ಕ್ರೂರ ವರ್ತನೆ ಮತ್ತು ಮುಸ್ಲಿಂ ವಿವಾಹ ಕಾನೂನು

ಕ್ರೂರ ವರ್ತನೆಗೆ ಸಂಬಂಧಪಟ್ಟ ನಿಬಂಧನೆಗಳು ಮುಸ್ಲಿಂ ಕಾನೂನಿನಲ್ಲಿವೆ. ನಿಮ್ಮ ಯಾವುದೇ ವರ್ತನೆ ಅಥವಾ ನಡವಳಿಕೆ ನಿಮ್ಮ ಸಂಗಾತಿಯ ಮನದಲ್ಲಿ ಕಿರುಕುಳವನ್ನುಂಟು ಮಾಡಿದರೆ, ಅದನ್ನು ಕ್ರೌರ್ಯ ಎನ್ನುತ್ತಾರೆ. ಮುಸ್ಲಿಂ ಕಾನೂನಿನ ಪ್ರಕಾರ ನಿಮ್ಮ ಗಂಡ ನಿಮ್ಮ ಜೊತೆ ಕೆಳಗಿನಂತೆ ವರ್ತಿಸಿದರೆ ಅದು ಕ್ರೌರ್ಯವಾಗುತ್ತದೆ:

  • ನಿಮ್ಮ ಮೇಲೆ ದಾಳಿ ಮಾಡಿದರೆ, ಅಥವಾ ಶಾರೀಕವಾಗಿ ಹಿಂಸಿಸಿದರೆ
  • ಪರ ಸ್ತ್ರೀಯರ ಜೊತೆ ಲೈಂಗಿಕ ಸಂಭೋಗ ಮಾಡಿದರೆ
  • ನಿಮ್ಮನ್ನು ಅನೈತಿಕ ಜೀವನ ನಡೆಸುವಂತೆ ಒತ್ತಾಯಿಸಿದರೆ
  • ನಿಮ್ಮ ಆಸ್ತಿಯನ್ನು ವಿಲೇವಾರಿ ಮಾಡಿ, ಅದರ ಮೇಲೆ ನಿಮ್ಮ ಕಾನೂನುಬದ್ಧ ಹಕ್ಕುಗಳನ್ನು ಪ್ರಯೋಗಿಸಲಾರದಂತೆ ಮಾಡಿದರೆ
  • ನಿಮ್ಮ ಧರ್ಮವನ್ನು ಆಚರಿಸಲಾರದಂತೆ ಮಾಡಿದರೆ
  • ನಿಮ್ಮ ಗಂಡನಿಗೆ ಒಬ್ಬರಿಗಿಂತ ಹೆಚ್ಚು ಹೆಂಡತಿಯರು ಇದ್ದರೆ, ನಿಮ್ಮನ್ನು ಅವರೆಲ್ಲರ ಸರಿಸಮನಾಗಿ ಕಾಣದಿದ್ದರೆ.

ಮುಸ್ಲಿಂ ಮದುವೆಗಳಲ್ಲಿ ವಿಚ್ಛೇದನದ ನಂತರ ಇದ್ದತ್

“ಇದ್ದತ್” ಮುಸ್ಲಿಂ ಮದುವೆಯ ವಿಚ್ಛೇದನದ ನಂತರದ ಸಮಯಾವಧಿಯಾಗಿದ್ದು, ಈ ಅವಧಿಯಲ್ಲಿ ಹೆಂಡತಿಯು ಪುನರ್ವಿವಾಹವಾಗುವಂತಿಲ್ಲ, ಹಾಗು ಯಾರ ಜೊತೆಗೂ ಲೈಂಗಿಕ ಸಂಭೋಗ ಮಾಡುವಂತಿಲ್ಲ. ಮುಸ್ಲಿಂ ಕಾನೂನಿನಡಿ, ಕೇವಲ ಸ್ತ್ರೀಯರು ಇದ್ದತ್ ಸಮಯಾವಧಿಯ ಪಾಲನೆ ಮಾಡಬೇಕಾಗಿದೆ.

