ಮುಸ್ಲಿಂ ವಿವಾಹದಲ್ಲಿ ಪರಸ್ಪರ ಒಪ್ಪಿಗೆಯ ವಿಚ್ಛೇದನ

ಮುಬಾರಾತ್:

ನೀವು ಮತ್ತು ನಿಮ್ಮ ಸಂಗಾತಿ, ಇಬ್ಬರಿಗೂ ನಿಮ್ಮ ಮದುವೆ ಮುರಿಯುವುದಿದ್ದಲ್ಲಿ, ವಿವಾಹದ ಎಲ್ಲ ಜವಾಬ್ದಾರಿಗಳನ್ನು ಅಂತ್ಯಗೊಳಿಸಬಹುದು. ಇಂತಹ ವಿಚ್ಛೇದನದಲ್ಲಿ ಇಬ್ಬರ ಒಪ್ಪಿಗೆಯೂ ಇರುವುದು ಅತ್ಯಗತ್ಯವಾಗುತ್ತದೆ. ಇಂತಹ ವಿಚ್ಛೇದನಕ್ಕೆ ಮುಬಾರಾತ್ ಎನ್ನುತ್ತಾರೆ. “ಮುಬಾರಾತ್” ಎಂಬ ಪದದ ಅರ್ಥ “ಪರಸ್ಪರ ವಿಮುಕ್ತಗೊಳಿಸುವುದು”. ಮುಬಾರಾತ್ ನ ಮುಖಾಂತರ ಪರಸ್ಪರ ಒಪ್ಪಿಗೆಯ ವಿಚ್ಛೇದನ ಕೆಳಗಿನಂತೆ ಜರುಗುವುದು:

  • ಗಂಡ ಹಾಗು ಹೆಂಡತಿ ಇಬ್ಬರೂ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದಾಗ
  • ನೀವು ಮತ್ತು ನಿಮ್ಮ ಸಂಗಾತಿ “ತಲಾಕ್” ಎಂದು ಒಮ್ಮೆ ಹೇಳಿದಾಗ

ಇಂತಹ ವಿಚ್ಛೇದನ ಹಿಂತೆಗೆದುಕೊಳ್ಳುವಂತಿಲ್ಲ.ಏಕೆಂದರೆ ಪರಸ್ಪರ ಒಪ್ಪಿಗೆಯ ನಂತರವೇ ವಿಚ್ಛೇದನದ ನಿರ್ಣಯಕ್ಕೆ ಬಂದಿರಲಾಗುತ್ತದೆ.

ನೀವು ಮತ್ತು ನಿಮ್ಮ ಸಂಗಾತಿ ನಿಮ್ಮ ಮದುವೆಯನ್ನು ಮುರಿಯಲು ಒಪ್ಪಿದ್ದಲ್ಲಿ, ಕೆಳಗಿನ ಕೆಲವು ಜವಾಬ್ದಾರಿಗಳನ್ನು ನೆರವೇರಿಸಬೇಕಾಗುತ್ತದೆ:

  • ವಿಚ್ಛೇದನದ ನಂತರ ಹೆಂಡತಿಯು ಇದ್ದತ್ ಅವಧಿಯನ್ನು ಆಚರಿಸಬೇಕು.
  • ಈ ಇದ್ದತ್ ಅವಧಿಯಲ್ಲಿ ಹೆಂಡತಿ ಹಾಗು ಮಕ್ಕಳಿಗೆ ಜೀವನಾಂಶದ ಹಕ್ಕಿದೆ.

ನೀವು ಈ ರೀತಿಯಲ್ಲಿ ನಿಮ್ಮ ಹೆಂಡತಿಯನ್ನು ವಿಚ್ಛೇದಿಸಿದರೆ, ಕೆಲವು ಷರತ್ತುಗಳನ್ನು ಅನುಸರಿಸದೆ ನೀವು ಅವರನ್ನು ಪುನರ್ವಿವಾಹವಾಗಲು ಸಾಧ್ಯವಿಲ್ಲ.

