ಯಾರು ಎಫ್ಐಆರ್ ದಾಖಲಿಸಬಹುದು?

  • ನೀವು ಅಪರಾಧ ಕೃತ್ಯದಿಂದ ಪೀಡಿತರಾಗಿದ್ದಲ್ಲಿ
  • ಅಪರಾಧ ಕೃತ್ಯದಿಂದ ಪೀಡಿತನಾದ ವ್ಯಕ್ತಿಯ ಸಂಬಂಧಿಕ, ಮಿತ್ರ ಅಥವಾ ಪರಿಚಯಸ್ಥರು.
  • ಅಪರಾಧವೊಂದು ಜರುಗಿದೆ ಅಥವಾ ಜರುಗಲಿದೆ ಎಂದು ನಿಮಗೆ ಮಾಹಿತಿ ಇದ್ದಲ್ಲಿ ನೀವು ಎಫ್ಐಆರ್ ದಾಖಲಿಸಬಹುದು.

ಎಫ್ಐಆರ್ ದಾಖಲಿಸಲು ನಿಮಗೆ ಅಪರಾಧ ಕುರಿತು ಸಂಪೂರ್ಣ ಮಾಹಿತಿ ಇರಬೇಕಾದ ಅಗತ್ಯವಿಲ್ಲ. ಆದರೆ ನಿಮಗೆ ತಿಳಿದಿರುವ ಎಲ್ಲ ಮಾಹಿತಿಯನ್ನು ನೀವು ಪೋಲೀಸರ ಗಮನಕ್ಕೆ ತರುವುದು ಅತ್ಯಗತ್ಯ.

ಎಫ್ಐಆರ್ ಎಂದರೆ ಯಾವುದೇ ವ್ಯಕ್ತಿಯ ವಿರುದ್ಧ ದಾಖಲಿಸಿದ ಕ್ರಿಮಿನಲ್ ಪ್ರಕರಣ ಎಂದು ಅರ್ಥವಲ್ಲ. ದೋಷಾರೋಪಣ ಪಟ್ಟಿಯನ್ನು ಪೋಲೀಸರು ನ್ಯಾಯಾಲಯದಲ್ಲಿ ಸಲ್ಲಿಸಿ ಮತ್ತು ಸರ್ಕಾರವು ಪ್ರಾಸಿಕ್ಯೂಟರ್ ರವನ್ನು ನೇಮಕಾತಿ ಮಾಡಿದ ನಂತರ ಕ್ರಿಮಿನಲ್ ಪ್ರಕರಣ ಆರಂಭವಾಗುತ್ತದೆ.

ಎಫ್ಐಆರ್ ದಾಖಲು ಮಾಡುವ ವಿಧಾನ

ಯಾವುದಾದರೂ ಅಪರಾಧ ಜರುಗಿದ ಸಂದರ್ಭದಲ್ಲಿ:
 ಸನಿಹದ ಪೋಲೀಸ್ ಠಾಣೆಗೆ ತೆರಳಿರಿ. ಅಪರಾಧವು ಈ ಠಾಣೆಯ ಸರಹದ್ದಿನಲ್ಲಿಯೇ ಜರುಗಿರಬೇಕೆಂಬ ನಿಯಮವಿಲ್ಲ. ಹತ್ತಿರದ ಪೋಲೀಸ್ ಠಾಣೆ ಕುರಿತು ತಿಳಿದುಕೊಳ್ಳಲು “ಇಂಡಿಯನ್ ಪೋಲೀಸ್ ಎಟ್ ಯುವರ್ ಕಾಲ್” ಎಂಬ ಆಪ್ ಡೌನ್ ಲೋಡ್ಮಾ ಡಿಕೊಳ್ಳಿ.

