ಮನೆ ಹುಡುಕುವುದು

ಬ್ರೋಕರ್ ಸಂಪರ್ಕಿಸಿರಿ
ಮನೆ ಅಥವಾ ಫ್ಲಾಟನ್ನು ಹುಡುಕಲು ನೀವು ತೀರ್ಮಾನಿಸಿದಾಗ, ನೀವು ವಾಸ ಮಾಡಲು ಇಚ್ಛಿಸುವ ಸ್ಥಳದ ಬ್ರೋಕರ್ ಗಳನ್ನು ಸಂಪರ್ಕಿಸಿರಿ. ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಳ್ಳಲು ನೀವು ಅಂತಿಮ ತೀರ್ಮಾನ ತೆಗೆದುಕೊಂಡು ಒಪ್ಪಂದವನ್ನು ಸಹಿ ಮಾಡಿದ ನಂತರ ಬ್ರೋಕರ್ ಗಳಿಗೆ ಸಾಮಾನ್ಯವಾಗಿ ಹಣ ನೀಡಲಾಗುತ್ತದೆ.

ಮನೆ ಪರಿವೀಕ್ಷಣೆ
ನೀವು ಬಾಡಿಗೆಗೆ ತೆಗೆದುಕೊಳ್ಳಲು ಇಚ್ಚಿಸುವ ಮನೆಯ ಬಗೆಯನ್ನು (ಫರ್ನಿಷ್ ಆಗಿರುವ/ಆಗದಿರುವ) ಅವಲಂಬಿಸಿ, ನಿಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಮನೆ ಇದೆಯೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶಕ್ಕಾಗಿ ನೀವು ಬಾಡಿಗೆ ತೆಗೆದುಕೊಳ್ಳಲು ಬಯಸುವ ಮನೆಯನ್ನು ಭೌತಿಕವಾಗಿ ಪರಿವೀಕ್ಷಣೆ ಮಾಡತಕ್ಕದ್ದು.

ನೀರು, ವಿದ್ಯುಚ್ಛಕ್ತಿ ಸರಬರಾಜು, ಬಲ್ಬ್ ಗಳು, ಫ್ಯಾನ್ ಇತ್ಯಾದಿಗಳು ಮನೆಯೊಂದರಲ್ಲಿ ಇರಬೇಕಾದ ಮೂಲಭೂತ ಸೌಕರ್ಯಗಳು. ನಿಮ್ಮ ವೈಯುಕ್ತಿಕ ಅವಶ್ಯಕತೆಳಿದ್ದಲ್ಲಿ ಮಾಲೀಕರು/ಪರವಾನಗಿ ನೀಡುವವರೊಂದಿಗೆ ಮಾತುಕತೆ ಮಾಡಿ ನಿಷ್ಕರ್ಷೆಮಾಡಿಕೊಳ್ಳಿರಿ.

ಸಾಂಕೇತಿಕ ಮುಂಗಡ ಹಣ
ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಳ್ಳುವ ಕುರಿತು ನಿರ್ಧಾರ ಮಾಡಲು ನಿಮಗೆ ಸಮಯದ ಅವಶ್ಯಕತೆ ಇದ್ದಲ್ಲಿ, ಆ ಮನೆಯನ್ನು ನಿಮಗಾಗಿ ಕಾದಿರಿಸುವ ಉದ್ದೇಶದಿಂದ ಮಾಲೀಕರಿಗೆ ನೀವು ಸಾಂಕೇತಿಕ ಮುಂಗಡ ಹಣವನ್ನು ಪಾವತಿ ಮಾಡಬಹುದಾಗಿದೆ. ಮಾಲೀಕರು ಬೇರೆ ಯಾವುದೇ ಉದ್ದೇಶಿತ ಬಾಡಿಗೆದಾರರು/ಪರವಾನಗಿದಾರರಿಗೆ ಮನೆಯನ್ನು ತೋರಿಸದಂತೆ ಖಾತರಿ ಮಾಡಿಕೊಳ್ಳಲು ಈ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಾಗಿರುತ್ತದೆ. ಆದರೆ, ಇದು ಐಚ್ಛಿಕ. ನೀವೇನಾದರೂ ಸಾಂಕೇತಿಕ ಮುಂಗಡ ಮೊತ್ತವನ್ನು ಪಾವತಿ ಮಾಡಿದಲ್ಲಿ ಅದಕ್ಕಾಗಿ ರಸೀದಿಯನ್ನು ಕೊಡುವಂತೆ ಮಾಲೀಕರಿಗೆ ತಿಳಿಸಿ.

ಸಾಂಕೇತಿಕ ಮುಂಗಡ ಪಾವತಿಯು ಒಂದು ಪದ್ಧತಿಯಾಗಿದ್ದು, ಇದಕ್ಕೆ ಯಾವುದೇ ಕಾನೂನಿನ ಚೌಕಟ್ಟಿರುವುದಿಲ್ಲ. ಹೀಗಾಗಿ ಈ ಬಾಬ್ತು ಪಾವತಿ ಮಾಡಿದ ಹಣದ ಸಲುವಾಗಿ ನೀವು ಯಾವುದೇ ಕಾನೂನು ಕ್ರಮವನ್ನು ಮಾಲೀಕರ ವಿರುದ್ಧ ಕೈಗೊಳ್ಳುವುದು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಸಾಂಕೇತಿಕವಾಗಿ ಮುಂಗಡ ಪಾವತಿ ಮಾಡುವಾಗ ವಿವೇಚನೆ ಅಗತ್ಯ.

