ನಿವಾಸಿ ಭಾರತೀಯರಿಂದ ದತ್ತು ಪಡೆಯುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)

ನಿವಾಸಿ ಭಾರತೀಯರಾಗಿ ನೀವು ಭಾರತದೊಳಗೇ ದತ್ತು ಪಡೆಯಲು ಅರ್ಜಿ ಸಲ್ಲಿಸುವುದು ಸಾಮಾನ್ಯ. ನಿಮ್ಮ ದತ್ತು ಸ್ವೀಕೃತಿ ಅರ್ಜಿ ಕೆಳಗಿನ ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ:

ಹಂತ ೧: ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರದ ಜಾಲತಾಣದ ಮೇಲೆ ನೀವು ನಿಮ್ಮ ಹೆಸರನ್ನು ನೋಂದಾಯಿಸಬೇಕು. ಹೀಗೆ ಮಾಡಿದಾಗ ಆ ಜಾಲತಾಣ ನಿಮ್ಮನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಗೆ ಮರುನಿರ್ದೇಶಿಸುತ್ತದೆ. ಇಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಉದ್ಯೋಗ ಮಾಹಿತಿ, ಇತ್ಯಾದಿಗಳನ್ನು ಕೊಡಬೇಕು.

ಹಂತ ೨: ನೋಂದಣಿಯ ನಂತರ ಕೆಲವು ಮುಖ್ಯ ದಾಖಲೆಗಳನ್ನು ನೀವು ಸಲ್ಲಿಸಬೇಕಾಗುತ್ತದೆ. ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಯಲಿ ಇಲ್ಲಿ ಕ್ಲಿಕ್ಕಿಸಿ. ನಿಮ್ಮ ಅರ್ಜಿಯ ನಂತರ, ನಿಮಗೆ ಸ್ವೀಕೃತಿಪತ್ರ ಸಿಗುತ್ತದೆ.

ಹಂತ ೩: ನಿಮ್ಮ ಅರ್ಜಿಯನ್ನು ಸಮಂಜಸ ಮಾಹಿತಿ ಮತ್ತು ದಾಖಲೆಗಳಿಂದ ಸಲ್ಲಿಸಿದ ಮೇಲೆ, ಸ್ವೀಕೃತಿಪತ್ರದ ಮೇಲಿನ ನೋಂದಣಿ ಸಂಖ್ಯೆಯ ಸಹಾಯದಿಂದ ನಿಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

ಹಂತ ೪: ನೀವು ಮಗುವನ್ನು ದತ್ತು ಪಡೆಯಲು ಅರ್ಹರಿದ್ದೀರೋ ಇಲ್ಲವೋ ಎಂದು ಕಂಡು ಹಿಡಿಯಲು, ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರ ಅಥವಾ ವಿಶೇಷ ದತ್ತು ಸ್ವೀಕಾರ ಸಂಸ್ಥೆ ನಿಮ್ಮ ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತದೆ.

ಹಂತ ೫: ನಿಮ್ಮ ಅರ್ಜಿ ಸ್ವೀಕಾರಗೊಳ್ಳಬಹುದು, ಅಥವಾ ತಿರಸ್ಕಾರಗೊಳ್ಳಬಹುದು. ಒಂದು ವೇಳೆ ತಿರಸ್ಕಾರಗೊಂಡಲ್ಲಿ, ಕಾರಣಗಳನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದಲ್ಲಿ ಕೊಡಲಾಗುವುದು, ಮತ್ತು ಇವುಗಳ ವಿರುದ್ಧ ನೀವು ಮಕ್ಕಳ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬಹುದಾಗಿದೆ.

ಹಂತ ೬: ನಿಮ್ಮ ಅರ್ಜಿ ಸ್ವೀಕಾರಗೊಂಡಲ್ಲಿ, ನಿಮ್ಮ ವರಿಷ್ಟತೆಯ ಅನುಗುಣವಾಗಿ, ದತ್ತು ಸ್ವೀಕಾರ ಸಂಸ್ಥೆಯು, “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದ ಮೂಲಕ ನಿಮಗೆ ೩ ಮಕ್ಕಳ ನಡುವೆ ಆಯ್ಕೆ ಮಾಡಲು ಅನುಮತಿ ನೀಡುತ್ತದೆ. ನೀವು ಇವರಲ್ಲಿ ಒಂದು ಮಗುವನ್ನು ೪೮ ಗಂಟೆಗಳಲ್ಲಿ ದತ್ತು ತೆಗೆದುಕೊಳ್ಳಲು ಮೀಸಲಿಡಬಹುದು. ಇದರ ನಂತರ ನಿಮ್ಮ ಮತ್ತು ಮಗುವಿನ ಹೊಂದಾಣಿಕೆಯ ಸೂಕ್ತತೆಯನ್ನು ಕಂಡುಹಿಡಿಯಲು ಮೀಟಿಂಗ್ ನಡೆಸಲಾಗುತ್ತದೆ. ಈ ಪ್ರಕ್ರಿಯೆ ೨೦ ದಿನಗಳ ವರೆಗೆ ನಡೆಯುತ್ತದೆ. ಒಂದು ವೇಳೆ ನೀವು ಮಗುವನ್ನು ಒಪ್ಪಿಕೊಳ್ಳದಿದ್ದರೆ, ನಿಮ್ಮ ಹೆಸರನ್ನು ವರಿಷ್ಠತಾ ಪಟ್ಟಿಯ ಕೊನೆಯಲ್ಲಿ ಸೇರಿಸಲಾಗುತ್ತದೆ.

ಹಂತ ೭: ಮಗುವನ್ನು ಆರಿಸಿಕೊಂಡ ೧೦ ದಿನಗಳೊಳಗೆ ದತ್ತು ಸ್ವೀಕೃತೀ-ಪೂರ್ವ ಅನಾಥಾಲಯಕ್ಕೆ ಮಗುವನ್ನು ಕರೆದೊಯ್ಯಬೇಕು – ಈಗ ನೀವು ಮಗುವಿನ ಸಾಕು ತಂದೆ/ತಾಯಿ ಆಗಿರುತ್ತೀರಿ. ದತ್ತು ಸ್ವೀಕೃತಿ ಮಂಜೂರಾತಿ ಆದೇಶ ನ್ಯಾಯಾಲಯದಿಂದ ಬರುವತನಕ ಈ ಪ್ರಕ್ರಿಯೆ ನಡೆಯುತ್ತದೆ. ಮಗುವನ್ನು ನಿಮ್ಮ ಜೊತೆ ಕರೆದೊಯ್ಯುವ ಮುನ್ನ ಈ ಧೃಢೀಕರಣ ಪಾತ್ರಕ್ಕೆ ಸಹಿ ಹಾಕಬೇಕು.

ಹಂತ ೮: ವಿಶೇಷ ದತ್ತು ಸ್ವೀಕಾರ ಸಂಸ್ಥೆ ಅಥವಾ ಇನ್ನಿತರ ಸಮಂಜಸ ಸಂಸ್ಥೆ ದತ್ತು ಸ್ವೀಕೃತಿ ಆದೇಶಕ್ಕೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುತ್ತದೆ. ನಿಮ್ಮ ಊರಲ್ಲಿ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಇಲ್ಲದಿದ್ದಲ್ಲಿ ಇನ್ನಿತರ ಸಮಾಜಸ ಸಂಸ್ಥೆ ಈ ಕೆಲಸವನ್ನು ಮಾಡುತ್ತದೆ. ಇದಕ್ಕೆ ಸಂಬಂಧಪಟ್ಟ ನ್ಯಾಯಾಲಯದ ಪ್ರಕ್ರಿಯೆ ಖಾಸಗಿಯಾಗಿ ನಡೆದು ನಿಮ್ಮ ಅರ್ಜಿ ಸಲ್ಲಿಸಿದ ದಿಂಡದಿಂದ ೨ ತಿಂಗಳುಗಳ ಒಳಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ತದನಂತರ, ೩ ಕೆಲಸದ ದಿನಗಳೊಳಗೆ ವಿಶೇಷ ದತ್ತು ಸ್ವೀಕಾರ ಸಂಸ್ಥೆಯು ನಿಮ್ಮ ಹೆಸರಿನ ಜೊತೆ, ಮಗುವಿನ ಹುಟ್ಟು ಪ್ರಮಾಣಪತ್ರವನ್ನು ಪಡೆಯುತ್ತದೆ.

