ಕ್ರೂರ ವರ್ತನೆಗೆ ಸಂಬಂಧಪಟ್ಟ ನಿಬಂಧನೆಗಳು ಮುಸ್ಲಿಂ ಕಾನೂನಿನಲ್ಲಿವೆ. ನಿಮ್ಮ ಯಾವುದೇ ವರ್ತನೆ ಅಥವಾ ನಡವಳಿಕೆ ನಿಮ್ಮ ಸಂಗಾತಿಯ ಮನದಲ್ಲಿ ಕಿರುಕುಳವನ್ನುಂಟು ಮಾಡಿದರೆ, ಅದನ್ನು ಕ್ರೌರ್ಯ ಎನ್ನುತ್ತಾರೆ. ಮುಸ್ಲಿಂ ಕಾನೂನಿನ ಪ್ರಕಾರ ನಿಮ್ಮ ಗಂಡ ನಿಮ್ಮ ಜೊತೆ ಕೆಳಗಿನಂತೆ ವರ್ತಿಸಿದರೆ ಅದು ಕ್ರೌರ್ಯವಾಗುತ್ತದೆ:
- ನಿಮ್ಮ ಮೇಲೆ ದಾಳಿ ಮಾಡಿದರೆ, ಅಥವಾ ಶಾರೀಕವಾಗಿ ಹಿಂಸಿಸಿದರೆ
- ಪರ ಸ್ತ್ರೀಯರ ಜೊತೆ ಲೈಂಗಿಕ ಸಂಭೋಗ ಮಾಡಿದರೆ
- ನಿಮ್ಮನ್ನು ಅನೈತಿಕ ಜೀವನ ನಡೆಸುವಂತೆ ಒತ್ತಾಯಿಸಿದರೆ
- ನಿಮ್ಮ ಆಸ್ತಿಯನ್ನು ವಿಲೇವಾರಿ ಮಾಡಿ, ಅದರ ಮೇಲೆ ನಿಮ್ಮ ಕಾನೂನುಬದ್ಧ ಹಕ್ಕುಗಳನ್ನು ಪ್ರಯೋಗಿಸಲಾರದಂತೆ ಮಾಡಿದರೆ
- ನಿಮ್ಮ ಧರ್ಮವನ್ನು ಆಚರಿಸಲಾರದಂತೆ ಮಾಡಿದರೆ
- ನಿಮ್ಮ ಗಂಡನಿಗೆ ಒಬ್ಬರಿಗಿಂತ ಹೆಚ್ಚು ಹೆಂಡತಿಯರು ಇದ್ದರೆ, ನಿಮ್ಮನ್ನು ಅವರೆಲ್ಲರ ಸರಿಸಮನಾಗಿ ಕಾಣದಿದ್ದರೆ.
ನ್ಯಾಯಾಲಯವು ಅಂತಿಮವಾಗಿ ನೀಡುವ ವಿಚ್ಛೇದನದ ತೀರ್ಪು ನಿಮ್ಮ ವಿಚ್ಛೇದನಕ್ಕೆ ಪುರಾವೆಯಾಗಿದೆ. ಇದು ಒಂದು ಆದೇಶದ ರೂಪದಲ್ಲಿದ್ದು, ಈ ದಾಖಲೆಯು ನಿಮ್ಮ ವಿಚ್ಛೇದನವನ್ನು ಕಾನೂನಾತ್ಮಕವಾಗಿ ಜಾರಿಗೊಳಿಸುತ್ತದೆ.
ಕೆಳಕಂಡ ಈ ಎರಡು ಸಂದರ್ಭಗಳು ಸಂಭವಿಸಿದ್ದಾಗ ವಿಚ್ಛೇದನದ ತೀರ್ಪು ಅಂತಿಮವಾಗುತ್ತದೆ:
- ವಿಚ್ಛೇದನದ ಅಂತಿಮ ತೀರ್ಪಿನ ವಿರುದ್ಧ, ೯೦ ದಿನಗಳೊಳಗೆ, ತೀರ್ಪಿನಿಂದ ಅತೃಪ್ತರಾದ ನೀವು/ನಿಮ್ಮ ಸಂಗಾತಿಯು ಉನ್ನತ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು, ಈ ಮನವಿಯು ವಜಾಗೊಂಡಿದೆ.
- ವಿಚ್ಛೇದನದ ತೀರ್ಪಿನ ವಿರುದ್ಧ ಮನವಿ ಮಾಡುವ ಹಕ್ಕು ಇಲ್ಲವೇ ಇಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ವಕೀಲರನ್ನು ವಿಚಾರಿಸಿ.
