ಕೌಟುಂಬಿಕ ಹಿಂಸೆಗೆ ಬಲಿಯಾದವರಿಗೆ ಯಾವ ಹಕ್ಕುಗಳಿವೆ ಮತ್ತು ಇಂತಹ ಪರಿಹಾರಗಳು ಲಭ್ಯವಿವೆ?

ಹಿಂಸೆಗೆ ಬಲಿಯಾದ ಮಹಿಳೆಗೆ ಅಪಾಯದ ಬೆದರಿಕೆ ಇದ್ದಲ್ಲಿ, ತಕ್ಷಣವಾಗಿ ರಕ್ಷಣೆ ಬೇಕಾದಲ್ಲಿ, ನ್ಯಾಯಾಧೀಶರು ತಾತ್ಕಾಲಿಕ ಆದೇಶಗಳನ್ನು ಅಥವಾ ಅಪರಾಧಿಯ ಅನುಪಸ್ಥಿತಿಯಲ್ಲಿ ಕೂಡ ಆದೇಶಗಳನ್ನು ಹೊರಡಿಸಬಹುದು.

ಕೌಟುಂಬಿಕ ಹಿಂಸೆಗೆ ಬಲಿಯಾದವರಿಗೆ ರಾಷ್ಟ್ರೀಯ ಕಾನೂನಿನಡಿಯಲ್ಲಿ ಕೆಲವು ಹಕ್ಕುಗಳಿವೆ, ಮತ್ತು ತಮ್ಮನ್ನು ಹಾಗು ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು ಪರಿಹಾರಗಳು ಲಭ್ಯವಿವೆ. ನಿಮಗೆ ಈ ಹಕ್ಕುಗಳು ಮತ್ತು ಪರಿಹಾರಗಳ ಬಗ್ಗೆ ಮಾಹಿತಿ ನೀಡುವುದು ರಕ್ಷಾಧಿಕಾರಿಗಳು ಅಥವಾ ಸೇವಾ ಕಾರ್ಯಕರ್ತರ ಕರ್ತವ್ಯವಾಗಿದೆ.

ಕಾನೂನಿನಡಿಯಲ್ಲಿರುವ ಹಕ್ಕುಗಳು:

ನಿಮಗೆ ಕೆಳಗಿನ ಹಕ್ಕುಗಳಿವೆ:

  • ರಕ್ಷಣಾಧಿಕಾರಿಗಳು, ಸೇವಾ ಕಾರ್ಯಕರ್ತರು, ಅಥವಾ ಪೊಲೀಸ್ ಅಧಿಕಾರಿಗಳ ಸಹಾಯದಿಂದ ದೂರು ದಾಖಲಿಸಿ, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದು.
  • ವೈದ್ಯಕೀಯ ಸಹಾಯ, ಆಶ್ರಯ, ಸಮಾಲೋಚನೆ, ಮತ್ತು ಕಾನೂನು ನೆರವು ಪಡೆಯುವುದು.
  • ನೀವು ಅಪರಾಧಿಕ ದೂರು ದಾಖಲಿಸಿದ್ದಲ್ಲಿ, ಎಫ್.ಐ.ಆರ್. (First Information Report) ನ ಉಚಿತ ಪ್ರತಿಗಳನ್ನು ಪಡೆಯುವುದು.
  • ನೀವು ರಕ್ಷಣಾಧಿಕಾರಿಗಳ ನೆರವಿಗೆ ಹೋಗಿದ್ದಲ್ಲಿ, ಡಿ.ಐ.ಆರ್. (Domestic Incidence Report), ಪರಿಹಾರ ಪಡೆಯಲು ದಾಖಲಿಸಿದ ಅರ್ಜಿ, ಹಾಗು ವೈದ್ಯಕೀಯ ವರದಿಗಳ ಉಚಿತ ಪ್ರತಿಗಳನ್ನು ಪಡೆಯುವುದು.

ಕಾನೂನಿನಡಿಯಲ್ಲಿ ಲಭ್ಯವಿರುವ ಪರಿಹಾರಗಳು:

ಮೇಲೆ ಕಂಡ ಹಕ್ಕುಗಳನ್ನು ಚಲಾಯಿಸುವುದರ ಜೊತೆಗೆ, ನೀವು ನ್ಯಾಯಾಲಯದಿಂದ ಕೆಳಗಿನ ಪರಿಹಾರಗಳನ್ನು ಪಡೆಯಬಹುದು:

  • ನಿಮ್ಮ ಮಕ್ಕಳ ಜೊತೆ ನಿಮ್ಮ ಮನೆಯಲ್ಲಿ ವಾಸ ಮಾಡುವುದನ್ನು ಮುಂದುವರೆಸುವುದು. ಇದಕ್ಕೆ “ನಿವಾಸದ ಆದೇಶ” ಪಡೆಯುವುದು ಎನ್ನುತ್ತಾರೆ.
  • ನಿಮಗೆ ಕಿರುಕುಳ ಕೊಡುತ್ತಿದ್ದ ವ್ಯಕ್ತಿ ನಿಮ್ಮ್ಮನು ಸಂಪರ್ಕಿಸದ ಹಾಗೆ, ನಿಮಗೆ ಇನ್ನಿಷ್ಟು ಹಿಂಸೆಯನ್ನು ಕೊಡುವುದನ್ನು ನಿಲ್ಲುಸುವುದಾಗಿ, ತಕ್ಷಣದ ರಕ್ಷಣೆ ಪಡೆಯುವುದು.
  • ನಿಮಗಾದ ಶಾರೀರಿಕ ಗಾಯಗಳು, ಆಸ್ತಿಯ ನಷ್ಟ, ಇತ್ಯಾದಿ ನಷ್ಟಗಳನ್ನು ಸರಿಪಡಿಸಲು ಆರ್ಥಿಕ ಪರಿಹಾರ ಪಡೆಯುವುದು.

ಕೌಟುಂಬಿಕ ಹಿಂಸೆಯ ವಿರುದ್ಧ ಯಾರು ರಕ್ಷಣೆ ಪಡೆಯಬಹುದು?

