ನಡವಳಿಕೆ ಅಥವಾ ನಡತೆಯು ನಿಮಗೆ ಕಿರುಕುಳ ನೀಡುವಂತಿದ್ದರೆ, ಅದು ಕಾನೂನಿನಡಿ ಕ್ರೌರ್ಯ ಎಂದು ಕರೆಯಲ್ಪಡುತ್ತದೆ. ಕ್ರೌರ್ಯ ಎರಡು ಪ್ರಕರದ್ದಾಗಿರಬಹುದು:
೧. ಶಾರೀರಿಕ:
ನಿಮ್ಮ ಸಂಗಾತಿಯು ನಿಮಗೆ ಶಾರೀರಿಕವಾಗಿ ನೋವು ಅಥವಾ ಹಾನಿ ಉಂಟು ಮಾಡಿದರೆ ನೀವು ಕೋರ್ಟಿನಿಂದ ವಿಚ್ಛೇದನ ಪಡೆಯಬಹುದು. ಇಂತಹ ನಡವಳಿಕೆಗೆ ಶಾರೀರಿಕ ಕ್ರೌರ್ಯ ಎನ್ನುತ್ತಾರೆ. ಇದನ್ನು ಸುಲಭವಾಗಿ ಕೋರ್ಟಿನ ಮುಂದೆ ಸಾಬೀತುಪಡಿಸಬಹುದು.
೨. ಮಾನಸಿಕ:
ನಿಮ್ಮ ಸಂಗಾತಿಯು, ಅವರ ನಡತೆ ಅಥವಾ ಮಾತುಗಳ ಮೂಲಕ, ನಿಮಗೆ ಮಾನಸಿಕ ಯಾತನೆ ನೀಡುತ್ತಿದ್ದಲ್ಲಿ, ಅವರ ಈ ನಡವಳಿಕೆಗೆ ಮಾನಸಿಕ ಕ್ರೌರ್ಯ ಎನ್ನುತ್ತಾರೆ. ಉದಾಹರಣೆಗೆ, ನಿಮ್ಮ ಸಂಗಾತಿಯು ನಿಮಗೆ ಮಾತುಗಳಿಂದ ನಿಂದಿಸುತ್ತಿದ್ದಲ್ಲಿ, ಅಥವಾ ನಿಮ್ಮ ಸ್ನೇಹಿತರ/ಸಹೋದ್ಯೋಗಿಗಳ ಮುಂದೆ ನಿಮ್ಮ ಗೌರವಕ್ಕೆ ಧಕ್ಕೆ ತರುವಂತೆ ವರ್ತಿಸುತ್ತಿದ್ದಲ್ಲಿ, ಈ ಅವರ ನಡುವಳಿಕೆಗಳಿಗೆ ಮಾನಸಿಕ ಕ್ರೌರ್ಯ ಎನ್ನಬಹುದು.
ಶಾರೀರಿಕ ಕ್ರೌರ್ಯಕ್ಕೆ ಹೋಲಿಸಿದರೆ, ಇದನ್ನು ಕೋರ್ಟಿನಲ್ಲಿ ಸಾಬೀತುಪಡಿಸುವುದು ಕಷ್ಟ. ಕ್ರೌರ್ಯವು ಲಿಂಗ-ತಟಸ್ಥವಾಗಿದೆ. ಅಂದರೆ, ಕ್ರೌರ್ಯದ ಆಧಾರದ ಮೇಲೆ ಪತಿ ಯಾ ಪತ್ನಿ, ಇಬ್ಬರೂ ವಿಚ್ಛೇದನಕ್ಕೆ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಬಹುದು.
ವಿವಾಹ ಪ್ರಮಾಣಪತ್ರಗಳನ್ನು ನೀಡುವ ಅಧಿಕೃತ ವ್ಯಕ್ತಿಯಿಂದ ಮದುವೆ ನೆರವೇರಿಸುವ ಕಾರ್ಯವಿಧಾನ
ಕಾನೂನಿನ ಪ್ರಕಾರ, ವಿವಾಹ ಪ್ರಮಾಣಪತ್ರವನ್ನು ನೀಡುವ ಅಧಿಕಾರವುಳ್ಳ ವ್ಯಕ್ತಿಯು ರೋಮನ್ ಕ್ಯಾಥೋಲಿಕ್ ಧರ್ಮದವರಲ್ಲದ ಭಾರತೀಯ ಕ್ರಿಶ್ಚಿಯನ್ನರ ಮದುವೆಯನ್ನು ಮಾತ್ರ ಪ್ರಮಾಣೀಕರಿಸಬಹುದು. ಈ ನಿಬಂಧನೆಗಳ ಪ್ರಕಾರ, ಯಾವುದೇ ಇಬ್ಬರು ಭಾರತೀಯ ಕ್ರಿಶ್ಚಿಯನ್ನರು, ಪೂರ್ವಾಭಾವಿ ಸೂಚನೆಯನ್ನು ನೀಡದೆ, ಕೆಳಗಿನ ಷರತ್ತುಗಳನ್ನು ಪೂರೈಸಿ ಮದುವೆಯಾಗಬಹುದು:
- ೧. ವರ ೨೧ರ ಮೇಲಿದ್ದು, ವಧು ೧೮ರ ಮೇಲಿರಬೇಕು.
- ೨. ಇವರಿಬ್ಬರಿಗೂ ಜೀವಂತ ಗಂಡ/ಹೆಂಡತಿ ಇರಬಾರದು.
- ೩. ಕಾನೂನು ನಿಗದಿಪಡಿಸಿದ ಪ್ರಮಾಣವಚನವನ್ನು ಇವರಿಬ್ಬರೂ, ವಿವಾಹ ಪ್ರಮಾಣಪತ್ರಗಳನ್ನು ನೀಡುವ ಅಧಿಕೃತ ವ್ಯಕ್ತಿ ಹಾಗು ಇಬ್ಬರು ಸಾಕ್ಷಿದಾರರ ಸಮಕ್ಷಮ ಸ್ವೀಕರಿಸಬೇಕು.
ಒಂದು ಪಕ್ಷದಿಂದ ಅರ್ಜಿಯನ್ನು ಸ್ವೀಕರಿಸಿದ್ದಲ್ಲಿ, ಪರವನಾಗಿ ಪಡೆದ ವ್ಯಕ್ತಿಯು ಮೇಲಿನ ಷರತ್ತುಗಳು ಈಡೇರಿವೆಯೋ ಇಲ್ಲವೋ ಎಂದು ಪರಿಶೀಲಿಸಿ, ಮದುವೆಯಾಗಲು ಪ್ರಮಾಣಪತ್ರವನ್ನು ನೀಡುತ್ತಾರೆ. ಇಂತಹ ಪ್ರಮಾಣಪತ್ರವನ್ನು ಪಡೆಯಲು ನೀಡಬೇಕಾದ ಶುಲ್ಕ ೨೫ ಪೈಸೆಯಾಗಿದೆ. ಈ ಪ್ರಮಾಣಪತ್ರವು ಮದುವೆಯ ನಿರ್ಣಾಯಕ ಪುರಾವೆಯಾಗಿದೆ.