ದತ್ತು ಸ್ವೀಕೃತಿ ಕಾನೂನಿನಡಿಯಲ್ಲಿ ಶಿಕ್ಷೆಗಳು

ಕೊನೆಯ ಅಪ್ಡೇಟ್ Nov 28, 2022

ನೀವು ಯಾವುದೇ ಕಾನೂನಿನಡಿಯಲ್ಲಿ ದತ್ತು ತೆಗೆದುಕೊಂಡಿರಲಿ, ಕೆಳಗಿನವುಗಳನ್ನು ಮಾಡಿದರೆ ನಿಮಗೆ ಶಿಕ್ಷೆಯಾಗುತ್ತದೆ:

೧. ಅಕ್ರಮವಾಗಿ ಮಗುವನ್ನು ಹೊರದೇಶಕ್ಕೆ ಕರೆದೊಯ್ಯುವುದು:

ನ್ಯಾಯಾಲಯದ ಮಾನ್ಯ ಆದೇಶವಿಲ್ಲದೆ ನೀವು ಮಗುವನ್ನು ನಿಮ್ಮ ಜೊತೆ ಅಥವಾ ಬೇರೆಯವರ ಜೊತೆ ಪರದೇಶಕ್ಕೆ ಕರೆದೊಯ್ದರೆ, ಅಥವಾ ಮಗುವನ್ನು ಬೇರೆ ದೇಶಕ್ಕೆ ಕಲಿಸಲು ವ್ಯವಸ್ಥೆಗಳನ್ನು ಮಾಡಿದರೆ, ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು.

೨. ಮಗುವನ್ನು ತ್ಯಜಿಸುವುದು/ ನಿರ್ಲಕ್ಷಿಸುವುದು/ ದೌರ್ಜನ್ಯಕ್ಕೆ ಬಲಿಮಾಡುವುದು:

  • -೧೨ ವರ್ಷಗಳೊಳಗಿನ ಮಗುವನ್ನು ನೀವು ಅದರ ಪೋಷಕರು/ಪಾಲಕರು/ತಂದೆ-ತಾಯಿಯಾಗಿ, ಉದ್ದೇಶಪೂರ್ವಕವಾಗಿ ನೀವು ತ್ಯಜಿಸಿದರೆ, ಗರಿಷ್ಟ ೭ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ದಂಡ ವಿಧಿಸಲಾಗುವುದು.
  • -ನೀವು ಮಗುವಿನ ತಂದೆ-ತಾಯಿ/ಪಾಲಕರು/ಪೋಷಕರಾಗಿ, ಆ ಮಗುವಿಗೆ ಅನಗತ್ಯವಾದ ಮಾನಸಿಕ ಅಥವಾ ದೈಹಿಕ ನೋವು ಉಂಟಾಗುವಂತೆ, ದಾಳಿ ಮಾಡುವುದು, ತ್ಯಜಿಸುವುದು, ದೌರ್ಜನ್ಯ ಎಸಗುವುದು, ಉದ್ದೇಶಪೂರ್ವಕವಾಗಿ ಮಗುವನ್ನು ನಿರ್ಲಕ್ಷಿಸುವುದು, ಇತ್ಯಾದಿ ಮಾಡಿದರೆ, ೩ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು. ಇಂತಹ ಕ್ರೌರ್ಯದಿಂದ ಆ ಮಗು ದೈಹಿಕವಾಗಿ ಅಶಕ್ತಗೊಂಡಲ್ಲಿ, ಅಥವಾ ಮಾನಸಿಕ ರೋಗದಿಂದ ಬಳಲುತ್ತಿದ್ದಲ್ಲಿ, ಅಥವಾ ಜೀವನದ ಸಾಮಾನ್ಯ ಕಾರ್ಯಗಳನ್ನು ಮಾಡಲು ಆಗಲಾರದಂತೆ ಆದರೆ ನಿಮಗೆ ೩-೧೦ ವರ್ಷಗಳ ಸೆರೆಮನೆ ವಾಸ ಮತ್ತು ೫ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು.

ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನಡಿಯಲ್ಲಿ ಕೆಳಗಿನ ದುಷ್ಕೃತ್ಯಗಳನ್ನು ಮಾಡಿದರೆ ಉಲ್ಲೇಖಿಸಲಾದ ದಂಡ ವಿಧಿಸಲಾಗುವುದು:

-ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿ ನೀವು ಯಾವುದೇ ಅನಾಥ/ತ್ಯಜಿಸಲಾದ/ಬಿಟ್ಟುಕೊಟ್ಟ ಮಗುವನ್ನು ದತ್ತಕ್ಕೆ ತೆಗೆದುಕೊಂಡರೆ/ಕೊಟ್ಟರೆ, ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು. ಪ್ರಮಾಣೀಕೃತ ದತ್ತು ಸ್ವೀಕೃತಿ ಸಂಸ್ಥೆಯು ಈ ಅಪರಾಧವನ್ನು ಮಾಡಿದರೆ, ಮೇಲೆ ಉಲ್ಲೇಖಿಸಿದ ದಂಡಗಳನ್ನು ಸೇರಿದಂತೆ, ಆ ಸಂಸ್ಥೆಯ ನೋಂದಣಿ ಮತ್ತು ಮಾನ್ಯತೆಯನ್ನು ಕನಿಷ್ಟ ೧ ವರ್ಷದ ವರೆಗೆ ಹಿಂತೆಗೆದುಕೊಳ್ಳಲಾಗುತ್ತದೆ.

ಹಿಂದೂ ದತ್ತು ಸ್ವೀಕಾರ ಕಾನೂನಿನಡಿ ಕೆಳಗಿನ ಅಪರಾಧಗಳನ್ನು ಮಾಡಿದರೆ ನಿಮಗೆ ದಂಡ ವಿಧಿಸಲಾಗುವುದು:

-ದತ್ತು ಸ್ವೀಕೃತಿಯ ಸಲುವಾಗಿ ಹಣದ ಪಾವತಿ, ಅಥವಾ ಇನ್ನಿತರ ಬಹುಮಾನವನ್ನು ಕೊಡುವುದು/ತೆಗೆದುಕೊಳ್ಳುವುದು ಮಾಡಿದರೆ, ರಾಜ್ಯ ಸರ್ಕಾರದ ಅನುಮತಿಯ ಮೇರೆಗೆ, ಗರಿಷ್ಟ ೬ ತಿಂಗಳುಗಳ ಸೆರೆಮನೆ ವಾಸ ಮತ್ತು/ಅಥವಾ ದಂಡ ವಿಧಿಸಲಾಗುವುದು.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.