ಒಂದೇ ಮನೆಯಲ್ಲಿ ಇರುವುದು ಎಂದರೇನು?

ಕೊನೆಯ ಅಪ್ಡೇಟ್ Nov 18, 2022

ನೀವು ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿಯ ಜೊತೆ ಕೆಳಗಿನ ಸಂದರ್ಭಗಳಲ್ಲಿ “ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದೀರಿ” ಎಂದು ಕಾನೂನಾತ್ಮಕವಾಗಿ ಪರಿಗಣಿಸಲಾಗುತ್ತದೆ:

ಕಿರುಕುಳ ಕೊಡುತ್ತಿದ್ದ ವ್ಯಕ್ತಿಯ ಜೊತೆ ಹಿಂದೆ ವಾಸ ಮಾಡುತ್ತಿದ್ದಿರಿ:

ಕಾನೂನಿನಡಿ ರಕ್ಷಣೆ ಹಾಗು ಪರಿಹಾರ ಬೇಕೆಂದಲ್ಲಿ, ನೀವು ಕಿರುಕುಳ ಕೊಡುತ್ತಿದ್ದ ವ್ಯಕ್ತಿಯ ಜೊತೆ ಪ್ರಸ್ತುತ ವಾಸವಾಗಿರಬೇಕು, ಅಥವಾ ಹಿಂದೆಂದೋ ವಾಸವಾಗಿದ್ದಿರಬೇಕು. ಆದರೆ, ನೀವು ದೂರು ನೀಡುವ ಸಮಯದಲ್ಲಿ ಅವರ ಜೊತೆ ವಾಸವಾಗಿರಬೇಕು ಎಂದೇನಿಲ್ಲ, ಹಾಗು ಹಿಂಸೆ ನಡೆಯುತ್ತಿದ್ದ ಸಮಯದಲ್ಲಿ ಅವರ ಜೊತೆ ವಾಸವಾಗಿರಬೇಕು ಎಂದೇನಿಲ್ಲ. ಕೇವಲ, ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ಯಾವಾಗಾದರೂ ನೀವು ವಾಸವಾಗಿದ್ದಿರಬೇಕು.

ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ಕೌಟುಂಬಿಕ ಸಂಬಂಧವಿರುವುದು:

ಕೌಟುಂಬಿಕ ಹಿಂಸೆಯ ಮೇರೆಗೆ ನಿಮಗೆ ರಕ್ಷಣೆ ಮತ್ತು ಪರಿಹಾರ ಬೇಕಿದ್ದಲ್ಲಿ, ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ನೀವು ವಾಸವಾಗಿದ್ದಿರಬೇಕು ಮತ್ತು ಅವರ ಜೊತೆ ಕೌಟುಂಬಿಕ ಸಂಬಂಧ ಹೊಂದಿರಬೇಕು. ಉದಾಹರಣೆಗೆ, ನೀವು ನಿಮ್ಮ ಅತ್ತೆಯ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದು, ಅವರಿಂದ ನಿಮಗೆ ಕೌಟುಂಬಿಕ ಹಿಂಸೆಯಾಗುತ್ತಿದ್ದಲ್ಲಿ, ನೀವು ರಕ್ಷಣೆ ಹಾಗು ಪರಿಹಾರ ಪಡೆಯಬಹುದು; ಯಾಕೆಂದರೆ, ಕಿರುಕುಳ ನೀಡುತ್ತಿರುವವರ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿದ್ದು, ಅವರ ಜೊತೆ ನೀವು ಒಂದೇ ಮನೆಯಲ್ಲಿ ವಾಸವಾಗಿದ್ದೀರಿ.

ಆದರೆ, ನೀವು ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದು, ಅವರ ಜೊತೆ ನಿಮಗೆ ಕೌಟುಂಬಿಕ ಸಂಬಂಧ ಇಲ್ಲದಿದ್ದರೆ, ಕೌಟುಂಬಿಕ ಹಿಂಸೆಯ ದೂರು ನೀವು ಕೊಡಲು ಸಾಧ್ಯವಿಲ್ಲ. ಉದಾಹರಣೆಗೆ, ನಿಮ್ಮ ಸೇವಕ ನಿಮ್ಮ ಜೊತೆ ಮನೆಯಲ್ಲಿ ವಾಸವಾಗಿದ್ದು, ನಿಮಗೆ ಅವರು ಹೊಡೆದರೆ, ಅವರ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ಸಲ್ಲಿಸಲು ಬರುವುದಿಲ್ಲ; ಯಾಕೆಂದರೆ, ಅವರ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿಲ್ಲ.