ಮಾಲೀಕರೊಂದಿಗೆ ಮಾತುಕತೆ ಮಾಡುವ ವಿಧಾನ

ಗುರ್ತಿನ ದಾಖಲೆ ಪಡೆದುಕೊಳ್ಳಿ
ಮಾಲೀಕರು/ಪರವಾನಗಿ ನೀಡುವವರೇ ಮನೆಯ ಕಾನೂನುಬದ್ಧ ಮಾಲೀಕರು ಅಥವಾ ಮನೆಯನ್ನು ಬಾಡಿಗೆಗೆ ನೀಡಲು ಮಾಲೀಕರಿಂದ ಅನುಮತಿ ಪಡೆದಿರುವವರು ಎಂಬುದನ್ನು ಖಾತರಿಗೊಳಿಸಿಕೊಳ್ಳಲು ಮಾಲೀಕರು/ಪರವಾನಗಿ ನೀಡುವವರ ಗುರ್ತಿನ ದಾಖಲೆಯನ್ನು ನೀವು ಕೇಳಬಹುದಾಗಿದೆ. ಆ ವ್ಯಕ್ತಿಯು ತಾನು ಯಾರು ಎಂದು ಪ್ರತಿಬಿಂಬಿಸಿಕೊಳ್ಳುತ್ತಿದ್ದಾನೆಯೋ ಆತನ ಸತ್ಯಾಸತ್ಯತೆಯನ್ನು ದೃಢೀಕರಣಗೊಳಿಸಿಕೊಳ್ಳುವುದು ಇದರ ಉದ್ದೇಶ. ಆಧಾರ್ ಕಾರ್ಡ್, ಚಾಲನಾ ಪರವಾನಗಿ ಇತ್ಯಾದಿಗಳನ್ನು ಸಾಮಾನ್ಯವಾಗಿ ಗುರ್ತಿನ ದಾಖಲೆಗಳಾಗಿ ಬಳಸಲಾಗುತ್ತದೆ. ಈ ದಾಖಲೆಗಳನ್ನು ವ್ಯಕ್ತಿಯ ಭಾವಚಿತ್ರ ಮತ್ತು ಖಾಯಂ ವಿಳಾಸ ಇರತಕ್ಕದ್ದು.

ಬಾಡಿಗೆ ಮತ್ತು ಮುಂಗಡ ಠೇವಣಿ ಕುರಿತು ಸಂಧಾನ
ಮುಂಗಡ ಠೇವಣಿ ಮತ್ತು ಬಾಡಿಗೆ ಮೊತ್ತದ ಕುರಿತು ಮಾಲೀಕರೊಂದಿಗೆ ಸೂಕ್ತವಾಗಿ ಮಾತುಕತೆ ನಡೆಸಿ, ಎರಡಕ್ಕೂ ರಸೀದಿ ನೀಡುವಂತೆ ತಿಳಿಸಿರಿ. ಕೆಲವು ಸಂದರ್ಭಗಳಲ್ಲಿ ಬಾಡಿಗೆ ನಿರ್ಧಾರಿಸುವಾಗ ಬ್ರೋಕರ್ ಗಳು ಅತ್ಯಂತ ಹೆಚ್ಚಿನ ನೆರವನ್ನು ನೀಡಬಲ್ಲರು. ಹೀಗಾಗಿ ಮಾತುಕತೆ ಸಮಯದಲ್ಲಿ ಅವರನ್ನೂ ನಿಮ್ಮೊಂದಿಗೆ ಕರೆತನ್ನಿ.

ಮನೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಸಂಧಾನ
ಮನೆಯನ್ನು ಪರಿವೀಕ್ಷಣೆ ಮಾಡುವಾಗ ನಿಮ್ಮ ಅವಶ್ಯಕತೆಗೆ ಸಂಬಂಧಿಸಿದಂತೆ ಏನಾದರೂ ಮಾರ್ಪಾಡಿನ ಅಗತ್ಯವಿದ್ದಲ್ಲಿ ಒಪ್ಪಂದ ಸಹಿಮಾಡುವ ಮೊದಲೇ ಅದನ್ನು ಮಾಲೀಕರ ಗಮನಕ್ಕೆ ತನ್ನಿರಿ. ಹೀಗೆ ಮಾಡುವುದರಿಂದ ಮಾಲೀಕರು ಮಾತುಕತೆಗೆ ಮುಕ್ತರಾಗಿದ್ದಾರೆಯೇ ಮತ್ತು ನೀವು ಉತ್ತಮ ಬೆಲೆಗೆ ನಿಮ್ಮ ಅನಕೂಲಕ್ಕೆ ತಕ್ಕದಾದ ಬಾಡಿಗೆ ಮನೆಯನ್ನು ಪಡೆಯುತ್ತಿದ್ದೇರೇ ಎಂದು ಖಾತರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಅವಶ್ಯಕತೆಗಳನ್ನು – ದುರಸ್ತಿ ಇತ್ಯಾದಿ – ಪಟ್ಟಿಮಾಡಿ ಮಾಲೀಕರಿಗೆ ನೀಡಿರಿ.

