ಮಾಹಿತಿಗಾಗಿ ಕೋರಿಕೆ ಸಲ್ಲಿಕೆ

ಮಾಹಿತಿ ಕೋರಿ ಸಲ್ಲಿಸುವ ಅರ್ಜಿಯು ಇಂಗ್ಲಿಷ್, ಹಿಂದಿ ಅಥವಾ ಆಯಾ ಪ್ರದೇಶದ ಅಧಿಕೃತ ಭಾಷೆಯಲ್ಲಿರಬಹುದು. ಅರ್ಜಿಯು ಲಿಖಿತ ರೂಪದಲ್ಲಿರಬೇಕು. ಅದನ್ನು ವೈಯುಕ್ತಿಕವಾಗಿ, ಅಂಚೆ ಮೂಲಕ, ಇ-ಮೇಲ್ ಮೂಲಕ ಅಥವಾ ಆನ್ ಲೈನ್ ವೆಬ್ ಸೈಟುಗಳ ಮೂಲಕ ಸಲ್ಲಿಸಬಹುದಾಗಿದೆ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಸಾರ್ವಜನಿಕ ಪ್ರಾಧಿಕಾರಗಳಿಗೆ ಮಾಹಿತಿ ಹಕ್ಕು ಅರ್ಜಿಯನ್ನು ನೇರವಾಗಿ ಸಲ್ಲಿಸಬಹುದಾದ ಆನ್ ಲೈನ್ ಫೋರಂ ಲಭ್ಯವಿದೆ. ಅರ್ಜಿಯನ್ನು ಆನ್ ಲೈನ್ ಮೂಲಕ ಕಳುಹಿಸುವ ಕುರಿತು ಜಾಲತಾಣದಲ್ಲಿ ಹಂತ-ಹಂತವಾಗಿ ನಿಮಗೆ ಮಾರ್ಗದರ್ಶನ ಲಭ್ಯವಿದ್ದು ಈ ಸೌಲಭ್ಯವನ್ನೂ ನೀವು ಬಳಸಿಕೊಳ್ಳಬಹುದಾಗಿದೆ.

ಯಾವುದೇ ವ್ಯಕ್ತಿಯು ಬರವಣಿಗೆ ಮಾಡಲು ಅಶಕ್ತರು ಅಥವಾ ಅನಕ್ಷರಸ್ಥರಾಗಿದ್ದ ಪಕ್ಷದಲ್ಲಿ ಅಂತಹ ವ್ಯಕ್ತಿಗೆ ಅವಶ್ಯವಿರುವ ಮಾಹಿತಿ ವಿವರಗಳನ್ನು ಅವರಿಂದ ಪಡೆದುಕೊಂಡು ಲಿಖಿತ ರೂಪದಲ್ಲಿ ಅರ್ಜಿ ತಯಾರು ಮಾಡುವುದು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕರ್ತವ್ಯ. ಕಣ್ತಪ್ಪಿನಿಂದಾಗಿ ಅರ್ಜಿಯನ್ನು ಅನ್ಯ ಪ್ರಾಧಿಕಾರಕ್ಕೆ ಕಳುಹಿಸಿದಲ್ಲಿ, ಅಂತಹ ಅರ್ಜಿಯನ್ನು ಸ್ವೀಕರಿಸುವ ಸಾರ್ವಜನಿಕ ಮಾಹಿತಿ ಅಧಿಕಾರಿಯು ಐದು ದಿನಗಳೊಳಗಾಗಿ ಸಂಬಂಧಿಸಿದ ಪ್ರಾಧಿಕಾರಕ್ಕೆ ಅರ್ಜಿಯನ್ನು ವರ್ಗಾಯಿಸಲು ಕರ್ತವ್ಯಬದ್ಧನಾಗಿರುತ್ತಾನೆ.

