ನೆಂಟರಿಂದ ದತ್ತು ಪಡೆಯುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)

ಕೊನೆಯ ಅಪ್ಡೇಟ್ Nov 28, 2022

ನೀವು ಮಗುವಿನ ನೆಂಟರಾಗಿ, ಮಗುವನ್ನು ದತ್ತು ಪಡೆಯಬೇಕೆಂದಲ್ಲಿ, ಭಾರತದಲ್ಲಿಯೇ ಅಥವಾ ಅಂತರ್-ದೇಶಿಯ ದತ್ತು ಕೂಡ ಪಡೆಯಬಹುದಾಗಿದೆ.

ಭಾರತದಲ್ಲಿಯೇ ದತ್ತು ಪಡೆಯುವುದು:

ಮಗುವಿನ ನೆಂಟರು ಭಾರತದಲ್ಲಿಯೇ ದತ್ತು ಪಡೆಯಬೇಕಾದಲ್ಲಿ ಕೆಳಗಿನ ಪ್ರಕ್ರಿಯೆ ಅನುಸರಿಸಬೇಕು:

ಹಂತ ೧: ನೀವು ಮಗುವನ್ನು ದತ್ತು ಪಡೆಯಬಹುದೋ ಇಲ್ಲವೋ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು. ನೀವು ಕೆಳಗಿನಂತೆ ಮಗುವಿನ ಜೊತೆ ನೆಂಟಸ್ಥಿಕೆ ಹೊಂದಿರಬೇಕು:

 • ನೀವು ಮಗುವಿನ ತಂದೆಯ ಸಹೋದರ/ಸಹೋದರಿಯಾಗಿರಬೇಕು
 • ನೀವು ಮಗುವಿನ ತಾಯಿಯ ಸಹೋದರ/ಸಹೋದರಿಯಾಗಿರಬೇಕು
 • ನೀವು ಮಗುವಿನ ತಂದೆಯ ತಂದೆ/ತಾಯಿಯಾಗಿರಬೇಕು
 • ನೀವು ಮಗುವಿನ ತಾಯಿಯ ತಂದೆ/ತಾಯಿಯಾಗಿರಬೇಕು

ಹಾಗು, ನೀವು ನಿವಾಸಿ ಭಾರತೀಯರು, ಅನಿವಾಸಿ ಭಾರತೀಯರು, ಅಥವಾ ಕನಿಷ್ಟ ೧ ವರ್ಷದ ಕಾಲ ಭಾರತದಲ್ಲಿ ವಾಸವಾಗಿದ್ದ ಸಾಗರೋತ್ತರ ಭಾರತೀಯ ನಾಗರೀಕರಾಗಿರಬೇಕು.

ಹಂತ ೨: ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರದ ಜಾಲತಾಣದ ಮೇಲೆ ನೀವು ನಿಮ್ಮ ಹೆಸರನ್ನು ನೋಂದಾಯಿಸಬೇಕು. ಹೀಗೆ ಮಾಡಿದಾಗ ಆ ಜಾಲತಾಣ ನಿಮ್ಮನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಗೆ ಮರುನಿರ್ದೇಶಿಸುತ್ತದೆ. ಇಲ್ಲಿ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು:

 • ನಿವಾಸದ ಪುರ್ವಾವೆ
 • ಮಗು ೫ ವರ್ಷದ ಮೇಲಿದ್ದಲ್ಲಿ ಅದರ ಒಪ್ಪಿಗೆ
 • ಜೈವಿಕ ತಂದೆ-ತಾಯಿಯರ ಒಪ್ಪಿಗೆ, ಅಥವಾ ಮಗುವಿನ ಪಾಲಕರು/ಪೋಷಕರಿಗೆ ಮಗುವನ್ನು ದತ್ತು ಸ್ವೀಕೃತಿಗಾಗಿ ಬಿಟ್ಟುಕೊಡಬಹುದೆಂದು ಮಕ್ಕಳ ಕಲ್ಯಾಣ ಸಮಿತಿಯಿಂದ ಸಿಕ್ಕ ಅನುಮತಿ
 • ನ್ಯಾಯಾಲಯದಿಂದ ಸಿಕ್ಕ ದತ್ತು ಸ್ವೀಕೃತಿ ಆದೇಶ
 • ನೀವು ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧವನ್ನು ಧೃಢೀಕರಿಸುವ ಶಪಥಪತ್ರ, ಮತ್ತು ನಿಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸೂಚಿಸುವ ಶಪಥಪತ್ರ

ಹಂತ ೩: ಇದಾದಮೇಲೆ, ಸಂಬಂಧಪಟ್ಟ ನ್ಯಾಯಾಲಯಕ್ಕೆ ನೀವು ದತ್ತು ಸ್ವೀಕೃತಿ ಅರ್ಜಿಯನ್ನು ಸಲ್ಲಿಸಬೇಕು. ನ್ಯಾಯಾಲಯದ ಆದೇಶ ಸಿಕ್ಕ ಮೇಲೆ ಅದನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದ ಮೇಲೆ ಅಪ್ಲೋಡ್ ಮಾಡಬೇಕು. ಅಂತರ್-ರಾಷ್ಟ್ರೀಯ ದತ್ತು ಸ್ವೀಕೃತಿ:

ಮಗುವಿನ ನೆಂಟರು ಅಂತರ್-ರಾಷ್ಟ್ರೀಯ ದತ್ತು ಸ್ವೀಕಾರ ಮಾಡಲು ಕೆಳಗಿನ ಪ್ರಕ್ರಿಯೆ ಪಾಲಿಸಬೇಕು:

ಹಂತ ೧: ನೀವು ಮಗುವನ್ನು ದತ್ತು ಪಡೆಯಬಹುದೋ ಇಲ್ಲವೋ ಎಂಬುದನ್ನು ನಿಗದಿಪಡಿಸಿಕೊಳ್ಳಬೇಕು. ನೀವು ಸಾಗರೋತ್ತರ ಭಾರತೀಯ ನಾಗರಿಕರು ಅಥವಾ ಅನಿವಾಸಿ ಭಾರತೀಯರು ಇದ್ದಲ್ಲಿ ನಿಮ್ಮ ನೆಂಟರ ಮಗುವನ್ನು ದತ್ತು ಪಡೆಯಬಹುದಾಗಿದೆ.

