ಒಪ್ಪಂದವನ್ನು ನೋಂದಣಿ ಮಾಡುವುದು ಅಥವಾ ನೋಟರೀಕರಿಸುವುದು

ಬಾಡಿಗೆ/ಭೋಗ್ಯದ ಒಪ್ಪಂದವನ್ನು ನೋಂದಣಿ ಮಾಡುವುದು
ನಿಮ್ಮ ಭೋಗ್ಯದ ಒಪ್ಪಂದವು ಒಂದು ವರ್ಷ ಅಥವಾ ಹೆಚ್ಚಿನ ಅವಧಿಯದಾಗಿದ್ದಲ್ಲಿ ಅದನ್ನು ನೀವು ವಾಸ ಮಾಡುತ್ತಿರುವ ನಗರದ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸತಕ್ಕದ್ದು. ಒಪ್ಪಂದ ಮಾಡಿಕೊಂಡ ನಾಲ್ಕು ತಿಂಗಳ ಅವಧಿಯೊಳಗೆ ಒಪ್ಪಂದವನ್ನು ನೋಂದಣಿ ಮಾಡತಕ್ಕದ್ದು. ಹೀಗೆ ನೋಂದಣಿ ಮಾಡದಿರುವ ಒಪ್ಪಂದವನ್ನು ಬಾಡಿಗೆ ನೀಡಿದ ಕಟ್ಟಡಕ್ಕೆ ಸಂಬಂಧಿಸಿದ ವಿವಾದದಲ್ಲಿ (ವಿವಾದ ಉದ್ಭವಿಸಿದಲ್ಲಿ) ಸಾಕ್ಷಾಧಾರವಾಗಿ ನ್ಯಾಯಾಲಯವು ಪರಿಗಣಿಸುವುದಿಲ್ಲ.

ಒಪ್ಪಂದವನ್ನು ನೋಂದಣಿ ಮಾಡುವುದರಿಂದ ಮಾಲೀಕರು ಪರಸ್ಪರ ಒಪ್ಪಿದ ಮೊತ್ತವನ್ನು ಹೊರತು ಪಡಿಸಿ, ಮತ್ತಾವುದೇ ಹೆಚ್ಚುವರಿ ಮೊತ್ತವನ್ನು ತೆರುವಂತೆ ಅಥವಾ ಯಾವುದೇ ಕಾನೂನು ವಿರುದ್ಧವಾದ ವ್ಯವಹಾರ ನಡೆಸುವಂತೆ ನಿಮ್ಮನ್ನು ಒತ್ತಾಯಿಸುವಂತಿಲ್ಲ.

ನೋಂದಣಿ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದಲೇ ಸಾಮಾನ್ಯವಾಗಿ ಎಲ್ಲಾ ಬಾಡಿಗೆ ಒಪ್ಪಂದಗಳು 11 ತಿಂಗಳ ಅವಧಿಯದಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಒಪ್ಪಂದವನ್ನು ನೋಂದಾಯಿಸುವುದರ ಬದಲಾಗಿ ನೋಟರೀಕರಣ ಮಾಡತಕ್ಕದ್ದು.

ಆದರೆ, ಮುಂಬೈನಂತಹ ಕೆಲವು ನಗರಗಳಲ್ಲಿ ಯಾವುದೇ ಅವಧಿಯ ಅನುಮತಿ ಮತ್ತು ಪರವಾನಗಿ ಒಪ್ಪಂದಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಲಾಗುತ್ತದೆ. ಮಹಾರಾಷ್ಟ್ರದಲ್ಲಿ ಬಾಡಿಗೆಯ ಯಾವುದೇ ಒಪ್ಪಂದಗಳನ್ನು – ಅನುಮತಿ ಮತ್ತು ಪರವಾನಗಿ ಒಪ್ಪಂದ ಸೇರಿದಂತೆ – ನೋಂದಣಿ ಮಾಡುವುದು ಕಾನೂನು ಪ್ರಕಾರ ಕಡ್ಡಾಯ.