ಹಂತ ೯: ಮನೆ ಭೇಟಿ ನೀಡಿ ಅಧ್ಯಯನ ನಡೆಸಿದ ವಿಶೇಷ ದತ್ತು ಸ್ವೀಕಾರ ಸಂಸ್ಥೆಯು, ಮಗುವನ್ನು ದತ್ತು ಕೊಟ್ಟ ನಂತರವೂ ಅರ್ಧ ವಾರ್ಷಿಕವಾಗಿ ೨ ವರ್ಷಗಳ ವರೆಗೆ ದತ್ತು ಸ್ವೀಕೃತಿಯ ಪ್ರಕ್ರಿಯೆ ಮತ್ತು ಪರಿಣಾಮಗಳನ್ನು ದಾಖಲಿಸುತ್ತದೆ. ಏನಾದರೂ ಸಮಸ್ಯೆಗಳು ಎದುರಾದಲ್ಲಿ ಸಮಾಲೋಚನೆ ನೀಡಲಾಗುತ್ತದೆ. ದತ್ತು ಸ್ವೀಕೃತಿಯ ನಂತರ ತೊಂದರೆಗಳು ಉಂಟಾದಲ್ಲೂ ದತ್ತು ಸ್ವೀಕೃತಿಯನ್ನು ರದ್ದು ಗೊಳಿಸಿ, ಮಗುವನ್ನು ಪುನಃ ಇನ್ನೋರ್ವ ಭಾವೀ ದತ್ತು ತಂದೆ-ತಾಯಂದಿರಿಗೆ ದತ್ತು ಕೊಡಲು ಯೋಗ್ಯವೆಂದು ಘೋಷಿಸಲಾಗುತ್ತದೆ.

ಭಾರತೀಯ ನಾಗರಿಕರಿಂದ ವಿದೇಶಿ ಮಗುವಿನ ದತ್ತು ಸ್ವೀಕಾರ (ಧಾರ್ಮಿಕೇತರ ಕಾನೂನು):

ನೀವು ಭಾರತೀಯ ನಾಗರಿಕರಾಗಿ ವಿದೇಶಿ ಮಗುವನ್ನು ದತ್ತು ಪಡೆಯಬೇಕಾದಲ್ಲಿ, ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ ೧: ಮಗುವಿನ ದತ್ತು ಪಡೆಯಲು, ಸಂಬಂಧಪಟ್ಟ ದೇಶದ ಕಾನೂನಾತ್ಮಕ ಔಪಚಾರಿಕತೆಗಳು ಆ ದೇಶದಲ್ಲಿ ನಡೆಯುತ್ತವೆ.

ಹಂತ ೨: ಆ ದೇಶದ ಕಾನೂನಿಗೆ ಸಂಬಂಧಿಸಿದಂತೆ, ಸೂಕ್ತ ಅಧಿಕಾರಿಗಳು ಬೇಕಾದ ದಾಖಲೆಗಳು (ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿ) ಮತ್ತು ಕೆಳಗಿನ ವರದಿಗಳು ಸಿಕ್ಕಾಗ ಮಾತ್ರ ದತ್ತು ಕೊಡುವ ಅನುಮತಿ ನೀಡುತ್ತಾರೆ:

  • ಮನೆ ಅಧ್ಯಯನ ವರದಿ
  • ಮಗು ಅಧ್ಯಯನ ವರದಿ
  • ಮಗುವಿನ ವೈದ್ಯಕೀಯ ತಪಾಸಣೆ ವರದಿ

ಹಂತ ೩: ಭಾರತೀಯ ನಾಗರಿಕರಿಂದ ದತ್ತು ಪಡೆದ, ವಿದೇಶಿ ಪಾಸ್ಪೋರ್ಟ್ ಹೊಂದಿದ ವಿದೇಶಿ ಮಗುವಿಗೆ, ಭಾರತಕ್ಕೆ ಬರಲು ವೀಸಾ ಬೇಕಾಗುತ್ತದೆ. ಈ ವೀಸಾವನ್ನು ಪಡೆಯಲು ಸಂಬಂಧಪಟ್ಟ ದೇಶದಲ್ಲಿನ ಭಾರತೀಯ ಎಂಬೆಸಿಯನ್ನು ಸಂಪರ್ಕಿಸಿ.

ಹಂತ ೪: ದತ್ತು ಪಡೆದ ಮಗುವಿನ ಇಮಿಗ್ರೇಷನ್/ವಲಸೆ ತೆರವು, ಸಂಬಂಧಿತ ದೇಶದಲ್ಲಿನ ಭಾರತೀಯ ರಾಜತಾಂತ್ರಿಕ ಮಿಷನ್ ಮೂಲಕ, ಕೇಂದ್ರೀಯ ಸರ್ಕಾರದ ವಿದೇಶಿಗರ ವಿಭಾಗ, ಗೃಹ ಸಚಿವಾಲಯದಿಂದ ಬರುತ್ತದೆ.

ನೆಂಟರಿಂದ ದತ್ತು ಪಡೆಯುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)

ನೀವು ಮಗುವಿನ ನೆಂಟರಾಗಿ, ಮಗುವನ್ನು ದತ್ತು ಪಡೆಯಬೇಕೆಂದಲ್ಲಿ, ಭಾರತದಲ್ಲಿಯೇ ಅಥವಾ ಅಂತರ್-ದೇಶಿಯ ದತ್ತು ಕೂಡ ಪಡೆಯಬಹುದಾಗಿದೆ.

ಭಾರತದಲ್ಲಿಯೇ ದತ್ತು ಪಡೆಯುವುದು:

ಮಗುವಿನ ನೆಂಟರು ಭಾರತದಲ್ಲಿಯೇ ದತ್ತು ಪಡೆಯಬೇಕಾದಲ್ಲಿ ಕೆಳಗಿನ ಪ್ರಕ್ರಿಯೆ ಅನುಸರಿಸಬೇಕು:

ಹಂತ ೧: ನೀವು ಮಗುವನ್ನು ದತ್ತು ಪಡೆಯಬಹುದೋ ಇಲ್ಲವೋ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು. ನೀವು ಕೆಳಗಿನಂತೆ ಮಗುವಿನ ಜೊತೆ ನೆಂಟಸ್ಥಿಕೆ ಹೊಂದಿರಬೇಕು:

  • ನೀವು ಮಗುವಿನ ತಂದೆಯ ಸಹೋದರ/ಸಹೋದರಿಯಾಗಿರಬೇಕು
  • ನೀವು ಮಗುವಿನ ತಾಯಿಯ ಸಹೋದರ/ಸಹೋದರಿಯಾಗಿರಬೇಕು
  • ನೀವು ಮಗುವಿನ ತಂದೆಯ ತಂದೆ/ತಾಯಿಯಾಗಿರಬೇಕು
  • ನೀವು ಮಗುವಿನ ತಾಯಿಯ ತಂದೆ/ತಾಯಿಯಾಗಿರಬೇಕು

ಹಾಗು, ನೀವು ನಿವಾಸಿ ಭಾರತೀಯರು, ಅನಿವಾಸಿ ಭಾರತೀಯರು, ಅಥವಾ ಕನಿಷ್ಟ ೧ ವರ್ಷದ ಕಾಲ ಭಾರತದಲ್ಲಿ ವಾಸವಾಗಿದ್ದ ಸಾಗರೋತ್ತರ ಭಾರತೀಯ ನಾಗರೀಕರಾಗಿರಬೇಕು.

