“ವಿಶೇಷ ವಿವಾಹ”/ಅಂತರ್ಧಾರ್ಮಿಕ ವಿವಾಹದ ವ್ಯಾಖ್ಯೆ

ಸಾಮಾನ್ಯವಾಗಿ “ಕೋರ್ಟು ವಿವಾಹ” ಎಂದು ಕರೆಯಲ್ಪಡುವ ನಾಗರಿಕ ವಿವಾಹಗಳು ದಂಪತಿಗಳ ಧರ್ಮವನ್ನು ಪರಿಗಣಿಸುವುದಿಲ್ಲ. ಹೀಗಾಗಿ ವಿವಾಹವು “ವಿಶೇಷ ವಿವಾಹ ಕಾಯ್ದೆ” ಅಡಿ ಜರುಗುತ್ತದೆ.ಈ ಕಾನೂನಿನ ಅಡಿಯಲ್ಲಿ ವಿವಾಹವಾಗಲು ನೀವು ಮತ್ತು ನಿಮ್ಮಜೊತೆಗಾರ/ಜೊತೆಗಾರ್ತಿ ವಿಧಿಬದ್ಧವಾಗಿ ವಿವಾಹವಾಗಲು ಅರ್ಹರೇ ಎಂದು ತಿಳಿದುಕೊಳ್ಳಬೇಕು. ಉದಾಹರಣೆಗೆ, ವಿವಾಹವಾಗಲು ನೀವು ನಿರ್ದಿಷ್ಟ ವಯೋಮಾನದವಾಗಿರತಕ್ಕದ್ದು ಹಾಗೂ ಜೀವಂತವಿರುವ ಮತ್ತು ನೀವು ವಿಚ್ಛೇದನ ನೀಡದಿರುವ ಪತಿ/ಪತ್ನಿಯನ್ನು ನೀವು ಹೊಂದಿರಬಾರದು.

ಮಲ ತಂದೆ-ತಾಯಂದಿರಿಂದ ದತ್ತು ಸ್ವೀಕೃತಿಯ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)

ನೀವು ಮಗುವಿನ ಮಲ ತಂದೆ/ತಾಯಿಯಾಗಿ ದತ್ತು ಪಡೆಯಬೇಕಾದಲ್ಲಿ ಕೆಳಗಿನ ಪ್ರಕ್ರಿಯೆಯನ್ನು ಪಾಲಿಸಿ:

ಹಂತ ೧: ನೀವು ಮತ್ತು ನಿಮ್ಮ ಸಂಗಾತಿ (ಮಗುವಿನ ಜೈವಿಕ ತಂದೆ/ತಾಯಿ) ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರದ ಜಾಲತಾಣದಲ್ಲಿ ನಿಮ್ಮ ಹೆಸರುಗಳನ್ನೂ ನೋಂದಾಯಿಸಬೇಕು. ಹೀಗೆ ಮಾಡಿದಾಗ ಆ ಜಾಲತಾಣ ನಿಮ್ಮನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಗೆ ಮರುನಿರ್ದೇಶಿಸುತ್ತದೆ. ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳು, ಉದ್ಯೋಗ ವಿವರಗಳು, ಇತ್ಯಾದಿಗಳನ್ನು ನೀಡಬೇಕು.

ಹಂತ ೨: ಕೆಳಗಿನ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು:

  • ನಿಮ್ಮ ಮತ್ತು ನಿಮ್ಮ ಸಂಗಾತಿಯ ನಿವಾಸ ಸ್ಥಾನದ ಪುರಾವೆ
  • ನೀವು ಮತ್ತು ನಿಮ್ಮ ಸಂಗಾತಿಯು ಕಾನೂನುಬದ್ಧವಾಗಿ ಮದುವೆಯಾದ ದಂಪತಿಗಳೆಂದು ಸೂಚಿಸುವ ಪುರಾವೆ
  • ಜೈವಿಕ ತಂದೆ/ತಾಯಿ ಮರಣಗೊಂಡಲ್ಲಿ ಅವರ ಮರಣ ಪ್ರಮಾಣಪತ್ರ
  • ಮಗುವಿನ, ಅದರ ಜೈವಿಕ ತಂದೆ/ತಾಯಿಯರ, ದತ್ತು ತೆಗೆದುಕೊಳ್ಳುವ ಸಂಗಾತಿಯ, ಮತ್ತು ಸಾಕ್ಷಿದಾರರ ಧೃಡೀಕರಿಸಲಾದ ಭಾವಚಿತ್ರಗಳು
  • ಮಕ್ಕಳ ಕಲ್ಯಾಣ ಸಮಿತಿ ನಿಮಗೆ ದತ್ತು ಸ್ವೀಕೃತಿಯ ಅನುಮತಿ ನೀಡಿದ ಪುರಾವೆ ೬. ನ್ಯಾಯಾಲಯದಿಂದ ಸಿಕ್ಕ ದತ್ತು ಸ್ವೀಕೃತಿ ಆದೇಶ

ಹಂತ ೩: ಮಕ್ಕಳ ಕಲ್ಯಾಣ ಸಮಿತಿಯಿಂದ ನಿಮಗೆ ದತ್ತು ಸ್ವೀಕೃತಿ ಮಾಡಲು ಅನುಮತಿ ಸಿಕ್ಕಿರಬೇಕು. ಸಮಂಜಸ ದಾಖಲೆಯನ್ನು, ನಿಮ್ಮ ಹಾಗು ನಿಮ್ಮ ಸಂಗಾತಿಯ ಒಪ್ಪಿಗೆಯ ಜೊತೆ ಸಲ್ಲಿಸಬೇಕು. ಒಂದು ವೇಳೆ ಇಬ್ಬರೂ ದಂಪತಿಗಳು ತಮ್ಮ ತಮ್ಮ ಮೊದಲಿನ ಮದುವೆಯಿಂದ ಹುಟ್ಟಿದ ಮಕ್ಕಳನ್ನು ದತ್ತು ಸ್ವೀಕೃತಿಯ ಸಲುವಾಗಿ ಬಿಟ್ಟುಕೊಡುವುದ್ದಿದ್ದಲ್ಲಿ, ಬೇರೆ-ಬೇರೆ ಒಪ್ಪಿಗೆ ಪತ್ರಗಳನ್ನು ಸಲ್ಲಿಸಬೇಕು.