ಒಪ್ಪಂದವನ್ನು ನೋಟರೀಕರಣ ಮಾಡುವುದು
ಯಾವುದೇ ಬಾಡಿಗೆ ಒಪ್ಪಂದವನ್ನು ನೋಂದಣಿ ಮಾಡದಿದ್ದ ಪಕ್ಷದಲ್ಲಿ, ಅದನ್ನು ನೋಟರೀಕರಣ ಮಾಡುವುದು ಕಡ್ಡಾಯ. ನಿಮ್ಮ ಮತ್ತು ಮಾಲೀಕರ ನಡುವಣ ಒಪ್ಪಂದವು ಕರಾರಿನ ಸ್ವರೂಪದಲ್ಲಿದ್ದು, ಎಲ್ಲ ಕರಾರುಗಳನ್ನು ಸಾಮಾನ್ಯವಾಗಿ ನೋಟರಿ ದೃಢೀಕರಿಸುತ್ತಾರೆ. ನೋಟರೀಕರಣ ಮಾಡುವುದರಿಂದ ನಿಮ್ಮ ಒಪ್ಪಂದದ ದಾಖಲೆಗೆ ಮಾನ್ಯತೆ ನೀಡಿದಂತಾಗುತ್ತದೆ ಮತ್ತು ಅದಕ್ಕೆ ಸಹಿ ಮಾಡುವ ಪಕ್ಷಗಾರರ ಗುರ್ತನ್ನು ಬಹಿರಂಗಪಡಿಸಿದಂತಾಗುತ್ತದೆ. ಇದರಿಂದ ನಿಮ್ಮ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸ್ಪಷ್ಟ ಚಿತ್ರಣ ದೊರೆಯುತ್ತದೆ. ಮೇಲಾಗಿ ಬಾಡಿಗೆಗೆ ಸಂಬಂಧಿಸಿದ ವಿವಾದ ನ್ಯಾಯಾಲಯದ ಮೆಟ್ಟಿಲು ಹತ್ತಿದಲ್ಲಿ ನೋಟರೀಕರಣ ಮಾಡಿದ ಒಪ್ಪಂದವನ್ನು ಯಾರೂ ಅಲ್ಲಗಳೆಯಲಾರರು.

ಬಾಡಿಗೆ ಒಪ್ಪಂದವನ್ನು ನೋಂದಾಯಿಸುವುದು

ನಿಮ್ಮ ಬಾಡಿಗೆ ಒಪ್ಪಂದ/ಕರಾರನ್ನು ನೋಂದಾಯಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು. ಬಹುತೇಕ ಸಂದರ್ಭಗಳಲ್ಲಿ ನಿಮ್ಮ ಬ್ರೋಕರ್ ಈ ನಿಟ್ಟಿನಲ್ಲಿ ನಿಮಗೆ ಮಾರ್ಗದರ್ಶನ ಮಾಡುತ್ತಾರೆ.

1. ಒಪ್ಪಂದ ತಯಾರಾದ ನಂತರ, ಅದಕ್ಕೆ ಅನ್ವಯವಾಗುವ ಸೂಕ್ತ ಮುದ್ರಾಂಕ ಶುಲ್ಕವನ್ನು ಪಾವತಿ ಮಾಡಿ.

2. ಸ್ಥಳೀಯ ಉಪನೋಂದಣಾಧಿಕಾರಿಗಳನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಿಕೊಳ್ಳಿ. ಬಹುತೇಕ ರಾಜ್ಯಗಳು ಆನ್ ಲೈನ್ ಮುಖಾಂತರ ಈ ಸೌಲಭ್ಯವನ್ನು ಒದಗಿಸುತ್ತಿವೆ.

3. ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಮಾಲೀಕರು/ಪರವಾನಗಿ ನೀಡುವವರು, ಬಾಡಿಗೆದಾರರು/ಪರವಾನಗಿ ಪಡೆಯುವವರು ಈ ಕೆಳಕಂಡ ದಾಖಲೆಗಳು ಮತ್ತು ಸಾಕ್ಷಿಗಳೊಂದಿಗೆ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಹಾಜರಾಗತಕ್ಕದ್ದು.
 ಸೂಕ್ತ ಮುದ್ರಾಂಕ ಶುಲ್ಕ ಪಾವತಿಸಿದ ಒಪ್ಪಂದ
 ಬಾಡಿಗೆದಾರರ, ಮಾಲೀಕರ ಮತ್ತು ಸಾಕ್ಷಿಗಳ ಇತ್ತೀಚಿನ ಎರಡು ಪಾಸ್ ಪೋರ್ಟ್ ಭಾವಚಿತ್ರಗಳು
 ಬಾಡಿಗೆದಾರರ, ಮಾಲೀಕರ ಮತ್ತು ಸಾಕ್ಷಿಗಳ ಗುರ್ತಿನ ದಾಖಲೆ (ಆಧಾರ್ ಕಾರ್ಡ್, ಚುನಾವಣಾ ಗುರ್ತಿನ ಚೀಟಿ, ಪಾಸ್ ಪೋರ್ಟ್, ಸರ್ಕಾರ ನೀಡಿರುವ ಗುರ್ತಿನ ಚೀಟಿ, ಗೆಜೆಟೆಡ್ ಅಧಿಕಾರಿಗಳು ದೃಢೀಕರಿಸಿರುವ ಗುರ್ತಿನ ದಾಖಲೆ)

4. ಕೊನೆಯದಾಗಿ, ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಮೇಲ್ಕಂಡ ದಾಖಲೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಅವಶ್ಯಕ ನೋಂದಣಿ ಶುಲ್ಕವನ್ನು ಪಾವತಿಸಿರಿ.

