ರಕ್ಷಣಾಧಿಕಾರಿಗಳ ಪಾತ್ರವೇನು?

ಕೊನೆಯ ಅಪ್ಡೇಟ್ Nov 19, 2022

ನೀವು ಕೌಟುಂಬಿಕ ಹಿಂಸೆಯ ದೂರನ್ನು ದಾಖಲಿಸುವುದಾಗಿ ನಿರ್ಧರಿಸಿದ್ದಲ್ಲಿ, ರಕ್ಷಣಾಧಿಕಾರಿಗಳು ನಿಮ್ಮ ಮೊದಲ ಸಂಪರ್ಕ ಬಿಂದು ಆಗಿರುತ್ತಾರೆ. ನೀವು, ಅಥವಾ ನಿಮಗೆ ಗೊತ್ತಿರುವವರಿನ್ಯಾರಾದರೂ, ನಿಮ್ಮ ಜಿಲ್ಲೆಯ ಅಥವಾ ಹತ್ತಿರದ ಸ್ಥಳದ ರಕ್ಷಣಾಧಿಕಾರಿಗಳನ್ನು ಭೇಟಿ ನೀಡಿ, ಕರೆ ಮಾಡಿ, ಅಥವಾ ಪತ್ರದ ಮೂಲಕ, ಹಿಂಸೆಯ ದೂರನ್ನು ದಾಖಲಿಸಿ, ರಕ್ಷಣೆಯ ಮನವಿ ಮಾಡಬಹುದು. ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಲು ನೀವು:

  • ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಕೇಳಿಕೊಳ್ಳಬಹುದು.
  • ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೋಗಬಹುದು ಅಥವಾ ಕರೆ ಮಾಡಬಹುದು
  • ರಾಷ್ಟ್ರೀಯ/ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸಿ.
  • ಸರ್ಕಾರೇತರ ಸಂಸ್ಥೆಗಳು ಅಥವಾ ಸೇವಾ ಕಾರ್ಯಕರ್ತರನ್ನು ಸಂಪರ್ಕಿಸಿ.

ನಿಮ್ಮ ದೂರನ್ನು ರಕ್ಷಣಾಧಿಕಾರಿಗಳು ದಾಖಲಿಸುತ್ತಾರೆ. ನಿಮ್ಮ ಬಳಿ ಇಟ್ಟುಕೊಳ್ಳಲು ದೂರಿನ ಉಚಿತ ಪ್ರತಿಯನ್ನು ನೀವು ಅವರಿಂದ ಪಡೆಯಬಹುದು. ರಕ್ಷಣಾಧಿಕಾರಿಗಳು ಕೆಳಗಿನಂತೆ ನಿಮಗೆ ಸಹಾಯ ಮಾಡುತ್ತಾರೆ:

೧. ದೂರು ದಾಖಲಿಸುವುದು:

ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿವರಗಳು, ಸಂತ್ರಸ್ತೆಯ ವಿವರಗಳು, ಇತ್ಯಾದಿ ವಿವರಣೆಗಳುಳ್ಳ, ಕೌಟುಂಬಿಕ ಹಿಂಸೆಯ ಪ್ರಕರಣಗಳಲ್ಲಿ ದಾಖಲಿಸಲಾಗುವ “ಡಿ.ಐ.ಆರ್.” ಎಂಬ ಒಂದು ವಿಶೇಷ ವರದಿಯನ್ನು ದಾಖಲಿಸಲು ರಕ್ಷಣಾಧಿಕಾರಿಗಳು ನಿಮ್ಮ ಸಹಾಯ ಮಾಡುತ್ತಾರೆ. ನ್ಯಾಯಾಲಯದಲ್ಲಿ ನೇರವಾಗಿ ದೂರು ಸಲ್ಲಿಸಿ, ಕಾನೂನು ನೆರವು ಪಡೆಯುವಲ್ಲಿಯೂ ಸಹ ಅವರು ನಿಮ್ಮ ಸಹಾಯ ಮಾಡಬಲ್ಲರು.

೨. ಪೊಲೀಸರಿಗೆ ಮಾಹಿತಿ ನೀಡುವುದು:

ನೀವು ಹಿಂಸೆಗೆ ಒಳಗಾದ ಜಾಗದ ಪೊಲೀಸ್ ಠಾಣೆಗೆ, ಡಿ.ಐ.ಆರ್. ಮತ್ತು ನಿಮ್ಮ ವೈದ್ಯಕೀಯ ವರದಿಯ ಪ್ರತಿಗಳನ್ನು (ನಿಮ್ಮ ವೈದ್ಯಕೀಯ ತಪಾಸಣೆ ಆದಲ್ಲಿ) ಕಳಿಸುತ್ತಾರೆ. ಇದಾದಮೇಲೆ, ನಿಮಗೆ ಕಿರುಕುಳ ಕೊಟ್ಟವರಿಂದ ಇನ್ನು ಮೇಲೆ ಹಿಂಸೆ ಮುಂದುವರೆಯದಂತೆ, ಪೊಲೀಸರು ನೋಡಿಕೊಳ್ಳುತ್ತಾರೆ.

೩. ತಕ್ಷಣದ ರಕ್ಷಣೆ ಮತ್ತು ಆಸರೆ ನೀಡುವುದು:

ಕೆಳಗಿನಂತೆ ರಕ್ಷಣಾಧಿಕಾರಿಗಳು ನಿಮ್ಮ ಸಹಾಯ ಮಾಡಬಲ್ಲರು:

  • ನಿಮ್ಮ ರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ಮತ್ತು ನ್ಯಾಯಾಲಯದಿಂದ ನೀವು ಪಡೆಯಬಯಸುವ ಆದೇಶಗಳುಳ್ಳ “ರಕ್ಷಣಾ ಉಪಾಯವನ್ನು” ತಯಾರಿಸುವುದು
  • ನಿಮಗೆ/ನಿಮ್ಮ ಮಗುವಿಗೆ ಶಾರೀರಿಕವಾಗಿ ಪೆಟ್ಟು ಬಿದ್ದಲ್ಲಿ, ಯಾವುದೇ ವೈದ್ಯಕೀಯ ಸೌಲಭ್ಯದಿಂದ ನಿಮಗೆ ವೈದ್ಯಕೀಯ ನೆರವನ್ನು ಕಲ್ಪಿಸಿಕೊಡುವುದು
  • ಕಾನೂನು ನೆರವು, ಸಮಾಲೋಚನೆ, ವೈದ್ಯಕೀಯ ಸೌಲಭ್ಯಗಳು, ಆಶ್ರಯ ಮನೆ, ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸೇವಾ ಕಾರ್ಯಕರ್ತರನ್ನು ನಿಮಗೆ ಪರಿಚಯಿಸುವುದು

೪. ನಿಮ್ಮ ಕಾನೂನಾತ್ಮಕ ಹಕ್ಕುಗಳ ಬಗ್ಗೆ ನಿಮಗೆ ಮಾಹಿತಿ ನೀಡುವುದು:

ನಿಮ್ಮ ಜೊತೆ ಏನಾಗಿದೆ ಎಂದು ಸ್ಪಷ್ಟವಾಗಿ ನೀವು ತಿಳಿದುಕೊಳ್ಳಲೆಂದು ಬೇರೆ-ಬೇರೆ ರೀತಿಗಳ ಕೌಟುಂಬಿಕ ಹಿಂಸೆಗಳ ಬಗ್ಗೆ ನಿಮಗೆ ತಿಳಿಹೇಳುತ್ತಾರೆ. ಇದನ್ನು ಡಿ.ಐ.ಆರ್.ನಲ್ಲಿ ದಾಖಲಿಸಲಾಗುತ್ತದೆ. ಇದಾದಮೇಲೆ, ದೂರು ನೀಡಿದ ಬಳಿಕ ನೀವು ಕಾನೂನಿನಡಿ ಚಲಾಯಿಸಬಲ್ಲ ಹಕ್ಕುಗಳಾವುವು, ಮತ್ತು ನಿಮಗೆ ಸಿಗಬಲ್ಲ ಬೇರೆ-ಬೇರೆ ಪರಿಹಾರಗಳಾವುವು ಎಂಬುದನ್ನು ತಿಳಿಹೇಳುತ್ತಾರೆ.

೫. ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ನಿಮಗೆ ಬೆಂಬಲ ನೀಡುವುದು:

ರಕ್ಷಣಾಧಿಕಾರಿಗಳು:

  • ಜಿಲ್ಲಾ ಕಾನೂನು ನೆರವು ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ನೆರವು ಪಡೆಯುವಲ್ಲಿ ನಿಮ್ಮ ಸಹಾಯ ಮಾಡಬಲ್ಲರು
  • ನ್ಯಾಯಾಲಯದ ಪ್ರಕ್ರಿಯೆಯ ಸಂದರ್ಭದಲ್ಲಿ ನಿಮಗೆ/ನಿಮ್ಮ ಮಗುವಿಗೆ ಕಿರುಕುಳ ಕೊಟ್ಟವರಿಂದ ಒತ್ತಡ/ಹಿಂಸೆ ಆಗಲಾರದಂತೆ ನೋಡಿಕೊಳ್ಳಬಲ್ಲರು

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.