ಪೋಲೀಸ್ ದೃಢೀಕರಣ ಪ್ರಕ್ರಿಯೆ

ಪೋಲೀಸ್ ದೃಢೀಕರಣವನ್ನು ಎರಡು ವಿಧಾನದಲ್ಲಿ ಪಡೆಯಬಹುದಾಗಿದೆ. ನೀವು ಹತ್ತಿರದ ಪೋಲೀಸ್ ಠಾಣೆಗೆ ಹೋಗಿ ಬಾಡಿಗೆದಾರರ ದೃಢೀಕರಣ ಅರ್ಜಿಯನ್ನು ಪಡೆದು, ಯಾವುದೇ ವೃತ್ತಿಪರರಿಗೆ ಶುಲ್ಕ ಪಾವತಿಸಿ ಬಾಡಿಗೆದಾರರ ಕುರಿತು ಮಾಹಿತಿಯನ್ನು ಪಡೆಯಬಹುದು. ಕೆಲವು ಬ್ರೋಕರ್ ಗಳು ಸಹ ಈ ಸೇವೆಯನ್ನು ನೀಡುತ್ತಾರೆ.

ಮೊದಲನೇ ಹೆಜ್ಚೆ:

ಪೋಲೀಸ್ ದೃಢೀಕರಣಕ್ಕಾಗಿ ನಿಮ್ಮ ಭಾವೀ ಬಾಡಿಗೆದಾರರಿಂದ/ಪರವಾನಗಿ ಪಡೆಯುವವರಿಂದ ಈ ಕೆಳಕಂಡ ದಾಖಲೆಗಳನ್ನು ಪಡೆಯಲಾಗುತ್ತದೆ.
 ಭರ್ತಿ ಮಾಡಿದ ಪೋಲೀಸ್ ದೃಢೀಕರಣ ಅರ್ಜಿ
 ಗುರ್ತಿನ ದಾಖಲೆ – ಆಧಾರ್ ಕಾರ್ಡ್, ಪಡಿತರ ಚೀಟಿ, ವಾಹನ ಚಾಲನಾ ಪರವಾನಗಿ ಅಥವಾ ಪಾಸ್ ಪೋರ್ಟ್
 ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು

ಪೋಲೀಸ್ ದೃಢೀಕರಣದ ಅರ್ಜಿಯನ್ನು ನೇರವಾಗಿ ಪೋಲೀಸ್ ಠಾಣೆಯಿಂದ, ಬ್ರೋಕರ್ ನಿಂದ ಅಥವಾ ಆನ್ ಲೈನ್ ಮೂಲಕ
ಪಡೆಯಬಹುದಾಗಿದೆ. ದೆಹಲಿ ಮತ್ತು ಕರ್ನಾಟಕದಲ್ಲಿ ಅರ್ಜಿಯನ್ನು ಆನ್ ಲೈನ್ ನಿಂದ ಡೌನ್ ಲೋಡ್ ಮಾಡಬಹುದಾಗಿದೆ.

ಎರಡನೇ ಹೆಜ್ಜೆ:
ಈ ಮೇಲ್ಕಂಡ ದಾಖಲೆಗಳನ್ನು ಪಡೆಯುತ್ತಿದ್ದಂತೆಯೇ ಮಾಲೀಕರು ಭರ್ತಿ ಮಾಡಿದ ಅರ್ಜಿಯ ಮೇಲೆ ತಮ್ಮ ಸಹಿ ಮಾಡಿ, ಬಾಡಿಗೆದಾರರು ಒದಗಿಸಿದ ದಾಖಲೆಗಳನ್ನು ಮತ್ತು ಬಾಡಿಗೆ ಕರಾರಿನ ಪ್ರತಿಯೊಂದನ್ನು ಪೋಲೀಸರಿಗೆ ಸಲ್ಲಿಸತಕ್ಕದ್ದು.