ಹಂತ ೪: ನೀವು ಮತ್ತು ನಿಮ್ಮ ಸಂಗಾತಿ ಕುಟುಂಬ ನ್ಯಾಯಾಲಯ/ ಜಿಲ್ಲಾ ನ್ಯಾಯಾಲಯ/ನಗರ ನಾಗರಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಇದಾದ ಮೇಲೆ ದತ್ತು ಸ್ವೀಕೃತಿಯ ಪ್ರಮಾಣೀಕರಿಸಲಾದ ಆದೇಶಪತ್ರವನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದಲ್ಲಿ ಅಪ್ಲೋಡ್ ಮಾಡಬೇಕು.

ಮುಸ್ಲಿಂ ಮದುವೆಗಳಲ್ಲಿ ವಿಚ್ಛೇದನದ ನಂತರ ಇದ್ದತ್

“ಇದ್ದತ್” ಮುಸ್ಲಿಂ ಮದುವೆಯ ವಿಚ್ಛೇದನದ ನಂತರದ ಸಮಯಾವಧಿಯಾಗಿದ್ದು, ಈ ಅವಧಿಯಲ್ಲಿ ಹೆಂಡತಿಯು ಪುನರ್ವಿವಾಹವಾಗುವಂತಿಲ್ಲ, ಹಾಗು ಯಾರ ಜೊತೆಗೂ ಲೈಂಗಿಕ ಸಂಭೋಗ ಮಾಡುವಂತಿಲ್ಲ. ಮುಸ್ಲಿಂ ಕಾನೂನಿನಡಿ, ಕೇವಲ ಸ್ತ್ರೀಯರು ಇದ್ದತ್ ಸಮಯಾವಧಿಯ ಪಾಲನೆ ಮಾಡಬೇಕಾಗಿದೆ.

ನೀವು ನಿಮ್ಮ ಗಂಡನಿಂದ ವಿಚ್ಛೇದನ ಪಡೆದಿದ್ದಲ್ಲಿ, ನಿಮ್ಮ ಇದ್ದತ್ ಸಮಯಾವಧಿ ಕೆಳಗಿನಂತಿರುತ್ತದೆ:

  • ನಿಮ್ಮ ಗಂಡ “ತಲಾಕ್” ಎಂಬ ಹೇಳಿಕೆಯನ್ನು ಹೇಳಿದ ದಿನಾಂಕದಿಂದ ೩ ತಿಂಗಳ ವರೆಗೆ
  • ನೀವು ಇದ್ದತ್ ಸಮಯಾವಧಿಯಲ್ಲಿ ಗರ್ಭಿಣಿಯಾಗಿದ್ದಲ್ಲಿ, ನಿಮ್ಮ ಹೆರಿಗೆಯಾಗುವ ತನಕ

ನಿಮ್ಮ ಗಂಡ ಇದ್ದತ್ ಸಮಯಾವಧಿಯಲ್ಲಿ ಅವರ ಮನ ಬದಲಾಯಿಸಿ ನಿಮ್ಮನ್ನು ಅವರ ಹೆಂಡತಿಯಾಗಿ ಪುನಃ ಒಪ್ಪಿಗೆಯನ್ನು ಕೊಟ್ಟರೆ, ನೀವಿಬ್ಬರೂ ಮದುವೆಯಾದ ದಂಪತಿಯಂತೆ ಜೊತೆಗೆ ವಾಸಮಾಡಬಹುದು.

ಹಿಂದೂ ವಿವಾಹ ಕಾನೂನಿನಡಿ ವಿಚ್ಛೇದನ ಪ್ರಕರಣ ನಡೆಯುವಾಗ ರಾಜಿಯಾಗುವುದು

ಎಲ್ಲ ಕೌಟುಂಬಿಕ ಪ್ರಕರಣಗಳಲ್ಲಿ ನ್ಯಾಯಾಲಯವು ದಂಪತಿಗಳ ನಡುವೆ ರಾಜಿ ಮಾಡಿಸಲು ಯತ್ನಿಸುತ್ತದೆ.

ರಾಜಿಯಾಗುವ ಪರಿಣಾಮಗಳು:

ರಾಜಿಯಾದ ನಂತರ ಈ ಎರಡು ಪರಿಣಾಮಗಳು ಸಂಭವಿಸುವವು:

  1.  ನೀವು ಮತ್ತು ನಿಮ್ಮ ಸಂಗಾತಿ ಒಂದಾಗಿ ನಿಮ್ಮ ವೈವಾಹಿಕ ಸಂಬಂಧವನ್ನು ಮುಂದುವರೆಸಬಹುದು, ಅಥವಾ
  2. ನೀವು ಮತ್ತು ನಿಮ್ಮ ಸಂಗಾತಿ ಶಾಂತಿಯುತವಾಗಿ ನಿಮ್ಮ ವಿವಾಹವನ್ನು ಅಂತ್ಯಗೊಳಿಸಿ ವಿಚ್ಛೇದನ ಪಡೆಯಬಹುದು.

ಭಾರತದಲ್ಲಿ ರಾಜಿಯಾಗುವ ಮೂರು ವಿಧಾನಗಳಿವೆ:

ಮಧ್ಯಸ್ಥಿಕೆ:

ಸಂಘರ್ಷಗಳ ಕಾರಣಗಳನ್ನು ಗುರುತಿಸಿ, ಅವುಗಳನ್ನು ಪರಿಹರಿಸಲು ತಂತ್ರಗಳನ್ನು ರೂಪಿಸುವುದಕ್ಕೆ ಮಧ್ಯಸ್ಥಿಕೆ ಮಾಡುವುದು ಎನ್ನುತ್ತಾರೆ.ಈ ಪ್ರಕ್ರಿಯೆಯನ್ನು ಮಧ್ಯಸ್ಥಿಕೆದಾರರು ಮಾಡುತ್ತಾರೆ. ಈ ಮಧ್ಯಸ್ಥಿಕೆದಾರರನ್ನು ವಿಚ್ಛೇದನಾ ಪ್ರಕರಣದ ಸಮಯದಲ್ಲಿ ನ್ಯಾಯಾಲಯವು ನೇಮಿಸುತ್ತದೆ, ಅಥವಾ ಕೋರ್ಟಿನ ಬಳಿ ಇರುವ ಮಧ್ಯಸ್ಥಿಕೆ ಕೇಂದ್ರದಿಂದ ಕರೆಸಿರುತ್ತಾರೆ.