ಯಾವುದೇ ಮಹಿಳೆ, ತನಗೋಸ್ಕರ ಅಥವಾ ತನ್ನ ಮಕ್ಕಳಿಗೋಸ್ಕರ, ದೂರು ದಾಖಲಿಸಿ, ಕೌಟುಂಬಿಕ ಹಿಂಸೆ ಕಾನೂನಿನಡಿ ರಕ್ಷಣೆ ಪಡೆಯಬಹುದು. ಆ ಮಹಿಳೆ ಯಾವ ಧರ್ಮಕ್ಕೆ ಸೇರಿರುವರು ಎಂಬುದು ಅಪ್ರಸ್ತುತ. ಅಂದರೆ, ಯಾವುದೇ ಜಾತಿ ಅಥವಾ ಮತಕ್ಕೆ ಸೇರಿದ ಮಹಿಳೆ ಕೌಟುಂಬಿಕ ಹಿಂಸೆಯ ವಿರುದ್ಧ ರಕ್ಷಣೆ ಪಡೆಯಬಹುದು.

ಗಮನಿಸಬೇಕಾದ ಅಂಶಗಳು: ನೀವು ನ್ಯಾಯಾಲಯಕ್ಕೆ ಹೋಗಬೇಕು ಎಂದು ನಿರ್ಧರಿಸಿದ್ದಲ್ಲಿ, ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿತ್ತು, ಮತ್ತು ನೀವು ಅವರೊಡನೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಿರಿ, ಎಂಬುದನ್ನು ಖಾತರಿ ಮಾಡಬೇಕು. ಕೆಳಗಿನ ಸಂದರ್ಭಗಳಲ್ಲಿ ನೀವು ದೂರು ನೀಡಿ ರಕ್ಷಣೆ ಪಡೆಯಬಹುದು:

೧. ನೀವು ವಿವಾಹಿತರಾಗಿದ್ದಲ್ಲಿ:

ನೀವು ಮದುವೆಯಾಗಿದ್ದಲ್ಲಿ, ಮತ್ತು ನಿಮ್ಮ ಗಂಡನಿಂದ ಅಥವಾ ಅತ್ತೆ-ಮಾವಂದಿರಿಂದ ಹಿಂಸೆಗೆ ಒಳಗಾಗಿದ್ದಲ್ಲಿ, ಅವರ ವಿರುದ್ಧ ದೂರು ನೀಡಬಹುದು.

೨. ನೀವು ವಿಚ್ಛೇದಿತರಾಗಿದ್ದಲ್ಲಿ:

ನೀವು ವಿಚ್ಛೇದಿತರಾಗಿದ್ದಲ್ಲಿ, ನಿಮ್ಮ ಪ್ರಕರಣದ ಸಂದರ್ಭಾನುಸಾರ, ನಿಮಗೆ ರಕ್ಷಣೆ ಹಾಗು ಪರಿಹಾರ, ಸಿಗಬಹುದು, ಸಿಗದಿರಬಹುದು. ರಕ್ಷಣೆ ಹಾಗು ಪರಿಹಾರ ಸಿಗಬಹುದಾದ ಕೆಲವು ಸಂದರ್ಭಗಳು ಕೆಳಗಿನಂತಿವೆ: – ನಿಮ್ಮ ವಿಚ್ಛೇದನೆಯ ಪೂರ್ವ ಹಿಂಸೆಗೆ ಬಲಿಯಾಗಿದ್ದಲ್ಲಿ, ನಿಮ್ಮ ಗಂಡ ಮತ್ತು ಅತ್ತೆ-ಮಾವಂದಿರ ಜೊತೆ ಹಿಂಸೆ ನಡೆದ ಸಮಯದಲ್ಲಿ ಕೌಟುಂಬಿಕ ಸಂಬಧವಿದ್ದ ಕಾರಣ ನೀವು ದೂರು ನೀಡಬಹುದು.

ನಿಮ್ಮ ವಿಚ್ಛೇದನೆಯ ನಂತರ ಹಿಂಸೆಗೆ ಬಲಿಯಾದರೆ, ನಿಮ್ಮ ಮತ್ತು ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ, ಹಿಂಸೆಯ ಸಮಯದಲ್ಲಿ ಕೌಟುಂಬಿಕ ಸಂಬಂಧ ಇತ್ತು ಎಂದು ನೀವು ಸಾಬೀತುಪಡಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ನಿಮ್ಮ ನಡುವೆ ಕೌಟುಂಬಿಕ ಸಂಬಂಧವಿಲ್ಲದಿದ್ದರೂ ಸಹ ನ್ಯಾಯಾಲಯವು ನಿಮ್ಮ ಕೋರಿಕೆಯನ್ನು ಮನ್ನಿಸುತ್ತದೆ. ಉದಾಹರಣೆಗೆ, ವಿಚ್ಛೇದನದ ನಂತರ, ನೀವು ಮತ್ತು ನಿಮ್ಮ ಗಂಡ ಜೊತೆಯಾಗಿ ನಿಮ್ಮ ಮಗುವಿನ ಪೋಷಣೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ನೀವು ಹಿಂಸೆಗೆ ಬಲಿಯಾದಾಗ.

ನೀವು ಹಿಂದೆಂದೋ ವಿಚ್ಛೇದನಾ ಪ್ರಕ್ರಿಯೆಯನ್ನು ಶುರು ಮಾಡಿದ್ದಿರಿ, ಆದರೆ ವಿಚ್ಚೇನದ ಪಡೆಯಲಿಲ್ಲ. ಹೀಗಿರುವಾಗ ಕೌಟುಂಬಿಕ ಹಿಂಸೆಗೆ ಒಳಗಾದಲ್ಲಿ ದೂರು ಸಲ್ಲಿಸಬಹುದು.

೩. ನೀವು ನಿಮ್ಮ ಗಂಡನನ್ನು ಬಿಟ್ಟು ಬಂದಿದ್ದಲ್ಲಿ:

ನಿಮ್ಮ ಗಂಡ ನಿಮ್ಮನ್ನು ಹೊಡೆಯುವುದು, ಮೌಖಿಕವಾಗಿ ನಿಂದಿಸುವುದು, ಇತ್ಯಾದಿ ರೀತಿಗಳಿಂದ ನಿಮ್ಮ ಮೇಲೆ ಕೌಟುಂಬಿಕ ಹಿಂಸೆ ಮಾಡಿದ್ದ ಕಾರಣ, ನೀವು ಅವರನ್ನು ಬಿಟ್ಟು ಬಂದಿದ್ದಲ್ಲಿ, ಅವರ ವಿರುದ್ಧ ದೂರು ನೀಡಬಹುದು. ಇನ್ನಿತರೇ ಕಾರಣಗಳಿಂದಾಗಿ ನೀವು ನಿಮ್ಮ ಗಂಡನನ್ನು ಬಿಟ್ಟು ಬಂದಿದ್ದಲ್ಲಿ, ಅವರ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸಲು ಬರುವುದಿಲ್ಲ. ಉದಾಹರಣೆಗೆ, ಬೇರೆ ಪುರುಷನ ಜೊತೆಗೆ ವಾಸಿಸಲು ನಿಮ್ಮ ಗಂಡನನ್ನು ಬಿಟ್ಟು ಬಂದಿದ್ದಲ್ಲಿ, ಅಥವಾ ಒಬ್ಬರೇ ವಾಸಿಸಲು ನಿಮ್ಮ ಗಂಡನನ್ನು ಬಿಟ್ಟು ಬಂದಿದ್ದಲ್ಲಿ, ಅವರ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸಲು ಸಾಧ್ಯವಿಲ್ಲ.