ಆಂಡ್ರಾಯ್ಡ್ ಬಳಕೆದಾರರಿಗೆ:
https://play.google.com/store/apps/details?id=in.nic.bih.thanalocator&hl=en

ಆಪಲ್ ಬಳಕೆದಾರರಿಗೆ:
https://itunes.apple.com/in/app/indian-police-at-your-call/id1177887402?mt=8

ಎಫ್ ಐಆರ್ ದಾಖಲಿಸಲು ನೀವು ಪೋಲೀಸ್ ಠಾಣೆಗೆ ತೆರಳಿದಾಗ:
 ಕರ್ತವ್ಯದ ಮೇಲಿರುವ ಅಧಿಕಾರಿಯನ್ನು ಭೇಟಿ ಮಾಡುವಂತೆ ನಿಮಗೆ ತಿಳಿಸಲಾಗುವುದು. ಸದರಿ ಅಧಿಕಾರಿಗೆ ನೀವು ನಿಮ್ಮ ದೂರನ್ನು ಮೌಖಿಕವಾಗಿ ಹೇಳಬಹುದು ಅಥವಾ ಬರವಣಿಗೆಯಲ್ಲಿ ನೀಡಬಹುದು. ನೀವು ಮೌಖಿಕವಾಗಿ ಹೇಳಿದಲ್ಲಿ, ಪೋಲೀಸ್ ಅಧಿಕಾರಿಗಳು ಅದನ್ನು ಬರವಣಿಗೆಯಲ್ಲಿ ದಾಖಲು ಮಾಡತಕ್ಕದ್ದು.

 ನಂತರ ಕರ್ತವ್ಯದ ಮೇಲಿರುವ ಅಧಿಕಾರಿಯು ಜನರಲ್ ಡೈರಿ ಅಥವಾ ಡೈಲಿ ಡೈರಿಯಲ್ಲಿ ಎಂಟ್ರಿ ಮಾಡುತ್ತಾರೆ.

 ನೀವು ಲಿಖಿತ ರೂಪದಲ್ಲಿ ದೂರನ್ನು ಸಿದ್ಧಪಡಿಸಿದ್ದಲ್ಲಿ, ಅದರ ಎರಡು ಪ್ರತಿಗಳನ್ನು ಪೋಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಮತ್ತು ಕರ್ತವ್ಯದ ಮೇಲಿರುವ ಅಧಿಕಾರಿಗೆ ಸಲ್ಲಿಸಿ. ಎರಡು ಪ್ರತಿಗಳಿಗೂ ಸೀಲ್ ಹಾಕಲಾಗುವುದು ಮತ್ತು ಒಂದು ಪ್ರತಿಯನ್ನು ನಿಮಗೆ ಹಿಂದಿರುಗಿಸಲಾಗುವುದು. ಸದರಿ ಸೀಲಿನಲ್ಲಿ ಡೈಲಿ ಡೈರಿ ನಂಬರ್ ಅಥವಾ ಡಿಡಿ ನಂಬರ್ಉ ಲ್ಲೇಖಿಸಲಾಗಿರುತ್ತದೆ. ನಿಮ್ಮ ದೂರನ್ನು ಪೋಲೀಸರು ಸ್ವೀಕರಿಸಿರುವುದಕ್ಕೆ ಈ ನಂಬರ್ ಒಂದು ದಾಖಲೆ ಎಂದು ಪರಿಗಣಿತವಾಗುತ್ತದೆ.

 ಪೋಲೀಸರು ನಿಮ್ಮ ದೂರನ್ನು ಓದಿದ ನಂತರ ಅದರಲ್ಲಿರುವ ಎಲ್ಲ ಮಾಹಿತಿಗಳು ಸರಿಯಾಗಿದ್ದಲ್ಲಿ, ನೀವು ಎಫ್ಐಆರ್ ಮೇಲೆ ಸಹಿ ಮಾಡಬಹುದು. ಎಫ್ಐಆರ್ ನ ಪ್ರತಿಯೊಂದನ್ನು ಉಚಿತವಾಗಿ ಪಡೆಯುವುದು ನಿಮ್ಮ ಹಕ್ಕು. ಪೋಲೀಸ್ ಸ್ಟೇಷನ್ ಹೆಸರು, ಎಫ್ಐಆರ್ ಸಂಖ್ಯೆ ಮತ್ತು ದಿನಾಂಕವನ್ನು ನೆನಪಿನಲ್ಲಿಟ್ಟುಕೊಳ್ಳಿ. ಒಂದು ವೇಳೆ ನೀವು ಎಫ್ಐಆರ್ ಪ್ರತಿಯನ್ನು ಕಳೆದುಕೊಂಡಲ್ಲಿ ಈ ಮಾಹಿತಿ ಆಧಾರದ ಮೇಲೆ ಆನ್ ಲೈನಿನಲ್ಲಿ ಉಚಿತವಾಗಿ ಎಫ್ಐಆರ್ ಪ್ರತಿಯನ್ನು ನೀವು ಪಡೆಯಬಹುದು.