ಸಂಧಾನ:

ಸಂಧಾನದ ಪ್ರಕ್ರಿಯೆಯಲ್ಲಿ ಸಂಧಾನಕಾರರನ್ನು ನೇಮಿಸಲಾಗುತ್ತದೆ. ಚರ್ಚೆಗಳ ಸಂದರ್ಭದಲ್ಲಿ ಅವರು ಸೂಚಿಸಿದ ಪರಿಹಾರಗಳನ್ನು ಎರಡೂ ಪಕ್ಷಗಳು ಒಪ್ಪುವಂತೆ ಒಡಂಬಡಿಸುವುದೇ ಈ ಸಂಧಾನಕಾರರ ಪಾತ್ರ.

ಕುಟುಂಬ ನ್ಯಾಯಾಲಯಗಳಲ್ಲಿ ಸಲಹೆಗಾರರು:

ವಿಚ್ಛೇದನ ಅಥವಾ ಇನ್ನಿತರ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಸಲಹೆ, ಸಹಾಯ, ಅಥವಾ ಪ್ರೋತ್ಸಾಹನೆ ನೀಡುವುದು ಸಲಹೆಗಾರರ ಕರ್ತವ್ಯ. ಕುಟುಂಬ ನ್ಯಾಯಾಲಯದಿಂದ ನೇಮಿಸಲಾದ ಸಲಹೆಗಾರರು ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರ ಹುಡುಕಲು ಯತ್ನಿಸುತ್ತಾರೆ:

  1. ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಪರಸ್ಪರ ಹೊಂದಾಣಿಕೆ ಯಾಕೆ ಆಗುತ್ತಿಲ್ಲ, ಅಥವಾ ಹೊಂದಾಣಿಕೆ ಆಗುತ್ತದೋ ಇಲ್ಲವೋ.
  2.  ವೈದ್ಯರ ಮೂಲಕ ಮಾನಸಿಕ ಅಥವಾ ಮನೋವೈಜ್ನ್ಯಾನಿಕ ನೆರವಿನಿಂದ ಈ ಅಸಾಮರಸ್ಯವನ್ನು ಪರಿಹರಿಸಬಹುದೋ ಇಲ್ಲವೋ.
  3. ನೀವು ಮತ್ತು ನಿಮ್ಮ ಸಂಗಾತಿ ಬೇರೆಯವರ ಪ್ರಭಾವದಿಂದ ವಿಚ್ಛೇದನಕ್ಕೆ ಮನವಿ ಸಲ್ಲಿಸುತ್ತಿದ್ದೀರೋ ಹೇಗೆ
  4. ನೀವು ಮತ್ತು ನಿಮ್ಮ ಸಂಗಾತಿ ಸ್ವತಂತ್ರವಾಗಿ ಮತ್ತು ಸ್ವೇಚ್ಛೆಯಿಂದ ವಿಚ್ಛೇದನದ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರೋ ಇಲ್ಲವೋ

ವಿಧಿಸಮ್ಮತ ಅಂತರ್ಧರ್ಮೀಯ ವಿವಾಹದ ಷರತ್ತುಗಳು

  • ಉಭಯ ಪಕ್ಷಗಾರರು ಜೀವಂತವಾಗಿರುವ ಗಂಡ/ಹೆಂಡತಿಯನ್ನು ಹೊಂದಿರಬಾರದು.
  • ಯಾವುದೇ ಪಕ್ಷಗಾರರು:
    ಚಿತ್ತವಿಭ್ರಮಣೆಯ ಕಾರಣದಿಂದ ವಿವಾಹಕ್ಕೆ ವಿಧಿಬದ್ಧ ಒಪ್ಪಿಗೆ ಕೊಡಲು ಅಸಮರ್ಥರಾಗಿರಬಾರದು.
  • ವಿಧಿಬದ್ಧ ಒಪ್ಪಿಗೆ ಕೊಡಲು ಸಮರ್ಥರಿದ್ದರೂ ಸಹ, ವಿವಾಹ ಮಾಡಿಕೊಳ್ಳಲು ಅಥವಾ ಸಂತಾನೋತ್ಪತ್ತಿ ಮಾಡಲು ಅಸಮರ್ಥರನ್ನಾಗಿ ಮಾಡಿರುವಂತಹ ಮಾನಸಿಕ ವ್ಯಾಧಿಯಿಂದ ನರಳುತ್ತಿರಕೂಡದು.
  • ಪದೇಪದೇ ಬುದ್ಧಿಭ್ರಮಣೆ ಅಥವಾ ಅಪಸ್ಮಾರದ ಆಘಾತಕ್ಕೆ ತುತ್ತಾಗಿರಬಾರದು.
  • ಪುರುಷರು ಕನಿಷ್ಟ 21 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು ಮತ್ತು ಸ್ತ್ರೀಯರು ಕನಿಷ್ಟ 18 ವರ್ಷ ವಯೋಮಾನದವರಾಗಿರಬೇಕು.
  • ಉಭಯ ಪಕ್ಷಗಾರರು ನಿಷಿದ್ಧ ತಲೆಮಾರುಗಳಿಗೆ ಸೇರಿದವರಾಗಿರಬಾರದು.

ವಿವಾಹವಿಧಿಯನ್ನು ಶಾಸ್ತ್ರಬದ್ಧವಾಗಿ ನೆರವೇರಿಸಲು ಯಾವುದೇ ಬುಡಕಟ್ಟು, ಸಮುದಾಯ, ಗುಂಪು ಅಥವಾ ಕುಟುಂಬಕ್ಕೆ ಸೇರಿದ ವ್ಯಕ್ತಿಗಳಿಗೆ ವಿಶಿಷ್ಟವಾದ ಸಂಪ್ರದಾಯವಿದ್ದಲ್ಲಿ, ರಾಜ್ಯ ಸರ್ಕಾರವು ಅದಕ್ಕೆ ಸಂಬಂಧಿಸಿದಂತೆ ಸೂಕ್ತ ನಿಯಮಾವಳಿಗಳನ್ನು ರೂಪಿಸತಕ್ಕದ್ದು. ಆದರೆ,