ಬಾಡಿಗೆ ಒಪ್ಪಂದ ಕುರಿತು ಸಂಧಾನ

ಸಂಧಾನದ ಉದ್ದೇಶ
 ಮಾತುಕತೆ ಮಾಡುವಾಗ ನೀವು ಯಾವ ವ್ಯಕ್ತಿಯೊಡನೆ ಒಪ್ಪಂದ ಮಾಡಿಕೊಳ್ಳಲು ಉದ್ದೇಶಿಸಿರುವಿರೋ ಆ ವ್ಯಕ್ತಿಯ ಗುರ್ತು- ವ್ಯಕ್ತಿತ್ವ ವನ್ನು ಪತ್ತೆ ಹಚ್ಚಲು ಪ್ರಯತ್ನಿಸಿರಿ. ನಿಮ್ಮ ಹಕ್ಕುಗಳು ಸಾಧಿಸಲು ಮತ್ತು ಒಪ್ಪಂದ ಕುರಿತು ಸಂಧಾನ-ಮಾತುಕತೆ ಮಾಡಲು ಈ ಅಂಶ ಬಹಳ ಮುಖ್ಯ. ಈ ಮಾಹಿತಿ ನಿಮ್ಮ ಬಳಿ ಇದ್ದಲ್ಲಿ – ಒಪ್ಪಂದ ಸಹಿ ಮಾಡುವ ಮುನ್ನವೇ ಯಾವುದೇ ರೀತಿಯ ವಂಚನೆ, ಮೋಸ ಅಥವಾ ಒಪ್ಪಂದ/ಹಣ ಸಂದಾಯ ಕುರಿತು ಯಾವುದೇ ವಿವಾದ ಉದ್ಭವಿಸಿದಾಗ ನೀವು ಸುಲಭವಾಗಿ ಪೋಲೀಸ್/ನ್ಯಾಯಾಲಯದ ನೆರವನ್ನು ಪಡೆಯಬಹುದು.

 ಒಪ್ಪಂದ ಕುರಿತು ಮಾತುಕತೆ ಮಾಡುವಾಗ ನಿಮ್ಮ ಷರತ್ತುಗಳನ್ನು ಸ್ಪಷ್ಟವಾಗಿ ತಿಳಿಸುವುದು ಅತಿಮುಖ್ಯ ಮತ್ತು ಅವುಗಳನ್ನು ತಪ್ಪದೇ ಬರವಣಿಗೆ ರೂಪದಲ್ಲಿ ಹೊಂದಿರತಕ್ಕದ್ದು. ಒಂದು ಬಾರಿ ಬಾಡಿಗೆ ಒಪ್ಪಂದವನ್ನು ಸಹಿ ಮಾಡಿದ ತರುವಾಯ:

 ಒಪ್ಪಂದವನ್ನು ಅಲ್ಲಗೆಳೆಯುವುದು ಸುಲಭಸಾಧ್ಯವಲ್ಲ. ಆದುದರಿಂದ ನಿಮ್ಮ ಒಪ್ಪಂದ ಕುರಿತು ಕೂಲಂಕಷವಾಗಿ ಮಾತುಕತೆಯಾಡಿ, ಸಹಿ ಮಾಡುವ ಮುನ್ನ ಒಪ್ಪಂದವನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಿರಿ.
 ನಿಮ್ಮ ಮಾಲೀಕರು/ಬಾಡಿಗೆದಾರರು ಒಪ್ಪಂದದಲ್ಲಿರುವುದನ್ನು ಹೊರತುಪಡಿಸಿ ಹೆಚ್ಚುವರಿಯಾದುದನ್ನು ತೆರುವಂತೆ/ಒದಗಿಸುವಂತೆ ಕೋರಿದಲ್ಲಿ, ಆ ಬೇಡಿಕೆಯನ್ನು ನೀವು ಸಾರಾಸಗಟಾಗಿ ನಿರಾಕರಿಸಬಹುದಾಗಿದೆ.

ಮನೆಯನ್ನು ಬಾಡಿಗೆಗೆ ಪಡೆಯುವಾಗ ಅನುಸರಿಸಬೇಕಾಗ ಮುನ್ನೆಚ್ಚರಿಕೆ ಕ್ರಮಗಳು

ಸಾಮಾನ್ಯವಾಗಿ, ಮನೆ/ಫ್ಲಾಟ್ ಬಾಡಿಗೆಗೆ ಸಂಬಂಧಿಸಿದಂತೆ ಒಪ್ಪಂದವನ್ನು ಮಾಡಿಕೊಳ್ಳುವಾಗ ವಿಧಿಬದ್ಧ ಪ್ರಕ್ರಿಯೆಗಳನ್ನು ಸೂಕ್ತವಾಗಿ ಅನುಸರಿಸುವುದಿಲ್ಲ.

