ಮಗುವು ಯಾರೊಂದಿಗಾದರೂ ಲೈಂಗಿಕ ಸಂಬಂಧ ಹೊಂದಲು ಸಮ್ಮತಿ ನೀಡಬಹುದೇ?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

ಇಲ್ಲ. ಲೈಂಗಿಕ ಸಂಬಂಧ ಹೊಂದಲು ಸಮ್ಮತಿ ನೀಡುವ ಮಗುವಿನ ಸಾಮರ್ಥ್ಯವನ್ನು ಕಾನೂನು ಗುರುತಿಸುವುದಿಲ್ಲ. ಇದರರ್ಥ ವಯಸ್ಕರು (18 ವರ್ಷಕ್ಕಿಂತ ಮೇಲ್ಪಟ್ಟವರು) ಯಾವುದೇ ರೀತಿಯ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮಗುವನ್ನು (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಕೇಳಿದರೆ, ಮತ್ತು ಮಗು ಸ್ಪಷ್ಟವಾಗಿ ಹೌದು ಎಂದು ಹೇಳಿದರೂ ಅಥವಾ ಅವರು ಸಮ್ಮತಿ ಸೂಚಿಸಿದರೂ, ಈ ಚಟುವಟಿಕೆಯನ್ನು ಕಾನೂನಿನ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ.

ಮಕ್ಕಳ ನಡುವೆ ಸಮ್ಮತಿ

ಇಬ್ಬರು ಮಕ್ಕಳು ಸ್ವಇಚ್ಛೆಯಿಂದ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿದರೆ, ಅದನ್ನು ಸಹ ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಹುಡುಗಿಯರು ಮತ್ತು ಹುಡುಗರಿಗೆ ಸಮ್ಮತಿಯ ವಯಸ್ಸು 18 ವರ್ಷಗಳು. ನಮ್ಮ ವಿವರಣೆ “ಅಪರಾಧಗಳ ಆರೋಪ ಹೊತ್ತಿರುವ ಮಕ್ಕಳು” ನಲ್ಲಿ ಹೆಚ್ಚಿನ ಮಾಹಿತಿಯನ್ನು ಓದಿ.

ಲಿವ್-ಇನ್ ಸಂಬಂಧಗಳು ಕೌಟುಂಬಿಕ ಹಿಂಸೆ ಕಾನೂನಿನಡಿ ಬರುತ್ತವೆಯೇ?

(ಮುನ್ಸೂಚನೆ: ಕೆಳಗೆ ಕೌಟುಂಬಿಕ ಹಿಂಸೆಯ ಬಗ್ಗೆ ಮಾಹಿತಿ ಇದ್ದು, ಇದು ಕೆಲ ಓದುಗರಲ್ಲಿ ಮಾನಸಿಕ ಗೊಂದಲ ಉಂಟು ಮಾಡಬಹುದು)

ನೀವು ನಿಮ್ಮ ಸಂಗಾತಿಯ ಜೊತೆ, ಮದುವೆಯಾಗದೆ, ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೆ, ನೀವು ಲಿವ್-ಇನ್ ಸಂಬಂಧದಲ್ಲಿ ಇದ್ದೀರಿ ಎಂದರ್ಥ. ಒಬ್ಬ ಮದುವೆಯಾಗದ ವಯಸ್ಕ ಸ್ತ್ರೀ ಮತ್ತು ಒಬ್ಬ ಮದುವೆಯಾಗದ ವಯಸ್ಕ ಪುರುಷ ಜೊತೆಗೆ ವಾಸಿಸುತ್ತಿದ್ದರೆ, ಅಥವಾ ಹಿಂದೆ ಯಾವಾಗೋ ಜೊತೆಗೆ ವಾಸಿಸಿದ್ದರೆ, ಅವರ ನಡುವಿನ ಸಂಬಂಧವನ್ನು “ಕೌಟುಂಬಿಕ ಸಂಬಂಧ” ಎಂದು ಪರಿಗಣಿಸಲಾಗುವುದು. ಮದುವೆಗಳಿಗೆ ಹೋಲಿಸಿದರೆ, ಲಿವ್-ಇನ್ ಸಂಬಂಧಗಳನ್ನು ಕಾನೂನು ನಿಯಂತ್ರಿಸುವುದಿಲ್ಲ. ಉದಾಹರಣೆಗೆ, ಲಿವ್-ಇನ್ ಸಂಬಂಧವನ್ನು ಜಾರಿಗೊಳಿಸಲು ಅದನ್ನು ನೋಂದಾಯಿಸಬೇಕಿಲ್ಲ, ಮತ್ತು ಸಂಬಂಧಧಿನದ ಹೊರಬರಲು ವಿಚ್ಛೇದನ ಬೇಕಿಲ್ಲ. ನಿಮಗೆ ಇಷ್ಟ ಬಂದಂತೆ ಸಂಬಂಧವನ್ನು ಅಂತ್ಯಗೊಳಿಸಬಹುದು.

ಲಿವ್-ಇನ್ ಸಂಬಂಧಗಳು “ಮದುವೆಯ ರೀತಿಯಲ್ಲಿ” ಇದ್ದರೆ ಮಾತ್ರ ಅವುಗಳನ್ನು ಕಾನೂನು ಗುರುತಿಸುತ್ತದೆ. ಅಂದರೆ ಆ ಲಿವ್-ಇನ್ ಸಂಬಂಧಗಳಲ್ಲಿ, ಅವು ಕಾನೂನುಬದ್ಧವಾಗಿ ಗುರುತಿಸಲ್ಪಡದಿದ್ದರೂ ಸಹ, ಮದುವೆಯ ಕೆಲವು ಅತ್ಯಗತ್ಯ ಗುಣಲಕ್ಷಣಗಳು ಇರಬೇಕು. ಲಿವ್-ಇನ್ ಸಂಬಂಧಗಳ ಮೇಲೆ ತೀರ್ಪುಗಳನ್ನು ನೀಡುವಾಗ ನ್ಯಾಯಾಲಯಗಳು ಅವುಗಳನ್ನು ಮದುವೆಗಳಿಗೆ ಹೋಲಿಸಿ, ಅವುಗಳಲ್ಲಿ ಮದುವೆಯ ಅತ್ಯಗತ್ಯ ಗುಣಲಕ್ಷಣಗಳು ಇವೆಯೋ ಇಲ್ಲವೋ ಎಂದು ತೀರ್ಮಾನಿಸುತ್ತವೆ.