  • ಅಂತಹ ಸಂಪ್ರದಾಯಗಳನ್ನು ಸಮುದಾಯದ ಸದಸ್ಯರು ದೀರ್ಘಕಾಲದಿಂದ ನಿರಂತರವಾಗಿ ಆಚರಿಸುತ್ತಿದ್ದಲ್ಲಿ;
  • ಸಂಪ್ರದಾಯಗಳು ಅಥವಾ ನೀತಿ-ನಿಯಮಾವಳಿಗಳು ಸಾರ್ವಜನಿಕ ನೀತಿಗೆ ವಿರುದ್ಧವಾಗಿರದಿದ್ದಲ್ಲಿ;
  • ಸಂಪ್ರದಾಯಗಳು ಅಥವಾ ನೀತಿ-ನಿಯಮಾವಳಿಗಳು ಕೇವಲ ಕುಟುಂಬಕ್ಕೆ ಅನ್ವಯವಾಗುತ್ತಿದ್ದು, ಕುಟುಂಬವು ಆ ಆಚರಣೆಗಳನ್ನು ಪರಿಪಾಲಿಸುತ್ತಿದ್ದಲ್ಲಿ.

— ರಾಜ್ಯ ಸರ್ಕಾರವು ಅಂತಹ ನಿಯಮಾವಳಿಗಳನ್ನು ಪ್ರಕಟಿಸುವ ಅಗತ್ಯವಿಲ್ಲ.

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಶಾಸ್ತ್ರಬದ್ಧವಾಗಿ ನೆರವೇರಿದ ಪ್ರಕರಣಗಳಲ್ಲಿ, ಉಭಯ ಪಕ್ಷಗಾರರು ಭಾರತೀಯ ನಾಗರಿಕರಾಗಿರಬೇಕು ಮತ್ತು ಈ ಕಾನೂನು ಜಾರಿಯಲ್ಲಿರುವ ಪ್ರದೇಶಗಳಲ್ಲಿ ವಾಸಮಾಡುತ್ತಿಬೇಕು.

ಸಾಗರೋತ್ತರ ಭಾರತೀಯ ನಾಗರಿಕರು, ಅನಿವಾಸಿ ಭಾರತೀಯರು, ಮತ್ತು ಪರದೇಶದಲ್ಲಿ ನೆಲೆಸಿದ ವಿದೇಶಿಯರಿಂದ ದತ್ತು ಸ್ವೀಕೃತಿ (ಧಾರ್ಮಿಕೇತರ ಕಾನೂನು)

ನೀವು ಸಾಗರೋತ್ತರ ಭಾರತೀಯ ನಾಗರಾಯಿಕರು, ಅನಿವಾಸಿ ಭಾರತೀಯರು, ಅಥವಾ ಪರದೇಶದಲ್ಲಿ ನೆಲೆಸಿದ ವಿದೇಶಿಯರು ಆಗಿದ್ದು ಭಾರತೀಯ ಮಗುವನ್ನು ದತ್ತು ಸ್ವೀಕೃತಿ ಮಾಡಬೇಕೆಂದಲ್ಲಿ ಕೆಳಗಿನ ಪ್ರಕ್ರಿಯೆಯನ್ನು ಪಾಲಿಸಿ:

ಹಂತ ೧: ನೀವು ವಾಸವಾಗಿದ್ದ ದೇಶದಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಭೇಟಿ ನೀಡಬೇಕು. ಉದಾಹರಣೆಗೆ, ಅಧಿಕೃತ ವಿದೇಶಿ ದತ್ತು ಸ್ವೀಕೃತಿ ಸಂಸ್ಥೆ, ಅಥವಾ ಇನ್ನಿತರ ಕೇಂದ್ರೀಯ ಅಧಿಕಾರ. ನಿಮ್ಮ ನಿವಾಸದ ದೇಶದಲ್ಲಿ ಒಂದುವೇಳೆ ಈ ಎರಡೂ ಸಂಸ್ಥೆಗಳು ಇಲ್ಲದಿದ್ದರೆ, ಸಂಬಂಧಪಟ್ಟ ಸರ್ಕಾರಿ ವಿಭಾಗಕ್ಕೆ, ಅಥವಾ ಭಾರತೀಯ ರಾಜತಾಂತ್ರಿಕ ಮಿಷನ್ ಗೆ ನೀವು ಹೋಗಬಹುದು. ಅವರು ನಡೆಸಬೇಕಾದ ಮನೆ ಅಧ್ಯಯನ ಮತ್ತು ನೋಂದಣಿ ಪ್ರಕ್ರಿಯೆಯ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ.

ಹಂತ ೨: ಬೇಕಾದ ದಾಖಲೆಗಳನ್ನೆಲ್ಲ ನೀವು ಸಲ್ಲಿಸಬೇಕು. ನೀವು ಸಂಪರ್ಕಿಸಿದ ಸಂಸ್ಥೆಗೆ ಇದರ ಬಗ್ಗೆ ಹೆಚ್ಚು ಮಾಹಿತಿ ಕೇಳಿ.

ಹಂತ ೩: ನಿಮಗೆ ೨ ಮಕ್ಕಳನ್ನು ಸೂಚಿಸಲಾಗುತ್ತದೆ, ಹಾಗು ನೀವು ೯೬ ಗಂಟೆಗಳೊಳಗೆ ಒಂದು ಮಗುವನ್ನು ದತ್ತು ಪಡೆಯಲು ಮೀಸಲಿಡಬಹುದು. ಹೀಗೆ ಮಾಡಿದಾಗ ಇನ್ನೊಂದು ಮಗುವಿನ ಹೆಸರು ಹಿಂತೆಗೆದುಕೊಳ್ಳಲಾಗುತ್ತದೆ. ನೀವು ಹೀಗೆ ಮಾಡಲು ವಿಫಲವಾದಾಗ ಇರಡೂ ಮಕ್ಕಳ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲಾಗುತ್ತದೆ. ಮಗುವನ್ನು ಮೀಸಲಿಟ್ಟ ಮೇಲೆ, ಮಗುವಿನ ಅಧ್ಯಯನ ವರದಿ, ಮತ್ತು ವೈದ್ಯಕೀಯ ತಪಾಸಣಾ ವರದಿಗಳಿಗೆ ಸಹಿ ಹಾಕಿ, ಮೀಸಲಿಟ್ಟು ೩೦ ದಿನಗಳ ಒಳಗೆ ಮಗುವನ್ನು ಒಪ್ಪಿಕೊಳ್ಳಬೇಕು. ನೀವು ಹೀಗೆ ಮಾಡಲು ವಿಫಲವಾದಲ್ಲಿ ನಿಮ್ಮ ಹೆಸರನ್ನು ವರಿಷ್ಠತ ಪಟ್ಟಿಯ ಕೊನೆಯಲ್ಲಿ ಸೇರಿಸಲಾಗುತ್ತದೆ, ಮತ್ತು ಮಗುವಿನ ಹೆಸರು ಹಿಂತೆಗೆದುಕೊಳ್ಳಲಾಗುತ್ತದೆ. ನೀವು ಮಗುವನ್ನು ಖುದ್ದಾಗಿ ಭೇಟಿ ನೀಡಿ, ಅದರ ವೈದ್ಯಕೀಯ ತಪಾಸಣಾ ವರದಿಯನ್ನು ವೈದ್ಯರಿಂದ ಪುನರಾವಲೋಕನ ಮಾಡಿಸಬಹುದು.