ನೀವು ನಿಮ್ಮ ಗಂಡನಿಂದ ವಿಚ್ಛೇದನ ಪಡೆದಿದ್ದಲ್ಲಿ, ನಿಮ್ಮ ಇದ್ದತ್ ಸಮಯಾವಧಿ ಕೆಳಗಿನಂತಿರುತ್ತದೆ:

  • ನಿಮ್ಮ ಗಂಡ “ತಲಾಕ್” ಎಂಬ ಹೇಳಿಕೆಯನ್ನು ಹೇಳಿದ ದಿನಾಂಕದಿಂದ ೩ ತಿಂಗಳ ವರೆಗೆ
  • ನೀವು ಇದ್ದತ್ ಸಮಯಾವಧಿಯಲ್ಲಿ ಗರ್ಭಿಣಿಯಾಗಿದ್ದಲ್ಲಿ, ನಿಮ್ಮ ಹೆರಿಗೆಯಾಗುವ ತನಕ

ನಿಮ್ಮ ಗಂಡ ಇದ್ದತ್ ಸಮಯಾವಧಿಯಲ್ಲಿ ಅವರ ಮನ ಬದಲಾಯಿಸಿ ನಿಮ್ಮನ್ನು ಅವರ ಹೆಂಡತಿಯಾಗಿ ಪುನಃ ಒಪ್ಪಿಗೆಯನ್ನು ಕೊಟ್ಟರೆ, ನೀವಿಬ್ಬರೂ ಮದುವೆಯಾದ ದಂಪತಿಯಂತೆ ಜೊತೆಗೆ ವಾಸಮಾಡಬಹುದು.

ಮುಸ್ಲಿಂ ಮದುವೆಯಲ್ಲಿ ಮೆಹೆರ್/ಡೊವರ್

ಮುಸ್ಲಿಂ ಮದುವೆಯ ಸಮಾರಂಭದಲ್ಲಿ, ಒಂದು ನಿರ್ದಿಷ್ಟ ಮೊತ್ತ ಅಥವಾ ಆಸ್ತಿಯನ್ನು ನಿಮ್ಮ ಗಂಡ ನಿಮಗೆ ಕೊಡಬೇಕೆಂದು ನಿಶ್ಚಯಿಸಲಾಗುತ್ತದೆ. ಈ ಹಣದ ಮೊತ್ತ ಅಥವಾ ಆಸ್ತಿಯನ್ನು ಮೆಹೆರ್ ಅಥವಾ ಡೊವರ್ ಎಂದು ಕರೆಯುತ್ತಾರೆ. ಸಾಂಪ್ರದಾಯಿಕವಾಗಿ, ಮೆಹೆರ್ ಹೆಂಡತಿಗೆ ಅತ್ಯಾವಶ್ಯಕವಿರುವ ಸಂದರ್ಭದಲ್ಲಿ ಒಪಯೋಗಿಸಲು ಕಾಯ್ದಿರಿಸಿದ ಹಣದ ಮೊತ್ತ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ವಿಚ್ಛೇದನದ ಸಮಯದಲ್ಲಿ, ಅಥವಾ ಗಂಡನ ಮರಣದ ಸಮಯದಲ್ಲಿ.

ಮದುವೆಯ ಸಂದರ್ಭದಲ್ಲಿ ಒಂದು ನಿರ್ದಿಷ್ಟವಾದ ಮೊತ್ತವನ್ನು ನಿಗದಿಪಡಿಸದಿದ್ದರೂ, ನಿಮಗೆ ಮೆಹೆರ್ ಪಡೆಯುವ ಹಕ್ಕಿದೆ. ಈ ಹಣದ ಮೊತ್ತವನ್ನು, ಮದುವೆಯ ಸಮಯದಲ್ಲಿ ಭಾರಿ ಮೊತ್ತವಾಗಿ ನಿಮಗೆ ಕೊಡಬಹುದು, ಅಥವಾ ಕಂತುಗಳಲ್ಲಿ ಕೊಡಬಹುದು. ಉದಾಹರಣೆಗೆ, ಅರ್ಧ ಮದುವೆಯ ಸಮಯದಲ್ಲಿ, ಮತ್ತು ಇನ್ನರ್ಧ ವಿಚ್ಛೇದನ ಅಥವಾ ಗಂಡನ ಮರಣದ ಸಮಯದಲ್ಲಿ.