ಬಾಡಿಗೆ ಪಾವತಿ

ಬಾಡಿಗೆ ಪಾವತಿಸುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಡಿ.

ಬಾಡಿಗೆ ಜಮಾ ಮಾಡುವುದು
ಭೋಗ್ಯದ ಒಪ್ಪಂದಗಳಲ್ಲಿ ಕಾನೂನು ಪ್ರಕಾರ ನೀವು ಪ್ರತಿತಿಂಗಳ 15 ನೇ ತಾರೀಖಿನೊಳಗೆ ಬಾಡಿಗೆಯನ್ನು ಸಂದಾಯ ಮಾಡತಕ್ಕದ್ದು. ಆದರೆ, ಈ ನಿಯಮ ಅನುಮತಿ ಮತ್ತು ಪರವಾನಗಿ ಒಪ್ಪಂದಗಳಲ್ಲಿ ಅನ್ವಯಿಸುವುದಿಲ್ಲ.

ನೀವು ಸಾಮಾನ್ಯವಾಗಿ ಮುಂದಿನ ತಿಂಗಳಿನ ಅವಧಿಗೆ ಬಾಡಿಗೆ ಸಂದಾಯ ಮಾಡುತ್ತೀರಿ. ಉದಾಹರಣೆಗೆ, ನೀವು ಜೂನ್ 15 ರಂದು ಬಾಡಿಗೆ ಸಂದಾಯ ಮಾಡಿದಲ್ಲಿ ಈ ಮೊತ್ತವು ಜೂನ್ 15 ರಿಂದ ಜುಲೈ 15ರ ಅವಧಿಗೆ ಬಾಡಿಗೆ ಎಂದು ಪರಿಗಣಿಸಲ್ಪಡುತ್ತದೆ. ಬಾಡಿಗೆ ನೀಡಬೇಕಾದ ದಿನಾಂಕವನ್ನು ಬಾಡಿಗೆ/ಪರವಾನಗಿ ಒಪ್ಪಂದದಲ್ಲಿ ನಮೂದಿಸಲಾಗಿರುತ್ತದೆ. ಬಾಡಿಗೆ ಪಾವತಿ ಮಾಡಿದ ಸಲುವಾಗಿ ದಾಖಲೆಗಳನ್ನು ಹೊಂದುವ ಸಲುವಾಗಿ ನೀವು ಬಾಡಿಗೆಯನ್ನು ಚೆಕ್ ಮೂಲಕ ಅಥವಾ ಆನ್ ಲೈನ್ ಮೂಲಕ ಪಾವತಿ ಮಾಡುವುದು ಸೂಕ್ತ. ನಗದು ರೂಪದಲ್ಲಿ ಬಾಡಿಗೆ ನೀಡಿದ ಪಕ್ಷದಲ್ಲಿ ರಸೀದಿಯನ್ನು ನೀಡುವಂತೆ ಮಾಲೀಕರನ್ನು ಒತ್ತಾಯಿಸಿ. ಚೆಕ್ ಮೂಲಕ ಅಥವಾ ಆನ್ ಲೈನ್ ವರ್ಗಾವಣೆ ಮೂಲಕ ಬಾಡಿಗೆ ಪಾವತಿಸಿದಾಗ ನಿಮಗೆ ದೊರೆಯುವ ದಾಖಲೆ ಮತ್ತು ಮಾಲೀಕರ ಖುದ್ದಾಗಿ ನೀಡುವ ರಸೀದಿಗೂ ವ್ಯತ್ಯಾಸವಿದೆ. ಮಾಲೀಕ ನೀಡಿದ ರಸೀದಿಯನ್ನು ನೀವು ತೆರಿಗೆ ಪಾವತಿಸಲು ಮತ್ತು ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರವಾಗಿ ಬಳಸಲು ಸಾಧ್ಯ.

ಬಾಡಿಗೆ ಹೆಚ್ಚು ಮಾಡುವುದು
ಬಾಡಿಗೆ ಒಪ್ಪಂದದ ಅವಧಿ ಮುಗಿದ ನಂತರ ಬಾಡಿಗೆಯನ್ನು ಹೆಚ್ಚುಮಾಡುವ ಕುರಿತು – ಶೇಕಡಾವಾರು ಹೆಚ್ಚಳ – ಸಂಬಂಧಿಸಿದಂತೆ ನಿಮ್ಮ ಒಪ್ಪಂದದಲ್ಲಿ ನಮೂದು ಮಾಡಲಾಗಿರುತ್ತದೆ. ನಿಮ್ಮ ನಗರದಲ್ಲಿ ಈ ಸಂಬಂಧ ಜಾರಿ ಇರುವ ಪದ್ದತಿ ಶೇಕಡಾವಾರು ಹೆಚ್ಚಳ ಕುರಿತು ಮಾಹಿತಿ ಪಡೆದುಕೊಳ್ಳಿ. ಇದರಿಂದ ನೀವು ತೆರುವ ಹೆಚ್ಚುವರಿ ಬಾಡಿಗೆ ಸೂಕ್ತವೇ ಎಂದು ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಮಾಲೀಕರು ಒಪ್ಪಂದದ ಅವಧಿ ಮುಗಿದ ನಂತರ ಮಾತ್ರ ಬಾಡಿಗೆಯನ್ನು ಹೆಚ್ಚಿಸಬಹುದಾಗಿದೆ.