ಹಂತ ೪: ಮಗುವನ್ನು ದತ್ತಕ್ಕೆ ಕೊಡಲು ಯಾವುದೇ ಆಕ್ಷೇಪಣೆ ಇಲ್ಲವೆಂದು ಸಂಬಂಧಪಟ್ಟ ಅಧಿಕಾರಿಗಳಿಂದ ಸಿಕ್ಕ ಪ್ರಮಾಣಪತ್ರವನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದ ಮೇಲೆ ಅಪ್ಲೋಡ್ ಮಾಡಲಾಗುತ್ತದೆ.

ಹಂತ ೫: ನಿಮಗೆ ಆಕ್ಷೇಪಣೆ ಇಲ್ಲವೆಂಬುದರ ಪ್ರಮಾಣಪತ್ರ ಸಿಕ್ಕ ಮೇಲೆ, ಮತ್ತು ನ್ಯಾಯಾಲಯದಿಂದ ದತ್ತು ಸ್ವೀಕೃತಿಯ ಆದೇಶ ಸಿಗುವ ತನಕ, ದತ್ತು-ಪೂರ್ವ ಅನಾಥಾಲಯಕ್ಕೆ ಮಗುವನ್ನು ಕರೆದೊಯ್ಯಬೇಕಾಗುತ್ತದೆ. ಮಗು ನಿಮ್ಮ ಜೊತೆ ಶಾಶ್ವತವಾಗಿ ಇರಬಹುದು, ಮತ್ತು ಅದು ನಿಮ್ಮ ಸಂಪೂರ್ಣ ಜವಾಬ್ದಾರಿ ಎಂದು ಕೆಳಗಿನ ಪ್ರಕ್ರಿಯೆ ಆದ ಮೇಲೆ ಆದೇಶ ಹೊರಡಿಸಲಾಗುತ್ತದೆ:

  • ಮಗುವಿಗೆ ಪಾಸ್ಪೋರ್ಟ್ ಮತ್ತು ವೀಸಾ ಸಿಕ್ಕಾಗ
  • ನ್ಯಾಯಾಲಯದ ಆದೇಶ ಹೊರಡಿಸಿದಾಗ

ಹಂತ ೬: ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅರ್ಜಿ ಸಲ್ಲಿಸುತ್ತಾರೆ. ನ್ಯಾಯಾಲಯದ ಪ್ರಕ್ರಿಯೆ ಖಾಸಗಿಯಾಗಿ ನಡೆಸಿ, ನೀವು ದತ್ತು ಸ್ವೀಕೃತಿ ಅರ್ಜಿ ಸಲ್ಲಿಸಿದ ೨ ತಿಂಗಳುಗಳ ಒಳಗೆ ವಿಲೇವಾರಿ ಮಾಡಲಾಗುತ್ತದೆ.

ಹಂತ ೭: ನೀವು ಭಾರತಕ್ಕೆ ಬಂದು, ದತ್ತು ಸ್ವೀಕೃತಿ ಆದೇಶ ಹೊರಡಿಸಿದ ೨ ತಿಂಗಳುಗಳೊಳಗೆ ಮಗುವನ್ನು ಕರೆದೊಯ್ಯಬೇಕು. ಅದಾದ ಮೇಲೆ, ಕೆಳಗಿನ ಪ್ರಕ್ರಿಯೆ ನಡೆಯುತ್ತದೆ:

  • ನ್ಯಾಯಾಲಯದಿಂದ ಬಂದ ದತ್ತು ಸ್ವೀಕೃತಿ ಆದೇಶ ಸಿಕ್ಕು ೩ ಕೆಲಸದ ದಿನಗಳೊಳಗೆ ಸಮಂಜಸ ಅಧಿಕಾರಿಗಳಿಂದ ಅನುಸರಣೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
  • ಧೃಡಪಡಿಸಲಾದ ದತ್ತು ಸ್ವೀಕೃತಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವಲಸೆ ಅಧಿಕಾರಿಗಳಂತಹ ಬೇರೆ-ಬೇರೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುತ್ತಾರೆ.
  • ಅಧಿಕಾರಿಗಳು ಮಗುವಿಗೆ ಭಾರತೀಯ ಪಾಸ್ಪೋರ್ಟ್, ಹುಟ್ಟು ಪ್ರಮಾಣಪತ್ರ, ಮತ್ತು ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್ (ಬೇಕಾದಲ್ಲಿ) ಸಿಗಲು ಸಹಾಯ ಮಾಡುತ್ತಾರೆ.

ಹಂತ ೮: ದತ್ತು ಸ್ವೀಕೃತಿಯ ಪ್ರಗತಿಯನ್ನು ನಿರ್ಣಯಿಸಲು ಸಂಬಂಧಪಟ್ಟ ಅಧಿಕಾರಿಗಳು, ಅರ್ಧ ವಾರ್ಷಿಕವಾಗಿ ದತ್ತು ಸ್ವೀಕೃತಿಯಾದ ಮೇಲೆ ೨ ವರ್ಷಗಳ ಕಾಲ ಅಧ್ಯಯನ ನಡೆಸುತ್ತಾರೆ. ಏನಾದರೂ ಸಮಸ್ಯೆಗಳು ಎದುರಾದಲ್ಲಿ ಸಮಾಲೋಚನೆ ನೀಡಲಾಗುತ್ತದೆ. ದತ್ತು ಸ್ವೀಕೃತಿಯ ನಂತರ ತೊಂದರೆಗಳು ಉಂಟಾದಲ್ಲೂ ದತ್ತು ಸ್ವೀಕೃತಿಯನ್ನು ರದ್ದು ಗೊಳಿಸಿ, ಮಗುವನ್ನು ಪುನಃ ಇನ್ನೋರ್ವ ಭಾವೀ ದತ್ತು ತಂದೆ-ತಾಯಂದಿರಿಗೆ ದತ್ತು ಕೊಡಲು ಯೋಗ್ಯವೆಂದು ಘೋಷಿಸಲಾಗುತ್ತದೆ.