ಒಮ್ಮೆ ಎಫ್ಐಆರ್ ದಾಖಲು ಮಾಡಿದ ನಂತರ ಅದರಲ್ಲಿರುವ ಮಾಹಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಯಾವುದೇ ಸಂದರ್ಭದಲ್ಲಿ ನೀವು ಪೋಲೀಸರಿಗೆ ಹೆಚ್ಚಿನ ಮಾಹಿತಿ ನೀಡಬಹುದು.

ಕೆಲವು ರಾಜ್ಯ ಮತ್ತು ನಗರಗಳಲ್ಲಿ ನಿರ್ದಿಷ್ಟ ವರ್ಗದ ಎಫ್ಐಆರ್ ಮತ್ತು ದೂರುಗಳನ್ನು ಆನ್ ಲೈನಿನ ಮೂಲಕ ದಾಖಲು ಮಾಡಬಹುದು. ಉದಾಹರಣೆಗೆ, ಕಾಣೆಯಾದ ವ್ಯಕ್ತಿ ಅಥವಾ ಮಕ್ಕಳು ಕುರಿತ ದೂರು, ಯಾವುದೇ ಗುರುತು ಹಿಡಿಯಲಾಗದ ವ್ಯಕ್ತಿ ಅಥವಾ ಮಕ್ಕಳು ಅಥವಾ ಮೃತದೇಹ, ಹಿರಿಯ ನಾಗರಿಕರ ನೋಂದಣಿ, ಕಳುವಾದ ಅಥವಾ ಯಾರೂ ಕ್ಲೇಮು ಮಾಡದ ವಾಹನಗಳು ಮತ್ತು ಮೊಬೈಲ್ ಕಳವಿಗೆ ಸಂಬಂಧಿಸಿದ ದೂರುಗಳನ್ನು ದೆಹಲಿಯಲ್ಲಿ ಅನ್ ಲೈನ್ ಮೂಲಕವೇ ಸಲ್ಲಿಸಬಹುದಾಗಿದೆ.

ಎಫ್ಐಆರ್ ಸಲ್ಲಿಸಬಹುದಾದ ಸ್ಥಳಗಳು

ಯಾವುದೇ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬಹುದಾಗಿರುತ್ತದೆ. ಈ ಪೋಲೀಸ್ ಠಾಣೆಯ ಸರಹದ್ದಿನಲ್ಲಿಯೇ ಅಪರಾಧ ಕೃತ್ಯವು ಜರುಗಿರಬೇಕೆಂಬ ಕಡ್ಡಾಯ ನಿಯಮವೇನಿಲ್ಲ. ದೂರುದಾರ ನೀಡಿದ ಮಾಹಿತಿಯನ್ನು ಪೋಲೀಸರು ಕಡ್ಡಾಯವಾಗಿ ದಾಖಲಿಸಿ ನಂತರ ಪ್ರಕರಣವನ್ನು ಸಂಬಂಧಿಸಿದ ಸರಹದ್ದಿನ ಪೋಲೀಸ್ ಠಾಣೆಗೆ ವರ್ಗಾಯಿಸತಕ್ಕದ್ದು. ಉದಾಹರಣೆಗೆ, ಉತ್ತರ ದೆಹಲಿಯಲ್ಲಿ ಜರುಗಿದ ಅಪರಾಧ ಕುರಿತು ದಕ್ಷಿಣ ದೆಹಲಿಯಲ್ಲಿರುವ ಪೋಲೀಸ್ ಠಾಣೆಯಲ್ಲಿ ದೂರು
ದಾಖಲಿಸಬಹುದಾಗಿದೆ.

“ಶೂನ್ಯ ಎಫ್ಐಆರ್” ಎಂದು ಕರೆಯುವ ಈ ಪರಿಕಲ್ಪನೆಯನ್ನು 2013ರಲ್ಲಿ ಜಾರಿ ಮಾಡಲಾಯಿತು.ಈ ವ್ಯವಸ್ಥೆ ಜಾರಿಗೆ ಬರುವ ಮೊದಲು, ಪೋಲೀಸ್ ಠಾಣೆಗಳು ತಮ್ಮ ಸರಹದ್ದಿನಲ್ಲಿ ಜರುಗಿದ ಅಪರಾಧಗಳಿಗೆ ಸಂಬಂಧಿಸದಂತೆ ಮಾತ್ರ ಎಫ್ಐಆರ್ ದಾಖಲು ಮಾಡಿಕೊಳ್ಳುತ್ತಿದ್ದವು.ಹೀಗಾಗಿ ಪ್ರಥಮ ವರ್ತಮಾನ ವರದಿ ದಾಖಲು ಮಾಡುವಲ್ಲಿ ಭಾರೀ ವಿಳಂಬವಾಗುತ್ತಿತ್ತು.