“ಇದ್ದತ್” ಮುಸ್ಲಿಂ ಮದುವೆಯ ವಿಚ್ಛೇದನದ ನಂತರದ ಸಮಯಾವಧಿಯಾಗಿದ್ದು, ಈ ಅವಧಿಯಲ್ಲಿ ಹೆಂಡತಿಯು ಪುನರ್ವಿವಾಹವಾಗುವಂತಿಲ್ಲ, ಹಾಗು ಯಾರ ಜೊತೆಗೂ ಲೈಂಗಿಕ ಸಂಭೋಗ ಮಾಡುವಂತಿಲ್ಲ. ಮುಸ್ಲಿಂ ಕಾನೂನಿನಡಿ, ಕೇವಲ ಸ್ತ್ರೀಯರು ಇದ್ದತ್ ಸಮಯಾವಧಿಯ ಪಾಲನೆ ಮಾಡಬೇಕಾಗಿದೆ.
ನೀವು ನಿಮ್ಮ ಗಂಡನಿಂದ ವಿಚ್ಛೇದನ ಪಡೆದಿದ್ದಲ್ಲಿ, ನಿಮ್ಮ ಇದ್ದತ್ ಸಮಯಾವಧಿ ಕೆಳಗಿನಂತಿರುತ್ತದೆ:
- ನಿಮ್ಮ ಗಂಡ “ತಲಾಕ್” ಎಂಬ ಹೇಳಿಕೆಯನ್ನು ಹೇಳಿದ ದಿನಾಂಕದಿಂದ ೩ ತಿಂಗಳ ವರೆಗೆ
- ನೀವು ಇದ್ದತ್ ಸಮಯಾವಧಿಯಲ್ಲಿ ಗರ್ಭಿಣಿಯಾಗಿದ್ದಲ್ಲಿ, ನಿಮ್ಮ ಹೆರಿಗೆಯಾಗುವ ತನಕ
ನಿಮ್ಮ ಗಂಡ ಇದ್ದತ್ ಸಮಯಾವಧಿಯಲ್ಲಿ ಅವರ ಮನ ಬದಲಾಯಿಸಿ ನಿಮ್ಮನ್ನು ಅವರ ಹೆಂಡತಿಯಾಗಿ ಪುನಃ ಒಪ್ಪಿಗೆಯನ್ನು ಕೊಟ್ಟರೆ, ನೀವಿಬ್ಬರೂ ಮದುವೆಯಾದ ದಂಪತಿಯಂತೆ ಜೊತೆಗೆ ವಾಸಮಾಡಬಹುದು.
ಎಲ್ಲ ಕೌಟುಂಬಿಕ ಪ್ರಕರಣಗಳಲ್ಲಿ ನ್ಯಾಯಾಲಯವು ದಂಪತಿಗಳ ನಡುವೆ ರಾಜಿ ಮಾಡಿಸಲು ಯತ್ನಿಸುತ್ತದೆ.
ರಾಜಿಯಾಗುವ ಪರಿಣಾಮಗಳು:
ರಾಜಿಯಾದ ನಂತರ ಈ ಎರಡು ಪರಿಣಾಮಗಳು ಸಂಭವಿಸುವವು:
- ನೀವು ಮತ್ತು ನಿಮ್ಮ ಸಂಗಾತಿ ಒಂದಾಗಿ ನಿಮ್ಮ ವೈವಾಹಿಕ ಸಂಬಂಧವನ್ನು ಮುಂದುವರೆಸಬಹುದು, ಅಥವಾ
- ನೀವು ಮತ್ತು ನಿಮ್ಮ ಸಂಗಾತಿ ಶಾಂತಿಯುತವಾಗಿ ನಿಮ್ಮ ವಿವಾಹವನ್ನು ಅಂತ್ಯಗೊಳಿಸಿ ವಿಚ್ಛೇದನ ಪಡೆಯಬಹುದು.
ಭಾರತದಲ್ಲಿ ರಾಜಿಯಾಗುವ ಮೂರು ವಿಧಾನಗಳಿವೆ:
ಮಧ್ಯಸ್ಥಿಕೆ:
ಸಂಘರ್ಷಗಳ ಕಾರಣಗಳನ್ನು ಗುರುತಿಸಿ, ಅವುಗಳನ್ನು ಪರಿಹರಿಸಲು ತಂತ್ರಗಳನ್ನು ರೂಪಿಸುವುದಕ್ಕೆ ಮಧ್ಯಸ್ಥಿಕೆ ಮಾಡುವುದು ಎನ್ನುತ್ತಾರೆ.ಈ ಪ್ರಕ್ರಿಯೆಯನ್ನು ಮಧ್ಯಸ್ಥಿಕೆದಾರರು ಮಾಡುತ್ತಾರೆ. ಈ ಮಧ್ಯಸ್ಥಿಕೆದಾರರನ್ನು ವಿಚ್ಛೇದನಾ ಪ್ರಕರಣದ ಸಮಯದಲ್ಲಿ ನ್ಯಾಯಾಲಯವು ನೇಮಿಸುತ್ತದೆ, ಅಥವಾ ಕೋರ್ಟಿನ ಬಳಿ ಇರುವ ಮಧ್ಯಸ್ಥಿಕೆ ಕೇಂದ್ರದಿಂದ ಕರೆಸಿರುತ್ತಾರೆ.
