ಕೌಟುಂಬಿಕ ಹಿಂಸೆಯ ಕಾರಣ ನ್ಯಾಯಾಲಯಕ್ಕೆ ಹೇಗೆ ಹೋಗಬಹುದು?

ನೀವು ಕೌಟುಂಬಿಕ ಹಿಂಸೆಯನ್ನು ಅನುಭವಿಸಿದ್ದಲ್ಲಿ, ತಕ್ಷಣದ ಸಹಾಯ ಮತ್ತು ರಕ್ಷಣೆಗಾಗಿ ನ್ಯಾಯಾಲಯದಲ್ಲಿ (ಸಿವಿಲ್ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ, ಅಥವಾ ಸತ್ರ ನ್ಯಾಯಾಲಯ) ಅರ್ಜಿ ಸಲ್ಲಿಸಬಹುದು. ಇದನ್ನು ಮಾಡಲು ವಕೀಲರ ನೆರವನ್ನು ಪಡೆಯಿರಿ. ನಿಮ್ಮ ಬಳಿ ವಕೀಲರಿಲ್ಲದಿದ್ದರೆ, ರಕ್ಷಣಾಧಿಕಾರಿಗಳನ್ನು, ಅಥವಾ ಸರ್ಕಾರೇತರ ಸಂಸ್ಥೆಗಳನ್ನು ಸಂಪರ್ಕಿಸಿ – ಅವರು ನಿಮಗೆ ಕಾನೂನು ನೆರವು ಸೇವೆಯ ಸಂಪರ್ಕ ದೊರಕಿಸಿಕೊಡುತ್ತಾರೆ.

ಕಾನೂನಿನಡಿ ನಿಮ್ಮ ಪ್ರಕರಣ ಕೌಟುಂಬಿಕ ಹಿಂಸೆಯದ್ದಾಗಿದೆಯೋ ಇಲ್ಲವೋ ಎಂದು ನಿರ್ಧರಿಸಲು ನ್ಯಾಯಾಲಯ ಕೆಳಗಿನ ಅಂಶಗಳನ್ನು ಪರಿಗಣಿಸುತ್ತದೆ:

  • ನೀವು ಕೌಟುಂಬಿಕ ಹಿಂಸೆಗೆ ಒಳಗಾದ ಮಹಿಳೆಯಾಗಿದ್ದೀರಿ.
  • ಹಿಂಸೆ ನಡೆದಾಗ, ನಿಮಗೆ ಕಿರುಕುಳ ಕೊಟ್ಟ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿತ್ತು
  • ಕಿರುಕುಳ ಕೊಟ್ಟ ವ್ಯಕತಿಯ ಜೊತೆ ನೀವು ಒಂದೇ ಮನೆಯಲ್ಲಿ ಹಿಂದೆ ವಾಸವಾಗಿದ್ದಿರಿ/ ಇನ್ನೂ ವಾಸಿಸುತ್ತಿದ್ದೀರಿ

ಅರ್ಜಿ ಸಲ್ಲಿಸಿದ ೩ ದಿನಗಳೊಳಗೆ, ರಕ್ಷಣಾಧಿಕಾರಿಗಳ ನೆರವಿನಿಂದ, ನಿಮಗೆ ಕಿರುಕುಳ ಕೊಟ್ಟವರಿಗೆ ಸೂಚನೆ ಕಳಿಸಲಾಗುತ್ತದೆ ಮತ್ತು ನಿಮ್ಮ ಪ್ರಕರಣವನ್ನು ದಾಖಲಿಸಲಾಗುತ್ತದೆ. ನಿಮಗೆ ರಕ್ಷಣೆ, ಧನ ಸಹಾಯ, ಅಥವಾ ಇನ್ನಿತರೇ ಸಹಾಯಗಳನ್ನು, ತಾತ್ಕಾಲಿಕ ಆದೇಶಗಳ ಮೂಲಕ ನ್ಯಾಯಾಲಯವು ದೊರಕಿಸಿಕೊಡುತ್ತದೆ.

