ಮುಸ್ಲಿಂ ಮದುವೆಯನ್ನು ರದ್ದು ಮಾಡುವುದು

ಮುಸ್ಲಿಂ ಕಾನೂನಿನಡಿ, ಮದುವೆಯು ಮೌಖಿಕ ಅಥವಾ ಲಿಖಿತ ಒಪ್ಪಂದವಾಗಿದೆ. ಮದುವೆಯಾದ ಮುಸ್ಲಿಂ ದಂಪತಿಗಳು ಜೊತೆಗೆ ವಾಸಮಾಡುವುದು, ಮತ್ತು ಲೈಂಗಿಕ ಸಂಬಂಧವನ್ನು ಬೆಳೆಸುವುದು, ಎಂಬಂತಹ ಕೆಲವು ವೈವಾಹಿಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ವೈವಾಹಿಕ ಜವಾಬ್ದಾರಿಗಳಲ್ಲದೆ, ಈ ಕೆಳಕಂಡಂತಹ ಕಾನೂನಾತ್ಮಕ ಜವಾಬ್ದಾರಿಗಳನ್ನೂ ಸಹ ಅವರು ನೆರವೇರಿಸಬೇಕಾಗುತ್ತದೆ:

  • ಗಂಡ-ಹೆಂಡತಿಯರ ಆಸ್ತಿ ವಿಭಜನೆ (ಭೂಮಿ, ಅಪಾರ್ಟ್ಮೆಂಟ್, ಹೂಡಿಕೆ, ವಿಮೆ)
  • ಹೆಂಡತಿಗೆ ಜೀವನಾಂಶ ಕೊಡುವುದು
  • ಹೆಂಡತಿಯ ಡೊವರ್ / ಮೆಹೆರ್ ನ ಹಕ್ಕು

ಮುಸ್ಲಿಂ ಮದುವೆ ರದ್ದುಗೊಂಡಾಗ, ನಿಮ್ಮ ಗಂಡ/ಹೆಂಡತಿಯ ಜೊತೆಗಿನ ಒಪ್ಪಂದವೂ ಮುಗಿದ ಹಾಗೆ. ಆದ್ದರಿಂದ, ನಿಮ್ಮಿಬ್ಬರ ನಡುವಿನ ವೈವಾಹಿಕ ಜವಾಬ್ದಾರಿಗಳು ಮುಗಿಯುತ್ತವೆ, ಆದರೆ ಕಾನೂನಾತ್ಮಕ ಜವಾಬ್ದಾರಿಗಳು ಮುಗಿಯಲಿಕ್ಕಿಲ್ಲ.

ಮದುವೆಯು ಕೆಳಕಂಡಂತೆ ರದ್ದುಗೊಳ್ಳಬಹುದು:

ಸಂಗಾತಿಯ ನಿಧನ:

ನಿಮ್ಮ ಗಂಡ/ಹೆಂಡತಿಯ ನಿಧನವಾದಲ್ಲಿ ನಿಮ್ಮ ಮದುವೆ ರದ್ದುಗೊಳ್ಳುತ್ತದೆ. ಮುಸ್ಲಿಂ ಮದುವೆ ಒಂದು ಒಪ್ಪಂದವಾಗಿರುವುದರಿಂದ, ಸಂಗಾತಿಯ ನಿಧನದ ಅರ್ಥ, ಅವರು ಆ ಒಪ್ಪಂದದಿಂದ ಹೊರಗೆ ಬಂದಿದ್ದಾರೆ ಎಂದಾಗುತ್ತದೆ.

ವಿಚ್ಛೇದನ:

ಮುಸ್ಲಿಮರಲ್ಲಿ ವಿಚ್ಛೇದನವನ್ನು ನ್ಯಾಯಾಲಯಗಳ ಒಳಗೊಳ್ಳುವಿಕೆಯಿಲ್ಲದೆ ನೀಡಬಹುದು. ಆದರೆ, ವಿಚ್ಛೇದನದ ಸಮಯದಲ್ಲಿ ಏನಾದರೂ ವಿವಾದ ಹುಟ್ಟಿಕೊಂಡರೆ, ಬೇಕೆಂದರೆ ನ್ಯಾಯಾಲಯಗಳ ಮೊರೆ ಹೋಗಬಹುದು. ವಿಚ್ಛೇದನವನ್ನು ನೀವು ಅಥವಾ ನಿಮ್ಮ ಸಂಗಾತಿ ನೀಡಬಹುದು. ನಿಮ್ಮ ಮದುವೆಯು ಕೆಳಕಂಡ ರೀತಿಗಳಂತೆ ಅಂತ್ಯಗೊಳ್ಳಬಹುದು:

  • ಗಂಡ ಮದುವೆಯನ್ನು ಮುರಿಯಲು ಇಚ್ಛಿಸಿದಾಗ
  • ಹೆಂಡತಿ ಮದುವೆಯನ್ನು ಮುರಿಯಲು ಇಚ್ಛಿಸಿದಾಗ
  • ಗಂಡ ಹಾಗು ಹೆಂಡತಿ ಇಬ್ಬರೂ ಸೇರಿ ಮದುವೆಯನ್ನು ಮುರಿದಾಗ