ಮುದ್ರಾಂಕ ಶುಲ್ಕ

ಮಾಲೀಕರಾಗಲೀ ಅಥವಾ ಬಾಡಿಗೆದಾರರಾಗಲೀ ಅಥವಾ ಇಬ್ಬರೂ ಜೊತೆಯಾಗಿ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮನೆ ಅಥವಾ ಫ್ಲಾಟನ್ನು ಬಾಡಿಗೆಗೆ ಪಡೆಯುವಾಗ ಮಾಡಿಕೊಳ್ಳುವ ಒಪ್ಪಂದದ ಮೇಲೆ ವಿಧಿಸುವ ತೆರಿಗೆಯನ್ನು ಮುದ್ರಾಂಕ ಶುಲ್ಕ ಎಂದು ಕರೆಯಲಾಗುತ್ತದೆ. ಒಪ್ಪಂದವನ್ನು ನೋಂದಣಿ ಮಾಡುವ ಸಮಯದಲ್ಲಿ ಮುದ್ರಾಂಕ ಶುಲ್ಕವನ್ನು ತೆರಬೇಕಾಗುತ್ತದೆ.

ಮುಂಗಡ ಠೇವಣಿ

ಮಾಲೀಕರ ಆಸ್ತಿಯನ್ನು ನೀವು ಬಾಡಿಗೆದಾರರಾಗಿ/ಪರವಾನಗಿ ಪಡೆದವರಾಗಿ ಅನುಭವಿಸುವ ಅವಧಿಗಾಗಿ ಮಾಲೀಕರು/ಪರವಾನಗಿ ನೀಡುವವರು ನಿಮ್ಮಿಂದ ಮುಂಗಡ ಠೇವಣಿಯನ್ನು ಪಡೆಯುತ್ತಾರೆ. ನೀವು ಫ್ಲಾಟನ್ನು ಖಾಲಿ ಮಾಡಿ ಮಾಲೀಕರಿಗೆ/ಪರವಾನಗಿ ನೀಡುವವರಿಗೆ ಬೀಗದ ಕೈಗಳನ್ನು ಹಿಂದಿರುಗಿಸುವ ಸಂದರ್ಭದಲ್ಲಿ ಈ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಮಾಲೀಕರು/ಪರವಾನಗಿ ನೀಡುವವರು ಮನೆಗೆ ಏನಾದರೂ ಹಾನಿಯಾಗಿದೆಯೇ ಎಂದು ಪರೀಕ್ಷಿಸುತ್ತಾರೆ.

 

ಮುಂಗಡ ಠೇವಣಿಯನ್ನು ನಿಗದಿಪಡಿಸುವುದು

ಮಾಲೀಕರು/ಪರವಾನಗಿ ನೀಡುವವರು ನಿಗದಿಪಡಿಸಬಹುದಾದ ಮುಂಗಡ ಠೇವಣಿ ಮೊತ್ತವನ್ನು ನಿರ್ಧರಿಸಲು/ನಿಯಂತ್ರಿಸಲು ಯಾವುದೇ ನಿರ್ದಿಷ್ಟ ಕಾನೂನು-ನಿಯಮಗಳು ಇಲ್ಲ. ರೂಢಿಯಲ್ಲಿ, ಬಾಡಿಗೆ ಒಪ್ಪಂದ ತಯಾರಿಸುವ ಸಂದರ್ಭದಲ್ಲಿ ಈ ಮೊತ್ತವನ್ನು ನಿಷ್ಕರ್ಷೆ ಮಾಡಲಾಗುತ್ತದೆ. ಮಾಲೀಕರು/ಪರವಾನಗಿ ನೀಡುವವರು ಈ ಕೆಳಕಂಡ ಉದ್ದೇಶಗಳಿಗಾಗಿ ಮುಂಗಡ ಠೇವಣಿಯನ್ನು ಪಡೆಯುತ್ತಾರೆ.

