ಈ ಕಾನೂನಿನ ಅಡಿಯಲ್ಲಿ ಅಂತರ-ಧರ್ಮೀಯ ವಿವಾಹಗಳನ್ನು ನೋಂದಾಯಿಸುವ ಪ್ರಕ್ರಿಯೆ

ಕೊನೆಯ ಅಪ್ಡೇಟ್ Jul 22, 2022


ವಿಶೇಷ ವಿವಾಹಗಳನ್ನು ನೋಂದಾಯಿಸುವ ಪ್ರಕ್ರಿಯೆ ಹೀಗಿದೆ:-
 ಈ ಕಾನೂನಿನ ಅಡಿಯಲ್ಲಿ ವಿವಾಹವನ್ನು ನೆರವೇರಿಸಬೇಕಿದ್ದಲ್ಲಿ, ವಿವಾಹ ಮಾಡಿಕೊಳ್ಳುವ ಉಭಯ ಪಕ್ಷಗಾರರು ಸಂಬಂಧಿಸಿದ ಜಿಲ್ಲೆಯ ವಿವಾಹ ಅಧಿಕಾರಿಗೆ ಲಿಖಿತ ರೂಪದಲ್ಲಿ ನೋಟೀಸ್ ನೀಡತಕ್ಕದ್ದು. ಹೀಗೆ ನೋಟೀಸು ನೀಡುವ ಪಕ್ಷಗಾರರಲ್ಲಿ ಕನಿಷ್ಟ ಒಬ್ಬರಾದರೂ ನೋಟೀಸಿನ ದಿನಾಂಕದಿಂದ ಕನಿಷ್ಟ 30 ದಿನಗಳ ಹಿಂದೆ ಅಂತಹ ಜಿಲ್ಲೆಯಲ್ಲಿ ವಾಸಮಾಡಿರತಕ್ಕದ್ದು.

 ವಿವಾಹ ಅಧಿಕಾರಿಯು ಅಂತಹ ಎಲ್ಲ ನೋಟೀಸುಗಳನ್ನು ಕಛೇರಿಯ ದಾಖಲೆಯಲ್ಲಿ ಸಂಗ್ರಹಿಸಿಡುತ್ತಾರೆ ಮತ್ತು ಅಂತಹ ನೋಟೀಸುಗಳ ದೃಢೀಕೃತ ಪ್ರತಿಯೊಂದನ್ನು “ವಿವಾಹ ನೋಟೀಸ್ ಪುಸ್ತಕ” ದಲ್ಲಿಡಲಾಗುತ್ತದೆ.. ಈ ಪುಸ್ತಕವನ್ನು ಯಾವುದೇ ವ್ಯಕ್ತಿಯು ಯುಕ್ತ ಸಮಯದಲ್ಲಿ ಉಚಿತವಾಗಿ ಪರೀಕ್ಷಿಸಲು ಅವಕಾಶವಿದೆ.

 ವಿವಾಹ ಅಧಿಕಾರಿಯು ಅಂತಹ ನೋಟೀಸಿನ ಪ್ರತಿಯನ್ನು ತನ್ನ ಕಛೇರಿಯಲ್ಲಿ ಸಾರ್ವಜನಿಕರ ಗಮನ ಸೆಳೆಯುವ ಸ್ಥಳದಲ್ಲಿ ಪ್ರಕಟಿಸುತ್ತಾರೆ. ವಿವಾಹ ಮಾಡಿಕೊಳ್ಳುತ್ತಿರುವ ಉಭಯ ಪಕ್ಷಗಾರರ ಪೈಕಿ ಯಾರೂ ಕೂಡ ವಿವಾಹ ಅಧಿಕಾರಿ ಕಛೇರಿಯ ಜಿಲ್ಲೆಯಲ್ಲಿ ಶಾಶ್ವತವಾಗಿ ವಾಸವಾಗಿಲ್ಲದ ಪ್ರಕರಣಗಳಲ್ಲಿ, ಪಕ್ಷಗಾರರು ಯಾವ ಜಿಲ್ಲೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೋ ಆ ಜಿಲ್ಲೆಯ ವಿವಾಹ ಅಧಿಕಾರಿಗೂ ಸಹ ವಿವಾಹದ ನೋಟಿಸಿನ ಪ್ರತಿಯೊಂದನ್ನುಕಳುಹಿಸುತ್ತಾರೆ. ಆ ಅಧಿಕಾರಿಯು ನೋಟೀಸನ್ನು
ತನ್ನ ಕಛೇರಿಯಲ್ಲಿ ಸಾರ್ವಜನಿಕರ ಗಮನ ಸೆಳೆಯುವ ಸ್ಥಳದಲ್ಲಿ ಪ್ರಕಟಿಸುತ್ತಾರೆ.