“ಮದುವೆಯಂತಹ” ಲಿವ್-ಇನ್ ಸಂಬಂಧಗಳು ಕೆಳಗಿನ ಅಂಶಗಳನ್ನು ಹೊಂದಿರುತ್ತವೆ ಎಂದು ಹಲವಾರು ತೀರ್ಪುಗಳಲ್ಲಿ ನ್ಯಾಯಾಲಯಗಳು ಹೇಳಿವೆ:

೧. ಸಂಬಂಧದ ಅವಧಿ:

ನೀವು ಮತ್ತು ನಿಮ್ಮ ಸಂಗಾತಿ, ಸ್ವೇಚ್ಛೆಯಿಂದ, ಸಾಕಷ್ಟು ಸಮಯದವರೆಗೆ (ಹಲವು ತಿಂಗಳುಗಳು ಅಥವಾ ವರ್ಷಗಳು), ಒಂದೇ ಮನೆಯಲ್ಲಿ ವಾಸವಾಗಿರಬೇಕು. ಕೇವಲ ಕೆಲವು ವಾರಗಳು, ಒಂದು ವಾರಾಂತ್ಯ, ಅಥವಾ ಒಂದು ರಾತ್ರಿ ಒಟ್ಟಿಗೆ ಕಳೆದರೆ ಅದು ಲಿವ್-ಇನ್ ಸಂಬಂಧ ಎನಿಸಲಾರದು.

೨. ಸಾರ್ವಜನಿಕವಾಗಿ ಜನರ ಜೊತೆ ಬೆರೆಯುವುದು:

ನೀವು ಮತ್ತು ನಿಮ್ಮ ಸಂಗಾತಿ ಗಂಡ-ಹೆಂಡತಿಯ ಹಾಗೆ ಸ್ನೇಹಿತರು, ನೆಂಟರು, ಮತ್ತು ಇನ್ನಿತರರ ಜೊತೆ ಸಾರ್ವಜನಿಕವಾಗಿ ಬೆರೆತಿರಬೇಕು.

೩. ವಯಸ್ಸು ಮತ್ತು ವೈವಾಹಿಕ ಸ್ಥಿತಿ:

ನೀವು ಮತ್ತು ನಿಮ್ಮ ಸಂಗಾತಿ ಮದುವೆಯಾಗಲು ಅರ್ಹರಾಗಿರಬೇಕು. ಅಂದರೆ, ನಿಮ್ಮಿಬರಿಗೂ ಲಿವ್-ಇನ್ ಸಂಬಂಧವನ್ನು ಪ್ರವೇಶಿಸುವ ಸಮಯದಲ್ಲಿ ಜೀವಂತ ಗಂಡ/ಹೆಂಡತಿ ಇರಬಾರದು, ಮತ್ತು ನೀವಿಬ್ಬರೂ ಮದುವೆಯ ವಯಸ್ಸು ತಲುಪಿರಬೇಕು – ಮಹಿಳೆಯರಿಗೆ ೧೮, ಮತ್ತು ಪುರುಷರಿಗೆ ೨೧.

೪. ಲೈಂಗಿಕ ಸಂಬಂಧ:

ನೀವು ಮತ್ತು ನಿಮ್ಮ ಸಂಗಾತಿಯ ನಡುವೆ, ಭಾವನಾತ್ಮಕ ಮತ್ತು ಆತ್ಮೀಯ ಆಸರೆಯುಳ್ಳ ಲೈಂಗಿಕ ಸಂಬಂಧವಿರಬೇಕು.

೫. ಆರ್ಥಿಕ ವ್ಯವಸ್ಥೆ:

ಗಂಡ-ಹೆಂಡತಿಯರ ಹಾಗೆ ನೀವು ಮತ್ತು ನಿಮ್ಮ ಸಂಗಾತಿಯ ಮಧ್ಯೆ ಆರ್ಥಿಕ ವ್ಯವಸ್ಥೆಯಿರಬೇಕು. ಉದಾಹರಣೆಗೆ, ನಿಮ್ಮಿಬ್ಬರ ಆರ್ಥಿಕ ಸಂಪನ್ಮೂಲಗಳನ್ನು ನೀವು ಸಾಮಾನ್ಯ ನಿಧಿಯಾಗಿ ಸೇರಿಸಿ ಬಳಸುತ್ತಿದ್ದೀರಿ, ಮತ್ತು ಜಂಟಿ ಬ್ಯಾಂಕ್ ಖಾತೆಗಳು, ಆಸ್ತಿಗಳ ಮೇಲೆ ಜಂಟಿ ಒಡೆತನ, ದೀರ್ಘ ಕಾಲದ ಔದ್ಯೋಗಿಕ ಬಂಡವಾಳ ಹೂಡುವುದು, ಇನ್ನಿತರೇ ಉಪಕರಣಗಳ ಮೂಲಕ, ಆರ್ಥಿಕವಾಗಿ ಒಬ್ಬರನ್ನೊಬ್ಬರು ಬೆಂಬಲಿಸುತ್ತಿರಬೇಕು.

೬. ಕೌಟುಂಬಿಕ ವ್ಯವಸ್ಥೆ:

ನಿಮ್ಮಿಬ್ಬರಲ್ಲಿ ಒಬ್ಬರು, ವಿಶೇಷವಾಗಿ ಮಹಿಳೆಯಾದವರು, ಮನೆಯನ್ನು ನಡೆಸುವ/ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಲ್ಲಿ, ಹಾಗು ಮನೆಗೆಲಸ (ಸ್ವಚ್ಛ ಮಾಡುವುದು, ಅಡುಗೆ ಮಾಡುವುದು, ಮನೆಯ ನಿರ್ವಹಣೆ, ಇತ್ಯಾದಿ) ಮಾಡುತ್ತಿದ್ದಲ್ಲಿ, ನಿಮ್ಮ ಸಂಬಂಧ ಮದುವೆಯಂತಹ ಕೌಟುಂಬಿಕ ವ್ಯವಸ್ಥೆ ಎಂದು ಪರಿಗಣಿಸಲಾಗುತ್ತದೆ.

೭. ಪಕ್ಷಗಳ ಉದ್ದೇಶ ಮತ್ತು ನಡುವಳಿಕೆ:

ಅವರ ಸಂಬಂಧ ಏನು, ಸಂಬಂಧದೊಳಗಿನ ಅವರ ಪಾತ್ರ ಮಾತು ಕರ್ತವ್ಯಗಳು – ಇವುಗಳ ಬಗ್ಗೆ ಅವರ ಮಧ್ಯೆ ಇರುವ ಜಂಟಿ ಉದ್ದೇಶ ಅವರ ಸಂಬಂಧದ ಪ್ರಕೃತಿಯನ್ನು ನಿರ್ಧರಿಸುತ್ತದೆ. ೮. ಮಕ್ಕಳು: ಲಿವ್-ಇನ್ ಸಂಬಂಧದಲ್ಲಿ ಮಕ್ಕಳು ಇರುವುದು ಇದು “ಮದುವೆಯಂತಹ ಸಂಬಂಧ”, ಮತ್ತು ತಮ್ಮ ಸಂಬಂಧದ ಬಗ್ಗೆ ದೂರ ದೃಷ್ಟಿಯ ದೃಷ್ಟಿಕೋನವಿದೆ ಎಂಬುದನ್ನು ಬಲವಾಗಿ ಸೂಚಿಸುತ್ತದೆ.