ನ್ಯಾಯಾಲಯದ ಆದೇಶಗಳು:

ಒಮ್ಮೆ ನಿಮ್ಮ ಪ್ರಕರಣ ಕೌಟುಂಬಿಕ ಹಿಂಸೆಯದ್ದು ಎಂದು ನ್ಯಾಯಾಲಯಕ್ಕೆ ಖಾತರಿ ಆದಾಗ, ನಿಮ್ಮ ವಕೀಲರು ನ್ಯಾಯಾಲಯಕ್ಕೆ ಕೆಳಗಿನ ಮನವಿಗಳನ್ನು ಮಾಡಬಹುದು:

  • ಹಿಂಸೆಯ ವಿರುದ್ಧ ಕಿರುಕುಳ ಕೊಟ್ಟವರಿಂದ ರಕ್ಷಣೆ. ಇದಕ್ಕೆ ರಕ್ಷಣಾ ಆದೇಶ ಎನ್ನುತ್ತಾರೆ.
  • ನಿಮಗೆ ಮತ್ತು ನಿಮ್ಮ ಮಗುವಿಗೆ ಧನ ಸಹಾಯ. ಇದಕ್ಕೆ ಜೀವನೋಪಾಯದ ಆದೇಶ ಎನ್ನುತ್ತಾರೆ.
  • ನಿಮ್ಮ ಮನೆಯಲ್ಲಿ ವಾಸ ಮಾಡುವ ಆದೇಶ. ಇದಕ್ಕೆ ನಿವಾಸದ ಆದೇಶ ಎನ್ನುತ್ತಾರೆ.

ಕೌಟುಂಬಿಕ ಹಿಂಸೆ ಕಾನೂನಿನಡಿ ನಿವಾಸದ ಆದೇಶವೆಂದರೇನು?

ನಿಮ್ಮನ್ನು ಕಿರುಕುಳ ಕೊಡುತ್ತಿರುವವರು ಮನೆಯಿಂದಾಚೆ ತಳ್ಳುತ್ತಿದ್ದಲ್ಲಿ, ಅಥವಾ ನಿಮಗೆ ಮನೆಯಲ್ಲಿರುವುದು ಸುರಕ್ಷಿತವಲ್ಲ ಎಂದು ಅನಿಸಿದ್ದಲ್ಲಿ, ನಿಮ್ಮ ವಕೀಲರು ಅಥವಾ ರಕ್ಷಣಾಧಿಕಾರಿಗಳ ಸಹಾಯದಿಂದ ನ್ಯಾಯಾಲಯದ ಸಹಾಯ ಪಡೆಯಬಹುದು. ನಿವಾಸದ ಆದೇಶ ಕೆಳಗಿನಂತೆ ನಿಮಗೆ ಅನುಕೂಲವಾಗುತ್ತದೆ:

೧. ಮನೆಯಲ್ಲಿ ವಾಸ ಮಾಡುವುದು:

ನಿವಾಸದ ಆದೇಶದ ಮೇರೆಗೆ, ಕಿರುಕುಳ ಕೊಡುತ್ತಿರುವವರು ನಿಮ್ಮನ್ನು ಮನೆಯಿಂದ ಆಚೆ ತಳ್ಳುವಂತಿಲ್ಲ, ಅಥವಾ ಆಚೆ ಹೋಗು ಅಂತ ಒತ್ತಾಯ ಮಾಡುವಂತಿಲ್ಲ ಎಂದು ನ್ಯಾಯಾಲಯ ತೀರ್ಪಿಸಬಹುದು. ನೀವು ದಂಪತಿಗಳಾಗಿ (ಗಂಡ-ಹೆಂಡತಿ, ಅಥವಾ ಲಿವ್-ಇನ್ ಸಂಗಾತಿಗಳಾಗಿ) ಯಾವ ಮನೆಯಲ್ಲಿ ವಾಸವಾಗಿದ್ದಿರೋ, ಆ ಮನೆಯಲ್ಲಿ ವಾಸಿಸುವ ಹಕ್ಕು, ಕೆಳಗಿನ ಸಂದರ್ಭಗಳಲ್ಲೂ ನಿಮಗಿದೆ:

  • ಆ ಮನೆಯ ಮೇಲೆ ನಿಮಗೆ ಕಾನೂನಾತ್ಮಕ ಪಾಲು, ಹಕ್ಕು, ಅಥವಾ ಮಾಲೀಕತ್ವ ಇಲ್ಲದಿದ್ದರೂ
  • ಕಿರುಕುಳ ಕೊಟ್ಟವರು ಆ ಮನೆಯಲ್ಲಿ ಇನ್ನು ವಾಸವಾಗಿಲ್ಲದಿದ್ದರೂ
  • ಕಿರುಕುಳ ಕೊಟ್ಟವರಿಗೆ ಆ ಮನೆಯಲ್ಲಿ ಕಾನೂನಾತ್ಮಕ ಪಾಲು, ಹಕ್ಕು, ಅಥವಾ ಮಾಲೀಕತ್ವ ಇಲ್ಲದಿದ್ದರೂ

೨. ಕಿರುಕುಳ ಕೊಟ್ಟವರಿಂದ ನಿಮ್ಮನ್ನು ದೂರವಿಡುವುದು:

ಕಿರುಕುಳ ಕೊಟ್ಟವರಿಗೆ ಕೆಳಗಿನ ಆದೇಶಗಳನ್ನು ನ್ಯಾಯಾಲಯ ಕೊಡಬಹುದು:

  • ಮನೆಯನ್ನು ಬಿಟ್ಟು ಹೋಗುವುದಾಗಿ. ಈ ಆದೇಶ ಕಿರುಕುಳ ಕೊಟ್ಟವರ ನೆಂಟರನ್ನುದ್ದೇಶಿಸಿ ಕೂಡ ಕೊಡಬಹುದಾಗಿದೆ. ಆದರೆ, ಕೇವಲ ಪುರುಷರ ವಿರುದ್ಧ ಈ ಆದೇಶವನ್ನು ಹೊರಡಿಸಬಹುದು.
  • ಮನೆಯಲ್ಲಿ ಕಾಲಿಡದಂತೆ ಆದೇಶ ಹೊರಡಿಸುವುದು

೩. ನಿಮಗೆ ಪರ್ಯಾಯ ವಸತಿ ಸೌಲಭ್ಯ ಕಲ್ಪಿಸಿಕೊಡುವುದು:

ಕಿರುಕುಳ ಕೊಟ್ಟವರು ಕೆಳಗಿನ ಸೌಲಭ್ಯಗಳನ್ನು ನಿಮಗೆ ಒದಗಿಸಲಿ ಎಂದು ಆದೇಶ ಹೊರಡಿಸುವುದು:

  • ಆರಾಮದಾಯಕ ಮತ್ತು ಗೌರವಾಂವಿತ ವಸತಿಗೆ ಬೇಕಾದ ಎಲ್ಲ ಅಗತ್ಯವಾದ ಸೌಲಭ್ಯಗಳುಳ್ಳ ಮನೆಯ ಒಂದು ಭಾಗ ನಿಮಗೆ ಕೊಟ್ಟು, ಆ ಭಾಗವನ್ನು ಅವರು ಪ್ರವೇಶಿಸುವಂತಿಲ್ಲ ಎಂದು ಆದೇಶಿಸುವುದು
  • ನಿಮಗೋಸ್ಕರ ಬೇರೆ ಮನೆ ಖರೀದಿಸಿ, ಅಥವಾ ಬಾಡಿಗೆಗೆ ಧನ ಸಹಾಯ ಮಾಡಬೇಕೆಂಬ ಆದೇಶ.

೪. ನಿಮ್ಮ ಆಸ್ತಿ ಮತ್ತು ಹಣಕಾಸಿನ ವ್ಯವಹಾರಗಳನ್ನು ಕಾಪಾಡುವುದು:

ಕಿರುಕುಳ ಕೊಟ್ಟವರು ಕೆಳಗಿನ ಕೆಲಸಗಳನ್ನು ಮಾಡಬಾರದೆಂದು ನ್ಯಾಯಾಲಯ ಆದೇಶಿಸಬಹುದು:

  • ಮನೆಯನ್ನು ಮಾರುವುದು, ಗುತ್ತಿಗೆಗೆ ಕೊಡುವುದು, ಅಥವಾ ಅಡುವು ಇಡುವುದು.
  • ಜಂಟಿ-ಮಾಲೀಕತ್ವದಲ್ಲಿನ ಮನೆಯ ಮೇಲಿನ ಹಕ್ಕುಗಳನ್ನು ತ್ಯಜಿಸುವುದು. ಉದಾಹರಣೆಗೆ, ಆ ಮನೆಯನ್ನು ಮಾರುವುದು.