ಸಂಧಾನ:
ಸಂಧಾನದ ಪ್ರಕ್ರಿಯೆಯಲ್ಲಿ ಸಂಧಾನಕಾರರನ್ನು ನೇಮಿಸಲಾಗುತ್ತದೆ. ಚರ್ಚೆಗಳ ಸಂದರ್ಭದಲ್ಲಿ ಅವರು ಸೂಚಿಸಿದ ಪರಿಹಾರಗಳನ್ನು ಎರಡೂ ಪಕ್ಷಗಳು ಒಪ್ಪುವಂತೆ ಒಡಂಬಡಿಸುವುದೇ ಈ ಸಂಧಾನಕಾರರ ಪಾತ್ರ.
ಕುಟುಂಬ ನ್ಯಾಯಾಲಯಗಳಲ್ಲಿ ಸಲಹೆಗಾರರು:
ವಿಚ್ಛೇದನ ಅಥವಾ ಇನ್ನಿತರ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಸಲಹೆ, ಸಹಾಯ, ಅಥವಾ ಪ್ರೋತ್ಸಾಹನೆ ನೀಡುವುದು ಸಲಹೆಗಾರರ ಕರ್ತವ್ಯ. ಕುಟುಂಬ ನ್ಯಾಯಾಲಯದಿಂದ ನೇಮಿಸಲಾದ ಸಲಹೆಗಾರರು ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರ ಹುಡುಕಲು ಯತ್ನಿಸುತ್ತಾರೆ:
- ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಪರಸ್ಪರ ಹೊಂದಾಣಿಕೆ ಯಾಕೆ ಆಗುತ್ತಿಲ್ಲ, ಅಥವಾ ಹೊಂದಾಣಿಕೆ ಆಗುತ್ತದೋ ಇಲ್ಲವೋ.
- ವೈದ್ಯರ ಮೂಲಕ ಮಾನಸಿಕ ಅಥವಾ ಮನೋವೈಜ್ನ್ಯಾನಿಕ ನೆರವಿನಿಂದ ಈ ಅಸಾಮರಸ್ಯವನ್ನು ಪರಿಹರಿಸಬಹುದೋ ಇಲ್ಲವೋ.
- ನೀವು ಮತ್ತು ನಿಮ್ಮ ಸಂಗಾತಿ ಬೇರೆಯವರ ಪ್ರಭಾವದಿಂದ ವಿಚ್ಛೇದನಕ್ಕೆ ಮನವಿ ಸಲ್ಲಿಸುತ್ತಿದ್ದೀರೋ ಹೇಗೆ
- ನೀವು ಮತ್ತು ನಿಮ್ಮ ಸಂಗಾತಿ ಸ್ವತಂತ್ರವಾಗಿ ಮತ್ತು ಸ್ವೇಚ್ಛೆಯಿಂದ ವಿಚ್ಛೇದನದ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರೋ ಇಲ್ಲವೋ
ಮುಸ್ಲಿಂ ಮದುವೆಯ ಸಮಾರಂಭದಲ್ಲಿ, ಒಂದು ನಿರ್ದಿಷ್ಟ ಮೊತ್ತ ಅಥವಾ ಆಸ್ತಿಯನ್ನು ನಿಮ್ಮ ಗಂಡ ನಿಮಗೆ ಕೊಡಬೇಕೆಂದು ನಿಶ್ಚಯಿಸಲಾಗುತ್ತದೆ. ಈ ಹಣದ ಮೊತ್ತ ಅಥವಾ ಆಸ್ತಿಯನ್ನು ಮೆಹೆರ್ ಅಥವಾ ಡೊವರ್ ಎಂದು ಕರೆಯುತ್ತಾರೆ. ಸಾಂಪ್ರದಾಯಿಕವಾಗಿ, ಮೆಹೆರ್ ಹೆಂಡತಿಗೆ ಅತ್ಯಾವಶ್ಯಕವಿರುವ ಸಂದರ್ಭದಲ್ಲಿ ಒಪಯೋಗಿಸಲು ಕಾಯ್ದಿರಿಸಿದ ಹಣದ ಮೊತ್ತ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ವಿಚ್ಛೇದನದ ಸಮಯದಲ್ಲಿ, ಅಥವಾ ಗಂಡನ ಮರಣದ ಸಮಯದಲ್ಲಿ.
ಮದುವೆಯ ಸಂದರ್ಭದಲ್ಲಿ ಒಂದು ನಿರ್ದಿಷ್ಟವಾದ ಮೊತ್ತವನ್ನು ನಿಗದಿಪಡಿಸದಿದ್ದರೂ, ನಿಮಗೆ ಮೆಹೆರ್ ಪಡೆಯುವ ಹಕ್ಕಿದೆ. ಈ ಹಣದ ಮೊತ್ತವನ್ನು, ಮದುವೆಯ ಸಮಯದಲ್ಲಿ ಭಾರಿ ಮೊತ್ತವಾಗಿ ನಿಮಗೆ ಕೊಡಬಹುದು, ಅಥವಾ ಕಂತುಗಳಲ್ಲಿ ಕೊಡಬಹುದು. ಉದಾಹರಣೆಗೆ, ಅರ್ಧ ಮದುವೆಯ ಸಮಯದಲ್ಲಿ, ಮತ್ತು ಇನ್ನರ್ಧ ವಿಚ್ಛೇದನ ಅಥವಾ ಗಂಡನ ಮರಣದ ಸಮಯದಲ್ಲಿ.
