ಕೌಟುಂಬಿಕ ಹಿಂಸೆಯ ಸಂಕೇತಗಳು

ಕೊನೆಯ ಅಪ್ಡೇಟ್ Nov 18, 2022

ಕೌಟುಂಬಿಕ ಹಿಂಸೆಯು ಹಲವಾರು ತರಹಗಳಲ್ಲಿದ್ದು, ಮೌಖಿಕ, ಲೈಂಗಿಕ, ಇತ್ಯಾದಿ ರೀತಿಗಳಲ್ಲಿ ಇರಬಹುದು. ಕೆಳಗೆ ಕೌಟುಂಬಿಕ ಹಿಂಸೆಯ ಸಂಕೇತಗಳ ಪಟ್ಟಿ ನೀಡಲಾಗಿದೆ. ನೀವು ಅಥವಾ ನಿಮ್ಮ ಸುಪರ್ದಿಯಲ್ಲಿರುವ ಮಗು ಈ ಯಾವುದಾದರೂ ನಡುವಳಿಕೆಗೆ ಬಲಿಯಾದಲ್ಲಿ, ನ್ಯಾಯಾಲಯಕ್ಕೆ ಹೋಗಿ ರಕ್ಷಣೆ ಪಡೆಯಬಹುದು:

ಶಾರೀರಿಕ ಕಿರುಕುಳ:

 • ನಿಮಗೆ ಶಾರೀರಿಕವಾಗಿ ನೋವುಂಟುಮಾಡಲಾಗುತ್ತಿದ್ದು, ನಿಮ್ಮ ಆರೋಗ್ಯ, ಶಾರೀರಿಕ ಬೆಳವಣಿಗೆ ಅಥವಾ ಯೋಗಕ್ಷೇಮಕ್ಕೆ ಧಕ್ಕೆ ಉಂಟಾಗಿದೆ. ಉದಾಹರಣೆಗೆ, ನಿಮಗೆ ಹೊಡೆಯುವುದು, ಕೆನ್ನೆಗೆ ಹೊಡೆಯುವುದು, ಏಟು ಹಾಕುವುದು, ಇತ್ಯಾದಿ.
 • ನಿಮಗೆ ಶಾರೀರಿಕವಾಗಿ ನೋವುಂಟುಮಾಡಲಾಗುತ್ತಿದ್ದು, ಇದು ನಿಮ್ಮ ಜೀವಕ್ಕೆ ಅಪಾಯ ತಂದಿದೆ.
 • ನಿಮಗೆ ಶಾರೀರಿಕವಾಗಿ ನೋವುಂಟುಮಾಡುತ್ತಾರೆ ಎಂಬ ನಂಬಿಕೆ ಮೂಡಿಸುವಂತಹ ಸನ್ನೆಗಳನ್ನು ಯಾರಾದರೂ ಮಾಡುತ್ತಿದ್ದಾರೆ. ಉದಾಹರಣೆಗೆ, ನಿಮ್ಮ ಗಂಡ ನಿಮ್ಮ ಮುಂದೆ ಮುಷ್ಠಿ ಮಾಡಿ, ನಿಮಗೆ ಅವರು ಮುಷ್ಟಿಯಿಂದ ಗುದ್ದುತ್ತಾರೋ ಎಂಬ ಹಾಗೆ ನಂಬಿಕೆ ಮೂಡಿಸುವಂತೆ, ನಿಮಗೆ ಪೆಟ್ಟಾಗಬಹುದಾದ ರೀತಿಯಲ್ಲಿ ಕಯ್ಯನ್ನು ಅಲುಗಾಡಿಸುವುದು.
 • ನಿಮಗೆ ಅಥವಾ ನಿಮ್ಮ ಆಪ್ತರಿಗೆ ನೋವಾಗುವಂತೆ ಮೌಖಿಕ ಅಥವಾ ಶಾರೀರಿಕ ಬೆದರಿಕೆಗಳನ್ನು
 • ಕೆಳಗಿನ ಉದ್ದೇಶಗಳಿಗೆ ಹಾಕುವುದು:
 • ನಿಮ್ಮನ್ನು ಹೆದರಿಸಲು, ಎಚ್ಚರಿಸಲು, ಅಥವಾ ನಿಮಗೆ ಕಿರಿಕಿರಿ ಉಂಟು ಮಾಡಲು
 • ಕಾನೂನಿನಡಿಯಲ್ಲಿ ನೀವು ಯಾವ ಕೆಲಸ ಮಾಡಬೇಕಿಲ್ಲವೋ, ಆ ಕೆಲಸವನ್ನು ನಿಮ್ಮಿಂದ ಮಾಡಿಸಲು. ಉದಾಹರಣೆಗೆ, ನೀವು ನಿಮ್ಮ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸದಿದ್ದರೆ ನಿಮಗೆ ನೋವುಂಟುಮಾಡುವವರೆಂದು ನಿಮ್ಮ ಅತ್ತೆ-ಮಾವ ಬೆದರಿಕೆ ಹಾಕಿದ್ದಲ್ಲಿ.
 •  ಕಾನೂನಿನಡಿಯಲ್ಲಿ ನಿಮಗೆ ಯಾವ ಕೆಲಸ ಮಾಡಲು ಹಕ್ಕಿದೆಯೋ, ಆ ಕೆಲಸವನ್ನು ಮಾಡಲಾಗದಂತೆ ಮಾಡುವುದು. ಉದಾಹರಣೆಗೆ, ನೀವು ನಿಮ್ಮ ಗಂಡನ ವಿರುದ್ಧ ದೂರು ಸಲ್ಲಿಸಿದಲ್ಲಿ, ಅವರು ನಿಮಗೆ ನೋವುಂಟುಮಾಡುತ್ತಾರೆ ಎಂದು ಬೆದರಿಕೆ ಹಾಕಿದ್ದಲ್ಲಿ.