ಹಂತ ೨: ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರದ ಜಾಲತಾಣದ ಮೇಲೆ ನೀವು ನಿಮ್ಮ ಹೆಸರನ್ನು ನೋಂದಾಯಿಸಬೇಕು. ಹೀಗೆ ಮಾಡಿದಾಗ ಆ ಜಾಲತಾಣ ನಿಮ್ಮನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಗೆ ಮರುನಿರ್ದೇಶಿಸುತ್ತದೆ. ಇಲ್ಲಿ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು:

  • ನಿವಾಸದ ಪುರ್ವಾವೆ
  • ಮಗು ೫ ವರ್ಷದ ಮೇಲಿದ್ದಲ್ಲಿ ಅದರ ಒಪ್ಪಿಗೆ
  • ಜೈವಿಕ ತಂದೆ-ತಾಯಿಯರ ಒಪ್ಪಿಗೆ, ಅಥವಾ ಮಗುವಿನ ಪಾಲಕರು/ಪೋಷಕರಿಗೆ ಮಗುವನ್ನು ದತ್ತು ಸ್ವೀಕೃತಿಗಾಗಿ ಬಿಟ್ಟುಕೊಡಬಹುದೆಂದು ಮಕ್ಕಳ ಕಲ್ಯಾಣ ಸಮಿತಿಯಿಂದ ಸಿಕ್ಕ ಅನುಮತಿ
  • ನ್ಯಾಯಾಲಯದಿಂದ ಸಿಕ್ಕ ದತ್ತು ಸ್ವೀಕೃತಿ ಆದೇಶ
  • ನೀವು ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧವನ್ನು ಧೃಢೀಕರಿಸುವ ಶಪಥಪತ್ರ, ಮತ್ತು ನಿಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸೂಚಿಸುವ ಶಪಥಪತ್ರ

ಹಂತ ೩: ಇದಾದಮೇಲೆ, ಸಂಬಂಧಪಟ್ಟ ನ್ಯಾಯಾಲಯಕ್ಕೆ ನೀವು ದತ್ತು ಸ್ವೀಕೃತಿ ಅರ್ಜಿಯನ್ನು ಸಲ್ಲಿಸಬೇಕು. ನ್ಯಾಯಾಲಯದ ಆದೇಶ ಸಿಕ್ಕ ಮೇಲೆ ಅದನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದ ಮೇಲೆ ಅಪ್ಲೋಡ್ ಮಾಡಬೇಕು. ಅಂತರ್-ರಾಷ್ಟ್ರೀಯ ದತ್ತು ಸ್ವೀಕೃತಿ:

ಮಗುವಿನ ನೆಂಟರು ಅಂತರ್-ರಾಷ್ಟ್ರೀಯ ದತ್ತು ಸ್ವೀಕಾರ ಮಾಡಲು ಕೆಳಗಿನ ಪ್ರಕ್ರಿಯೆ ಪಾಲಿಸಬೇಕು:

ಹಂತ ೧: ನೀವು ಮಗುವನ್ನು ದತ್ತು ಪಡೆಯಬಹುದೋ ಇಲ್ಲವೋ ಎಂಬುದನ್ನು ನಿಗದಿಪಡಿಸಿಕೊಳ್ಳಬೇಕು. ನೀವು ಸಾಗರೋತ್ತರ ಭಾರತೀಯ ನಾಗರಿಕರು ಅಥವಾ ಅನಿವಾಸಿ ಭಾರತೀಯರು ಇದ್ದಲ್ಲಿ ನಿಮ್ಮ ನೆಂಟರ ಮಗುವನ್ನು ದತ್ತು ಪಡೆಯಬಹುದಾಗಿದೆ.

ಹಂತ ೨: ನೀವು ವಾಸವಾಗಿದ್ದ ದೇಶದಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಭೇಟಿ ನೀಡಬೇಕು. ಉದಾಹರಣೆಗೆ, ಅಧಿಕೃತ ವಿದೇಶಿ ದತ್ತು ಸ್ವೀಕೃತಿ ಸಂಸ್ಥೆ, ಅಥವಾ ಇನ್ನಿತರ ಕೇಂದ್ರೀಯ ಅಧಿಕಾರ. ನಿಮ್ಮ ನಿವಾಸದ ದೇಶದಲ್ಲಿ ಒಂದುವೇಳೆ ಈ ಎರಡೂ ಸಂಸ್ಥೆಗಳು ಇಲ್ಲದಿದ್ದರೆ, ಸಂಬಂಧಪಟ್ಟ ಸರ್ಕಾರಿ ವಿಭಾಗಕ್ಕೆ, ಅಥವಾ ಭಾರತೀಯ ರಾಜತಾಂತ್ರಿಕ ಮಿಷನ್ ಗೆ ನೀವು ಹೋಗಬಹುದು. ಅವರು ನಡೆಸಬೇಕಾದ ಮನೆ ಅಧ್ಯಯನ ಮತ್ತು ನೋಂದಣಿ ಪ್ರಕ್ರಿಯೆಯ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ.

ಹಂತ ೩: ಬೇಕಾದ ದಾಖಲೆಗಳನ್ನೆಲ್ಲ ನೀವು ಸಲ್ಲಿಸಬೇಕು. ನೀವು ಸಂಪರ್ಕಿಸಿದ ಸಂಸ್ಥೆಗೆ ಇದರ ಬಗ್ಗೆ ಹೆಚ್ಚು ಮಾಹಿತಿ ಕೇಳಿ.

ಹಂತ ೪: ನಿಮ್ಮ ಎಲ್ಲ ದಾಖಲೆಗಳನ್ನು ಸಲ್ಲಿಸಿದಾಗ ನಿಮ್ಮ ಅರ್ಜಿಯನ್ನು, ಕೌಟುಂಬಿಕ ಹಿನ್ನೆಲೆಯ ವರದಿಯನ್ನು ತಯಾರಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕಳಿಸಲಾಗುತ್ತದೆ. ಇದಕ್ಕೆ ಶುಲ್ಕವಿರಬಹುದು. ಈ ವರದಿಯನ್ನು ನೀವು ನೆಲೆಸಿದ್ದ ದೇಶದ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಿಸಲಾಗುತ್ತದೆ.