 ವಿವಾಹ ನೆರವೇರುವುದಕ್ಕೆ ಮುನ್ನ ವಿವಾಹ ಅಧಿಕಾರಿಗಳ ಸಮ್ಮುಖದಲ್ಲಿ ಮೂವರು ಸಾಕ್ಷಿಗಳು ಘೋಷಣಾ ಪತ್ರವೊಂದಕ್ಕೆ ರುಜು ಮಾಡತಕ್ಕದ್ದು. ವಿವಾಹ ಅಧಿಕಾರಿಗಳೂ ಕೂಡ ಈ ಘೋಷಣಾ ಪತ್ರಕ್ಕೆ ಸಹಿಹಾಕುತ್ತಾರೆ. ಈ ಘೋಷಣೆಯ ನಮೂನೆಯನ್ನು ಈ ಕಾನೂನಿನ ಮೂರನೇ ಅನುಬಂಧದಲ್ಲಿ ನೀಡಲಾಗಿದೆ.

 ವಿವಾಹ ನೆರವೇರಿದ ನಂತರ ವಿವಾಹ ಅಧಿಕಾರಿಯು ವಿವಾಹ ಪ್ರಮಾಣಪತ್ರ ಪುಸ್ತಕದಲ್ಲಿ ಪ್ರಮಾಣಪತ್ರವೊಂದನ್ನು ನಮೂದಿಸುತ್ತಾರೆ. ಈ ಪ್ರಮಾಣಪತ್ರಕ್ಕೆ ವಿವಾಹ ಮಾಡಿಕೊಳ್ಳುತ್ತಿರುವ ಉಭಯ ಪಕ್ಷಗಾರರು ಮತ್ತು ಮೇಲ್ಕಂಡ ಮೂವರು ಸಾಕ್ಷಿಗಳು ಸಹ ರುಜುಮಾಡುತ್ತಾರೆ. ಶಾಸನಬದ್ಧವಾಗಿ ವಿವಾಹವು ಜರುಗಿದೆ ಮತ್ತು ಸಾಕ್ಷಿಗಳ ಸಹಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಸಮರ್ಪಕ ನಿಯಮಗಳನ್ನು ಪಾಲಿಸಲಾಗಿದೆ ಎಂಬುದಕ್ಕೆ ಈ ಪ್ರಮಾಣಪತ್ರವು ಪ್ರಶ್ನಾತೀತ ಸಾಕ್ಷ್ಯಾಧಾರ.

 ತಮ್ಮ ವಿವಾಹವನ್ನು ನೋಂದಣಿ ಮಾಡಬೇಕೆಂದು ವಿವಾಹ ಮಾಡಿಕೊಳ್ಳುತ್ತಿರುವ ಉಭಯ ಪಕ್ಷಗಾರರು ಸಹಿ ಮಾಡಿರುವ ಅರ್ಜಿಯನ್ನು ಸ್ವೀಕರಿಸಿದನಂತರ, ವಿವಾಹ ಅಧಿಕಾರಿಯು ಸಾರ್ವಜನಿಕ ಪ್ರಕಟಣೆಯನ್ನು ನೀಡಿ, ಆಕ್ಷೇಪಣೆ ಸಲ್ಲಿಸಲು ಮೂವತ್ತು ದಿನಗಳ ಗಡುವು ನೀಡಿ, ಆ ಸಮಯದಲ್ಲಿ ಯಾವುದಾದರೂ ಆಕ್ಷೇಪಣೆಗಳು ಬಂದಲ್ಲಿ ಅವುಗಳನ್ನು ಪರಿಗಣಿಸುತ್ತಾರೆ.

 ಸೆಕ್ಷನ್ 15ರ ಎಲ್ಲ ಷರತ್ತುಗಳನ್ನು ಪಾಲಿಸಲಾಗಿದೆ ಎಂದು ಈ ಅಧಿಕಾರಿಗೆ ಮನವರಿಕೆಯಾದ ನಂತರ, ವಿವಾಹ ಪ್ರಮಾಣಪತ್ರ ಪುಸ್ತಕದಲ್ಲಿ ಅವರು ಪ್ರಮಾಣಪತ್ರವನ್ನು ನಮೂದಿಸುತ್ತಾರೆ. ಈ ಪ್ರಮಾಣಪತ್ರಕ್ಕೆ ವಿವಾಹ ಮಾಡಿಕೊಳ್ಳುತ್ತಿರುವ ಉಭಯ ಪಕ್ಷಗಾರರು ಮತ್ತು ಮೇಲ್ಕಂಡ ಮೂವರು ಸಾಕ್ಷಿಗಳು ರುಜುಮಾಡುತ್ತಾರೆ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.