ಮಾಹಿತಿ ಹಕ್ಕು ಅರ್ಜಿಯ ಶುಲ್ಕ

ಮಾಹಿತಿ ಹಕ್ಕು ಅರ್ಜಿಯೊಡನೆ ತೆರಬೇಕಾದ ಶುಲ್ಕವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬೇರೆಯಾಗಿರುತ್ತದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಪ್ರಾಧಿಕಾರಗಳಿಗೆ ಈ ಶುಲ್ಕ ರೂ. 10. ಆಯಾ ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿರುವ ಸಾರ್ವಜನಿಕ ಪ್ರಾಧಿಕಾರಗಳಿಗೆ ತೆರಬೇಕಾದ ಶುಲ್ಕವನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿರಿ.

ಅರ್ಜಿ ಶುಲ್ಕದ ಜೊತೆಯಲ್ಲಿ, ಮಾಹಿತಿಯನ್ನು ನಿಮಗೆ ತಲುಪಿಸಲು (ನಮೂನೆ/ಪುಟಗಳ ಸಂಖ್ಯೆಯ ಆಧಾರದ ಮೇಲೆ) ನೀವು ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಪ್ರಾಧಿಕಾರಗಳಿಗೆ ತೆರಬೇಕಾದ ಈ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮಾಹಿತಿ ಹಕ್ಕು ನಿಯಮಗಳು, 2012ನ್ನು ನೋಡಿರಿ. ರಾಜ್ಯ ಸರ್ಕಾರದ ಅಡಿಯಲ್ಲಿರುವ
ಸಾರ್ವಜನಿಕ ಪ್ರಾಧಿಕಾರಗಳಿಗೆ ತೆರಬೇಕಾದ ಶುಲ್ಕಕ್ಕೆ ಆಯಾ ರಾಜ್ಯದ ನಿಯಮಾವಳಿಗಳನ್ನು ನೋಡಿರಿ.

ಸಾರ್ವಜನಿಕ ಮಾಹಿತಿ ಅಧಿಕಾರಿಯ ನಿಮಗೆ ಹೆಚ್ಚಿನ ಶುಲ್ಕವನ್ನು ಪಾವತಿಸುವಂತೆ ತಿಳಿಸಬಹುದು. ಆದರೆ, ಶುಲ್ಕದ ರೂಪದಲ್ಲಿ ತೆರಬೇಕಾದ ಮೊತ್ತಕ್ಕೆ ಸೂಕ್ತ ಲೆಕ್ಕಾಚಾರವನ್ನು ಆತ ನೀಡತಕ್ಕದ್ದು ಮತ್ತು ಅಂತಹ ಮೊತ್ತ ನ್ಯಾಯೋಚಿತವೆಂದು ಸಮರ್ಥಿಸಿಕೊಳ್ಳತಕ್ಕದ್ದು. ಹೆಚ್ಚಿನ ಶುಲ್ಕ ಪಾವತಿಗಾಗಿ ನೀಡುವ ನೋಟೀಸಿನ ದಿನಾಂಕದಿಂದ ಆ ಶುಲ್ಕವನ್ನು ಪಾವತಿಸುವ ದಿನದವರೆಗಿನ ಅವಧಿಯನ್ನು, ನಿಮಗೆ ಮಾಹಿತಿ ನೀಡಬೇಕಾದ ಕಡ್ಡಾಯ 30 ದಿನಗಳ ಅವಧಿಯೊಳಗೆ ಪರಿಗಣಿಸಲಾಗುವುದಿಲ್ಲ.