ಮಹಿಳೆಯರಿಗೆ ಸಂಬಂಧಿಸಿದ ಅಪರಾಧಗಳಲ್ಲಿ ಎಫ್ಐಆರ್

ಈ ಕೆಳಕಂಡ ಯಾವುದೇ ಅಪರಾಧ ಕುರಿತು ನೀವು ಮಾಹಿತಿ ನೀಡಬೇಕಿದ್ದಲ್ಲಿ, ಅಂತಹ ಮಾಹಿತಿಯನ್ನು ಮಹಿಳಾ ಪೋಲೀಸ್ ಅಧಿಕಾರಿ ಅಥವಾ ಬೇರಾವುದೇ ಮಹಿಳಾ ಅಧಿಕಾರಿ ದಾಖಲಿಸತಕ್ಕದ್ದು.

  1. ಆಸಿಡ್ ಬಳಕೆಯಿಂದ ತೀವ್ರ ಗಾಯ
  2. ಸ್ವಯಂಪ್ರೇರಿತವಾಗಿ ಆಸಿಡ್ ಎರಚುವುದು ಅಥವಾ ಎರಚಲು
    ಪ್ರಯತ್ನಿಸುವುದು
  3. ಮಹಿಳೆಯ ಘನತೆಯನ್ನು ಭಂಗ ಮಾಡುವ ಉದ್ದೇಶದಿಂದ ಆಕೆಯ ಮೇಲೆ
    ಹಲ್ಲೆ ಅಥವಾ ಬಲ ಪ್ರಯೋಗ.
  4.  ಲೈಂಗಿಕ ಕಿರುಕುಳ
  5. ವಿವಸ್ತ್ರಗೊಳಿಸುವುದು
  6. ವಿಕೃತ ಕಾಮುಕ ಪ್ರವೃತ್ತಿ
  7. ಹಿಂಬಾಲಿಸುವುದು
  8. ಅತ್ಯಾಚಾರ
  9. ಅತ್ಯಾಚಾರದಿಂದ ಉಂಟಾದ ಮರಣ ಅಥವಾ ದೈಹಿಕ ನಿಷ್ಕ್ರಿಯತೆ
  10. ದಂಪತಿಗಳು ಬೇರ್ಪಟ್ಟ ನಂತರದಲ್ಲಿ ಗಂಡನಿಂದ ಅತ್ಯಾಚಾರ
  11. ಗ್ಯಾಂಗ್ ರೇಪ್
  12. ಮಾತುಗಳಿಂದ, ಸಂಜ್ಞೆ ಅಥವಾ ಕ್ರಿಯೆಗಳಿಂದ ಮಹಿಳೆಯ ಘನತೆಗೆ ಭಂಗ
    ತರುವುದು.

ಮೇಲ್ಕಾಣಿಸಿದ ಅಪರಾಧಗಳ ಪೈಕಿ ಸಂ. 3 ರಿಂದ 11 ರವರೆಗಿನ ಅಪರಾಧಗಳನ್ನು ಮಾನಸಿಕ ಅಥವಾ ದೈಹಿಕ ದೌರ್ಬಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಮೇಲೆ ಎಸಗಿದ್ದಲ್ಲಿ ಅಥವಾ ಎಸಗಿದ್ದಾರೆಂದು ಆರೋಪ ಮಾಡುತ್ತಿದ್ದಲ್ಲಿ, ಪೋಲೀಸ್ ಅಧಿಕಾರಿಯು ಅಂತಹ ಮಾಹಿತಿಯನ್ನು ನೀಡುತ್ತಿರುವ ವ್ಯಕ್ತಿಯ ಮನೆಯಲ್ಲಿ ಅಥವಾ ಆ ವ್ಯಕ್ತಿಗೆ ಅನುಕೂಲವಾದ ಸ್ಥಳದಲ್ಲಿ ದಾಖಲು ಮಾಡತಕ್ಕದ್ದು. ಸಂದರ್ಭಕ್ಕನುಸಾರವಾಗಿ ಅವರು ದುಭಾಷಿಯ ಅಥವಾ ವಿಶೇಷ ಶಿಕ್ಷಣ ಪರಿಣತರ ಸೇವೆಗಾಗಿ ಕೋರಿಕೆ ಮಾಡಬಹುದು.