ನಿಮ್ಮ ಮತ್ತು ನಿಮ್ಮ ಮಗುವಿನ ರಕ್ಷಣೆಗೆ ಬೇಕಾದ ಬೇರೆ ಯಾವ ಶರತ್ತುಗಳನ್ನಾದರೂ ಪಾಲಿಸಬೇಕೆಂದು ನ್ಯಾಯಾಲಯವು ಆದೇಶಿಸಬಹುದು.

ಕೌಟುಂಬಿಕ ಹಿಂಸೆಯಾದಲ್ಲಿ ಧನ ಸಹಾಯ ಅಥವಾ ಜೀವನಾಂಶ ಹೇಗೆ ಪಡೆಯಬಹುದು?

ಕಿರುಕುಳ ನೀಡಿದವರಿಂದ ನಿಮಗೆ ಹಣ/ಜೀವನಾಂಶ ಬೇಕಾದಲ್ಲಿ, ವಕೀಲರ ಅಥವಾ ರಕ್ಷಣಾಧಿಕಾರಿಗಳ ನೆರವಿನಿಂದ, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ನಿಮಗೆ ಮತ್ತು ನಿಮ್ಮ ಮಗುವಿಗೆ, ಹಿಂಸೆ ಮತ್ತು ಅತ್ಯಾಚಾರದಿಂದಾದ ಎಲ್ಲ ಹಾನಿ ಮತ್ತು ಅನ್ಯಾಯಗಳನ್ನು ಸರಿದೂಗಿಸಲು ನ್ಯಾಯಾಲಯ ಜೀವನಾಂಶದ ಆದೇಶವನ್ನು ಹೊರಡಿಸುತ್ತದೆ. ಈ ಹಣ ನಿಮಗೆ ನ್ಯಾಯಾಲಯದ ಆದೇಶದಂತೆ, ಮಾಸಿಕವಾಗಿ, ಅಥವಾ ಒಮ್ಮೆಲೇ ಭಾರಿ ಮೊತ್ತವಾಗಿ ಲಭಿಸಬಲ್ಲುದು. ನಿಮ್ಮ ಜೀವನಶೈಲಿಯ ಗುಣಮಟ್ಟದನುಸಾರ ಈ ಹಣದ ಮೊತ್ತವನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ಕೆಳಗಿನ ಹಾನಿಗಳನ್ನು ಸರಿಪಡಿಸಲು ನಿಮಗೆ ಕಿರುಕುಳ ಕೊಟ್ಟವರು ನಿಮಗೆ ಜೀವನಾಂಶ ಕೊಡಬೇಕೆಂದು ನ್ಯಾಯಾಲಯ ನಿರ್ಧರಿಸುತ್ತದೆ:

  • ನೀವು ಕಳೆದುಕೊಂಡ ಆದಾಯ: ಉದಾಹರಣೆಗೆ, ನಿಮಗೆ ಕೆಲಸ ಮಾಡಲು ಅನುಮತಿ ನೀಡದಿದ್ದ ಕಾರಣ, ಅಥವಾ ಹಿಂಸೆಗೆ ಬಲಿಯಾಗಿ ನೀವು ಒಂದು ತೊಂಗಲು ಆಸ್ಪತ್ರೆಯಲ್ಲಿ ದಾಖಲಿದ್ದಾಗಾದ ಆದಾಯದ ನಷ್ಟ
  • ಶಾರೀರಿಕ ಪೆಟ್ಟುಗಳು ಮತ್ತು ವೈದ್ಯಕೀಯ ಖರ್ಚು: ಉದಾಹರಣೆಗೆ, ಆಸ್ಪತ್ರೆ ಬಿಲ್ ಮತ್ತು ಔಷಧಿಗಳಿಗೆ ದುಡ್ಡು
  • ಆಸ್ತಿಗೆ ಆದ ನಷ್ಟ ಅಥವಾ ಆಸ್ತಿ ಕಸೆದುಕೊಂಡಿದ್ದರಿಂದಾದ ಹಾನಿ: ಉದಾಹರಣೆಗೆ, ನಿಮ್ಮ ಒಡವೆಗಳು ಅಥವಾ ಜಾಮೀನು. ನಿಮಗೆ ಇಂತಹ ಬೆಲೆ ಬಾಳುವ ವಸ್ತುಗಳನ್ನು ತಿರುಗಿ ಕೊಡುವುದಾಗಿ ನ್ಯಾಯಾಲಯ ಆದೇಶಿಸಬಲ್ಲುದು.
  • ನಿಮ್ಮ ಜೀವನ ನಿರ್ವಹಣೆಗೆ: ಉದಾಹರಣೆಗೆ, ಮನೆ ಬಾಡಿಗೆ, ನಿಮ್ಮ ಮತ್ತು ನಿಮ್ಮ ಮಗುವಿನ ದೈನಂದಿನ ಖರ್ಚುಗಳು, ಇತ್ಯಾದಿ.
  • ಮಾನಸಿಕ ಕಿರುಕುಳ ಮತ್ತು ಭಾವನಾತ್ಮಕ ಯಾತನೆ: ನಿಮ್ಮ ಜೀವನಕ್ಕೆ ಮತ್ತು ಉದ್ಯೋಗಕ್ಕೆ ಧಕ್ಕೆ ತರುವಂತೆ ನಿಮಗಾದ ಯಾತನೆ.

ನೀವು ಉಪಯೋಗಿಸಬಹುದಾದ ಕಾನೂನುಗಳು:

ಕೆಳಗಿನ ಈ ಎರಡು ಕಾನೂನುಗಳಡಿ, ಕಿರುಕುಳ ಕೊಟ್ಟವರು ನಿಮಗೆ ಜೀವನಾಂಶ ಕೊಡಬೇಕೆಂದು ನೀವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು: ಕೌಟುಂಬಿಕ ಹಿಂಸೆ ಕಾನೂನು (ಸೆಕ್ಷನ್ ೨೦/೨೨) ಮತ್ತು ಅಪರಾಧಿಕ ಕಾನೂನು (ಸೆಕ್ಷನ್ ೧೨೫, ದಂಡ ಪ್ರಕ್ರಿಯೆ ಸಂಹಿತೆ).ಈ ಎರಡೂ ಕಾನೂನುಗಳನ್ನು ಬಳಸಿ ಜೀವನಾಂಶ ಪಡೆಯಲು ನಿಮ್ಮ ವಕೀಲರ ನೆರವು ಪಡೆಯಿರಿ.

ಹಣ ಪಾವತಿ ವಿಫಲವಾದಲ್ಲಿ:

ನ್ಯಾಯಾಲಯದ ಆದೇಶದ ಮೇರೆಗೆ ನಿಮಗೆ ಕಿರುಕುಳ ಕೊಟ್ಟವರು ನಿಮಗೆ ಜೀವನಾಂಶ ಕೊಡದಿದ್ದಲ್ಲಿ, ನಿಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಈ ವಿಷಯವನ್ನು ತಿಳಿಸಬೇಕು. ಆವಾಗ, ಕೆಳಗಿನವರಿಂದ ನ್ಯಾಯಾಲಯ ಜೀವನಾಂಶ ವಸೂಲಿ ಮಾಡುತ್ತದೆ:

  • ಕಿರುಕುಳ ಕೊಟ್ಟವರ ಆದಾಯದಿಂದ ಜೀವನಾಂಶದ ಹಣವನ್ನು ಕಡಿದು ನೇರವಾಗಿ ನ್ಯಾಯಾಲಯಕ್ಕೆ ಪಾವತಿಸಬೇಕಾಗಿ ಅವರ ಉದ್ಯೋಗದಾತರಿಗೆ ಆದೇಶಿಸುತ್ತದೆ.
  • ಕಿರುಕುಳ ಕೊಟ್ಟವರ ಸಾಲಗಾರರಿಂದ ನೇರವಾಗಿ ನ್ಯಾಯಾಲಯ ಹಣ ಪಡೆದು, ಅದನ್ನು ನಿಮಗೆ ಕೊಡುವುದಾಗಿ ಆದೇಶಿಸುತ್ತದೆ.