ಬಹಳಷ್ಟು ಸಂದರ್ಭಗಳಲ್ಲಿ, ನ್ಯಾಯಾಲಯಕ್ಕೆ ಹೋಗದೆ, “ನನಗೆ ಇನ್ನು ಮದುವೆಯಲ್ಲಿರಲು ಇಷ್ಟವಿಲ್ಲ” ಎಂದು ಅದನ್ನು ಮುರಿಯಲು ಹೆಂಗಸರಿಗಿಂತ ಗಂಡಸರಿಗೆ ಹೆಚ್ಚುಆಯ್ಕೆಗಳಿವೆ. ಹೆಂಗಸರಿಗೆ ಹೀಗೆ ಮಾಡಲು ಕೇವಲ ಒಂದೇ ರೀತಿ ಇದೆ. ಆದಾಗ್ಯೂ, ಹೆಂಗಸರು ನ್ಯಾಯಾಲಯಕ್ಕೆ ಹೋದರೆ, ಅಲ್ಲಿ ಅವರಿಗೆ ಇನ್ನೂ ಹೆಚ್ಚು ಬಗೆಯ ಆಯ್ಕೆಗಳು ಸಿಗುತ್ತವೆ.

ಮಕ್ಕಳು ತಂದೆ-ತಾಯಂದಿರನ್ನು ನೋಡಿಕೊಳ್ಳುವುದು

ಭಾರತೀಯ ಕಾನೂನಿನ ಪ್ರಕಾರ ಎಲ್ಲ ವ್ಯಕ್ತಿಗಳು ತಮ್ಮ ತಂದೆ-ತಾಯಂದಿರನ್ನು ನೋಡಿಕೊಳ್ಳಬೇಕು ಮತ್ತು ಅವರ ಆಸರೆಯಾಗಬೇಕು ಎಂದಿದೆ. ಇಂತಹ ತಂದೆ-ತಾಯಂದಿರು ಜೈವಿಕವಾಗಿರಬಹುದು, ಮಲ ತಂದೆ-ತಾಯಿ ಆಗಿರಬಹುದು, ಅಥವಾ ದತ್ತು ತಂದೆ-ತಾಯಿ ಆಗಿರಬಹುದು. ತಂದೆ-ತಾಯಿ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯಿದೆ, ೨೦೦೭ರ ಅಡಿಯಲ್ಲಿ ಹಿರಿಯ ನಾಗರಿಕರು (೬೦ರ ಮೇಲಿರುವವರು) ಅವರ ವಯಸ್ಕ ಮಕ್ಕಳು ಅಥವಾ ಕಾನೂನಾತ್ಮಕ ಉತ್ತರಾಧಿಕಾರಿಗಳಿಂದ ಜೀವನಾಂಶ ಪಡೆಯಲು ಟ್ರಿಬ್ಯೂನಲ್ ಗೆ ಅರ್ಜಿ ಸಲ್ಲಿಸಬಹುದು. ಅವರು ತಮ್ಮನು ತಾವೇ ನೋಡಿಕೊಳ್ಳಲು ಆಗದಿದ್ದಲ್ಲಿ ಇಂತಹ ಅರ್ಜಿ ಸಲ್ಲಿಸಬಹುದಾಗಿದೆ.

ಬಾಲ್ಯ ವಿವಾಹ

ಯಾವುದೇ ವಿವಾಹವು ಕಾನೂನಿನಡಿ ಬಾಲ್ಯ ವಿವಾಹವೆಂದು ಪರಿಗಣಿಸಬೇಕಾದಲ್ಲಿ:

  • ಮದುವೆಯಾಗುವ ಇಬ್ಬರೂ ಅಪ್ರಾಪ್ತ ವಯಸ್ಸಿನವರಾಗಿರಬೇಕು, ಅಥವಾ
  • ಮದುವೆಯಾಗುವ ಕನಿಷ್ಠ ಒಬ್ಬರು ಅಪ್ರಾಪ್ತ ವಯಸ್ಸಿನವರಾಗಿರಬೇಕು.

ಕಾನೂನಿನಡಿ ಮಹಿಳೆಯರ ಮದುವೆಯ ವಯಸ್ಸು ೧೮, ಹಾಗು ಪುರುಷರದು ೨೧ ಆಗಿದೆ.

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಪ್ರೌಢಾವಸ್ಥೆಯೇ (೧೫ ವರ್ಷಗಳು) ಮದುವೆಯ ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ನೀವು ೧೮/೨೧ ವರ್ಷಗಳ ಕೆಳಗಿದ್ದು, ಮದುವೆಯಾದರೆ, ನಿಮ್ಮ ಮದುವೆ ಅಕ್ರಮವಲ್ಲ. ಆದಾಗ್ಯೂ, ಬಾಲ್ಯ ವಿವಾಹ ಕಾನೂನಿನಡಿ, ಬೇಕಾದಲ್ಲಿ ನೀವು ನಿಮ್ಮ ಮದುವೆಯನ್ನು ರದ್ದುಗೊಳಿಸಬಹುದು.