೪. ನೀವು ನ್ಯಾಯಿಕವಾಗಿ ಅಗಲಿದ್ದಲ್ಲಿ:

ನೀವು ನಿಮ್ಮ ಗಂಡನಿಂದ ನ್ಯಾಯಿಕವಾಗಿ ಅಗಲಿದ್ದಲ್ಲಿ, ಅಗಲುವಿಕೆಯ ಆದೇಶದ ಮೊದಲು ಅಥವಾ ನಂತರ, ನಿಮ್ಮ ಗಂಡನಿಂದ ಅಥವಾ ಅತ್ತೆ-ಮಾವಂದಿರಿಂದ ಹಿಂಸೆಗೆ ಬಲಿಯಾದಲ್ಲಿ, ಅವರ ವಿರುದ್ಧ ದೂರು ಸಲ್ಲಿಸಬಹುದು.

೫. ನೀವು ಲಿವ್-ಇನ್ ಸಂಬಂಧದಲ್ಲಿ ಇದ್ದಲ್ಲಿ:

ನೀವು ಲಿವ್-ಇನ್ ಸಂಬಂಧದಲ್ಲಿ ಇದ್ದು, ನಿಮ್ಮ ಸಂಗಾತಿಯಿಂದ ಕೌಟುಂಬಿಕ ಹಿಂಸೆಗೆ ಒಳಗಾದಲ್ಲಿ, ಅವರ ವಿರುದ್ಧ ದೂರು ಸಲ್ಲಿಸಬಹುದು. ಕೆಲವು ಸಂದರ್ಭಗಳಲ್ಲಿ, ನೀವು ಲಿವ್-ಇನ್ ಸಂಬಂಧದಿಂದ ಹೊರ ಬಂದಮೇಲೂ ಕೂಡ, ಸಂಬಂಧದಲ್ಲಿರುವಾಗ ನಿಮ್ಮ ಸಂಗಾತಿಯಿಂದ ಹಿಂಸೆಗೆ ಒಳಗಾಗಿದ್ದರೆ, ಅವರ ವಿರುದ್ಧ ದೂರು ಸಲ್ಲಿಸಬಹುದು.

೬. ನೀವು ವಿಧವೆಯಾಗಿದ್ದಲ್ಲಿ:

ನಿಮ್ಮ ಗಂಡ ಸತ್ತ ಮೇಲೂ ಸಹ ನೀವು ನಿಮ್ಮ ಅತ್ತೆ-ಮಾವಂದಿರ ಜೊತೆ ವಾಸ ಮಾಡುತ್ತಿದ್ದಲ್ಲಿ, ಅವರ ಜೊತೆ ನಿಮಗಿರುವ ಸಂಬಂಧ ಮುರಿದುಹೋಗದ ಕಾರಣ, ಅದು ಕೌಟುಂಬಿಕ ಸಂಬಂಧ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ಅತ್ತೆ-ಮಾವಂದಿರಿಂದ ನೀವು ಹಿಂಸೆಗೆ ಒಳಗಾದಲ್ಲಿ, ಅವರ ವಿರುದ್ಧ ನೀವು ದೂರು ಸಲ್ಲಿಸಬಹುದು. ಉದಾಹರಣೆಗೆ, ನೀವು ವಿಧವೆಯಾಗಿದ್ದು, ನಿಮ್ಮ ಅತ್ತೆ ನಿಮಗೆ ಕಿರುಕುಳ ಕೊಡುತ್ತಿದ್ದಲ್ಲಿ, ಅವರ ವಿರುದ್ಧ ದೂರು ಸಲ್ಲಿಸಬಹುದು.

ಕೌಟುಂಬಿಕ ಹಿಂಸೆಯ ಸಹಾಯವಾಣಿಗಲ್ಯಾವುವು?

ನಿಮಗೆ ಸಂಬಂಧಪಟ್ಟ ರಕ್ಷಣಾಧಿಕಾರಿಗಳನ್ನು ಗುರುತಿಸಲು, ಹೆಚ್ಚುವರಿ ಸಹಾಯ ಮತ್ತು ಬೆಂಬಲ ನೀಡಲು, ದೂರು ದಾಖಲಿಸಲು ಸಹಾಯ ಮಾಡಲು ಕೆಲವು ಸಹಾಯವಾಣಿಗಳ ನೆರವು ಪಡೆಯಬಹುದು. ಸಂಬಂಧಪಟ್ಟ ಸರ್ಕಾರಿ ಸಹಾಯವಾಣಿಗಳ ಪಟ್ಟಿ ಕೆಳಗಿದೆ:

ಹಿಂಸೆ ಮತ್ತು ಅಪರಾಧಗಳು

೧. ಪೊಲೀಸ್:

ನಿಮ್ಮ ಮೇಲೆ ಹಿಂಸೆ ಆಗುತ್ತಿದ್ದಲ್ಲಿ ೧೦೦ಕ್ಕೆ ಕರೆ ಮಾಡಿ ಪೊಲೀಸರಿಂದ ತಕ್ಷಣದ ಸಹಾಯ ಪಡೆಯಬಹುದು. ನೀವಿರುವ ಸ್ಥಳ ಗೊತ್ತಾದ ನಂತರ ನಿಮ್ಮ ಸಹಾಯಕ್ಕೆ ಪೊಲೀಸರು ಅವರ ಒಂದು ಪಡೆ ಕಳಿಸುತ್ತಾರೆ.