ಮೂರನೇ ಹೆಜ್ಜೆ:
ಮಾಲೀಕರು/ಪರವಾನಗಿ ನೀಡುವವರು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಪೋಲೀಸರು ಬಾಡಿಗೆದಾರರ ಹಿನ್ನೆಲೆಯನ್ನು ಪತ್ತೆ ಹಚ್ಚುತ್ತಾರೆ. ಈ ಹಂತದಲ್ಲಿ, ಮಾಲೀಕರು/ಪರವಾನಗಿ ನೀಡುವವರಿಗೆ ಸ್ವೀಕೃತಿಯನ್ನು ನೀಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಈ ಪ್ರಕ್ರಿಯೆಯನ್ನು ಆನ್ ಲೈನ್ ಮುಖಾಂತರ ಮಾಡಬಹುದಾಗಿದೆ.

ನಾಲ್ಕನೇ ಹೆಜ್ಜೆ:
ಈ ಪ್ರಕ್ರಿಯೆ ಮುಗಿದ ನಂತರ, ಬಾಡಿಗೆದಾರರ ಹಿನ್ನೆಲೆ ಕುರಿತು ಮಾಹಿತಿಯನ್ನು ಮತ್ತು ಅವರ ವಿರುದ್ಧ ಅಪರಾಧದ ಆರೋಪಗಳಿದ್ದಲ್ಲಿ ಅವುಗಳ ದಾಖಲಾತಿಗಳ ವಿವರವನ್ನು ಮಾಲೀಕರಿಗೆ ಒದಗಿಸುತ್ತಾರೆ. ಈ ಮಾಹಿತಿಗೆ ಪೋಲೀಸ್ ಅಧಿಕಾರಿಗಳು ಸಹಿಮಾಡಿ ದೃಢೀಕರಿಸಿರುತ್ತಾರೆ.

ಬಾಡಿಗೆ ಕಟ್ಟಡವನ್ನು ಖಾಲಿ ಮಾಡಿವುದು

ಭೋಗ್ಯ/ಬಾಡಿಗೆ ಒಪ್ಪಂದ
ನೀವು ಭೋಗ್ಯದ ಒಪ್ಪಂದದ ಅಡಿಯಲ್ಲಿ ಮನೆಯೊಂದರಲ್ಲಿ ವಾಸವಾಗಿರುವ ಪಕ್ಷದಲ್ಲಿ ಕೇವಲ ನೀವು ಅಥವಾ ನಿಮ್ಮಿಂದ ಅನುಮತಿ ಪಡೆದವರು ಮಾತ್ರ ಆ ಮನೆಯಲ್ಲಿ ವಾಸ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಆದರೆ, ಮಾಲೀಕರು ನಿಮ್ಮನ್ನು ಕೆಲವು ಕಾರಣಗಳಿಂದ ಮನೆ ಖಾಲಿ ಮಾಡಿಸಬಹುದಾಗಿದೆ. ಈ ಕ್ರಮ ಕೈಗೊಳ್ಳಲು ಮಾಲೀಕರು ಬಾಡಿಗೆ ನಿಯಂತ್ರಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಭೋಗ್ಯ/ಬಾಡಿಗೆ ಒಪ್ಪಂದದ ಹೊರತಾಗಿಯೂ ಮಾಲೀಕರು ಬಾಡಿಗೆದಾರರನ್ನು ಈ ಕೆಳಕಂಡ ಕಾರಣಗಳಿಗಾಗಿ ಮನೆಯಿಂದ ತೆರವುಗೊಳಿಸಬಹುದಾಗಿದೆ.