ಮಾಹಿತಿ ಹಕ್ಕು ಅರ್ಜಿಯನ್ನು ವಿಲೇ ಮಾಡುವ ಪ್ರಕ್ರಿಯೆ

ಅರ್ಜಿದಾರನು ಕೋರಿರುವ ಮಾಹಿತಿಯನ್ನು ಒದಗಿಸಲು ಸಾರ್ವಜನಿಕ ಮಾಹಿತಿ ಅಧಿಕಾರಿ 30 ದಿನಗಳ ಸಮಯವನ್ನು ಹೊಂದಿರುತ್ತಾರೆ. ಅರ್ಜಿಯನ್ನು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸಲ್ಲಿಸಿದ್ದಲ್ಲಿ, ಕೋರಿರುವ ಮಾಹಿತಿಯನ್ನು 35 ದಿನಗಳ ಒಳಗೆ ಒದಗಿಸತಕ್ಕದ್ದು. ಕೋರಿರುವ ಮಾಹಿತಿಯು ವ್ಯಕ್ತಿಯೊಬ್ಬನ ಪ್ರಾಣಕ್ಕೆ ಪ್ರತಿಕೂಲವಾಗಿದ್ದು, ತುರ್ತಾಗಿ ಅಗತ್ಯವಿದ್ದಲ್ಲಿ, ಅಂತಹ ಮಾಹಿತಿಯನ್ನು 48 ಘಂಟೆಗಳ ಒಳಗೆ ಒದಗಿಸತಕ್ಕದ್ದು.

ಈ ಕಾನೂನಿನ ಅಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯ ಕೆಲವು ಅರ್ಜಿಗಳಿಗೆ ಉತ್ತರ ನೀಡಲು ನಿರಾಕರಿಸಬಹುದು. ಈ ಕಾಯ್ದೆಯ ಪರಿಧಿಯಿಂದ ವಿನಾಯ್ತಿ ಪಡೆದಿರುವ ಮಾಹಿತಿಗಳ ವಿವರಕ್ಕಾಗಿ ಸೆಕ್ಷನ್ 8 ಮತ್ತು 9 ನ್ನು ದಯವಿಟ್ಟು ಗಮನಿಸಿರಿ.

ಮಾಹಿತಿಯನ್ನು 30/35 ದಿನಗಳ ಒಳಗೆ ಒದಗಿಸದಿದ್ದಲ್ಲಿ, ಸಾರ್ವಜನಿಕ ಮಾಹಿತಿ ಅಧಿಕಾರಿ/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿಯನ್ನು ತಡೆಹಿಡಿದಿದ್ದಾರೆಂದು ನೀವು ಭಾವಿಸಬಹುದು. ಮೇಲಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿಗಾಗಿ ಅರ್ಜಿ ಶುಲ್ಕವನ್ನು ಹೊರತುಪಡಿಸಿ ಬೇರಾವುದೇ ಮೊತ್ತವನ್ನು ನಿಮ್ಮಿಂದ ಪಡೆಯುವಂತಿಲ್ಲ.

ನೀವು ಕೋರಿರುವ ಮಾಹಿತಿ ಒದಗಿಸಲು ನಿರಾಕರಣೆ

ಸಾರ್ವಜನಿಕ ಮಾಹಿತಿ ಅಧಿಕಾರಿಯು ನೀವು ಕೋರಿರುವ ಮಾಹಿತಿಯನ್ನು ನೀಡಲು ನಿರಾಕರಿಸಿದಲ್ಲಿ, ಆತ ಈ ಕೆಳಕಂಡ ವಿವರಗಳನ್ನು ನೀಡತಕ್ಕದ್ದು.
 ನಿಮ್ಮ ಕೋರಿಕೆಯನ್ನು ಯಾವ ಕಾರಣಕ್ಕಾಗಿ ನಿರಾಕರಿಸಲಾಗಿದೆ.
 ಈ ನಿರಾಕರಣೆಯ ವಿರುದ್ಧ ನೀವು ಯಾವ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು.
 ಈ ಮೇಲ್ಮನವಿಯನ್ನು ಸಲ್ಲಿಸಲು ಲಭ್ಯವಿರುವ ಅವಧಿ.

ಸಾರ್ವಜನಿಕ ಮಾಹಿತಿ ಅಧಿಕಾರಿಯು ಕಾನೂನುಬಾಹಿರವಾಗಿ ನಿಮಗೆ ಮಾಹಿತಿಯನ್ನು ಒದಗಿಸದಿದ್ದಲ್ಲಿ ಅಥವಾ ಮಾಹಿತಿಯನ್ನು ನೀಡಲು ನಿರಾಕರಿಸಿದಲ್ಲಿ, ನೀವು ಅವರಿಗಿಂತ ಹೆಚ್ಚಿನ ಶ್ರೇಣಿಯ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು ಅಥವಾ ಕೇಂದ್ರ ಅಥವಾ ರಾಜ್ಯ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಬಹುದು.

