ಯಾವುದೇ ಮಹಿಳೆ, ತನಗೋಸ್ಕರ ಅಥವಾ ತನ್ನ ಮಕ್ಕಳಿಗೋಸ್ಕರ, ದೂರು ದಾಖಲಿಸಿ, ಕೌಟುಂಬಿಕ ಹಿಂಸೆ ಕಾನೂನಿನಡಿ ರಕ್ಷಣೆ ಪಡೆಯಬಹುದು. ಆ ಮಹಿಳೆ ಯಾವ ಧರ್ಮಕ್ಕೆ ಸೇರಿರುವರು ಎಂಬುದು ಅಪ್ರಸ್ತುತ. ಅಂದರೆ, ಯಾವುದೇ ಜಾತಿ ಅಥವಾ ಮತಕ್ಕೆ ಸೇರಿದ ಮಹಿಳೆ ಕೌಟುಂಬಿಕ ಹಿಂಸೆಯ ವಿರುದ್ಧ ರಕ್ಷಣೆ ಪಡೆಯಬಹುದು.
ಗಮನಿಸಬೇಕಾದ ಅಂಶಗಳು: ನೀವು ನ್ಯಾಯಾಲಯಕ್ಕೆ ಹೋಗಬೇಕು ಎಂದು ನಿರ್ಧರಿಸಿದ್ದಲ್ಲಿ, ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿತ್ತು, ಮತ್ತು ನೀವು ಅವರೊಡನೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಿರಿ, ಎಂಬುದನ್ನು ಖಾತರಿ ಮಾಡಬೇಕು. ಕೆಳಗಿನ ಸಂದರ್ಭಗಳಲ್ಲಿ ನೀವು ದೂರು ನೀಡಿ ರಕ್ಷಣೆ ಪಡೆಯಬಹುದು:
೧. ನೀವು ವಿವಾಹಿತರಾಗಿದ್ದಲ್ಲಿ:
ನೀವು ಮದುವೆಯಾಗಿದ್ದಲ್ಲಿ, ಮತ್ತು ನಿಮ್ಮ ಗಂಡನಿಂದ ಅಥವಾ ಅತ್ತೆ-ಮಾವಂದಿರಿಂದ ಹಿಂಸೆಗೆ ಒಳಗಾಗಿದ್ದಲ್ಲಿ, ಅವರ ವಿರುದ್ಧ ದೂರು ನೀಡಬಹುದು.
೨. ನೀವು ವಿಚ್ಛೇದಿತರಾಗಿದ್ದಲ್ಲಿ:
ನೀವು ವಿಚ್ಛೇದಿತರಾಗಿದ್ದಲ್ಲಿ, ನಿಮ್ಮ ಪ್ರಕರಣದ ಸಂದರ್ಭಾನುಸಾರ, ನಿಮಗೆ ರಕ್ಷಣೆ ಹಾಗು ಪರಿಹಾರ, ಸಿಗಬಹುದು, ಸಿಗದಿರಬಹುದು. ರಕ್ಷಣೆ ಹಾಗು ಪರಿಹಾರ ಸಿಗಬಹುದಾದ ಕೆಲವು ಸಂದರ್ಭಗಳು ಕೆಳಗಿನಂತಿವೆ: – ನಿಮ್ಮ ವಿಚ್ಛೇದನೆಯ ಪೂರ್ವ ಹಿಂಸೆಗೆ ಬಲಿಯಾಗಿದ್ದಲ್ಲಿ, ನಿಮ್ಮ ಗಂಡ ಮತ್ತು ಅತ್ತೆ-ಮಾವಂದಿರ ಜೊತೆ ಹಿಂಸೆ ನಡೆದ ಸಮಯದಲ್ಲಿ ಕೌಟುಂಬಿಕ ಸಂಬಧವಿದ್ದ ಕಾರಣ ನೀವು ದೂರು ನೀಡಬಹುದು.
ನಿಮ್ಮ ವಿಚ್ಛೇದನೆಯ ನಂತರ ಹಿಂಸೆಗೆ ಬಲಿಯಾದರೆ, ನಿಮ್ಮ ಮತ್ತು ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ, ಹಿಂಸೆಯ ಸಮಯದಲ್ಲಿ ಕೌಟುಂಬಿಕ ಸಂಬಂಧ ಇತ್ತು ಎಂದು ನೀವು ಸಾಬೀತುಪಡಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ನಿಮ್ಮ ನಡುವೆ ಕೌಟುಂಬಿಕ ಸಂಬಂಧವಿಲ್ಲದಿದ್ದರೂ ಸಹ ನ್ಯಾಯಾಲಯವು ನಿಮ್ಮ ಕೋರಿಕೆಯನ್ನು ಮನ್ನಿಸುತ್ತದೆ. ಉದಾಹರಣೆಗೆ, ವಿಚ್ಛೇದನದ ನಂತರ, ನೀವು ಮತ್ತು ನಿಮ್ಮ ಗಂಡ ಜೊತೆಯಾಗಿ ನಿಮ್ಮ ಮಗುವಿನ ಪೋಷಣೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ನೀವು ಹಿಂಸೆಗೆ ಬಲಿಯಾದಾಗ.
ನೀವು ಹಿಂದೆಂದೋ ವಿಚ್ಛೇದನಾ ಪ್ರಕ್ರಿಯೆಯನ್ನು ಶುರು ಮಾಡಿದ್ದಿರಿ, ಆದರೆ ವಿಚ್ಚೇನದ ಪಡೆಯಲಿಲ್ಲ. ಹೀಗಿರುವಾಗ ಕೌಟುಂಬಿಕ ಹಿಂಸೆಗೆ ಒಳಗಾದಲ್ಲಿ ದೂರು ಸಲ್ಲಿಸಬಹುದು.