ಮೇಲೆ ನೀಡಿರುವ ಮಾನದಂಡಗಳನ್ನು ಪೂರೈಸದಿದ್ದರೆ, ನ್ಯಾಯಾಲಯಗಳು ನಿಮ್ಮ ಸಂಬಂಧವನ್ನು ಲಿವ್-ಇನ್ ಸಂಬಂಧ ಎಂದು ಒಪ್ಪುವುದಿಲ್ಲ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಂದರೇನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಒಬ್ಬ ವ್ಯಕ್ತಿಯು ಒಂದು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವನ್ನು ಮಾಡಿರುವುದು ಯಾವಾಗ ಎಂದರೆ:

ಲೈಂಗಿಕ ಉದ್ದೇಶದಿಂದ ಒಂದು ಮಗುವನ್ನು ಸ್ಪರ್ಶಿಸಿದರೆ. ಇದು ಮಗುವಿನ ಯೋನಿ, ಶಿಶ್ನ, ಗುದದ್ವಾರ, ಸ್ತನ ಇತ್ಯಾದಿಗಳನ್ನು ಮುಟ್ಟುವುದನ್ನು ಒಳಗೊಂಡಿರುತ್ತದೆ. ಮಗುವನ್ನು ಅವರ ಸ್ವಂತ ಅಥವಾ ಬೇರೆಯವರ ಯೋನಿ, ಶಿಶ್ನ, ಗುದದ್ವಾರ, ಸ್ತನ ಇತ್ಯಾದಿಗಳನ್ನು ಸ್ಪರ್ಶಿಸಲು ಒತ್ತಾಯಿಸಿದರೆ. ಇದಕ್ಕೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಯ ಜೊತೆಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಅಪರಾಧಿಯು ನಂಬಿಕೆ ಅಥವಾ ಅಧಿಕಾರದ ಸ್ಥಾನದಲ್ಲಿದ್ದರೆ, ಇದು ಹೆಚ್ಚಿನ ಮಟ್ಟದ ಶಿಕ್ಷೆಯನ್ನು ಹೊಂದಿರುವ ಉಲ್ಬಣಗೊಂಡ ಲೈಂಗಿಕ ದೌರ್ಜನ್ಯ ಎಂದು ಕರೆಯಲ್ಪಡುವ ಹೆಚ್ಚಿನ ಅಪರಾಧವಾಗಿದೆ. ನಮ್ಮಈ ವಿವರಣೆಯಲ್ಲಿ ಇನ್ನಷ್ಟು ಓದಿ “ಅಧಿಕಾರದಲ್ಲಿರುವ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯದ ಉಲ್ಬಣಗೊಂಡ ಅಪರಾಧ ಅಂದರೆ ಯಾವುದು?”.

ಕೌಟುಂಬಿಕ ಹಿಂಸೆ ಅಂದರೇನು?

ಕೌಟುಂಬಿಕ ಹಿಂಸೆ ಅಂದರೇನು?

ಯಾವುದೇ ಮನೆಯಲ್ಲಿ, ಮಹಿಳೆ ಮತ್ತು ಅವಳ ಪಾಲನೆಯಲ್ಲಿರುವ ಮಗುವಿನ ಆರೋಗ್ಯ ಮತ್ತು ಸುರಕ್ಷತೆಗೆ ಧಕ್ಕೆ ತರುವಂತಹ ಹಿಂಸಾತ್ಮಕ ಅಥವಾ ಕಿರುಕುಳ ನೀಡುವ ವರ್ತನೆಗೆ ಕೌಟುಂಬಿಕ ಹಿಂಸೆ ಎನ್ನುತ್ತಾರೆ. ಕಾನೂನಿನ ಸಹಾಯದಿಂದ ನೀವು: -ತಕ್ಷಣ ರಕ್ಷಣೆ ಪಡೆದು ಹಿಂಸೆ ಮುಂದುವರೆಯದಂತೆ ತಡೆಯಬಹುದು. ತಕ್ಷಣ ರಕ್ಷಣೆ ಪಡೆಯಲು ನೀವು ಪೊಲೀಸ್, ರಕ್ಷಣಾಧಿಕಾರಿಗಳು, ಇನ್ನಿತರೇ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಕೆಳಗಿನ ಪರಿಹಾರಗಳನ್ನು ಪಡೆಯಲು ನ್ಯಾಯಾಲಯಕ್ಕೆ ಹೋಗಿ:

  • ವಿತ್ತೀಯ ಪರಿಹಾರ, ವಾಸಿಸಲು ಬೇಕಾದ ಸ್ಥಳ, ಇತ್ಯಾದಿ ಪಡೆಯಬಹುದು
  • ನಿಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಅಪರಾಧಿಕ ಫಿರ್ಯಾದು ನೀಡಬಹುದು

ಕೌಟುಂಬಿಕ ಹಿಂಸೆಯ ರೀತಿಗಳು:

ಹಿಂಸೆ ಕೇವಲ ಶಾರೀರಿಕವಾಗಿರಬೇಕಂತಿಲ್ಲ. ಕಾನೂನು ಲೈಂಗಿಕ ಹಿಂಸೆ, ಮೌಖಿಕ ನಿಂದನೆ, ಭಾವನಾತ್ಮಕ/ಮಾನಸಿಕ ಕಿರುಕುಳ, ವಿತ್ತೀಯ ಕಿರುಕುಳ, ಇನ್ನಿತರೇ ರೀತಿಗಳ ದೌರ್ಜನ್ಯಗಳನ್ನೂ ಸಹ ಗುರುತಿಸಿದೆ. ಉದಾಹರಣೆಗೆ, ನಿಮ್ಮ ಮೈದುನ ಪ್ರತಿದಿನ ನಿಮ್ಮನ್ನು ಮನೆಯಿಂದ ಆಚೆ ತಳ್ಳುವ ಬೆದರಿಕೆ ಹಾಕುತ್ತಿದ್ದಲ್ಲಿ, ಇದು ಭಾವನಾತ್ಮಕ ಕಿರುಕುಳ ಎಂದು ಪರಿಗಣಿಸಲಾಗುತ್ತದೆ.

ಕೌಟುಂಬಿಕ ಹಿಂಸೆಯ ಆವರ್ತನೆ:

ಹಿಂಸೆಯ ಏಕೈಕ ಕ್ರಿಯೆ/ಘಟನೆಯೂ ಕೌಟುಂಬಿಕ ಹಿಂಸೆ ಎಂದು ಪರಿಗಣಿಸಲಾಗುತ್ತದೆ. ನ್ಯಾಯಾಲಯಕ್ಕೆ ಹೋಗಲು ನೀವು ಸುದೀರ್ಘ ಕಾಲದಿಂದ ಹಿಂಸೆ ಸಹಿಸಿರಬೇಕಾಗುತ್ತದೆ ಎಂದೇನಿಲ್ಲ.