 ನೀವು ಬಾಡಿಗೆಗೆ ಇರುವ ಅವಧಿಯಲ್ಲಿ ಮನೆಗೆ ಯಾವುದಾದರೂ ಹಾನಿಯಾಗಿದ್ದಲ್ಲಿ, ಅದರ ಸಂಬಂಧದ ವೆಚ್ಚವನ್ನು ವಸೂಲಿ ಮಾಡಿಕೊಳ್ಳಲು;
 ನೀವು ಬಾಡಿಗೆ/ವಿದ್ಯುತ್/ನೀರು ಇತರೆ ಬಿಲ್ ಗಳನ್ನು ಪಾವತಿ ಮಾಡದಿದ್ದ ಪಕ್ಷದಲ್ಲಿ, ಆ ಮೊತ್ತವನ್ನು ವಸೂಲಿ ಮಾಡಿಕೊಳ್ಳಲು;
 ಬಾಡಿಗೆದಾರರು/ಪರವಾನಗಿದಾರರು ಮನೆ ಖಾಲಿ ಮಾಡಲು ಒತ್ತಡ ಹೇರಲು.

 

ಮುಂಗಡ ಠೇವಣಿಯ ಮೊತ್ತ

ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಒಂದು ಅಥವಾ ಎರಡು ತಿಂಗಳುಗಳ ಬಾಡಿಗೆಯನ್ನು ಮುಂಗಡ ಠೇವಣಿಯಾಗಿ ಸ್ವೀಕರಿಸುವ ಪದ್ಧತಿಯಿದೆ. ಬೆಂಗಳೂರು ನಗರದಲ್ಲಿ 10 ತಿಂಗಳ ಬಾಡಿಗೆಯನ್ನು ಮುಂಗಡ ಠೇವಣಿಯಾಗಿ ಪಡೆಯಲಾಗುತ್ತದೆ.

ಕೆಲವು ಮಾಲೀಕರು/ಪರವಾನಗಿ ನೀಡುವವರು 11 ತಿಂಗಳ ಒಪ್ಪಂದ ಮುಗಿದ ನಂತರ ಬಾಡಿಗೆ ಹೆಚ್ಚಾಗುವ ಸಮಯದಲ್ಲಿ, ಹೆಚ್ಚಿನ ಮುಂಗಡ ಠೇವಣಿಯ ಮೊತ್ತಕ್ಕೆ ಬೇಡಿಕೆ ಇಡುತ್ತಾರೆ.

ಈ ಮೊತ್ತವನ್ನು ನಿಯಂತ್ರಿಸುವ ಯಾವುದೇ ಕಾನೂನು ಜಾರಿಯಲ್ಲಿ ಇರದ ಕಾರಣ, ಮುಂಗಡ ಠೇವಣಿಯು ನಿಷ್ಕರ್ಷೆ ಮಾಡಲು ನಿಮ್ಮ ಸಾಮರ್ಥ್ಯ ಮತ್ತು ನಿಮ್ಮ ಹಾಗೂ ಮಾಲೀಕರು/ಪರವಾನಗಿ ನೀಡುವವರ ನಡುವಣ ಪರಸ್ಪರ ನಂಬಿಕೆಯನ್ನು ಅವಲಂಬಿಸಿದೆ.

ಪೋಲೀಸ್ ದೃಢೀಕರಣ ಪ್ರಕ್ರಿಯೆ

ಪೋಲೀಸ್ ದೃಢೀಕರಣವನ್ನು ಎರಡು ವಿಧಾನದಲ್ಲಿ ಪಡೆಯಬಹುದಾಗಿದೆ. ನೀವು ಹತ್ತಿರದ ಪೋಲೀಸ್ ಠಾಣೆಗೆ ಹೋಗಿ ಬಾಡಿಗೆದಾರರ ದೃಢೀಕರಣ ಅರ್ಜಿಯನ್ನು ಪಡೆದು, ಯಾವುದೇ ವೃತ್ತಿಪರರಿಗೆ ಶುಲ್ಕ ಪಾವತಿಸಿ ಬಾಡಿಗೆದಾರರ ಕುರಿತು ಮಾಹಿತಿಯನ್ನು ಪಡೆಯಬಹುದು. ಕೆಲವು ಬ್ರೋಕರ್ ಗಳು ಸಹ ಈ ಸೇವೆಯನ್ನು ನೀಡುತ್ತಾರೆ.

