ಹಿಂದೂ ವಿವಾಹ ಕಾನೂನಿನಡಿ ವಿಚ್ಛೇದನ

ವಿವಾಹ ಸಂಬಂಧಿತ ಕಾನೂನುಗಳು, ಹಲವಾರು ವೈವಾಹಿಕ ಹಾಗು ಭಾವನಾತ್ಮಕ ಹಕ್ಕುಗಳನ್ನು ಗುರುತಿಸುತ್ತವೆ. ಇವುಗಳಲ್ಲಿ ಕೆಲವು ವಿಷಯಗಳು: ಆಸ್ತಿ ವಿಭಜನೆ, ಮಕ್ಕಳ ಜವಾಬ್ದಾರಿ, ಇತ್ಯಾದಿ. ವಿಚ್ಛೇದನ ಪಡೆದಲ್ಲಿ ವೈವಾಹಿಕ ಸಂಬಂಧ ಅಂತ್ಯಗೊಂಡರೂ ಕೆಲವು ಕಾನೂನಾತ್ಮಕ ಬಾಧ್ಯತೆಗಳು ಮುಂದುವರೆಯಬಹುದು.

ವೈವಾಹಿಕ ಸಂಬಂಧ:

ಕಾನೂನಿನ ಪ್ರಕಾರ ಮದುವೆಯೆಂದರೆ:

 • ಭಾವನಾತ್ಮಕ ಆಸರೆ
 • ಲೈಂಗಿಕ ಸಂಬಂಧ
 • ಮಕ್ಕಳ ಹಾಗು ಸಾಂಸಾರಿಕ ಜವಾಬ್ದಾರಿ, ಹಾಗು
 • ಆರ್ಥಿಕ ಬೆಂಬಲ
 • ಇವೆಲ್ಲ ಅಂಶಗಳ ಇರುವಿಕೆ.

ಕಾನೂನಾತ್ಮಕ ಬಾಧ್ಯತೆಗಳು:

ನೀವು ಮತ್ತು ನಿಮ್ಮ ಸಂಗಾತಿಯ ನಡುವೆ, ವಿವಾಹದ ಅಂತರ್ಗತವಾಗಿ, ಹಲವಾರು ನ್ಯಾಯಿಕ ಬಾಧ್ಯತೆಗಳಿರುವುದುಂಟು. ಇವುಗಳಲ್ಲಿ ಕೆಲವು ವಿಚ್ಛೇದನ ಆದಮೇಲೂ ಸಹ ಮುಂದುವರೆಯುತ್ತವೆ. ಅವೇನೆಂದರೆ:

ಜೀವನಾಂಶ:

ನ್ಯಾಯಾಲಯವು ವಿಚ್ಛೇದನದ ವೇಳೆ, ನೀವು ನಿಮ್ಮ ಸಂಗಾತಿಗೆ ಹಣ ಕೊಡುವುದಾಗಿ ಆದೇಶಿಸಬಹುದು. ಈ ಹಣಕ್ಕೆ ಜೀವನಾಂಶ ಎಂದು ಕರೆಯುತ್ತಾರೆ.

ಮಕ್ಕಳನ್ನು ಪೋಷಿಸುವ ಜವಾಬ್ದಾರಿ:

ನ್ಯಾಯಾಲಯವು ನಿಮ್ಮ ಮಕ್ಕಳು ಯಾರ ಜೊತೆ ಇರಬಹುದು, ಹಾಗು ಅವರ ಆರ್ಥಿಕ ಹೊಣೆಗಾರಿಕೆ ಯಾರು ವಹಿಸುತ್ತಾರೆ ಎಂಬುದನ್ನು ವಿಚ್ಛೇದನದ ಸಮಯದಲ್ಲಿ ನಿರ್ಧರಿಸುತ್ತದೆ.