ಅಶಾರೀರಿಕ ಲೈಂಗಿಕ ನಡವಳಿಕೆ ಅಥವಾ ಲೈಂಗಿಕ ಕಿರುಕುಳ ಎಂದರೇನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಲೈಂಗಿಕ ಕಿರುಕುಳ ಎಂದರೆ ಮಗುವಿಗೆ ಇಷ್ಟವಿಲ್ಲದ ಅಶಾರೀರಿಕ ಲೈಂಗಿಕ ನಡವಳಿಕೆ, ಉದಾಹರಣೆಗೆ:

ಲೈಂಗಿಕವಾಗಿ ಮಾತನಾಡುವುದು ಮತ್ತು ಸನ್ನೆ ಮಾಡುವುದು

  • ಮಗುವಿಗೆ ಲೈಂಗಿಕವಾಗಿ ಮಾತನಾಡುವುದು, ಲೈಂಗಿಕವಾಗಿ ಸನ್ನೆ ಮಾಡುವುದು ಅಥವಾ ಲೈಂಗಿಕ ಅಂಗಗಳನ್ನು ತೋರಿಸುವುದು.
  • ಮಗುವಿಗೆ ಲೈಂಗಿಕ ವಸ್ತು ಅಥವಾ ಯಾವುದೇ ದೇಹದ ಲೈಂಗಿಕ ಭಾಗಗಳನ್ನು ತೋರಿಸುವುದು.
  • ಮಗುವಿನ ದೇಹದ ಭಾಗಗಳನ್ನು ಬೇರೆಯವರಿಗೆ ತೋರಿಸಲು ಒತ್ತಾಯಿಸುವುದು ಅಥವಾ ಕೇಳುವುದು.

ಹಿಂಬಾಲಿಸುವುದು ಮತ್ತು ಬೆದರಿಸುವುದು

  • ನೇರವಾಗಿ ಅಥವಾ ಪರೋಕ್ಷವಾಗಿ ಫೋನ್, ಎಸ್‌ಎಂಎಸ್, ಇಂಟರ್ನೆಟ್ ಅಥವಾ ಇನ್ನಾವುದೇ ರೀತಿಯಲ್ಲಿ ಮಗುವನ್ನು ಪದೇ ಪದೇ ಅಥವಾ ನಿರಂತರವಾಗಿ ವೀಕ್ಷಿಸುವುದು, ಅನುಸರಿಸುವುದು ಅಥವಾ ಸಂಪರ್ಕಿಸುವುದು.

ಯಾವುದೇ ರೀತಿಯ ಮಾಧ್ಯಮದಲ್ಲಿ ಮಗುವನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಬೆದರಿಕೆ ಹಾಕುವುದು ಅಥವಾ ಸುಳ್ಳು ಹೇಳುವುದು.

ಅಶ್ಲೀಲತೆಗೆ ಸಂಬಂಧಿತ

  • ಮಗುವಿಗೆ ಅಶ್ಲೀಲರಚನೆಗಳನ್ನು ತೋರಿಸುವುದು.
  • ಅಶ್ಲೀಲ ಕೃತ್ಯಗಳಲ್ಲಿ ಭಾಗವಹಿಸಲು ಮಗುವನ್ನು ಪ್ರಚೋದಿಸುವುದು ಅಥವಾ ಮನವೊಲಿಸುವುದು.

ಮಗುವಿಗೆ ಲೈಂಗಿಕ ಕಿರುಕುಳ ನೀಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯೊಂದಿಗೆ ದಂಡ ವಿಧಿಸಲಾಗುತ್ತದೆ.

ಕೌಟುಂಬಿಕ ಹಿಂಸೆಯ ಸಂಕೇತಗಳು

ಕೌಟುಂಬಿಕ ಹಿಂಸೆಯು ಹಲವಾರು ತರಹಗಳಲ್ಲಿದ್ದು, ಮೌಖಿಕ, ಲೈಂಗಿಕ, ಇತ್ಯಾದಿ ರೀತಿಗಳಲ್ಲಿ ಇರಬಹುದು. ಕೆಳಗೆ ಕೌಟುಂಬಿಕ ಹಿಂಸೆಯ ಸಂಕೇತಗಳ ಪಟ್ಟಿ ನೀಡಲಾಗಿದೆ. ನೀವು ಅಥವಾ ನಿಮ್ಮ ಸುಪರ್ದಿಯಲ್ಲಿರುವ ಮಗು ಈ ಯಾವುದಾದರೂ ನಡುವಳಿಕೆಗೆ ಬಲಿಯಾದಲ್ಲಿ, ನ್ಯಾಯಾಲಯಕ್ಕೆ ಹೋಗಿ ರಕ್ಷಣೆ ಪಡೆಯಬಹುದು:

ಶಾರೀರಿಕ ಕಿರುಕುಳ:

  • ನಿಮಗೆ ಶಾರೀರಿಕವಾಗಿ ನೋವುಂಟುಮಾಡಲಾಗುತ್ತಿದ್ದು, ನಿಮ್ಮ ಆರೋಗ್ಯ, ಶಾರೀರಿಕ ಬೆಳವಣಿಗೆ ಅಥವಾ ಯೋಗಕ್ಷೇಮಕ್ಕೆ ಧಕ್ಕೆ ಉಂಟಾಗಿದೆ. ಉದಾಹರಣೆಗೆ, ನಿಮಗೆ ಹೊಡೆಯುವುದು, ಕೆನ್ನೆಗೆ ಹೊಡೆಯುವುದು, ಏಟು ಹಾಕುವುದು, ಇತ್ಯಾದಿ.
  • ನಿಮಗೆ ಶಾರೀರಿಕವಾಗಿ ನೋವುಂಟುಮಾಡಲಾಗುತ್ತಿದ್ದು, ಇದು ನಿಮ್ಮ ಜೀವಕ್ಕೆ ಅಪಾಯ ತಂದಿದೆ.
  • ನಿಮಗೆ ಶಾರೀರಿಕವಾಗಿ ನೋವುಂಟುಮಾಡುತ್ತಾರೆ ಎಂಬ ನಂಬಿಕೆ ಮೂಡಿಸುವಂತಹ ಸನ್ನೆಗಳನ್ನು ಯಾರಾದರೂ ಮಾಡುತ್ತಿದ್ದಾರೆ. ಉದಾಹರಣೆಗೆ, ನಿಮ್ಮ ಗಂಡ ನಿಮ್ಮ ಮುಂದೆ ಮುಷ್ಠಿ ಮಾಡಿ, ನಿಮಗೆ ಅವರು ಮುಷ್ಟಿಯಿಂದ ಗುದ್ದುತ್ತಾರೋ ಎಂಬ ಹಾಗೆ ನಂಬಿಕೆ ಮೂಡಿಸುವಂತೆ, ನಿಮಗೆ ಪೆಟ್ಟಾಗಬಹುದಾದ ರೀತಿಯಲ್ಲಿ ಕಯ್ಯನ್ನು ಅಲುಗಾಡಿಸುವುದು.
  • ನಿಮಗೆ ಅಥವಾ ನಿಮ್ಮ ಆಪ್ತರಿಗೆ ನೋವಾಗುವಂತೆ ಮೌಖಿಕ ಅಥವಾ ಶಾರೀರಿಕ ಬೆದರಿಕೆಗಳನ್ನು
  • ಕೆಳಗಿನ ಉದ್ದೇಶಗಳಿಗೆ ಹಾಕುವುದು:
  • ನಿಮ್ಮನ್ನು ಹೆದರಿಸಲು, ಎಚ್ಚರಿಸಲು, ಅಥವಾ ನಿಮಗೆ ಕಿರಿಕಿರಿ ಉಂಟು ಮಾಡಲು
  • ಕಾನೂನಿನಡಿಯಲ್ಲಿ ನೀವು ಯಾವ ಕೆಲಸ ಮಾಡಬೇಕಿಲ್ಲವೋ, ಆ ಕೆಲಸವನ್ನು ನಿಮ್ಮಿಂದ ಮಾಡಿಸಲು. ಉದಾಹರಣೆಗೆ, ನೀವು ನಿಮ್ಮ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸದಿದ್ದರೆ ನಿಮಗೆ ನೋವುಂಟುಮಾಡುವವರೆಂದು ನಿಮ್ಮ ಅತ್ತೆ-ಮಾವ ಬೆದರಿಕೆ ಹಾಕಿದ್ದಲ್ಲಿ.
  •  ಕಾನೂನಿನಡಿಯಲ್ಲಿ ನಿಮಗೆ ಯಾವ ಕೆಲಸ ಮಾಡಲು ಹಕ್ಕಿದೆಯೋ, ಆ ಕೆಲಸವನ್ನು ಮಾಡಲಾಗದಂತೆ ಮಾಡುವುದು. ಉದಾಹರಣೆಗೆ, ನೀವು ನಿಮ್ಮ ಗಂಡನ ವಿರುದ್ಧ ದೂರು ಸಲ್ಲಿಸಿದಲ್ಲಿ, ಅವರು ನಿಮಗೆ ನೋವುಂಟುಮಾಡುತ್ತಾರೆ ಎಂದು ಬೆದರಿಕೆ ಹಾಕಿದ್ದಲ್ಲಿ.