ಹಂತ ೨: ನೀವು ವಾಸವಾಗಿದ್ದ ದೇಶದಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಭೇಟಿ ನೀಡಬೇಕು. ಉದಾಹರಣೆಗೆ, ಅಧಿಕೃತ ವಿದೇಶಿ ದತ್ತು ಸ್ವೀಕೃತಿ ಸಂಸ್ಥೆ, ಅಥವಾ ಇನ್ನಿತರ ಕೇಂದ್ರೀಯ ಅಧಿಕಾರ. ನಿಮ್ಮ ನಿವಾಸದ ದೇಶದಲ್ಲಿ ಒಂದುವೇಳೆ ಈ ಎರಡೂ ಸಂಸ್ಥೆಗಳು ಇಲ್ಲದಿದ್ದರೆ, ಸಂಬಂಧಪಟ್ಟ ಸರ್ಕಾರಿ ವಿಭಾಗಕ್ಕೆ, ಅಥವಾ ಭಾರತೀಯ ರಾಜತಾಂತ್ರಿಕ ಮಿಷನ್ ಗೆ ನೀವು ಹೋಗಬಹುದು. ಅವರು ನಡೆಸಬೇಕಾದ ಮನೆ ಅಧ್ಯಯನ ಮತ್ತು ನೋಂದಣಿ ಪ್ರಕ್ರಿಯೆಯ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ.

ಹಂತ ೩: ಬೇಕಾದ ದಾಖಲೆಗಳನ್ನೆಲ್ಲ ನೀವು ಸಲ್ಲಿಸಬೇಕು. ನೀವು ಸಂಪರ್ಕಿಸಿದ ಸಂಸ್ಥೆಗೆ ಇದರ ಬಗ್ಗೆ ಹೆಚ್ಚು ಮಾಹಿತಿ ಕೇಳಿ.

ಹಂತ ೪: ನಿಮ್ಮ ಎಲ್ಲ ದಾಖಲೆಗಳನ್ನು ಸಲ್ಲಿಸಿದಾಗ ನಿಮ್ಮ ಅರ್ಜಿಯನ್ನು, ಕೌಟುಂಬಿಕ ಹಿನ್ನೆಲೆಯ ವರದಿಯನ್ನು ತಯಾರಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕಳಿಸಲಾಗುತ್ತದೆ. ಇದಕ್ಕೆ ಶುಲ್ಕವಿರಬಹುದು. ಈ ವರದಿಯನ್ನು ನೀವು ನೆಲೆಸಿದ್ದ ದೇಶದ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಿಸಲಾಗುತ್ತದೆ.

ಹಂತ ೫: ಮಗು ನೆಲೆಸಿದ್ದ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ನಿಮ್ಮ ದತ್ತು ಸ್ವೀಕೃತಿಯ ಅರ್ಜಿ ಮತ್ತು ಮಗುವಿನ ಜೈವಿಕ ತಂದೆ-ತಾಯಿಯರೇ ಒಪ್ಪಿಗೆ ಪತ್ರವನ್ನು, ಕೆಳಗಿನ ದಾಖಲೆಗಳೊಂದಿಗೆ ಸಲ್ಲಿಸಬೇಕು:

 • ಮಗು ೫ ವರ್ಷದ ಮೇಲಿರುವಾಗ ಅದರ ಒಪ್ಪಿಗೆ
 • ನೀವು ವಾಸಿಸುವ ದೇಶದ ಅನುಮತಿ
 • ಮಗುವಿನೊಂದಿಗೆ ನಿಮ್ಮ ನೆಂಟಸ್ಥಿಕೆ (ವಂಶ ವೃಕ್ಷ)
 • ನೀವು, ಮಗು, ಮತ್ತು ಮಗುವಿನ ಜೈವಿಕ ತಂದೆ-ತಾಯಿಯರು ಇರುವ ಇತ್ತೀಚಿನ ಭಾವಚಿತ್ರ
 • ಜೈವಿಕ ತಂದೆ-ತಾಯಿಯರ ಒಪ್ಪಿಗೆ, ಅಥವಾ ಮಗುವಿನ ಪಾಲಕರು/ಪೋಷಕರಿಗೆ ಮಗುವನ್ನು ದತ್ತು ಸ್ವೀಕೃತಿಗಾಗಿ ಬಿಟ್ಟುಕೊಡಬಹುದೆಂದು ಮಕ್ಕಳ ಕಲ್ಯಾಣ ಸಮಿತಿಯಿಂದ ಸಿಕ್ಕ ಅನುಮತಿ
 • ಕೌಟುಂಬಿಕ ಹಿನ್ನೆಲೆ ವರದಿ

ಇದಾದಮೇಲೆ ದತ್ತು ಸ್ವೀಕೃತಿ ಆದೇಶದ ಪ್ರಮಾಣೀಕರಿಸಲಾದ ಪ್ರತಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸಲ್ಲಿಸಬೇಕು.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.