ಹಂತ ೫: ಮಗು ನೆಲೆಸಿದ್ದ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ನಿಮ್ಮ ದತ್ತು ಸ್ವೀಕೃತಿಯ ಅರ್ಜಿ ಮತ್ತು ಮಗುವಿನ ಜೈವಿಕ ತಂದೆ-ತಾಯಿಯರೇ ಒಪ್ಪಿಗೆ ಪತ್ರವನ್ನು, ಕೆಳಗಿನ ದಾಖಲೆಗಳೊಂದಿಗೆ ಸಲ್ಲಿಸಬೇಕು:

  • ಮಗು ೫ ವರ್ಷದ ಮೇಲಿರುವಾಗ ಅದರ ಒಪ್ಪಿಗೆ
  • ನೀವು ವಾಸಿಸುವ ದೇಶದ ಅನುಮತಿ
  • ಮಗುವಿನೊಂದಿಗೆ ನಿಮ್ಮ ನೆಂಟಸ್ಥಿಕೆ (ವಂಶ ವೃಕ್ಷ)
  • ನೀವು, ಮಗು, ಮತ್ತು ಮಗುವಿನ ಜೈವಿಕ ತಂದೆ-ತಾಯಿಯರು ಇರುವ ಇತ್ತೀಚಿನ ಭಾವಚಿತ್ರ
  • ಜೈವಿಕ ತಂದೆ-ತಾಯಿಯರ ಒಪ್ಪಿಗೆ, ಅಥವಾ ಮಗುವಿನ ಪಾಲಕರು/ಪೋಷಕರಿಗೆ ಮಗುವನ್ನು ದತ್ತು ಸ್ವೀಕೃತಿಗಾಗಿ ಬಿಟ್ಟುಕೊಡಬಹುದೆಂದು ಮಕ್ಕಳ ಕಲ್ಯಾಣ ಸಮಿತಿಯಿಂದ ಸಿಕ್ಕ ಅನುಮತಿ
  • ಕೌಟುಂಬಿಕ ಹಿನ್ನೆಲೆ ವರದಿ

ಇದಾದಮೇಲೆ ದತ್ತು ಸ್ವೀಕೃತಿ ಆದೇಶದ ಪ್ರಮಾಣೀಕರಿಸಲಾದ ಪ್ರತಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸಲ್ಲಿಸಬೇಕು.

ಮಲ ತಂದೆ-ತಾಯಂದಿರಿಂದ ದತ್ತು ಸ್ವೀಕೃತಿಯ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)

ನೀವು ಮಗುವಿನ ಮಲ ತಂದೆ/ತಾಯಿಯಾಗಿ ದತ್ತು ಪಡೆಯಬೇಕಾದಲ್ಲಿ ಕೆಳಗಿನ ಪ್ರಕ್ರಿಯೆಯನ್ನು ಪಾಲಿಸಿ:

ಹಂತ ೧: ನೀವು ಮತ್ತು ನಿಮ್ಮ ಸಂಗಾತಿ (ಮಗುವಿನ ಜೈವಿಕ ತಂದೆ/ತಾಯಿ) ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರದ ಜಾಲತಾಣದಲ್ಲಿ ನಿಮ್ಮ ಹೆಸರುಗಳನ್ನೂ ನೋಂದಾಯಿಸಬೇಕು. ಹೀಗೆ ಮಾಡಿದಾಗ ಆ ಜಾಲತಾಣ ನಿಮ್ಮನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಗೆ ಮರುನಿರ್ದೇಶಿಸುತ್ತದೆ. ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳು, ಉದ್ಯೋಗ ವಿವರಗಳು, ಇತ್ಯಾದಿಗಳನ್ನು ನೀಡಬೇಕು.

ಹಂತ ೨: ಕೆಳಗಿನ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು:

  • ನಿಮ್ಮ ಮತ್ತು ನಿಮ್ಮ ಸಂಗಾತಿಯ ನಿವಾಸ ಸ್ಥಾನದ ಪುರಾವೆ
  • ನೀವು ಮತ್ತು ನಿಮ್ಮ ಸಂಗಾತಿಯು ಕಾನೂನುಬದ್ಧವಾಗಿ ಮದುವೆಯಾದ ದಂಪತಿಗಳೆಂದು ಸೂಚಿಸುವ ಪುರಾವೆ
  • ಜೈವಿಕ ತಂದೆ/ತಾಯಿ ಮರಣಗೊಂಡಲ್ಲಿ ಅವರ ಮರಣ ಪ್ರಮಾಣಪತ್ರ
  • ಮಗುವಿನ, ಅದರ ಜೈವಿಕ ತಂದೆ/ತಾಯಿಯರ, ದತ್ತು ತೆಗೆದುಕೊಳ್ಳುವ ಸಂಗಾತಿಯ, ಮತ್ತು ಸಾಕ್ಷಿದಾರರ ಧೃಡೀಕರಿಸಲಾದ ಭಾವಚಿತ್ರಗಳು
  • ಮಕ್ಕಳ ಕಲ್ಯಾಣ ಸಮಿತಿ ನಿಮಗೆ ದತ್ತು ಸ್ವೀಕೃತಿಯ ಅನುಮತಿ ನೀಡಿದ ಪುರಾವೆ ೬. ನ್ಯಾಯಾಲಯದಿಂದ ಸಿಕ್ಕ ದತ್ತು ಸ್ವೀಕೃತಿ ಆದೇಶ

ಹಂತ ೩: ಮಕ್ಕಳ ಕಲ್ಯಾಣ ಸಮಿತಿಯಿಂದ ನಿಮಗೆ ದತ್ತು ಸ್ವೀಕೃತಿ ಮಾಡಲು ಅನುಮತಿ ಸಿಕ್ಕಿರಬೇಕು. ಸಮಂಜಸ ದಾಖಲೆಯನ್ನು, ನಿಮ್ಮ ಹಾಗು ನಿಮ್ಮ ಸಂಗಾತಿಯ ಒಪ್ಪಿಗೆಯ ಜೊತೆ ಸಲ್ಲಿಸಬೇಕು. ಒಂದು ವೇಳೆ ಇಬ್ಬರೂ ದಂಪತಿಗಳು ತಮ್ಮ ತಮ್ಮ ಮೊದಲಿನ ಮದುವೆಯಿಂದ ಹುಟ್ಟಿದ ಮಕ್ಕಳನ್ನು ದತ್ತು ಸ್ವೀಕೃತಿಯ ಸಲುವಾಗಿ ಬಿಟ್ಟುಕೊಡುವುದ್ದಿದ್ದಲ್ಲಿ, ಬೇರೆ-ಬೇರೆ ಒಪ್ಪಿಗೆ ಪತ್ರಗಳನ್ನು ಸಲ್ಲಿಸಬೇಕು.

ಹಂತ ೪: ನೀವು ಮತ್ತು ನಿಮ್ಮ ಸಂಗಾತಿ ಕುಟುಂಬ ನ್ಯಾಯಾಲಯ/ ಜಿಲ್ಲಾ ನ್ಯಾಯಾಲಯ/ನಗರ ನಾಗರಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಇದಾದ ಮೇಲೆ ದತ್ತು ಸ್ವೀಕೃತಿಯ ಪ್ರಮಾಣೀಕರಿಸಲಾದ ಆದೇಶಪತ್ರವನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದಲ್ಲಿ ಅಪ್ಲೋಡ್ ಮಾಡಬೇಕು.

ಸಾಗರೋತ್ತರ ಭಾರತೀಯ ನಾಗರಿಕರು, ಅನಿವಾಸಿ ಭಾರತೀಯರು, ಮತ್ತು ಪರದೇಶದಲ್ಲಿ ನೆಲೆಸಿದ ವಿದೇಶಿಯರಿಂದ ದತ್ತು ಸ್ವೀಕೃತಿ (ಧಾರ್ಮಿಕೇತರ ಕಾನೂನು)

ನೀವು ಸಾಗರೋತ್ತರ ಭಾರತೀಯ ನಾಗರಾಯಿಕರು, ಅನಿವಾಸಿ ಭಾರತೀಯರು, ಅಥವಾ ಪರದೇಶದಲ್ಲಿ ನೆಲೆಸಿದ ವಿದೇಶಿಯರು ಆಗಿದ್ದು ಭಾರತೀಯ ಮಗುವನ್ನು ದತ್ತು ಸ್ವೀಕೃತಿ ಮಾಡಬೇಕೆಂದಲ್ಲಿ ಕೆಳಗಿನ ಪ್ರಕ್ರಿಯೆಯನ್ನು ಪಾಲಿಸಿ:

ಹಂತ ೧: ನೀವು ವಾಸವಾಗಿದ್ದ ದೇಶದಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಭೇಟಿ ನೀಡಬೇಕು. ಉದಾಹರಣೆಗೆ, ಅಧಿಕೃತ ವಿದೇಶಿ ದತ್ತು ಸ್ವೀಕೃತಿ ಸಂಸ್ಥೆ, ಅಥವಾ ಇನ್ನಿತರ ಕೇಂದ್ರೀಯ ಅಧಿಕಾರ. ನಿಮ್ಮ ನಿವಾಸದ ದೇಶದಲ್ಲಿ ಒಂದುವೇಳೆ ಈ ಎರಡೂ ಸಂಸ್ಥೆಗಳು ಇಲ್ಲದಿದ್ದರೆ, ಸಂಬಂಧಪಟ್ಟ ಸರ್ಕಾರಿ ವಿಭಾಗಕ್ಕೆ, ಅಥವಾ ಭಾರತೀಯ ರಾಜತಾಂತ್ರಿಕ ಮಿಷನ್ ಗೆ ನೀವು ಹೋಗಬಹುದು. ಅವರು ನಡೆಸಬೇಕಾದ ಮನೆ ಅಧ್ಯಯನ ಮತ್ತು ನೋಂದಣಿ ಪ್ರಕ್ರಿಯೆಯ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ.

ಹಂತ ೨: ಬೇಕಾದ ದಾಖಲೆಗಳನ್ನೆಲ್ಲ ನೀವು ಸಲ್ಲಿಸಬೇಕು. ನೀವು ಸಂಪರ್ಕಿಸಿದ ಸಂಸ್ಥೆಗೆ ಇದರ ಬಗ್ಗೆ ಹೆಚ್ಚು ಮಾಹಿತಿ ಕೇಳಿ.

ಹಂತ ೩: ನಿಮಗೆ ೨ ಮಕ್ಕಳನ್ನು ಸೂಚಿಸಲಾಗುತ್ತದೆ, ಹಾಗು ನೀವು ೯೬ ಗಂಟೆಗಳೊಳಗೆ ಒಂದು ಮಗುವನ್ನು ದತ್ತು ಪಡೆಯಲು ಮೀಸಲಿಡಬಹುದು. ಹೀಗೆ ಮಾಡಿದಾಗ ಇನ್ನೊಂದು ಮಗುವಿನ ಹೆಸರು ಹಿಂತೆಗೆದುಕೊಳ್ಳಲಾಗುತ್ತದೆ. ನೀವು ಹೀಗೆ ಮಾಡಲು ವಿಫಲವಾದಾಗ ಇರಡೂ ಮಕ್ಕಳ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲಾಗುತ್ತದೆ. ಮಗುವನ್ನು ಮೀಸಲಿಟ್ಟ ಮೇಲೆ, ಮಗುವಿನ ಅಧ್ಯಯನ ವರದಿ, ಮತ್ತು ವೈದ್ಯಕೀಯ ತಪಾಸಣಾ ವರದಿಗಳಿಗೆ ಸಹಿ ಹಾಕಿ, ಮೀಸಲಿಟ್ಟು ೩೦ ದಿನಗಳ ಒಳಗೆ ಮಗುವನ್ನು ಒಪ್ಪಿಕೊಳ್ಳಬೇಕು. ನೀವು ಹೀಗೆ ಮಾಡಲು ವಿಫಲವಾದಲ್ಲಿ ನಿಮ್ಮ ಹೆಸರನ್ನು ವರಿಷ್ಠತ ಪಟ್ಟಿಯ ಕೊನೆಯಲ್ಲಿ ಸೇರಿಸಲಾಗುತ್ತದೆ, ಮತ್ತು ಮಗುವಿನ ಹೆಸರು ಹಿಂತೆಗೆದುಕೊಳ್ಳಲಾಗುತ್ತದೆ. ನೀವು ಮಗುವನ್ನು ಖುದ್ದಾಗಿ ಭೇಟಿ ನೀಡಿ, ಅದರ ವೈದ್ಯಕೀಯ ತಪಾಸಣಾ ವರದಿಯನ್ನು ವೈದ್ಯರಿಂದ ಪುನರಾವಲೋಕನ ಮಾಡಿಸಬಹುದು.

ಹಂತ ೪: ಮಗುವನ್ನು ದತ್ತಕ್ಕೆ ಕೊಡಲು ಯಾವುದೇ ಆಕ್ಷೇಪಣೆ ಇಲ್ಲವೆಂದು ಸಂಬಂಧಪಟ್ಟ ಅಧಿಕಾರಿಗಳಿಂದ ಸಿಕ್ಕ ಪ್ರಮಾಣಪತ್ರವನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದ ಮೇಲೆ ಅಪ್ಲೋಡ್ ಮಾಡಲಾಗುತ್ತದೆ.

ಹಂತ ೫: ನಿಮಗೆ ಆಕ್ಷೇಪಣೆ ಇಲ್ಲವೆಂಬುದರ ಪ್ರಮಾಣಪತ್ರ ಸಿಕ್ಕ ಮೇಲೆ, ಮತ್ತು ನ್ಯಾಯಾಲಯದಿಂದ ದತ್ತು ಸ್ವೀಕೃತಿಯ ಆದೇಶ ಸಿಗುವ ತನಕ, ದತ್ತು-ಪೂರ್ವ ಅನಾಥಾಲಯಕ್ಕೆ ಮಗುವನ್ನು ಕರೆದೊಯ್ಯಬೇಕಾಗುತ್ತದೆ. ಮಗು ನಿಮ್ಮ ಜೊತೆ ಶಾಶ್ವತವಾಗಿ ಇರಬಹುದು, ಮತ್ತು ಅದು ನಿಮ್ಮ ಸಂಪೂರ್ಣ ಜವಾಬ್ದಾರಿ ಎಂದು ಕೆಳಗಿನ ಪ್ರಕ್ರಿಯೆ ಆದ ಮೇಲೆ ಆದೇಶ ಹೊರಡಿಸಲಾಗುತ್ತದೆ:

  • ಮಗುವಿಗೆ ಪಾಸ್ಪೋರ್ಟ್ ಮತ್ತು ವೀಸಾ ಸಿಕ್ಕಾಗ
  • ನ್ಯಾಯಾಲಯದ ಆದೇಶ ಹೊರಡಿಸಿದಾಗ

ಹಂತ ೬: ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅರ್ಜಿ ಸಲ್ಲಿಸುತ್ತಾರೆ. ನ್ಯಾಯಾಲಯದ ಪ್ರಕ್ರಿಯೆ ಖಾಸಗಿಯಾಗಿ ನಡೆಸಿ, ನೀವು ದತ್ತು ಸ್ವೀಕೃತಿ ಅರ್ಜಿ ಸಲ್ಲಿಸಿದ ೨ ತಿಂಗಳುಗಳ ಒಳಗೆ ವಿಲೇವಾರಿ ಮಾಡಲಾಗುತ್ತದೆ.

ಹಂತ ೭: ನೀವು ಭಾರತಕ್ಕೆ ಬಂದು, ದತ್ತು ಸ್ವೀಕೃತಿ ಆದೇಶ ಹೊರಡಿಸಿದ ೨ ತಿಂಗಳುಗಳೊಳಗೆ ಮಗುವನ್ನು ಕರೆದೊಯ್ಯಬೇಕು. ಅದಾದ ಮೇಲೆ, ಕೆಳಗಿನ ಪ್ರಕ್ರಿಯೆ ನಡೆಯುತ್ತದೆ:

  • ನ್ಯಾಯಾಲಯದಿಂದ ಬಂದ ದತ್ತು ಸ್ವೀಕೃತಿ ಆದೇಶ ಸಿಕ್ಕು ೩ ಕೆಲಸದ ದಿನಗಳೊಳಗೆ ಸಮಂಜಸ ಅಧಿಕಾರಿಗಳಿಂದ ಅನುಸರಣೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
  • ಧೃಡಪಡಿಸಲಾದ ದತ್ತು ಸ್ವೀಕೃತಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವಲಸೆ ಅಧಿಕಾರಿಗಳಂತಹ ಬೇರೆ-ಬೇರೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುತ್ತಾರೆ.
  • ಅಧಿಕಾರಿಗಳು ಮಗುವಿಗೆ ಭಾರತೀಯ ಪಾಸ್ಪೋರ್ಟ್, ಹುಟ್ಟು ಪ್ರಮಾಣಪತ್ರ, ಮತ್ತು ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್ (ಬೇಕಾದಲ್ಲಿ) ಸಿಗಲು ಸಹಾಯ ಮಾಡುತ್ತಾರೆ.