೨. ರಾಷ್ಟ್ರೀಯ ಮಹಿಳಾ ಆಯೋಗ, ಪೊಲೀಸ್ ವಿಭಾಗ:

ನೀವು ಹಿಂಸೆಗೆ ಒಳಗಾದಲ್ಲಿ, ಕರೆ ಮಾಡಿ ದೂರು ನೀಡಬಹುದು. ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ:

ಹಂತ ೧: ೧೦೯೧ಕ್ಕೆ ಕರೆ ಮಾಡಿ ಹಂತ ೨: ಅಪರಾಧವನ್ನು ವಿವರವಾಗಿ ವರ್ಣಿಸಿ

ಹಂತ ೩: ನಿಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನೀಡಿ ಪೊಲೀಸರನ್ನು ನಿಮ್ಮ ರಕ್ಷಣೆಗಾಗಿ ಕೊಟ್ಟ ವಿಲ್ಲಾಸಕ್ಕೆ ಕಳಿಸುತ್ತಾರೆ.

ಕಾಣೆಯಾದ ವ್ಯಕ್ತಿಗಳು ಮತ್ತು ಅಪಹರಣಗಳು:

ಕಾಣೆಯಾದ ಮಹಿಳೆಯರು ಮತ್ತು ಮಕ್ಕಳು: ಈ ಸಹಾಯವಾಣಿ ಕಾಣೆಯಾದ ವ್ಯಕ್ತಿಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ:

ಹಂತ ೧: ೧೦೯೪ಕ್ಕೆ ಕರೆ ಮಾಡಿ.

ಹಂತ ೨: ಕಾಣೆಯಾದ ವ್ಯಕ್ತಿಯ ದೂರವಾಣಿ ಸಂಖ್ಯೆಯನ್ನು ನೀಡಿ

ಹಂತ ೩: ಜಿಪ್ನೆಟ್/ZIPNET (Zonal Integrated Police Network) ನಲ್ಲಿ ದೂರವಾಣಿ ಸಂಖ್ಯೆಯ ಹುಡುಕಾಟ ನಡೆಸಿ, ಕಾಣೆಯಾದ ವ್ಯಕ್ತಿ ಎಲ್ಲಿದ್ದಾರೆ ಎಂದು ಕಂಡು ಹಿಡಿದು, ಪೊಲೀಸರನ್ನು ಸಂಪರ್ಕಿಸುತ್ತಾರೆ.

ಹಂತ ೪: ಅವರಿಂದ ಕಾಣೆಯಾದ ವ್ಯಕ್ತಿಯನ್ನು ಹುಡುಕಲು ಆಗಲಿಲ್ಲವಾದಲ್ಲಿ, ತಳಮಟ್ಟದಲ್ಲಿ ಹುಡುಕಾಟವನ್ನು ಮುಂದುವರೆಸಲು ಪೊಲೀಸರನ್ನು ಸಂಪರ್ಕಿಸುತ್ತಾರೆ.

ಕೌಟುಂಬಿಕ ಹಿಂಸೆಯ ವಿರುದ್ಧ ನೀವು ಸಹಾಯ ಮತ್ತು ಬೆಂಬಲ ಹೇಗೆ ಪಡೆಯಬಹುದು?

ಕೌಟುಂಬಿಕ ಹಿಂಸೆಯ ದೂರು ನೀಡುವಾಗ ನಿಮಗೆ ಹೆಚ್ಚುವರಿ ಸಹಾಯ ಮತ್ತು ಬೆಂಬಲ ಬೇಕಾಗಬಹುದು. ಕೆಳಗಿನ ಅಧಿಕಾರಿಗಳ ನೆರವಿನಿಂದ ನೀವು ಈ ಸಹಾಯ ಮತ್ತು ಬೆಂಬಲ ಪಡೆಯಬಹುದು.

ಬೆಂಬಲ ಮತ್ತು ನೆರವು

ರಕ್ಷಣಾಧಿಕಾರಿಗಳು:

ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳನ್ನು ನೀವು ಸಂಪರ್ಕಿಸಿದರೆ ಅವರು ನಿಮಗೆ ಉಚಿತ ಕಾನೂನು ನೆರವು, ಸರ್ಕಾರಿ ಆಶ್ರಯದ ನೆರವು, ಬೇಕಾದಲ್ಲಿ ಸೂಕ್ತ ಸೇವಾ ಕಾರ್ಯಕರ್ತರ ಸಂಪರ್ಕವನ್ನು ಕಲ್ಪಿಸಿಕೊಡುತ್ತಾರೆ.

ಸರ್ಕಾರೇತರ ಸಂಸ್ಥೆಗಳು ಮತ್ತು ಸೇವಾ ಕಾರ್ಯಕರ್ತರು:

ನಿಮಗೆ ಕಾನೂನು ನೆರವು, ಹಕ್ಕುಗಳ ಬಗ್ಗೆ ಮಾಹಿತಿ, ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಸಂಪರ್ಕ, ಇತರೆ ಸಹಾಯ ಅಥವಾ ಬೆಂಬಲ ಬೇಕಾದಲ್ಲಿ, ಸರ್ಕಾರೇತರ ಸಂಸ್ಥೆಗಳನ್ನು ಅಥವಾ ಸೇವಾ ಕಾರ್ಯಕರ್ತರನ್ನು ಸಂಪರ್ಕಿಸಬಹುದು. ಆಯಾ ಸಂಸ್ಥೆಗೆ ಸಂಬಂಧಪಟ್ಟಂತೆ ಅವರು ನಿಮಗೆ ಆಶ್ರಯ, ಉದ್ಯೋಗಾವಕಾಶಗಳು, ವೃತ್ತಿಪರ ತರಬೇತಿ, ಸಮಾಲೋಚನೆ, ಇತ್ಯಾದಿ ಬೆಂಬಲ/ಅವಕಾಶಗಳನ್ನೂ ಒದಗಿಸಿ ಕೊಡಬಹುದು. ಬಹುತೇಕ ಈ ಸೇವೆಗಳು ಉಚಿತವಾಗಿ ಲಭ್ಯವಿದ್ದು, ಇದು ನೀವು ಸಂಪರ್ಕಿಸಿದ ಸಂಸ್ಥೆಯನ್ನವಲಂಬಿಸಿದೆ.