ದೋಷಾರೋಪಣ ಪಟ್ಟಿ

ಎಫ್ಐಆರ್ ಸಲ್ಲಿಸುವುದರ ಮೂಲಕ ನೀವು ಅಪರಾಧವೊಂದನ್ನು ಕುರಿತು ಪೋಲೀಸರಿಗೆ ವರದಿ ನೀಡಿದ ನಂತರ, ಕರ್ತವ್ಯದ ಮೇಲಿರುವ ಅಧಿಕಾರಿಯು ಮ್ಯಾಜಿಸ್ಟ್ರೇಟರಿಗೆ ವರದಿಯೊಂದನ್ನು ಸಲ್ಲಿಸತಕ್ಕದ್ದು.ಮ್ಯಾಜಿಸ್ಟ್ರೇಟರು ಯಾವುದೇ ಅನವಶ್ಯಕ ವಿಳಂಬವಿಲ್ಲದೆ ಪ್ರಕರಣವನ್ನು ಗಣನೆಗೆ ತೆಗೆದುಕೊಂಡು ತನಿಖೆಯೊಂದಿಗೆ ಮುಂದುವರೆಯುತ್ತಾರೆ.ಪೋಲೀಸರು ಈ ಕ್ರಮವನ್ನು ಕಡ್ಡಾಯವಾಗಿ ಅನುಸರಿಸಬೇಕಿರುತ್ತದೆ. ಹೀಗೆ ಮಾಡುವುದರಿಂದ ಮ್ಯಾಜಿಸ್ಟ್ರೇಟರು ತನಿಖೆಯ ಮೇಲೆ ಹಿಡಿತ ಸಾಧಿಸಲು ಮತ್ತು ಅವಶ್ಯಕತೆ ಇದ್ದಲ್ಲಿ ಪೋಲೀಸರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲು ಸಾಧ್ಯವಾಗುತ್ತದೆ.

ಪ್ರಕರಣದ ನಿಜಾಂಶ ಮತ್ತು ಸಂದರ್ಭ ಕುರಿತು ತನಿಖೆ ಮಾಡಿ, ಸೂಕ್ತ ಎಂದು ಕಂಡುಬಂದಲ್ಲಿ ಅಪರಾಧ ಎಸಗಿದ ವ್ಯಕ್ತಿಯನ್ನು ಬಂಧಿಸಲು ಪೋಲೀಸರು ಕ್ರಮ ತೆಗೆದುಕೊಳ್ಳುತ್ತಾರೆ.

ಅಪರಾಧವು ಗಂಭೀರ ಸ್ವಭಾವದ್ದಲ್ಲ ಎಂದು ಪೋಲೀಸ್ ಅಧಿಕಾರಿಗೆ ಮನದಟ್ಟಾದಲ್ಲಿ, ಆತ ತನ್ನ ಕೈಕೆಳಗಿನ ಅಧಿಕಾರಿಯನ್ನು ತನಿಖೆಗಾಗಿ ನೇಮಿಸಬಹುದು. ಮೇಲಾಗಿ ಮುಂದಿನ ತನಿಖೆ ಮಾಡುವ ಅಗತ್ಯವಿಲ್ಲ ಎಂದು ಕಂಡುಬಂದಲ್ಲಿ ಪೋಲೀಸರು ತನಿಖೆ
ಮಾಡದಿರಲು ನಿರ್ಧರಿಸಬಹುದು.

ಪೋಲೀಸರು ತಮ್ಮ ತನಿಖೆ ಪೂರೈಸಿ, ಅಪರಾಧ ಪ್ರಕರಣದಲ್ಲಿ ಮುಂದುವರೆಯಲು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ನಂತರ, ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗುತ್ತದೆ. ಆದರೆ, ತನಿಖೆಯ ನಂತರ ಪೋಲೀಸರಿಗೆ ಅಪರಾಧ ಕೃತ್ಯ ಜರುಗಿರುವುದರನ್ನು ಸಾಬೀತುಪಡಿಸಲು ಸಾಕ್ಷ್ಯಾಧಾರಗಳು ದೊರೆಯದಿದ್ದಲ್ಲಿ, ಅವರು ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಮ್ಯಾಜಿಸ್ಟ್ರೇಟರಿಗೆ ಶಿಫಾರಸ್ಸು ಮಾಡುತ್ತಾರೆ.