ಮಾಹಿತಿಯನ್ನು ತಡೆಹಿಡಿದಿದ್ದಕ್ಕಾಗಿ/ತಪ್ಪು ಮಾಹಿತಿಯನ್ನು ನೀಡಿದ್ದಕ್ಕಾಗಿ ವಿಧಿಸುವ ಜುಲ್ಮಾನೆ

ಮಾಹಿತಿಯನ್ನು ತಡೆಹಿಡಿದ ಅಥವಾ ತಪ್ಪು ಮಾಹಿತಿಯನ್ನು ನೀಡಿದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ರಾಜ್ಯ ಅಥವಾ ಕೇಂದ್ರ ಮಾಹಿತಿ ಆಯೋಗವು ಪ್ರತಿ ದಿನಕ್ಕೆ ರೂ.250/- ಜುಲ್ಮಾನೆ ವಿಧಿಸಬಹುದು. ಮಾಹಿತಿಯನ್ನು ಒದಗಿಸುವ ದಿನದವರೆಗೂ ಈ ಜುಲ್ಮಾನೆಯನ್ನು ತೆರತಕ್ಕದ್ದು. ಆದರೆ, ಹೀಗೆ ತೆರುವ ಜುಲ್ಮಾನೆಯ ಗರಿಷ್ಟ ಮೊತ್ತ ರೂ.25,000/-ವನ್ನು ಮೀರತಕ್ಕದ್ದಲ್ಲ.

ಜುಲ್ಮಾನೆ ವಿಧಿಸುವ ಮೊತ್ತ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಅವಕಾಶ ನೀಡತಕ್ಕದ್ದು. ಆದರೆ, ತನ್ನ ತೀರ್ಮಾನ ನ್ಯಾಯೋಚಿತ ಎಂದು ರುಜುವಾತುಪಡಿಸುವ ಜವಾಬ್ದಾರಿ ಅಧಿಕಾರಿಯದ್ದಾಗಿರುತ್ತದೆ. ಸೇವಾ ನಿಯಮಗಳ ಅನ್ವಯ ಸಾರ್ವಜನಿಕ ಮಾಹಿತಿ ಅಧಿಕಾರಿಯ ವಿರುದ್ಧ ಶಿಸ್ತುಕ್ರಮವನ್ನು ಜರುಗಿಸಬಹುದಾಗಿದೆ.

ಮಾಹಿತಿ ಹಕ್ಕು ಅರ್ಜಿ ಕುರಿತು ಮೇಲ್ಮನವಿ

ಸಾರ್ವಜನಿಕ ಮಾಹಿತಿ ಅಧಿಕಾರಿಯು 30 ದಿನಗಳ ಅವಧಿಯಲ್ಲಿ ಯಾವುದೇ ಆದೇಶವನ್ನು ಮಾಡದಿದ್ದಲ್ಲಿ ಈ ತೀರ್ಮಾನದ ವಿರುದ್ಧ ನೀವು ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ. ಸದರಿ ಮೇಲ್ಮನವಿಯನ್ನು ಸಾರ್ವಜನಿಕ ಸಂಪರ್ಕ ಅಧಿಕಾರಿಗಿಂತ ಹಿರಿಯರಾದ ಅಧಿಕಾರಿಯ ಮುಂದೆ, 30 ದಿನಗಳ ಒಳಗೆ ಸಲ್ಲಿಸಬಹುದಾಗಿದೆ. ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬವಾಗಿದ್ದು ಸದರಿ ಮೇಲ್ಮನವಿ ಅಧಿಕಾರಿಗೆ ಈ ವಿಳಂಬವು ನ್ಯಾಯೋಚಿತವಾದುದು ಎಂದು ಮನದಟ್ಟಾದಲ್ಲಿ, ಮೇಲ್ಮನವಿ ಸಲ್ಲಿಸುವ ಅವಧಿಯನ್ನು ಅವರು ವಿಸ್ತರಿಸಬಹುದಾಗಿದೆ.

