ಸಂಗಾತಿಯು ನಿಮ್ಮನ್ನು ಬಿಟ್ಟು ಹೋಗಿದ್ದಲ್ಲಿ ಹಿಂದೂ ವಿಚ್ಛೇದನ

ನಿಮ್ಮ ಸಂಗಾತಿಯು ನಿಮ್ಮನ್ನು ಬಿಟ್ಟು ಹೋಗಿದ್ದಲ್ಲಿ ನೀವು ವಿಚ್ಛೇದನ ಪಡೆಯಬಹುದು. ಇದನ್ನುವೈವಾಹಿಕ ಜೀವನವನ್ನು ತೊರೆದು ಹೋಗುವುದು/ಪರಿತ್ಯಾಗ ಮಾಡುವುದು ಎಂದೂ ಎನ್ನಬಹುದು.

ಬಿಟ್ಟು ಹೋಗುವ ತತ್ಕ್ಷಣದ ಪರಿಣಾಮ:

ನಿಮ್ಮ ಸಂಗಾತಿಯು, ನಿಮ್ಮ ಒಪ್ಪಿಗೆ ಇಲ್ಲದೆ, ಎಂದೂ ಹಿಂದಿರುಗಿ ಬರದ ಉದ್ದೇಶದಿಂದ ನಿಮ್ಮನ್ನು ಬಿಟ್ಟು ಹೋದರೆ ಅದನ್ನು ಕಾನೂನಿನಡಿಯಲ್ಲಿ ವೈವಾಹಿಕ ಜೀವನವನ್ನು ಪರಿತ್ಯಾಗ ಮಾಡುವುದು ಎಂದು ಎನ್ನುತ್ತಾರೆ. ಇದನ್ನು ಆಯಾ ಪ್ರಕರಣಗಳ ಸಂದರ್ಭಾನುಸಾರ ನಿರ್ಧರಿಸಲಾಗುತ್ತದೆ. ನಿಮ್ಮ ಸಂಗಾತಿಯು, ತಾತ್ಕಾಲಿಕವಾಗಿ, ಅಥವಾ, ಕೋಪದ ಸನ್ನಿವೇಶದಲ್ಲಿ, ನಿಮ್ಮನ್ನು ಶಾಶ್ವತವಾಗಿ ಅಗಲುವ ಉದ್ದೇಶವಿಲ್ಲದೆ ನಿಮ್ಮಿಂದ ದೂರ ಹೋದರೆ, ಅದು ಕಾನೂನಿನಡಿ ವಿಚ್ಛೇದನಕ್ಕೆ ಆಧಾರವಾಗದು.

ಉದಾಹರಣೆಗೆ, ನಿಮ್ಮ ಗಂಡ ನಿಮ್ಮ ಜೊತೆ ಜಗಳವಾಡಿ ಕೋಪದಿಂದ ಮನೆ ಬಿಟ್ಟು ಹೊರಗೆ ಹೋದರೆ, ಅದು ಕಾನೂನಿನಡಿ ವಿವಾಹವನ್ನು ತೊರೆದು ಹೋಗುವುದು ಎಂದು ಎನಿಸಿಕೊಳ್ಳುವುದಿಲ್ಲ.

ನಿಮ್ಮನ್ನು ನಿಮ್ಮ ಸಂಗಾತಿ ತೊರೆದು ಹೋಗುವ ಹಾಗೆ ನೀವೇ ಮಾಡುವುದು:

ಆದಾಗ್ಯೂ, ಯಾವ ಸಂವೇದನಾಶೀಲ ವ್ಯಕ್ತಿಯೂ ಸಹ ನಿಮ್ಮ ಜೊತೆ ಇರಲಾರ ಎಂಬ ಪರಿಸ್ಥಿತಿಯನ್ನು ನೀವೇ ತಂದೊಡ್ಡಿಲ್ಲ ಎಂದು ಪರಿಶೀಲಿಸುವುದು ಇಂತಹ ಪ್ರಕರಣಗಳಲ್ಲಿ ಬಹಳ ಮುಖ್ಯವಾಗುತ್ತದೆ. ನೀವೇ ಇಂತಹ ಪರಿಸ್ಥಿತಿಯನ್ನು ಹುಟ್ಟಿಸಿದ್ದಲ್ಲಿ, ಕೋರ್ಟು ನಿಮ್ಮ ಸಂಗಾತಿಯು ವಿವಾಹವನ್ನು ತ್ಯಜಿಸಿ ಹೋದರು ಎಂಬ ಆಧಾರದ ಮೇಲೆ ನಿಮ್ಮ ವಿಚ್ಛೇದನದ ಅರ್ಜಿ ಸ್ವೀಕರಿಸುವುದಿಲ್ಲ.

ವಿವಾಹವನ್ನು ಪರಿತ್ಯಜಿಸುವ ಬೇರೆ ರೀತಿಗಳು:

ನಿಮ್ಮನ್ನು ಒಮ್ಮೆಲೇ ಬಿಟ್ಟುಹೋಗುವ ಕ್ರಿಯೆಯಲ್ಲದೆ, ಕಾಲಾಂತರದಲ್ಲಿ ನಿಮ್ಮ ಸಂಗಾತಿಯ ಹಲವಾರು ನಡವಳಿಕೆಗಳ ಪುನರಾವರ್ತನೆಯೂ ಸಹ ವೈವಾಹಿಕ ಪರಿತ್ಯಾಗ ಎಂದು ಕರೆಯಲ್ಪಡಬಹುದು.

ನಿಮ್ಮ ಸಂಗಾತಿಯು ಕಾಲಾಂತರದಲ್ಲಿ ನಿಮ್ಮ ಹಾಗು ನಿಮ್ಮ ನೆಂಟರ/ಸ್ನೇಹಿತರ ಸಂಪರ್ಕ ನಿಲ್ಲಿಸಿದ್ದಲ್ಲಿ, ಅಥವಾ, ನಿಮ್ಮ ಜೊತೆ ವಾಸಿಸಿದ್ದರೂ ಸಹ, ನಿಮ್ಮ / ನಿಮ್ಮ ಕುಟುಂಬದವರೊಂದಿಗೆ ಮಾತು ಬಿಟ್ಟಿದ್ದರೆ, ಅಥವಾ ವೈವಾಹಿಕ ಜೀವನದಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದರೆ, ಆರ್ಥಿಕವಾಗಿ ಮನೆಯ ಖರ್ಚು-ವೆಚ್ಚದಲ್ಲಿ ಏನೂ ಸಹಾಯ ಮಾಡದಿದ್ದಲ್ಲಿ, ಈ ಎಲ್ಲ ನಡವಳಿಕೆಗಳಿಗೆ ಕಾನೂನು ವೈವಾಹಿಕ ಪರಿತ್ಯಾಗ ಎಂದು ಅರ್ಥೈಸುತ್ತದೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ಸಂಗಾತಿಯು ನಿಮ್ಮನ್ನು ದೈಹಿಕವಾಗಿ ಬಿಟ್ಟು ಹೋಗಿರಬೇಕು ಎಂದೇನಿಲ್ಲ. ಆಯಾ ಪ್ರಕರಣಗಳ ಸಂದರ್ಭಾನುಸಾರ ಕೋರ್ಟು ವೈವಾಹಿಕ ಪರಿತ್ಯಾಗವು ಇಂತಹ ನಡವಳಿಕೆ ಶುರುವಾದಾಗಿನಿಂದ ಪ್ರಾರಂಭವಾಗಿದೆ ಎಂದು ನಿರ್ಧರಿಸಬಹುದು. ನ್ಯಾಯಾಲಯವು ಎಲ್ಲ ಸಂದರ್ಭ-ಸನ್ನಿವೇಶಗಳನ್ನು ಪರಿಶೀಲಿಸಿ ವಿಚ್ಛೇದನವನ್ನು ನೀಡುತ್ತದೆ.

ವೈವಾಹಿಕ ಪರಿತ್ಯಾಗದ ಸಮಯಾವಧಿ:

ಪರಿತ್ಯಾಗವನ್ನು ವಿಚ್ಛೇದನದ ಆಧಾರವನ್ನಾಗಿಸುವುದಾದರೆ:

  • ನಿಮ್ಮ ಸಂಗಾತಿಯು ನಿಮ್ಮನ್ನು ತ್ಯಜಿಸಿ ಕನಿಷ್ಠ ಎರಡು ವರ್ಷಗಳಾಗಿರಬೇಕು
  • ಈ ಎರಡು ವರ್ಷಗಳ ಕಾಲ ನಿರಂತರವಾಗಿರಬೇಕು

ಕ್ರಿಶ್ಚಿಯನ್ ಕಾನೂನಿನಡಿ ಅಲ್ಪವಯಸ್ಕರು ಹೇಗೆ ಮದುವೆಯಾಗಬಹುದು?