ಆದರೆ, ಈ ವ್ಯವಹಾರವು ಒಂದು ಕರಾರಿನ ಸ್ವರೂಪದ್ದಾಗಿದ್ದು, ಹಣ ಮತ್ತು ಆಸ್ತಿಯ ಪರಸ್ಪರ ವಿನಿಮಯವನ್ನು ಒಳಗೊಂಡಿರುತ್ತದೆ. ಹೀಗಾಗಿ, ಮನೆ ಬಾಡಿಗೆ ಪಡೆಯುವಾಗ ಈ ಕೆಳಕಂಡ ಅಂಶಗಳನ್ನು ತಿಳಿದಿರುವುದು ಸೂಕ್ತ.

ಮಾಲೀಕರು/ಪರವಾನಗಿ ನೀಡುವವರು ಮತ್ತು ಬಾಡಿಗೆದಾರರು/ಪರವಾನಗಿ ಪಡೆಯವವರ ನಡುವಣ ಸಂಬಂಧ ಕರಾರಿನ ಸ್ವರೂಪದ್ದಾಗಿರುತ್ತದೆ. ಎಂದರೆ, ನಿಮ್ಮಗಳ ನಡುವಿನ ಕಾನೂನು ಸಂಬಂಧವು ಉಭಯತ್ರರು ನಿರ್ಧರಿಸಿಕೊಂಡ ಷರತ್ತುಗಳ ಮೇಲೆ ಅವಲಂಬಿತವಾಗಿರುತ್ತದೆ.

ಆದರೆ
 ನೀವು ಬಾಡಿಗೆ/ಭೋಗ್ಯದ ಒಪ್ಪಂದವನ್ನು ಹೊಂದಿದವರಾಗಿದ್ದರೆ, ನಿಮಗೆ ಕಾನೂನಿನ ಅಡಿಯಲ್ಲಿ ಕೆಲವು ರಕ್ಷಣೆಗಳು ದೊರೆಯುತ್ತವೆ.
 ಆದರೆ, ಈ ರಕ್ಷಣೆಗಳು ಅನುಮತಿ ಮತ್ತು ಪರವಾನಗಿ ಒಪ್ಪಂದಗಳಲ್ಲಿ ಅನ್ವಯಿಸುವುದಿಲ್ಲ.

ಈ ವ್ಯತ್ಯಾಸದ ಹೊರತಾಗಿಯೂ ಉಭಯತ್ರರು ಷರತ್ತುಗಳನ್ನು ನಿರ್ಧರಿಸಿ ತಮ್ಮ ನಡುವೆ ಸ್ಪಷ್ಟ ಸಂಬಂಧವನ್ನು ಸ್ಥಾಪಿಸುವ ತತ್ವ ಎರಡೂ ರೀತಿಯ ಒಪ್ಪಂದಗಳಿಗೆ ಅನ್ವಯವಾಗುತ್ತದೆ.

ನೀವುಗಳು ಒಪ್ಪಿರುವ ಷರತ್ತುಗಳಿಗೆ ಸಂಬಂಧಿಸಿದಂತೆ ಮತ್ತು ಯಾವುದೇ ಹಣ ಪಾವತಿಸಿರುವ ಬಗ್ಗೆ ದಾಖಲೆಗಳನ್ನು ಇಡತಕ್ಕದ್ದು.

ಇದಕ್ಕಾಗಿ:
 ಒಪ್ಪಂದವನ್ನು ಲಿಖಿತ ರೂಪದಲ್ಲಿ ಹೊಂದಿರತಕ್ಕದ್ದು.
 ಮೌಖಿಕವಾಗಿ ಯಾವುದೇ ವಿಚಾರವನ್ನು ಚರ್ಚಿಸಿದಲ್ಲಿ ಅದನ್ನು ಬರವಣಿಗೆ ರೂಪದಲ್ಲಿ ಕಾಗದದಲ್ಲಿ/ವಾಟ್ಸಾಪ್/ಇ-ಮೇಲ್/ಮೆಸೇಜುಗಳ (ಸಾಧ್ಯವಾದಲ್ಲಿ) ರೂಪದಲ್ಲಿ ದಾಖಲು ಮಾಡುವುದು.
 ಯಾವುದೇ ಹಣ ಪಾವತಿಗೆ ಸಂಬಂಧಿಸಿದಂತೆ ರಸೀದಿಗಳನ್ನು ಇಟ್ಟುಕೊಳ್ಳುವುದು (ಸಾಧ್ಯವಾದಲ್ಲಿ).