ಮೌಖಿಕ ಮತ್ತು ಭಾವನಾತ್ಮಕ ಕಿರುಕುಳ:

  • ನಿಮ್ಮನ್ನು ಅವಮಾನ ಮಾಡುವುದು, ಹೀಯಾಳಿಸುವುದು, ಅಪಹಾಸ್ಯ ಮಾಡುವುದು. ಉದಾಹರಣೆಗೆ, ನೀವು ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂದು, ಅಥವಾ ವರದಕ್ಷಿಣೆ ತರಲಿಲ್ಲವೆಂದು ನಿಮ್ಮ ಗಂಡ ನಿಮ್ಮನ್ನು ನಿಂದನೀಯ ಹೆಸರುಗಳಿಂದ ಕರೆಯುವುದು.
  • ನಿಮಗೆ ಕಿರುಕುಳ ಕೊಡುತ್ತಿರುವವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಿಮಗೆ ಬೆದರಿಸುವುದು. ಉದಾಹರಣೆಗೆ, ನಿಮ್ಮ ಗಂಡಿನಿಂದ ನೀವು ವಿಚ್ಛೇದನ ಕೇಳಿದಾಗ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ನಿಮಗೆ ಬೆದರಿಸುವುದು.
  • ನಿಮ್ಮ ಮಗುವಿನಿಂದ ನಿಮ್ಮನ್ನು ಅಗಲಿಸುವುದು. ಉದಾಹರಣೆಗೆ, ನೀವು ನಿಮ್ಮ ನವಜಾತ ಶಿಶುವಿನ ಕಾಳಜಿ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ ಎಂಬ ನಂಬಿಕೆಯಿಂದ ನಿಮ್ಮ ಅತ್ತೆ-ಮಾವ ನಿಮ್ಮನ್ನು ನಿಮ್ಮ ಮಗುವಿನಿಂದ ದೂರ ಮಾಡುವುದು
  • ನೌಕರಿಯನ್ನು ತೆಗೆದುಕೊಳ್ಳದ ಹಾಗೆ ಮಾಡುವುದು, ಅಥವಾ ನೌಕರಿಯನ್ನು ಬಿಡುವುದಾಗಿ ಒತ್ತಾಯಿಸುವುದು
  • ನೀವು, ಅಥವಾ ನಿಮ್ಮ ಆಸರೆಯಲ್ಲಿರುವ ಮಗುವನ್ನು ಮನೆಯಿಂದಾಚೆ ಹೋಗದ ಹಾಗೆ ಮಾಡುವುದು
  • ನಿಮ್ಮ ಕುಟುಂಬದವರನ್ನು, ಸ್ನೇಹಿತರನ್ನು, ಅಥವಾ ಇನ್ನಿತರೇ ವ್ಯಕ್ತಿಗಳನ್ನು ನೀವು ಭೇಟಿಯಾಗದಂತೆ ಮಾಡುವುದು – ಯಾರನ್ನಾದರೂ ಮದುವೆಯಾಗಲು ಒತ್ತಾಯಿಸುವುದು, ಅಥವಾ ನೀವು ಮದುವೆಯಾಗದ ಹಾಗೆ ನೋಡಿಕೊಳ್ಳುವುದು
  • ನಿಮ್ಮ ಆಪ್ತರಿಗೆ ಶಾರೀರಿಕ ನೋವುಂಟುಮಾಡಲಾಗುತ್ತದೆ ಎಂದು ಬೆದರಿಸುವುದು

ರ್ಥಿಕ/ವಿತ್ತೀಯ ಕಿರುಕುಳ:

  • ನಿಮ್ಮ ಹಕ್ಕಿನಲ್ಲಿರುವ ಯಾವುದಾದರೂ ಆಸ್ತಿ ಅಥವಾ ಸಂಪನ್ಮೂಲಗಳನ್ನು ನಿಮ್ಮಿಂದ ಕಸೆದುಕೊಳ್ಳುವುದು. ಉದಾಹರಣೆಗೆ, ನೀವು ಅವಿಭಜಿತ ಕುಟುಂಬದಲ್ಲಿನ ವಿಧವೆಯಾಗಿದ್ದು, ಆ ಕುಟುಂಬಕ್ಕೆ ಸೇರಿದ ಸಂಪನ್ಮೂಲಗಳನ್ನು ನಿಮ್ಮಿಂದ ಕಸೆದುಕೊಳ್ಳುವುದು.
  • ನಿಮ್ಮ ಮತ್ತು ನಿಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ಜೊತೆ ಇರುವ ಸಂಬಂಧದ ಮೇರೆಗೆ, ನೀವು ಯಾವ ಸಂಪನ್ಮೂಲಗಳನ್ನು ಬಳಸುತ್ತಿದ್ದೀರೋ, ಆ ಸಂಪನ್ಮೂಲಗಳನ್ನು ನೀವು ಬಳಸಲು ಬರಲಾರದ ಹಾಗೆ ಮಾಡುವುದು. ಉದಾಹರಣೆಗೆ, ನೀವು ವಾಸಿಸುತ್ತಿದ್ದ ಮನೆಯ ಯಾವುದಾದರೂ ಭಾಗಕ್ಕೆ ನಿಮಗೆ ಪ್ರವೇಶವಿಲ್ಲದಿರುವಹಾಗೆ ಮಾಡುವುದು.
  • ನಿಮ್ಮ ಆಸ್ತಿಯನ್ನು, ಅಥವಾ ಜಂಟಿ
  • ಸ್ವಾಮಿತ್ವದಲ್ಲಿನ ನಿಮ್ಮ ಆಸ್ತಿಯನ್ನು ನಿಮ್ಮಿಂದ ಕಿತ್ತುಕೊಳ್ಳುವುದು/ದೂರ ಮಾಡುವುದು. ಉದಾಹರಣೆಗೆ, ನೀವು ಮತ್ತು ನಿಮ್ಮ ಗಂಡನ ಜಂಟಿ-ಸ್ವಾಮಿತ್ವದಲ್ಲಿನ ಆಸ್ತಿಯನ್ನು ನಿಮ್ಮ ಗಂಡ ಇನ್ಯಾರಿಗೋ ಮಾರುವುದು.
  • ನಿಮ್ಮ ವೈಯಕ್ತಿಕ ವಸ್ತುಗಳನ್ನು ಮನೆಯಿಂದ ಹೊರಹಾಕುವುದು. ಉದಾಹರಣೆಗೆ, ಬಟ್ಟೆಗಳು, ಪಾತ್ರೆಗಳು, ಇತ್ಯಾದಿ.
  • ಮನೆಯಲ್ಲಿ ಸಾಮಾನ್ಯವಾಗಿ ಬಳಸುತ್ತಿದ್ದ ವಸ್ತುಗಳನ್ನು ನೀವು ಬಳಸದ ಹಾಗೆ ಮಾಡುವುದು. ಉದಾಹರಣೆಗೆ, ಅಡುಗೆಮನೆಯಲ್ಲಿ ನಿಮ್ಮ ಪ್ರವೇಶ ನಿಷೇಧಿಸುವುದು.
  • ನಿಮ್ಮ ಮತ್ತು ನಿಮ್ಮ ಮಕ್ಕಳ ದೈನಂದಿನ ಖರ್ಚಿಗೆ ದುಡ್ಡು ಕೊಡದಿರುವುದು. ಉದಾಹರಣೆಗೆ, ಊಟ, ಬಟ್ಟೆ, ಔಷಧಿ, ಇತ್ಯಾದಿಗಳಿಗೆ ದುಡ್ಡು ಕೊಡದಿರುವುದು.
  • ನೀವು ಉದ್ಯೋಗ ಮಾಡಲಾರದಂತೆ ಮಾಡುವುದು, ಅಥವಾ ಉದ್ಯೋಗ ಮಾಡುವಾಗ ತೊಂದರೆಯುಂಟುಮಾಡುವುದು
  • ನಿಮ್ಮ ಆದಾಯವನ್ನು ಕಸೆದುಕೊಳ್ಳುವುದು, ಅಥವಾ ನೀವು ಉಪಯೋಗಿಸದಂತೆ ಮಾಡುವುದು
  • ಮನೆ ಬಿಟ್ಟು ಹೋಗುವಂತೆ ಒತ್ತಾಯ ಮಾಡುವುದು
  • ಬಾಡಿಗೆ ಮನೆಯಲ್ಲಿದ್ದರೆ, ಬಾಡಿಗೆ ಕೊಡದಿರುವುದು

ಲೈಂಗಿಕ ಕಿರುಕುಳ:

  • ಬೇಡವಾದ ಲೈಂಗಿಕ ವರ್ತನೆ, ಉದಾಹರಣೆಗೆ, ಲೈಂಗಿಕ ಸಂಭೋಗ ಮಾಡುವುದಾಗಿ ನಿಮ್ಮನ್ನು ಒತ್ತಾಯಿಸುವುದು
  • ನಿಮ್ಮಲ್ಲಿ ಅವಮಾನದ, ನಿಂದನೆಯ, ಅಥವಾ ಮಾನ ಭಂಗವಾದ ಭಾವನೆಗಳನ್ನು ಉಂಟು ಮಾಡುವ ಯಾವುದಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಾಗಿ ನಿಮ್ಮನ್ನು ಒತ್ತಾಯಿಸುವುದು
  • ಅಷ್ಲೀಲ/ ಪೋರ್ನ್ ಚಿತ್ರಗಳನ್ನು ನೋಡುವುದಾಗಿ ನಿಮ್ಮನ್ನು ಒತ್ತಾಯಿಸುವುದು
  • ನಿಮ್ಮ ಮಗುವಿಗೆ ಲೈಂಗಿಕವಾಗಿ ಕಿರುಕುಳ ನೀಡುವುದು

ಸಂದರ್ಭಾನುಸಾರ, ನ್ಯಾಯಾಲಯಗಳು ಇನ್ನಿತರೇ ಹಿಂಸಾತ್ಮಕ ಕ್ರಿಯೆಗಳನ್ನು ಕೌಟುಂಬಿಕ ಹಿಂಸೆಯೆಂದು ಪರಿಗಣಿಸಬಲ್ಲುವು. ನೀವು ಕೌಟುಂಬಿಕ ಹಿಂಸೆಗೆ ಬಲಿಯಾಗಿದ್ದೀರೋ ಇಲ್ಲವೋ ಎಂದು ನಿಮಗೆ ಅನುಮಾನವಿದ್ದಲ್ಲಿ, ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳು/ ವಕೀಲರು/ ಸರ್ಕಾರೇತರ ಸಂಸ್ಥೆಗಳನ್ನು ನೀವು ಸಂಪರ್ಕಿಸಿ, ಸಹಾಯ ಪಡೆಯಬಹುದು.