ಕ್ರಿಶ್ಚಿಯನ್ ಕಾನೂನಿನ ಪ್ರಕಾರ ಯಾರು ೨೧ರ ಕೆಳಗಿದ್ದು, ವಿಧವೆ/ವಿಧುರರಲ್ಲವೋ, ಅವರು ಅಲ್ಪವಯಸ್ಕರು. ಒಂದು ವೇಳೆ ಮದುವೆ ಆಗಲಿಚ್ಛಿಸುವ ಒಬ್ಬರು ಅಲ್ಪವಯಸ್ಕರಿದ್ದರೆ, ಅವರ ತಂದೆಯ ಅನುಮತಿ ಬೇಕಾಗುತ್ತದೆ. ತಂದೆ ಜೀವಂತವಿಲ್ಲದಿದ್ದರೆ, ರಕ್ಷಕರ, ಮತ್ತು ರಕ್ಷಕರಿಲ್ಲದಿದ್ದರೆ ತಾಯಿಯ ಅನುಮತಿ ಬೇಕಾಗುತ್ತದೆ. ಒಂದು ವೇಳೆ ಇವರ್ಯಾರೂ ಮದುವೆಯ ಸಮಯದಲ್ಲಿ ಭಾರತದಲ್ಲಿ ವಾಸಮಾಡುತ್ತಿಲ್ಲವಾದರೆ, ಅವರ ಅನುಮತಿ ಬೇಕಾಗುವುದಿಲ್ಲ.

ಆದಾಗ್ಯೂ, ಬಾಲ್ಯ ವಿವಾಹ ನಿಷೇಧ ಕಾಯಿದೆಯ ಪ್ರಕಾರ ಎಲ್ಲ ಮಕ್ಕಳ (೧೮ರ ಕೆಳಗಿನವರು) ಮದುವೆಗಳು, ಅವರ ಆಯ್ಕೆಯಂತೆ ಅನೂರ್ಜಿತವಾಗಿವೆ. ಕಾನೂನಿನ ಪ್ರಕಾರ, ಮಕ್ಕಳು ವಯಸ್ಕರಾದ ಎರಡು ವರ್ಷಗಳ ಒಳಗೆ ಮದುವೆಯನ್ನು ರದ್ದುಗೊಳಿಸಲು ಕೋರ್ಟಿಗೆ ಮನವಿ ಸಲ್ಲಿಸಬಹುದು.

ಪರವಾನಗಿ ಪಡೆದ ಧರ್ಮ ಸಚಿವರಿಂದ, ಅಥವಾ ಅವರ ಉಪಸ್ಥಿತಿಯಲ್ಲಿ ನೆರವೇರಿಸುವ ಮದುವೆಯ ಕಾರ್ಯವಿಧಾನ:

ಅಲ್ಪವಯಸ್ಕರು ಕಾನೂನಿನಡಿ ಮದುವೆಯಾಗಬೇಕೆಂದಲ್ಲಿ, ಧರ್ಮ ಸಚಿವರು ಕೆಳಗಿನ ಕಾರ್ಯವಿಧಾನ ಅನುಸರಿಸುತ್ತಾರೆ:

  • ೧. ಧರ್ಮ ಸಚಿವರು ಅಲ್ಪವಯಸ್ಕರಿಂದ ಮದುವೆಯಾಗಬಯಸುವ ಸೂಚನೆ ಪಡೆದಲ್ಲಿ ಅದನ್ನು ಜಿಲ್ಲಾ ವಿವಾಹ ಕುಲಸಚಿವರಿಗೆ ಕಳಿಸಬೇಕು.
  • ೨. ಇದಾದ ಮೇಲೆ, ಆ ಸೂಚನೆಯನ್ನು ಆ ಜಿಲ್ಲೆಯ ಇನ್ನೆಲ್ಲ ವಿವಾಹ ಕುಲಸಚಿವರಿಗೆ ಕಳಿಸಲಾಗುತ್ತದೆ, ಹಾಗು ಅವರ ಕಚೇರಿಗಳಲ್ಲಿನ ಸಾರ್ವಜನಿಕ ಸ್ಥಳದಲ್ಲಿ, ಎಲ್ಲರಿಗೂ ಕಾಣಿಸುವಂತೆ ಪ್ರದರ್ಶಿಸಲಾಗುತ್ತದೆ.
  • ೩. ಮದುವೆಗೆ ಮನ್ನಣೆ ಕೊಡುವ ಅಧಿಕಾರ ಯಾರಿಗಿದೆಯೋ, ಅವರು ಮದುವೆಗೆ ಒಪ್ಪದಿದ್ದರೆ, ಲಿಖಿತ ರೂಪದಲ್ಲಿ ಅವರ ತಿರಸ್ಕಾರವನ್ನು ಧರ್ಮ ಸಚಿವರಿಗೆ ಸಲ್ಲಿಸಬೇಕು. ಈ ಸಂದರ್ಭದಲ್ಲಿ, ಆ ಧರ್ಮ ಸಚಿವರು ಸಮರ್ಪಕ ವಿಚಾರಣೆ ನಡೆಸದೆ ವಿವಾಹ ಪ್ರಮಾಣ ಪತ್ರವನ್ನು ಕೊಡಲಾರರು. ಇಂತಹ ಆಕ್ಷೇಪಣೆ ವಿವಾಹ ಸೂಚನೆ ಪಡೆದ ಪ್ರಮಾಣ ಪತ್ರ ಪಡೆಯುವ ಮುನ್ನವೇ ವ್ಯಕ್ತ ಪಡಿಸಬೇಕು.
  • ೪. ಯಾವ ಆಕ್ಷೇಪಣೆಯೂ ಇಲ್ಲದಿದ್ದರೂ ಕೂಡ, ಧರ್ಮ ಸಚಿವರು ಪ್ರಮಾಣ ಪತ್ರ ನೀಡಲು, ಮದುವೆಯಾಗಬಯಸುವ ಸೂಚನೆ ಪಡೆದು ೧೪ ದಿನಗಳ ವರೆಗೆ ಕಾಯಬಹುದು. ೫. ವಿವಾಹ ಪ್ರಮಾಣ ಪತ್ರ ಒಮ್ಮೆ ಕೊಟ್ಟ ಮೇಲೆ ಮದುವೆಯ ಸಮಾರಂಭ ಮತ್ತು ನೋಂದಣಿಯ ಕಾರ್ಯವಿಧಾನ ಮೇಲ್ಕಂಡಂತೆ ಇರುತ್ತದೆ.

ವಿವಾಹ ಕುಲಸಚಿವರಿಂದ ಅಥವಾ ಅವರ ಉಪಸ್ಥಿತಿಯಲ್ಲಿ ಮದುವೆ ನೆರವೇರಿಸುವ ಕಾರ್ಯವಿಧಾನ:

ಅಲ್ಪವಯಸ್ಕರು ಕಾನೂನುಬದ್ಧವಾಗಿ ಮದುವೆಯಾಗಬಯಸಲು, ವಿವಾಹ ಕುಲಸಚಿವರು ಕೆಳಗಿನ ಕಾರ್ಯವಿಧಾನವನ್ನು ಪಾಲಿಸುತ್ತಾರೆ:

  • ೧. ಅಲ್ಪವಯಸ್ಕರು ಮದುವೆಯಾಗಬಯಸುವ ಸೂಚನೆಯನ್ನು ವಿವಾಹ ಕುಲಸಚಿವರಿಗೆ ಸಲ್ಲಿಸಿದಾಗ ಅವರು ಆ ಜಿಲ್ಲೆಯ ಇನ್ನೆಲ್ಲ ವಿವಾಹ ಕುಲಸಚಿವರಿಗೆ ಆ ಸೂಚನೆಯನ್ನು ಕಳಿಸುತ್ತಾರೆ, ಮತ್ತು ಅವರೆಲ್ಲರ ಕಚೇರಿಗಳ ಸಾರ್ವಜನಿಕ ಸ್ಥಳದಲ್ಲಿ, ಎಲ್ಲರಿಗೂ ಕಾಣಿಸುವಂತೆ ಆ ಸೂಚನೆಯನ್ನು ಪ್ರದರ್ಶಿಸಲಾಗುತ್ತದೆ.
  • ೨. ಮದುವೆಗೆ ಮನ್ನಣೆ ಕೊಡುವ ಅಧಿಕಾರ ಯಾರಿಗಿದೆಯೋ, ಅವರು ಮದುವೆಗೆ ಒಪ್ಪದಿದ್ದರೆ, ಲಿಖಿತ ರೂಪದಲ್ಲಿ ಅವರ ತಿರಸ್ಕಾರವನ್ನು ವಿವಾಹ ಕುಲಸಚಿವರಿಗೆ ಸಲ್ಲಿಸಬೇಕು. ಈ ಸಂದರ್ಭದಲ್ಲಿ, ಆ ಕುಲಸಚಿವರು ಸಮರ್ಪಕ ವಿಚಾರಣೆ ನಡೆಸದೆ ವಿವಾಹ ಪ್ರಮಾಣ ಪತ್ರವನ್ನು ಕೊಡಲಾರರು. ಇಂತಹ ಆಕ್ಷೇಪಣೆ ವಿವಾಹ ಸೂಚನೆ ಪಡೆದ ಪ್ರಮಾಣ ಪತ್ರ ಪಡೆಯುವ ಮುನ್ನವೇ ವ್ಯಕ್ತ ಪಡಿಸಬೇಕು.
  • ೩. ಒಂದು ವೇಳೆ ಒಪ್ಪಿಗೆಯನ್ನು ಕೊಡದಿದ್ದವರು ಮಾನಸಿಕವಾಗಿ ಅಸ್ವಸ್ಥವಾಗಿದ್ದರೆ, ಅಥವಾ (ತಂದೆಯಲ್ಲದವರು) ಅನ್ಯಾಯವಾಗಿ ಒಪ್ಪಿಗೆಯನ್ನು ನೀಡದಿದ್ದರೆ, ಮದುವೆಯಾಗಬಯಸುವ ದಂಪತಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಮುಂಬೈ, ಚೆನ್ನೈ, ಮತ್ತು ಕೋಲ್ಕತಾದಲ್ಲಿ ವಾಸಿಸುವ ದಂಪತಿಗಳು ಆಯಾ ಉಚ್ಚ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಬಹುದು, ಮತ್ತಿನ್ನಿತರರು ಅವರವರ ಜಿಲ್ಲಾ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಬಹುದು.
  • ೪. ಇನ್ನು, ವಿವಾಹ ಕುಲಸಚಿವರಿಗೆ ಒಪ್ಪಿಗೆ ನೀಡದಿದ್ದ ವ್ಯಕ್ತಿಯ ಅಧಿಕಾರದ ಮೇಲೆ ಸಂದೇಹವಿದ್ದಲ್ಲಿ, ಅವರು ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು.
  • ೫. ಯಾವ ಆಕ್ಷೇಪಣೆಯೂ ಇಲ್ಲದಿದ್ದರೂ ಕೂಡ, ವಿವಾಹ ಕುಲಸಚಿವರು ಪ್ರಮಾಣ ಪತ್ರ ನೀಡಲು, ಮದುವೆಯಾಗಬಯಸುವ ಸೂಚನೆ ಪಡೆದು ೧೪ ದಿನಗಳ ವರೆಗೆ ಕಾಯಬಹುದು.
  • ೬. ವಿವಾಹ ಪ್ರಮಾಣ ಪತ್ರ ಒಮ್ಮೆ ಕೊಟ್ಟ ಮೇಲೆ ಮದುವೆಯ ಸಮಾರಂಭ ಮತ್ತು ನೋಂದಣಿಯ ಕಾರ್ಯವಿಧಾನ ಮೇಲ್ಕಂಡಂತೆ ಇರುತ್ತದೆ.