ಹಿಂದೂ ವಿವಾಹ ಕಾನೂನಿನಡಿ ವಿಚ್ಛೇದನ

ವಿವಾಹ ಸಂಬಂಧಿತ ಕಾನೂನುಗಳು, ಹಲವಾರು ವೈವಾಹಿಕ ಹಾಗು ಭಾವನಾತ್ಮಕ ಹಕ್ಕುಗಳನ್ನು ಗುರುತಿಸುತ್ತವೆ. ಇವುಗಳಲ್ಲಿ ಕೆಲವು ವಿಷಯಗಳು: ಆಸ್ತಿ ವಿಭಜನೆ, ಮಕ್ಕಳ ಜವಾಬ್ದಾರಿ, ಇತ್ಯಾದಿ. ವಿಚ್ಛೇದನ ಪಡೆದಲ್ಲಿ ವೈವಾಹಿಕ ಸಂಬಂಧ ಅಂತ್ಯಗೊಂಡರೂ ಕೆಲವು ಕಾನೂನಾತ್ಮಕ ಬಾಧ್ಯತೆಗಳು ಮುಂದುವರೆಯಬಹುದು.

ವೈವಾಹಿಕ ಸಂಬಂಧ:

ಕಾನೂನಿನ ಪ್ರಕಾರ ಮದುವೆಯೆಂದರೆ:

  • ಭಾವನಾತ್ಮಕ ಆಸರೆ
  • ಲೈಂಗಿಕ ಸಂಬಂಧ
  • ಮಕ್ಕಳ ಹಾಗು ಸಾಂಸಾರಿಕ ಜವಾಬ್ದಾರಿ, ಹಾಗು
  • ಆರ್ಥಿಕ ಬೆಂಬಲ
  • ಇವೆಲ್ಲ ಅಂಶಗಳ ಇರುವಿಕೆ.

ಕಾನೂನಾತ್ಮಕ ಬಾಧ್ಯತೆಗಳು:

ನೀವು ಮತ್ತು ನಿಮ್ಮ ಸಂಗಾತಿಯ ನಡುವೆ, ವಿವಾಹದ ಅಂತರ್ಗತವಾಗಿ, ಹಲವಾರು ನ್ಯಾಯಿಕ ಬಾಧ್ಯತೆಗಳಿರುವುದುಂಟು. ಇವುಗಳಲ್ಲಿ ಕೆಲವು ವಿಚ್ಛೇದನ ಆದಮೇಲೂ ಸಹ ಮುಂದುವರೆಯುತ್ತವೆ. ಅವೇನೆಂದರೆ:

ಜೀವನಾಂಶ:

ನ್ಯಾಯಾಲಯವು ವಿಚ್ಛೇದನದ ವೇಳೆ, ನೀವು ನಿಮ್ಮ ಸಂಗಾತಿಗೆ ಹಣ ಕೊಡುವುದಾಗಿ ಆದೇಶಿಸಬಹುದು. ಈ ಹಣಕ್ಕೆ ಜೀವನಾಂಶ ಎಂದು ಕರೆಯುತ್ತಾರೆ.

ಮಕ್ಕಳನ್ನು ಪೋಷಿಸುವ ಜವಾಬ್ದಾರಿ:

ನ್ಯಾಯಾಲಯವು ನಿಮ್ಮ ಮಕ್ಕಳು ಯಾರ ಜೊತೆ ಇರಬಹುದು, ಹಾಗು ಅವರ ಆರ್ಥಿಕ ಹೊಣೆಗಾರಿಕೆ ಯಾರು ವಹಿಸುತ್ತಾರೆ ಎಂಬುದನ್ನು ವಿಚ್ಛೇದನದ ಸಮಯದಲ್ಲಿ ನಿರ್ಧರಿಸುತ್ತದೆ.

ಕ್ರಿಶ್ಚಿಯನ್ ಮದುವೆಯನ್ನು ಯಾರು ನೆರವೇರಿಸಬಹುದು?