ಸೇವಾ ಕಾರ್ಯಕರ್ತರಿಗೆ ಡಿ.ಐ.ಆರ್.ಅನ್ನು ದಾಖಲಿಸಿ ಸಂಬಂಧಪಟ್ಟ ನ್ಯಾಯಾಲಯ ಅಥವಾ ರಕ್ಷಣಾಧಿಕಾರಿಗಳಿಗೆ ಕಲಿಸುವ ಅಧಿಕಾರ ಇರುತ್ತದೆ. ನಿಮಗೆ ಶಾರೀರಿಕವಾಗಿ ಪೆಟ್ಟು ಬಿದ್ದಿದ್ದಲ್ಲಿ, ನಿಮ್ಮ ವೈದ್ಯಕೀಯ ತಪಾಸಣೆ ನಡೆಸಿ, ನಿಮ್ಮ ವೈದ್ಯಕೀಯ ವರದಿಯನ್ನು ಸಂಬಂಧಪಟ್ಟ ರಕ್ಷಣಾಧಿಕಾರಿಗಳು ಅಥವಾ ಪೊಲೀಸ್ ಠಾಣೆಗೆ ಕಳುಹಿಸಲೂ ಸಹ ಅವರು ಸಹಾಯ ಮಾಡಬಲ್ಲರು.

ಕಾನೂನು ನೆರವು:

ವಕೀಲರ ನೆರವು ಪಡೆಯುವುದು:

ನೀವು ವಕೀಲರ ನೆರವಿನಿಂದ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹೋಗಬಹುದು. ವಕೀಲರ ಬಳಿ ಹೋಗುವುದು ನಿಮಗೆ ದುಬಾರಿ ಎನಿಸಿದ್ದಲ್ಲಿ, ನಿಮ್ಮ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರವನ್ನು ಸಂಪರ್ಕಿಸಿ ಉಚಿತ ಕಾನೂನು ನೆರವು ಪಡೆಯಬಹುದು. ಉಚಿತ ಕಾನೂನು ನೆರವು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ನೀವು ರಕ್ಷಣಾಧಿಕಾರಿಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ, ಅಥವಾ ಸೇವಾ ಕಾರ್ಯಕರ್ತರಿಗೆ ಕೇಳಬಹುದು.

ಕೌಟುಂಬಿಕ ಹಿಂಸೆಯ ವಿರುದ್ಧ ತಕ್ಷಣದ ರಕ್ಷಣೆ ಹೇಗೆ ಪಡೆಯಬಹುದು?

ಕೌಟುಂಬಿಕ ಹಿಂಸೆಯ ವಿರುದ್ಧ ತಕ್ಷಣ ರಕ್ಷಣೆ ಬೇಕೆಂದಲ್ಲಿ ನೀವು ವಕೀಲರು ಅಥವಾ ರಕ್ಷಾಧಿಕಾರಿಗಳ ನೆರವಿನಿಂದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು. ಹೀಗೆ ಮಾಡಿದಾಗ, ನಿಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯಿಂದ ನಿಮ್ಮ ಮತ್ತು ನಿಮ್ಮ ಮಗುವಿನ ರಕ್ಷಣೆಗಾಗಿ ನ್ಯಾಯಾಲಯವು “ರಕ್ಷಣಾ ಆದೇಶ”ವನ್ನು ಹೊರಡಿಸುತ್ತದೆ. ಈ ಆದೇಶವು ತಾತ್ಕಾಲಿಕವಾಗಿದ್ದು, ಬದಲಾದ ಸಂದರ್ಭಗಳ ಕಾರಣ ಇನ್ನು ಈ ಆದೇಶದ ಅಗತ್ಯವಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸುವ ತನಕ, ಒಂದು ನಿರ್ದಿಷ್ಟ ಕಾಲದವರೆಗೆ ಅನ್ವಯಿಸುತ್ತದೆ.

ಬೇಕಾದಲ್ಲಿ ಈ ಆದೇಶದ ಅವಧಿಯನ್ನು ಹೆಚ್ಚಿಸಲು ನಿಮ್ಮ ವಕೀಲರ ನೆರವನ್ನು ತೆಗೆದುಕೊಳ್ಳಬಹುದು. ಈ ರಕ್ಷಣಾ ಆದೇಶ ನಿಮಗೆ

ಕೆಳಿಗಿನಂತೆ ಸಹಾಯವಾಗುತ್ತದೆ:

೧. ಕೌಟುಂಬಿಕ ಹಿಂಸೆಯನ್ನು ನಿಲ್ಲಿಸುವುದು. ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯು ಕೆಳಗಿನ ಕ್ರಿಯೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಲಾಗುತ್ತದೆ:

  • ಯಾವುದೇ ರೀತಿಯ ಕೌಟುಂಬಿಕ ಹಿಂಸೆಯನ್ನು ಮಾಡುವುದು/ ಮಾಡಲು ಸಹಾಯ ಮಾಡುವುದು
  • ನಿಮಗೆ ಬೆಂಬಲಿಸುತ್ತಿರುವ ನಿಮ್ಮ ಸ್ನೇಹಿತರು, ನೆಂಟರು, ಅಥವಾ ಇನ್ನ್ಯಾರೋ ವ್ಯಕ್ತಿಯ ವಿರುದ್ಧ ಹಿಂಸೆ ಎಸಗುವುದು

೨. ಯಾವುದೇ ರೀತಿಯ ದೌರ್ಜನ್ಯ ಅಥವಾ ಅಡಚಣೆಯನ್ನು ಒಡ್ಡದಂತೆ ತಡೆಗಟ್ಟುವುದು: ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯು ಕೆಳಗಿನ ಕ್ರಿಯೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಲಾಗುತ್ತದೆ:

  • ನಿಮ್ಮ ವಾಸದ ಸ್ಥಳ, ಉದ್ಯೋಗ ಸ್ಥಳ, ಅಥವಾ ಇನ್ನ್ಯಾವುದೋ ಜಾಗದಲ್ಲಿ ನಿಮಗೆ ಕಿರುಕುಳ ನೀಡುವುದು/ ಅಡಚಣೆಗಳನ್ನುಂಟು ಮಾಡುವುದು
  • ನಿಮ್ಮ ಮಗುವಿಗೆ ಶಾಲೆಯಲ್ಲಿ, ಅಥವಾ ಇತರೆ ಜಾಗದಲ್ಲಿ ತೊಂದರೆ ಕೊಡುವುದು
  • ನಿಮ್ಮನ್ನು ಈ-ಮೇಲ್, ದೂರವಾಣಿ, ಆನ್ಲೈನ್, ಇನ್ನಿತರೇ ಮಾರ್ಗಗಳಿಂದ ಸಂಪರ್ಕ ಮಾಡುವುದು