 

ಸಾಗರೋತ್ತರ ಭಾರತೀಯ ನಾಗರಿಕರು, ಅಥವಾ ಭಾರತದಲ್ಲಿ ನೆಲೆಸಿದ ವಿದೇಶಿಯರು ದತ್ತು ಸ್ವೀಕಾರ ಮಾಡುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)

ನೀವು ಸಾಗರೋತ್ತರ ಭಾರತೀಯ ನಾಗರೀಕರಾಗಿದ್ದಲ್ಲಿ, ಅಥವಾ ರೋಢಿಗತವಾಗಿ ಭಾರತದಲ್ಲಿ ನೆಲೆಸಿದ್ದ ವಿದೇಶೀಯರಾಗಿದ್ದು, ಮಗುವನ್ನು ದತ್ತು ಪಡೆಯಬೇಕೆಂದರೆ ಕೆಳಕಂಡ ಪ್ರಕ್ರಿಯೆಯನ್ನು ಪಾಲಿಸಿ:

ಹಂತ ೧: ನೀವು ದತ್ತು ಪಡೆಯಲು ಅರ್ಹರಿದ್ದೀರೋ ಇಲ್ಲವೋ ಎಂಬುದನ್ನು ನಿಗದಿ ಪಡಿಸಬೇಕು. ನೀವು ಸಾಗರೋತ್ತರ ಭಾರತೀಯ ನಾಗರೀಕರಾಗಿದ್ದಲ್ಲಿ, ಅಥವಾ ರೋಢಿಗತವಾಗಿ ಭಾರತದಲ್ಲಿ ನೆಲೆಸಿದ್ದ ವಿದೇಶೀಯರಾಗಿದ್ದಲ್ಲಿ ಮಾತ್ರ ಈ ಪ್ರಕ್ರಿಯೆಯ ಮೂಲಕ ಮಗುವನ್ನು ದತ್ತು ಪಡೆಯಬಹುದು.

ಹಂತ ೨: ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರದ ಜಾಲತಾಣದ ಮೇಲೆ ನೀವು ನಿಮ್ಮ ಹೆಸರನ್ನು ನೋಂದಾಯಿಸಬೇಕು. ಹೀಗೆ ಮಾಡಿದಾಗ ಆ ಜಾಲತಾಣ ನಿಮ್ಮನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಗೆ ಮರುನಿರ್ದೇಶಿಸುತ್ತದೆ. ಇಲ್ಲಿ ನಿಮ್ಮ ಅರ್ಜಿಯನ್ನು ನೀವು ಸಲ್ಲಿಸಬೇಕು.

ಹಂತ ೩: ನಿಮ್ಮ ಅರ್ಜಿಯ ಜೊತೆ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕು:

  • ನಿಮ್ಮ ಭಾವಚಿತ್ರ
  • ಪಾನ್ ಕಾರ್ಡ್
  • ನಿಮ್ಮ ಜನ್ಮ ಪುರಾವೆ (ಮದುವೆಯಾದ ದಂಪತಿಯಾದಲ್ಲಿ ನಿಮ್ಮ ಸಂಗಾತಿಯ ಜನ್ಮ ಪುರಾವೆ ಕೂಡ ಬೇಕು)
  • ನಿವಾಸದ ಪುರಾವೆ (ಆಧಾರ್ ಕಾರ್ಡ್/ವೋಟರ್ ಕಾರ್ಡ್/ಪಾಸ್ಪೋರ್ಟ್/ವಿದ್ಯುತ್ ಬಿಲ್/ದೂರವಾಣಿ ಬಿಲ್)
  • ಹಿಂದಿನ ವರ್ಷದ ಆದಾಯದ ಪುರಾವೆ (ಸಂಬಳ ಚೀಟಿ/ಸರ್ಕಾರ ನೀಡುವ ಆದಾಯ ಪ್ರಮಾಣಪತ್ರ/ ಆದಾಯ ತೆರಿಗೆ ರಿಟರ್ನ್ಸ್)
  • ನಿಮಗೆ ಯಾವುದೇ ದೀರ್ಘಕಾಲದ, ಸಾಂಕ್ರಾಮಿಕ, ಅಥವಾ ಮಾರಣಾಂತಿಕ ರೋಗವಿಲ್ಲೆಂದು ಮತ್ತು ನೀವು ದತ್ತು ಪಡೆಯಲ್ಲೂ ಯೋಗ್ಯವಿದ್ದೀರಿ ಎಂದು ಘೋಷಿಸುವ ವೈದ್ಯಕೀಯ ಪ್ರಮಾಣಪತ್ರ (ಮದುವೆಯಾಗಿದ್ದಲ್ಲಿ ನಿಮ್ಮ ಸಂಗಾತಿಯ ವೈದ್ಯಕೀಯ ಪ್ರಮಾಣಪತ್ರವೂ ಬೇಕು)
  • ವಿವಾಹ ಪ್ರಮಾಣಪತ್ರ/ವಿಚ್ಛೇದನಾ ತೀರ್ಪು/ವೈಯಕ್ತಿಕ ಕಾನೂನಿನಡಿ ವಿಚ್ಛೇದನ ಪಡೆದಿರುವಂತೆ ನ್ಯಾಯಾಲಯದ ಘೋಷಣೆ ಅಥವಾ ಶಪಥಪತ್ರ/ ಸಂಗಾತಿಯ ಮರಣ ಪ್ರಮಾಣಪತ್ರ – ಸಂದರ್ಭಾನುಸಾರ.

ಹಂತ ೪: ವಿಶೇಷ ದತ್ತು ಸ್ವೀಕಾರ ಸಂಸ್ಥೆ ನಿಮ್ಮ ಮನೆಗೆ ಭೇಟಿ ನೀಡಿ ನಿಮ್ಮ ಜೀವನದ ಬಗ್ಗೆ ಅಧ್ಯಯನ ನಡೆಸುತ್ತದೆ. ಇದರ ಅನುಗುಣವಾಗಿ ನಿಮ್ಮ ಅರ್ಜಿಯನ್ನು ಸ್ವೀಕರಿಸಬಹುದು, ಅಥವಾ ತಿರಸ್ಕರಿಸಬಹುದು. ಫಲಿತಾಂಶವನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ.