ಸಾಮಾನ್ಯವಾಗಿ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳು ತಮ್ಮ ಅಧಿಕೃತ ವೆಬ್ ಸೈಟ್ ಬನಲ್ಲಿ ಮೇಲ್ಮನವಿ ಪ್ರಾಧಿಕಾರಿಯ ಕುರಿತು ಮಾಹಿತಿ ನೀಡಿರುತ್ತವೆ. ಸದರಿ ಮೇಲ್ಮನವಿ ಅಧಿಕಾರಿಯು ಸಾರ್ವಜನಿಕ ಸಂಪರ್ಕಾಧಿಕಾರಿಗಿಂತ ಹಿರಿಯ ಶ್ರೇಣಿಯವರಾಗಿರುತ್ತಾರೆ. ಸಾರ್ವಜನಿಕ ಸಂಪರ್ಕಾಧಿಕಾರಿಯ ಆದೇಶದ ವಿರುದ್ಧ ಮೂರನೇ ವ್ಯಕ್ತಿಯೂ ಸಹ 30 ದಿನಗಳೊಳಗಾಗಿ ಮೇಲ್ಮನವಿ ಸಲ್ಲಿಸಬಹುದಾಗಿರುತ್ತದೆ.

ಮೊದಲನೇ ಮೇಲ್ಮನವಿ ಪ್ರಾಧಿಕಾರದ ಆದೇಶದಿಂದ ನಿಮಗೆ ಪರಿಹಾರ ದೊರೆಕದಿದ್ದಲ್ಲಿ, 90 ದಿನಗಳ ಅವಧಿಯೊಳಗೆ ನೀವು ಎರಡನೇ ಮೇಲ್ಮನವಿಯನ್ನು ರಾಜ್ಯ ಮಾಹಿತಿ ಆಯೋಗ ಅಥವಾ ಕೇಂದ್ರ ಮಾಹಿತಿ ಆಯೋಗಕ್ಕೆ ಸಲ್ಲಿಸಬಹುದಾಗಿದೆ. ನಿರ್ದಿಷ್ಟ ಪಡಿಸಿದ ನಮೂನೆಯಲ್ಲಿ ಎರಡನೇ ಮೇಲ್ಮನವಿಯನ್ನು ಸಲ್ಲಿಸತಕ್ಕದ್ದು.

ಮಾಹಿತಿಯನ್ನು ನೀಡಲು ನಿರಾಕರಿಸಿದ ಕಾರಣಗಳು ನ್ಯಾಯೋಚಿತ ಎಂದು ರುಜುವಾತು ಮಾಡುವ ಜವಾಬ್ದಾರಿ ಸಾರ್ವಜನಿಕ ಸಂಪರ್ಕ ಅಧಿಕಾರಿಯದ್ದಾಗಿರುತ್ತದೆ. ಮಾಹಿತಿ ಆಯೋಗವು 30 ದಿನಗಳ ಅವಧಿಯೊಳಗಾಗಿ ಮೇಲ್ಮನವಿಯನ್ನು ವಿಲೇ ಮಾಡತಕ್ಕದ್ದು. ಲಿಖಿತ ರೂಪದಲ್ಲಿ ದಾಖಲು ಮಾಡಿದ ಕಾರಣಗಳಿಗಾಗಿ ಈ ಅವಧಿಯನ್ನು ನಲವತ್ತೈದು ದಿನಗಳವರೆಗೆ ವಿಸ್ತರಿಸಬಹುದಾಗಿದೆ.