೩. ನಿಮ್ಮ ಆಸ್ತಿ ಹಾಗು ಹಣಕಾಸಿನ ವ್ಯವಹಾರಗಳನ್ನು ರಕ್ಷಿಸುವುದು:

ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯು ಕೆಳಗಿನ ಕ್ರಿಯೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಲಾಗುತ್ತದೆ: 

  • ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಆಸ್ತಿ, ಮದುವೆಯ ಉಡುಗೊರೆಗಳು, ಸ್ತ್ರೀಧನ, ಇತ್ಯಾದಿಗಳನ್ನು ಮಾರುವುದು ಅಥವಾ ದಾನ ಮಾಡುವುದು
  • ನಿಮ್ಮ ಒಪ್ಪಿಗೆಯಿಲ್ಲದೆ, ಮತ್ತು ನ್ಯಾಯಾಲಯಕ್ಕೆ ತಿಳಿಸದೇ, ನಿಮ್ಮ ಸ್ವಂತ/ಜಂಟಿ ಬ್ಯಾಂಕ್ ಖಾತೆಯನ್ನು , ಅಥವಾ ನಿಮ್ಮ ಸ್ವಂತ/ಜಂಟಿ ಬ್ಯಾಂಕ್ ಲಾಕರನ್ನು ಉಪಯೋಗಿಸುವುದು

೪. ನಿಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ನಡುವಳಿಕೆಯನ್ನು ನಿಯಂತ್ರಿಸುವುದು:

ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯು ಕೆಳಗಿನ ಕ್ರಿಯೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಲಾಗುತ್ತದೆ:

  • ನಿಮಗೆ ನೋವುಂಟುಮಾಡಬಲ್ಲ ಬಂದೂಕುಗಳು, ಶಸ್ತ್ರಾಸ್ತ್ರಗಳು, ಅಥವಾ ಇನ್ನಿತರೇ ಅಪಾಯಕಾರಿ ವಸ್ತುಗಳನ್ನು ಉಪಯೋಗಿಸುವುದು. ಇಂತಹ ವಸ್ತುಗಳನ್ನು ನೇರವಾಗಿ ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು ಎಂದು ಕೂಡ ನ್ಯಾಯಾಲಯ ಆದೇಶ ಹೊರಡಿಸಬಹುದು.
  • ಕೌಟುಂಬಿಕ ಹಿಂಸೆಗೆ ಕಾರಣವಾಗಬಲ್ಲ, ಸಾರಾಯಿ, ಅಫೀಮು, ಇನ್ನಿತರೇ ಅಮಲೇರಿಸುವಂತಹ ಪದಾರ್ಥಗಳ ಸೇವನೆ ಮಾಡುವುದು

ರಕ್ಷಣಾ ಆದೇಶದ ನಂತರವೂ ಕಿರುಕುಳ ತಪ್ಪದಿದ್ದಲ್ಲಿ, ನಿಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಇದನ್ನು ತಿಳಿಸಬಹುದು. ಹೀಗೆ ಮಾಡಿದಲ್ಲಿ, ಕಿರುಕುಳ ನೀಡುತ್ತಿರುವ ವ್ಯಕ್ತಿಗೆ ನ್ಯಾಯಾಲಯ, ಒಂದು ವರ್ಷದ ಸೆರೆಮನೆ ವಾಸ ಅಥವಾ ೨೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸುತ್ತದೆ.

 

 

ವೈದ್ಯಕೀಯ ಸೌಲಭ್ಯಗಳು ಮತ್ತು ಆಶ್ರಯ ಮನೆಗಳು ಎಂದರೇನು?

ವೈದ್ಯಕೀಯ ಸೌಲಭ್ಯಗಳು:

ನಿಮಗೆ ಕೌಟುಂಬಿಕ ಹಿಂಸೆ ಆಗಿದ್ದಲ್ಲಿ, ವೈದ್ಯಕೀಯ ಸಹಾಯ ಪಡೆಯುವುದು ನಿಮ್ಮ ಹಕ್ಕಾಗಿದೆ. ನಿಮಗೆ ಅಥವಾ ನಿಮ್ಮ ಮಗುವಿಗೆ ವೈದ್ಯಕೀಯ ಸಹಾಯ ಬೇಕಾದಲ್ಲಿ, ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳು, ಅಥವಾ ಮಹಿಳಾ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸೇವಾ ಕಾರ್ಯಕರ್ತರನ್ನು ಸಂಪರ್ಕಿಸಿ. ಇದಾದ ನಂತರ ನಿಮ್ಮ/ನಿಮ್ಮ ಮಗುವಿನ ವೈದ್ಯಕೀಯ ವರದಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮತ್ತು ನ್ಯಾಯಾಲಯಕ್ಕೆ ಕಳಿಸಲಾಗುತ್ತದೆ.

ವೈದ್ಯಕೀಯ ಸೌಕರ್ಯದ ಪಾತ್ರ:

  • ಕೌಟುಂಬಿಕ ಹಿಂಸೆಗೆ ಬಲಿಯಾದ ವ್ಯಕ್ತಿಗೆ ವೈದ್ಯಕೀಯ ಸಹಾಯ ನೀಡುವುದು. ಈ ಸೇವೆಯನ್ನು ಯಾವ ವೈದ್ಯಕೀಯ ಸೌಕರ್ಯವೂ ಕೂಡ ನಿರಾಕರಿಸಲಾಗುವುದಿಲ್ಲ.
  • ಡಿ.ಐ.ಆರ್.ಅನ್ನು ಇನ್ನೂ ದಾಖಲಿಸದ್ದಿದ್ದಲ್ಲಿ, ಅದನ್ನು ದಾಖಲಿಸಿ ಸಂಬಂಧಪಟ್ಟ ರಕ್ಷಣಾಧಿಕಾರಿಗಳಿಗೆ ಕಳಿಸುವುದು.
  • ವೈದ್ಯಕೀಯ ವರದಿಯ ಉಚಿತ ಪ್ರತಿಯನ್ನು ಆ ಮಹಿಳೆ/ಮಗುವಿಗೆ ಕೊಡುವುದು

ಆಶ್ರಯ ಮನೆಗಳು:

ಆಶ್ರಯ ಮನೆಗಳನ್ನು ರಾಜ್ಯ ಸರ್ಕಾರಗಳು, ಮಹಿಳೆಯರ ಸುರಕ್ಷಿತ ವಾಸಕ್ಕಾಗಿ ನಿರ್ಮಿಸಿವೆ. ಬಲಾತ್ಕಾರ, ಲೈಂಗಿಕ ಅಪರಾಧಗಳು, ಕೌಟುಂಬಿಕ ಹಿಂಸೆ, ಇತ್ಯಾದಿಗಳಂತಹ ಯಾವುದೇ ರೀತಿಯ ದೌರ್ಜನ್ಯಕ್ಕೊಳಗಾದ ಮಹಿಳೆಯರು ಈ ಆಶ್ರಯ ಮನೆಗಳಲ್ಲಿ ಇರಬಹುದು. ನಿಮಗೆ ಕಿರುಕುಳ ಕೊಟ್ಟ ವ್ಯಕ್ತಿ ನಿಮ್ಮ ಮನೆಯಲ್ಲಿ ವಾಸವಾಗಿದ್ದರಿಂದ, ನೀವು ಹಿಂತಿರುಗಿ ನಿಮ್ಮ ಮನೆಗೆ ಹೋಗಲು ಬರಲಾರದಂತಹ ಪರಿಸ್ಥಿತಿಯಲ್ಲಿ ರಕ್ಷಣಾಧಿಕಾರಿಗಳು ಅಥವಾ ಸೇವಾ ಕಾರ್ಯಕರ್ತರು ನಿಮಗೆ ಆಶ್ರಯ ಮನೆಗೆ ಹೋಗಲು ಸಲಹೆ ನೀಡಬಹುದು. ಆಶ್ರಯ ಮನೆಯನ್ನು ಹುಡುಕಲು, ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ

ಅವರ ಬಳಿ ಜಿಲ್ಲಾ ಮಟ್ಟದ ಆಶ್ರಯ ಮನೆಗಳ ಪಟ್ಟಿ ಇರುತ್ತದೆ.

ನೀವು ಡಿ.ಐ.ಆರ್.ಅನ್ನು ದಾಖಲಿಸದಿದ್ದರೂ ಕೂಡ, ರಕ್ಷಣಾಧಿಕಾರಿಗಳ ಸಹಾಯದಿಂದ, ಯಾವುದೇ ಸರ್ಕಾರಿ ಆಶ್ರಯ ಮನೆಗೆ ನೀವು ಹೋಗಬಹುದು, ಮಾತು ಆ ಆಶ್ರಯ ಮನೆ, ನೀವು ಡಿ.ಐ.ಆರ್. ದಾಖಲಿಸಿಲ್ಲ ಎಂಬ ಓರ್ವ ಕಾರಣಕ್ಕೆ ನಿಮಗೆ ಆಶ್ರಯ ಕೊಡುವುದಿಲ್ಲ ಎನ್ನಲು ಬರುವುದಿಲ್ಲ. ಬೇಕೆಂದಲ್ಲಿ, ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯಿಂದ ನಿಮ್ಮ ಗುರುತನ್ನು ಆಶ್ರಯ ಮನೆ ಮುಚ್ಚಿಡಬಹುದು.

ಕೌಟುಂಬಿಕ ಹಿಂಸೆ ಕಾನೂನಿನಡಿ ಸಮಾಲೋಚನೆ (counseling) ಎಂದರೇನು?

ಸಮಾಲೋಚನೆಯ ಪ್ರಕ್ರಿಯೆಯಿಂದ ಕೌಟುಂಬಿಕ ಹಿಂಸೆ ನಡೆದ ಘಟನೆ ಪುನರಾವರ್ತಿಸುವುದಿಲ್ಲ ಎಂಬ ಆಶ್ವಾಸನೆ ಹುಟ್ಟುತ್ತದೆ. ಸಮಾಲೋಚನೆಯ ಸಂದರ್ಭದಲ್ಲಿ ಮತ್ತೆ ನಿಮಗೆ ಕಿರುಕುಳ ಉಂಟು ಮಾಡಿದಲ್ಲಿ, ಸಲಹೆಗಾರರಿಗೆ ನೀವು ಇದರ ಬಗ್ಗೆ ಹೇಳಿದರೆ, ಅವರು ನ್ಯಾಯಾಧೀಶರಿಂದ ಹಿಂಸೆಯನ್ನು ತಡೆಯುವಂತೆ ಸೂಕ್ತ ಆದೇಶವನ್ನು ಹೊರಡಿಸಬಲ್ಲರು.

ನಿಮ್ಮ ಮತ್ತು ನಿಮಗೆ ಕಿರುಕುಳ ಕೊಟ್ಟ ವ್ಯಕ್ತಿಯ ನಡುವೆ ನಡೆದ ಕೌಟುಂಬಿಕ ಹಿಂಸೆಯ ಸಮಸ್ಯೆಯನ್ನು ಪರಿಹರಿಸಲು, ಇನ್ನು ಮುಂದೆ ಯಾವುದೇ ರೀತಿಯ ಹಿಂಸೆ ನಡೆಯುವುದಿಲ್ಲ ಎಂದು ಲಿಖಿತವಾಗಿ ಖಾತರಿ ಪಡೆದುಕೊಳ್ಳಲು, ಮತ್ತು ಕೌಟುಂಬಿಕ ಹಿಂಸೆಯನ್ನು ತಡೆಯಲು ಸಾಧ್ಯವಾದಷ್ಟು ಅತ್ತ್ಯುತ್ತಮವಾದ ಪರಿಹಾರವನ್ನು ಕಂಡುಕೊಳ್ಳಲು, ಸಲಹೆಗಾರರು ನಿಮಗೆ ನೀಡುವ ವೃತ್ತಿಪರ ಮಾರ್ಗದರ್ಶನಕ್ಕೆ ಸಮಾಲೋಚನೆ ಎನ್ನುತ್ತಾರೆ.

ನಿಮ್ಮನ್ನುದ್ದೇಶಿಸಿ ಅಥವಾ ನಿಮಗೆ ಕಿರುಕುಳ ನೀಡಿದ ವ್ಯಕ್ತಿಯನ್ನುದ್ದೇಶಿಸಿ, ಒಬ್ಬೊಬ್ಬರಾಗಿ ಅಥವಾ ಜೊತೆಯಾಗಿ ನೀವು ನ್ಯಾಯಾಲಯ ನೇಮಿಸಿದ ಸಲಹೆಗಾರರೊಡನೆ ಸಮಾಲೋಚನೆ ಮಾಡಬೇಕು ಎಂದು ನ್ಯಾಯಾಧೀಶರು ಆದೇಶ ಹೊರಡಿಸುತ್ತಾರೆ.