ಹಂತ ೫: ನಿಮ್ಮ ಅರ್ಜಿ ಸ್ವೀಕಾರಗೊಂಡಲ್ಲಿ, ನಿಮ್ಮ ವರಿಷ್ಟತೆಯ ಅನುಗುಣವಾಗಿ, ದತ್ತು ಸ್ವೀಕಾರ ಸಂಸ್ಥೆಯು, “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದ ಮೂಲಕ ನಿಮಗೆ ೩ ಮಕ್ಕಳ ನಡುವೆ ಆಯ್ಕೆ ಮಾಡಲು ಅನುಮತಿ ನೀಡುತ್ತದೆ. ನೀವು ಇವರಲ್ಲಿ ಒಂದು ಮಗುವನ್ನು ೪೮ ಗಂಟೆಗಳಲ್ಲಿ ದತ್ತು ತೆಗೆದುಕೊಳ್ಳಲು ಮೀಸಲಿಡಬಹುದು. ಇದರ ನಂತರ ನಿಮ್ಮ ಮತ್ತು ಮಗುವಿನ ಹೊಂದಾಣಿಕೆಯ ಸೂಕ್ತತೆಯನ್ನು ಕಂಡುಹಿಡಿಯಲು ಮೀಟಿಂಗ್ ನಡೆಸಲಾಗುತ್ತದೆ. ಈ ಪ್ರಕ್ರಿಯೆ ೨೦ ದಿನಗಳ ವರೆಗೆ ನಡೆಯುತ್ತದೆ. ಒಂದು ವೇಳೆ ನೀವು ಮಗುವನ್ನು ಒಪ್ಪಿಕೊಳ್ಳದಿದ್ದರೆ, ನಿಮ್ಮ ಹೆಸರನ್ನು ವರಿಷ್ಠತಾ ಪಟ್ಟಿಯ ಕೊನೆಯಲ್ಲಿ ಸೇರಿಸಲಾಗುತ್ತದೆ.

ಹಂತ ೬: ವಿಶೇಷ ದತ್ತು ಸ್ವೀಕಾರ ಸಂಸ್ಥೆಯು ದತ್ತು ಸ್ವೀಕೃತಿಯ ಪ್ರಕ್ರಿಯೆಯನ್ನು ಅರ್ಧವಾರ್ಷಿಕ ವರದಿಗಳ ಮೂಲಕ, ೨ ವರ್ಷಗಳ ಕಾಲ ದಾಖಲಿಸುತ್ತದೆ. ಏನಾದರೂ ಸಮಸ್ಯೆಗಳು ಎದುರಾದಲ್ಲಿ ಸಮಾಲೋಚನೆ ನೀಡಲಾಗುತ್ತದೆ. ದತ್ತು ಸ್ವೀಕೃತಿಯ ನಂತರ ತೊಂದರೆಗಳು ಉಂಟಾದಲ್ಲೂ ದತ್ತು ಸ್ವೀಕೃತಿಯನ್ನು ರದ್ದು ಗೊಳಿಸಿ, ಮಗುವನ್ನು ಪುನಃ ಇನ್ನೋರ್ವ ಭಾವೀ ದತ್ತು ತಂದೆ-ತಾಯಂದಿರಿಗೆ ದತ್ತು ಕೊಡಲು ಯೋಗ್ಯವೆಂದು ಘೋಷಿಸಲಾಗುತ್ತದೆ.

ವೈವಾಹಿಕ ಜವಾಬ್ದಾರಿಗಳನ್ನು ನೆರವೇರಿಸದಿದ್ದಲ್ಲಿ ಮುಸ್ಲಿಂ ವಿಚ್ಛೇದನ

ನಿಮ್ಮ ಗಂಡ ವೈವಾಹಿಕ ಜವಾಬ್ದಾರಿಗಳನ್ನು ಪೂರ್ಣಗೊಳಿಸದಿದ್ದರೆ, ಮುಸ್ಲಿಂ ಕಾನೂನಿನಡಿ ನೀವು ವಿಚ್ಛೇದನ ಪಡೆಯಬಹುದು. ವಿನಾಕಾರಣ, ಕನಿಷ್ಠ ೩ ವರ್ಷಗಳ ಕಾಲ ನಿಮ್ಮ ಗಂಡ ವೈವಾಹಿಕ ಜವಾಬ್ದಾರಿಗಳನ್ನು ನೆರವೇರಿಸದಿದ್ದಲ್ಲಿ, ನಿಮ್ಮ ವಿಚ್ಛೇದನಾ ಅರ್ಜಿಯನ್ನು ಕೋರ್ಟಿಗೆ ಸಲ್ಲಿಸಬಹುದು. ವೈವಾಹಿಕ ಜವಾಬ್ದಾರಿಗಳು ಕೆಳಗಿನಂತಿವೆ:

  • ಲೈಂಗಿಕ ಸಂಭೋಗ
  • ಒಂದೇ ಮನೆಯಲ್ಲಿ ಜೊತೆಗೆ ವಾಸಿಸುವುದು

ಬಾಲ್ಯ ವಿವಾಹದ ದೂರು ನೀಡುವುದು

ಸಂಬಂಧಪಟ್ಟ ಮಗು ಅಥವಾ ಇನ್ಯಾರಾದರೂ ಕೂಡ ಬಾಲ್ಯ ವಿವಾಹದ ವಿರುದ್ಧ ದೂರು ನೀಡಬಹುದು. ಬಾಲ್ಯ ವಿವಾಹ ಈಗಾಗಲೇ ನಡೆದಿದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಯಾಕೆಂದರೆ ಈ ದೂರು ಮದುವೆಯ ಮುಂಚೆ ಅಥವಾ ಆದಮೇಲೆ ಯಾವಾಗಾದರೂ ದಾಖಲಿಸಬಹುದು. ಕೆಳಕಂಡ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು:

೧೦೯೮ಕ್ಕೆ ಕರೆ ಮಾಡಿ:

೧೦೯೮ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಶುಲ್ಕರಹಿತ ದೂರವಾಣಿ ಸಂಖ್ಯೆಯಾಗಿದೆ. ಇದನ್ನು ಮಕ್ಕಳ ಹಕ್ಕು ಹಾಗು ಸಂರಕ್ಷಣೆಯತ್ತ ಕೆಲಸ ಮಾಡುತ್ತಿರುವ “ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್” ಎಂಬ ಸರ್ಕಾರೇತರ ಸಂಸ್ಥೆ ನಿರ್ವಹಿಸುತ್ತಿದೆ. ಈ ದೂರವಾಣಿ ಸಂಖ್ಯೆಗೆ, ಖುದ್ದಾಗಿ ಮಕ್ಕಳೇ, ಅಥವಾ ಇನ್ಯಾರಾದರೂ ಸಹ ಕರೆ ಮಾಡಿ ಮಾಹಿತಿಯನ್ನು ನೀಡಬಹುದು. ಆದ್ದರಿಂದ ನೀವು ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಕ್ಕಳು, ಅಥವಾ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಈ ದೂರವಾಣಿ ಸಂಖ್ಯೆಯ ಬಗ್ಗೆ ಹೇಳಿದರೆ, ಬಾಲಕಾರ್ಮಿಕ ಪಧ್ಧತಿಯಂತಹ ಅನೈತಿಕ ಚಟುವಟಿಕೆಗಳನ್ನು ನಾವು ನಿಯಂತ್ರಿಸಬಹುದಾಗಿದೆ.

ಪೊಲೀಸ್:

೧೦೦ ಸಂಖ್ಯೆಗೆ ಕರೆ ಮಾಡಿ ನೀವು:

  • ನಡೆಯುತ್ತಿರುವ ಬಾಲ್ಯ ವಿವಾಹದ ಬಗ್ಗೆ ದೂರು ನೀಡಬಹುದು, ಅಥವಾ
  • ನಡೆಯಲಿರುವ ಬಾಲ್ಯ ವಿವಾಹದ ಬಗ್ಗೆ ಕೂಡ ದೂರು ನೀಡಬಹುದು. ಇದಲ್ಲದೆ, ಖುದ್ದಾಗಿ ಪೊಲೀಸ್ ಠಾಣೆಗೆ ಹೋಗಿ ಎಫ್.ಐ.ಆರ್.ಅನ್ನು ದಾಖಲಿಸಬಹುದು.

ಬಾಲ್ಯ ವಿವಾಹ ನಿಷೇಧಾಧಿಕಾರಿಗಳು:

ನೀವು ಸ್ಥಳೀಯ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೂ ದೂರು ನೀಡಬಹುದು. ಅವರು ಅಪರಾಧಿಗಳ ವಿರುದ್ಧ ತಕ್ಷಣವೇ ಕ್ರಮ ಕೈತೆಗೆದುಕೊಳ್ಳುತ್ತಾರೆ.

ಮಕ್ಕಳ ಕಲ್ಯಾಣ ಸಮಿತಿ:

ನೀವು ಬಾಲಾಪರಾಧಿ ನ್ಯಾಯಕ್ಕೆ ಸಂಬಂಧಪಟ್ಟ ಕಾನೂನಿನಡಿ ರಚಿಸಿದ ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿಯಲ್ಲೂ ತಮ್ಮ ದೂರು ಸಲ್ಲಿಸಬಹುದು. ಉದಾಹರಣೆಗೆ, ಕರ್ನಾಟಕದಲ್ಲಿ ಆಯಾ ಜಿಲ್ಲೆಗೆ ಸಂಬಂಧಿಸಿದ ಸಮಿತಿಗಳನ್ನು ನೀವು ಈ ಪಟ್ಟಿಯ ಪ್ರಕಾರ ಸಂಪರ್ಕಿಸಬಹುದು.