ಮುಸ್ಲಿಂ ಮದುವೆಯಲ್ಲಿ ಮೆಹೆರ್/ಡೊವರ್

ಮುಸ್ಲಿಂ ಮದುವೆಯ ಸಮಾರಂಭದಲ್ಲಿ, ಒಂದು ನಿರ್ದಿಷ್ಟ ಮೊತ್ತ ಅಥವಾ ಆಸ್ತಿಯನ್ನು ನಿಮ್ಮ ಗಂಡ ನಿಮಗೆ ಕೊಡಬೇಕೆಂದು ನಿಶ್ಚಯಿಸಲಾಗುತ್ತದೆ. ಈ ಹಣದ ಮೊತ್ತ ಅಥವಾ ಆಸ್ತಿಯನ್ನು ಮೆಹೆರ್ ಅಥವಾ ಡೊವರ್ ಎಂದು ಕರೆಯುತ್ತಾರೆ. ಸಾಂಪ್ರದಾಯಿಕವಾಗಿ, ಮೆಹೆರ್ ಹೆಂಡತಿಗೆ ಅತ್ಯಾವಶ್ಯಕವಿರುವ ಸಂದರ್ಭದಲ್ಲಿ ಒಪಯೋಗಿಸಲು ಕಾಯ್ದಿರಿಸಿದ ಹಣದ ಮೊತ್ತ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ವಿಚ್ಛೇದನದ ಸಮಯದಲ್ಲಿ, ಅಥವಾ ಗಂಡನ ಮರಣದ ಸಮಯದಲ್ಲಿ.

ಮದುವೆಯ ಸಂದರ್ಭದಲ್ಲಿ ಒಂದು ನಿರ್ದಿಷ್ಟವಾದ ಮೊತ್ತವನ್ನು ನಿಗದಿಪಡಿಸದಿದ್ದರೂ, ನಿಮಗೆ ಮೆಹೆರ್ ಪಡೆಯುವ ಹಕ್ಕಿದೆ. ಈ ಹಣದ ಮೊತ್ತವನ್ನು, ಮದುವೆಯ ಸಮಯದಲ್ಲಿ ಭಾರಿ ಮೊತ್ತವಾಗಿ ನಿಮಗೆ ಕೊಡಬಹುದು, ಅಥವಾ ಕಂತುಗಳಲ್ಲಿ ಕೊಡಬಹುದು. ಉದಾಹರಣೆಗೆ, ಅರ್ಧ ಮದುವೆಯ ಸಮಯದಲ್ಲಿ, ಮತ್ತು ಇನ್ನರ್ಧ ವಿಚ್ಛೇದನ ಅಥವಾ ಗಂಡನ ಮರಣದ ಸಮಯದಲ್ಲಿ.

ನಿಮ್ಮ ವಿಚ್ಛೇದನ ಪೂರ್ಣಗೊಂಡು, ಇದ್ದತ್ ಸಮಯಾವಧಿ ಪೂರ್ಣಗೊಂಡು, ನಿಮಗೆ ನಿಮ್ಮ ಗಂಡನಿಂದ ಇನ್ನೂ ಮೆಹೆರ್ ಸಿಕ್ಕಿಲ್ಲವೆಂದರೆ, ಅವರು ಆಗ ನಿಮಗೆ ಅದನ್ನು ಕೊಡಲೇಬೇಕಾಗುತ್ತದೆ.

ಹಿಂದೂ ವಿವಾಹ ಕಾಯಿದೆಯಡಿ ವಿಚ್ಛೇದನದ ನಂತರ ಪುನರ್ವಿವಾಹ

ನಿಮಗೆ ವಿಚ್ಛೇದನದ ನಂತರ ಪುನರ್ವಿವಾಹವಾಗುವುದ್ದಿದ್ದಲ್ಲಿ, ಕೋರ್ಟಿನ ಅಂತಿಮ ತೀರ್ಪಿನ ನಂತರ ಕನಿಷ್ಠ ೯೦ ದಿನಗಳವರೆಗೆ ಕಾಯಬೇಕಾಗುತ್ತದೆ. ನಿಮ್ಮ ಸಂಗಾತಿಗೆ ಕೋರ್ಟಿನ ತೀರ್ಪಿನ ವಿರುದ್ಧ ಮನವಿ ಸಲ್ಲಿಸಲು ಸಮಯ ಸಿಗಲೆಂದು ಈ ನಿಯಮ ಕಾನೂನಿನಡಿಯಲ್ಲಿದೆ.

ಕಾನೂನಿನಡಿಯಲ್ಲಿ, ವಿಚ್ಛೇದನವಾದ ತಕ್ಷಣವೇ ನೀವು ಈ ಕೆಳಕಂಡ ಸಂದರ್ಭಗಳಲ್ಲಿ ಪುನರ್ವಿವಾಹವಾಗಬುದಾಗಿದೆ:

  • ನಿಮ್ಮ ಸಂಗಾತಿಯು ವಿಚ್ಛೇದನದ ತೀರ್ಪಿನ ವಿರುದ್ಧ ಮನವಿ ಸಲ್ಲಿಸಿದ್ದು, ಆ ಮನವಿ ವಜಾಗೊಳಿಸಲಾಗಿದೆ.
  • ವಿಚ್ಛೇದನದ ತೀರ್ಪಿನ ವಿರುದ್ಧ ಮನವಿ ಸಲ್ಲಿಸುವ ಹಕ್ಕು ಇಲ್ಲದಿದ್ದಾಗ.
  • ನೀವು ಮತ್ತು ನಿಮ್ಮ ಸಂಗಾತಿ ವಿಚ್ಛೇದನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು (ಉದಾಹರಣೆಗೆ: ಮಕ್ಕಳು, ಆಸ್ತಿ, ಇತ್ಯಾದಿ) ಬಗೆಹರಿಸಿ, ಇನ್ನು ಯಾವ ಪ್ರಕರಣಗಳನ್ನೂ ದಾಖಲಿಸುವುದಿಲ್ಲ ಎಂದು ನಿರ್ಧರಿಸಿದ್ದಾಗ.