ಕೆಳಗಿನವರು ನಿಮ್ಮ ಪ್ರಕರಣದಲ್ಲಿ ಸಲಹೆಗಾರರಾಗಲು ಬರುವುದಿಲ್ಲ:

  • ೧. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ, ಅಥವಾ ನಿಮ್ಮಿಬರ ಒಪ್ಪಿಗೆಯಿಲ್ಲದೆ, ನಿಮ್ಮ/ನಿಮಗೆ ಕಿರುಕುಳ ನೀಡಿದ ವ್ಯಕ್ತಿಗೆ ಸಂಬಂಧಿಸಿದವರು.
  • ೨. ನಿಮಗೆ ಕಿರುಕುಳ ನೀಡಿದ ವ್ಯಕ್ತಿಯ ಪರ ವಾದಿಸಿದ ವಕೀಲರು

ಯಾವುದೇ ಕಾರಣಕ್ಕೆ ನಿಮಗೆ ನೇಮಕಗೊಂಡ ಸಲಹೆಗಾರರು ಹಿಡಿಸಲಿಲ್ಲವೆಂದಲ್ಲಿ, ಈ ಮಾಹಿತಿಯನ್ನು ನಿಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಬೇಕು. ಹೀಗೆ ಮಾಡಿದಾಗ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು.

ಸಲಹೆಗಾರರ ಪಾತ್ರ:

ಸಲಹೆಗಾರರ ಪಾತ್ರ ಕೆಳಗಿನಂತಿವೆ:

  • ೧. ನಿಮಗೆ ಮತ್ತು ನಿಮಗೆ ಕಿರುಕುಳ ಕೊಟ್ಟ ವ್ಯಕ್ತಿಗೆ ಸಮಂಜಸವಾದ ಜಾಗದಲ್ಲಿ, ನಿಮ್ಮೊಬರೊಡನೆ ಅಥವಾ ನಿಮ್ಮಿಬರೊಡನೆ ಸಂಧಾನ ನಡೆಸುವುದು.
  • ೨. ಕೌಟುಂಬಿಕ ಹಿಂಸೆಯ ಘಟನೆ ಮರುಕಳಿಸಬಾರದು ಎಂಬ ಗುರಿಯನ್ನು ಮುಂದಿಟ್ಟುಕೊಂಡು ಸಲಹೆಗಾರರು ಸಮಾಲೋಚನೆಯ ಪ್ರಕ್ರಿಯೆಯನ್ನು ನಡೆಸಬೇಕು. ಈ ನಿಟ್ಟಿನಲ್ಲಿ, ಕೆಳಗಿನ ಭರವಸೆಗಳುಳ್ಳ ದಾಖಲಾ ಪಾತ್ರವನ್ನು ನಿಮಗೆ ಕಿರುಕುಳ ನೀಡಿದ ವ್ಯಕ್ತಿಯಿಂದ

ಅವರು ತೆಗೆದುಕೊಳ್ಳಬಹುದು:

  • – ಮತ್ತೆ ಎಂದೂ ಕೌಟುಂಬಿಕ ಹಿಂಸೆಯನ್ನು ಪುನರಾವರ್ತಿಸುವುದಿಲ್ಲ
  • – ನಿಮ್ಮನ್ನು ಪತ್ರಗಳು, ದೂರವಾಣಿ, ಈ-ಮೇಲ್, ಅಥವಾ ಇನ್ನ್ಯಾವುದೋ ಮಾಧ್ಯಮದ ಮುಖಾಂತರ ಭೇಟಿಯಾಗಲು, ಅಥವಾ ಸಂಪರ್ಕಿಸಲು ಪ್ರಯತ್ನಿಸುವುದಿಲ್ಲ (ನ್ಯಾಯಾಧೀಶರು ಅನುವು ಮಾಡಿಕೊಟ್ಟ ಮಾಧ್ಯಮಗಳು, ಅಥವಾ ಸಲಹೆಗಾರರ ಉಪಸ್ಥಿತಿಯಲ್ಲಿ ಭೇಟಿಯಾಗುವುದನ್ನು ಹೊರತುಪಡಿಸಿ)
  • – ನ್ಯಾಯಾಲಯದ ಹೊರಗೆ ಒಪ್ಪಂದದ ಮೇರೆಗೆ ನಿಮ್ಮ ಸಮಸ್ಯೆಯನ್ನು ಬಗೆಹರಿಸಿ, ಪ್ರಕರಣವನ್ನು ಅಂತ್ಯಗೊಳಿಸುವುದಾಗಿ ನೀವು ನಿಶ್ಚಯಿಸಿದಲ್ಲಿ, ಸಲಹೆಗಾರರಿಗೆ ಇದನ್ನು ತಿಳಿಸಬೇಕು. ಆಗ ಅವರು ಎಲ್ಲರಿಗೂ ಸಮಂಜಸವೆನಿಸುವ ಪರಿಹಾರವನ್ನು ಸೂಚಿಸುತ್ತಾರೆ.

ಸಮಾಲೋಚನೆಯ ಸಂದರ್ಭದಲ್ಲಿ, ನಿಮಗೆ ಹಿಂಸೆ ನೀಡಿದ ವ್ಯಕ್ತಿ, ಯಾಕೆ ಹಾಗೆ ಮಾಡಿದರು ಎಂದು ಸಮರ್ಥನೆ ನೀಡಲು ಅವಕಾಶವಿರುವುದಿಲ್ಲ. ಸಮಾಲೋಚನೆಯ ನಂತರ, ಸಲಹೆಗಾರರು ನಡೆದ ಪ್ರಕ್ರಿಯೆಯ ವರದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ. ಹಾಗು, ಸಮಾಲೋಚನೆ ಮುಗಿದ ೨ ತಿಂಗಳುಗಳೊಳಗೆ, ನ್ಯಾಯಾಲಯವು ಪ್ರಕರಣದ ಮುಂದಿನ ದಿನಾಂಕವನ್ನು ನಿಶ್ಚಯಿಸುತ್ತದೆ. ಒಂದು ವೇಳೆ ಸಮಾಲೋಚನೆಯ ಮುಖಾಂತರ ಒಪ್ಪಂದ ಆಗಲಿಲ್ಲವೆಂದರೆ, ಕಾರಣಗಳನ್ನು ಸಲಹೆಗಾರರು ನ್ಯಾಯಾಲಯಕ್ಕೆ ಹೇಳಬೇಕಾಗುತ್ತದೆ.