ಕೋರ್ಟಿನಲ್ಲಿ ದೂರು ದಾಖಲಿಸುವುದು:

ನೀವು ನೇರವಾಗಿ ನ್ಯಾಯಿಕ ದಂಡಾಧಿಕಾರಿ (ಮೊದಲನೇ ಶ್ರೇಣಿ) (Judicial Magistrate First Class), ಅಥವಾ ಮಹಾನಗರ ದಂಡಾಧಿಕಾರಿ (Metropolitan Magistrate) ಗಳ ಬಳಿ ಕೂಡ ದೂರು ಸಲ್ಲಿಸಬಹುದು. ಈ ಸಂದರ್ಭದಲ್ಲಿ, ನ್ಯಾಯಾಲಯವು ಪೊಲೀಸ್ ಅಥವಾ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಸಮಂಜಸ ಕ್ರಮ ಕೈಗೊಳ್ಳಲು ಆದೇಶಿಸುತ್ತದೆ.

ಹಿಂದೂ ವಿವಾಹ ಮತ್ತು ಮಾನಸಿಕ ರೋಗ

ನೀವು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಲ್ಲಿ, ನಿಮ್ಮ ಸಂಗಾತಿಯು ಮಾನಸಿಕ ರೋಗದಿಂದ ಬಳಲುತ್ತಿದ್ದಲ್ಲಿ, ಅದು ವಿಚ್ಛೇದನಕ್ಕೆ ಆಧಾರವಾಗಬಹುದು.

ನೀವು ವಿಚ್ಛೇದನಾ ಅರ್ಜಿ ಈ ಕೆಳಕಂಡ ಸಂದರ್ಭಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬಹುದು:

  • ನಿಮ್ಮ ಸಂಗಾತಿಯು ಗುಣಪಡಿಸಲಾಗದಂತಹ ಮಾನಸಿಕ ರೋಗದಿಂದ ಬಳಲುತ್ತಿದ್ದಲ್ಲಿ
  • ನಿಮ್ಮ ಸಂಗಾತಿಯು ಮಾನಸಿಕ ರೋಗದಿಂದ ಅನಿಯಮಿತವಾಗಿ ಅಥವಾ ನಿರಂತರವಾಗಿ ಬಳಲುತ್ತಿದ್ದು, ಈ ಸಂಗತಿಯಿಂದ ನಿಮಗೆ ಅವರೊಡನೆ ಇರಲು ಸಾಧ್ಯವಿಲ್ಲವಾದಾಗ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಅವರಲ್ಲಿ ಕೆಲವು ಮುಂಗೋಪದ ಅಥವಾ ಸಿಟ್ಟಿನ ನಡತೆಗಳು/ಗುಣಲಕ್ಷಣಗಳು ಇವೆ ಅಂದ ಮಾತ್ರಕ್ಕೆ ಅವರಿಗೆ ಮಾನಸಿಕ ರೋಗವಿದೆ ಎಂದು ಅರ್ಥ ಅಲ್ಲ.

ಯಾವಾಗ ಅವರ ನಡತೆ ಯಾವ ಸಂವೇದನಾಶೀಲ ವ್ಯಕ್ತಿಗೂ ಸಹ ಅವರೊಂದಿಗೆ ಇರದ ಹಾಗೆ ಮಾಡುತ್ತದೆಯೋ, ಆವಾಗ ಮಾನಸಿಕ ರೋಗದ ಆಧಾರದ ಮೇಲೆ ವಿಚ್ಛೇದನ ಬೇಡಬಹುದು.

ನಿಮ್ಮ ಸಂಗಾತಿಯು ಅಸ್ವಸ್ಥ ಮನಸ್ಸಿನಿಂದ ಬಳಲುತ್ತಿದ್ದಾರೋ ಇಲ್ಲವೋ ಎಂದು ಪರೀಕ್ಷಿಸಲು ವೈದ್ಯಕೀಯ ತಪಾಸಣೆಗಾಗಿ ಅವರನ್ನು ಕೊಂಡೊಯ್ಯಬೇಕು ಎಂದು ನ್ಯಾಯಾಲಯವು ನಿರ್ದೇಶಿಸಬೇಕು ಎಂದು ನೀವು ಮನವಿ ಸಲ್ಲಿಸಬಹುದು.

ಎಲ್ಲಿ ಮತ್ತು ಯಾವಾಗ ಕ್ರಿಶ್ಚಿಯನ್ ಮದುವೆಗಳು ನಡೆಯಬಹುದು?

ಮದುವೆಯ ಸಮಯ:

ಕ್ರಿಶ್ಚಿಯನ್ ಮದುವೆಯನ್ನು ಕೇವಲ ಬೆಳಿಗ್ಗೆ ೬ರಿಂದ ಸಂಜೆ ೭ರ ವರೆಗೆ ನೆರವೇರಿಸಬಹುದು. ಆದಾಗ್ಯೂ, ಇಂಗ್ಲೆಂಡ್, ರೋಮ್, ಮತ್ತು ಸ್ಕಾಟ್ಲೆಂಡ್ ಚರ್ಚುಗಳ ಪಾದ್ರಿಗಳು ಅವರವರ ಚರ್ಚುಗಳ ನಿಯಮಗಳು ಮತ್ತು ಸಂಪ್ರದಾಯಗಳನುಸಾರ ಈ ಸಮಯಾವಧಿಯನ್ನು ಮೀರಿ ಮದುವೆಯನ್ನು ನಡೆಸಬಹುದಾಗಿದೆ. ಮತ್ತಿನ್ನು, ಇಂಗ್ಲೆಂಡ್ ಮತ್ತು ರೋಮ್ ಚರ್ಚುಗಳ ಪಾದ್ರಿಗಳು, ಈ ಸಮಯಾವಧಿಯನ್ನು ಮೀರಿ ಮದುವೆಯನ್ನು ನಡೆಸಲು, ಅವರವರ ಧರ್ಮಾಧಿಪತಿಗಳಿಂದ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ.

ಮದುವೆಯ ಸ್ಥಳ:

ಕ್ರಿಶ್ಚಿಯನ್ ಮದುವೆಯನ್ನು ಚರ್ಚಿನಲ್ಲಿ, ವೈಯಕ್ತಿಕ ನಿವಾಸದಲ್ಲಿ, ಅಥವಾ ವಿವಾಹ ಕುಲಸಚಿವರ ಉಪಸ್ಥಿತಿಯಲ್ಲಿ ನೆರವೇರಿಸಬಹುದು. ಆದರೆ, ಇಂಗ್ಲೆಂಡ್ ಚರ್ಚಿನ ಪಾದ್ರಿಗಳಿಂದ ವಿವಾಹ ನಡೆಯುತ್ತಿದ್ದರೆ, ಅದು ಚರ್ಚಿನಲ್ಲಿ ನಡೆಯಬೇಕು. ಒಂದು ವೇಳೆ ೫ ಮೈಲಿ ತ್ರಿಜ್ಯದಲ್ಲಿ ಚರ್ಚುಗಳಿಲ್ಲದಿದ್ದರೆ, ಧರ್ಮಾಧಿಪತಿಗಳಿಂದ ಚರ್ಚಿನ ಪಾದ್ರಿಗಳು ವಿಶೇಷ ಪರವಾನಗಿ ಪಡೆದಿದ್ದರೆ ಈ ನಿಯಮವನ್ನು ಉಲ್ಲಂಘಿಸಬಹುದು.

ಕಾನೂನಿನಡಿ ಅಪರಾಧಗಳು ಮತ್ತು ಶಿಕ್ಷೆಗಳು ಯಾವುವು?

ಕ್ರಿಶ್ಚಿಯನ್ ವಿವಾಹ ಕಾನೂನಿನಡಿ ಅಪರಾಧಗಳು ಕೆಳಗಿನಂತಿವೆ:

೧. ಸುಳ್ಳು ಪ್ರಮಾಣವಚನ ಅಥವಾ ಧೃಢೀಕರಣ ನೀಡುವುದು:

ಯಾರಾದರೂ ಮದುವೆಯಾಗಲು ಸುಳ್ಳು ಪ್ರಮಾಣವಚನ ಅಥವಾ ಧೃಢೀಕರಣ ನೀಡಿದರೆ, ಅಥವಾ ನಕಲಿ ವಿವಾಹ ಸೂಚನೆ/ಪ್ರಮಾಣ ಪತ್ರಕ್ಕೆ ಸಹಿ ಹಾಕಿದರೆ, ಅವರಿಗೆ ಗರಿಷ್ಟ ೩ ವರ್ಷಗಳ ವರೆಗೆ ಸೆರೆಮನೆ ವಾಸ ಮತ್ತು ದಂಡ ವಿಧಿಸಲಾಗುವುದು.

೨. ಅಲ್ಪವಯಸ್ಕರ ಸಂಬಂಧಿತ ಅಪರಾಧಗಳು:

ಯಾರದಾರೂ ಅಲ್ಪವಯಸ್ಕರ ಮದುವೆಗೆ ಒಪ್ಪಿಗೆ ಕೊಡಲು ಅವರಿಗೆ ಹಕ್ಕಿದೆ ಎಂದು ಸುಳ್ಳು ಹೇಳಿದರೆ, ಸುಳ್ಳು ವೇಷಧಾರಣೆಯ ಅಪರಾಧಕ್ಕೆ ತಪ್ಪಿತಸ್ಥರಾಗುತ್ತಾರೆ. ಈ ಅಪರಾಧಕ್ಕೆ

ಶಿಕ್ಷೆ – ೩ ವರ್ಷ ಸೆರೆಮನೆ ವಾಸ, ಅಥವಾ ದಂಡ, ಅಥವಾ ಎರಡೂ.

