ಕೌಟುಂಬಿಕ ಹಿಂಸೆ ಕಾನೂನಿನಡಿ ನಿವಾಸದ ಆದೇಶವೆಂದರೇನು?

ಕೊನೆಯ ಅಪ್ಡೇಟ್ Nov 19, 2022

ನಿಮ್ಮನ್ನು ಕಿರುಕುಳ ಕೊಡುತ್ತಿರುವವರು ಮನೆಯಿಂದಾಚೆ ತಳ್ಳುತ್ತಿದ್ದಲ್ಲಿ, ಅಥವಾ ನಿಮಗೆ ಮನೆಯಲ್ಲಿರುವುದು ಸುರಕ್ಷಿತವಲ್ಲ ಎಂದು ಅನಿಸಿದ್ದಲ್ಲಿ, ನಿಮ್ಮ ವಕೀಲರು ಅಥವಾ ರಕ್ಷಣಾಧಿಕಾರಿಗಳ ಸಹಾಯದಿಂದ ನ್ಯಾಯಾಲಯದ ಸಹಾಯ ಪಡೆಯಬಹುದು. ನಿವಾಸದ ಆದೇಶ ಕೆಳಗಿನಂತೆ ನಿಮಗೆ ಅನುಕೂಲವಾಗುತ್ತದೆ:

೧. ಮನೆಯಲ್ಲಿ ವಾಸ ಮಾಡುವುದು:

ನಿವಾಸದ ಆದೇಶದ ಮೇರೆಗೆ, ಕಿರುಕುಳ ಕೊಡುತ್ತಿರುವವರು ನಿಮ್ಮನ್ನು ಮನೆಯಿಂದ ಆಚೆ ತಳ್ಳುವಂತಿಲ್ಲ, ಅಥವಾ ಆಚೆ ಹೋಗು ಅಂತ ಒತ್ತಾಯ ಮಾಡುವಂತಿಲ್ಲ ಎಂದು ನ್ಯಾಯಾಲಯ ತೀರ್ಪಿಸಬಹುದು. ನೀವು ದಂಪತಿಗಳಾಗಿ (ಗಂಡ-ಹೆಂಡತಿ, ಅಥವಾ ಲಿವ್-ಇನ್ ಸಂಗಾತಿಗಳಾಗಿ) ಯಾವ ಮನೆಯಲ್ಲಿ ವಾಸವಾಗಿದ್ದಿರೋ, ಆ ಮನೆಯಲ್ಲಿ ವಾಸಿಸುವ ಹಕ್ಕು, ಕೆಳಗಿನ ಸಂದರ್ಭಗಳಲ್ಲೂ ನಿಮಗಿದೆ:

  • ಆ ಮನೆಯ ಮೇಲೆ ನಿಮಗೆ ಕಾನೂನಾತ್ಮಕ ಪಾಲು, ಹಕ್ಕು, ಅಥವಾ ಮಾಲೀಕತ್ವ ಇಲ್ಲದಿದ್ದರೂ
  • ಕಿರುಕುಳ ಕೊಟ್ಟವರು ಆ ಮನೆಯಲ್ಲಿ ಇನ್ನು ವಾಸವಾಗಿಲ್ಲದಿದ್ದರೂ
  • ಕಿರುಕುಳ ಕೊಟ್ಟವರಿಗೆ ಆ ಮನೆಯಲ್ಲಿ ಕಾನೂನಾತ್ಮಕ ಪಾಲು, ಹಕ್ಕು, ಅಥವಾ ಮಾಲೀಕತ್ವ ಇಲ್ಲದಿದ್ದರೂ

೨. ಕಿರುಕುಳ ಕೊಟ್ಟವರಿಂದ ನಿಮ್ಮನ್ನು ದೂರವಿಡುವುದು:

ಕಿರುಕುಳ ಕೊಟ್ಟವರಿಗೆ ಕೆಳಗಿನ ಆದೇಶಗಳನ್ನು ನ್ಯಾಯಾಲಯ ಕೊಡಬಹುದು:

  • ಮನೆಯನ್ನು ಬಿಟ್ಟು ಹೋಗುವುದಾಗಿ. ಈ ಆದೇಶ ಕಿರುಕುಳ ಕೊಟ್ಟವರ ನೆಂಟರನ್ನುದ್ದೇಶಿಸಿ ಕೂಡ ಕೊಡಬಹುದಾಗಿದೆ. ಆದರೆ, ಕೇವಲ ಪುರುಷರ ವಿರುದ್ಧ ಈ ಆದೇಶವನ್ನು ಹೊರಡಿಸಬಹುದು.
  • ಮನೆಯಲ್ಲಿ ಕಾಲಿಡದಂತೆ ಆದೇಶ ಹೊರಡಿಸುವುದು

೩. ನಿಮಗೆ ಪರ್ಯಾಯ ವಸತಿ ಸೌಲಭ್ಯ ಕಲ್ಪಿಸಿಕೊಡುವುದು:

ಕಿರುಕುಳ ಕೊಟ್ಟವರು ಕೆಳಗಿನ ಸೌಲಭ್ಯಗಳನ್ನು ನಿಮಗೆ ಒದಗಿಸಲಿ ಎಂದು ಆದೇಶ ಹೊರಡಿಸುವುದು:

  • ಆರಾಮದಾಯಕ ಮತ್ತು ಗೌರವಾಂವಿತ ವಸತಿಗೆ ಬೇಕಾದ ಎಲ್ಲ ಅಗತ್ಯವಾದ ಸೌಲಭ್ಯಗಳುಳ್ಳ ಮನೆಯ ಒಂದು ಭಾಗ ನಿಮಗೆ ಕೊಟ್ಟು, ಆ ಭಾಗವನ್ನು ಅವರು ಪ್ರವೇಶಿಸುವಂತಿಲ್ಲ ಎಂದು ಆದೇಶಿಸುವುದು
  • ನಿಮಗೋಸ್ಕರ ಬೇರೆ ಮನೆ ಖರೀದಿಸಿ, ಅಥವಾ ಬಾಡಿಗೆಗೆ ಧನ ಸಹಾಯ ಮಾಡಬೇಕೆಂಬ ಆದೇಶ.

೪. ನಿಮ್ಮ ಆಸ್ತಿ ಮತ್ತು ಹಣಕಾಸಿನ ವ್ಯವಹಾರಗಳನ್ನು ಕಾಪಾಡುವುದು:

ಕಿರುಕುಳ ಕೊಟ್ಟವರು ಕೆಳಗಿನ ಕೆಲಸಗಳನ್ನು ಮಾಡಬಾರದೆಂದು ನ್ಯಾಯಾಲಯ ಆದೇಶಿಸಬಹುದು:

  • ಮನೆಯನ್ನು ಮಾರುವುದು, ಗುತ್ತಿಗೆಗೆ ಕೊಡುವುದು, ಅಥವಾ ಅಡುವು ಇಡುವುದು.
  • ಜಂಟಿ-ಮಾಲೀಕತ್ವದಲ್ಲಿನ ಮನೆಯ ಮೇಲಿನ ಹಕ್ಕುಗಳನ್ನು ತ್ಯಜಿಸುವುದು. ಉದಾಹರಣೆಗೆ, ಆ ಮನೆಯನ್ನು ಮಾರುವುದು.

ನಿಮ್ಮ ಮತ್ತು ನಿಮ್ಮ ಮಗುವಿನ ರಕ್ಷಣೆಗೆ ಬೇಕಾದ ಬೇರೆ ಯಾವ ಶರತ್ತುಗಳನ್ನಾದರೂ ಪಾಲಿಸಬೇಕೆಂದು ನ್ಯಾಯಾಲಯವು ಆದೇಶಿಸಬಹುದು.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.