ಈ ಬಗ್ಗೆ ದಯವಿಟ್ಟು ವಕೀಲರನ್ನು ವಿಚಾರಿಸಿ.

ಈ ಕಾನೂನಿನ ಅಡಿಯಲ್ಲಿ ಅಂತರ-ಧರ್ಮೀಯ ವಿವಾಹಗಳನ್ನು ನೋಂದಾಯಿಸುವ ಪ್ರಕ್ರಿಯೆ


ವಿಶೇಷ ವಿವಾಹಗಳನ್ನು ನೋಂದಾಯಿಸುವ ಪ್ರಕ್ರಿಯೆ ಹೀಗಿದೆ:-
 ಈ ಕಾನೂನಿನ ಅಡಿಯಲ್ಲಿ ವಿವಾಹವನ್ನು ನೆರವೇರಿಸಬೇಕಿದ್ದಲ್ಲಿ, ವಿವಾಹ ಮಾಡಿಕೊಳ್ಳುವ ಉಭಯ ಪಕ್ಷಗಾರರು ಸಂಬಂಧಿಸಿದ ಜಿಲ್ಲೆಯ ವಿವಾಹ ಅಧಿಕಾರಿಗೆ ಲಿಖಿತ ರೂಪದಲ್ಲಿ ನೋಟೀಸ್ ನೀಡತಕ್ಕದ್ದು. ಹೀಗೆ ನೋಟೀಸು ನೀಡುವ ಪಕ್ಷಗಾರರಲ್ಲಿ ಕನಿಷ್ಟ ಒಬ್ಬರಾದರೂ ನೋಟೀಸಿನ ದಿನಾಂಕದಿಂದ ಕನಿಷ್ಟ 30 ದಿನಗಳ ಹಿಂದೆ ಅಂತಹ ಜಿಲ್ಲೆಯಲ್ಲಿ ವಾಸಮಾಡಿರತಕ್ಕದ್ದು.

 ವಿವಾಹ ಅಧಿಕಾರಿಯು ಅಂತಹ ಎಲ್ಲ ನೋಟೀಸುಗಳನ್ನು ಕಛೇರಿಯ ದಾಖಲೆಯಲ್ಲಿ ಸಂಗ್ರಹಿಸಿಡುತ್ತಾರೆ ಮತ್ತು ಅಂತಹ ನೋಟೀಸುಗಳ ದೃಢೀಕೃತ ಪ್ರತಿಯೊಂದನ್ನು “ವಿವಾಹ ನೋಟೀಸ್ ಪುಸ್ತಕ” ದಲ್ಲಿಡಲಾಗುತ್ತದೆ.. ಈ ಪುಸ್ತಕವನ್ನು ಯಾವುದೇ ವ್ಯಕ್ತಿಯು ಯುಕ್ತ ಸಮಯದಲ್ಲಿ ಉಚಿತವಾಗಿ ಪರೀಕ್ಷಿಸಲು ಅವಕಾಶವಿದೆ.

 ವಿವಾಹ ಅಧಿಕಾರಿಯು ಅಂತಹ ನೋಟೀಸಿನ ಪ್ರತಿಯನ್ನು ತನ್ನ ಕಛೇರಿಯಲ್ಲಿ ಸಾರ್ವಜನಿಕರ ಗಮನ ಸೆಳೆಯುವ ಸ್ಥಳದಲ್ಲಿ ಪ್ರಕಟಿಸುತ್ತಾರೆ. ವಿವಾಹ ಮಾಡಿಕೊಳ್ಳುತ್ತಿರುವ ಉಭಯ ಪಕ್ಷಗಾರರ ಪೈಕಿ ಯಾರೂ ಕೂಡ ವಿವಾಹ ಅಧಿಕಾರಿ ಕಛೇರಿಯ ಜಿಲ್ಲೆಯಲ್ಲಿ ಶಾಶ್ವತವಾಗಿ ವಾಸವಾಗಿಲ್ಲದ ಪ್ರಕರಣಗಳಲ್ಲಿ, ಪಕ್ಷಗಾರರು ಯಾವ ಜಿಲ್ಲೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೋ ಆ ಜಿಲ್ಲೆಯ ವಿವಾಹ ಅಧಿಕಾರಿಗೂ ಸಹ ವಿವಾಹದ ನೋಟಿಸಿನ ಪ್ರತಿಯೊಂದನ್ನುಕಳುಹಿಸುತ್ತಾರೆ. ಆ ಅಧಿಕಾರಿಯು ನೋಟೀಸನ್ನು
ತನ್ನ ಕಛೇರಿಯಲ್ಲಿ ಸಾರ್ವಜನಿಕರ ಗಮನ ಸೆಳೆಯುವ ಸ್ಥಳದಲ್ಲಿ ಪ್ರಕಟಿಸುತ್ತಾರೆ.

 ವಿವಾಹ ನೆರವೇರುವುದಕ್ಕೆ ಮುನ್ನ ವಿವಾಹ ಅಧಿಕಾರಿಗಳ ಸಮ್ಮುಖದಲ್ಲಿ ಮೂವರು ಸಾಕ್ಷಿಗಳು ಘೋಷಣಾ ಪತ್ರವೊಂದಕ್ಕೆ ರುಜು ಮಾಡತಕ್ಕದ್ದು. ವಿವಾಹ ಅಧಿಕಾರಿಗಳೂ ಕೂಡ ಈ ಘೋಷಣಾ ಪತ್ರಕ್ಕೆ ಸಹಿಹಾಕುತ್ತಾರೆ. ಈ ಘೋಷಣೆಯ ನಮೂನೆಯನ್ನು ಈ ಕಾನೂನಿನ ಮೂರನೇ ಅನುಬಂಧದಲ್ಲಿ ನೀಡಲಾಗಿದೆ.