ಮೇಲ್ಮನವಿಯನ್ನು ತೀರ್ಮಾನ ಮಾಡಲು ಮಾಹಿತಿ ಆಯೋಗವು ಸಾರ್ವಜನಿಕ ಪ್ರಾಧಿಕಾರಕ್ಕೆ-
 ನಿರ್ದಿಷ್ಟ ಸ್ವರೂಪದಲ್ಲಿ ಮಾಹಿತಿಯನ್ನು ನೀಡಲು
 ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸುವಂತೆ
 ಸೂಕ್ತ ಮಾಹಿತಿಯನ್ನು ಪ್ರಕಟಿಸುವಂತೆ
 ದಾಖಲೆಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ
 ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವಂತೆ
 ವಾರ್ಷಿಕ ವರದಿಯನ್ನು ನೀಡುವಂತೆ
 ಯಾವುದೇ ದೂರುದಾರನಿಗೆ ಪರಿಹಾರ ನೀಡುವಂತೆ
– ಆದೇಶ ಮಾಡಬಹುದು.

ಆಯೋಗವು ಜುಲ್ಮಾನೆಯನ್ನೂ ವಿಧಿಸಬಹುದು ಮತ್ತು ನಿರ್ದಿಷ್ಟ ಅರ್ಜಿಗಳನ್ನು ತಿರಸ್ಕರಿಸಲೂಬಹುದು.

ಈ ಕೆಳಕಂಡ ಮಾಹಿತಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ವಿನಾಯಿತಿ ನೀಡಲಾಗಿದೆ

ನಿಮ್ಮ ಅರ್ಜಿಯಲ್ಲಿ ಈ ಕೆಳಕಂಡ ಮಾಹಿತಿಯನ್ನು ಕೇಳಿದ್ದಲ್ಲಿ, ಸಾರ್ವಜನಿಕ ಪ್ರಾಧಿಕಾರವು ಅದನ್ನು ಕಾನೂನುಬದ್ಧವಾಗಿ ನಿರಾಕರಿಸಬಹುದು.

 ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ರಾಷ್ಟ್ರದ ಭದ್ರತೆ ಮತ್ತು ಪರದೇಶದೊಂದಿಗೆ ಆರ್ಥಿಕ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗುವುದೋ ಅಂಥ ಮಾಹಿತಿ;
 ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣವು ಯಾವ ಮಾಹಿತಿಯ ಪ್ರಕಟಣೆಯನ್ನು ನಿಷೇಧಿಸಿದೆಯೋ ಅಂಥ ಮಾಹಿತಿ;
 ಯಾವು ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಸಂಸತ್ತು ಅಥವಾ ರಾಜ್ಯ ವಿಧಾನಮಂಡಲದ ಹಕ್ಕುಚ್ಯುತಿ ಉಂಟಾಗುವುದೋ ಅಂಥ ಮಾಹಿತಿ
 ವಾಣಿಜ್ಯ ಹಿತಾಸಕ್ತಿಗಳಿಗೆ ಧಕ್ಕೆ ತರುವ ಮಾಹಿತಿ
 ನಂಬಿಕೆಯ ವಿಶ್ವಾಸದ ಸಂಬಂಧದಲ್ಲಿ ಒಬ್ಬ ವ್ಯಕ್ತಿಗೆ ದೊರಕುವ ಮಾಹಿತಿ
 ವಿದೇಶಿ ಸರ್ಕಾರದಿಂದ ರಹಸ್ಯವಾಗಿ ಪಡೆದ ಮಾಹಿತಿ
 ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ರಹಸ್ಯ ವಿವರವನ್ನು ಬಹಿರಂಗಪಡಿಸಿದ ವ್ಯಕ್ತಿಯನ್ನು ಗುರ್ತಿಸಲು ಸಾಧ್ಯವಾಗುತ್ತದೆಯೋ ಅಥವಾ ಆ ವ್ಯಕ್ತಿಯ ಜೀವಕ್ಕೆ ಅಪಾಯವುಂಟಾಗುತ್ತದೆಯೋ ಅಂಥ ಮಾಹಿತಿ;
 ಕ್ರಿಮಿನಲ್ ಪ್ರಕರಣಗಳಲ್ಲಿ ಪೋಲೀಸ್ ತನಿಖೆ ಮತ್ತು ಅಪರಾಧಿಗಳನ್ನು ದಸ್ತಗಿರಿ ಮಾಡಲು ಅಡಚಣೆಯುಂಟು ಮಾಡುತ್ತದೆಯೋ ಅಂಥ ಮಾಹಿತಿ
 ಮಂತ್ರಿಮಂಡಲದ ದಾಖಲೆಗಳು (ನಿರ್ಣಯವನ್ನು ತೆಗೆದುಕೊಂಡ ನಂತರ ಆ ನಿರ್ಣಯಕ್ಕೆ ಕಾರಣಗಳು ಮತ್ತು ಆಧಾರಿತ ವಿಷಯ ಸಾಮಗ್ರಿ ಇವುಗಳನ್ನು ಬಹಿರಂಗಪಡಿಸಬಹುದು)
 ವೈಯುಕ್ತಿಕ ಮಾಹಿತಿ (ಆದರೆ, ಅಂತಹ ಮಾಹಿತಿಯನ್ನು ಸಂಸತ್ತು ಅಥವಾ ರಾಜ್ಯ ವಿಧಾನ ಮಂಡಲ ಒದಗಿಸಬೇಕೆಂದು ಕೇಳಿದಲ್ಲಿ ಆ ವಿವರಗಳನ್ನು ಒದಗಿಸಬೇಕಾಗುತ್ತದೆ)