ಬಾಡಿಗೆ ಒಪ್ಪಂದದ ಚೆಕ್ ಲಿಸ್ಟ್

ಮಾಲೀಕರು/ಪರವಾನಗಿ ನೀಡುವವರು ಮತ್ತು ಬಾಡಿಗೆದಾರರು/ಪರವಾನಗಿ ಪಡೆಯುವವರ ಹಿತಾಸಕ್ತಿಗಳ ರಕ್ಷಣೆಯ ಸಲುವಾಗಿ ಉಭಯತ್ರರ ನಡುವೆ ಲಿಖಿತ ರೂಪದಲ್ಲಿ ಒಪ್ಪಂದ ಮಾಡಿಕೊಳ್ಳುವುದು ಸೂಕ್ತ. ಈ ಒಪ್ಪಂದಕ್ಕೆ ಅಂತಿಮ ರೂಪ ನೀಡುವ ಮುನ್ನ ಅದರ ಷರತ್ತುಗಳನ್ನು ಕೂಲಂಕಷವಾಗಿ ಓದಿ ಅರ್ಥೈಸಿಕೊಳ್ಳತಕ್ಕದ್ದು. ಈ ಒಪ್ಪಂದವು ಕೇವಲ ನೀವು ತೆರುವ ಬಾಡಿಗೆ ಮತ್ತು ಮುಂಗಡ ಠೇವಣಿಗೆ ಸಂಬಂಧಪಡುವುದಿಲ್ಲ. ಬಾಡಿಗೆ ಪಡೆಯುತ್ತಿರುವ ಸ್ವತ್ತಿನ ನಿರ್ವಹಣೆ, ಬಿಲ್ ಗಳ ಪಾವತಿ, ತೆರವು ಮಾಡಿಸಲು ನೀಡುವ ನೋಟೀಸ್ ಅವಧಿ ಇತ್ಯಾದಿ ಪ್ರಮುಖ ಅಂಶಗಳನ್ನು ಈ ಒಪ್ಪಂದ ಒಳಗೊಂಡಿರುತ್ತದೆ.

ನಿಮ್ಮ ಒಪ್ಪಂದದಲ್ಲಿ (ಭೋಗ್ಯ ಅಥವಾ ಅನುಮತಿ ಮತ್ತು ಪರವಾನಗಿ ಕರಾರು) ಈ ಕೆಳಕಂಡ ಅಂಶಗಳಿವೆಯೇ ಎಂದು ಖಾತರಿ ಪಡಿಸಿಕೊಳ್ಳಿ:

ಬಾಡಿಗೆದಾರರ/ಪರವಾನಗಿ ನೀಡುವವ ಮತ್ತು ಮಾಲೀಕ/ಪರವಾನಗಿ ಪಡೆಯುವವರ ಹೆಸರು

ಒಪ್ಪಂದದ ಉದ್ದೇಶ

ಒಪ್ಪಂದದ ಅವಧಿ

ಬಾಡಿಗೆ ಮೊತ್ತ

ಬಾಡಿಗೆ ಪಾವತಿ ಮಾಡಬೇಕಿರುವ ದಿನಾಂಕ

ಮುಂಗಡ ಠೇವಣಿ ಮೊತ್ತ

ನಿರ್ವಹಣಾ ವೆಚ್ಚ

ದುರಸ್ತಿ ಮಾಡಿಸುವ ಹೊಣೆಗಾರಿಕೆ

ಫರ್ನಿಚರ್ /ಫಿಟ್ಟಿಂಗ್ಸ್/ ಇತ್ಯಾದಿಗಳ ಪಟ್ಟಿ

ಒಪ್ಪಂದವನ್ನು ಕೊನೆಗಾಣಿಸಲು ನೀಡಬೇಕಾದ ನೋಟೀಸಿನ ಅವಧಿ

ಮಾಲೀಕರು ಕಟ್ಟಡದ ಒಳಗೆ ಪ್ರವೇಶಿಸಲು ನೀಡಬೇಕಾದ ನೋಟೀಸ್

ಸೊಸೈಟಿ/ನಿವಾಸಿಗಳ ಕ್ಷೇಮಾಭಿವೃದ್ಧ ಸಂಘದ ಬೈಲಾಗಳನ್ನು ಅನುಸರಿಸುವ ಕುರಿತು ಘೋಷಣೆ

ಯಾವುದೇ ಕಾನೂನು ಸಮ್ಮತವಲ್ಲದ ಚಟುವಟಿಕೆಗಳನ್ನು ಮಾಡಿದಿರುವ ಬಗ್ಗೆ ಘೋಷಣೆ

ಮಾಲಿಕ/ಪರವಾನಗಿ ನೀಡುವವರ ಸಮ್ಮತಿಯೊಡನೆ ಮಾತ್ರ ಒಳಬಾಡಿಗೆ ಕೊಡುವ ಕುರಿತು ಘೋಷಣೆ

ವಿವಾದ ಪರಿಹಾರಕ್ಕಾಗಿ ಮೊರೆ ಹೋಗುವ ನ್ಯಾಯಾಲಯ

ಅವಧಿಯ ನಂತರ ಬಾಡಿಗೆ ಹೆಚ್ಚಳ ಮಾಡುವ ದರ, ಇದ್ದಲ್ಲಿ

ಬಾಡಿಗೆದಾರರ/ಪರವಾನಗಿ ನೀಡುವವ ಮತ್ತು ಮಾಲೀಕ/ಪರವಾನಗಿ ಪಡೆಯುವವರ` ಸಹಿ

ಇಬ್ಬರು ಸಾಕ್ಷಿಗಳ ಸಹಿ

ಮನೆ/ಫ್ಲಾಟ್ ಬಾಡಿಗೆಗೆ ಪಡೆಯುವುದು

ಮನೆ ಅಥವಾ ಫ್ಲಾಟ್ ಬಾಡಿಗೆಗೆ ಪಡೆಯುವುದು ಹಲವಾರು ಪ್ರಕ್ರಿಯೆಗಳನ್ನು ಒಳಗೊಂಡಿದೆ. ಈ ಬಗ್ಗೆ ನಿಮಗೆ ಮಾಹಿತಿ ಇಲ್ಲದಿದ್ದಲ್ಲಿ ನಿಮ್ಮ ಅವಶ್ಯಕತೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಮನೆಯೊಂದನ್ನು ಬಾಡಿಗೆಗೆ ಪಡೆಯುವಾಗ ಈ ಕೆಳಕಂಡ ಅಂಶಗಳನ್ನು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ.
 ಸೂಕ್ತವಾದ ಮನೆಯೊಂದನ್ನು ಹುಡುಕುವುದು.
 ನಿಮ್ಮ ಬಾಡಿಗೆ ಒಪ್ಪಂದವನ್ನು ನಿಷ್ಕರ್ಷೆಗೊಳಿಸುವುದು
 ಲಿಖಿತ ಒಪ್ಪಂದಕ್ಕೆ ಸಹಿ ಮಾಡುವುದು
 ಒಪ್ಪಂದವನ್ನು ನೋಂದಣಿ ಅಥವಾ ನೋಟರೀಕರಣಗೊಳಿಸುವುದು
 ಒಪ್ಪಂದಕ್ಕೆ ಅನ್ವಯವಾಗುವ ಮುದ್ರಾಂಕ ಶುಲ್ಕವನ್ನು ಪಾವತಿಸುವುದು
 ಕ್ಲಪ್ತ ಸಮಯಕ್ಕೆ ಬಾಡಿಗೆ ನೀಡುವುದು
 ಪೋಲೀಸ್ ದೃಢೀಕರಣ

ಬಾಡಿಗೆ ನೀಡುವಾಗ ಮಾಡಿಕೊಳ್ಳುವ ಒಪ್ಪಂದದ ವಿಧಗಳು

ನೀವು ಮನೆಯನ್ನು ಬಾಡಿಗೆ ಪಡೆಯುವಾಗ ಅಥವಾ ಬಾಡಿಗೆ ನೀಡುವಾಗ ಈ ಕೆಳಕಂಡ ಕಾರಣಗಳಿಗಾಗಿ ಒಪ್ಪಂದವನ್ನು ಮಾಡಿಕೊಳ್ಳುವುದು ಸೂಕ್ತ.
 ಬಾಡಿಗೆ, ದುರಸ್ತಿ, ಸೌಲಭ್ಯಗಳ ಕುರಿತು ಯಾವುದೇ ವಿವಾದ ಉದ್ಭವಿಸಿದಾಗ, ಒಪ್ಪಂದದಲ್ಲಿನ ಷರತ್ತುಗಳನ್ನು ಜಾರಿಗೊಳಿಸಬಹುದಾಗಿದೆ. ಇದು ನಿಮ್ಮ ನೆರವಿಗೆ ಬರುತ್ತದೆ.
 ಪೋಲೀಸರಿಗೆ ದೂರನ್ನು ನೀಡಲು/ನ್ಯಾಯಾಲಯದ ಮೊರೆ ಹೋಗಲು ನೀವು ಲಿಖಿತ ದಾಖಲೆಯನ್ನು ಸಾಕ್ಷ್ಯಾಧಾರವಾಗಿ ನೀಡಬಹುದಾಗಿದೆ.
 ಬಾಡಿಗೆದಾರ/ಪರವಾನಗಿ ಪಡೆದವರಾಗಿ ಈ ಒಪ್ಪಂದವನ್ನು ನಿಮ್ಮ ತಾತ್ಕಾಲಿಕ ವಿಳಾಸದ ದಾಖಲೆಯನ್ನಾಗಿ ಬಳಸಬಹುದಾಗಿದೆ.

ಮಾಲೀಕ/ಪರವಾನಗಿ ನೀಡಿದವರು ಅಥವಾ ಬಾಡಿಗೆದಾರ/ಪರವಾನಗಿ ಪಡೆದವರಾಗಿ ನಿಮ್ಮ ಹಕ್ಕು ಮತ್ತು ಕರ್ತವ್ಯಗಳು ನೀವು ಮಾಡಿಕೊಂಡಿರುವ ಬಾಡಿಗೆ ಒಪ್ಪಂದವನ್ನು ಅವಲಂಬಿಸುತ್ತವೆ. ಯಾವುದೇ ಸ್ವತ್ತನ್ನು ವಾಸೋಪಯೋಗಕ್ಕಾಗಿ ಬಾಡಿಗೆ ಪಡೆಯುವಾಗ ಎರಡು ವಿಧದ ಒಪ್ಪಂದಗಳನ್ನು ಮಾಡಿಕೊಳ್ಳಬಹುದಾಗಿದೆ.
 ಭೋಗ್ಯದ ಒಪ್ಪಂದ ಅಥವಾ ಭೋಗ್ಯ ಪತ್ರ (ಸಾಮಾನ್ಯವಾಗಿ ಬಾಡಿಗೆ ಒಪ್ಪಂದ ಎಂದು ಕರೆಯಲಾಗುತ್ತದೆ)
 ಅನುಮತಿ ಮತ್ತು ಪರವಾನಗಿ ಒಪ್ಪಂದ

ಭೋಗ್ಯದ ಒಪ್ಪಂದ

ಸಾಮಾನ್ಯವಾಗಿ “ಬಾಡಿಗೆ ಒಪ್ಪಂದ” ಎಂದೂ ಕರೆಯಲ್ಪಡುವ ಭೋಗ್ಯದ ಒಪ್ಪಂದವು ದೆಹಲಿ, ಬೆಂಗಳೂರು ಇತ್ಯಾದಿ ನಗರಗಳಲ್ಲಿ ಜಾರಿಯಲ್ಲಿರುವ ವ್ಯವಸ್ಥೆ.