ಮೌಖಿಕ ಮತ್ತು ಭಾವನಾತ್ಮಕ ಕಿರುಕುಳ:

 • ನಿಮ್ಮನ್ನು ಅವಮಾನ ಮಾಡುವುದು, ಹೀಯಾಳಿಸುವುದು, ಅಪಹಾಸ್ಯ ಮಾಡುವುದು. ಉದಾಹರಣೆಗೆ, ನೀವು ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂದು, ಅಥವಾ ವರದಕ್ಷಿಣೆ ತರಲಿಲ್ಲವೆಂದು ನಿಮ್ಮ ಗಂಡ ನಿಮ್ಮನ್ನು ನಿಂದನೀಯ ಹೆಸರುಗಳಿಂದ ಕರೆಯುವುದು.
 • ನಿಮಗೆ ಕಿರುಕುಳ ಕೊಡುತ್ತಿರುವವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಿಮಗೆ ಬೆದರಿಸುವುದು. ಉದಾಹರಣೆಗೆ, ನಿಮ್ಮ ಗಂಡಿನಿಂದ ನೀವು ವಿಚ್ಛೇದನ ಕೇಳಿದಾಗ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ನಿಮಗೆ ಬೆದರಿಸುವುದು.
 • ನಿಮ್ಮ ಮಗುವಿನಿಂದ ನಿಮ್ಮನ್ನು ಅಗಲಿಸುವುದು. ಉದಾಹರಣೆಗೆ, ನೀವು ನಿಮ್ಮ ನವಜಾತ ಶಿಶುವಿನ ಕಾಳಜಿ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ ಎಂಬ ನಂಬಿಕೆಯಿಂದ ನಿಮ್ಮ ಅತ್ತೆ-ಮಾವ ನಿಮ್ಮನ್ನು ನಿಮ್ಮ ಮಗುವಿನಿಂದ ದೂರ ಮಾಡುವುದು
 • ನೌಕರಿಯನ್ನು ತೆಗೆದುಕೊಳ್ಳದ ಹಾಗೆ ಮಾಡುವುದು, ಅಥವಾ ನೌಕರಿಯನ್ನು ಬಿಡುವುದಾಗಿ ಒತ್ತಾಯಿಸುವುದು
 • ನೀವು, ಅಥವಾ ನಿಮ್ಮ ಆಸರೆಯಲ್ಲಿರುವ ಮಗುವನ್ನು ಮನೆಯಿಂದಾಚೆ ಹೋಗದ ಹಾಗೆ ಮಾಡುವುದು
 • ನಿಮ್ಮ ಕುಟುಂಬದವರನ್ನು, ಸ್ನೇಹಿತರನ್ನು, ಅಥವಾ ಇನ್ನಿತರೇ ವ್ಯಕ್ತಿಗಳನ್ನು ನೀವು ಭೇಟಿಯಾಗದಂತೆ ಮಾಡುವುದು – ಯಾರನ್ನಾದರೂ ಮದುವೆಯಾಗಲು ಒತ್ತಾಯಿಸುವುದು, ಅಥವಾ ನೀವು ಮದುವೆಯಾಗದ ಹಾಗೆ ನೋಡಿಕೊಳ್ಳುವುದು
 • ನಿಮ್ಮ ಆಪ್ತರಿಗೆ ಶಾರೀರಿಕ ನೋವುಂಟುಮಾಡಲಾಗುತ್ತದೆ ಎಂದು ಬೆದರಿಸುವುದು

