ಕೌಟುಂಬಿಕ ಸಂಬಂಧವೆಂದರೇನು?

(ಮುನ್ಸೂಚನೆ: ಕೆಳಗೆ ಕೌಟುಂಬಿಕ ಹಿಂಸೆಯ ಬಗ್ಗೆ ಮಾಹಿತಿ ಇದ್ದು, ಇದು ಕೆಲ ಓದುಗರಲ್ಲಿ ಮಾನಸಿಕ ಗೊಂದಲ ಉಂಟು ಮಾಡಬಹುದು)

ಕೌಟುಂಬಿಕ ಹಿಂಸೆಯ ಮೇರೆಗೆ ನೀವು ಕಾನೂನು ಪರಿಹಾರ ಪಡೆಯಬೇಕಿದ್ದಲ್ಲಿ, ಕಿರುಕುಳ ಕೊಡುತ್ತಿರುವ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿದೆ ಎಂದು ಸಾಬೀತುಪಡಿಸಬೇಕಾಗುತ್ತದೆ. ಕಿರುಕುಳ ಕೊಡುತ್ತಿರುವ ವ್ಯಕ್ತಿಯ ಜೊತೆ ನಿಮಗೆ ಕೆಳಗಿನ ಯಾವುದೇ ರೀತಿಯ ಸಂಬಂಧವಿದ್ದರೆ ಅದು “ಕೌಟುಂಬಿಕ ಸಂಬಂಧ” ಎಂದು ಪರಿಗಣಿಸಲಾಗುತ್ತದೆ:

 • ರಕ್ತ ಸಂಬಂಧಿಕರು: ಉದಾಹರಣೆಗೆ, ನೆಂಟರು – ನಿಮ್ಮ ಮಾವ/ದೊಡ್ಡಪ್ಪ, ಅಕ್ಕ/ತಂಗಿ, ಅಪ್ಪ, ಇತ್ಯಾದಿ.
 • ಮದುವೆಯಿಂದ ನೆಂಟರಾದವರು: ಉದಾಹರಣೆಗೆ, ನಿಮ್ಮ ಗಂಡ, ನಾದಿನಿ, ಮೈದುನ, ಇತ್ಯಾದಿ.
 • ಮದುವೆಯಂತಹ ಸಂಬಂಧ. ಉದಾಹರಣೆಗೆ, ಲಿವ್-ಇನ್ ರಿಲೇಷನ್ಶಿಪ್
 • ದತ್ತು ಸ್ವೀಕೃತಿಯಿಂದ ನೆಂಟರಾದವರು: ಉದಾಹರಣೆಗೆ, ಮಲ-ತಂದೆ, ಮಲ-ಅಣ್ಣ, ಇತ್ಯಾದಿ.
 • ಒಟ್ಟಿಗೆ ಅವಿಭಕ್ತ ಕುಟುಂಬದಂತೆ ವಾಸ ಮಾಡುತ್ತಿರುವ ಕಾರಣದಿಂದ ಬೆಳೆದ ನೆಂಟಸ್ಥಿಕೆ: ಉದಾಹರಣೆಗೆ, ನೀವು ಅವಿಭಕ್ತ ಕುಟುಂಬದಲ್ಲಿ ವಾಸ ಮಾಡುತ್ತಿದ್ದಲ್ಲಿ, ಆ ಕುಟುಂಬದ ಎಲ್ಲ ಸದಸ್ಯರ (ನಿಮ್ಮ ಅಪ್ಪ, ಅಣ್ಣ/ಅತ್ತಿಗೆ, ಮಾವ/ದೊಡ್ಡಪ್ಪ, ಅಜ್ಜ/ಅಜ್ಜಿ, ಇತ್ಯಾದಿ) ವಿರುದ್ಧ ದೂರು ಸಲ್ಲಿಸಬಹುದು.

ನ್ಯಾಯಾಲಯಕ್ಕೆ ಹೋಗಲು, ನೀವು ಮತ್ತು ನಿಮಗೆ ಕಿರುಕುಳ ನೀಡುವವರು, ಒಂದೇ ಮನೆಯಲ್ಲಿ ವಾಸ ಮಾಡುತ್ತಿರುವಿರಿ, ಅಥವಾ ಹಿಂದೆ ವಾಸ ಮಾಡುತ್ತಿದ್ದೀರಿ, ಎಂದು ಸಾಬೀತುಪಡಿಸಬೇಕಾಗುತ್ತದೆ.

ಒಂದೇ ಮನೆಯಲ್ಲಿ ಇರುವುದು ಎಂದರೇನು?

ನೀವು ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿಯ ಜೊತೆ ಕೆಳಗಿನ ಸಂದರ್ಭಗಳಲ್ಲಿ “ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದೀರಿ” ಎಂದು ಕಾನೂನಾತ್ಮಕವಾಗಿ ಪರಿಗಣಿಸಲಾಗುತ್ತದೆ:

ಕಿರುಕುಳ ಕೊಡುತ್ತಿದ್ದ ವ್ಯಕ್ತಿಯ ಜೊತೆ ಹಿಂದೆ ವಾಸ ಮಾಡುತ್ತಿದ್ದಿರಿ:

ಕಾನೂನಿನಡಿ ರಕ್ಷಣೆ ಹಾಗು ಪರಿಹಾರ ಬೇಕೆಂದಲ್ಲಿ, ನೀವು ಕಿರುಕುಳ ಕೊಡುತ್ತಿದ್ದ ವ್ಯಕ್ತಿಯ ಜೊತೆ ಪ್ರಸ್ತುತ ವಾಸವಾಗಿರಬೇಕು, ಅಥವಾ ಹಿಂದೆಂದೋ ವಾಸವಾಗಿದ್ದಿರಬೇಕು. ಆದರೆ, ನೀವು ದೂರು ನೀಡುವ ಸಮಯದಲ್ಲಿ ಅವರ ಜೊತೆ ವಾಸವಾಗಿರಬೇಕು ಎಂದೇನಿಲ್ಲ, ಹಾಗು ಹಿಂಸೆ ನಡೆಯುತ್ತಿದ್ದ ಸಮಯದಲ್ಲಿ ಅವರ ಜೊತೆ ವಾಸವಾಗಿರಬೇಕು ಎಂದೇನಿಲ್ಲ. ಕೇವಲ, ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ಯಾವಾಗಾದರೂ ನೀವು ವಾಸವಾಗಿದ್ದಿರಬೇಕು.

ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ಕೌಟುಂಬಿಕ ಸಂಬಂಧವಿರುವುದು:

ಕೌಟುಂಬಿಕ ಹಿಂಸೆಯ ಮೇರೆಗೆ ನಿಮಗೆ ರಕ್ಷಣೆ ಮತ್ತು ಪರಿಹಾರ ಬೇಕಿದ್ದಲ್ಲಿ, ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ನೀವು ವಾಸವಾಗಿದ್ದಿರಬೇಕು ಮತ್ತು ಅವರ ಜೊತೆ ಕೌಟುಂಬಿಕ ಸಂಬಂಧ ಹೊಂದಿರಬೇಕು. ಉದಾಹರಣೆಗೆ, ನೀವು ನಿಮ್ಮ ಅತ್ತೆಯ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದು, ಅವರಿಂದ ನಿಮಗೆ ಕೌಟುಂಬಿಕ ಹಿಂಸೆಯಾಗುತ್ತಿದ್ದಲ್ಲಿ, ನೀವು ರಕ್ಷಣೆ ಹಾಗು ಪರಿಹಾರ ಪಡೆಯಬಹುದು; ಯಾಕೆಂದರೆ, ಕಿರುಕುಳ ನೀಡುತ್ತಿರುವವರ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿದ್ದು, ಅವರ ಜೊತೆ ನೀವು ಒಂದೇ ಮನೆಯಲ್ಲಿ ವಾಸವಾಗಿದ್ದೀರಿ.

ಆದರೆ, ನೀವು ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದು, ಅವರ ಜೊತೆ ನಿಮಗೆ ಕೌಟುಂಬಿಕ ಸಂಬಂಧ ಇಲ್ಲದಿದ್ದರೆ, ಕೌಟುಂಬಿಕ ಹಿಂಸೆಯ ದೂರು ನೀವು ಕೊಡಲು ಸಾಧ್ಯವಿಲ್ಲ. ಉದಾಹರಣೆಗೆ, ನಿಮ್ಮ ಸೇವಕ ನಿಮ್ಮ ಜೊತೆ ಮನೆಯಲ್ಲಿ ವಾಸವಾಗಿದ್ದು, ನಿಮಗೆ ಅವರು ಹೊಡೆದರೆ, ಅವರ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ಸಲ್ಲಿಸಲು ಬರುವುದಿಲ್ಲ; ಯಾಕೆಂದರೆ, ಅವರ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿಲ್ಲ.

ಮನೆಯಲ್ಲಿ ಆಸ್ತಿ ಪಾಲು ಇರುವುದು/ಇಲ್ಲದಿರುವುದು:

ರಕ್ಷಣೆ ಹಾಗು ಪರಿಹಾರ ಪಡೆಯಲು, ನೀವು ವಾಸಿಸುತ್ತಿರುವ ಮನೆಯಲ್ಲಿ ನಿಮಗೆ ಪಾಲು ಇದೆಯೋ, ಇಲ್ಲವೋ ಎಂಬುದು ಅಪ್ರಸ್ತುತ. ಈ ಮನೆಯು ನಿಮ್ಮ/ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿಯ/ನಿಮ್ಮಿಬ್ಬರ ಜಂಟಿ-ಹೆಸರಲ್ಲಿರಬಹುದು, ಅಥವಾ ನಿಮ್ಮಿಬ್ಬರಲ್ಲಿ ಒಬ್ಬರು ಮನೆಯನ್ನು ಗುತ್ತಿಗೆ ಪಡೆದಿರಬಹುದು; ಅಥವಾ, ಮನೆ ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿಯೂ ಸೇರಿದ ಅವಿಭಜಿತ ಕುಟುಂಬಕ್ಕೆ ಸೇರಿರಬಹುದು, ಮತ್ತು ಆ ಮನೆಯ ಮೇಲೆ ನಿಮಗೆ ಕಾನೂನುಬದ್ಧವಾಗಿ ಯಾವ ಹಕ್ಕೂ ಇಲ್ಲದಿರಬಹುದು.

ಆದರೆ, ಮನೆ ನಿಮ್ಮ ಅತ್ತೆ-ಮಾವಂದಿರ, ಅಥವಾ ಕಿರುಕುಳ ಕೊಡುತ್ತಿರುವ ವ್ಯಕ್ತಿಯ ಇನ್ನಿತರ ನೆಂಟರ ಪ್ರತ್ಯೇಕ ಮತ್ತು ವೈಯಕ್ತಿಕ ಆಸ್ತಿಯಾಗಿದ್ದರೆ, ಆ ಮನೆಯಲ್ಲಿ ಪಾಲು ಕೇಳುವ ಯಾವ ಹಕ್ಕೂ ನಿಮಗಿರಲ್ಲ. ಆದಾಗ್ಯೂ, ನಿಮಗೆ ಆ ಮನೆಯಲ್ಲಿ ವಾಸಿಸುವ ಹಕ್ಕು ಇದೆಯೋ ಇಲ್ಲವೋ ಎಂಬುದನ್ನು, ಆಯಾ ಪ್ರಕರಣಗಳ ಸಂದರ್ಭಾನುಸಾರ ನ್ಯಾಯಾಲಯವು ತೀರ್ಮಾನಿಸುತ್ತದೆ. ನಿಮ್ಮ ಅತ್ತೆ-ಮಾವಂದಿರ ಮನೆಯಲ್ಲಿ, ನ್ಯಾಯಾಲಯವು ನಿಮಗೆ ವಾಸಿಸುವ ಹಕ್ಕು ಕೆಲ ಸಂದರ್ಭಗಳಲ್ಲಿ ನೀಡಬಹುದು.