ಕೆಳಗಿನವರು ಕಾನೂನುಬದ್ಧವಾಗಿ ಕ್ರೈಸ್ತಮತೀಯ ಮದುವೆಗಳನ್ನು ನೆರವೇರಿಸಬಹುದು:

  • ಚರ್ಚಿನಿಂದ ಪಾದ್ರಿ/ ಧಾರ್ಮ ಸಚಿವರಾಗುವ ದೀಕ್ಷೆ ಪಡೆದವರು
  • ಸ್ಕಾಟ್ಲೆಂಡಿನ ಇಗರ್ಜಿಯ ಪಾದ್ರಿಗಳು
  • ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ಮದುವೆ ನೆರವೇರಿಸಲು ಪರವಾನಗಿ ಪಡೆದ ಧರ್ಮ ಸಚಿವರು
  • ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ನೇಮಕಗೊಂಡ ವಿವಾಹ ಕುಲಸಚಿವರು. ಈ ಕುಲಸಚಿವರ ಉಪಸ್ಥಿತಿಯಲ್ಲಿ, ಅಥವಾ ಅವರ ನಾಯಕತ್ವದಲ್ಲಿ ಮದುವೆ ನೆರವೇರಬೇಕು.
  • ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ವಿವಾಹ ಪ್ರಮಾಣಪತ್ರ ಅನುದಾನಿಸುವ ಪರವಾನಗಿ ಪಡೆದ ಯಾವುದೇ ವ್ಯಕ್ತಿ.

ಸ್ಕಾಟ್ಲೆಂಡಿನ ಚರ್ಚಿನ ಧರ್ಮ ಸಚಿವರು, ಅಥವಾ ಪಾದ್ರಿಯವರಿಂದ ನೆರವೇರಿಸಲಾಗುವ ಎಲ್ಲ ಮದುವೆಗಳು, ಆ ಪಂಗಡದ ಚರ್ಚಿನ ನಿಯಮಗಳು, ವಿಧಿಗಳು, ಸಮಾರಂಭಗಳು, ಮತ್ತು ಸಂಪ್ರದಾಯಗಳ ಅನುಸಾರ ನಡೆಯಬೇಕಾಗುತ್ತವೆ. ಆದರೆ, ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ಪರವಾನಗಿ ಪಡೆದ ಧಾರ್ಮ ಸಚಿವರು, ವಿವಾಹ ಪ್ರಮಾಣಪತ್ರ ಅನುದಾನಿಸುವ ಪರವಾನಗಿ ಪಡೆದ ಯಾವುದೇ ವ್ಯಕ್ತಿ, ಅಥವಾ ಈ ಕಾಯಿದೆಯಡಿ ನೇಮಕಗೊಂಡ ವಿವಾಹ ಕುಲಸಚಿವರು ಮದುವೆ ನೆರವೇರಿಸುವುದಿದ್ದಲ್ಲಿ, ಈ ಕಾಯಿದೆಯಲ್ಲಿ ಉಲ್ಲೇಖಿಸಿರುವ ಕಾರ್ಯವಿಧಾನಾನುಸಾರ ಮದುವೆಯನ್ನು ನೆರವೇರಿಸಬೇಕಾಗುತ್ತದೆ. ಈ ಕಾರ್ಯವಿಧಾನಗಳು ಯಾರು ಮದುವೆಯನ್ನು ನೆರವೇರಿಸುತ್ತಿದ್ದಾರೆ ಎಂಬುದರ ಮೇಲೆ ಬದಲಾಗುವುದುಂಟು.

ಯಾರನ್ನು ದತ್ತು ಪಡೆಯಬಹುದು?

ಧಾರ್ಮಿಕೇತರ ಕಾನೂನಿನಡಿ ದತ್ತು ಸ್ವೀಕಾರ:

ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನಡಿ, ಕೆಳಕಂಡ ಮಕ್ಕಳನ್ನು ದತ್ತು ಪಡೆಯಬಹುದು:

೧. ಮಕ್ಕಳ ಕಲ್ಯಾಣ ಸಮಿತಿ ಈ ಕೆಳಗಿನ ಮಕ್ಕಳನ್ನು “ಕಾನೂನುಬದ್ಧವಾಗಿ ದತ್ತು ಪಡೆಯಲು ಯೋಗ್ಯ” ಎಂದು ಘೋಷಿಸಿದಾಗ:

  • ಜೈವಿಕ ತಂದೆ-ತಾಯಿ, ದತ್ತು ತಂದೆ-ತಾಯಿ, ಅಥವಾ ಕಾನೂನಾತ್ಮಕ ಪೋಷಕರು ಇರದ ಅನಾಥ ಮಗು
  • ತ್ಯಜಿಸಿದ ಮಗು: ಜೈವಿಕ ತಂದೆ-ತಾಯಿ ಮಗುವನ್ನು ತ್ಯಜಿಸುವುದು – ಬಿಟ್ಟುಕೊಟ್ಟ ಮಗು: ದತ್ತು ಸ್ವೀಕಾರ ಅಧಿಕಾರಿಗಳಿಗೆ ತಂದೆ
  • ತಾಯಂದಿರು ಮಗುವನ್ನು ಬಿಟ್ಟುಕೊಡುವುದು

೨. ನೆಂಟರ ಮಗು

೩. ಸಂಗಾತಿಯ ಮಗು: ಮಲ ತಂದೆ/ತಾಯಿ ದತ್ತು ಪಡೆಯಲು, ಜೈವಿಕ ತಂದೆ-ತಾಯಿ ಬಿಟ್ಟುಕೊಟ್ಟ ಮಗು

ಹಿಂದೂ ಕಾನೂನಿನಡಿ ದತ್ತು ಸ್ವೀಕಾರ:

ಹಿಂದೂ ದತ್ತು ಸ್ವೀಕಾರ ಕಾನೂನಿನ ಪ್ರಕಾರ, ಕೆಳಗಿನ ಮಾನದಂಡಗಳನ್ನು ಪೂರೈಸುವ ಮಕ್ಕಳನ್ನು ಮಾತ್ರ ದತ್ತು ಪಡೆಯಬಹುದು (ಕೆಲವು ಪದ್ಧತಿಗಳು ಮತ್ತು ಬಳಕೆಗಳ ವಿನಾಯಿತಿಗಳೊಂದಿಗೆ):

  • ಅವರಿಗೆ ಮದುವೆಯಾಗಿಲ್ಲ
  • ಅವರು ೧೫ ವರ್ಷಗಳೊಳಗಿದ್ದಾರೆ
  • ಅವರು ಹಿಂದೂ ಆಗಿದ್ದಾರೆ
  • ಅವರನ್ನು ಈಗಾಗಲೇ ದತ್ತು ಪಡೆದಿಲ್ಲ

ಮುಸ್ಲಿಂ ಮದುವೆಯಲ್ಲಿ ಗಂಡನಿಗೆ ವಿಚ್ಛೇದನ ಬೇಕಾದಾಗ

ನೀವು ಗಂಡಸರಾಗಿ, ನಿಮ್ಮ ಹೆಂಡತಿಯ ಜೊತೆಗಿರುವ ಮದುವೆಯ ಒಪ್ಪಂದವನ್ನು ಮುರಿದು ನಿಮ್ಮ ವಿವಾಹವನ್ನು ಅಂತ್ಯಗೊಳಿಸಬಹುದು. ನೀವು ನ್ಯಾಯಾಲಯಕ್ಕೆ ಹೋಗದೆ, ಇಸ್ಲಾಂ ಧರ್ಮದಡಿ ಸೂಚಿಸಿದಂತಹ ಹಲವಾರು ರೀತಿಗಳಲ್ಲಿ ಮದುವೆಯ ಒಪ್ಪಂದವನ್ನು ಮುರಿಯಬಹುದು.

ನಿಮ್ಮ ಮದುವೆ ಒಂದು ಒಪ್ಪಂದವಾಗಿರುವುದರಿಂದ, ನಿಮಗೆ ಇಷ್ಟವೆನಿಸಿದಾಗ ಅದನ್ನು ರದ್ದುಗೊಳಿಸಬಹುದು. ಇಸ್ಲಾಮಿನಲ್ಲಿ ವಿಚ್ಛೇದನವು ದೋಷಾಧಾರಿತವಲ್ಲ. ಅಂದರೆ, ಬೇರೆ ಧರ್ಮಗಳಂತೆ, ನೀವು ವಿಚ್ಛೇದನ ಪಡೆಯಲು, ನಿಮ್ಮ ಸಂಗಾತಿ ನಿಮಗೆ ಯಾವುದೇ ರೀತಿಯಲ್ಲಿ ಹಾನಿ ಮಾಡಿರಬೇಕು ಎಂದೇನಿಲ್ಲ (ಉದಾಹರಣೆಗೆ, ಕ್ರೌರ್ಯ, ವ್ಯಭಿಚಾರ, ವಾಸಿಯಾಗದ ಖಾಯಿಲೆ).

ಈ ಕೆಳಗಿನ ರೀತಿಯಲ್ಲಿ ಗಂಡನು ವಿಚ್ಛೇದನ ನೀಡಬಹುದು:

ತಲಾಕ್-ಎ-ಅಹಸನ್:

ಹಂತ ೧:

ತುಹರ್ ನ ಅವಧಿಯಲ್ಲಿ, ಅಹಸನ್ ರೀತಿಯ ವಿಚ್ಛೇದನದಡಿ, ನೀವು “ತಲಾಕ್” ಎಂಬ ಹೇಳಿಕೆಯನ್ನು ಒಂದು ಸಾರಿ ಹೇಳಬೇಕು.

ಹಂತ ೨:

ನಿಮ್ಮ ಹೆಂಡತಿಯ ಇದ್ದತ್ ಸಮಯದಲ್ಲಿ ಈ ತಲಾಕ್ ಅನ್ನು ಹಿಂತೆಗೆದುಕೊಳ್ಳಬಹುದು. ಉದಾಹರಣೆಗೆ, “ನಾನು ನಿನ್ನನ್ನು ಮರಳಿ ಪಡೆಯುತ್ತೇನೆ”, ಅಥವಾ “ನನ್ನ ತಲಾಕ್ ಅನ್ನು ಹೆಂತೆಗೆದುಕೊಳ್ಳುತ್ತಿದ್ದೇನೆ” ಎಂಬ ಹೇಳಿಕೆಗಳನ್ನು ಹೇಳಿ, ಅಥವಾ ನಿಮ್ಮ ಹೆಂಡತಿಯೊಂದಿಗೆ ಲೈಂಗಿಕ ಸಂಭೋಗ ನಡೆಸಿ, ನೀವು ನಿಮ್ಮ ತಲಾಕ್ ಅನ್ನು ರದ್ದುಗೊಳಿಸಬಹುದು. ಇದ್ದತ್ ಸಮಯದ ಅವಧಿಯಲ್ಲಿ ನೀವು ನಿಮ್ಮ ತಲಾಕ್ ಅನ್ನು ಹೆಂತೆಗುದುಕೊಳ್ಳಲು ಆಗದಿದ್ದಲ್ಲಿ, ನಿಮ್ಮ ವಿಚ್ಛೇದನವು ಅಂತಿಮ ಮತ್ತು ಅಪರಿವರ್ತನೀಯವಾಗುತ್ತದೆ. ಒಮ್ಮೆ ವಿಚ್ಛೇದನ ಪೂರ್ಣಗೊಂಡಲ್ಲಿ, ನಿಮ್ಮ ಹೆಂಡತಿ ಹಾಗು ಮಕ್ಕಳ ಯೋಗಕ್ಷೇಮಕ್ಕಾಗಿ ನೀವು ಜೀವನಾಂಶ ಕೊಡಬೇಕಾಗುತ್ತದೆ.

ತಲಾಕ್-ಎ-ಹಸನ್:

ಹಸನ್ ರೀತಿಯ ವಿಚ್ಛೇದನದಲ್ಲಿ, ಗಂಡನು ಮೂರು ಸತತ ತುಹರ್ ಗಳ ಅವಧಿಯಲ್ಲಿ “ತಲಾಕ್” ಎಂಬ ಹೇಳಿಕೆಯನ್ನು ಹೇಳಬೇಕಾಗುತ್ತದೆ.

ತುಹರ್:

ತುಹರ್ ಎಂದರೆ ಪವಿತ್ರತೆ ಎಂದರ್ಥ. ಇದು ಹೆಂಡತಿಯ ಮುಟ್ಟಿನ ಸಮಯವಲ್ಲದ ಅವಧಿಯನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಹೆಂಡತಿಗೆ ಯಾರ ಜೊತೆಯೂ ಲೈಂಗಿಕ ಸಂಭೋಗ ನಡೆಸಲು ಅನುಮತಿ ಇಲ್ಲ. ಪ್ರತಿ ತುಹರ್ ಅವಧಿಯ ನಂತರ, ನಿಮ್ಮ ತಲಾಕ್ ಅನ್ನು ನೀವು ಹಿಂತೆಗೆದುಕೊಳ್ಳಬಹುದು.

ವಿಚ್ಛೇದನದ ಪ್ರಕ್ರಿಯೆ:

ಹಂತ ೧:

ನಿಮ್ಮ ಹೆಂಡತಿಯ ಮುಟ್ಟಿನ ಸಮಯ ಮುಗಿದ ಮೇಲೆ ನೀವು ತಲಾಕ್ ಅನ್ನು ಹೇಳಬೇಕು. ಈ ಸಮಯಾವಧಿಯಲ್ಲಿ ನಿಮ್ಮಿಬ್ಬರ ನಡುವೆ ಲೈಂಗಿಕ ಸಂಭೋಗ ನಡೆಯುವಂತಿಲ್ಲ. ಒಂದು ವೇಳೆ ನಡೆದರೆ, ನೀವು ನಿಮ್ಮ ತಲಾಕ್ ಅನ್ನು ಹಿಂತೆಗೆದುಕೊಂಡಿದ್ದೀರಿ ಎಂದರ್ಥವಾಗುತ್ತದೆ. ನೀವು ಹೇಳಿಕೆಯ ಮುಖಾಂತರ ಅಥವಾ ಬರೆದು ನಿಮ್ಮ ನಿರ್ಣಯವನ್ನು ಹಿಂತೆಗೆದುಕೊಳ್ಳಬಹುದು.

ಹಂತ ೨:

ನಿಮ್ಮ ಹೆಂಡತಿಯ ಎರಡನೇ ತಿಂಗಳ ಮುಟ್ಟಿನ ಸಮಯ ಮುಗಿದಾಗ, ನೀವು ಎರಡನೇ ಬಾರಿ ತಲಾಕ್ ಅನ್ನು ಹೇಳಬೇಕು. ಈ ಸಮಯದಲ್ಲೂ ಕೂಡ ನೀವು ಹೇಳಿಕಯ ಮುಖಾಂತರ ಅಥವಾ ನಿಮ್ಮ ನಡವಳಿಕೆಯ ಮುಖಾಂತರ ನಿಮ್ಮ ನಿರ್ಣಯವನ್ನು ರದ್ದುಗೊಳಿಸಬಹುದು.

ಹಂತ ೩:

ಇದು ಕೊನೆಯ ತಲಾಕ್ ಆಗಿದ್ದು, ನಿಮ್ಮ ಹೆಂಡತಿಯ ಮೂರನೇ ತಿಂಗಳಿನ ಮುಟ್ಟಿನ ಸಮಯ ಮುಗಿದಾಗ ನೀವು ಈ ತಲಾಕ್ ಅನ್ನು ಹೇಳಬೇಕು. ಈ ತಲಾಕ್ ಅನ್ನು ಹಿಂತೆಗೆದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ವಿಚ್ಛೇದನವು ಈ ತಲಾಕಿನ ನಂತರ ಪೂರ್ಣಗೊಳ್ಳುತ್ತದೆ. ನಿಮ್ಮ ಮದುವೆ ಈ ತಲಾಕಿನ ನಂತರ ಶಾಶ್ವತವಾಗಿ ಮುರಿಯುತ್ತದೆ.

ಅಹಸನ್ ಮತ್ತು ಹಸನ್ ರೀತಿಗಳ ಎರಡೂ ವಿಚ್ಛೇದನಗಳನ್ನು ಶಿಯಾ ಹಾಗು ಸುನ್ನಿ ಮುಸ್ಲಿಮರಿಬ್ಬರೂ ಅನುಮೋದಿಸುತ್ತಾರೆ, ಅಭ್ಯಸಿಸುತ್ತಾರೆ.

ಹಿರಿಯ ನಾಗರಿಕರನ್ನು ತ್ಯಜಿಸಿದರೆ ಅಥವಾ ನಿರ್ಲಕ್ಷಿಸಿದರೆ ಶಿಕ್ಷೆ

ನೀವು ಒಬ್ಬ ಹಿರಿಯ ನಾಗರಿಕರನ್ನು ಯಾವುದೇ ಜಾಗದಲ್ಲಿ ಅವರನ್ನು ತ್ಯಜಿಸುವುದಕ್ಕಾಗಲಿ ಅಥವಾ ಅವರ ಕಾಳಜಿ ತೆಗೆದುಕೊಳ್ಳಬಾರದು ಎಂಬ ಉದ್ದೇಶದಿಂದ ಬಿಟ್ಟು ಹೋದಲ್ಲಿ, ನಿಮಗೆ ೩ ತಿಂಗಳ ಸೆರೆಮನೆ ವಾಸ ಮತ್ತು/ಅಥವಾ ೫೦೦೦ ರೂಪಾಯಿಗಳ ದಂಡ ವಿಧಿಸಲಾಗುವುದು. ಪೊಲೀಸರು ನ್ಯಾಯಾಲಯದ ಅನುಮತಿ ಇಲ್ಲದೆ ಆರೋಪಿಗಳನ್ನು ಬಂಧಿಸಬಹುದು. ಆದಾಗ್ಯೂ ಇದು ಜಾಮೀನು ನೀಡಬಹುದಾದ ಅಪರಾಧವಾಗಿದೆ. ನೀವು ಜಾಮೀನು ಪತ್ರದ ಮೊತ್ತ ನೀಡಬಹುದಾದಲ್ಲಿ ಸೆರೆಮನೆಯಿಂದ ಬಿಡುಗಡೆ ಹೊಂದಬಹುದು.

ಬಾಲ್ಯ ವಿವಾಹದ ನಿಷೇಧ

ಬಾಲ್ಯ ವಿವಾಹಗಳು ಭಾರತದಲ್ಲಿ ಸಾವಿರಾರು ವರ್ಷಗಳಿಂದ ನಡೆಯುತ್ತಾ ಬಂದಿವೆ. ಈ ಸಾಮಾಜಿಕ ಸಮಸ್ಯೆಯನ್ನು ಪರಿಹರಿಸಲು ನಮ್ಮ ಕಾನೂನು ಬಾಲ್ಯ ವಿವಾಹ ನೆರವೇರಿಸುವುದನ್ನು

ನಿಷೇಧಿಸಿದೆ ಹಾಗು ಇಂತಹ ವಿವಾಹಗಳ ನಿರ್ವಹಣೆಯಲ್ಲಿ ತೊಡಗಿದವರಿಗೆ ಶಿಕ್ಷೆಯನ್ನು ವಿಧಿಸುತ್ತದೆ.

ಆದಾಗ್ಯೂ, ಅಪ್ರಾಪ್ತವಯಸ್ಕರು ಮದುವೆಯಾದಲ್ಲಿ ಕಾನೂನಿನಡಿ ಅದು ಅಮಾನ್ಯವಲ್ಲ. ಆದ ಮದುವೆಯನ್ನು ಮುಂದುವರಿಸಬೇಕೋ ಅಥವಾ ರದ್ದುಪಡಿಸಬೇಕೋ ಎಂಬ ನಿರ್ಧಾರ ಆ ಸಂಬಂಧಪಟ್ಟ ಮಕ್ಕಳದ್ದು.

ಭಾರತದ ಕೆಲವು ವೈಯಕ್ತಿಕ ಕಾನೂನುಗಳಡಿ (ಬೇರೆ ಬೇರೆ ಧರ್ಮಗಳ ಮದುವೆ, ವಿಚ್ಛೇದನ, ಇತ್ಯಾದಿ ವಿಷಯಗಳನ್ನು ನಿರ್ವಹಿಸುವ ಧಾರ್ಮಿಕ ಕಾನೂನುಗಳು), ಮಕ್ಕಳು ಪ್ರೌಢಾವಸ್ಥೆ ಮುಟ್ಟಿದ ಮೇಲೆ ವಿವಾಹದ ಅವಕಾಶವಿದೆ. ಇದು ಹೆಣ್ಣು ಮಕ್ಕಳು ೧೮ ಮುಟ್ಟುವ ಮುನ್ನ ಹಾಗು ಗಂಡು ಮಕ್ಕಳು ೨೧ ಮುಟ್ಟುವ ಮುನ್ನ ಸಂಭವವಿದೆ. ಹಲವಾರು ಪ್ರಕರಣಗಳಲ್ಲಿ ನಮ್ಮ ನ್ಯಾಯಾಲಯಗಳು ಇಂತಹ ಮದುವೆಗಳು ಅಮಾನ್ಯವಲ್ಲ ಎಂದು ತೀರ್ಪುಗಳನ್ನು ನೀಡಿವೆ. ಆದಾಗ್ಯೂ, ಸಂಬಂಧಪಟ್ಟ ಮಕ್ಕಳು ತಮ್ಮ ಮದುವೆಗಳನ್ನು ಬಾಲ್ಯ ವಿವಾಹ ಕಾನೂನಿನಡಿ ರದ್ದುಗೊಳಿಸುವ ಹಕ್ಕನ್ನು ಹೊಂದಿರುತ್ತಾರೆ.

ಹೀಗಿದ್ದರೂ ಕೂಡ, ಕೆಲವು ಸಂದರ್ಭಗಳಲ್ಲಿ, ಕೆಲವು ಬಾಲ್ಯ ವಿವಾಹಗಳು ಸಂಪೂರ್ಣವಾಗಿ ಅಮಾನ್ಯ ಎಂದು ನಮ್ಮ ಕಾನೂನು ಪರಿಗಣಿಸುತ್ತದೆ.

ಹಿಂದೂ ವಿವಾಹ ಕಾನೂನಿನಡಿ ವಿಚ್ಛೇದನಾ ಅರ್ಜಿ ಸಲ್ಲಿಸುವಿಕೆ

ವಿಚ್ಛೇದನ ಎಂದರೆ ನೀವು ನಿಮ್ಮ ಸಂಗಾತಿಯಿಂದ ಅಂತಿಮವಾಗಿ ಹಾಗು ಮಾರ್ಪಡಿಸಲಾಗದಂತೆ ಬೇರ್ಪಡೆ ಹೊಂದುವುದು. ಕಾನೂನಿನಡಿಯಲ್ಲಿ ಬೇರೆ ತರಹಗಳ, ಅಂತಿಮವಲ್ಲದ ವೈವಾಹಿಕ ಬೇರ್ಪಡೆಗಳೂ ಸಂಭವವಿವೆ.

ನಿಮ್ಮ ವಿವಾಹವು ಮಾನ್ಯವಿದ್ದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ನಿಮ್ಮ ವಿವಾಹವು ಅಮಾನ್ಯವಿದ್ದಲ್ಲಿ, ನಿಮ್ಮ ಸಂಬಂಧವನ್ನು ಕಾನೂನಾತ್ಮಕವಾಗಿ ರದ್ದುಗೊಳಿಸಲು ಕೋರ್ಟಿಗೆ ಅರ್ಜಿಸಲ್ಲಿಸಬೇಕಾಗುತ್ತದೆ.

ಕೋರ್ಟಿಗೆ ಹೋಗುವುದು:

ನಿಮಗೆ ವಿಚ್ಛೇದನ ಬೇಕಾದಲ್ಲಿ ಕೋರ್ಟಿಗೆ ಹೋಗಬೇಕಾಗುತ್ತದೆ. ನಿಮ್ಮ ವಿಚ್ಛೇದನದ ಪ್ರಕರಣ ಕೋರ್ಟಿನಲ್ಲಿ ನಡೆಯುತ್ತಿರುವಾಗಲೂ ಸಹ, ನಿಮ್ಮ ಸಂಗಾತಿ ಹಾಗು ಮಕ್ಕಳನ್ನು ಸಂಬಂಧಿಸಿದ ಕೆಲವು ಕರ್ತವ್ಯಗಳನ್ನು ನಿಭಾಯಿಸಬೇಕಾಗುತ್ತದೆ. ಉದಾಹರಣೆಗೆ, ಅವರಿಗೆ ಆರ್ಥಿಕ ಬೆಂಬಲ ನೀಡುವುದು.