ಮೊದಲನೇ ಹೆಜ್ಚೆ:

ಪೋಲೀಸ್ ದೃಢೀಕರಣಕ್ಕಾಗಿ ನಿಮ್ಮ ಭಾವೀ ಬಾಡಿಗೆದಾರರಿಂದ/ಪರವಾನಗಿ ಪಡೆಯುವವರಿಂದ ಈ ಕೆಳಕಂಡ ದಾಖಲೆಗಳನ್ನು ಪಡೆಯಲಾಗುತ್ತದೆ.
 ಭರ್ತಿ ಮಾಡಿದ ಪೋಲೀಸ್ ದೃಢೀಕರಣ ಅರ್ಜಿ
 ಗುರ್ತಿನ ದಾಖಲೆ – ಆಧಾರ್ ಕಾರ್ಡ್, ಪಡಿತರ ಚೀಟಿ, ವಾಹನ ಚಾಲನಾ ಪರವಾನಗಿ ಅಥವಾ ಪಾಸ್ ಪೋರ್ಟ್
 ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು

ಪೋಲೀಸ್ ದೃಢೀಕರಣದ ಅರ್ಜಿಯನ್ನು ನೇರವಾಗಿ ಪೋಲೀಸ್ ಠಾಣೆಯಿಂದ, ಬ್ರೋಕರ್ ನಿಂದ ಅಥವಾ ಆನ್ ಲೈನ್ ಮೂಲಕ
ಪಡೆಯಬಹುದಾಗಿದೆ. ದೆಹಲಿ ಮತ್ತು ಕರ್ನಾಟಕದಲ್ಲಿ ಅರ್ಜಿಯನ್ನು ಆನ್ ಲೈನ್ ನಿಂದ ಡೌನ್ ಲೋಡ್ ಮಾಡಬಹುದಾಗಿದೆ.

ಎರಡನೇ ಹೆಜ್ಜೆ:
ಈ ಮೇಲ್ಕಂಡ ದಾಖಲೆಗಳನ್ನು ಪಡೆಯುತ್ತಿದ್ದಂತೆಯೇ ಮಾಲೀಕರು ಭರ್ತಿ ಮಾಡಿದ ಅರ್ಜಿಯ ಮೇಲೆ ತಮ್ಮ ಸಹಿ ಮಾಡಿ, ಬಾಡಿಗೆದಾರರು ಒದಗಿಸಿದ ದಾಖಲೆಗಳನ್ನು ಮತ್ತು ಬಾಡಿಗೆ ಕರಾರಿನ ಪ್ರತಿಯೊಂದನ್ನು ಪೋಲೀಸರಿಗೆ ಸಲ್ಲಿಸತಕ್ಕದ್ದು.

ಮೂರನೇ ಹೆಜ್ಜೆ:
ಮಾಲೀಕರು/ಪರವಾನಗಿ ನೀಡುವವರು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಪೋಲೀಸರು ಬಾಡಿಗೆದಾರರ ಹಿನ್ನೆಲೆಯನ್ನು ಪತ್ತೆ ಹಚ್ಚುತ್ತಾರೆ. ಈ ಹಂತದಲ್ಲಿ, ಮಾಲೀಕರು/ಪರವಾನಗಿ ನೀಡುವವರಿಗೆ ಸ್ವೀಕೃತಿಯನ್ನು ನೀಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಈ ಪ್ರಕ್ರಿಯೆಯನ್ನು ಆನ್ ಲೈನ್ ಮುಖಾಂತರ ಮಾಡಬಹುದಾಗಿದೆ.

ನಾಲ್ಕನೇ ಹೆಜ್ಜೆ:
ಈ ಪ್ರಕ್ರಿಯೆ ಮುಗಿದ ನಂತರ, ಬಾಡಿಗೆದಾರರ ಹಿನ್ನೆಲೆ ಕುರಿತು ಮಾಹಿತಿಯನ್ನು ಮತ್ತು ಅವರ ವಿರುದ್ಧ ಅಪರಾಧದ ಆರೋಪಗಳಿದ್ದಲ್ಲಿ ಅವುಗಳ ದಾಖಲಾತಿಗಳ ವಿವರವನ್ನು ಮಾಲೀಕರಿಗೆ ಒದಗಿಸುತ್ತಾರೆ. ಈ ಮಾಹಿತಿಗೆ ಪೋಲೀಸ್ ಅಧಿಕಾರಿಗಳು ಸಹಿಮಾಡಿ ದೃಢೀಕರಿಸಿರುತ್ತಾರೆ.

