ಕೌಟುಂಬಿಕ ಹಿಂಸೆಯ ದೂರು ನೀಡುವಾಗ ನಿಮಗೆ ಹೆಚ್ಚುವರಿ ಸಹಾಯ ಮತ್ತು ಬೆಂಬಲ ಬೇಕಾಗಬಹುದು. ಕೆಳಗಿನ ಅಧಿಕಾರಿಗಳ ನೆರವಿನಿಂದ ನೀವು ಈ ಸಹಾಯ ಮತ್ತು ಬೆಂಬಲ ಪಡೆಯಬಹುದು.
ಬೆಂಬಲ ಮತ್ತು ನೆರವು
ರಕ್ಷಣಾಧಿಕಾರಿಗಳು:
ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳನ್ನು ನೀವು ಸಂಪರ್ಕಿಸಿದರೆ ಅವರು ನಿಮಗೆ ಉಚಿತ ಕಾನೂನು ನೆರವು, ಸರ್ಕಾರಿ ಆಶ್ರಯದ ನೆರವು, ಬೇಕಾದಲ್ಲಿ ಸೂಕ್ತ ಸೇವಾ ಕಾರ್ಯಕರ್ತರ ಸಂಪರ್ಕವನ್ನು ಕಲ್ಪಿಸಿಕೊಡುತ್ತಾರೆ.
ಸರ್ಕಾರೇತರ ಸಂಸ್ಥೆಗಳು ಮತ್ತು ಸೇವಾ ಕಾರ್ಯಕರ್ತರು:
ನಿಮಗೆ ಕಾನೂನು ನೆರವು, ಹಕ್ಕುಗಳ ಬಗ್ಗೆ ಮಾಹಿತಿ, ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಸಂಪರ್ಕ, ಇತರೆ ಸಹಾಯ ಅಥವಾ ಬೆಂಬಲ ಬೇಕಾದಲ್ಲಿ, ಸರ್ಕಾರೇತರ ಸಂಸ್ಥೆಗಳನ್ನು ಅಥವಾ ಸೇವಾ ಕಾರ್ಯಕರ್ತರನ್ನು ಸಂಪರ್ಕಿಸಬಹುದು. ಆಯಾ ಸಂಸ್ಥೆಗೆ ಸಂಬಂಧಪಟ್ಟಂತೆ ಅವರು ನಿಮಗೆ ಆಶ್ರಯ, ಉದ್ಯೋಗಾವಕಾಶಗಳು, ವೃತ್ತಿಪರ ತರಬೇತಿ, ಸಮಾಲೋಚನೆ, ಇತ್ಯಾದಿ ಬೆಂಬಲ/ಅವಕಾಶಗಳನ್ನೂ ಒದಗಿಸಿ ಕೊಡಬಹುದು. ಬಹುತೇಕ ಈ ಸೇವೆಗಳು ಉಚಿತವಾಗಿ ಲಭ್ಯವಿದ್ದು, ಇದು ನೀವು ಸಂಪರ್ಕಿಸಿದ ಸಂಸ್ಥೆಯನ್ನವಲಂಬಿಸಿದೆ.
ಸೇವಾ ಕಾರ್ಯಕರ್ತರಿಗೆ ಡಿ.ಐ.ಆರ್.ಅನ್ನು ದಾಖಲಿಸಿ ಸಂಬಂಧಪಟ್ಟ ನ್ಯಾಯಾಲಯ ಅಥವಾ ರಕ್ಷಣಾಧಿಕಾರಿಗಳಿಗೆ ಕಲಿಸುವ ಅಧಿಕಾರ ಇರುತ್ತದೆ. ನಿಮಗೆ ಶಾರೀರಿಕವಾಗಿ ಪೆಟ್ಟು ಬಿದ್ದಿದ್ದಲ್ಲಿ, ನಿಮ್ಮ ವೈದ್ಯಕೀಯ ತಪಾಸಣೆ ನಡೆಸಿ, ನಿಮ್ಮ ವೈದ್ಯಕೀಯ ವರದಿಯನ್ನು ಸಂಬಂಧಪಟ್ಟ ರಕ್ಷಣಾಧಿಕಾರಿಗಳು ಅಥವಾ ಪೊಲೀಸ್ ಠಾಣೆಗೆ ಕಳುಹಿಸಲೂ ಸಹ ಅವರು ಸಹಾಯ ಮಾಡಬಲ್ಲರು.
ಕಾನೂನು ನೆರವು:
ವಕೀಲರ ನೆರವು ಪಡೆಯುವುದು:
ನೀವು ವಕೀಲರ ನೆರವಿನಿಂದ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹೋಗಬಹುದು. ವಕೀಲರ ಬಳಿ ಹೋಗುವುದು ನಿಮಗೆ ದುಬಾರಿ ಎನಿಸಿದ್ದಲ್ಲಿ, ನಿಮ್ಮ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರವನ್ನು ಸಂಪರ್ಕಿಸಿ ಉಚಿತ ಕಾನೂನು ನೆರವು ಪಡೆಯಬಹುದು. ಉಚಿತ ಕಾನೂನು ನೆರವು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ನೀವು ರಕ್ಷಣಾಧಿಕಾರಿಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ, ಅಥವಾ ಸೇವಾ ಕಾರ್ಯಕರ್ತರಿಗೆ ಕೇಳಬಹುದು.