ಧರ್ಮ ಸಚಿವರು ೧೪ ದಿನಗಳ ಸೂಚನಾ ಸಮಯಾವಧಿಯ ಮೊದಲೇ ಅಲ್ಪವಯಸ್ಕರ ಮದುವೆ ನೆರವೇರಿಸಿದಲ್ಲಿ, ಅವರಿಗೆ ಶಿಕ್ಷೆ – ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ, ಮತ್ತು ದಂಡ.

೩. ಅಧಿಕಾರವಿಲ್ಲದೆ ಮದುವೆಯನ್ನು ನೆರವೇರಿಸುವುದು:

ಯಾರಾದರೂ ಅಗತ್ಯವಾದ ಅಧಿಕಾರವಿಲ್ಲದೆ ಮದುವೆಯನ್ನು ನೆರವೇರಿಸಿದರೆ ಅವರಿಗೆ ಶಿಕ್ಷೆ – ಗರಿಷ್ಟ ೧೦ ವರ್ಷಗಳ ಸೆರೆಮನೆ ವಾಸ ಮತ್ತು ದಂಡ

೪. ನಿಯಮಗಳನ್ನು ಪಾಲಿಸದೆ ಮದುವೆಯನ್ನು ನೆರವೇರಿಸುವುದು:

ಯಾರಾದರೂ ಕ್ರಿಶ್ಚಿಯನ್ ಮದುವೆಯನ್ನು ನಿಗದಿಪಡಿಸಲಾದ ಸಮಯಾವಧಿಯ ಬಾಹಿರವಾಗಿ, ಅಥವಾ ಸಾಕ್ಷಿದಾರರ ಅನುಪಸ್ಥಿತಿಯಲ್ಲಿ ಮದುವೆಯನ್ನು ನೆರವೇರಿಸಿದರೆ, ಅವರಿಗೆ ಶಿಕ್ಷೆ – ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ ಮತ್ತು ದಂಡ.

ವಿವಾಹ ಕುಲಸಚಿವರು ಕೆಳಕಂಡ ಅಪರಾಧಗಳನ್ನು ಮಾಡಿದರೆ ಅವರಿಗೆ ವಿಧಿಸಲಾಗುವ ಶಿಕ್ಷೆ – ಗರಿಷ್ಟ ೫ ವರ್ಷಗಳ ಸೆರೆಮನೆ ವಾಸ ಮತ್ತು ದಂಡ:

  • ೧. ಪೂರ್ವಭಾವಿ ಸೂಚನೆಯಿಲ್ಲದೆ ಮದುವೆ ನೆರವೇರಿಸುವುದು, ಅಥವಾ ಸೂಚನೆ ಪಡೆದ ಪ್ರಮಾಣಪತ್ರವನ್ನು ನೀಡುವುದು
  • ೨. ವಿವಾಹ ಸೂಚನೆ ಸಿಕ್ಕ ಮೇಲೆ ೨ ತಿಂಗಳುಗಳಾದ ನಂತರ ಮದುವೆ ನೆರವೇರಿಸುವುದು
  • ೩. ವಿವಾಹ ಸೂಚನೆ ಸಿಕ್ಕು ೧೪ ದಿನಗಳ ಕಾಲ ತಡೆಯದೆ, ಮತ್ತು ನ್ಯಾಯಾಲಯದ ಆದೇಶಕ್ಕೆ ತಡೆಯದೆ ಅಲ್ಪವಯಸ್ಕರ ಮದುವೆಯನ್ನು ಮಾಡುವುದು
  • ೪. ಒಪ್ಪಿಗೆ ಇಲ್ಲದಿರುವ ಕಾರಣ ವಿವಾಹ ಸೂಚನೆ ಸಿಕ್ಕಿದೆ ಎಂಬ ಪ್ರಮಾಣ ಪತ್ರ ಕೊಡದಿರುವಂತೆ ಅರ್ಜಿ ಸಲ್ಲಿಸಿದ್ದರೂ ಕೂಡ ಇಂತಹ ಪ್ರಮಾಣಪತ್ರವನ್ನು ಕೊಡುವುದು

ತಪ್ಪಾಗಿ ವಿವಾಹ ಪ್ರಮಾಣಪತ್ರವನ್ನು ನೀಡುವುದು:

ಭಾರತೀಯ ಕ್ರಿಶ್ಚಿಯನ್ನರಿಗೆ ಪರವಾನಗಿ ಪಡೆಯದ ವ್ಯಕ್ತಿ ವಿವಾಹ ಪ್ರಮಾಣಪತ್ರ ನೀಡಿದರೆ ಅವರಿಗೆ ಶಿಕ್ಷೆ – ಗರಿಷ್ಟ ೫ ವರ್ಷ ಸೆರೆಮನೆ ವಾಸ ಮತ್ತು ದಂಡ.

ವಿವಾಹ ದಾಖಲಾ ಪುಸ್ತಕವನ್ನು ಅಕ್ರಮವಾಗಿ ತಿದ್ದುವುದು ಅಥವಾ ನಾಶಮಾಡುವುದು:

ಯಾರಾದರೂ ವಿವಾಹ ದಾಖಲಾ ಪುಸ್ತಕದಲ್ಲಿ ತಪ್ಪು ದಾಖಲೆಯನ್ನು ಬರೆಯುವುದು, ಅಕ್ರಮವಾಗಿ ಯಾವುದೇ ದಾಖಲೆಯನ್ನು ತಿದ್ದುವುದು, ಅಥವಾ ಈ ಪುಸ್ತಕವನ್ನು ನಾಶಮಾಡುವುದು ಮಾಡಿದರೆ ಅವರಿಗೆ ಶಿಕ್ಷೆ – ಗರಿಷ್ಟ ೭ ವರ್ಷಗಳ ಸೆರೆಮನೆ ವಾಸ ಮತ್ತು ದಂಡ.

ಈ ಎಲ್ಲ ಮೇಲ್ಕಂಡ ಪ್ರಕರಣಗಳಲ್ಲಿ, ಅಪರಾಧಿಗಳ ವಿರುದ್ಧ ನ್ಯಾಯಾಲಯಗಳಲ್ಲಿ ಕಾನೂನು ಕ್ರಮ ಅಪರಾಧವಾದ ೨ ವರ್ಷಗಳೊಳಗೆ ಶುರುವಾಗಬೇಕು.

ನಿವಾಸಿ ಭಾರತೀಯರಿಂದ ದತ್ತು ಪಡೆಯುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)

ನಿವಾಸಿ ಭಾರತೀಯರಾಗಿ ನೀವು ಭಾರತದೊಳಗೇ ದತ್ತು ಪಡೆಯಲು ಅರ್ಜಿ ಸಲ್ಲಿಸುವುದು ಸಾಮಾನ್ಯ. ನಿಮ್ಮ ದತ್ತು ಸ್ವೀಕೃತಿ ಅರ್ಜಿ ಕೆಳಗಿನ ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ:

ಹಂತ ೧: ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರದ ಜಾಲತಾಣದ ಮೇಲೆ ನೀವು ನಿಮ್ಮ ಹೆಸರನ್ನು ನೋಂದಾಯಿಸಬೇಕು. ಹೀಗೆ ಮಾಡಿದಾಗ ಆ ಜಾಲತಾಣ ನಿಮ್ಮನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಗೆ ಮರುನಿರ್ದೇಶಿಸುತ್ತದೆ. ಇಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಉದ್ಯೋಗ ಮಾಹಿತಿ, ಇತ್ಯಾದಿಗಳನ್ನು ಕೊಡಬೇಕು.

ಹಂತ ೨: ನೋಂದಣಿಯ ನಂತರ ಕೆಲವು ಮುಖ್ಯ ದಾಖಲೆಗಳನ್ನು ನೀವು ಸಲ್ಲಿಸಬೇಕಾಗುತ್ತದೆ. ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಯಲಿ ಇಲ್ಲಿ ಕ್ಲಿಕ್ಕಿಸಿ. ನಿಮ್ಮ ಅರ್ಜಿಯ ನಂತರ, ನಿಮಗೆ ಸ್ವೀಕೃತಿಪತ್ರ ಸಿಗುತ್ತದೆ.

ಹಂತ ೩: ನಿಮ್ಮ ಅರ್ಜಿಯನ್ನು ಸಮಂಜಸ ಮಾಹಿತಿ ಮತ್ತು ದಾಖಲೆಗಳಿಂದ ಸಲ್ಲಿಸಿದ ಮೇಲೆ, ಸ್ವೀಕೃತಿಪತ್ರದ ಮೇಲಿನ ನೋಂದಣಿ ಸಂಖ್ಯೆಯ ಸಹಾಯದಿಂದ ನಿಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

ಹಂತ ೪: ನೀವು ಮಗುವನ್ನು ದತ್ತು ಪಡೆಯಲು ಅರ್ಹರಿದ್ದೀರೋ ಇಲ್ಲವೋ ಎಂದು ಕಂಡು ಹಿಡಿಯಲು, ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರ ಅಥವಾ ವಿಶೇಷ ದತ್ತು ಸ್ವೀಕಾರ ಸಂಸ್ಥೆ ನಿಮ್ಮ ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತದೆ.