ಹಿಂದೂ ವಿವಾಹ ಕಾನೂನಿನಡಿ ವಿಚ್ಛೇದನಾ ಅರ್ಜಿ ಸಲ್ಲಿಸುವಿಕೆ

ವಿಚ್ಛೇದನ ಎಂದರೆ ನೀವು ನಿಮ್ಮ ಸಂಗಾತಿಯಿಂದ ಅಂತಿಮವಾಗಿ ಹಾಗು ಮಾರ್ಪಡಿಸಲಾಗದಂತೆ ಬೇರ್ಪಡೆ ಹೊಂದುವುದು. ಕಾನೂನಿನಡಿಯಲ್ಲಿ ಬೇರೆ ತರಹಗಳ, ಅಂತಿಮವಲ್ಲದ ವೈವಾಹಿಕ ಬೇರ್ಪಡೆಗಳೂ ಸಂಭವವಿವೆ.

ನಿಮ್ಮ ವಿವಾಹವು ಮಾನ್ಯವಿದ್ದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ನಿಮ್ಮ ವಿವಾಹವು ಅಮಾನ್ಯವಿದ್ದಲ್ಲಿ, ನಿಮ್ಮ ಸಂಬಂಧವನ್ನು ಕಾನೂನಾತ್ಮಕವಾಗಿ ರದ್ದುಗೊಳಿಸಲು ಕೋರ್ಟಿಗೆ ಅರ್ಜಿಸಲ್ಲಿಸಬೇಕಾಗುತ್ತದೆ.

ಕೋರ್ಟಿಗೆ ಹೋಗುವುದು:

ನಿಮಗೆ ವಿಚ್ಛೇದನ ಬೇಕಾದಲ್ಲಿ ಕೋರ್ಟಿಗೆ ಹೋಗಬೇಕಾಗುತ್ತದೆ. ನಿಮ್ಮ ವಿಚ್ಛೇದನದ ಪ್ರಕರಣ ಕೋರ್ಟಿನಲ್ಲಿ ನಡೆಯುತ್ತಿರುವಾಗಲೂ ಸಹ, ನಿಮ್ಮ ಸಂಗಾತಿ ಹಾಗು ಮಕ್ಕಳನ್ನು ಸಂಬಂಧಿಸಿದ ಕೆಲವು ಕರ್ತವ್ಯಗಳನ್ನು ನಿಭಾಯಿಸಬೇಕಾಗುತ್ತದೆ. ಉದಾಹರಣೆಗೆ, ಅವರಿಗೆ ಆರ್ಥಿಕ ಬೆಂಬಲ ನೀಡುವುದು.

ಪತಿ ಯಾ ಪತ್ನಿಗೆ ಮಾತ್ರ ಹಿಂದೂ ವೈವಾಹಿಕ ಕಾನೂನಿನಡಿ ವಿಚ್ಛೇದನ ಬೇಕಾದಾಗ

ಹಲವು ಸಂದರ್ಭಗಳಲ್ಲಿ, ಕೇವಲ ಪತಿ ಯಾ ಪತ್ನಿಗೆ ಮಾತ್ರ ವಿಚ್ಛೇದನ ಬೇಕು ಎಂದು ಎನಿಸುವುದುಂಟು. ಕಾನೂನಿನಡಿ, ಕೇವಲ ಕೆಲವು ಸಂದರ್ಭಗಳಲ್ಲಿ ಮಾತ್ರ ಇಂತಹ ಏಕಪಕ್ಷೀಯ ವಿಚ್ಛೇದನ ಲಭಿಸುತ್ತದೆ. ಉದಾಹರಣೆಗೆ, ವಿವಾಹದಲ್ಲಿ ದೌರ್ಜನ್ಯ/ಕ್ರೌರ್ಯ ಇದ್ದಾಗ, ಅಥವಾ ನಿಮ್ಮ ಸಂಗಾತಿಗೆ ಮಾನಸಿಕ ರೋಗವಿದ್ದಾಗ. ಇಂತಹ ಸಂದರ್ಭಗಳಲ್ಲಿ, ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ, ನಿಮ್ಮ ಸಂಗಾತಿ ಈ ಆರೋಪಗಳನ್ನು ನಿರಾಕರಿಸಿ, ಅವರಿಗೆ ಯಾಕೆ ಈ ವಿಚ್ಛೇದನಕ್ಕೆ ಒಪ್ಪಿಗೆ ಇಲ್ಲ ಎಂದು ಕೋರ್ಟಿಗೆ ಹೇಳಬಹುದಾಗಿದೆ.