 

ಒಳಹೊಕ್ಕುವ / ಪೆನೆಟ್ರೇಟಿವ್ ಲೈಂಗಿಕ ದೌರ್ಜನ್ಯ ಎಂದರೇನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

ಒಬ್ಬ ವ್ಯಕ್ತಿಯು ಮಗುವಿನ ಯಾವುದೇ ದೇಹದ ಭಾಗಕ್ಕೆ ಯಾವುದೇ ವಸ್ತು ಅಥವಾ ಯಾವುದೇ ದೇಹದ ಭಾಗವನ್ನು ಒಳಸೇರಿಸಿದಾಗ ಅಥವಾ ಮಗುವನ್ನು ಯಾರೊಂದಿಗಾದರೂ ಇದನ್ನು ಮಾಡಲು ಒತ್ತಾಯಿಸಿದಾಗ, ಅದು ಒಳಹೊಕ್ಕುವ / ಪೆನೆಟ್ರೇಟಿವ್ ಲೈಂಗಿಕ ದೌರ್ಜನ್ಯದ ಅಪರಾಧವಾಗಿದೆ. ಇದು ಇವನ್ನು ಒಳಗೊಂಡಿದೆ:

  • ಯಾವುದೇ ಮಗುವಿನ ಯೋನಿ, ಬಾಯಿ, ಮೂತ್ರನಾಳ ಅಥವಾ ಗುದದ್ವಾರವನ್ನು ಶಿಶ್ನ, ಮತ್ತೊಂದು ದೇಹದ ಭಾಗ ಅಥವಾ ವಸ್ತುವಿನೊಂದಿಗೆ ಒಳಹೊಕ್ಕುವುದು.
  • ಮಗುವನ್ನು ಇನ್ನೊಬ್ಬ ವ್ಯಕ್ತಿ ಅಥವಾ ವಸ್ತುವನ್ನು ಒಳಹೊಕ್ಕಲು ತನ್ನ ಶಿಶ್ನವನ್ನು ಬಳಸಲು ಒತ್ತಾಯಿಸುವುದು.
  • ಮಗುವಿನ ಮೇಲೆ ಮೌಖಿಕ ಸಂಭೋಗವನ್ನು ನಡೆಸುವುದು ಅಥವಾ ಬೇರೊಬ್ಬರ ಮೇಲೆ ಮೌಖಿಕ ಸಂಭೋಗವನ್ನು ನಡೆಸುವಂತೆ ಮಗುವನ್ನು ಒತ್ತಾಯಿಸುವುದು.

ಇದಕ್ಕೆ ಶಿಕ್ಷೆ ದಂಡ; ಜೊತೆಗೆ ಹತ್ತು ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ.

ಮಗು 16 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ಶಿಕ್ಷೆ ಹೆಚ್ಚು. ಅತ್ಯಾಚಾರದ ಅಪರಾಧಕ್ಕಾಗಿ ಮಗು ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಅಪರಾಧಿಯು ನಂಬಿಕೆ ಅಥವಾ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಯಾಗಿದ್ದರೆ, ಅಪರಾಧವನ್ನು ಉಲ್ಬಣಗೊಂಡ ಒಳಹೊಕ್ಕುವ ಲೈಂಗಿಕ ದೌರ್ಜನ್ಯ ಎಂದು ಕರೆಯಲಾಗುತ್ತದೆ, ಇದು ಹೆಚ್ಚಿನ ಪ್ರಮಾಣದ ಶಿಕ್ಷೆಯನ್ನು ಹೊಂದಿರುತ್ತದೆ.

ಕೌಟುಂಬಿಕ ಹಿಂಸೆ ಎಲ್ಲೆಲ್ಲಿ ನಡೆಯಬಹುದು?

ಕೌಟುಂಬಿಕ ಹಿಂಸೆ ಎಲ್ಲಾದರೂ ನಡೆಯಬಹುದು. ನೀವು ನೆಲೆಸಿದ್ದ ಮನೆಯಲ್ಲಿಯೇ ನಡೆಯಬೇಕು ಎಂದೇನಿಲ್ಲ. ಕೌಟುಂಬಿಕ ಹಿಂಸೆ ನಿಮ್ಮ ಉದ್ಯೋಗದ ಅಥವಾ ಶಿಕ್ಷಣದ ಸ್ಥಳಗಳು, ನಿಮ್ಮ ಮಗುವಿನ ಶಾಲೆ, ಮಾರುಕಟ್ಟೆ, ಹೀಗೆ ಎಲ್ಲಾದರೂ ನಡೆಯಬಹುದು. ಕೌಟುಂಬಿಕ ಹಿಂಸೆ ಎಲ್ಲಾದರೂ ಸರಿ, ನೀವು ದೂರು ನೀಡಬಹುದು, ಮತ್ತು ವಕೀಲರ ಸಹಾಯದಿಂದ ನ್ಯಾಯಾಲಯದಲ್ಲಿ ಪ್ರಕರಣ ಹೂಡಬಹುದು.

ಒಂದು ಮಗುವನ್ನು ಬ್ಲ್ಯಾಕ್‌ಮೇಲ್ ಮಾಡಿದರೆ ಶಿಕ್ಷೆ ಏನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

ಯಾರಾದರೂ ಮಗುವಿಗೆ ಬೆದರಿಕೆ ಹಾಕಿದರೆ ಅಥವಾ ಮಗುವಿಗೆ ಮಾಡಿದ ಯಾವುದೇ ಲೈಂಗಿಕ ಕ್ರಿಯೆಯನ್ನು ರೆಕಾರ್ಡ್ ಮಾಡಿದರೆ, ಪೋಷಕರು ಸೇರಿದಂತೆ ಯಾರಾದರೂ ಅವರ ವಿರುದ್ಧ ದೂರು ನೀಡಬಹುದು. ಮಗುವನ್ನು ಬ್ಲ್ಯಾಕ್‌ಮೇಲ್ ಮಾಡುವುದು ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು/ಅಥವಾ ದಂಡದೊಂದಿಗೆ ಕಾನೂನಿನಡಿಯಲ್ಲಿ ಶಿಕ್ಷಾರ್ಹ ಅಪರಾಧ.

ಉದಾಹರಣೆಗೆ, ಸೀಮಾಳ ಟ್ಯೂಷನ್ ಟೀಚರ್ ಅವಳಿಗೆ ಲೈಂಗಿಕ ದೌರ್ಜನ್ಯ ಮಾಡಿದ್ದರೆ, ಅದರ ವೀಡಿಯೊವನ್ನು ರೆಕಾರ್ಡ್ ಮಾಡಿದ್ದರೆ ಮತ್ತು ಅವಳ ಪೋಷಕರಿಗೆ ಸಹಾಯ ಅಥವಾ ಹಣ ಪಡೆಯಲು ಬ್ಲ್ಯಾಕ್‌ಮೇಲ್ ಮಾಡಿದ್ದರೆ, ಪೋಷಕರು ತಕ್ಷಣ ಪೊಲೀಸ್ ಮತ್ತು ಇತರ ಅಧಿಕಾರಿಗಳಿಗೆ ದೂರು ನೀಡಬೇಕು, ಅವರು ಕ್ರಮ ತೆಗೆದುಕೊಳ್ಳುತ್ತಾರೆ.