 ಮಾಲೀಕರಿಂದ ನೋಟೀಸ್ ಬಂದ ನಂತರವೂ ನೀವು ಎರಡು ತಿಂಗಳುಗಳ ಅವಧಿಗೆ ನೀವು ಬಾಡಿಗೆ ಪಾವತಿ ಮಾಡದಿದ್ದಲ್ಲಿ;

 ಮಾಲೀಕರ ಪೂರ್ವಾನುಮತಿ ಇಲ್ಲದೆ ನೀವು ಮನೆಯನ್ನು ಸಂಪೂರ್ಣವಾಗಿ ಅಥವಾ ಭಾಗಶ: ಯಾರಿಗಾದರೂ ಒಳಬಾಡಿಗೆಗೆ ನೀಡಿದ್ದಲ್ಲಿ;

 ಬಾಡಿಗೆಗೆ ತೆಗೆದುಕೊಂಡ ಉದ್ದೇಶಕ್ಕಲ್ಲದೆ ಬೇರಾವುದೇ ಕಾರಣಗಳಿಗೆ ಮನೆಯನ್ನು ನೀವು ಬಳಸಿ, ಅದರಿಂದ ಸಾರ್ವಜನಿಕರಿಗೆ ತೊಂದರೆ, ಕಿರಿಕಿರಿ ಉಂಟಾಗಿದ್ದಲ್ಲದೆ ಮನೆಗೆ ಹಾನಿಯಂಟಾಗಿದ್ದು ಅಥವಾ ಸ್ವತ್ತಿನಲ್ಲಿ ಮಾಲೀಕರ ಆಸಕ್ತಿಗೆ ಕುಂದುಂಟಾಗಿದ್ದಲ್ಲಿ;

 ನೀವಾಗಲೀ ನಿಮ್ಮ ಕುಟುಂಬದ ಸದಸ್ಯರಾಗಲೀ ಮನೆಯಲ್ಲಿ ಆರು ತಿಂಗಳು ಅಥವಾ ಹೆಚ್ಚಿನ ಅವಧಿಗೆ ವಾಸ ಮಾಡದಿದ್ದಲ್ಲಿ (ನೀವು ಮನೆಯನ್ನು ವಾಸದ ಉದ್ದೇಶಕ್ಕಾಗಿ ಬಾಡಿಗೆಗೆ ಪಡೆದಿದ್ದು, ಅದರಲ್ಲಿ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದಲ್ಲಿ, ನೀವು ಮನೆಯಲ್ಲಿ ವಾಸವಾಗಿಲ್ಲವೆಂದೇ ಪರಿಗಣಿಸಲಾಗುತ್ತದೆ);

 ಬಾಡಿಗೆದಾರರು ಮನೆಗೆ ಗಣನೀಯ ಪ್ರಮಾಣದಲ್ಲಿ ಹಾನಿಯುಂಟು ಮಾಡಿದ್ದಲ್ಲಿ;

 ಮಾಲೀಕರು ಮನೆಯನ್ನು ದುರಸ್ತಿ ಮಾಡಲು, ಪುನ:ನಿರ್ಮಾಣ ಮಾಡಲು ಅಥವಾ ನವೀಕರಿಸಲು ಇಚ್ಛಿಸಿದ್ದು, ಬಾಡಿಗೆದಾರರು ಮನೆಯಲ್ಲಿ ವಾಸವಾಗಿರುವ ಕಾರಣ ಈ ಕೆಲಸವನ್ನು ಕೈಗೆತ್ತಿಕೊಳ್ಳಲು ಅಸಮರ್ಥರಾಗಿದ್ದಲ್ಲಿ;

 ಮನುಷ್ಯರು ವಾಸ ಮಾಡಲು ಮನೆಯು ಅಸುರಕ್ಷಿತವಾಗಿದ್ದು ಮಾಲೀಕರು ಅತ್ಯವಶ್ಯವಾಗಿ ದುರಸ್ತಿಯನ್ನು ಕೈಗೆತ್ತಿಕೊಳ್ಳಬೇಕಾದ ಸಂದರ್ಭದಲ್ಲಿ.