ಕಾನೂನಿನಡಿಯಲ್ಲಿ, ಮದುವೆಯಾಗಿ ಒಂದು ವರ್ಷವಾದ ನಂತರ ಮಾತ್ರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಒಂದು ವರ್ಷದ ಸಮಯ:

ನಿಮಗೆ ವಿಚ್ಛೇದನದ ಅರ್ಜಿ ಸಲ್ಲಿಸುವುದಿದ್ದಲ್ಲಿ, ನಿಮ್ಮ ಮದುವೆಯಾದ ದಿನಾಂಕದಿಂದ ಹಿಡಿದು ಒಂದು ವರ್ಷದ ವರೆಗೆ ನೀವು ಕಾಯಬೇಕಾಗುತ್ತದೆ. ಉದಾಹರಣೆಗೆ, ಜಿತೇಂದ್ರ ಹಾಗು ವಹೀದಾ ಜನೆವರಿ ೯, ೨೦೧೮ರಂದು ಮದುವೆಯಾದರು. ಜಿತೇಂದ್ರ ಕಡೆ ಪಕ್ಷ ಜನೆವರಿ ೯, ೨೦೧೯ರ ವರೆಗೆ ವಿಚ್ಛೇದನದ ಅರ್ಜಿ ಸಲ್ಲಿಸಲು ಕಾಯಬೇಕಾಗುತ್ತದೆ.

ಒಂದು ವರ್ಷದ ನಿಯಮಕ್ಕೆ ಅಪವಾದಗಳು:

ಕಾನೂನಿನಡಿಯಲ್ಲಿ ಮದುವೆಯ ನಂತರ ಒಂದು ವರ್ಷದ ಬಳಿಕ ಮಾತ್ರವೇ ವಿಚ್ಛೇದನ ಸಿಗುವುದಾದರೂ, ಈ ನಿಯಮಕ್ಕೆ ಕೆಲವು ಅಪವಾದಗಳಿವೆ. ಉದಾಹರಣೆಗೆ:

 • ಅಸಾಧಾರಣ ಕಷ್ಟ ಅನುಭವಿಸುತ್ತಿದ್ದಲ್ಲಿ: ಉದಾಹರಣೆಗೆ, ನಿಮ್ಮ ಪತಿ ಯಾ ಪತ್ನಿ ದಿನವೂ ನಿಮಗೆ ಶಾರೀರಿಕವಾಗಿ ಕಿರುಕುಳ ಕೊಡುತ್ತಿದ್ದಲ್ಲಿ, ನೀವು ಕೋರ್ಟಿನ ಮೊರೆ ಹೋಗಬಹುದಾಗಿದೆ.
 • ಅಸಾಧಾರಣ ನೈತಿಕ ಭ್ರಷ್ಟತೆ: ಉದಾಹರಣೆಗೆ, ನಿಮ್ಮ ಪತಿ ಯಾ ಪತ್ನಿ ಅವಮಾನಕರ ಲೈಂಗಿಕ ಕ್ರಿಯೆಗಳನ್ನು ಮಾಡುವುದಾಗಿ ನಿಮ್ಮನ್ನು ಪೀಡಿಸುತ್ತಿದ್ದಲ್ಲಿ , ನೀವು ಕೋರ್ಟಿನ ಮೊರೆ ಹೋಗಬಹುದಾಗಿದೆ.