ಹಂತ ೮: ದತ್ತು ಸ್ವೀಕೃತಿಯ ಪ್ರಗತಿಯನ್ನು ನಿರ್ಣಯಿಸಲು ಸಂಬಂಧಪಟ್ಟ ಅಧಿಕಾರಿಗಳು, ಅರ್ಧ ವಾರ್ಷಿಕವಾಗಿ ದತ್ತು ಸ್ವೀಕೃತಿಯಾದ ಮೇಲೆ ೨ ವರ್ಷಗಳ ಕಾಲ ಅಧ್ಯಯನ ನಡೆಸುತ್ತಾರೆ. ಏನಾದರೂ ಸಮಸ್ಯೆಗಳು ಎದುರಾದಲ್ಲಿ ಸಮಾಲೋಚನೆ ನೀಡಲಾಗುತ್ತದೆ. ದತ್ತು ಸ್ವೀಕೃತಿಯ ನಂತರ ತೊಂದರೆಗಳು ಉಂಟಾದಲ್ಲೂ ದತ್ತು ಸ್ವೀಕೃತಿಯನ್ನು ರದ್ದು ಗೊಳಿಸಿ, ಮಗುವನ್ನು ಪುನಃ ಇನ್ನೋರ್ವ ಭಾವೀ ದತ್ತು ತಂದೆ-ತಾಯಂದಿರಿಗೆ ದತ್ತು ಕೊಡಲು ಯೋಗ್ಯವೆಂದು ಘೋಷಿಸಲಾಗುತ್ತದೆ.

ಹಿಂದೂ ದತ್ತು ಸ್ವೀಕೃತಿಯ ಪ್ರಕ್ರಿಯೆ

ಹಿಂದೂ ದತ್ತು ಸ್ವೀಕೃತಿ ಕಾನೂನಿನಡಿಯಲ್ಲಿ ದತ್ತು ಪಡೆದುಕೊಳ್ಳಲು ನಿಗದಿತ ಪ್ರಕ್ರಿಯೆ ಇಲ್ಲ. ನೀವು ಯಾವುದೇ ನಿರ್ದೇಶನಗಳನ್ನು ಪಾಲಿಸುವಂತಿಲ್ಲ, ಆದರೆ ದತ್ತು ಪತ್ರವನ್ನು ಕಾರ್ಯಗತಗೊಳಿಸಬೇಕಾಗುತ್ತದೆ. ದತ್ತು ಪಾತ್ರದ ಬಗ್ಗೆ ಹೆಚ್ಚು ಮಾಹಿತಿಗೆ ನಿಮ್ಮ ವಕೀಲರನ್ನು ಸಂಪರ್ಕಿಸಿ.

ನೀವು ಪಾಲಕರು/ಪೋಷಕರು ಆಗಿದ್ದರೆ:

ಪಾಲಕರು/ಪೋಷಕರಿಗೆ ಮಗುವನ್ನು ದತ್ತಕ್ಕೆ ತೆಗೆದುಕೊಳ್ಳಲು/ಕೊಡಲು ನ್ಯಾಯಾಲಯದ ಅನುಮತಿ ಕೆಳಗಿನ ಸಂದರ್ಭಗಳಲ್ಲಿ ಬೇಕಾಗುತ್ತದೆ:

  • ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಸತ್ತುಹೋಗಿದ್ದರೆ
  • ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಸಂಪೂರ್ಣವಾಗಿ ಲೋಕವನ್ನು ತ್ಯಜಿಸಿದ್ದರೆ
  • ಮಗುವನ್ನು ತಂದೆ ಮತ್ತು ತಾಯಿ ಇಬ್ಬರೂ ತ್ಯಜಿಸಿದ್ದಾಗ
  • ಸಂಬಂಧಪಟ್ಟ ನ್ಯಾಯಾಲಯವು ತಂದೆ ಮತ್ತು ತಾಯಿ ಇಬ್ಬರನ್ನೂ ಮಾನಸಿಕವಾಗಿ ಅಸ್ವಸ್ಥರೆಂದು ಘೋಷಿಸಿದ್ದರೆ
  • ಮಗುವಿನ ತಂದೆ-ತಾಯಿ ಯಾರು ಎಂದು ಗೊತ್ತಿಲ್ಲದಿದ್ದಾಗ

 

ದತ್ತು ಸ್ವೀಕೃತಿ ಕಾನೂನಿನಡಿಯಲ್ಲಿ ಶಿಕ್ಷೆಗಳು

ನೀವು ಯಾವುದೇ ಕಾನೂನಿನಡಿಯಲ್ಲಿ ದತ್ತು ತೆಗೆದುಕೊಂಡಿರಲಿ, ಕೆಳಗಿನವುಗಳನ್ನು ಮಾಡಿದರೆ ನಿಮಗೆ ಶಿಕ್ಷೆಯಾಗುತ್ತದೆ:

೧. ಅಕ್ರಮವಾಗಿ ಮಗುವನ್ನು ಹೊರದೇಶಕ್ಕೆ ಕರೆದೊಯ್ಯುವುದು:

ನ್ಯಾಯಾಲಯದ ಮಾನ್ಯ ಆದೇಶವಿಲ್ಲದೆ ನೀವು ಮಗುವನ್ನು ನಿಮ್ಮ ಜೊತೆ ಅಥವಾ ಬೇರೆಯವರ ಜೊತೆ ಪರದೇಶಕ್ಕೆ ಕರೆದೊಯ್ದರೆ, ಅಥವಾ ಮಗುವನ್ನು ಬೇರೆ ದೇಶಕ್ಕೆ ಕಲಿಸಲು ವ್ಯವಸ್ಥೆಗಳನ್ನು ಮಾಡಿದರೆ, ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು.

೨. ಮಗುವನ್ನು ತ್ಯಜಿಸುವುದು/ ನಿರ್ಲಕ್ಷಿಸುವುದು/ ದೌರ್ಜನ್ಯಕ್ಕೆ ಬಲಿಮಾಡುವುದು:

  • -೧೨ ವರ್ಷಗಳೊಳಗಿನ ಮಗುವನ್ನು ನೀವು ಅದರ ಪೋಷಕರು/ಪಾಲಕರು/ತಂದೆ-ತಾಯಿಯಾಗಿ, ಉದ್ದೇಶಪೂರ್ವಕವಾಗಿ ನೀವು ತ್ಯಜಿಸಿದರೆ, ಗರಿಷ್ಟ ೭ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ದಂಡ ವಿಧಿಸಲಾಗುವುದು.
  • -ನೀವು ಮಗುವಿನ ತಂದೆ-ತಾಯಿ/ಪಾಲಕರು/ಪೋಷಕರಾಗಿ, ಆ ಮಗುವಿಗೆ ಅನಗತ್ಯವಾದ ಮಾನಸಿಕ ಅಥವಾ ದೈಹಿಕ ನೋವು ಉಂಟಾಗುವಂತೆ, ದಾಳಿ ಮಾಡುವುದು, ತ್ಯಜಿಸುವುದು, ದೌರ್ಜನ್ಯ ಎಸಗುವುದು, ಉದ್ದೇಶಪೂರ್ವಕವಾಗಿ ಮಗುವನ್ನು ನಿರ್ಲಕ್ಷಿಸುವುದು, ಇತ್ಯಾದಿ ಮಾಡಿದರೆ, ೩ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು. ಇಂತಹ ಕ್ರೌರ್ಯದಿಂದ ಆ ಮಗು ದೈಹಿಕವಾಗಿ ಅಶಕ್ತಗೊಂಡಲ್ಲಿ, ಅಥವಾ ಮಾನಸಿಕ ರೋಗದಿಂದ ಬಳಲುತ್ತಿದ್ದಲ್ಲಿ, ಅಥವಾ ಜೀವನದ ಸಾಮಾನ್ಯ ಕಾರ್ಯಗಳನ್ನು ಮಾಡಲು ಆಗಲಾರದಂತೆ ಆದರೆ ನಿಮಗೆ ೩-೧೦ ವರ್ಷಗಳ ಸೆರೆಮನೆ ವಾಸ ಮತ್ತು ೫ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು.

ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನಡಿಯಲ್ಲಿ ಕೆಳಗಿನ ದುಷ್ಕೃತ್ಯಗಳನ್ನು ಮಾಡಿದರೆ ಉಲ್ಲೇಖಿಸಲಾದ ದಂಡ ವಿಧಿಸಲಾಗುವುದು:

-ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿ ನೀವು ಯಾವುದೇ ಅನಾಥ/ತ್ಯಜಿಸಲಾದ/ಬಿಟ್ಟುಕೊಟ್ಟ ಮಗುವನ್ನು ದತ್ತಕ್ಕೆ ತೆಗೆದುಕೊಂಡರೆ/ಕೊಟ್ಟರೆ, ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು. ಪ್ರಮಾಣೀಕೃತ ದತ್ತು ಸ್ವೀಕೃತಿ ಸಂಸ್ಥೆಯು ಈ ಅಪರಾಧವನ್ನು ಮಾಡಿದರೆ, ಮೇಲೆ ಉಲ್ಲೇಖಿಸಿದ ದಂಡಗಳನ್ನು ಸೇರಿದಂತೆ, ಆ ಸಂಸ್ಥೆಯ ನೋಂದಣಿ ಮತ್ತು ಮಾನ್ಯತೆಯನ್ನು ಕನಿಷ್ಟ ೧ ವರ್ಷದ ವರೆಗೆ ಹಿಂತೆಗೆದುಕೊಳ್ಳಲಾಗುತ್ತದೆ.

ಹಿಂದೂ ದತ್ತು ಸ್ವೀಕಾರ ಕಾನೂನಿನಡಿ ಕೆಳಗಿನ ಅಪರಾಧಗಳನ್ನು ಮಾಡಿದರೆ ನಿಮಗೆ ದಂಡ ವಿಧಿಸಲಾಗುವುದು:

-ದತ್ತು ಸ್ವೀಕೃತಿಯ ಸಲುವಾಗಿ ಹಣದ ಪಾವತಿ, ಅಥವಾ ಇನ್ನಿತರ ಬಹುಮಾನವನ್ನು ಕೊಡುವುದು/ತೆಗೆದುಕೊಳ್ಳುವುದು ಮಾಡಿದರೆ, ರಾಜ್ಯ ಸರ್ಕಾರದ ಅನುಮತಿಯ ಮೇರೆಗೆ, ಗರಿಷ್ಟ ೬ ತಿಂಗಳುಗಳ ಸೆರೆಮನೆ ವಾಸ ಮತ್ತು/ಅಥವಾ ದಂಡ ವಿಧಿಸಲಾಗುವುದು.

ಸಹಾಯ ಮತ್ತು ಸಹಕಾರ

ನಿಮಗೆ ದತ್ತು ಸ್ವೀಕೃತಿಯ ಸಂಬಂಧಪಟ್ಟಂತೆ ಯಾವುದೇ ಸಹಾಯ, ಸಹಕಾರ ಬೇಕಾಗಿದ್ದಲ್ಲಿ, ಅಥವಾ ಯಾವುದೇ ಸಮಸ್ಯೆಗೆ ಪರಿಹಾರ ಬೇಕಿದ್ದಲ್ಲಿ, ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಿ:

ಮಕ್ಕಳ ದತ್ತು ಸ್ವೀಕಾರ ಸಂಪನ್ಮೂಲ ಅಧಿಕಾರ: ಈ ಸಂಸ್ಥೆಯು ಅದರ ಸಂಬಂಧಿಸಿದ ಮತ್ತು ಅಧಿಕೃತ ದತ್ತು ಸ್ವೀಕೃತಿ ಸಂಸ್ಥೆಗಳ ತರಫಿನಿಂದ ಅನಾಥ, ತ್ಯಜಿಸಲಾದ, ಮತ್ತು ಬಿಟ್ಟುಕೊಡಲಾದ ಮಕ್ಕಳ ಧಾರ್ಮಿಕೇತರ ದತ್ತು ಸ್ವೀಕಾರವನ್ನು ನಿರ್ವಹಿಸುತ್ತದೆ.

  • ಸಂಸ್ಥೆಯ ಸಹಾಯವಾಣಿ ೧೮೦೦-೧೧-೧೩೧೧ಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ೯ರಿಂದ ಸಂಜೆ ೫.೩೦ರವರೆಗೆ ನೀವು ಕರೆ ಮಾಡಬಹುದು.
  • ಸಂಸ್ಥೆಯ ಇಮೇಲ್ ವಿಳಾಸ: carahdesk.wdc@nic.in

ನ್ಯಾಯಾಲಯಗಳ ಪಾತ್ರ

ದತ್ತು ಸ್ವೀಕೃತಿಯ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳು ಮಹತ್ತರ ಪಾತ್ರ ನಿಭಾಯಿಸುತ್ತವೆ. ಈ ಪಾತ್ರಗಳು ಕೆಳಗಿನಂತಿವೆ:

ದತ್ತು ಸ್ವೀಕಾರದ ಆದೇಶ (ಧಾರ್ಮಿಕೇತರ ಕಾನೂನು):

ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನಡಿಯಲ್ಲಿ ವಿಶೇಷ ದತ್ತು ಸ್ವೀಕಾರ ಸಂಸ್ಥೆಗಳು ನ್ಯಾಯಾಲಯಕ್ಕೆ ಸಂಬಂಧಪಟ್ಟ ದಾಖಲೆಗಳ ಜೊತೆ ದತ್ತು ಸ್ವೀಕಾರದ ಅರ್ಜಿ ಸಲ್ಲಿಸುತ್ತವೆ. ನ್ಯಾಯಾಲಯವು ದತ್ತು ಸ್ವೀಕಾರದ ಆದೇಶ ನೀಡಬೇಕೋ ಬೇಡವೋ ಎಂದು ಈ ದಾಖಲೆಗಳನ್ನು ಪರಿಶೀಲಿಸಿ ನಿರ್ಧರಿಸುತ್ತದೆ. ಇಂತಹ ಅರ್ಜಿ ಕೆಳಗಿನ ದಾಖಲೆಗಳನ್ನು ಹೊಂದಿರುತ್ತದೆ:

  • ವಿಶೇಷ ದತ್ತು ಸ್ವೀಕಾರ ಸಂಸ್ಥೆ ಮತ್ತು ಸಹ ಅರ್ಜಿದಾರರ (ಉದಾಹರಣೆಗೆ, ಮಕ್ಕಳ ಆರೈಕೆ ಸಂಸ್ಥೆಗಳು) ವಿವರಗಳು
  • ಭಾವೀ ದತ್ತು ತಂದೆ-ತಾಯಿಯರ ವಿವರಗಳು – ಹೆಸರು, ಮಗುವಿನ ದತ್ತು ಸ್ವೀಕಾರ ಸಂಪನ್ಮೂಲ ವಿವರಗಳು, ಮತ್ತು ಮಾರ್ಗದರ್ಶನ ವ್ಯವಸ್ಥೆ ನೋಂದಣಿ ಸಂಖ್ಯೆ.
  • ದತ್ತು ಪಡೆಯಬೇಕಾದ ಮಗುವಿನ ವಿವರಗಳು
  • ಮಗು ಕಾನೂನುಬದ್ಧವಾಗಿ ದತ್ತಕ್ಕೆ ಕೊಡಲು ಯೋಗ್ಯವಿದೆ ಎಂದು ಪ್ರಮಾಣೀಕರಿಸಲಾದ ಪುರಾವೆ
  • ವಿಶೇಷ ದತ್ತು ಸ್ವೀಕಾರ ಸಂಸ್ಥೆಗಳು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತರಿಂದ ಮನೆ ಭೇಟಿ ನೀಡುವುದಕ್ಕೆ ಅನುಮತಿ ನೀಡುವಂತೆ ಭಾವೀ ದತ್ತು ತಂದೆ-ತಾಯಿಯರು ಸಹಿ ಮಾಡಿದ ದತ್ತು-ಪೂರ್ವ ಅನಾಥಾಲಯದ ಶಪಥಪತ್ರ
  • ದತ್ತು ಸ್ವೀಕೃತಿ ಸಮಿತಿಯ ನಿರ್ಣಯದ ಪ್ರತಿ

ಈ ದತ್ತು ಸ್ವೀಕೃತಿ ಆದೇಶವನ್ನು ಹೊರಡಿಸಿ ನ್ಯಾಯಾಲಯವು ತಂದೆ-ತಾಯಿಯರಿಗೆ ಮಗುವಿನ ದತ್ತು ತಂದೆ-ತಾಯಂದಿರಾಗಲು ಅನುಮತಿ ನೀಡುತ್ತದೆ. ಇಂತಹ ಆದೇಶವನ್ನು ಹೊರಡಿಸುವ ಮೊದಲು ನ್ಯಾಯಾಲಯವು ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರುತ್ತದೆ:

  • ದತ್ತು ಸ್ವೀಕೃತಿಯು ಮಗುವಿನ ಕಲ್ಯಾಣಕ್ಕೆ ಆಗುತ್ತಿದೆ
  • ಮಗುವಿನ ವಯಸ್ಸು ಮತ್ತು ಸಂದರ್ಭವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯಾನುಸಾರ, ದತ್ತು ಸ್ವೀಕೃತಿಗೆ ಮಗುವಿನ ಒಪ್ಪಿಗೆ ಇದೆಯೋ ಇಲ್ಲವೋ
  • ದತ್ತು ತಂದೆ-ತಾಯಿಯರು ಮಗುವನ್ನು ದತ್ತಕ್ಕೆ ತೆಗದುಕೊಳ್ಳಲು ಯಾವುದೇ ಹಣದ ಪಾವತಿ ಅಥವಾ ಬಹುಮಾನವನ್ನು ಸ್ವೀಕರಿಸಿಲ್ಲ
  • ನ್ಯಾಯಾಲಯದಲ್ಲಿ ದತ್ತು ಸ್ವೀಕೃತಿಯ ಪ್ರಕ್ರಿಯೆ ಖಾಸಗಿಯಾಗಿ ನಡೆಯಬೇಕು

ದತ್ತು ಸ್ವೀಕಾರ ಮಾಡಲು ಅನುಮತಿ (ಹಿಂದೂ ಕಾನೂನು):

ಹಿಂದೂ ದತ್ತು ಸ್ವೀಕೃತಿ ಕಾನೂನಿನ ಪ್ರಕಾರ, ಪಾಲಕರು/ಪೋಷಕರಿಗೆ ಕೆಳಗಿನ ಸಂದರ್ಭಗಳಲ್ಲಿ, ಮಗುವನ್ನು ದತ್ತಕ್ಕೆ ತೆಗೆದುಕೊಳ್ಳಲು/ಕೊಡಲು ನ್ಯಾಯಾಲಯದ ಅನುಮತಿ ಬೇಕಾಗುತ್ತದೆ:

  • ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಸತ್ತುಹೋಗಿದ್ದರೆ
  • ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಸಂಪೂರ್ಣವಾಗಿ ಲೋಕವನ್ನು ತ್ಯಜಿಸಿದ್ದರೆ
  • ಮಗುವನ್ನು ತಂದೆ ಮತ್ತು ತಾಯಿ ಇಬ್ಬರೂ ತ್ಯಜಿಸಿದ್ದಾಗ
  • ಸಂಬಂಧಪಟ್ಟ ನ್ಯಾಯಾಲಯವು ತಂದೆ ಮತ್ತು ತಾಯಿ ಇಬ್ಬರನ್ನೂ ಮಾನಸಿಕವಾಗಿ ಅಸ್ವಸ್ಥರೆಂದು ಘೋಷಿಸಿದ್ದರೆ ೫. ಮಗುವಿನ ತಂದೆ-ತಾಯಿ ಯಾರು ಎಂದು ಗೊತ್ತಿಲ್ಲದಿದ್ದಾಗ

ಮೇಲ್ಮನವಿ (ಧಾರ್ಮಿಕೇತರ ಮತ್ತು ಹಿಂದೂ ಕಾನೂನು):

ಧಾರ್ಮಿಕೇತರ ದತ್ತು ಸ್ವೀಕೃತಿ ಕಾನೂನಿನಡಿಯಲ್ಲಿ, ನೀವು ಮಗುವನ್ನು ದತ್ತು ತೆಗೆದುಕೊಳ್ಳುವಾಗ, ಸಂಬಂಧಪಟ್ಟ ಅಧಿಕಾರಿಗಳ ಆದೇಶಗಳಿಂದ ಅಸಂತೋಷಗೊಂಡಿದ್ದರೆ, ಅಥವಾ ನಿಮ್ಮ ದತ್ತು ಸ್ವೀಕೃತಿ ಅರ್ಜಿ ತಿರಸ್ಕಾರಗೊಂಡಿದ್ದರೆ, ಸಂಬಂಧಿಸಿದ ಆದೇಶ ಹೊರಡಿಸಿದ ೩೦ ದಿನಗಳ ಒಳಗೆ ಮಕ್ಕಳ ನ್ಯಾಯಾಲಯಕ್ಕೆ ನೀವು ಮೇಲ್ಮನವಿ ಮಾಡಬಹುದು. ನಿಗದಿಪಡಿಸಲಾದ ೩೦ ದಿನಗಳ ನಂತರವೂ, ನಿಮಗೆ ಮೇಲ್ಮನವಿ ಮಾಡಲಾಗದ ಹಾಗೆ ಸಾಕಾಷ್ಟು ಕಾರಣಗಳಿದ್ದವು ಎಂದು ನ್ಯಾಯಾಲಯ ನಂಬಿದರೆ, ನಿಮ್ಮ ಮೇಲ್ಮನವಿಯನ್ನು ನ್ಯಾಯಾಲಯವು ಸ್ವೀಕರಿಸಬಹುದು. ನ್ಯಾಯಾಲಯದ ಆದೇಶದಿಂದ ನೀವು ಅಸಂತುಷ್ಟಗೊಂಡಲ್ಲಿ ಸಂಬಂಧಿಸಿದ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ನೀವು ಮನವಿ ಸಲ್ಲಿಸಬಹುದು.