ಬಾಡಿಗೆ ಕಟ್ಟಡವನ್ನು ಖಾಲಿ ಮಾಡಿವುದು

ಭೋಗ್ಯ/ಬಾಡಿಗೆ ಒಪ್ಪಂದ
ನೀವು ಭೋಗ್ಯದ ಒಪ್ಪಂದದ ಅಡಿಯಲ್ಲಿ ಮನೆಯೊಂದರಲ್ಲಿ ವಾಸವಾಗಿರುವ ಪಕ್ಷದಲ್ಲಿ ಕೇವಲ ನೀವು ಅಥವಾ ನಿಮ್ಮಿಂದ ಅನುಮತಿ ಪಡೆದವರು ಮಾತ್ರ ಆ ಮನೆಯಲ್ಲಿ ವಾಸ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಆದರೆ, ಮಾಲೀಕರು ನಿಮ್ಮನ್ನು ಕೆಲವು ಕಾರಣಗಳಿಂದ ಮನೆ ಖಾಲಿ ಮಾಡಿಸಬಹುದಾಗಿದೆ. ಈ ಕ್ರಮ ಕೈಗೊಳ್ಳಲು ಮಾಲೀಕರು ಬಾಡಿಗೆ ನಿಯಂತ್ರಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಭೋಗ್ಯ/ಬಾಡಿಗೆ ಒಪ್ಪಂದದ ಹೊರತಾಗಿಯೂ ಮಾಲೀಕರು ಬಾಡಿಗೆದಾರರನ್ನು ಈ ಕೆಳಕಂಡ ಕಾರಣಗಳಿಗಾಗಿ ಮನೆಯಿಂದ ತೆರವುಗೊಳಿಸಬಹುದಾಗಿದೆ.

 ಮಾಲೀಕರಿಂದ ನೋಟೀಸ್ ಬಂದ ನಂತರವೂ ನೀವು ಎರಡು ತಿಂಗಳುಗಳ ಅವಧಿಗೆ ನೀವು ಬಾಡಿಗೆ ಪಾವತಿ ಮಾಡದಿದ್ದಲ್ಲಿ;

 ಮಾಲೀಕರ ಪೂರ್ವಾನುಮತಿ ಇಲ್ಲದೆ ನೀವು ಮನೆಯನ್ನು ಸಂಪೂರ್ಣವಾಗಿ ಅಥವಾ ಭಾಗಶ: ಯಾರಿಗಾದರೂ ಒಳಬಾಡಿಗೆಗೆ ನೀಡಿದ್ದಲ್ಲಿ;

 ಬಾಡಿಗೆಗೆ ತೆಗೆದುಕೊಂಡ ಉದ್ದೇಶಕ್ಕಲ್ಲದೆ ಬೇರಾವುದೇ ಕಾರಣಗಳಿಗೆ ಮನೆಯನ್ನು ನೀವು ಬಳಸಿ, ಅದರಿಂದ ಸಾರ್ವಜನಿಕರಿಗೆ ತೊಂದರೆ, ಕಿರಿಕಿರಿ ಉಂಟಾಗಿದ್ದಲ್ಲದೆ ಮನೆಗೆ ಹಾನಿಯಂಟಾಗಿದ್ದು ಅಥವಾ ಸ್ವತ್ತಿನಲ್ಲಿ ಮಾಲೀಕರ ಆಸಕ್ತಿಗೆ ಕುಂದುಂಟಾಗಿದ್ದಲ್ಲಿ;

 ನೀವಾಗಲೀ ನಿಮ್ಮ ಕುಟುಂಬದ ಸದಸ್ಯರಾಗಲೀ ಮನೆಯಲ್ಲಿ ಆರು ತಿಂಗಳು ಅಥವಾ ಹೆಚ್ಚಿನ ಅವಧಿಗೆ ವಾಸ ಮಾಡದಿದ್ದಲ್ಲಿ (ನೀವು ಮನೆಯನ್ನು ವಾಸದ ಉದ್ದೇಶಕ್ಕಾಗಿ ಬಾಡಿಗೆಗೆ ಪಡೆದಿದ್ದು, ಅದರಲ್ಲಿ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದಲ್ಲಿ, ನೀವು ಮನೆಯಲ್ಲಿ ವಾಸವಾಗಿಲ್ಲವೆಂದೇ ಪರಿಗಣಿಸಲಾಗುತ್ತದೆ);

 ಬಾಡಿಗೆದಾರರು ಮನೆಗೆ ಗಣನೀಯ ಪ್ರಮಾಣದಲ್ಲಿ ಹಾನಿಯುಂಟು ಮಾಡಿದ್ದಲ್ಲಿ;

 ಮಾಲೀಕರು ಮನೆಯನ್ನು ದುರಸ್ತಿ ಮಾಡಲು, ಪುನ:ನಿರ್ಮಾಣ ಮಾಡಲು ಅಥವಾ ನವೀಕರಿಸಲು ಇಚ್ಛಿಸಿದ್ದು, ಬಾಡಿಗೆದಾರರು ಮನೆಯಲ್ಲಿ ವಾಸವಾಗಿರುವ ಕಾರಣ ಈ ಕೆಲಸವನ್ನು ಕೈಗೆತ್ತಿಕೊಳ್ಳಲು ಅಸಮರ್ಥರಾಗಿದ್ದಲ್ಲಿ;

 ಮನುಷ್ಯರು ವಾಸ ಮಾಡಲು ಮನೆಯು ಅಸುರಕ್ಷಿತವಾಗಿದ್ದು ಮಾಲೀಕರು ಅತ್ಯವಶ್ಯವಾಗಿ ದುರಸ್ತಿಯನ್ನು ಕೈಗೆತ್ತಿಕೊಳ್ಳಬೇಕಾದ ಸಂದರ್ಭದಲ್ಲಿ.