ಗಮನಿಸಬೇಕಾದ ವಿಷಯವೆಂದರೆ, ನೀವು ವಾಸಿಸುವ ಮನೆಯಲ್ಲಿಯೇ ಕೌಟುಂಬಿಕ ಹಿಂಸೆ ನಡೆದಿರಬೇಕು ಎಂದೇನಿಲ್ಲ. ಹಿಂಸೆ ಬೇರೆಲ್ಲೋ ಕೂಡ ನಡೆದಿರಬಹುದು.

ಲಿವ್-ಇನ್ ಸಂಬಂಧಗಳು ಕೌಟುಂಬಿಕ ಹಿಂಸೆ ಕಾನೂನಿನಡಿ ಬರುತ್ತವೆಯೇ?

(ಮುನ್ಸೂಚನೆ: ಕೆಳಗೆ ಕೌಟುಂಬಿಕ ಹಿಂಸೆಯ ಬಗ್ಗೆ ಮಾಹಿತಿ ಇದ್ದು, ಇದು ಕೆಲ ಓದುಗರಲ್ಲಿ ಮಾನಸಿಕ ಗೊಂದಲ ಉಂಟು ಮಾಡಬಹುದು)

ನೀವು ನಿಮ್ಮ ಸಂಗಾತಿಯ ಜೊತೆ, ಮದುವೆಯಾಗದೆ, ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೆ, ನೀವು ಲಿವ್-ಇನ್ ಸಂಬಂಧದಲ್ಲಿ ಇದ್ದೀರಿ ಎಂದರ್ಥ. ಒಬ್ಬ ಮದುವೆಯಾಗದ ವಯಸ್ಕ ಸ್ತ್ರೀ ಮತ್ತು ಒಬ್ಬ ಮದುವೆಯಾಗದ ವಯಸ್ಕ ಪುರುಷ ಜೊತೆಗೆ ವಾಸಿಸುತ್ತಿದ್ದರೆ, ಅಥವಾ ಹಿಂದೆ ಯಾವಾಗೋ ಜೊತೆಗೆ ವಾಸಿಸಿದ್ದರೆ, ಅವರ ನಡುವಿನ ಸಂಬಂಧವನ್ನು “ಕೌಟುಂಬಿಕ ಸಂಬಂಧ” ಎಂದು ಪರಿಗಣಿಸಲಾಗುವುದು. ಮದುವೆಗಳಿಗೆ ಹೋಲಿಸಿದರೆ, ಲಿವ್-ಇನ್ ಸಂಬಂಧಗಳನ್ನು ಕಾನೂನು ನಿಯಂತ್ರಿಸುವುದಿಲ್ಲ. ಉದಾಹರಣೆಗೆ, ಲಿವ್-ಇನ್ ಸಂಬಂಧವನ್ನು ಜಾರಿಗೊಳಿಸಲು ಅದನ್ನು ನೋಂದಾಯಿಸಬೇಕಿಲ್ಲ, ಮತ್ತು ಸಂಬಂಧಧಿನದ ಹೊರಬರಲು ವಿಚ್ಛೇದನ ಬೇಕಿಲ್ಲ. ನಿಮಗೆ ಇಷ್ಟ ಬಂದಂತೆ ಸಂಬಂಧವನ್ನು ಅಂತ್ಯಗೊಳಿಸಬಹುದು.

ಲಿವ್-ಇನ್ ಸಂಬಂಧಗಳು “ಮದುವೆಯ ರೀತಿಯಲ್ಲಿ” ಇದ್ದರೆ ಮಾತ್ರ ಅವುಗಳನ್ನು ಕಾನೂನು ಗುರುತಿಸುತ್ತದೆ. ಅಂದರೆ ಆ ಲಿವ್-ಇನ್ ಸಂಬಂಧಗಳಲ್ಲಿ, ಅವು ಕಾನೂನುಬದ್ಧವಾಗಿ ಗುರುತಿಸಲ್ಪಡದಿದ್ದರೂ ಸಹ, ಮದುವೆಯ ಕೆಲವು ಅತ್ಯಗತ್ಯ ಗುಣಲಕ್ಷಣಗಳು ಇರಬೇಕು. ಲಿವ್-ಇನ್ ಸಂಬಂಧಗಳ ಮೇಲೆ ತೀರ್ಪುಗಳನ್ನು ನೀಡುವಾಗ ನ್ಯಾಯಾಲಯಗಳು ಅವುಗಳನ್ನು ಮದುವೆಗಳಿಗೆ ಹೋಲಿಸಿ, ಅವುಗಳಲ್ಲಿ ಮದುವೆಯ ಅತ್ಯಗತ್ಯ ಗುಣಲಕ್ಷಣಗಳು ಇವೆಯೋ ಇಲ್ಲವೋ ಎಂದು ತೀರ್ಮಾನಿಸುತ್ತವೆ.

“ಮದುವೆಯಂತಹ” ಲಿವ್-ಇನ್ ಸಂಬಂಧಗಳು ಕೆಳಗಿನ ಅಂಶಗಳನ್ನು ಹೊಂದಿರುತ್ತವೆ ಎಂದು ಹಲವಾರು ತೀರ್ಪುಗಳಲ್ಲಿ ನ್ಯಾಯಾಲಯಗಳು ಹೇಳಿವೆ:

೧. ಸಂಬಂಧದ ಅವಧಿ:

ನೀವು ಮತ್ತು ನಿಮ್ಮ ಸಂಗಾತಿ, ಸ್ವೇಚ್ಛೆಯಿಂದ, ಸಾಕಷ್ಟು ಸಮಯದವರೆಗೆ (ಹಲವು ತಿಂಗಳುಗಳು ಅಥವಾ ವರ್ಷಗಳು), ಒಂದೇ ಮನೆಯಲ್ಲಿ ವಾಸವಾಗಿರಬೇಕು. ಕೇವಲ ಕೆಲವು ವಾರಗಳು, ಒಂದು ವಾರಾಂತ್ಯ, ಅಥವಾ ಒಂದು ರಾತ್ರಿ ಒಟ್ಟಿಗೆ ಕಳೆದರೆ ಅದು ಲಿವ್-ಇನ್ ಸಂಬಂಧ ಎನಿಸಲಾರದು.