ನಿಮ್ಮ ವಿಚ್ಛೇದನ ಪೂರ್ಣಗೊಂಡು, ಇದ್ದತ್ ಸಮಯಾವಧಿ ಪೂರ್ಣಗೊಂಡು, ನಿಮಗೆ ನಿಮ್ಮ ಗಂಡನಿಂದ ಇನ್ನೂ ಮೆಹೆರ್ ಸಿಕ್ಕಿಲ್ಲವೆಂದರೆ, ಅವರು ಆಗ ನಿಮಗೆ ಅದನ್ನು ಕೊಡಲೇಬೇಕಾಗುತ್ತದೆ.
ನಿಮಗೆ ವಿಚ್ಛೇದನದ ನಂತರ ಪುನರ್ವಿವಾಹವಾಗುವುದ್ದಿದ್ದಲ್ಲಿ, ಕೋರ್ಟಿನ ಅಂತಿಮ ತೀರ್ಪಿನ ನಂತರ ಕನಿಷ್ಠ ೯೦ ದಿನಗಳವರೆಗೆ ಕಾಯಬೇಕಾಗುತ್ತದೆ. ನಿಮ್ಮ ಸಂಗಾತಿಗೆ ಕೋರ್ಟಿನ ತೀರ್ಪಿನ ವಿರುದ್ಧ ಮನವಿ ಸಲ್ಲಿಸಲು ಸಮಯ ಸಿಗಲೆಂದು ಈ ನಿಯಮ ಕಾನೂನಿನಡಿಯಲ್ಲಿದೆ.
ಕಾನೂನಿನಡಿಯಲ್ಲಿ, ವಿಚ್ಛೇದನವಾದ ತಕ್ಷಣವೇ ನೀವು ಈ ಕೆಳಕಂಡ ಸಂದರ್ಭಗಳಲ್ಲಿ ಪುನರ್ವಿವಾಹವಾಗಬುದಾಗಿದೆ:
- ನಿಮ್ಮ ಸಂಗಾತಿಯು ವಿಚ್ಛೇದನದ ತೀರ್ಪಿನ ವಿರುದ್ಧ ಮನವಿ ಸಲ್ಲಿಸಿದ್ದು, ಆ ಮನವಿ ವಜಾಗೊಳಿಸಲಾಗಿದೆ.
- ವಿಚ್ಛೇದನದ ತೀರ್ಪಿನ ವಿರುದ್ಧ ಮನವಿ ಸಲ್ಲಿಸುವ ಹಕ್ಕು ಇಲ್ಲದಿದ್ದಾಗ.
- ನೀವು ಮತ್ತು ನಿಮ್ಮ ಸಂಗಾತಿ ವಿಚ್ಛೇದನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು (ಉದಾಹರಣೆಗೆ: ಮಕ್ಕಳು, ಆಸ್ತಿ, ಇತ್ಯಾದಿ) ಬಗೆಹರಿಸಿ, ಇನ್ನು ಯಾವ ಪ್ರಕರಣಗಳನ್ನೂ ದಾಖಲಿಸುವುದಿಲ್ಲ ಎಂದು ನಿರ್ಧರಿಸಿದ್ದಾಗ.
ಈ ಬಗ್ಗೆ ದಯವಿಟ್ಟು ವಕೀಲರನ್ನು ವಿಚಾರಿಸಿ.
ಮುಸ್ಲಿಂ ವಿವಾಹ ಕಾನೂನಿನ ಪ್ರಕಾರ, ವಿಚ್ಛೇದನದ ನಂತರ ಹೆಂಡತಿ ಹಾಗು ಮಕ್ಕಳಿಗೆ ಗಂಡ ಜೀವನಾಂಶ ಕೊಡಬೇಕಾಗುತ್ತದೆ. ಹಾಗು, ಮುಸ್ಲಿಂ ಕಾನೂನಿನ ಪ್ರಕಾರ, ವಿಚ್ಛೇದನದ ನಂತರ ಗಂಡನಷ್ಟೇ ಹೆಂಡತಿಗೆ ಜೀವನಾಂಶ ಕೊಡಬೇಕಾಗುತ್ತದೆ, ಹೆಂಡತಿಯು ಗಂಡನಿಗೆ ಕೊಡಬೇಕಾಗಿಲ್ಲ. ನೀವು ನಿಮ್ಮ ಗಂಡನಿಂದ ಜೀವನಾಂಶ ಪಡೆಯಲು ಕೋರ್ಟಿಗೆ ಹೋಗಬಹುದು. ನಿಮ್ಮ ಗಂಡನ ಆರ್ಥಿಕ ಸಾಮರ್ಥ್ಯದ ಮೇಲೆ ನ್ಯಾಯಾಲಯವು ಜೀವನಾಂಶದ ಮೊತ್ತವನ್ನು ನಿರ್ಧರಿಸುತ್ತದೆ.