ಯಾವುದೇ ಮಾಹಿತಿಯು ಕೃತಿಸ್ವಾಮ್ಯದ ಉಲ್ಲಂಘನೆಯಾಗಬಹುದಾದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅಂತಹ ಮಾಹಿತಿಯನ್ನು ನೀಡಲು ನಿರಾಕರಿಸಬಹುದಾಗಿದೆ., 20 ವರ್ಷಗಳಿಗೂ ಹಿಂದಿನ ಮಾಹಿತಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ. ಆದರೆ, ರಾಷ್ಟದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದ, ಸಂಸತ್ತಿನ ಹಕ್ಕುಚ್ಯುತಿ ಆಗಬಹುದಾದಂತಹ ಹಾಗೂ ಮಂತ್ರಿಮಂಡಲದ ವ್ಯವಹರಣೆಗಳಿಗೆ ಸಂಬಂಧಿಸಿದ ಮಾಹಿತಿ ಇಪ್ಪತ್ತು ವರ್ಷ ಹಳೆಯದಾದರೂ ಸಹ ಅದನ್ನು ನೀಡಲು ನಿರಾಕರಿಸಬಹುದಾಗಿದೆ.

ಮಾಹಿತಿ ಒದಗಿಸುವುದರಿಂದ ವಿನಾಯ್ತಿ ಪಡೆದ ಸಂಸ್ಥೆಗಳು

ಎರಡನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಿರುವ ಸಂಸ್ಥೆಗಳು, ಮತ್ತು ರಾಜ್ಯ ಸರ್ಕಾರಗಳ ಭದ್ರತಾ ಹಾಗೂ ಇಂಟೆಲಿಜೆನ್ಸ್ ಸಂಸ್ಥೆಗಳು (ಸರ್ಕಾರದಿಂದ ಅಧಿಸೂಚಿಸಲಾಗಿರುವ) ಮಾಹಿತಿ ಒದಗಿಸುವುದರಿಂದ ವಿನಾಯಿತಿ ಪಡೆದಿವೆ. ಆದರೆ, ಅಂತಹ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಮಾಹಿತಿಯನ್ನು, ಕೇಂದ್ರ ಮಾಹಿತಿ ಆಯೋಗದ ಸಮ್ಮತಿಗೆ ಒಳಪಟ್ಟು, ಕೋರಬಹುದಾಗಿದೆ. ಅಂತಹ ವಿವರಗಳನ್ನು 45 ದಿನಗಳೊಳಗೆ ಒದಗಿಸತಕ್ಕದ್ದು.