೨. ಸಾರ್ವಜನಿಕವಾಗಿ ಜನರ ಜೊತೆ ಬೆರೆಯುವುದು:

ನೀವು ಮತ್ತು ನಿಮ್ಮ ಸಂಗಾತಿ ಗಂಡ-ಹೆಂಡತಿಯ ಹಾಗೆ ಸ್ನೇಹಿತರು, ನೆಂಟರು, ಮತ್ತು ಇನ್ನಿತರರ ಜೊತೆ ಸಾರ್ವಜನಿಕವಾಗಿ ಬೆರೆತಿರಬೇಕು.

೩. ವಯಸ್ಸು ಮತ್ತು ವೈವಾಹಿಕ ಸ್ಥಿತಿ:

ನೀವು ಮತ್ತು ನಿಮ್ಮ ಸಂಗಾತಿ ಮದುವೆಯಾಗಲು ಅರ್ಹರಾಗಿರಬೇಕು. ಅಂದರೆ, ನಿಮ್ಮಿಬರಿಗೂ ಲಿವ್-ಇನ್ ಸಂಬಂಧವನ್ನು ಪ್ರವೇಶಿಸುವ ಸಮಯದಲ್ಲಿ ಜೀವಂತ ಗಂಡ/ಹೆಂಡತಿ ಇರಬಾರದು, ಮತ್ತು ನೀವಿಬ್ಬರೂ ಮದುವೆಯ ವಯಸ್ಸು ತಲುಪಿರಬೇಕು – ಮಹಿಳೆಯರಿಗೆ ೧೮, ಮತ್ತು ಪುರುಷರಿಗೆ ೨೧.

೪. ಲೈಂಗಿಕ ಸಂಬಂಧ:

ನೀವು ಮತ್ತು ನಿಮ್ಮ ಸಂಗಾತಿಯ ನಡುವೆ, ಭಾವನಾತ್ಮಕ ಮತ್ತು ಆತ್ಮೀಯ ಆಸರೆಯುಳ್ಳ ಲೈಂಗಿಕ ಸಂಬಂಧವಿರಬೇಕು.

೫. ಆರ್ಥಿಕ ವ್ಯವಸ್ಥೆ:

ಗಂಡ-ಹೆಂಡತಿಯರ ಹಾಗೆ ನೀವು ಮತ್ತು ನಿಮ್ಮ ಸಂಗಾತಿಯ ಮಧ್ಯೆ ಆರ್ಥಿಕ ವ್ಯವಸ್ಥೆಯಿರಬೇಕು. ಉದಾಹರಣೆಗೆ, ನಿಮ್ಮಿಬ್ಬರ ಆರ್ಥಿಕ ಸಂಪನ್ಮೂಲಗಳನ್ನು ನೀವು ಸಾಮಾನ್ಯ ನಿಧಿಯಾಗಿ ಸೇರಿಸಿ ಬಳಸುತ್ತಿದ್ದೀರಿ, ಮತ್ತು ಜಂಟಿ ಬ್ಯಾಂಕ್ ಖಾತೆಗಳು, ಆಸ್ತಿಗಳ ಮೇಲೆ ಜಂಟಿ ಒಡೆತನ, ದೀರ್ಘ ಕಾಲದ ಔದ್ಯೋಗಿಕ ಬಂಡವಾಳ ಹೂಡುವುದು, ಇನ್ನಿತರೇ ಉಪಕರಣಗಳ ಮೂಲಕ, ಆರ್ಥಿಕವಾಗಿ ಒಬ್ಬರನ್ನೊಬ್ಬರು ಬೆಂಬಲಿಸುತ್ತಿರಬೇಕು.

೬. ಕೌಟುಂಬಿಕ ವ್ಯವಸ್ಥೆ:

ನಿಮ್ಮಿಬ್ಬರಲ್ಲಿ ಒಬ್ಬರು, ವಿಶೇಷವಾಗಿ ಮಹಿಳೆಯಾದವರು, ಮನೆಯನ್ನು ನಡೆಸುವ/ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಲ್ಲಿ, ಹಾಗು ಮನೆಗೆಲಸ (ಸ್ವಚ್ಛ ಮಾಡುವುದು, ಅಡುಗೆ ಮಾಡುವುದು, ಮನೆಯ ನಿರ್ವಹಣೆ, ಇತ್ಯಾದಿ) ಮಾಡುತ್ತಿದ್ದಲ್ಲಿ, ನಿಮ್ಮ ಸಂಬಂಧ ಮದುವೆಯಂತಹ ಕೌಟುಂಬಿಕ ವ್ಯವಸ್ಥೆ ಎಂದು ಪರಿಗಣಿಸಲಾಗುತ್ತದೆ.

೭. ಪಕ್ಷಗಳ ಉದ್ದೇಶ ಮತ್ತು ನಡುವಳಿಕೆ:

ಅವರ ಸಂಬಂಧ ಏನು, ಸಂಬಂಧದೊಳಗಿನ ಅವರ ಪಾತ್ರ ಮಾತು ಕರ್ತವ್ಯಗಳು – ಇವುಗಳ ಬಗ್ಗೆ ಅವರ ಮಧ್ಯೆ ಇರುವ ಜಂಟಿ ಉದ್ದೇಶ ಅವರ ಸಂಬಂಧದ ಪ್ರಕೃತಿಯನ್ನು ನಿರ್ಧರಿಸುತ್ತದೆ. ೮. ಮಕ್ಕಳು: ಲಿವ್-ಇನ್ ಸಂಬಂಧದಲ್ಲಿ ಮಕ್ಕಳು ಇರುವುದು ಇದು “ಮದುವೆಯಂತಹ ಸಂಬಂಧ”, ಮತ್ತು ತಮ್ಮ ಸಂಬಂಧದ ಬಗ್ಗೆ ದೂರ ದೃಷ್ಟಿಯ ದೃಷ್ಟಿಕೋನವಿದೆ ಎಂಬುದನ್ನು ಬಲವಾಗಿ ಸೂಚಿಸುತ್ತದೆ.

ಮೇಲೆ ನೀಡಿರುವ ಮಾನದಂಡಗಳನ್ನು ಪೂರೈಸದಿದ್ದರೆ, ನ್ಯಾಯಾಲಯಗಳು ನಿಮ್ಮ ಸಂಬಂಧವನ್ನು ಲಿವ್-ಇನ್ ಸಂಬಂಧ ಎಂದು ಒಪ್ಪುವುದಿಲ್ಲ.

ಕೌಟುಂಬಿಕ ಹಿಂಸೆ ಅಂದರೇನು?

ಕೌಟುಂಬಿಕ ಹಿಂಸೆ ಅಂದರೇನು?

ಯಾವುದೇ ಮನೆಯಲ್ಲಿ, ಮಹಿಳೆ ಮತ್ತು ಅವಳ ಪಾಲನೆಯಲ್ಲಿರುವ ಮಗುವಿನ ಆರೋಗ್ಯ ಮತ್ತು ಸುರಕ್ಷತೆಗೆ ಧಕ್ಕೆ ತರುವಂತಹ ಹಿಂಸಾತ್ಮಕ ಅಥವಾ ಕಿರುಕುಳ ನೀಡುವ ವರ್ತನೆಗೆ ಕೌಟುಂಬಿಕ ಹಿಂಸೆ ಎನ್ನುತ್ತಾರೆ. ಕಾನೂನಿನ ಸಹಾಯದಿಂದ ನೀವು: -ತಕ್ಷಣ ರಕ್ಷಣೆ ಪಡೆದು ಹಿಂಸೆ ಮುಂದುವರೆಯದಂತೆ ತಡೆಯಬಹುದು. ತಕ್ಷಣ ರಕ್ಷಣೆ ಪಡೆಯಲು ನೀವು ಪೊಲೀಸ್, ರಕ್ಷಣಾಧಿಕಾರಿಗಳು, ಇನ್ನಿತರೇ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಕೆಳಗಿನ ಪರಿಹಾರಗಳನ್ನು ಪಡೆಯಲು ನ್ಯಾಯಾಲಯಕ್ಕೆ ಹೋಗಿ:

 • ವಿತ್ತೀಯ ಪರಿಹಾರ, ವಾಸಿಸಲು ಬೇಕಾದ ಸ್ಥಳ, ಇತ್ಯಾದಿ ಪಡೆಯಬಹುದು
 • ನಿಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಅಪರಾಧಿಕ ಫಿರ್ಯಾದು ನೀಡಬಹುದು

ಕೌಟುಂಬಿಕ ಹಿಂಸೆಯ ರೀತಿಗಳು:

ಹಿಂಸೆ ಕೇವಲ ಶಾರೀರಿಕವಾಗಿರಬೇಕಂತಿಲ್ಲ. ಕಾನೂನು ಲೈಂಗಿಕ ಹಿಂಸೆ, ಮೌಖಿಕ ನಿಂದನೆ, ಭಾವನಾತ್ಮಕ/ಮಾನಸಿಕ ಕಿರುಕುಳ, ವಿತ್ತೀಯ ಕಿರುಕುಳ, ಇನ್ನಿತರೇ ರೀತಿಗಳ ದೌರ್ಜನ್ಯಗಳನ್ನೂ ಸಹ ಗುರುತಿಸಿದೆ. ಉದಾಹರಣೆಗೆ, ನಿಮ್ಮ ಮೈದುನ ಪ್ರತಿದಿನ ನಿಮ್ಮನ್ನು ಮನೆಯಿಂದ ಆಚೆ ತಳ್ಳುವ ಬೆದರಿಕೆ ಹಾಕುತ್ತಿದ್ದಲ್ಲಿ, ಇದು ಭಾವನಾತ್ಮಕ ಕಿರುಕುಳ ಎಂದು ಪರಿಗಣಿಸಲಾಗುತ್ತದೆ.

ಕೌಟುಂಬಿಕ ಹಿಂಸೆಯ ಆವರ್ತನೆ:

ಹಿಂಸೆಯ ಏಕೈಕ ಕ್ರಿಯೆ/ಘಟನೆಯೂ ಕೌಟುಂಬಿಕ ಹಿಂಸೆ ಎಂದು ಪರಿಗಣಿಸಲಾಗುತ್ತದೆ. ನ್ಯಾಯಾಲಯಕ್ಕೆ ಹೋಗಲು ನೀವು ಸುದೀರ್ಘ ಕಾಲದಿಂದ ಹಿಂಸೆ ಸಹಿಸಿರಬೇಕಾಗುತ್ತದೆ ಎಂದೇನಿಲ್ಲ.

ಕೌಟುಂಬಿಕ ಹಿಂಸೆಯ ಸಂಕೇತಗಳು

ಕೌಟುಂಬಿಕ ಹಿಂಸೆಯು ಹಲವಾರು ತರಹಗಳಲ್ಲಿದ್ದು, ಮೌಖಿಕ, ಲೈಂಗಿಕ, ಇತ್ಯಾದಿ ರೀತಿಗಳಲ್ಲಿ ಇರಬಹುದು. ಕೆಳಗೆ ಕೌಟುಂಬಿಕ ಹಿಂಸೆಯ ಸಂಕೇತಗಳ ಪಟ್ಟಿ ನೀಡಲಾಗಿದೆ. ನೀವು ಅಥವಾ ನಿಮ್ಮ ಸುಪರ್ದಿಯಲ್ಲಿರುವ ಮಗು ಈ ಯಾವುದಾದರೂ ನಡುವಳಿಕೆಗೆ ಬಲಿಯಾದಲ್ಲಿ, ನ್ಯಾಯಾಲಯಕ್ಕೆ ಹೋಗಿ ರಕ್ಷಣೆ ಪಡೆಯಬಹುದು:

ಶಾರೀರಿಕ ಕಿರುಕುಳ:

 • ನಿಮಗೆ ಶಾರೀರಿಕವಾಗಿ ನೋವುಂಟುಮಾಡಲಾಗುತ್ತಿದ್ದು, ನಿಮ್ಮ ಆರೋಗ್ಯ, ಶಾರೀರಿಕ ಬೆಳವಣಿಗೆ ಅಥವಾ ಯೋಗಕ್ಷೇಮಕ್ಕೆ ಧಕ್ಕೆ ಉಂಟಾಗಿದೆ. ಉದಾಹರಣೆಗೆ, ನಿಮಗೆ ಹೊಡೆಯುವುದು, ಕೆನ್ನೆಗೆ ಹೊಡೆಯುವುದು, ಏಟು ಹಾಕುವುದು, ಇತ್ಯಾದಿ.
 • ನಿಮಗೆ ಶಾರೀರಿಕವಾಗಿ ನೋವುಂಟುಮಾಡಲಾಗುತ್ತಿದ್ದು, ಇದು ನಿಮ್ಮ ಜೀವಕ್ಕೆ ಅಪಾಯ ತಂದಿದೆ.
 • ನಿಮಗೆ ಶಾರೀರಿಕವಾಗಿ ನೋವುಂಟುಮಾಡುತ್ತಾರೆ ಎಂಬ ನಂಬಿಕೆ ಮೂಡಿಸುವಂತಹ ಸನ್ನೆಗಳನ್ನು ಯಾರಾದರೂ ಮಾಡುತ್ತಿದ್ದಾರೆ. ಉದಾಹರಣೆಗೆ, ನಿಮ್ಮ ಗಂಡ ನಿಮ್ಮ ಮುಂದೆ ಮುಷ್ಠಿ ಮಾಡಿ, ನಿಮಗೆ ಅವರು ಮುಷ್ಟಿಯಿಂದ ಗುದ್ದುತ್ತಾರೋ ಎಂಬ ಹಾಗೆ ನಂಬಿಕೆ ಮೂಡಿಸುವಂತೆ, ನಿಮಗೆ ಪೆಟ್ಟಾಗಬಹುದಾದ ರೀತಿಯಲ್ಲಿ ಕಯ್ಯನ್ನು ಅಲುಗಾಡಿಸುವುದು.
 • ನಿಮಗೆ ಅಥವಾ ನಿಮ್ಮ ಆಪ್ತರಿಗೆ ನೋವಾಗುವಂತೆ ಮೌಖಿಕ ಅಥವಾ ಶಾರೀರಿಕ ಬೆದರಿಕೆಗಳನ್ನು
 • ಕೆಳಗಿನ ಉದ್ದೇಶಗಳಿಗೆ ಹಾಕುವುದು:
 • ನಿಮ್ಮನ್ನು ಹೆದರಿಸಲು, ಎಚ್ಚರಿಸಲು, ಅಥವಾ ನಿಮಗೆ ಕಿರಿಕಿರಿ ಉಂಟು ಮಾಡಲು
 • ಕಾನೂನಿನಡಿಯಲ್ಲಿ ನೀವು ಯಾವ ಕೆಲಸ ಮಾಡಬೇಕಿಲ್ಲವೋ, ಆ ಕೆಲಸವನ್ನು ನಿಮ್ಮಿಂದ ಮಾಡಿಸಲು. ಉದಾಹರಣೆಗೆ, ನೀವು ನಿಮ್ಮ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸದಿದ್ದರೆ ನಿಮಗೆ ನೋವುಂಟುಮಾಡುವವರೆಂದು ನಿಮ್ಮ ಅತ್ತೆ-ಮಾವ ಬೆದರಿಕೆ ಹಾಕಿದ್ದಲ್ಲಿ.
 •  ಕಾನೂನಿನಡಿಯಲ್ಲಿ ನಿಮಗೆ ಯಾವ ಕೆಲಸ ಮಾಡಲು ಹಕ್ಕಿದೆಯೋ, ಆ ಕೆಲಸವನ್ನು ಮಾಡಲಾಗದಂತೆ ಮಾಡುವುದು. ಉದಾಹರಣೆಗೆ, ನೀವು ನಿಮ್ಮ ಗಂಡನ ವಿರುದ್ಧ ದೂರು ಸಲ್ಲಿಸಿದಲ್ಲಿ, ಅವರು ನಿಮಗೆ ನೋವುಂಟುಮಾಡುತ್ತಾರೆ ಎಂದು ಬೆದರಿಕೆ ಹಾಕಿದ್ದಲ್ಲಿ.