ಮನೆಯನ್ನು ತೆರವುಗೊಳಿಸಲು ನೀಡಬೇಕಾದ ಕಾರಣಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಬಹುದು. ಆದರೆ, ತೆರವುಗೊಳಿಸುವ ಪ್ರಕ್ರಿಯೆಯಲ್ಲಿ ಅನುಸರಿಸುವ ತತ್ತ್ವ ಮಾತ್ರ ಒಂದೇ ಆಗಿರುತ್ತದೆ. ನಿಮ್ಮನ್ನು ಮನೆಯಿಂದ ತೆರವುಗೊಳಿಸಲು ಕಾನೂನಿನ ಚೌಕಟ್ಟಿನಲ್ಲಿ ಸಕಾರಣಗಳನ್ನು ಮಾಲೀಕ ಹೊಂದಿರಬೇಕು. ವಿನಾ:ಕಾರಣ ನಿಮ್ಮನ್ನು ಮನೆಯಿಂದ ತೆರವುಗೊಳಿಸಲಾಗಿದೆ ಎಂದು ನೀವು ಭಾವಿಸಿದಲ್ಲಿ, ಕಾನೂನು ಕ್ರಮ ತೆಗೆದುಕೊಳ್ಳುವ ಸಲುವಾಗಿ ನಿಮ್ಮ ವಕೀಲರನ್ನು ಭೇಟಿ ಮಾಡಿ.

ಅನುಮತಿ ಮತ್ತು ಪರವಾನಗಿ ಒಪ್ಪಂದ
ಅನುಮತಿ ಮತ್ತು ಪರವಾನಗಿ ಒಪ್ಪಂದದ ಅಡಿಯಲ್ಲಿ ಕಟ್ಟಡವನ್ನು ಬಾಡಿಗೆ ತೆಗೆದುಕೊಂಡ ಪ್ರಕರಣಗಳಲ್ಲಿ, ಪರವಾನಗಿ ನೀಡುವವರು (ಬಾಡಿಗೆಗೆ ನೀಡುವವರು) ಪರವಾನಗಿ ಪಡೆದವರಿಗೆ (ಬಾಡಿಗೆದಾರರಿಗೆ) ಕಟ್ಟಡವನ್ನು ತೆರವುಗೊಳಿಸುವಂತೆ ಒಂದು ತಿಂಗಳ ಕಾಲಾವಕಾಶ ನೀಡಲು ಅವಕಾಶವಿರುತ್ತದೆ. ಇದನ್ನು ಮತ್ತು ಒಪ್ಪಂದದಲ್ಲಿ ನಿರ್ದಿಷ್ಟವಾಗಿ ನಮೂದಿಸಿರುವ ರಕ್ಷಣೆಯನ್ನು ಹೊರತುಪಡಿಸಿ, ಕಾನೂನಿನ ಅಡಿಯಲ್ಲಿ ಮತ್ತಾವುದೇ ವಿನಾಯಿತಿ ಇರುವುದಿಲ್ಲ.

ಬಾಡಿಗೆ ತೊಂದರೆಗಳಿಗೆ ಪೋಲೀಸ್ ದೂರು ನೀಡುವುದು

ನಿಮ್ಮ ಮಾಲೀಕರು/ಪರವಾನಗಿ ನೀಡಿದವರು/ಬಾಡಿಗೆದಾರರು/ಪರವಾನಗಿ ಪಡೆದವರು – ಇವರ ವಿರುದ್ಧ ದೂರು ನೀಡಲು ನೀವು ಪೋಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿಯನ್ನು (ಎಫ್ಐಆರ್) ದಾಖಲು ಮಾಡಬೇಕಾಗುತ್ತದೆ. ಮನೆ/ಫ್ಲಾಟನ್ನು ಬಾಡಿಗೆಗೆ ನೀಡುವಾಗ/ಪಡೆಯುವಾಗ ಮಾಲೀಕರು/ಪರವಾನಗಿ ನೀಡುವವರು/ಬಾಡಿಗೆದಾರರು/ಪರವಾನಗಿ ಪಡೆದವರು ಅಥವಾ ಬ್ರೋಕರ್ ಅಥವಾ ಮತ್ತಾವುದೇ ಮಧ್ಯವರ್ತಿಯಿಂದ ನಿಮಗಾದ ತೊಂದರೆ ಕುರಿತು ಕೂಲಂಕಷ ಮಾಹಿತಿಯನ್ನು ಒದಗಿಸತಕ್ಕದ್ದು.