ದೋಷಾರೋಪಣ ಪಟ್ಟಿಯ ಸಲ್ಲಿಕೆಯೊಂದಿಗೆ ಅಪರಾಧ ಪ್ರಕರಣದ ವಿಚಾರಣೆ ಪ್ರಾರಂಭವಾಗುತ್ತದೆ. ದೋಷಾರೋಪಣ ಪಟ್ಟಿ ಅಥವಾ ಪ್ರಕರಣ ಮುಕ್ತಾಯ ಮಾಡುವಂತೆ ವರದಿ ಸಲ್ಲಿಸಲು ಪೋಲೀಸರಿಗೆ ಯಾವುದೇ ಕಾಲಮಿತಿ ಇಲ್ಲ. ದೋಷಾರೋಪಣ ಪಟ್ಟಿಯನ್ನು ನಿರ್ದಿಷ್ಟ ಅವಧಿಯೊಳಗೆ ಸಲ್ಲಿಸುವಂತೆ ಮ್ಯಾಜಿಸ್ಟ್ರೇಟರೂ ಸಹ ಪೋಲೀಸರಿಗೆ ನಿರ್ದೇಶನ ನೀಡುವಂತಿಲ್ಲ. ಆದರೆ, ಆರೋಪಿ ಜೈಲಿನಲ್ಲಿದ್ದಲ್ಲಿ, 60 ದಿನಗಳೊಳಗಾಗಿ (ಅಪರಾಧಕ್ಕೆ ನೀಡುವ ಜೈಲುವಾಸವು 10 ವರ್ಷಗಳಿಗಿಂತ ಕಡಿಮೆ ಇದ್ದಲ್ಲಿ) ಅಥವಾ 90 ದಿನಗಳೊಳಗಾಗಿ (ಅಪರಾಧಕ್ಕೆ ನೀಡುವ ಜೈಲುವಾಸವು 10 ವರ್ಷ ಮೀರಿದ್ದಲ್ಲಿ) ಪೋಲೀಸರು ದೋಷಾರೋಪಣ ಪಟ್ಟಿಯನ್ನು ಸಲ್ಲಿಸತಕ್ಕದ್ದು

ಪೋಲೀಸ್ ಅಧಿಕಾರಿಯು ನಿಮ್ಮ ಎಫ್ಐ ಆರ್ ದಾಖಲಿಸಲು ನಿರಾಕರಿಸಿದರೆ, ಯಾರಿಗೆ ದೂರನ್ನು ನೀಡಬೇಕು?

ಪೋಲೀಸ್ ಅಧಿಕಾರಿಯು ನಿಮ್ಮ ಎಫ್ಐಆರ್ ದಾಖಲಿಸಲು ನಿರಾಕರಿಸಿದಲ್ಲಿ, ನೀವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬಹುದು.

 ಪೋಲೀಸ್ ಅಧಿಕಾರಿಯು ನಿಮ್ಮ ದೂರನ್ನು ಸ್ವೀಕರಿಸಲು ನಿರಾಕರಿಸಿದಲ್ಲಿ, ನೀವು ದೂರನ್ನು ಲಿಖಿತ ರೂಪದಲ್ಲಿ ಪೋಲೀಸ್ ಸೂಪರಿಂಟೆಂಡೆಂಟ್ (ಎಸ್ಪಿ) ರವರಿಗೆ ಕಳುಹಿಸಬಹುದು. ಎಸ್ ಪಿ ರವರು ನಿಮ್ಮ ಪ್ರಕರಣದಲ್ಲಿ ಹುರುಳಿದೆ ಎಂದು ಪರಿಗಣಿಸಿದಲ್ಲಿ ಅವರು ಪ್ರಕರಣದ ತನಿಖೆಗೆ ಪೋಲೀಸ್ ಅಧಿಕಾರಿಯೊಬ್ಬರನ್ನು ನೇಮಿಸಬಹುದು.