ರ್ಥಿಕ/ವಿತ್ತೀಯ ಕಿರುಕುಳ:

 • ನಿಮ್ಮ ಹಕ್ಕಿನಲ್ಲಿರುವ ಯಾವುದಾದರೂ ಆಸ್ತಿ ಅಥವಾ ಸಂಪನ್ಮೂಲಗಳನ್ನು ನಿಮ್ಮಿಂದ ಕಸೆದುಕೊಳ್ಳುವುದು. ಉದಾಹರಣೆಗೆ, ನೀವು ಅವಿಭಜಿತ ಕುಟುಂಬದಲ್ಲಿನ ವಿಧವೆಯಾಗಿದ್ದು, ಆ ಕುಟುಂಬಕ್ಕೆ ಸೇರಿದ ಸಂಪನ್ಮೂಲಗಳನ್ನು ನಿಮ್ಮಿಂದ ಕಸೆದುಕೊಳ್ಳುವುದು.
 • ನಿಮ್ಮ ಮತ್ತು ನಿಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ಜೊತೆ ಇರುವ ಸಂಬಂಧದ ಮೇರೆಗೆ, ನೀವು ಯಾವ ಸಂಪನ್ಮೂಲಗಳನ್ನು ಬಳಸುತ್ತಿದ್ದೀರೋ, ಆ ಸಂಪನ್ಮೂಲಗಳನ್ನು ನೀವು ಬಳಸಲು ಬರಲಾರದ ಹಾಗೆ ಮಾಡುವುದು. ಉದಾಹರಣೆಗೆ, ನೀವು ವಾಸಿಸುತ್ತಿದ್ದ ಮನೆಯ ಯಾವುದಾದರೂ ಭಾಗಕ್ಕೆ ನಿಮಗೆ ಪ್ರವೇಶವಿಲ್ಲದಿರುವಹಾಗೆ ಮಾಡುವುದು.
 • ನಿಮ್ಮ ಆಸ್ತಿಯನ್ನು, ಅಥವಾ ಜಂಟಿ
 • ಸ್ವಾಮಿತ್ವದಲ್ಲಿನ ನಿಮ್ಮ ಆಸ್ತಿಯನ್ನು ನಿಮ್ಮಿಂದ ಕಿತ್ತುಕೊಳ್ಳುವುದು/ದೂರ ಮಾಡುವುದು. ಉದಾಹರಣೆಗೆ, ನೀವು ಮತ್ತು ನಿಮ್ಮ ಗಂಡನ ಜಂಟಿ-ಸ್ವಾಮಿತ್ವದಲ್ಲಿನ ಆಸ್ತಿಯನ್ನು ನಿಮ್ಮ ಗಂಡ ಇನ್ಯಾರಿಗೋ ಮಾರುವುದು.
 • ನಿಮ್ಮ ವೈಯಕ್ತಿಕ ವಸ್ತುಗಳನ್ನು ಮನೆಯಿಂದ ಹೊರಹಾಕುವುದು. ಉದಾಹರಣೆಗೆ, ಬಟ್ಟೆಗಳು, ಪಾತ್ರೆಗಳು, ಇತ್ಯಾದಿ.
 • ಮನೆಯಲ್ಲಿ ಸಾಮಾನ್ಯವಾಗಿ ಬಳಸುತ್ತಿದ್ದ ವಸ್ತುಗಳನ್ನು ನೀವು ಬಳಸದ ಹಾಗೆ ಮಾಡುವುದು. ಉದಾಹರಣೆಗೆ, ಅಡುಗೆಮನೆಯಲ್ಲಿ ನಿಮ್ಮ ಪ್ರವೇಶ ನಿಷೇಧಿಸುವುದು.
 • ನಿಮ್ಮ ಮತ್ತು ನಿಮ್ಮ ಮಕ್ಕಳ ದೈನಂದಿನ ಖರ್ಚಿಗೆ ದುಡ್ಡು ಕೊಡದಿರುವುದು. ಉದಾಹರಣೆಗೆ, ಊಟ, ಬಟ್ಟೆ, ಔಷಧಿ, ಇತ್ಯಾದಿಗಳಿಗೆ ದುಡ್ಡು ಕೊಡದಿರುವುದು.
 • ನೀವು ಉದ್ಯೋಗ ಮಾಡಲಾರದಂತೆ ಮಾಡುವುದು, ಅಥವಾ ಉದ್ಯೋಗ ಮಾಡುವಾಗ ತೊಂದರೆಯುಂಟುಮಾಡುವುದು
 • ನಿಮ್ಮ ಆದಾಯವನ್ನು ಕಸೆದುಕೊಳ್ಳುವುದು, ಅಥವಾ ನೀವು ಉಪಯೋಗಿಸದಂತೆ ಮಾಡುವುದು
 • ಮನೆ ಬಿಟ್ಟು ಹೋಗುವಂತೆ ಒತ್ತಾಯ ಮಾಡುವುದು
 • ಬಾಡಿಗೆ ಮನೆಯಲ್ಲಿದ್ದರೆ, ಬಾಡಿಗೆ ಕೊಡದಿರುವುದು