ಹೆಂಡತಿಗೆ ಜೀವನಾಂಶ:
ಮುಸ್ಲಿಂ ಕಾನೂನಿನಡಿ, ಕೆಳಗಿನ ಸಮಯಾವಧಿಗಳವರೆಗೂ ನಿಮಗೆ ನಿಮ್ಮ ಗಂಡನಿಂದ ಜೀವನಾಂಶ ಪಡೆಯುವ ಹಕ್ಕಿದೆ:
- ವಿಚ್ಛೇದನದ ನಂತರ ನಿಮ್ಮ ಇದ್ದತ್ ಕಾಲ ಮುಗಿಯುವ ತನಕ
- ನಿಮ್ಮ ಇದ್ದತ್ ಕಾಲ ಮುಗಿದು ನೀವು ಪುನರ್ವಿವಾಹವಾಗುವ ತನಕ
ನಿಮಗೆ ಸಿಗುತ್ತಿರುವ ಜೀವನಾಂಶದ ಮೊತ್ತ ನಿಮಗೆ ಕಡಿಮೆ ಬೀಳುತ್ತಿದ್ದರೆ ನೀವು ಅದನ್ನು ಸಂದರ್ಭಾನುಸಾರ ಹೆಚ್ಚಿಸಲು ಮನವಿ ಮಾಡಬಹುದು.
ನಿಮ್ಮ ಗಂಡ ಸತ್ತು ಹೋಗಿದ್ದರೆ, ನಿಮಗೆ ಜೀವನಾಂಶದ ಮೊತ್ತ ಸಿಗುವುದಿಲ್ಲ. ಆದಾಗ್ಯೂ, ಕೆಳಗಿನವರಿಂದ ನಿಮಗೆ ಜೀವನಾಂಶ ಪಡೆಯುವ ಆಯ್ಕೆ ಇದೆ:
- ನಿಮ್ಮ ಸಂಪತ್ತು ಮತ್ತು ಆಸ್ತಿಯ ಉತ್ತರಾಧಿಕಾರಿಗಳಾದ ನಿಮ್ಮ ಸಂಬಂಧಿಕರಿಂದ
- ನಿಮ್ಮ ಮಕ್ಕಳಿಂದ
- ನಿಮ್ಮ ತಂದೆ-ತಾಯಂದಿರಿಂದ
- ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ
ಜೀವನಾಂಶದ ಜೊತೆಗೆ, ನಿಮ್ಮ ನಿಕಾಹ್-ನಾಮಾದಲ್ಲಿ ನಮೂದಿಸಲಾದ ಮೆಹೆರ್ ಮೊತ್ತವನ್ನೂ ಕೂಡ ನೀವು ಪಡೆಯಲು ಅರ್ಹರಿದ್ದೀರಿ. ಈ ಮೆಹೆರ್ ಮೊತ್ತವನ್ನು ವಿಚ್ಛೇದನದ ಸಂದರ್ಭದಲ್ಲಿ, ಅಥವಾ ನಿಮ್ಮ ಗಂಡನ ನಿಧನದ ಸಂದರ್ಭದಲ್ಲಿ ನೀವು ಪಡೆಯಬಹುದು.
ಕೋರ್ಟಿನ ಆದೇಶದ ಮೇರೆಗೆ ನಿಮಗೆ ಒಂದು ನಿರ್ದಿಷ್ಟವಾದ ಹಣದ ಮೊತ್ತ ನಿಮ್ಮ ಸಂಗಾತಿಯಿಂದ ದೊರಕಬಲ್ಲದು. ಇದು ನಿಮ್ಮ ಅಥವಾ ನಿಮ್ಮ ಮಕ್ಕಳ ಜೀವನೋಪಾಯಕ್ಕೆ ಯಾವ ಆದಾಯದ ಮೂಲವೂ ಇಲ್ಲದಿದ್ದಾಗ ಮಾತ್ರ ನಿಮಗೆ ದೊರೆಯಬಲ್ಲದು. ಈ ಹಣದ ಮೊತ್ತಕ್ಕೆ ಜೀವನಾಂಶ ಎಂದು ಕರೆಯುತ್ತಾರೆ. ಹಿಂದೂ ವಿಚ್ಛೇದನ ಕಾಯಿದೆ ಅಡಿಯಲ್ಲಿ ಜೀವನಾಂಶ ಲಿಂಗ-ತಟಸ್ಥವಾಗಿದೆ. ಅಂದರೆ, ತಾತ್ಕಾಲಿಕ ಅಥವಾ ಶಾಶ್ವತ ಜೀವನಾಂಶದ ಅರ್ಜಿ ಗಂಡ ಅಥವಾ ಹೆಂಡತಿ ಇಬ್ಬರೂ ಸಲ್ಲಿಸಬಹುದು.