 ವಿವಾಹ ನೆರವೇರಿದ ನಂತರ ವಿವಾಹ ಅಧಿಕಾರಿಯು ವಿವಾಹ ಪ್ರಮಾಣಪತ್ರ ಪುಸ್ತಕದಲ್ಲಿ ಪ್ರಮಾಣಪತ್ರವೊಂದನ್ನು ನಮೂದಿಸುತ್ತಾರೆ. ಈ ಪ್ರಮಾಣಪತ್ರಕ್ಕೆ ವಿವಾಹ ಮಾಡಿಕೊಳ್ಳುತ್ತಿರುವ ಉಭಯ ಪಕ್ಷಗಾರರು ಮತ್ತು ಮೇಲ್ಕಂಡ ಮೂವರು ಸಾಕ್ಷಿಗಳು ಸಹ ರುಜುಮಾಡುತ್ತಾರೆ. ಶಾಸನಬದ್ಧವಾಗಿ ವಿವಾಹವು ಜರುಗಿದೆ ಮತ್ತು ಸಾಕ್ಷಿಗಳ ಸಹಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಸಮರ್ಪಕ ನಿಯಮಗಳನ್ನು ಪಾಲಿಸಲಾಗಿದೆ ಎಂಬುದಕ್ಕೆ ಈ ಪ್ರಮಾಣಪತ್ರವು ಪ್ರಶ್ನಾತೀತ ಸಾಕ್ಷ್ಯಾಧಾರ.

 ತಮ್ಮ ವಿವಾಹವನ್ನು ನೋಂದಣಿ ಮಾಡಬೇಕೆಂದು ವಿವಾಹ ಮಾಡಿಕೊಳ್ಳುತ್ತಿರುವ ಉಭಯ ಪಕ್ಷಗಾರರು ಸಹಿ ಮಾಡಿರುವ ಅರ್ಜಿಯನ್ನು ಸ್ವೀಕರಿಸಿದನಂತರ, ವಿವಾಹ ಅಧಿಕಾರಿಯು ಸಾರ್ವಜನಿಕ ಪ್ರಕಟಣೆಯನ್ನು ನೀಡಿ, ಆಕ್ಷೇಪಣೆ ಸಲ್ಲಿಸಲು ಮೂವತ್ತು ದಿನಗಳ ಗಡುವು ನೀಡಿ, ಆ ಸಮಯದಲ್ಲಿ ಯಾವುದಾದರೂ ಆಕ್ಷೇಪಣೆಗಳು ಬಂದಲ್ಲಿ ಅವುಗಳನ್ನು ಪರಿಗಣಿಸುತ್ತಾರೆ.

 ಸೆಕ್ಷನ್ 15ರ ಎಲ್ಲ ಷರತ್ತುಗಳನ್ನು ಪಾಲಿಸಲಾಗಿದೆ ಎಂದು ಈ ಅಧಿಕಾರಿಗೆ ಮನವರಿಕೆಯಾದ ನಂತರ, ವಿವಾಹ ಪ್ರಮಾಣಪತ್ರ ಪುಸ್ತಕದಲ್ಲಿ ಅವರು ಪ್ರಮಾಣಪತ್ರವನ್ನು ನಮೂದಿಸುತ್ತಾರೆ. ಈ ಪ್ರಮಾಣಪತ್ರಕ್ಕೆ ವಿವಾಹ ಮಾಡಿಕೊಳ್ಳುತ್ತಿರುವ ಉಭಯ ಪಕ್ಷಗಾರರು ಮತ್ತು ಮೇಲ್ಕಂಡ ಮೂವರು ಸಾಕ್ಷಿಗಳು ರುಜುಮಾಡುತ್ತಾರೆ.

ಹಿಂದೂ ದತ್ತು ಸ್ವೀಕೃತಿಯ ಪ್ರಕ್ರಿಯೆ

ಹಿಂದೂ ದತ್ತು ಸ್ವೀಕೃತಿ ಕಾನೂನಿನಡಿಯಲ್ಲಿ ದತ್ತು ಪಡೆದುಕೊಳ್ಳಲು ನಿಗದಿತ ಪ್ರಕ್ರಿಯೆ ಇಲ್ಲ. ನೀವು ಯಾವುದೇ ನಿರ್ದೇಶನಗಳನ್ನು ಪಾಲಿಸುವಂತಿಲ್ಲ, ಆದರೆ ದತ್ತು ಪತ್ರವನ್ನು ಕಾರ್ಯಗತಗೊಳಿಸಬೇಕಾಗುತ್ತದೆ. ದತ್ತು ಪಾತ್ರದ ಬಗ್ಗೆ ಹೆಚ್ಚು ಮಾಹಿತಿಗೆ ನಿಮ್ಮ ವಕೀಲರನ್ನು ಸಂಪರ್ಕಿಸಿ.

ನೀವು ಪಾಲಕರು/ಪೋಷಕರು ಆಗಿದ್ದರೆ:

ಪಾಲಕರು/ಪೋಷಕರಿಗೆ ಮಗುವನ್ನು ದತ್ತಕ್ಕೆ ತೆಗೆದುಕೊಳ್ಳಲು/ಕೊಡಲು ನ್ಯಾಯಾಲಯದ ಅನುಮತಿ ಕೆಳಗಿನ ಸಂದರ್ಭಗಳಲ್ಲಿ ಬೇಕಾಗುತ್ತದೆ:

  • ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಸತ್ತುಹೋಗಿದ್ದರೆ
  • ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಸಂಪೂರ್ಣವಾಗಿ ಲೋಕವನ್ನು ತ್ಯಜಿಸಿದ್ದರೆ
  • ಮಗುವನ್ನು ತಂದೆ ಮತ್ತು ತಾಯಿ ಇಬ್ಬರೂ ತ್ಯಜಿಸಿದ್ದಾಗ
  • ಸಂಬಂಧಪಟ್ಟ ನ್ಯಾಯಾಲಯವು ತಂದೆ ಮತ್ತು ತಾಯಿ ಇಬ್ಬರನ್ನೂ ಮಾನಸಿಕವಾಗಿ ಅಸ್ವಸ್ಥರೆಂದು ಘೋಷಿಸಿದ್ದರೆ
  • ಮಗುವಿನ ತಂದೆ-ತಾಯಿ ಯಾರು ಎಂದು ಗೊತ್ತಿಲ್ಲದಿದ್ದಾಗ