ಹಂತ ೫: ನಿಮ್ಮ ಅರ್ಜಿ ಸ್ವೀಕಾರಗೊಳ್ಳಬಹುದು, ಅಥವಾ ತಿರಸ್ಕಾರಗೊಳ್ಳಬಹುದು. ಒಂದು ವೇಳೆ ತಿರಸ್ಕಾರಗೊಂಡಲ್ಲಿ, ಕಾರಣಗಳನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದಲ್ಲಿ ಕೊಡಲಾಗುವುದು, ಮತ್ತು ಇವುಗಳ ವಿರುದ್ಧ ನೀವು ಮಕ್ಕಳ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬಹುದಾಗಿದೆ.

ಹಂತ ೬: ನಿಮ್ಮ ಅರ್ಜಿ ಸ್ವೀಕಾರಗೊಂಡಲ್ಲಿ, ನಿಮ್ಮ ವರಿಷ್ಟತೆಯ ಅನುಗುಣವಾಗಿ, ದತ್ತು ಸ್ವೀಕಾರ ಸಂಸ್ಥೆಯು, “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದ ಮೂಲಕ ನಿಮಗೆ ೩ ಮಕ್ಕಳ ನಡುವೆ ಆಯ್ಕೆ ಮಾಡಲು ಅನುಮತಿ ನೀಡುತ್ತದೆ. ನೀವು ಇವರಲ್ಲಿ ಒಂದು ಮಗುವನ್ನು ೪೮ ಗಂಟೆಗಳಲ್ಲಿ ದತ್ತು ತೆಗೆದುಕೊಳ್ಳಲು ಮೀಸಲಿಡಬಹುದು. ಇದರ ನಂತರ ನಿಮ್ಮ ಮತ್ತು ಮಗುವಿನ ಹೊಂದಾಣಿಕೆಯ ಸೂಕ್ತತೆಯನ್ನು ಕಂಡುಹಿಡಿಯಲು ಮೀಟಿಂಗ್ ನಡೆಸಲಾಗುತ್ತದೆ. ಈ ಪ್ರಕ್ರಿಯೆ ೨೦ ದಿನಗಳ ವರೆಗೆ ನಡೆಯುತ್ತದೆ. ಒಂದು ವೇಳೆ ನೀವು ಮಗುವನ್ನು ಒಪ್ಪಿಕೊಳ್ಳದಿದ್ದರೆ, ನಿಮ್ಮ ಹೆಸರನ್ನು ವರಿಷ್ಠತಾ ಪಟ್ಟಿಯ ಕೊನೆಯಲ್ಲಿ ಸೇರಿಸಲಾಗುತ್ತದೆ.

ಹಂತ ೭: ಮಗುವನ್ನು ಆರಿಸಿಕೊಂಡ ೧೦ ದಿನಗಳೊಳಗೆ ದತ್ತು ಸ್ವೀಕೃತೀ-ಪೂರ್ವ ಅನಾಥಾಲಯಕ್ಕೆ ಮಗುವನ್ನು ಕರೆದೊಯ್ಯಬೇಕು – ಈಗ ನೀವು ಮಗುವಿನ ಸಾಕು ತಂದೆ/ತಾಯಿ ಆಗಿರುತ್ತೀರಿ. ದತ್ತು ಸ್ವೀಕೃತಿ ಮಂಜೂರಾತಿ ಆದೇಶ ನ್ಯಾಯಾಲಯದಿಂದ ಬರುವತನಕ ಈ ಪ್ರಕ್ರಿಯೆ ನಡೆಯುತ್ತದೆ. ಮಗುವನ್ನು ನಿಮ್ಮ ಜೊತೆ ಕರೆದೊಯ್ಯುವ ಮುನ್ನ ಈ ಧೃಢೀಕರಣ ಪಾತ್ರಕ್ಕೆ ಸಹಿ ಹಾಕಬೇಕು.

ಹಂತ ೮: ವಿಶೇಷ ದತ್ತು ಸ್ವೀಕಾರ ಸಂಸ್ಥೆ ಅಥವಾ ಇನ್ನಿತರ ಸಮಂಜಸ ಸಂಸ್ಥೆ ದತ್ತು ಸ್ವೀಕೃತಿ ಆದೇಶಕ್ಕೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುತ್ತದೆ. ನಿಮ್ಮ ಊರಲ್ಲಿ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಇಲ್ಲದಿದ್ದಲ್ಲಿ ಇನ್ನಿತರ ಸಮಾಜಸ ಸಂಸ್ಥೆ ಈ ಕೆಲಸವನ್ನು ಮಾಡುತ್ತದೆ. ಇದಕ್ಕೆ ಸಂಬಂಧಪಟ್ಟ ನ್ಯಾಯಾಲಯದ ಪ್ರಕ್ರಿಯೆ ಖಾಸಗಿಯಾಗಿ ನಡೆದು ನಿಮ್ಮ ಅರ್ಜಿ ಸಲ್ಲಿಸಿದ ದಿಂಡದಿಂದ ೨ ತಿಂಗಳುಗಳ ಒಳಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ತದನಂತರ, ೩ ಕೆಲಸದ ದಿನಗಳೊಳಗೆ ವಿಶೇಷ ದತ್ತು ಸ್ವೀಕಾರ ಸಂಸ್ಥೆಯು ನಿಮ್ಮ ಹೆಸರಿನ ಜೊತೆ, ಮಗುವಿನ ಹುಟ್ಟು ಪ್ರಮಾಣಪತ್ರವನ್ನು ಪಡೆಯುತ್ತದೆ.

ಹಂತ ೯: ಮನೆ ಭೇಟಿ ನೀಡಿ ಅಧ್ಯಯನ ನಡೆಸಿದ ವಿಶೇಷ ದತ್ತು ಸ್ವೀಕಾರ ಸಂಸ್ಥೆಯು, ಮಗುವನ್ನು ದತ್ತು ಕೊಟ್ಟ ನಂತರವೂ ಅರ್ಧ ವಾರ್ಷಿಕವಾಗಿ ೨ ವರ್ಷಗಳ ವರೆಗೆ ದತ್ತು ಸ್ವೀಕೃತಿಯ ಪ್ರಕ್ರಿಯೆ ಮತ್ತು ಪರಿಣಾಮಗಳನ್ನು ದಾಖಲಿಸುತ್ತದೆ. ಏನಾದರೂ ಸಮಸ್ಯೆಗಳು ಎದುರಾದಲ್ಲಿ ಸಮಾಲೋಚನೆ ನೀಡಲಾಗುತ್ತದೆ. ದತ್ತು ಸ್ವೀಕೃತಿಯ ನಂತರ ತೊಂದರೆಗಳು ಉಂಟಾದಲ್ಲೂ ದತ್ತು ಸ್ವೀಕೃತಿಯನ್ನು ರದ್ದು ಗೊಳಿಸಿ, ಮಗುವನ್ನು ಪುನಃ ಇನ್ನೋರ್ವ ಭಾವೀ ದತ್ತು ತಂದೆ-ತಾಯಂದಿರಿಗೆ ದತ್ತು ಕೊಡಲು ಯೋಗ್ಯವೆಂದು ಘೋಷಿಸಲಾಗುತ್ತದೆ.

ಭಾರತೀಯ ನಾಗರಿಕರಿಂದ ವಿದೇಶಿ ಮಗುವಿನ ದತ್ತು ಸ್ವೀಕಾರ (ಧಾರ್ಮಿಕೇತರ ಕಾನೂನು):

ನೀವು ಭಾರತೀಯ ನಾಗರಿಕರಾಗಿ ವಿದೇಶಿ ಮಗುವನ್ನು ದತ್ತು ಪಡೆಯಬೇಕಾದಲ್ಲಿ, ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ ೧: ಮಗುವಿನ ದತ್ತು ಪಡೆಯಲು, ಸಂಬಂಧಪಟ್ಟ ದೇಶದ ಕಾನೂನಾತ್ಮಕ ಔಪಚಾರಿಕತೆಗಳು ಆ ದೇಶದಲ್ಲಿ ನಡೆಯುತ್ತವೆ.

ಹಂತ ೨: ಆ ದೇಶದ ಕಾನೂನಿಗೆ ಸಂಬಂಧಿಸಿದಂತೆ, ಸೂಕ್ತ ಅಧಿಕಾರಿಗಳು ಬೇಕಾದ ದಾಖಲೆಗಳು (ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿ) ಮತ್ತು ಕೆಳಗಿನ ವರದಿಗಳು ಸಿಕ್ಕಾಗ ಮಾತ್ರ ದತ್ತು ಕೊಡುವ ಅನುಮತಿ ನೀಡುತ್ತಾರೆ:

  • ಮನೆ ಅಧ್ಯಯನ ವರದಿ
  • ಮಗು ಅಧ್ಯಯನ ವರದಿ
  • ಮಗುವಿನ ವೈದ್ಯಕೀಯ ತಪಾಸಣೆ ವರದಿ

ಹಂತ ೩: ಭಾರತೀಯ ನಾಗರಿಕರಿಂದ ದತ್ತು ಪಡೆದ, ವಿದೇಶಿ ಪಾಸ್ಪೋರ್ಟ್ ಹೊಂದಿದ ವಿದೇಶಿ ಮಗುವಿಗೆ, ಭಾರತಕ್ಕೆ ಬರಲು ವೀಸಾ ಬೇಕಾಗುತ್ತದೆ. ಈ ವೀಸಾವನ್ನು ಪಡೆಯಲು ಸಂಬಂಧಪಟ್ಟ ದೇಶದಲ್ಲಿನ ಭಾರತೀಯ ಎಂಬೆಸಿಯನ್ನು ಸಂಪರ್ಕಿಸಿ.