ಮನೆಯನ್ನು ತೆರವುಗೊಳಿಸಲು ನೀಡಬೇಕಾದ ಕಾರಣಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಬಹುದು. ಆದರೆ, ತೆರವುಗೊಳಿಸುವ ಪ್ರಕ್ರಿಯೆಯಲ್ಲಿ ಅನುಸರಿಸುವ ತತ್ತ್ವ ಮಾತ್ರ ಒಂದೇ ಆಗಿರುತ್ತದೆ. ನಿಮ್ಮನ್ನು ಮನೆಯಿಂದ ತೆರವುಗೊಳಿಸಲು ಕಾನೂನಿನ ಚೌಕಟ್ಟಿನಲ್ಲಿ ಸಕಾರಣಗಳನ್ನು ಮಾಲೀಕ ಹೊಂದಿರಬೇಕು. ವಿನಾ:ಕಾರಣ ನಿಮ್ಮನ್ನು ಮನೆಯಿಂದ ತೆರವುಗೊಳಿಸಲಾಗಿದೆ ಎಂದು ನೀವು ಭಾವಿಸಿದಲ್ಲಿ, ಕಾನೂನು ಕ್ರಮ ತೆಗೆದುಕೊಳ್ಳುವ ಸಲುವಾಗಿ ನಿಮ್ಮ ವಕೀಲರನ್ನು ಭೇಟಿ ಮಾಡಿ.

ಅನುಮತಿ ಮತ್ತು ಪರವಾನಗಿ ಒಪ್ಪಂದ
ಅನುಮತಿ ಮತ್ತು ಪರವಾನಗಿ ಒಪ್ಪಂದದ ಅಡಿಯಲ್ಲಿ ಕಟ್ಟಡವನ್ನು ಬಾಡಿಗೆ ತೆಗೆದುಕೊಂಡ ಪ್ರಕರಣಗಳಲ್ಲಿ, ಪರವಾನಗಿ ನೀಡುವವರು (ಬಾಡಿಗೆಗೆ ನೀಡುವವರು) ಪರವಾನಗಿ ಪಡೆದವರಿಗೆ (ಬಾಡಿಗೆದಾರರಿಗೆ) ಕಟ್ಟಡವನ್ನು ತೆರವುಗೊಳಿಸುವಂತೆ ಒಂದು ತಿಂಗಳ ಕಾಲಾವಕಾಶ ನೀಡಲು ಅವಕಾಶವಿರುತ್ತದೆ. ಇದನ್ನು ಮತ್ತು ಒಪ್ಪಂದದಲ್ಲಿ ನಿರ್ದಿಷ್ಟವಾಗಿ ನಮೂದಿಸಿರುವ ರಕ್ಷಣೆಯನ್ನು ಹೊರತುಪಡಿಸಿ, ಕಾನೂನಿನ ಅಡಿಯಲ್ಲಿ ಮತ್ತಾವುದೇ ವಿನಾಯಿತಿ ಇರುವುದಿಲ್ಲ.

ಬಾಡಿಗೆ ತೊಂದರೆಗಳಿಗೆ ಪೋಲೀಸ್ ದೂರು ನೀಡುವುದು

ನಿಮ್ಮ ಮಾಲೀಕರು/ಪರವಾನಗಿ ನೀಡಿದವರು/ಬಾಡಿಗೆದಾರರು/ಪರವಾನಗಿ ಪಡೆದವರು – ಇವರ ವಿರುದ್ಧ ದೂರು ನೀಡಲು ನೀವು ಪೋಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿಯನ್ನು (ಎಫ್ಐಆರ್) ದಾಖಲು ಮಾಡಬೇಕಾಗುತ್ತದೆ. ಮನೆ/ಫ್ಲಾಟನ್ನು ಬಾಡಿಗೆಗೆ ನೀಡುವಾಗ/ಪಡೆಯುವಾಗ ಮಾಲೀಕರು/ಪರವಾನಗಿ ನೀಡುವವರು/ಬಾಡಿಗೆದಾರರು/ಪರವಾನಗಿ ಪಡೆದವರು ಅಥವಾ ಬ್ರೋಕರ್ ಅಥವಾ ಮತ್ತಾವುದೇ ಮಧ್ಯವರ್ತಿಯಿಂದ ನಿಮಗಾದ ತೊಂದರೆ ಕುರಿತು ಕೂಲಂಕಷ ಮಾಹಿತಿಯನ್ನು ಒದಗಿಸತಕ್ಕದ್ದು.