ನಿಮ್ಮ ವಿಚ್ಛೇದನ ಪೂರ್ಣಗೊಂಡು, ಇದ್ದತ್ ಸಮಯಾವಧಿ ಪೂರ್ಣಗೊಂಡು, ನಿಮಗೆ ನಿಮ್ಮ ಗಂಡನಿಂದ ಇನ್ನೂ ಮೆಹೆರ್ ಸಿಕ್ಕಿಲ್ಲವೆಂದರೆ, ಅವರು ಆಗ ನಿಮಗೆ ಅದನ್ನು ಕೊಡಲೇಬೇಕಾಗುತ್ತದೆ.

ಮುಸ್ಲಿಂ ವಿವಾಹ ಕಾನೂನಿನಡಿ ಮಹಿಳೆಗೆ ಜೀವನಾಂಶ

ಮುಸ್ಲಿಂ ವಿವಾಹ ಕಾನೂನಿನ ಪ್ರಕಾರ, ವಿಚ್ಛೇದನದ ನಂತರ ಹೆಂಡತಿ ಹಾಗು ಮಕ್ಕಳಿಗೆ ಗಂಡ ಜೀವನಾಂಶ ಕೊಡಬೇಕಾಗುತ್ತದೆ. ಹಾಗು, ಮುಸ್ಲಿಂ ಕಾನೂನಿನ ಪ್ರಕಾರ, ವಿಚ್ಛೇದನದ ನಂತರ ಗಂಡನಷ್ಟೇ ಹೆಂಡತಿಗೆ ಜೀವನಾಂಶ ಕೊಡಬೇಕಾಗುತ್ತದೆ, ಹೆಂಡತಿಯು ಗಂಡನಿಗೆ ಕೊಡಬೇಕಾಗಿಲ್ಲ. ನೀವು ನಿಮ್ಮ ಗಂಡನಿಂದ ಜೀವನಾಂಶ ಪಡೆಯಲು ಕೋರ್ಟಿಗೆ ಹೋಗಬಹುದು. ನಿಮ್ಮ ಗಂಡನ ಆರ್ಥಿಕ ಸಾಮರ್ಥ್ಯದ ಮೇಲೆ ನ್ಯಾಯಾಲಯವು ಜೀವನಾಂಶದ ಮೊತ್ತವನ್ನು ನಿರ್ಧರಿಸುತ್ತದೆ.

ಹೆಂಡತಿಗೆ ಜೀವನಾಂಶ:

ಮುಸ್ಲಿಂ ಕಾನೂನಿನಡಿ, ಕೆಳಗಿನ ಸಮಯಾವಧಿಗಳವರೆಗೂ ನಿಮಗೆ ನಿಮ್ಮ ಗಂಡನಿಂದ ಜೀವನಾಂಶ ಪಡೆಯುವ ಹಕ್ಕಿದೆ:

  • ವಿಚ್ಛೇದನದ ನಂತರ ನಿಮ್ಮ ಇದ್ದತ್ ಕಾಲ ಮುಗಿಯುವ ತನಕ
  • ನಿಮ್ಮ ಇದ್ದತ್ ಕಾಲ ಮುಗಿದು ನೀವು ಪುನರ್ವಿವಾಹವಾಗುವ ತನಕ

ನಿಮಗೆ ಸಿಗುತ್ತಿರುವ ಜೀವನಾಂಶದ ಮೊತ್ತ ನಿಮಗೆ ಕಡಿಮೆ ಬೀಳುತ್ತಿದ್ದರೆ ನೀವು ಅದನ್ನು ಸಂದರ್ಭಾನುಸಾರ ಹೆಚ್ಚಿಸಲು ಮನವಿ ಮಾಡಬಹುದು.

ನಿಮ್ಮ ಗಂಡ ಸತ್ತು ಹೋಗಿದ್ದರೆ, ನಿಮಗೆ ಜೀವನಾಂಶದ ಮೊತ್ತ ಸಿಗುವುದಿಲ್ಲ. ಆದಾಗ್ಯೂ, ಕೆಳಗಿನವರಿಂದ ನಿಮಗೆ ಜೀವನಾಂಶ ಪಡೆಯುವ ಆಯ್ಕೆ ಇದೆ:

  • ನಿಮ್ಮ ಸಂಪತ್ತು ಮತ್ತು ಆಸ್ತಿಯ ಉತ್ತರಾಧಿಕಾರಿಗಳಾದ ನಿಮ್ಮ ಸಂಬಂಧಿಕರಿಂದ
  • ನಿಮ್ಮ ಮಕ್ಕಳಿಂದ
  • ನಿಮ್ಮ ತಂದೆ-ತಾಯಂದಿರಿಂದ
  • ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ

ಜೀವನಾಂಶದ ಜೊತೆಗೆ, ನಿಮ್ಮ ನಿಕಾಹ್-ನಾಮಾದಲ್ಲಿ ನಮೂದಿಸಲಾದ ಮೆಹೆರ್ ಮೊತ್ತವನ್ನೂ ಕೂಡ ನೀವು ಪಡೆಯಲು ಅರ್ಹರಿದ್ದೀರಿ. ಈ ಮೆಹೆರ್ ಮೊತ್ತವನ್ನು ವಿಚ್ಛೇದನದ ಸಂದರ್ಭದಲ್ಲಿ, ಅಥವಾ ನಿಮ್ಮ ಗಂಡನ ನಿಧನದ ಸಂದರ್ಭದಲ್ಲಿ ನೀವು ಪಡೆಯಬಹುದು.

ಮುಸ್ಲಿಂ ವಿವಾಹ ಕಾನೂನಿನಡಿ ನಿಮ್ಮ ವಿಚ್ಛೇದಿತ ಹೆಂಡತಿಯನ್ನು ಪುನರ್ವಿವಾಹವಾಗುವುದು

ನಿಮ್ಮ ಗಂಡ ವಿಚ್ಛೇದನವಾದ ಮೇಲೆ ನಿಮ್ಮನ್ನು ಪುನರ್ವಿವಾಹವಾಗಲು ಬಯಸಿದರೆ, ನೀವು ಆಗ ಕೂಡ ಇದ್ದತ್ ಸಮಯಾವಧಿಯನ್ನು ಆಚರಿಸಬೇಕಾಗುತ್ತದೆ. ಆದರೆ ಇಂತಹ ಇದ್ದತ್ ನಿಮ್ಮ ಗಂಡ ಸತ್ತುಹೋದಾಗ ಆಚರಿಸುವ ಇದ್ದತ್ ಕಿಂತ ಬೇರೆಯಾಗಿದೆ. ನಿಮ್ಮ ಗಂಡ ನಿಮ್ಮನ್ನು ವಿಚ್ಛೇದಿಸಿದ ನಂತರ ನಿಮ್ಮನ್ನು ಪುನರ್ವಿವಾಹವಾಗಬೇಕೆಂದು ಇಚ್ಛಿಸಿದರೆ, ಕೆಳಗಿನ ಕಾರ್ಯವಿಧಾನಗಳು ಆಗುವ ತನಕ ಅವರು ಕಾಯಬೇಕಾಗುತ್ತದೆ:

  • ನೀವು ಇದ್ದತ್ ಸಮಯಾವಧಿಯನ್ನು ಆಚರಿಸಬೇಕು
  • ಇದ್ದತ್ ಸಮಯಾವಧಿಯ ನಂತರ ನೀವು ಇನ್ನೋರ್ವ ಪುರುಷನನ್ನು ಮದುವೆಯಾಗಬೇಕು
  • ನೀವು ಮತ್ತು ಈ ಇನ್ನೋರ್ವ ಪುರುಷನು ಜೊತೆಗೆ ವಾಸ ಮಾಡಿ ಮದುವೆಯನ್ನು ಸಾಂಗಗೊಳಿಸಬೇಕು. ಕಾನೂನಿನ ಪ್ರಕಾರ ನೀವು ನಿಮ್ಮ ಗಂಡನ ಜೊತೆ ಲೈಂಗಿಕ ಸಂಭೋಗ ಮಾಡಿದ ನಂತರ ನಿಮ್ಮ ಮಾಡುವೆ ಸಾಂಗಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.
  •  ಈ ಪುರುಷನು ನಿಮಗೆ ವಿಚ್ಛೇದನ ನೀಡಬೇಕು.
  • ಈ ವಿಚ್ಛೇದನದ ನಂತರ ನೀವು ಮತ್ತೆ ಇದ್ದತ್ ಸಮಯಾವಧಿಯ ಪಾಲನೆ ಮಾಡಬೇಕು.
  • ಈ ಸಮಯಾವಧಿಯ ನಂತರ ನೀವು ಪುನಃ ನಿಮ್ಮ ಮಾಜಿ ಗಂಡನನ್ನು ಮದುವೆಯಾಗಬಹುದು.