ಹಂತ ೪: ದತ್ತು ಪಡೆದ ಮಗುವಿನ ಇಮಿಗ್ರೇಷನ್/ವಲಸೆ ತೆರವು, ಸಂಬಂಧಿತ ದೇಶದಲ್ಲಿನ ಭಾರತೀಯ ರಾಜತಾಂತ್ರಿಕ ಮಿಷನ್ ಮೂಲಕ, ಕೇಂದ್ರೀಯ ಸರ್ಕಾರದ ವಿದೇಶಿಗರ ವಿಭಾಗ, ಗೃಹ ಸಚಿವಾಲಯದಿಂದ ಬರುತ್ತದೆ.

ಗಂಡನಿಗೆ ನಿಮಿರು ದೌರ್ಬಲ್ಯವಿದ್ದರೆ ಮುಸ್ಲಿಂ ವಿಚ್ಛೇದನ

ನಿಮ್ಮ ಗಂಡನಿಗೆ ನಿಮಿರು ದೌರ್ಬಲ್ಯವಿದ್ದಲ್ಲಿ, ಅಥವಾ ಅವರಿಗೆ ಈ ಸಮಸ್ಯೆಯಿದೆ ಎಂದು ನಿಮಗೆ ಮದುವೆಯಾದಾಗಿನಿಂದಲೂ ಕೂಡ ಗೊತ್ತಿದ್ದಲ್ಲಿ, ಮುಸ್ಲಿಂ ಕಾನೂನಿನಡಿ ನೀವು ವಿಚ್ಛೇದನ ಪಡೆಯಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಗಂಡ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬಹುದು:

  • ಅವರ ನಿಮಿರು ದೌರ್ಬಲ್ಯವನ್ನು ಕೋರ್ಟಿನ ಮುಂದೆ ಒಪ್ಪಿಕೊಳ್ಳುವುದು
  • ನಿಮಿರು ದೌರ್ಬಲ್ಯದ ಆರೋಪವನ್ನು ನಿರಾಕರಿಸಿ, ಅವರಿಗೆ ಯಾವುದೇ ತರಹದ ದೈಹಿಕ ಶಕ್ತಿಹೀನತೆ ಇಲ್ಲ ಎಂದು ವಾದಿಸುವುದು
  • ವೈದ್ಯಕೀಯವಾಗಿ ಅವರ ಸಮಸ್ಯೆಯನ್ನು ಗುಣಪಡಿಸಲು ಒಂದು ವರ್ಷದ ಸಮಯವನ್ನು ಕೋರ್ಟಿಗೆ ಅರ್ಜಿ ಸಲ್ಲಿಸಿ ಪಡೆಯಬಹುದು. ಒಂದು ವರ್ಷದ ನಂತರ ಅವರ ನಿಮಿರು ದೌರ್ಬಲ್ಯ ವಾಸಿಯಾಗಿದ್ದಲ್ಲಿ, ನಿಮಗೆ ವಿಚ್ಛೇದನ ಸಿಗುವುದಿಲ್ಲ.

ಬಾಲ್ಯ ವಿವಾಹ ತಡೆಗಟ್ಟಲು ನ್ಯಾಯಾಲಯದ ಅಧಿಕಾರ

ಬಾಲ್ಯ ವಿವಾಹ ನೆರವೇರಲಿದೆ, ಅಥವಾ ನೆರವೇರಿಸಲು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ನಂಬಲರ್ಹ ಮಾಹಿತಿ ನ್ಯಾಯಾಲಯಕ್ಕೆ ಸಿಕ್ಕರೆ, ಕೂಡಲೇ ಸಂಬಂಧಪಟ್ಟ ವ್ಯಕ್ತಿಗಳ ವಿರುಧ್ಧ ಅದು ನಿಷೇಧಾಜ್ಞೆಯನ್ನು ಹೊರಡಿಸಬಲ್ಲದು.

ಆರೋಪಿಗಳು ಈ ನಿಷೇಧಾಜ್ಞೆಯನ್ನು ರದ್ದುಪಡಿಸಲು ಅಥವಾ ಬದಲಾಯಿಸಲು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಬಹುದು. ನ್ಯಾಯಾಲಯವು ಖುದ್ದಾಗಿಯೂ ಕೂಡ ಆಜ್ಞೆಯನ್ನು ಹಿಂತೆಗೆದುಕೊಳ್ಳಬಹುದು ಅಥವಾ ಬದಲಾಯಿಸಬಹುದು.

ಇಂತಹ ನಿಷೇಧಾಜ್ಞೆ ಹೊರಡಿಸಿದ ಬಳಿಕ ಯಾವುದೇ ಬಾಲ್ಯ ವಿವಾಹ ನೆರವೇರಿದಲ್ಲಿ ಅದು ಕಾನೂನಿನ ಕಣ್ಣಿನಲ್ಲಿ ಅಮಾನ್ಯವಾಗಿರುತ್ತದೆ.

ನ್ಯಾಯಾಲಯ ಹಸ್ತಕ್ಷೇಪ ಮಾಡಬಲ್ಲ ಸನ್ನಿವೇಶಗಳು:

ನ್ಯಾಯಾಲಯವು ಬಾಲ್ಯ ವಿವಾಹಗಳಲ್ಲಿ ಈ ಕೆಳಗಿನ ಸಂದರ್ಭಗಳಲ್ಲಿ ಹಸ್ತಕ್ಷೇಪ ಮಾಡಬಹುದು:

  • ಸ್ವಯಂ ಪ್ರೇರಿತವಾಗಿ
  • ಬಾಲ್ಯ ವಿವಾಹ ನಿಷೇಧಾಧಿಕಾರಗಳು ಅಥವಾ ಇನ್ನೋರ್ವ ಸರ್ಕಾರೇತರ ಸಂಸ್ಥೆಯ ದೂರಿನ ಆಧಾರದ ಮೇಲೆ
  • ಅಕ್ಷಯ ತೃತಿಯಾಗಳಂತಹ ಮದುವೆಗೆ ಮಂಗಳಕರ ದಿನಗಳಂದು, ನ್ಯಾಯಾಲಯವೇ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಬಹುದು. ಈ ಸಂದರ್ಭಗಳಲ್ಲಿ, ಬಾಲ್ಯ ವಿವಾಹಗಳನ್ನು ತಡೆಗಟ್ಟಲು, ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಎಲ್ಲ ಅಧಿಕಾರಗಳೂ ಸಹ ನ್ಯಾಯಾಲಯಕ್ಕೆ ಇರುತ್ತವೆ.
  • ನಡೆಯಲಿರುವ ಬಾಲ್ಯ ವಿವಾಹದ ಬಗ್ಗೆ ಯಾವುದೇ ವ್ಯಕ್ತಿಯ ಬಳಿ ವೈಯಕ್ತಿಕ ಮಾಹಿತಿ ಇದ್ದಾಗ

ನ್ಯಾಯಾಲಯವು ಹೊರಡಿಸುವ ಸೂಚನೆ:

ನಿಷೇಧಾಜ್ಞೆಯನ್ನು ಜಾರಿಗೆ ತರುವ ಮುನ್ನ, ನ್ಯಾಯಾಲಯವು ಆರೋಪಿಗಳ ವಿರುಧ್ಧ ಸೂಚನೆಯನ್ನು ಹೊರಡಿಸಬೇಕಾಗುತ್ತದೆ. ಇದು ಅವರಿಗೆ ಪ್ರತಿರಕ್ಷೆ ಮಾಡಿಕೊಳ್ಳಲು ಅವಕಾಶ ನೀಡುವುದಕ್ಕಾಗಿ. ಆದರೆ, ತುರ್ತು ಸಂದರ್ಭಗಳಲ್ಲಿ, ಆರೋಪಿಗಳಿಗೆ ಇಂತಹ ಸೂಚನೆ ನೀಡದೆ ನ್ಯಾಯಾಲಯಗಳು ಬಾಲ್ಯ ವಿವಾಹದ ವಿರುಧ್ಧ ಮಧ್ಯಂತರ ಆದೇಶವನ್ನು ಹೊರಡಿಸಬಹುದು.

ಶಿಕ್ಷೆ:

ನಿಮ್ಮ ವಿರುಧ್ಧ ನ್ಯಾಯಾಲಯವು ತಾತ್ಕಾಲಿಕ ಆದೇಶವನ್ನು ಹೊರಡಿಸಿದ್ದಲ್ಲಿ, ಮತ್ತು ನೀವು ಅದನ್ನು ಅನುಸರಿಸದಿದ್ದಲ್ಲಿ, ನಿಮಗೆ ಗರಿಷ್ಟ ೨ ವರ್ಷಗಳ ಸೆರೆಮನೆ ವಾಸ ಹಾಗು/ಅಥವಾ ಗರಿಷ್ಟ ೧ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲಾಗುವುದು.