ಬಾಡಿಗೆ ಪಾವತಿಸುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಡಿ.
ಬಾಡಿಗೆ ಜಮಾ ಮಾಡುವುದು
ಭೋಗ್ಯದ ಒಪ್ಪಂದಗಳಲ್ಲಿ ಕಾನೂನು ಪ್ರಕಾರ ನೀವು ಪ್ರತಿತಿಂಗಳ 15 ನೇ ತಾರೀಖಿನೊಳಗೆ ಬಾಡಿಗೆಯನ್ನು ಸಂದಾಯ ಮಾಡತಕ್ಕದ್ದು. ಆದರೆ, ಈ ನಿಯಮ ಅನುಮತಿ ಮತ್ತು ಪರವಾನಗಿ ಒಪ್ಪಂದಗಳಲ್ಲಿ ಅನ್ವಯಿಸುವುದಿಲ್ಲ.
ನೀವು ಸಾಮಾನ್ಯವಾಗಿ ಮುಂದಿನ ತಿಂಗಳಿನ ಅವಧಿಗೆ ಬಾಡಿಗೆ ಸಂದಾಯ ಮಾಡುತ್ತೀರಿ. ಉದಾಹರಣೆಗೆ, ನೀವು ಜೂನ್ 15 ರಂದು ಬಾಡಿಗೆ ಸಂದಾಯ ಮಾಡಿದಲ್ಲಿ ಈ ಮೊತ್ತವು ಜೂನ್ 15 ರಿಂದ ಜುಲೈ 15ರ ಅವಧಿಗೆ ಬಾಡಿಗೆ ಎಂದು ಪರಿಗಣಿಸಲ್ಪಡುತ್ತದೆ. ಬಾಡಿಗೆ ನೀಡಬೇಕಾದ ದಿನಾಂಕವನ್ನು ಬಾಡಿಗೆ/ಪರವಾನಗಿ ಒಪ್ಪಂದದಲ್ಲಿ ನಮೂದಿಸಲಾಗಿರುತ್ತದೆ. ಬಾಡಿಗೆ ಪಾವತಿ ಮಾಡಿದ ಸಲುವಾಗಿ ದಾಖಲೆಗಳನ್ನು ಹೊಂದುವ ಸಲುವಾಗಿ ನೀವು ಬಾಡಿಗೆಯನ್ನು ಚೆಕ್ ಮೂಲಕ ಅಥವಾ ಆನ್ ಲೈನ್ ಮೂಲಕ ಪಾವತಿ ಮಾಡುವುದು ಸೂಕ್ತ. ನಗದು ರೂಪದಲ್ಲಿ ಬಾಡಿಗೆ ನೀಡಿದ ಪಕ್ಷದಲ್ಲಿ ರಸೀದಿಯನ್ನು ನೀಡುವಂತೆ ಮಾಲೀಕರನ್ನು ಒತ್ತಾಯಿಸಿ. ಚೆಕ್ ಮೂಲಕ ಅಥವಾ ಆನ್ ಲೈನ್ ವರ್ಗಾವಣೆ ಮೂಲಕ ಬಾಡಿಗೆ ಪಾವತಿಸಿದಾಗ ನಿಮಗೆ ದೊರೆಯುವ ದಾಖಲೆ ಮತ್ತು ಮಾಲೀಕರ ಖುದ್ದಾಗಿ ನೀಡುವ ರಸೀದಿಗೂ ವ್ಯತ್ಯಾಸವಿದೆ. ಮಾಲೀಕ ನೀಡಿದ ರಸೀದಿಯನ್ನು ನೀವು ತೆರಿಗೆ ಪಾವತಿಸಲು ಮತ್ತು ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರವಾಗಿ ಬಳಸಲು ಸಾಧ್ಯ.
ಬಾಡಿಗೆ ಹೆಚ್ಚು ಮಾಡುವುದು
ಬಾಡಿಗೆ ಒಪ್ಪಂದದ ಅವಧಿ ಮುಗಿದ ನಂತರ ಬಾಡಿಗೆಯನ್ನು ಹೆಚ್ಚುಮಾಡುವ ಕುರಿತು – ಶೇಕಡಾವಾರು ಹೆಚ್ಚಳ – ಸಂಬಂಧಿಸಿದಂತೆ ನಿಮ್ಮ ಒಪ್ಪಂದದಲ್ಲಿ ನಮೂದು ಮಾಡಲಾಗಿರುತ್ತದೆ. ನಿಮ್ಮ ನಗರದಲ್ಲಿ ಈ ಸಂಬಂಧ ಜಾರಿ ಇರುವ ಪದ್ದತಿ ಶೇಕಡಾವಾರು ಹೆಚ್ಚಳ ಕುರಿತು ಮಾಹಿತಿ ಪಡೆದುಕೊಳ್ಳಿ. ಇದರಿಂದ ನೀವು ತೆರುವ ಹೆಚ್ಚುವರಿ ಬಾಡಿಗೆ ಸೂಕ್ತವೇ ಎಂದು ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಮಾಲೀಕರು ಒಪ್ಪಂದದ ಅವಧಿ ಮುಗಿದ ನಂತರ ಮಾತ್ರ ಬಾಡಿಗೆಯನ್ನು ಹೆಚ್ಚಿಸಬಹುದಾಗಿದೆ.
ಮಾಲೀಕರಾಗಲೀ ಅಥವಾ ಬಾಡಿಗೆದಾರರಾಗಲೀ ಅಥವಾ ಇಬ್ಬರೂ ಜೊತೆಯಾಗಿ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮನೆ ಅಥವಾ ಫ್ಲಾಟನ್ನು ಬಾಡಿಗೆಗೆ ಪಡೆಯುವಾಗ ಮಾಡಿಕೊಳ್ಳುವ ಒಪ್ಪಂದದ ಮೇಲೆ ವಿಧಿಸುವ ತೆರಿಗೆಯನ್ನು ಮುದ್ರಾಂಕ ಶುಲ್ಕ ಎಂದು ಕರೆಯಲಾಗುತ್ತದೆ. ಒಪ್ಪಂದವನ್ನು ನೋಂದಣಿ ಮಾಡುವ ಸಮಯದಲ್ಲಿ ಮುದ್ರಾಂಕ ಶುಲ್ಕವನ್ನು ತೆರಬೇಕಾಗುತ್ತದೆ.
ಮಾಲೀಕರ ಆಸ್ತಿಯನ್ನು ನೀವು ಬಾಡಿಗೆದಾರರಾಗಿ/ಪರವಾನಗಿ ಪಡೆದವರಾಗಿ ಅನುಭವಿಸುವ ಅವಧಿಗಾಗಿ ಮಾಲೀಕರು/ಪರವಾನಗಿ ನೀಡುವವರು ನಿಮ್ಮಿಂದ ಮುಂಗಡ ಠೇವಣಿಯನ್ನು ಪಡೆಯುತ್ತಾರೆ. ನೀವು ಫ್ಲಾಟನ್ನು ಖಾಲಿ ಮಾಡಿ ಮಾಲೀಕರಿಗೆ/ಪರವಾನಗಿ ನೀಡುವವರಿಗೆ ಬೀಗದ ಕೈಗಳನ್ನು ಹಿಂದಿರುಗಿಸುವ ಸಂದರ್ಭದಲ್ಲಿ ಈ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಮಾಲೀಕರು/ಪರವಾನಗಿ ನೀಡುವವರು ಮನೆಗೆ ಏನಾದರೂ ಹಾನಿಯಾಗಿದೆಯೇ ಎಂದು ಪರೀಕ್ಷಿಸುತ್ತಾರೆ.
ಮುಂಗಡ ಠೇವಣಿಯನ್ನು ನಿಗದಿಪಡಿಸುವುದು
ಮಾಲೀಕರು/ಪರವಾನಗಿ ನೀಡುವವರು ನಿಗದಿಪಡಿಸಬಹುದಾದ ಮುಂಗಡ ಠೇವಣಿ ಮೊತ್ತವನ್ನು ನಿರ್ಧರಿಸಲು/ನಿಯಂತ್ರಿಸಲು ಯಾವುದೇ ನಿರ್ದಿಷ್ಟ ಕಾನೂನು-ನಿಯಮಗಳು ಇಲ್ಲ. ರೂಢಿಯಲ್ಲಿ, ಬಾಡಿಗೆ ಒಪ್ಪಂದ ತಯಾರಿಸುವ ಸಂದರ್ಭದಲ್ಲಿ ಈ ಮೊತ್ತವನ್ನು ನಿಷ್ಕರ್ಷೆ ಮಾಡಲಾಗುತ್ತದೆ. ಮಾಲೀಕರು/ಪರವಾನಗಿ ನೀಡುವವರು ಈ ಕೆಳಕಂಡ ಉದ್ದೇಶಗಳಿಗಾಗಿ ಮುಂಗಡ ಠೇವಣಿಯನ್ನು ಪಡೆಯುತ್ತಾರೆ.
ನೀವು ಬಾಡಿಗೆಗೆ ಇರುವ ಅವಧಿಯಲ್ಲಿ ಮನೆಗೆ ಯಾವುದಾದರೂ ಹಾನಿಯಾಗಿದ್ದಲ್ಲಿ, ಅದರ ಸಂಬಂಧದ ವೆಚ್ಚವನ್ನು ವಸೂಲಿ ಮಾಡಿಕೊಳ್ಳಲು;
ನೀವು ಬಾಡಿಗೆ/ವಿದ್ಯುತ್/ನೀರು ಇತರೆ ಬಿಲ್ ಗಳನ್ನು ಪಾವತಿ ಮಾಡದಿದ್ದ ಪಕ್ಷದಲ್ಲಿ, ಆ ಮೊತ್ತವನ್ನು ವಸೂಲಿ ಮಾಡಿಕೊಳ್ಳಲು;
ಬಾಡಿಗೆದಾರರು/ಪರವಾನಗಿದಾರರು ಮನೆ ಖಾಲಿ ಮಾಡಲು ಒತ್ತಡ ಹೇರಲು.
ಮುಂಗಡ ಠೇವಣಿಯ ಮೊತ್ತ
ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಒಂದು ಅಥವಾ ಎರಡು ತಿಂಗಳುಗಳ ಬಾಡಿಗೆಯನ್ನು ಮುಂಗಡ ಠೇವಣಿಯಾಗಿ ಸ್ವೀಕರಿಸುವ ಪದ್ಧತಿಯಿದೆ. ಬೆಂಗಳೂರು ನಗರದಲ್ಲಿ 10 ತಿಂಗಳ ಬಾಡಿಗೆಯನ್ನು ಮುಂಗಡ ಠೇವಣಿಯಾಗಿ ಪಡೆಯಲಾಗುತ್ತದೆ.
ಕೆಲವು ಮಾಲೀಕರು/ಪರವಾನಗಿ ನೀಡುವವರು 11 ತಿಂಗಳ ಒಪ್ಪಂದ ಮುಗಿದ ನಂತರ ಬಾಡಿಗೆ ಹೆಚ್ಚಾಗುವ ಸಮಯದಲ್ಲಿ, ಹೆಚ್ಚಿನ ಮುಂಗಡ ಠೇವಣಿಯ ಮೊತ್ತಕ್ಕೆ ಬೇಡಿಕೆ ಇಡುತ್ತಾರೆ.
ಈ ಮೊತ್ತವನ್ನು ನಿಯಂತ್ರಿಸುವ ಯಾವುದೇ ಕಾನೂನು ಜಾರಿಯಲ್ಲಿ ಇರದ ಕಾರಣ, ಮುಂಗಡ ಠೇವಣಿಯು ನಿಷ್ಕರ್ಷೆ ಮಾಡಲು ನಿಮ್ಮ ಸಾಮರ್ಥ್ಯ ಮತ್ತು ನಿಮ್ಮ ಹಾಗೂ ಮಾಲೀಕರು/ಪರವಾನಗಿ ನೀಡುವವರ ನಡುವಣ ಪರಸ್ಪರ ನಂಬಿಕೆಯನ್ನು ಅವಲಂಬಿಸಿದೆ.