ಮನೆಯಲ್ಲಿ ಆಸ್ತಿ ಪಾಲು ಇರುವುದು/ಇಲ್ಲದಿರುವುದು:

ರಕ್ಷಣೆ ಹಾಗು ಪರಿಹಾರ ಪಡೆಯಲು, ನೀವು ವಾಸಿಸುತ್ತಿರುವ ಮನೆಯಲ್ಲಿ ನಿಮಗೆ ಪಾಲು ಇದೆಯೋ, ಇಲ್ಲವೋ ಎಂಬುದು ಅಪ್ರಸ್ತುತ. ಈ ಮನೆಯು ನಿಮ್ಮ/ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿಯ/ನಿಮ್ಮಿಬ್ಬರ ಜಂಟಿ-ಹೆಸರಲ್ಲಿರಬಹುದು, ಅಥವಾ ನಿಮ್ಮಿಬ್ಬರಲ್ಲಿ ಒಬ್ಬರು ಮನೆಯನ್ನು ಗುತ್ತಿಗೆ ಪಡೆದಿರಬಹುದು; ಅಥವಾ, ಮನೆ ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿಯೂ ಸೇರಿದ ಅವಿಭಜಿತ ಕುಟುಂಬಕ್ಕೆ ಸೇರಿರಬಹುದು, ಮತ್ತು ಆ ಮನೆಯ ಮೇಲೆ ನಿಮಗೆ ಕಾನೂನುಬದ್ಧವಾಗಿ ಯಾವ ಹಕ್ಕೂ ಇಲ್ಲದಿರಬಹುದು.

ಆದರೆ, ಮನೆ ನಿಮ್ಮ ಅತ್ತೆ-ಮಾವಂದಿರ, ಅಥವಾ ಕಿರುಕುಳ ಕೊಡುತ್ತಿರುವ ವ್ಯಕ್ತಿಯ ಇನ್ನಿತರ ನೆಂಟರ ಪ್ರತ್ಯೇಕ ಮತ್ತು ವೈಯಕ್ತಿಕ ಆಸ್ತಿಯಾಗಿದ್ದರೆ, ಆ ಮನೆಯಲ್ಲಿ ಪಾಲು ಕೇಳುವ ಯಾವ ಹಕ್ಕೂ ನಿಮಗಿರಲ್ಲ. ಆದಾಗ್ಯೂ, ನಿಮಗೆ ಆ ಮನೆಯಲ್ಲಿ ವಾಸಿಸುವ ಹಕ್ಕು ಇದೆಯೋ ಇಲ್ಲವೋ ಎಂಬುದನ್ನು, ಆಯಾ ಪ್ರಕರಣಗಳ ಸಂದರ್ಭಾನುಸಾರ ನ್ಯಾಯಾಲಯವು ತೀರ್ಮಾನಿಸುತ್ತದೆ. ನಿಮ್ಮ ಅತ್ತೆ-ಮಾವಂದಿರ ಮನೆಯಲ್ಲಿ, ನ್ಯಾಯಾಲಯವು ನಿಮಗೆ ವಾಸಿಸುವ ಹಕ್ಕು ಕೆಲ ಸಂದರ್ಭಗಳಲ್ಲಿ ನೀಡಬಹುದು.

ಗಮನಿಸಬೇಕಾದ ವಿಷಯವೆಂದರೆ, ನೀವು ವಾಸಿಸುವ ಮನೆಯಲ್ಲಿಯೇ ಕೌಟುಂಬಿಕ ಹಿಂಸೆ ನಡೆದಿರಬೇಕು ಎಂದೇನಿಲ್ಲ. ಹಿಂಸೆ ಬೇರೆಲ್ಲೋ ಕೂಡ ನಡೆದಿರಬಹುದು.

Leave a Reply

Your email address will not be published.

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.