ಮೌಖಿಕ ಮತ್ತು ಭಾವನಾತ್ಮಕ ಕಿರುಕುಳ:

 • ನಿಮ್ಮನ್ನು ಅವಮಾನ ಮಾಡುವುದು, ಹೀಯಾಳಿಸುವುದು, ಅಪಹಾಸ್ಯ ಮಾಡುವುದು. ಉದಾಹರಣೆಗೆ, ನೀವು ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂದು, ಅಥವಾ ವರದಕ್ಷಿಣೆ ತರಲಿಲ್ಲವೆಂದು ನಿಮ್ಮ ಗಂಡ ನಿಮ್ಮನ್ನು ನಿಂದನೀಯ ಹೆಸರುಗಳಿಂದ ಕರೆಯುವುದು.
 • ನಿಮಗೆ ಕಿರುಕುಳ ಕೊಡುತ್ತಿರುವವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಿಮಗೆ ಬೆದರಿಸುವುದು. ಉದಾಹರಣೆಗೆ, ನಿಮ್ಮ ಗಂಡಿನಿಂದ ನೀವು ವಿಚ್ಛೇದನ ಕೇಳಿದಾಗ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ನಿಮಗೆ ಬೆದರಿಸುವುದು.
 • ನಿಮ್ಮ ಮಗುವಿನಿಂದ ನಿಮ್ಮನ್ನು ಅಗಲಿಸುವುದು. ಉದಾಹರಣೆಗೆ, ನೀವು ನಿಮ್ಮ ನವಜಾತ ಶಿಶುವಿನ ಕಾಳಜಿ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ ಎಂಬ ನಂಬಿಕೆಯಿಂದ ನಿಮ್ಮ ಅತ್ತೆ-ಮಾವ ನಿಮ್ಮನ್ನು ನಿಮ್ಮ ಮಗುವಿನಿಂದ ದೂರ ಮಾಡುವುದು
 • ನೌಕರಿಯನ್ನು ತೆಗೆದುಕೊಳ್ಳದ ಹಾಗೆ ಮಾಡುವುದು, ಅಥವಾ ನೌಕರಿಯನ್ನು ಬಿಡುವುದಾಗಿ ಒತ್ತಾಯಿಸುವುದು
 • ನೀವು, ಅಥವಾ ನಿಮ್ಮ ಆಸರೆಯಲ್ಲಿರುವ ಮಗುವನ್ನು ಮನೆಯಿಂದಾಚೆ ಹೋಗದ ಹಾಗೆ ಮಾಡುವುದು
 • ನಿಮ್ಮ ಕುಟುಂಬದವರನ್ನು, ಸ್ನೇಹಿತರನ್ನು, ಅಥವಾ ಇನ್ನಿತರೇ ವ್ಯಕ್ತಿಗಳನ್ನು ನೀವು ಭೇಟಿಯಾಗದಂತೆ ಮಾಡುವುದು – ಯಾರನ್ನಾದರೂ ಮದುವೆಯಾಗಲು ಒತ್ತಾಯಿಸುವುದು, ಅಥವಾ ನೀವು ಮದುವೆಯಾಗದ ಹಾಗೆ ನೋಡಿಕೊಳ್ಳುವುದು
 • ನಿಮ್ಮ ಆಪ್ತರಿಗೆ ಶಾರೀರಿಕ ನೋವುಂಟುಮಾಡಲಾಗುತ್ತದೆ ಎಂದು ಬೆದರಿಸುವುದು

ರ್ಥಿಕ/ವಿತ್ತೀಯ ಕಿರುಕುಳ:

 • ನಿಮ್ಮ ಹಕ್ಕಿನಲ್ಲಿರುವ ಯಾವುದಾದರೂ ಆಸ್ತಿ ಅಥವಾ ಸಂಪನ್ಮೂಲಗಳನ್ನು ನಿಮ್ಮಿಂದ ಕಸೆದುಕೊಳ್ಳುವುದು. ಉದಾಹರಣೆಗೆ, ನೀವು ಅವಿಭಜಿತ ಕುಟುಂಬದಲ್ಲಿನ ವಿಧವೆಯಾಗಿದ್ದು, ಆ ಕುಟುಂಬಕ್ಕೆ ಸೇರಿದ ಸಂಪನ್ಮೂಲಗಳನ್ನು ನಿಮ್ಮಿಂದ ಕಸೆದುಕೊಳ್ಳುವುದು.
 • ನಿಮ್ಮ ಮತ್ತು ನಿಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ಜೊತೆ ಇರುವ ಸಂಬಂಧದ ಮೇರೆಗೆ, ನೀವು ಯಾವ ಸಂಪನ್ಮೂಲಗಳನ್ನು ಬಳಸುತ್ತಿದ್ದೀರೋ, ಆ ಸಂಪನ್ಮೂಲಗಳನ್ನು ನೀವು ಬಳಸಲು ಬರಲಾರದ ಹಾಗೆ ಮಾಡುವುದು. ಉದಾಹರಣೆಗೆ, ನೀವು ವಾಸಿಸುತ್ತಿದ್ದ ಮನೆಯ ಯಾವುದಾದರೂ ಭಾಗಕ್ಕೆ ನಿಮಗೆ ಪ್ರವೇಶವಿಲ್ಲದಿರುವಹಾಗೆ ಮಾಡುವುದು.
 • ನಿಮ್ಮ ಆಸ್ತಿಯನ್ನು, ಅಥವಾ ಜಂಟಿ
 • ಸ್ವಾಮಿತ್ವದಲ್ಲಿನ ನಿಮ್ಮ ಆಸ್ತಿಯನ್ನು ನಿಮ್ಮಿಂದ ಕಿತ್ತುಕೊಳ್ಳುವುದು/ದೂರ ಮಾಡುವುದು. ಉದಾಹರಣೆಗೆ, ನೀವು ಮತ್ತು ನಿಮ್ಮ ಗಂಡನ ಜಂಟಿ-ಸ್ವಾಮಿತ್ವದಲ್ಲಿನ ಆಸ್ತಿಯನ್ನು ನಿಮ್ಮ ಗಂಡ ಇನ್ಯಾರಿಗೋ ಮಾರುವುದು.
 • ನಿಮ್ಮ ವೈಯಕ್ತಿಕ ವಸ್ತುಗಳನ್ನು ಮನೆಯಿಂದ ಹೊರಹಾಕುವುದು. ಉದಾಹರಣೆಗೆ, ಬಟ್ಟೆಗಳು, ಪಾತ್ರೆಗಳು, ಇತ್ಯಾದಿ.
 • ಮನೆಯಲ್ಲಿ ಸಾಮಾನ್ಯವಾಗಿ ಬಳಸುತ್ತಿದ್ದ ವಸ್ತುಗಳನ್ನು ನೀವು ಬಳಸದ ಹಾಗೆ ಮಾಡುವುದು. ಉದಾಹರಣೆಗೆ, ಅಡುಗೆಮನೆಯಲ್ಲಿ ನಿಮ್ಮ ಪ್ರವೇಶ ನಿಷೇಧಿಸುವುದು.
 • ನಿಮ್ಮ ಮತ್ತು ನಿಮ್ಮ ಮಕ್ಕಳ ದೈನಂದಿನ ಖರ್ಚಿಗೆ ದುಡ್ಡು ಕೊಡದಿರುವುದು. ಉದಾಹರಣೆಗೆ, ಊಟ, ಬಟ್ಟೆ, ಔಷಧಿ, ಇತ್ಯಾದಿಗಳಿಗೆ ದುಡ್ಡು ಕೊಡದಿರುವುದು.
 • ನೀವು ಉದ್ಯೋಗ ಮಾಡಲಾರದಂತೆ ಮಾಡುವುದು, ಅಥವಾ ಉದ್ಯೋಗ ಮಾಡುವಾಗ ತೊಂದರೆಯುಂಟುಮಾಡುವುದು
 • ನಿಮ್ಮ ಆದಾಯವನ್ನು ಕಸೆದುಕೊಳ್ಳುವುದು, ಅಥವಾ ನೀವು ಉಪಯೋಗಿಸದಂತೆ ಮಾಡುವುದು
 • ಮನೆ ಬಿಟ್ಟು ಹೋಗುವಂತೆ ಒತ್ತಾಯ ಮಾಡುವುದು
 • ಬಾಡಿಗೆ ಮನೆಯಲ್ಲಿದ್ದರೆ, ಬಾಡಿಗೆ ಕೊಡದಿರುವುದು