ತಾತ್ಕಾಲಿಕ ಜೀವನಾಂಶ:
ನಿಮ್ಮ ವಿಚ್ಛೇದನದ ಪ್ರಕರಣ ಕೋರ್ಟಿನಲ್ಲಿ ನಡೆಯಬೇಕಾದರೆ ನಿಮ್ಮ ಸ್ವಂತಕ್ಕೆ ಹಾಗು/ಅಥವಾ ಮಕ್ಕಳ ಪಾಲನೆ ಪೋಷಣೆಗೆ, ಅಥವಾ ಪ್ರಕರಣದ ಖರ್ಚು-ವೆಚ್ಚಕ್ಕೆ ನಿಮ್ಮ ಹತ್ತಿರ ಆದಾಯವಿಲ್ಲವಾದಲ್ಲಿ ನಿಮ್ಮ ಸಂಗಾತಿ ನಿಮಗೆ ಜೀವನಾಂಶ ನೀಡಬೇಕೆಂದು ಕೋರ್ಟಿಗೆ ನೀವು ಅರ್ಜಿ ಸಲ್ಲಿಸಬಹುದು. ಹೀಗಿದ್ದಾಗ ನ್ಯಾಯಾಲಯವು, ನಿಮ್ಮ ಸಂಗಾತಿಯ ಆದಾಯ ಮತ್ತು ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ಒಂದು ಸಮಂಜಸವಾದ ಮೊತ್ತವನ್ನು ನಿರ್ಧರಿಸುತ್ತದೆ. ಈ ಮೊತ್ತವನ್ನು ನಿಮಗೆ ಮಾಸಿಕ ಜೀವನಾಂಶವೆಂದು ತಾತ್ಕಾಲಿಕವಾಗಿ ನೀಡುವುದಾಗಿ ನ್ಯಾಯಾಲಯವು ನಿರ್ದೇಶಿಸುತ್ತದೆ.
ಶಾಶ್ವತವಾದ ಜೀವನಾಂಶ:
ವಿಚ್ಛೇದನದ ಅರ್ಜಿಯ ಜೊತೆಗೆ ನಿಮಗೆ ಮಾಸಿಕವಾಗಿ, ನಿಯತಕಾಲಿಕವಾಗಿ, ಅಥವಾ ಒಮ್ಮೆಲೇ ಭಾರಿ ಮೊತ್ತವಾಗಿ ನಿಮ್ಮ ಸಂಗಾತಿಯಿಂದ ಜೀವನಾಂಶ ಬೇಕು ಎಂದು ನೀವು ಕೋರ್ಟಿಗೆ ಅರ್ಜಿ ಸಲ್ಲಿಸಬಹುದು.
ನ್ಯಾಯಾಲಯವು ನಿಮ್ಮ ವೈವಾಹಿಕ ಜೀವನದ ಜೀವನಶೈಲಿ ಹಾಗು ನಿಮ್ಮ ಸಂಗಾತಿಯ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಇಂತಹ ಶಾಶ್ವತವಾದ ಜೀವನಾಂಶದ ಮೊತ್ತವನ್ನು ನಿರ್ಧರಿಸುತ್ತದೆ. ಭವಿಷ್ಯದಲ್ಲಿ ನಿಮ್ಮ ಜೀವನಶೈಲಿ ಅಥವಾ ನಿಮ್ಮ ಸಂಗಾತಿಯ ಆರ್ಥಿಕ ಪರಿಸ್ಥಿತಿ ಬದಲಾದರೆ, ಈ ಜೀವಾಂಶದ ಮೊತ್ತವು ಕೂಡ ಬದಲಾಗಬಲ್ಲದು. ಉದಾಹರಣೆಗೆ, ನಿಮ್ಮ ಮಕ್ಕಳ ಶೈಕ್ಷಣಿಕ ಖರ್ಚು ಹೆಚ್ಚಾದಲ್ಲಿ, ನಿಮ್ಮ ಸಂಗಾತಿಯ ಆದಾಯ ಹೆಚ್ಚಾದಲ್ಲಿ ಅಥವಾ ಜೀವನಶೈಲಿ ಸುಧಾರಿಸಿದಲ್ಲಿ, ಅವರು ನಿಮಗೆ ಕೊಡತಕ್ಕದ್ದ ಜೀವನಾಂಶದ ಮೊತ್ತವೂ ಕೂಡ ಹೆಚ್ಚಾಗುತ್ತದೆ.
ನಿಮಗೆ ಮಾಸಿಕವಾಗಿ ಅಥವಾ ನಿಯತಕಾಲಿಕವಾಗಿ ಜೀವನಾಂಶ ಸಿಗುತ್ತಿದ್ದಲ್ಲಿ, ಅದು ನೀವು ಪುನರ್ವಿವಾಹವಾಗುವ ತನಕ ಮಾತ್ರ ನಿಮಗೆ ಸಿಗುತ್ತದೆ. ವಿಚ್ಛೇದನದ ನಂತರ ನೀವು ಇನ್ನೋರ್ವ ವ್ಯಕ್ತಿಯ ಸಂಗಡ ಲೈಂಗಿಕ ಸಂಬಂಧ ಬೆಳೆಸಿಕೊಂಡರೆ ಈ ಜೀವನಾಂಶವನ್ನು ರದ್ದು ಪಡಿಸಲೂಬಹುದು.
ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ನಿಮ್ಮ ಮುಖ್ಯ ಮನವಿಯಾದ ವಿಚ್ಛೇದನ/ ನ್ಯಾಯಿಕ ಬೇರ್ಪಡೆಯನ್ನು ನ್ಯಾಯಾಲಯವು ವಜಾಮಾಡಿದ್ದಲ್ಲಿ, ಅಥವಾ ನೀವೇ ಹಿಂತೆಗೆದುಕೊಂಡಿದ್ದಲ್ಲಿ, ನಿಮಗೆ ಶಾಶ್ವತವಾದ ಜೀವನಾಂಶ ಸಿಗಲಾರದು.
ನಿಮ್ಮ ಗಂಡ ವಿಚ್ಛೇದನವಾದ ಮೇಲೆ ನಿಮ್ಮನ್ನು ಪುನರ್ವಿವಾಹವಾಗಲು ಬಯಸಿದರೆ, ನೀವು ಆಗ ಕೂಡ ಇದ್ದತ್ ಸಮಯಾವಧಿಯನ್ನು ಆಚರಿಸಬೇಕಾಗುತ್ತದೆ. ಆದರೆ ಇಂತಹ ಇದ್ದತ್ ನಿಮ್ಮ ಗಂಡ ಸತ್ತುಹೋದಾಗ ಆಚರಿಸುವ ಇದ್ದತ್ ಕಿಂತ ಬೇರೆಯಾಗಿದೆ. ನಿಮ್ಮ ಗಂಡ ನಿಮ್ಮನ್ನು ವಿಚ್ಛೇದಿಸಿದ ನಂತರ ನಿಮ್ಮನ್ನು ಪುನರ್ವಿವಾಹವಾಗಬೇಕೆಂದು ಇಚ್ಛಿಸಿದರೆ, ಕೆಳಗಿನ ಕಾರ್ಯವಿಧಾನಗಳು ಆಗುವ ತನಕ ಅವರು ಕಾಯಬೇಕಾಗುತ್ತದೆ:
- ನೀವು ಇದ್ದತ್ ಸಮಯಾವಧಿಯನ್ನು ಆಚರಿಸಬೇಕು
- ಇದ್ದತ್ ಸಮಯಾವಧಿಯ ನಂತರ ನೀವು ಇನ್ನೋರ್ವ ಪುರುಷನನ್ನು ಮದುವೆಯಾಗಬೇಕು
- ನೀವು ಮತ್ತು ಈ ಇನ್ನೋರ್ವ ಪುರುಷನು ಜೊತೆಗೆ ವಾಸ ಮಾಡಿ ಮದುವೆಯನ್ನು ಸಾಂಗಗೊಳಿಸಬೇಕು. ಕಾನೂನಿನ ಪ್ರಕಾರ ನೀವು ನಿಮ್ಮ ಗಂಡನ ಜೊತೆ ಲೈಂಗಿಕ ಸಂಭೋಗ ಮಾಡಿದ ನಂತರ ನಿಮ್ಮ ಮಾಡುವೆ ಸಾಂಗಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.
- ಈ ಪುರುಷನು ನಿಮಗೆ ವಿಚ್ಛೇದನ ನೀಡಬೇಕು.
- ಈ ವಿಚ್ಛೇದನದ ನಂತರ ನೀವು ಮತ್ತೆ ಇದ್ದತ್ ಸಮಯಾವಧಿಯ ಪಾಲನೆ ಮಾಡಬೇಕು.
- ಈ ಸಮಯಾವಧಿಯ ನಂತರ ನೀವು ಪುನಃ ನಿಮ್ಮ ಮಾಜಿ ಗಂಡನನ್ನು ಮದುವೆಯಾಗಬಹುದು.
ಮದುವೆಯ ಅಂತ್ಯವನ್ನು ಸೂಚಿಸುವ ವಿಚ್ಛೇದನವನ್ನು ಹೊರತುಪಡಿಸಿ ನೀವು ಮತ್ತು ನಿಮ್ಮ ಸಂಗಾತಿಗೆ ನಿಮಗೆ ನಿಜವಾಗಿಯೂ ವಿಚ್ಛೇದನ ಬೇಕಾಗಿದೆಯೋ ಇಲ್ಲವೋ ಎಂದು ಯೋಚಿಸಲು ಸಮಯ ಬೇಕಾದಲ್ಲಿ ಕೋರ್ಟಿನಲ್ಲಿ ನೀವು ತಾತ್ಕಾಲಿಕ ಬೇರ್ಪಡೆಯ ಅರ್ಜಿ ಸಲ್ಲಿಸಬಹುದಾಗಿದೆ.