ಬಾಡಿಗೆ ಒಪ್ಪಂದದ ಅಡಿಯಲ್ಲಿ ದೊರೆಯುವ ಹಕ್ಕುಗಳು

ಕಟ್ಟಡವೊಂದನ್ನು ಭೋಗ್ಯ ಒಪ್ಪಂದದ ಅಡಿಯಲ್ಲಿ ನೀವು ಬಾಡಿಗೆಗೆ ಪಡೆದಿದ್ದಲ್ಲಿ ನಿಮಗೆ ಕಾನೂನು ಕೆಲವು ಹಕ್ಕುಗಳನ್ನು ದಯಪಾಲಿಸುತ್ತದೆ. ಈ ಹಕ್ಕುಗಳು ಅನುಮತಿ/ಪರವಾನಗಿ ಒಪ್ಪಂದದ ಅಡಿ ಲಭ್ಯವಾಗುವುದಿಲ್ಲ. ಅಂತಹ ಹಕ್ಕುಗಳೆಂದರೆ:

ಸ್ವತ್ತಿನಲ್ಲಿ ಹಿತಾಸಕ್ತಿ

ನೀವು ಸ್ಚತ್ತಿಗೆ ಬಾಡಿಗೆಯನ್ನು ನೀಡುತ್ತಿರುವುದರಿಂದ ಅದರ ಸ್ವಾಮ್ಯವನ್ನು ಹೊಂದಿರುವ ಹಕ್ಕನ್ನು ಹೊಂದಿರುತ್ತೀರಿ.

ಸ್ವತ್ತಿನ ಅನುಭವದ ಹಕ್ಕು

ನಿಮಗೆ ಬಾಡಿಗೆ ನೀಡುತ್ತಿರುವ ಸ್ವತ್ತಿನ ಸ್ವಾಧೀನ ಪಡೆಯುವ ಹಕ್ಕನ್ನು ಹೊಂದಿರುತ್ತೀರಿ. ಎಂದರೆ, ಮಾಲೀಕ ನಿಮಗೆ ಮನೆ ಅಥವಾ ಮತ್ತಾವುದೇ ಸ್ಥಳವನ್ನು ಬಾಡಿಗೆಗೆ ನೀಡಿದ್ದಲ್ಲಿ, ಆತ ಆ ಸ್ಥಳವನ್ನು ತನ್ನ ಉಪಯೋಗಕ್ಕಾಗಿ ಬಳಸುವಂತಿಲ್ಲ. ಬಾಡಿಗೆ ಅವಧಿ ಕೊನೆಯಾಗುವವರೆಗೂ ಅದು ನಿಮ್ಮ ಉಪಯೋಗಕ್ಕೆ ಮೀಸಲಾಗಿರುವ ಸ್ವತ್ತಾಗಿರುತ್ತದೆ.

ತೆರವುಗೊಳಿಸುವುದರಿಂದ ರಕ್ಷಣೆ

ನ್ಯಾಯಬದ್ಧವಾದ ಸಕಾರಣಗಳನ್ನು ನೀಡದೆಯೇ ಮಾಲೀಕರು ನಿಮ್ಮ ಭೋಗ್ಯವನ್ನಾಗಲೀ ಭೋಗ್ಯದ ಅವಧಿಯನ್ನಾಗಲೀ ಕಡಿತಗೊಳಿಸುವಂತಿಲ್ಲ. ತೆರವುಗೊಳಿಸುವುದರ ವಿರುದ್ಧ ನಿಮಗೆ ಕೆಲವು ರಕ್ಷಣೆಗಳು ಲಭ್ಯ ಇರುತ್ತವೆ.

ನಿಮ್ಮ ಬಾಡಿಗೆ ಒಪ್ಪಂದದಲ್ಲಿ ಈ ಕೆಳಕಂಡ ಅಂಶಗಳು ಒಳಗೊಂಡಿವೆಯೇ ಎಂದು ಖಾತ್ರಿ ಪಡಿಸಿಕೊಳ್ಳಲು ಚೆಕ್ ಲಿಸ್ಟ್ ಗಮನಿಸಿ.

ಲಿಖಿತ ಒಪ್ಪಂದಕ್ಕೆ ಸಹಿ ಮಾಡುವುದು

ಸಹಿ ಮಾಡುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

ನೀವು ಮನೆಯೊಂದನ್ನು ಬಾಡಿಗೆಗೆ ನೀಡಲು ಅಥವಾ ಪಡೆದುಕೊಳ್ಳಲು ತೀರ್ಮಾನಿಸಿದ್ದಲ್ಲಿ, ಈ ನಿಟ್ಟಿನಲ್ಲಿ ಲಿಖಿತ ಒಪ್ಪಂದಕ್ಕೆ ಸಹಿ ಮಾಡುವ ಮುನ್ನ ಈ ಕೆಳಕಂಡ ಅಂಶಗಳಿಗೆ ಗಮನವೀಯುವುದು ಅತ್ಯವಶ್ಯ.