ಲೈಂಗಿಕ ಕಿರುಕುಳ:

 • ಬೇಡವಾದ ಲೈಂಗಿಕ ವರ್ತನೆ, ಉದಾಹರಣೆಗೆ, ಲೈಂಗಿಕ ಸಂಭೋಗ ಮಾಡುವುದಾಗಿ ನಿಮ್ಮನ್ನು ಒತ್ತಾಯಿಸುವುದು
 • ನಿಮ್ಮಲ್ಲಿ ಅವಮಾನದ, ನಿಂದನೆಯ, ಅಥವಾ ಮಾನ ಭಂಗವಾದ ಭಾವನೆಗಳನ್ನು ಉಂಟು ಮಾಡುವ ಯಾವುದಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಾಗಿ ನಿಮ್ಮನ್ನು ಒತ್ತಾಯಿಸುವುದು
 • ಅಷ್ಲೀಲ/ ಪೋರ್ನ್ ಚಿತ್ರಗಳನ್ನು ನೋಡುವುದಾಗಿ ನಿಮ್ಮನ್ನು ಒತ್ತಾಯಿಸುವುದು
 • ನಿಮ್ಮ ಮಗುವಿಗೆ ಲೈಂಗಿಕವಾಗಿ ಕಿರುಕುಳ ನೀಡುವುದು

ಸಂದರ್ಭಾನುಸಾರ, ನ್ಯಾಯಾಲಯಗಳು ಇನ್ನಿತರೇ ಹಿಂಸಾತ್ಮಕ ಕ್ರಿಯೆಗಳನ್ನು ಕೌಟುಂಬಿಕ ಹಿಂಸೆಯೆಂದು ಪರಿಗಣಿಸಬಲ್ಲುವು. ನೀವು ಕೌಟುಂಬಿಕ ಹಿಂಸೆಗೆ ಬಲಿಯಾಗಿದ್ದೀರೋ ಇಲ್ಲವೋ ಎಂದು ನಿಮಗೆ ಅನುಮಾನವಿದ್ದಲ್ಲಿ, ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳು/ ವಕೀಲರು/ ಸರ್ಕಾರೇತರ ಸಂಸ್ಥೆಗಳನ್ನು ನೀವು ಸಂಪರ್ಕಿಸಿ, ಸಹಾಯ ಪಡೆಯಬಹುದು.

 

ಕೌಟುಂಬಿಕ ಹಿಂಸೆ ಎಲ್ಲೆಲ್ಲಿ ನಡೆಯಬಹುದು?

ಕೌಟುಂಬಿಕ ಹಿಂಸೆ ಎಲ್ಲಾದರೂ ನಡೆಯಬಹುದು. ನೀವು ನೆಲೆಸಿದ್ದ ಮನೆಯಲ್ಲಿಯೇ ನಡೆಯಬೇಕು ಎಂದೇನಿಲ್ಲ. ಕೌಟುಂಬಿಕ ಹಿಂಸೆ ನಿಮ್ಮ ಉದ್ಯೋಗದ ಅಥವಾ ಶಿಕ್ಷಣದ ಸ್ಥಳಗಳು, ನಿಮ್ಮ ಮಗುವಿನ ಶಾಲೆ, ಮಾರುಕಟ್ಟೆ, ಹೀಗೆ ಎಲ್ಲಾದರೂ ನಡೆಯಬಹುದು. ಕೌಟುಂಬಿಕ ಹಿಂಸೆ ಎಲ್ಲಾದರೂ ಸರಿ, ನೀವು ದೂರು ನೀಡಬಹುದು, ಮತ್ತು ವಕೀಲರ ಸಹಾಯದಿಂದ ನ್ಯಾಯಾಲಯದಲ್ಲಿ ಪ್ರಕರಣ ಹೂಡಬಹುದು.