ಈ ಆದೇಶದ ಮೂಲಕ ನೀವು ತಾತ್ಕಾಲಿಕವಾಗಿ ನಿಮ್ಮ ಸಂಗಾತಿಯಿಂದ ಬೇರೆಯಾಗಿದ್ದೀರಿ ಎಂದು ನ್ಯಾಯಾಲಯವು ಅಧಿಕೃತಗೊಳಿಸುತ್ತದೆ.
ನಿಮ್ಮ ಸಂಗಾತಿಯಿಂದ ತಾತ್ಕಾಲಿಕವಾಗಿ ಬೇರೆಯಾಗುವುದು ವಿಚ್ಛೇದನ ಪಡೆಯುವುದರಿಂದ ಕಾನೂನಾತ್ಮಕವಾಗಿ ಭಿನ್ನವಾಗಿದೆ. ಏಕೆಂದರೆ, ತಾತ್ಕಾಲಿಕ ಬೇರ್ಪಡೆಯಲ್ಲಿ ನಿಮ್ಮ ಮದುವೆ ಇನ್ನೂ ಅಸ್ತಿತ್ವದಲ್ಲಿರುತ್ತದೆ. ಆದ್ದರಿಂದ ತಾತ್ಕಾಲಿಕ ಬೇರ್ಪಡೆಯ ಸಮಯದಲ್ಲಿ ನೀವು ಕಾನೂನಾತ್ಮಕವಾಗಿ ಪುನರ್ವಿವಾಹವಾಗುವಂತಿಲ್ಲ.
ವಿಚ್ಛೇದನದ ಆಧಾರಗಳು ಹಾಗು ತಾತ್ಕಾಲಿಕ ಬೇರ್ಪಡೆಯ ಆಧಾರಗಳು ಒಂದೇ. ಆದರೆ ಈ ಎರಡರ ಕಾನೂನಾತ್ಮಕ ಪರಿಣಾಮಗಳು ಬೇರೆ ಬೇರೆ. ತಾತ್ಕಾಲಿಕ ಬೇರ್ಪಡೆಯಲ್ಲಿ ನೀವು ಹಾಗು ನಿಮ್ಮ ಸಂಗಾತಿ ಬೇರೆ ಬೇರೆ ವಾಸಿಸತೊಡಗಿದರೂ ಮದುವೆಯಾದ ದಂಪತಿಗಳೆಂದೇ ಕಾನೂನು ಪರಿಗಣಿಸುತ್ತದೆ.
ತಾತ್ಕಾಲಿಕ ಬೇರ್ಪಡೆಯ ಆದೇಶ ಕೋರ್ಟಿನಿಂದ ಬಂದ ಮೇಲೆ, ನೀವು ಮತ್ತು ನಿಮ್ಮ ಸಂಗಾತಿ ಈ ಕೆಳಕಂಡ ಎರಡು ಆಯ್ಕೆಗಳ ಮಧ್ಯೆ ಆರಿಸಿಕೊಳ್ಳಬಹುದು:
ಆಯ್ಕೆ ೧. ತಾತ್ಕಾಲಿಕ ಬೇರ್ಪಡೆಯ ನಿರ್ದೇಶವನ್ನು ರದ್ದುಪಡಿಸುವುದು: ನೀವು ತಾತ್ಕಾಲಿಕ ಬೇರ್ಪಡೆಯ ನಿರ್ದೇಶವನ್ನು ರದ್ದುಪಡಿಸಲು ಕೋರ್ಟಿನಲ್ಲಿ ಮನವಿ ಸಲ್ಲಿಸಬಹುದು. ಈ ನಿರ್ದೇಶ ರದ್ದುಗೊಂಡ ನಂತರ ನೀವು ಮತ್ತು ನಿಮ್ಮ ಸಂಗಾತಿ ರಾಜಿಯಾಗಿ ಮದುವೆಯಾದ ದಂಪತಿಗಳೆಂದು ಒಟ್ಟಿಗೆ ವಾಸಿಸಬಹುದು.
ಆಯ್ಕೆ ೨: ವಿಚ್ಛೇದನ ಪಡೆಯುವುದು: ನೀವು ಮತ್ತು ನಿಮ್ಮ ಸಂಗಾತಿ ರಾಜಿಯಾಗುವ ಪರಿಸ್ಥಿತಿಯಲ್ಲಿ ಇಲ್ಲವೆಂದರೆ ತಾತ್ಕಾಲಿಕ ಬೇರ್ಪಡೆಯ ನಿರ್ದೇಶದ ಒಂದು ವರ್ಷದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಈ ಒಂದು ವರ್ಷದ ಅವಧಿಯಲ್ಲಿ ನಿಮಗೆ ನಿಮ್ಮ ಸಂಗಾತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ. ಹಾಗೆಯೂ, ಈ ವೇಳೆಯಲ್ಲಿ ಮಕ್ಕಳ ಪಾಲನೆಯ ನಿರ್ಣಯವನ್ನು ನ್ಯಾಯಾಲಯವು ತೀರ್ಪಿಸುತ್ತದೆ.