ಲೈಂಗಿಕ ಕಿರುಕುಳ:

 • ಬೇಡವಾದ ಲೈಂಗಿಕ ವರ್ತನೆ, ಉದಾಹರಣೆಗೆ, ಲೈಂಗಿಕ ಸಂಭೋಗ ಮಾಡುವುದಾಗಿ ನಿಮ್ಮನ್ನು ಒತ್ತಾಯಿಸುವುದು
 • ನಿಮ್ಮಲ್ಲಿ ಅವಮಾನದ, ನಿಂದನೆಯ, ಅಥವಾ ಮಾನ ಭಂಗವಾದ ಭಾವನೆಗಳನ್ನು ಉಂಟು ಮಾಡುವ ಯಾವುದಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಾಗಿ ನಿಮ್ಮನ್ನು ಒತ್ತಾಯಿಸುವುದು
 • ಅಷ್ಲೀಲ/ ಪೋರ್ನ್ ಚಿತ್ರಗಳನ್ನು ನೋಡುವುದಾಗಿ ನಿಮ್ಮನ್ನು ಒತ್ತಾಯಿಸುವುದು
 • ನಿಮ್ಮ ಮಗುವಿಗೆ ಲೈಂಗಿಕವಾಗಿ ಕಿರುಕುಳ ನೀಡುವುದು

ಸಂದರ್ಭಾನುಸಾರ, ನ್ಯಾಯಾಲಯಗಳು ಇನ್ನಿತರೇ ಹಿಂಸಾತ್ಮಕ ಕ್ರಿಯೆಗಳನ್ನು ಕೌಟುಂಬಿಕ ಹಿಂಸೆಯೆಂದು ಪರಿಗಣಿಸಬಲ್ಲುವು. ನೀವು ಕೌಟುಂಬಿಕ ಹಿಂಸೆಗೆ ಬಲಿಯಾಗಿದ್ದೀರೋ ಇಲ್ಲವೋ ಎಂದು ನಿಮಗೆ ಅನುಮಾನವಿದ್ದಲ್ಲಿ, ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳು/ ವಕೀಲರು/ ಸರ್ಕಾರೇತರ ಸಂಸ್ಥೆಗಳನ್ನು ನೀವು ಸಂಪರ್ಕಿಸಿ, ಸಹಾಯ ಪಡೆಯಬಹುದು.

 

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.