ಒಪ್ಪಂದವನ್ನು ಕಡ್ಡಾಯವಾಗಿ ಓದಿರಿ

ಸಹಿ ಮಾಡುವ ಮೊದಲು, ನೀವು ಅಥವಾ ನಿಮ್ಮ ವಕೀಲರು ಒಪ್ಪಂದದಲ್ಲಿ ನಮೂದಿಸಲಾಗಿರುವ ಎಲ್ಲ ಷರತ್ತುಗಳನ್ನು ಕೂಲಂಕಷವಾಗಿ ಓದಿ ಅರ್ಥೈಸಿಕೊಳ್ಳಿ. ದಾಖಲೆಯಲ್ಲಿರುವ ವಿಷಯವನ್ನು ತಿಳಿಯದೇ ಸಹಿ ಮಾಡಬೇಡಿ. ಸಹಿ ಮಾಡಿದ ನಂತರ ನೀವು ದಾಖಲೆಯಲ್ಲಿರುವ ಮಾಹಿತಿ ಬಗ್ಗೆ ನಿಮಗೆ ತಿಳಿದಿಲ್ಲವೆಂದಾಗಲೀ ನೀವು ಅದನ್ನು ಓದದೆಯೇ ಸಹಿ ಮಾಡಿದಿರಿ ಎಂದಾಗಲೀ ವಾದ ಮಾಡಲು ಅವಕಾಶವಿರುವುದಿಲ್ಲ.

ಸಾಕ್ಷಿಗಳ ಸಮಕ್ಷಮ

ಒಪ್ಪಂದವನ್ನು ಸವಿವರವಾಗಿ ಓದಿದ ನಂತರ ನೀವು ಮತ್ತು ಮಾಲೀಕ/ಪರವಾನಗಿ ನೀಡುವವರು/ಬಾಡಿಗೆದಾರರು/ಪರವಾನಗಿ ಪಡೆಯುವವರು ದಾಖಲೆಗೆ ಸಹಿ ಮಾಡತಕ್ಕದ್ದು. ಈ ಸಮಯದಲ್ಲಿ ಕನಿಷ್ಟ ಇಬ್ಬರು ಸಾಕ್ಷಿಗಳು ಹಾಜರಿರಲೇಬೇಕು. ಈ ನಿಯಮ ಐಚ್ಛಿಕವಲ್ಲ, ಕಡ್ಡಾಯ. ಸಾಕ್ಷಿಗಳ ಸಮ್ಮುಖದಲ್ಲಿ ಸಹಿ ಮಾಡದ ಒಪ್ಪಂದವನ್ನು ಕಾನೂನಿನಲ್ಲಿ ಮಾನ್ಯ ಮಾಡುವುದಿಲ್ಲ.

 

ಸಹಿ ಮಾಡಿದ ನಂತರ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

ಲಿಖಿತ ರೂಪದಲ್ಲಿರುವ ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ ನೀವು ಈ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.

ಒಪ್ಪಂದವನ್ನು ನೋಟರೀಕರಿಸುವುದು ಮತ್ತು ನೋಂದಣಿ ಮಾಡುವುದು

ನೀವು ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದಲ್ಲಿ ಅಥವಾ ಕೊಡುತ್ತಿದ್ದಲ್ಲಿ ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ ಅದನ್ನು ನೋಟರೀಕರಣ ಅಥವಾ ನೋಂದಣಿ ಮಾಡಲು ತಪ್ಪದೇ ಕ್ರಮ ತೆಗೆದುಕೊಳ್ಳಿ.

ಹನ್ನೊಂದು ತಿಂಗಳ ಅವಧಿಯ ಬಾಡಿಗೆ ಒಪ್ಪಂದವನ್ನು ನೋಂದಣಿ ಮಾಡುವುದು ಕಡ್ಡಾಯವಲ್ಲ. ಆದರೆ ನೋಟರೀಕರಣ ಮಾಡುವುದು ಕಡ್ಡಾಯ.

ಪೋಲೀಸ್ ದೃಢೀಕರಣ

ನೀವು ಮನೆಯನ್ನು ಬಾಡಿಗೆಗೆ ಕೊಡುತ್ತಿದ್ದಲ್ಲಿ, ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ ನಿಮ್ಮ ಬಾಡಿಗೆದಾರರ ಪೋಲೀಸ್ ದೃಢೀಕರಣವನ್ನು ತಪ್ಪದೇ ಮಾಡಿಸತಕ್ಕದ್ದು. ಪೋಲೀಸ್ ದೃಢೀಕರಣ ಪಡೆಯುವುದು ಬಾಡಿಗೆದಾರರ ಜವಾಬ್ದಾರಿಯಲ್ಲ. ಆದರೆ, ಈ ಪ್ರಕ್ರಿಯೆಗಾಗಿ ಬಾಡಿಗೆದಾರ ತನ್ನ ಕುರಿತು ಸಂಪೂರ್ಣ ಮಾಹಿತಿಯನ್ನು ಮಾಲೀಕರಿಗೆ ಒದಗಿಸುವುದರ ಮೂಲಕ ಅವಶ್ಯಕ ಸಹಕಾರ ನೀಡಲು ಬದ್ಧರಾಗಿರುತ್ತಾರೆ.