 ಪೋಲೀಸ್ ಠಾಣೆಗೆ ಹೋಗುವ ಮುನ್ನ ವಕೀಲರೊಬ್ಬರ ಸಹಾಯ ಪಡೆಯಿರಿ. ವಕೀಲರು ನಿಮ್ಮ ಪರವಾಗಿ ಪ್ರಕರಣ ಮುಂದುವರೆಸುವುದರಿಂದ ಈ ಕ್ರಮ ನಿಮಗೆ ಉಪಯುಕ್ತ. ಮೇಲಾಗಿ ವಕೀಲರೊಡನೆ ಠಾಣೆಗೆ ಹೋದಾಗ ಪೋಲೀಸ್ ಅಧಿಕಾರಿಗಳಿಂದ ಶೋಷಣೆಗೆ ಒಳಗಾಗುವ ಸಾಧ್ಯತೆ ಕಡಿಮೆ.

 ಹತ್ತಿರ ಇರುವ ಮತ್ತಾವುದೇ ಪೋಲೀಸ್ ಠಾಣೆಗೆ ಎಫ್ಐಆರ್ ಸಲ್ಲಿಸಲು ತೆರಳಿ. ಯಾವುದೇ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ ಸಂದರ್ಭದಲ್ಲಿ ಪೋಲೀಸ್ ಅಧಿಕಾರಿಗಳು ಕಡ್ಡಾಯವಾಗಿ ದೂರುದಾರ ನೀಡುವ ಮಾಹಿತಿಯನ್ನು ದಾಖಲಿಸಿಕೊಂಡು ಯಾವ ಪೋಲೀಸ್ ಠಾಣೆಯ ಸರಹದ್ದಿನಲ್ಲಿ ಅಪರಾಧ ಜರುಗಿದೆಯೋ ಆ ಠಾಣೆಗೆ ವರ್ಗಾಯಿಸತಕ್ಕದ್ದು. ಈ ವ್ಯವಸ್ಥೆಗೆ “ಶೂನ್ಯ ಎಫ್ಐಆರ್” ಎಂದು ಹೆಸರು.

 ನಿಮ್ಮ ಪರವಾಗಿ ಎಫ್ಐಆರ್ ಸಲ್ಲಿಸುವಂತೆ ಬೇರೆ ಯಾರನ್ನಾದರೂ ವಿನಂತಿಸಿಕೊಳ್ಳಿ. ನೀವು ಎದುರಿಸಿರುವ ಹಿಂಸೆ/ಕಿರುಕುಳಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಂತಹ ವ್ಯಕ್ತಿಗೆ ನೀಡಿರಿ.

 ಪೋಲೀಸ್ ಠಾಣೆಯಲ್ಲಿ ನಿಮ್ಮ ದೂರನ್ನು ಸ್ವೀಕರಿಸದಿದ್ದ ಪಕ್ಷದಲ್ಲಿ ನೀವು ನೇರವಾಗಿ ಜಿಲ್ಲಾ ನ್ಯಾಯಾಧೀಶರು/ನ್ಯಾಯಿಕ ದಂಡಾಧಿಕಾರಿಗಳ ಮುಂದೆ “ಖಾಸಗಿ ದೂರು” ಸಲ್ಲಿಸಬಹುದಾಗಿದೆ. ಆದರೆ ಹೀಗೆ ಮಾಡುವ ಮುನ್ನ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ನೀವು ಪ್ರಯತ್ನ ಮಾಡಿರತಕ್ಕದ್ದು.

 ದೂರು ಸಲ್ಲಿಸಲು ಲಭ್ಯವಿರುವ ಇನ್ನಿತರ ವೇದಿಕೆಗಳಾದ – ರಾಜ್ಯ/ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿ. ಈ ಆಯೋಗಗಳು ನೀವು ಪೋಲೀಸ್ ಅಧಿಕಾರಿಗಳಿಂದ ಪರಿಹಾರ ಪಡೆಯಲು ನಿಮಗೆ ಮಾರ್ಗದರ್ಶನ ನೀಡುವುದಲ್ಲದೆ, ನೀವು ಆರೋಪಿಸಿರುವ ಕಿರುಕುಳ/ದೌರ್ಜನ್ಯದ ಕುರಿತಾಗಿಯೂ ಸ್ವತ: ತನಿಖೆ ಮಾಡುತ್ತವೆ.