ಬ್ಲ್ಯಾಕ್‌ಮೇಲ್ ಮತ್ತು ಲೈಂಗಿಕ ದೌರ್ಜನ್ಯವನ್ನು ವರದಿ ಮಾಡಲು ಯಾರಾದರೂ ಪೊಲೀಸರಿಗೆ ಕರೆ ಮಾಡಬಹುದು. ಕಾನೂನಿನ ಅಡಿಯಲ್ಲಿ, ಬ್ಲ್ಯಾಕ್‌ಮೇಲ್ ಅನ್ನು ಲೈಂಗಿಕ ಕಿರುಕುಳದ ಅಪರಾಧಗಳಾಗಿ ವರ್ಗೀಕರಿಸಲಾಗಿದೆ. ಶಿಕ್ಷೆಯು ಎರಡು ವರ್ಷಗಳ ಜೈಲು ಸಮಯ ಮತ್ತು/ಅಥವಾ ದಂಡ. ಅಂತಹ ಅಶ್ಲೀಲ ಸಾಮಗ್ರಿಗಳ ಬಗ್ಗೆ ಯಾವುದೇ ವ್ಯಕ್ತಿಗೆ ತಿಳಿದಿದ್ದರೆ ಅವರು ಅದನ್ನು ಸ್ಥಳೀಯ ಪೊಲೀಸ್ ಅಥವಾ ವಿಶೇಷ ಜುವೆನೈಲ್ ಪೊಲೀಸ್ ಘಟಕ ಅಥವಾ ಸೈಬರ್ ಕ್ರೈಮ್ ಪೋರ್ಟಲ್ (cybercrime.gov.in) ಗೆ ವರದಿ ಮಾಡಬೇಕು.

ಕೌಟುಂಬಿಕ ಹಿಂಸೆಗೆ ಬಲಿಯಾದವರಿಗೆ ಯಾವ ಹಕ್ಕುಗಳಿವೆ ಮತ್ತು ಇಂತಹ ಪರಿಹಾರಗಳು ಲಭ್ಯವಿವೆ?

ಹಿಂಸೆಗೆ ಬಲಿಯಾದ ಮಹಿಳೆಗೆ ಅಪಾಯದ ಬೆದರಿಕೆ ಇದ್ದಲ್ಲಿ, ತಕ್ಷಣವಾಗಿ ರಕ್ಷಣೆ ಬೇಕಾದಲ್ಲಿ, ನ್ಯಾಯಾಧೀಶರು ತಾತ್ಕಾಲಿಕ ಆದೇಶಗಳನ್ನು ಅಥವಾ ಅಪರಾಧಿಯ ಅನುಪಸ್ಥಿತಿಯಲ್ಲಿ ಕೂಡ ಆದೇಶಗಳನ್ನು ಹೊರಡಿಸಬಹುದು.

ಕೌಟುಂಬಿಕ ಹಿಂಸೆಗೆ ಬಲಿಯಾದವರಿಗೆ ರಾಷ್ಟ್ರೀಯ ಕಾನೂನಿನಡಿಯಲ್ಲಿ ಕೆಲವು ಹಕ್ಕುಗಳಿವೆ, ಮತ್ತು ತಮ್ಮನ್ನು ಹಾಗು ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು ಪರಿಹಾರಗಳು ಲಭ್ಯವಿವೆ. ನಿಮಗೆ ಈ ಹಕ್ಕುಗಳು ಮತ್ತು ಪರಿಹಾರಗಳ ಬಗ್ಗೆ ಮಾಹಿತಿ ನೀಡುವುದು ರಕ್ಷಾಧಿಕಾರಿಗಳು ಅಥವಾ ಸೇವಾ ಕಾರ್ಯಕರ್ತರ ಕರ್ತವ್ಯವಾಗಿದೆ.

ಕಾನೂನಿನಡಿಯಲ್ಲಿರುವ ಹಕ್ಕುಗಳು:

ನಿಮಗೆ ಕೆಳಗಿನ ಹಕ್ಕುಗಳಿವೆ:

  • ರಕ್ಷಣಾಧಿಕಾರಿಗಳು, ಸೇವಾ ಕಾರ್ಯಕರ್ತರು, ಅಥವಾ ಪೊಲೀಸ್ ಅಧಿಕಾರಿಗಳ ಸಹಾಯದಿಂದ ದೂರು ದಾಖಲಿಸಿ, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದು.
  • ವೈದ್ಯಕೀಯ ಸಹಾಯ, ಆಶ್ರಯ, ಸಮಾಲೋಚನೆ, ಮತ್ತು ಕಾನೂನು ನೆರವು ಪಡೆಯುವುದು.
  • ನೀವು ಅಪರಾಧಿಕ ದೂರು ದಾಖಲಿಸಿದ್ದಲ್ಲಿ, ಎಫ್.ಐ.ಆರ್. (First Information Report) ನ ಉಚಿತ ಪ್ರತಿಗಳನ್ನು ಪಡೆಯುವುದು.
  • ನೀವು ರಕ್ಷಣಾಧಿಕಾರಿಗಳ ನೆರವಿಗೆ ಹೋಗಿದ್ದಲ್ಲಿ, ಡಿ.ಐ.ಆರ್. (Domestic Incidence Report), ಪರಿಹಾರ ಪಡೆಯಲು ದಾಖಲಿಸಿದ ಅರ್ಜಿ, ಹಾಗು ವೈದ್ಯಕೀಯ ವರದಿಗಳ ಉಚಿತ ಪ್ರತಿಗಳನ್ನು ಪಡೆಯುವುದು.

ಕಾನೂನಿನಡಿಯಲ್ಲಿ ಲಭ್ಯವಿರುವ ಪರಿಹಾರಗಳು:

ಮೇಲೆ ಕಂಡ ಹಕ್ಕುಗಳನ್ನು ಚಲಾಯಿಸುವುದರ ಜೊತೆಗೆ, ನೀವು ನ್ಯಾಯಾಲಯದಿಂದ ಕೆಳಗಿನ ಪರಿಹಾರಗಳನ್ನು ಪಡೆಯಬಹುದು:

  • ನಿಮ್ಮ ಮಕ್ಕಳ ಜೊತೆ ನಿಮ್ಮ ಮನೆಯಲ್ಲಿ ವಾಸ ಮಾಡುವುದನ್ನು ಮುಂದುವರೆಸುವುದು. ಇದಕ್ಕೆ “ನಿವಾಸದ ಆದೇಶ” ಪಡೆಯುವುದು ಎನ್ನುತ್ತಾರೆ.
  • ನಿಮಗೆ ಕಿರುಕುಳ ಕೊಡುತ್ತಿದ್ದ ವ್ಯಕ್ತಿ ನಿಮ್ಮ್ಮನು ಸಂಪರ್ಕಿಸದ ಹಾಗೆ, ನಿಮಗೆ ಇನ್ನಿಷ್ಟು ಹಿಂಸೆಯನ್ನು ಕೊಡುವುದನ್ನು ನಿಲ್ಲುಸುವುದಾಗಿ, ತಕ್ಷಣದ ರಕ್ಷಣೆ ಪಡೆಯುವುದು.
  • ನಿಮಗಾದ ಶಾರೀರಿಕ ಗಾಯಗಳು, ಆಸ್ತಿಯ ನಷ್ಟ, ಇತ್ಯಾದಿ ನಷ್ಟಗಳನ್ನು ಸರಿಪಡಿಸಲು ಆರ್ಥಿಕ ಪರಿಹಾರ ಪಡೆಯುವುದು.