 

 

ಗಂಡ ಕಾಣೆಯಾದ ಸಂದರ್ಭದಲ್ಲಿ ಮುಸ್ಲಿಂ ವಿಚ್ಛೇದನ

ಗಂಡ ಕಾಣೆಯಾಗಿದ್ದರೆ, ಮುಸ್ಲಿಂ ಕಾನೂನಿನಡಿ ವಿಚ್ಛೇದನಕ್ಕೆ ಅನುಕೂಲವಿದೆ.

ನಾಲ್ಕು ವರ್ಷಗಳ ವರೆಗೆ ನಿಮಗೆ ನಿಮ್ಮ ಗಂಡನ ಪತ್ತೆ ಇಲ್ಲದಿದ್ದರೆ ನೀವು ವಿಚ್ಛೇದನಕ್ಕೆ ಮನವಿ ಸಲ್ಲಿಸಬಹುದು.

ಕ್ರೂರ ನಡವಳಿಕೆ ಹಾಗು ಹಿಂದೂ ವಿವಾಹ ಕಾಯಿದೆ

ಕ್ರೂರ ನಡವಳಿಕೆ ವಿಚ್ಛೇದನಕ್ಕೆ ಆಧಾರ. ಯಾವುದೇ ಒಂದು ನಡವಳಿಕೆ ಅಥವಾ ನಡತೆಯು ನಿಮಗೆ ಕಿರುಕುಳ ನೀಡುವಂತಿದ್ದರೆ, ಅದು ಕಾನೂನಿನಡಿ ಕ್ರೌರ್ಯ ಎಂದು ಕರೆಯಲ್ಪಡುತ್ತದೆ. ಕ್ರೌರ್ಯ ಎರಡು ಪ್ರಕರದ್ದಾಗಿರಬಹುದು:

೧. ಶಾರೀರಿಕ:

ನಿಮ್ಮ ಸಂಗಾತಿಯು ನಿಮಗೆ ಶಾರೀರಿಕವಾಗಿ ನೋವು ಅಥವಾ ಹಾನಿ ಉಂಟು ಮಾಡಿದರೆ ನೀವು ಕೋರ್ಟಿನಿಂದ ವಿಚ್ಛೇದನ ಪಡೆಯಬಹುದು. ಇಂತಹ ನಡವಳಿಕೆಗೆ ಶಾರೀರಿಕ ಕ್ರೌರ್ಯ ಎನ್ನುತ್ತಾರೆ. ಇದನ್ನು ಸುಲಭವಾಗಿ ಕೋರ್ಟಿನ ಮುಂದೆ ಸಾಬೀತುಪಡಿಸಬಹುದು.

೨. ಮಾನಸಿಕ:

ನಿಮ್ಮ ಸಂಗಾತಿಯು, ಅವರ ನಡತೆ ಅಥವಾ ಮಾತುಗಳ ಮೂಲಕ, ನಿಮಗೆ ಮಾನಸಿಕ ಯಾತನೆ ನೀಡುತ್ತಿದ್ದಲ್ಲಿ, ಅವರ ಈ ನಡವಳಿಕೆಗೆ ಮಾನಸಿಕ ಕ್ರೌರ್ಯ ಎನ್ನುತ್ತಾರೆ. ಉದಾಹರಣೆಗೆ, ನಿಮ್ಮ ಸಂಗಾತಿಯು ನಿಮಗೆ ಮಾತುಗಳಿಂದ ನಿಂದಿಸುತ್ತಿದ್ದಲ್ಲಿ, ಅಥವಾ ನಿಮ್ಮ ಸ್ನೇಹಿತರ/ಸಹೋದ್ಯೋಗಿಗಳ ಮುಂದೆ ನಿಮ್ಮ ಗೌರವಕ್ಕೆ ಧಕ್ಕೆ ತರುವಂತೆ ವರ್ತಿಸುತ್ತಿದ್ದಲ್ಲಿ, ಈ ಅವರ ನಡುವಳಿಕೆಗಳಿಗೆ ಮಾನಸಿಕ ಕ್ರೌರ್ಯ ಎನ್ನಬಹುದು.

ಶಾರೀರಿಕ ಕ್ರೌರ್ಯಕ್ಕೆ ಹೋಲಿಸಿದರೆ, ಇದನ್ನು ಕೋರ್ಟಿನಲ್ಲಿ ಸಾಬೀತುಪಡಿಸುವುದು ಕಷ್ಟ. ಕ್ರೌರ್ಯವು ಲಿಂಗ-ತಟಸ್ಥವಾಗಿದೆ. ಅಂದರೆ, ಕ್ರೌರ್ಯದ ಆಧಾರದ ಮೇಲೆ ಪತಿ ಯಾ ಪತ್ನಿ, ಇಬ್ಬರೂ ವಿಚ್ಛೇದನಕ್ಕೆ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಬಹುದು.

ಗಂಡ ಜೀವನಾಂಶ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ವಿಚ್ಛೇದನ

ಗಂಡ ಜೀವನಾಂಶ ಕೊಟ್ಟಿಲ್ಲ ಎಂದಲ್ಲಿ ಮುಸ್ಲಿಂ ಕಾನೂನಿನಡಿ ವಿಚ್ಛೇದನದ ಅವಕಾಶವಿದೆ.

ನಿಮ್ಮ ಗಂಡ ಎರಡು ವರ್ಷಗಳ ಕಾಲ ನಿಮಗೆ ಜೀವನಾಂಶ ಕೊಟ್ಟಿಲ್ಲವೆಂದಲ್ಲಿ ನೀವು ಕೋರ್ಟಿಗೆ ವಿಚ್ಛೇದನದ ಅರ್ಜಿ ಸಲ್ಲಿಸಬಹುದು.

ಸಂಗಾತಿಯಿಂದ ನಂಬಿಕೆ ದ್ರೋಹ ಹಾಗು ಹಿಂದೂ ವಿವಾಹ ಕಾಯಿದೆ

ನಿಮ್ಮ ಸಂಗಾತಿಯು ನಿಮಗೆ ನಂಬಿಕೆ ದ್ರೋಹ ಬಗೆದಲ್ಲಿ ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ವಿವಾಹದ ಸನ್ನಿವೇಶದಲ್ಲಿ ನಂಬಿಕೆ ದ್ರೋಹವೆಂದರೆ ನಿಮ್ಮ ಸಂಗಾತಿಯು ಸ್ವಯಂ ಪ್ರೇರಿತವಾಗಿ ಬೇರೆಯವರ ಜೊತೆ ಅನೈತಿಕ ಲೈಂಗಿಕ ಸಂಬಂಧ ಬೆಳೆಸುವುದು ಎಂದರ್ಥ.

ಇದನ್ನು ವ್ಯಭಿಚಾರ ಎಂದೂ ಕರೆಯಬಹುದು. ಇದರಡಿ ನಿಮಗೆ ವಿಚ್ಛೇದನ ಬೇಕಾದಲ್ಲಿ, ನಿಮ್ಮ ಸಂಗಾತಿ ಹಾಗು ಬೇರೆಯವರ ನಡುವೆ ಸ್ವಯಂ ಪ್ರೇರಿತವಾಗಿ, ಲೈಂಗಿಕ ಸಂಭೋಗ ನಡೆದಿದೆ ಎಂದು ಕೋರ್ಟಿನೆದುರು ನೀವು ಸಾಬೀತುಪಡಿಸಬೇಕಾಗುತ್ತದೆ. ಕೆಲವೇ ದಿನಗಳ ಹಿಂದಿನವರೆಗೆ ವಿವಾಹೇತರ ಅನೈತಿಕ ಲೈಂಗಿಕ ಸಂಬಂಧ ಬೆಳೆಸುವುದು ಅಪರಾಧವಾಗಿತ್ತು.

ಆದರೆ ಈಗ, ಅದು ಕಾನೂನಿನಡಿಯಲ್ಲಿ ಅಪರಾಧವಲ್ಲ. ಇದಾಗ್ಯೂ ನೀವು ಈ ಕಾರಣಕ್ಕಾಗಿ ವಿಚ್ಛೇದನವನ್ನು ಪಡೆಯಬಹುದಾಗಿದೆ.

ಗಂಡನ ಸೆರೆವಾಸದ ಕಾರಣ ಮುಸ್ಲಿಂ ವಿಚ್ಛೇದನ

ಗಂಡನ ಸೆರೆವಾಸದ ಸಂದರ್ಭದಲ್ಲಿ, ಮುಸ್ಲಿಂ ಕಾನೂನಿನಡಿ ವಿಚ್ಛೇದನದ ಅವಕಾಶವಿದೆ. ನಿಮ್ಮ ಗಂಡ ಅಪರಾಧಿ ಎಂದು ಸಾಬೀತುಗೊಂಡು ಕನಿಷ್ಠ ೭ ವರ್ಷಗಳ ಕಾಲ ಜೈಲಿನಲ್ಲಿದ್ದರೆ, ನೀವು ವಿಚ್ಛೇದನಾ ಅರ್ಜಿಯನ್ನು ಕೋರ್ಟಿಗೆ ಸಲ್ಲಿಸಬಹುದು.

ನಿಮ್ಮ ಗಂಡನ ಸೆರೆವಾಸದ ದಂಡನೆ ಅಂತಿಮವಿದ್ದಲ್ಲಿ ಮಾತ್ರ ಇಂತಹ ವಿಚ್ಛೇದನಾ ತೀರ್ಪು ಕೊಡಲಾಗುವುದು.

ಸಂಗಾತಿಯು ನಿಮ್ಮನ್ನು ಬಿಟ್ಟು ಹೋಗಿದ್ದಲ್ಲಿ ಹಿಂದೂ ವಿಚ್ಛೇದನ

ನಿಮ್ಮ ಸಂಗಾತಿಯು ನಿಮ್ಮನ್ನು ಬಿಟ್ಟು ಹೋಗಿದ್ದಲ್ಲಿ ನೀವು ವಿಚ್ಛೇದನ ಪಡೆಯಬಹುದು. ಇದನ್ನುವೈವಾಹಿಕ ಜೀವನವನ್ನು ತೊರೆದು ಹೋಗುವುದು/ಪರಿತ್ಯಾಗ ಮಾಡುವುದು ಎಂದೂ ಎನ್ನಬಹುದು.

ಬಿಟ್ಟು ಹೋಗುವ ತತ್ಕ್ಷಣದ ಪರಿಣಾಮ:

ನಿಮ್ಮ ಸಂಗಾತಿಯು, ನಿಮ್ಮ ಒಪ್ಪಿಗೆ ಇಲ್ಲದೆ, ಎಂದೂ ಹಿಂದಿರುಗಿ ಬರದ ಉದ್ದೇಶದಿಂದ ನಿಮ್ಮನ್ನು ಬಿಟ್ಟು ಹೋದರೆ ಅದನ್ನು ಕಾನೂನಿನಡಿಯಲ್ಲಿ ವೈವಾಹಿಕ ಜೀವನವನ್ನು ಪರಿತ್ಯಾಗ ಮಾಡುವುದು ಎಂದು ಎನ್ನುತ್ತಾರೆ. ಇದನ್ನು ಆಯಾ ಪ್ರಕರಣಗಳ ಸಂದರ್ಭಾನುಸಾರ ನಿರ್ಧರಿಸಲಾಗುತ್ತದೆ. ನಿಮ್ಮ ಸಂಗಾತಿಯು, ತಾತ್ಕಾಲಿಕವಾಗಿ, ಅಥವಾ, ಕೋಪದ ಸನ್ನಿವೇಶದಲ್ಲಿ, ನಿಮ್ಮನ್ನು ಶಾಶ್ವತವಾಗಿ ಅಗಲುವ ಉದ್ದೇಶವಿಲ್ಲದೆ ನಿಮ್ಮಿಂದ ದೂರ ಹೋದರೆ, ಅದು ಕಾನೂನಿನಡಿ ವಿಚ್ಛೇದನಕ್ಕೆ ಆಧಾರವಾಗದು.

ಉದಾಹರಣೆಗೆ, ನಿಮ್ಮ ಗಂಡ ನಿಮ್ಮ ಜೊತೆ ಜಗಳವಾಡಿ ಕೋಪದಿಂದ ಮನೆ ಬಿಟ್ಟು ಹೊರಗೆ ಹೋದರೆ, ಅದು ಕಾನೂನಿನಡಿ ವಿವಾಹವನ್ನು ತೊರೆದು ಹೋಗುವುದು ಎಂದು ಎನಿಸಿಕೊಳ್ಳುವುದಿಲ್ಲ.

ನಿಮ್ಮನ್ನು ನಿಮ್ಮ ಸಂಗಾತಿ ತೊರೆದು ಹೋಗುವ ಹಾಗೆ ನೀವೇ ಮಾಡುವುದು:

ಆದಾಗ್ಯೂ, ಯಾವ ಸಂವೇದನಾಶೀಲ ವ್ಯಕ್ತಿಯೂ ಸಹ ನಿಮ್ಮ ಜೊತೆ ಇರಲಾರ ಎಂಬ ಪರಿಸ್ಥಿತಿಯನ್ನು ನೀವೇ ತಂದೊಡ್ಡಿಲ್ಲ ಎಂದು ಪರಿಶೀಲಿಸುವುದು ಇಂತಹ ಪ್ರಕರಣಗಳಲ್ಲಿ ಬಹಳ ಮುಖ್ಯವಾಗುತ್ತದೆ. ನೀವೇ ಇಂತಹ ಪರಿಸ್ಥಿತಿಯನ್ನು ಹುಟ್ಟಿಸಿದ್ದಲ್ಲಿ, ಕೋರ್ಟು ನಿಮ್ಮ ಸಂಗಾತಿಯು ವಿವಾಹವನ್ನು ತ್ಯಜಿಸಿ ಹೋದರು ಎಂಬ ಆಧಾರದ ಮೇಲೆ ನಿಮ್ಮ ವಿಚ್ಛೇದನದ ಅರ್ಜಿ ಸ್ವೀಕರಿಸುವುದಿಲ್ಲ.

ವಿವಾಹವನ್ನು ಪರಿತ್ಯಜಿಸುವ ಬೇರೆ ರೀತಿಗಳು:

ನಿಮ್ಮನ್ನು ಒಮ್ಮೆಲೇ ಬಿಟ್ಟುಹೋಗುವ ಕ್ರಿಯೆಯಲ್ಲದೆ, ಕಾಲಾಂತರದಲ್ಲಿ ನಿಮ್ಮ ಸಂಗಾತಿಯ ಹಲವಾರು ನಡವಳಿಕೆಗಳ ಪುನರಾವರ್ತನೆಯೂ ಸಹ ವೈವಾಹಿಕ ಪರಿತ್ಯಾಗ ಎಂದು ಕರೆಯಲ್ಪಡಬಹುದು.

ನಿಮ್ಮ ಸಂಗಾತಿಯು ಕಾಲಾಂತರದಲ್ಲಿ ನಿಮ್ಮ ಹಾಗು ನಿಮ್ಮ ನೆಂಟರ/ಸ್ನೇಹಿತರ ಸಂಪರ್ಕ ನಿಲ್ಲಿಸಿದ್ದಲ್ಲಿ, ಅಥವಾ, ನಿಮ್ಮ ಜೊತೆ ವಾಸಿಸಿದ್ದರೂ ಸಹ, ನಿಮ್ಮ / ನಿಮ್ಮ ಕುಟುಂಬದವರೊಂದಿಗೆ ಮಾತು ಬಿಟ್ಟಿದ್ದರೆ, ಅಥವಾ ವೈವಾಹಿಕ ಜೀವನದಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದರೆ, ಆರ್ಥಿಕವಾಗಿ ಮನೆಯ ಖರ್ಚು-ವೆಚ್ಚದಲ್ಲಿ ಏನೂ ಸಹಾಯ ಮಾಡದಿದ್ದಲ್ಲಿ, ಈ ಎಲ್ಲ ನಡವಳಿಕೆಗಳಿಗೆ ಕಾನೂನು ವೈವಾಹಿಕ ಪರಿತ್ಯಾಗ ಎಂದು ಅರ್ಥೈಸುತ್ತದೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ಸಂಗಾತಿಯು ನಿಮ್ಮನ್ನು ದೈಹಿಕವಾಗಿ ಬಿಟ್ಟು ಹೋಗಿರಬೇಕು ಎಂದೇನಿಲ್ಲ. ಆಯಾ ಪ್ರಕರಣಗಳ ಸಂದರ್ಭಾನುಸಾರ ಕೋರ್ಟು ವೈವಾಹಿಕ ಪರಿತ್ಯಾಗವು ಇಂತಹ ನಡವಳಿಕೆ ಶುರುವಾದಾಗಿನಿಂದ ಪ್ರಾರಂಭವಾಗಿದೆ ಎಂದು ನಿರ್ಧರಿಸಬಹುದು. ನ್ಯಾಯಾಲಯವು ಎಲ್ಲ ಸಂದರ್ಭ-ಸನ್ನಿವೇಶಗಳನ್ನು ಪರಿಶೀಲಿಸಿ ವಿಚ್ಛೇದನವನ್ನು ನೀಡುತ್ತದೆ.

ವೈವಾಹಿಕ ಪರಿತ್ಯಾಗದ ಸಮಯಾವಧಿ:

ಪರಿತ್ಯಾಗವನ್ನು ವಿಚ್ಛೇದನದ ಆಧಾರವನ್ನಾಗಿಸುವುದಾದರೆ:

  • ನಿಮ್ಮ ಸಂಗಾತಿಯು ನಿಮ್ಮನ್ನು ತ್ಯಜಿಸಿ ಕನಿಷ್ಠ ಎರಡು ವರ್ಷಗಳಾಗಿರಬೇಕು
  • ಈ ಎರಡು ವರ್ಷಗಳ ಕಾಲ ನಿರಂತರವಾಗಿರಬೇಕು

ವೈವಾಹಿಕ ಜವಾಬ್ದಾರಿಗಳನ್ನು ನೆರವೇರಿಸದಿದ್ದಲ್ಲಿ ಮುಸ್ಲಿಂ ವಿಚ್ಛೇದನ

ನಿಮ್ಮ ಗಂಡ ವೈವಾಹಿಕ ಜವಾಬ್ದಾರಿಗಳನ್ನು ಪೂರ್ಣಗೊಳಿಸದಿದ್ದರೆ, ಮುಸ್ಲಿಂ ಕಾನೂನಿನಡಿ ನೀವು ವಿಚ್ಛೇದನ ಪಡೆಯಬಹುದು. ವಿನಾಕಾರಣ, ಕನಿಷ್ಠ ೩ ವರ್ಷಗಳ ಕಾಲ ನಿಮ್ಮ ಗಂಡ ವೈವಾಹಿಕ ಜವಾಬ್ದಾರಿಗಳನ್ನು ನೆರವೇರಿಸದಿದ್ದಲ್ಲಿ, ನಿಮ್ಮ ವಿಚ್ಛೇದನಾ ಅರ್ಜಿಯನ್ನು ಕೋರ್ಟಿಗೆ ಸಲ್ಲಿಸಬಹುದು. ವೈವಾಹಿಕ ಜವಾಬ್ದಾರಿಗಳು ಕೆಳಗಿನಂತಿವೆ:

  • ಲೈಂಗಿಕ ಸಂಭೋಗ
  • ಒಂದೇ ಮನೆಯಲ್ಲಿ ಜೊತೆಗೆ ವಾಸಿಸುವುದು

ಹಿಂದೂ ವಿವಾಹ ಮತ್ತು ಮಾನಸಿಕ ರೋಗ

ನೀವು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಲ್ಲಿ, ನಿಮ್ಮ ಸಂಗಾತಿಯು ಮಾನಸಿಕ ರೋಗದಿಂದ ಬಳಲುತ್ತಿದ್ದಲ್ಲಿ, ಅದು ವಿಚ್ಛೇದನಕ್ಕೆ ಆಧಾರವಾಗಬಹುದು.

ನೀವು ವಿಚ್ಛೇದನಾ ಅರ್ಜಿ ಈ ಕೆಳಕಂಡ ಸಂದರ್ಭಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬಹುದು:

  • ನಿಮ್ಮ ಸಂಗಾತಿಯು ಗುಣಪಡಿಸಲಾಗದಂತಹ ಮಾನಸಿಕ ರೋಗದಿಂದ ಬಳಲುತ್ತಿದ್ದಲ್ಲಿ
  • ನಿಮ್ಮ ಸಂಗಾತಿಯು ಮಾನಸಿಕ ರೋಗದಿಂದ ಅನಿಯಮಿತವಾಗಿ ಅಥವಾ ನಿರಂತರವಾಗಿ ಬಳಲುತ್ತಿದ್ದು, ಈ ಸಂಗತಿಯಿಂದ ನಿಮಗೆ ಅವರೊಡನೆ ಇರಲು ಸಾಧ್ಯವಿಲ್ಲವಾದಾಗ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಅವರಲ್ಲಿ ಕೆಲವು ಮುಂಗೋಪದ ಅಥವಾ ಸಿಟ್ಟಿನ ನಡತೆಗಳು/ಗುಣಲಕ್ಷಣಗಳು ಇವೆ ಅಂದ ಮಾತ್ರಕ್ಕೆ ಅವರಿಗೆ ಮಾನಸಿಕ ರೋಗವಿದೆ ಎಂದು ಅರ್ಥ ಅಲ್ಲ.

ಯಾವಾಗ ಅವರ ನಡತೆ ಯಾವ ಸಂವೇದನಾಶೀಲ ವ್ಯಕ್ತಿಗೂ ಸಹ ಅವರೊಂದಿಗೆ ಇರದ ಹಾಗೆ ಮಾಡುತ್ತದೆಯೋ, ಆವಾಗ ಮಾನಸಿಕ ರೋಗದ ಆಧಾರದ ಮೇಲೆ ವಿಚ್ಛೇದನ ಬೇಡಬಹುದು.

ನಿಮ್ಮ ಸಂಗಾತಿಯು ಅಸ್ವಸ್ಥ ಮನಸ್ಸಿನಿಂದ ಬಳಲುತ್ತಿದ್ದಾರೋ ಇಲ್ಲವೋ ಎಂದು ಪರೀಕ್ಷಿಸಲು ವೈದ್ಯಕೀಯ ತಪಾಸಣೆಗಾಗಿ ಅವರನ್ನು ಕೊಂಡೊಯ್ಯಬೇಕು ಎಂದು ನ್ಯಾಯಾಲಯವು ನಿರ್ದೇಶಿಸಬೇಕು ಎಂದು ನೀವು ಮನವಿ ಸಲ್ಲಿಸಬಹುದು.

ಗಂಡನಿಗೆ ನಿಮಿರು ದೌರ್ಬಲ್ಯವಿದ್ದರೆ ಮುಸ್ಲಿಂ ವಿಚ್ಛೇದನ

ನಿಮ್ಮ ಗಂಡನಿಗೆ ನಿಮಿರು ದೌರ್ಬಲ್ಯವಿದ್ದಲ್ಲಿ, ಅಥವಾ ಅವರಿಗೆ ಈ ಸಮಸ್ಯೆಯಿದೆ ಎಂದು ನಿಮಗೆ ಮದುವೆಯಾದಾಗಿನಿಂದಲೂ ಕೂಡ ಗೊತ್ತಿದ್ದಲ್ಲಿ, ಮುಸ್ಲಿಂ ಕಾನೂನಿನಡಿ ನೀವು ವಿಚ್ಛೇದನ ಪಡೆಯಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಗಂಡ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬಹುದು:

  • ಅವರ ನಿಮಿರು ದೌರ್ಬಲ್ಯವನ್ನು ಕೋರ್ಟಿನ ಮುಂದೆ ಒಪ್ಪಿಕೊಳ್ಳುವುದು
  • ನಿಮಿರು ದೌರ್ಬಲ್ಯದ ಆರೋಪವನ್ನು ನಿರಾಕರಿಸಿ, ಅವರಿಗೆ ಯಾವುದೇ ತರಹದ ದೈಹಿಕ ಶಕ್ತಿಹೀನತೆ ಇಲ್ಲ ಎಂದು ವಾದಿಸುವುದು
  • ವೈದ್ಯಕೀಯವಾಗಿ ಅವರ ಸಮಸ್ಯೆಯನ್ನು ಗುಣಪಡಿಸಲು ಒಂದು ವರ್ಷದ ಸಮಯವನ್ನು ಕೋರ್ಟಿಗೆ ಅರ್ಜಿ ಸಲ್ಲಿಸಿ ಪಡೆಯಬಹುದು. ಒಂದು ವರ್ಷದ ನಂತರ ಅವರ ನಿಮಿರು ದೌರ್ಬಲ್ಯ ವಾಸಿಯಾಗಿದ್ದಲ್ಲಿ, ನಿಮಗೆ ವಿಚ್ಛೇದನ ಸಿಗುವುದಿಲ್ಲ.