ಮುಸ್ಲಿಂ ವಿವಾಹ ಕಾನೂನಿನಡಿ ಪುನರ್ವಿವಾಹ

ಗಂಡಸರಿಗೆ:

  1. ನಿಮ್ಮ ಹೆಂಡತಿ ಸತ್ತಿದ್ದಲ್ಲಿ, ಅಥವಾ, ನೀವು ಅವರನ್ನು ಕಾನೂನುಬದ್ಧವಾಗಿ ವಿಚ್ಛೇದಿಸಿದ್ದಲ್ಲಿ, ನೀವು ತಕ್ಷಣ ಇನ್ನೋರ್ವ ಸ್ತ್ರೀಯನ್ನು ಮದುವೆಯಾಗಬಹುದು.
  2. ನೀವು ನಿಮ್ಮ ಹೆಂಡತಿಯನ್ನು ವಿಚ್ಛೇದನದ ನಂತರ ಪುನರ್ವಿವಾಹವಾಗಬೇಕೆಂದಲ್ಲಿ ಮೇಲೆ ಕಂಡ ಕಾರ್ಯವಿಧಾನಗಳನ್ನು ಪಾಲಿಸಬೇಕು.

ಹೆಂಗಸರಿಗೆ:

ನಿಮ್ಮ ಗಂಡ ಸತ್ತಾಗ, ಅಥವಾ ನೀವು ಕಾನೂನುಬದ್ಧವಾಗಿ ಅವರಿಂದ ವಿಚ್ಛೇದನ ಪಡೆದಾಗ, ನಿಮಗೆ ಬೇರೆ ಪುರುಷನ ಜೊತೆ ಮದುವೆಯಾಗಬೇಕೆಂದಲ್ಲಿ ಈ ಕೆಳಗಿನ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ:

ಇದ್ದತ್:

  • ಹೆಂಡತಿಯು ತಕ್ಷಣ ಮದುವೆಯಾಗದೆ, “ಇದ್ದತ್” ಎಂಬ ಸಮಯಾವಧಿ ಮುಗಿಯುವ ತನಕ ಕಾಯಬೇಕಾಗುತ್ತದೆ.
  • ಇದ್ದತ್ ಸಮಯಾವಧಿಯಲ್ಲಿ ಮುಸ್ಲಿಂ ಮಹಿಳೆಯು ಪುನರ್ವಿವಾಹವಾಗುವಂತಿಲ್ಲ, ಮತ್ತು ಬೇರೆ ಪುರುಷನ ಜೊತೆ ಲೈಂಗಿಕ ಸಂಭೋಗ ಮಾಡುವಂತಿಲ್ಲ.
  • ನಿಮ್ಮ ಗಂಡ ಸತ್ತರೆ, ಅವರು ಸತ್ತ ದಿನಾಂಕದಿಂದ ೪ ತಿಂಗಳು ಮತ್ತು ೧೦ ದಿನಗಳ ವರೆಗೆ ನೀವು ಇದ್ದತ್ ಅವಧಿಯ ಪಾಲನೆ ಮಾಡಬೇಕಾಗುತ್ತದೆ.
  •  ನೀವು ನಿಮ್ಮ ಗಂಡನನ್ನು ವಿಚ್ಛೇದಿಸಿದರೆ, ಅವರು “ತಲಾಕ್” ಎಂಬ ಹೇಳಿಕೆಯನ್ನು ಹೇಳಿದ ದಿನದಿಂದ ೩ ತಿಂಗಳುಗಳವರೆಗೆ ಇದ್ದತ್ ಅವಧಿಯನ್ನು ಪಾಲಿಸಬೇಕಾಗುತ್ತದೆ.
  • ನೀವು ಇದ್ದತ್ ಅವಧಿಯಲ್ಲಿ ಗರ್ಭಿಣಿಯಾಗಿದ್ದರೆ , ನಿಮ್ಮ ಹೆರಿಗೆಯ ದಿನದ ತನಕ ಇದ್ದತ್ ನ ಪಾಲನೆ ಮಾಡಬೇಕಾಗುತ್ತದೆ.