೩. ನೀವು ನಿಮ್ಮ ಗಂಡನನ್ನು ಬಿಟ್ಟು ಬಂದಿದ್ದಲ್ಲಿ:
ನಿಮ್ಮ ಗಂಡ ನಿಮ್ಮನ್ನು ಹೊಡೆಯುವುದು, ಮೌಖಿಕವಾಗಿ ನಿಂದಿಸುವುದು, ಇತ್ಯಾದಿ ರೀತಿಗಳಿಂದ ನಿಮ್ಮ ಮೇಲೆ ಕೌಟುಂಬಿಕ ಹಿಂಸೆ ಮಾಡಿದ್ದ ಕಾರಣ, ನೀವು ಅವರನ್ನು ಬಿಟ್ಟು ಬಂದಿದ್ದಲ್ಲಿ, ಅವರ ವಿರುದ್ಧ ದೂರು ನೀಡಬಹುದು. ಇನ್ನಿತರೇ ಕಾರಣಗಳಿಂದಾಗಿ ನೀವು ನಿಮ್ಮ ಗಂಡನನ್ನು ಬಿಟ್ಟು ಬಂದಿದ್ದಲ್ಲಿ, ಅವರ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸಲು ಬರುವುದಿಲ್ಲ. ಉದಾಹರಣೆಗೆ, ಬೇರೆ ಪುರುಷನ ಜೊತೆಗೆ ವಾಸಿಸಲು ನಿಮ್ಮ ಗಂಡನನ್ನು ಬಿಟ್ಟು ಬಂದಿದ್ದಲ್ಲಿ, ಅಥವಾ ಒಬ್ಬರೇ ವಾಸಿಸಲು ನಿಮ್ಮ ಗಂಡನನ್ನು ಬಿಟ್ಟು ಬಂದಿದ್ದಲ್ಲಿ, ಅವರ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸಲು ಸಾಧ್ಯವಿಲ್ಲ.
೪. ನೀವು ನ್ಯಾಯಿಕವಾಗಿ ಅಗಲಿದ್ದಲ್ಲಿ:
ನೀವು ನಿಮ್ಮ ಗಂಡನಿಂದ ನ್ಯಾಯಿಕವಾಗಿ ಅಗಲಿದ್ದಲ್ಲಿ, ಅಗಲುವಿಕೆಯ ಆದೇಶದ ಮೊದಲು ಅಥವಾ ನಂತರ, ನಿಮ್ಮ ಗಂಡನಿಂದ ಅಥವಾ ಅತ್ತೆ-ಮಾವಂದಿರಿಂದ ಹಿಂಸೆಗೆ ಬಲಿಯಾದಲ್ಲಿ, ಅವರ ವಿರುದ್ಧ ದೂರು ಸಲ್ಲಿಸಬಹುದು.
೫. ನೀವು ಲಿವ್-ಇನ್ ಸಂಬಂಧದಲ್ಲಿ ಇದ್ದಲ್ಲಿ:
ನೀವು ಲಿವ್-ಇನ್ ಸಂಬಂಧದಲ್ಲಿ ಇದ್ದು, ನಿಮ್ಮ ಸಂಗಾತಿಯಿಂದ ಕೌಟುಂಬಿಕ ಹಿಂಸೆಗೆ ಒಳಗಾದಲ್ಲಿ, ಅವರ ವಿರುದ್ಧ ದೂರು ಸಲ್ಲಿಸಬಹುದು. ಕೆಲವು ಸಂದರ್ಭಗಳಲ್ಲಿ, ನೀವು ಲಿವ್-ಇನ್ ಸಂಬಂಧದಿಂದ ಹೊರ ಬಂದಮೇಲೂ ಕೂಡ, ಸಂಬಂಧದಲ್ಲಿರುವಾಗ ನಿಮ್ಮ ಸಂಗಾತಿಯಿಂದ ಹಿಂಸೆಗೆ ಒಳಗಾಗಿದ್ದರೆ, ಅವರ ವಿರುದ್ಧ ದೂರು ಸಲ್ಲಿಸಬಹುದು.
೬. ನೀವು ವಿಧವೆಯಾಗಿದ್ದಲ್ಲಿ:
ನಿಮ್ಮ ಗಂಡ ಸತ್ತ ಮೇಲೂ ಸಹ ನೀವು ನಿಮ್ಮ ಅತ್ತೆ-ಮಾವಂದಿರ ಜೊತೆ ವಾಸ ಮಾಡುತ್ತಿದ್ದಲ್ಲಿ, ಅವರ ಜೊತೆ ನಿಮಗಿರುವ ಸಂಬಂಧ ಮುರಿದುಹೋಗದ ಕಾರಣ, ಅದು ಕೌಟುಂಬಿಕ ಸಂಬಂಧ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ಅತ್ತೆ-ಮಾವಂದಿರಿಂದ ನೀವು ಹಿಂಸೆಗೆ ಒಳಗಾದಲ್ಲಿ, ಅವರ ವಿರುದ್ಧ ನೀವು ದೂರು ಸಲ್ಲಿಸಬಹುದು. ಉದಾಹರಣೆಗೆ, ನೀವು ವಿಧವೆಯಾಗಿದ್ದು, ನಿಮ್ಮ ಅತ್ತೆ ನಿಮಗೆ ಕಿರುಕುಳ ಕೊಡುತ್ತಿದ್ದಲ್ಲಿ, ಅವರ ವಿರುದ್ಧ ದೂರು ಸಲ್ಲಿಸಬಹುದು.