ಹಿಂದೂ ವಿವಾಹ ಕಾನೂನಿನಡಿ ಪರಸ್ಪರ ಒಪ್ಪಿಗೆಯ ವಿಚ್ಛೇದನ

ನೀವು ಮತ್ತು ನಿಮ್ಮ ಸಂಗಾತಿ, ಇಬ್ಬರಿಗೂ ವಿಚ್ಛೇದನ ಬೇಕೆನಿಸಿದ್ದಲ್ಲಿ, ಪರಸ್ಪರ ಒಪ್ಪಿಗೆಯ ಅರ್ಜಿಯನ್ನು ಕೋರ್ಟಿನಲ್ಲಿ ಸಲ್ಲಿಸಬಹುದು.

ನೀವು ಮತ್ತು ನಿಮ್ಮ ಸಂಗಾತಿ ಈ ಕೆಳಕಂಡ ಪರಿಸ್ಥಿತಿಗಳಲ್ಲಿ ಕೋರ್ಟಿನ ಮೊರೆ ಹೋಗಬಹುದು:

 • ನೀವು ಒಂದು ವರ್ಷ ಬೇರೆ-ಬೇರೆಯಾಗಿ ವಾಸ ಮಾಡುತ್ತಿದ್ದರೆ
 • ನೀವಿಬ್ಬರೂ ಜೊತೆಯಲ್ಲಿ ಇರಲಾರದಂತಿದ್ದರೆ
 • ನೀವಿಬ್ಬರೂ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ್ದಲ್ಲಿ

ಕಾನೂನಿನಡಿಯಲ್ಲಿ ಇಂತಹ ವಿಚ್ಛೇದನ ಕೇವಲ ಮದುವೆಯಾಗಿ ಒಂದು ವರ್ಷದ ನಂತರವೇ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಿದ ಮೇಲೆಯೂ ಸಹ, ಕೋರ್ಟು ನಿಮಗೆ ಕನಿಷ್ಠ ೬ ತಿಂಗಳಿಂದ ಗರಿಷ್ಟ ೧೮ ತಿಂಗಳುಗಳ ಕಾಲ ಪರಸ್ಪರ ರಾಜಿಯಾಗಲು ಕೊಡುತ್ತದೆ – ಇದು ನಿಜವಾಗಿಯೂ ನಿಮಗೆ ವಿಚ್ಛೇದನ ಬೇಕಿದೆಯೋ ಇಲ್ಲವೋ ಎಂದು ಪರೀಕ್ಷಿಸುವುದಕ್ಕಾಗಿ.

ಹೀಗಿದ್ದರೂ ಸಹ, ವಿಚ್ಛೇದನಕ್ಕೆ ಕಾಯಬೇಕಾದ ಕನಿಷ್ಠ ೬ ತಿಂಗಳ ಕಾಲವನ್ನೂ ಸಹ ಕೋರ್ಟುಗಳು ಎಷ್ಟೋ ಸಲ ಈ ಕೆಳಗಿನ ಸಂದರ್ಭಗಳಲ್ಲಿ ಮನ್ನಾ ಮಾಡಿವೆ:

 • ನೀವು ಹಾಗು ನಿಮ್ಮ ಸಂಗಾತಿ ಮರಳಿ ಒಂದಾಗಲು ಸಾಧ್ಯವೇ ಇಲ್ಲದಿದ್ದಾಗ
 • ಎಲ್ಲ ಮಧ್ಯಸ್ಥಿಕೆ ಹಾಗು ಸಂಧಾನದ ಪ್ರಯತ್ನಗಳು ವಿಫಲವಾದಾಗ
 • ವಿಚ್ಛೇದನದ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹುಟ್ಟುವ ಸಮಸ್ಯೆಗಳನ್ನು ನೀವು ಮತ್ತು ನಿಮ್ಮ ಸಂಗಾತಿ ಪರಸ್ಪರ ಪರಿಹರಿಸಿದಾಗ. ಉದಾಹರಣೆ: ಜೀವನಾಂಶ ಕೊಡುವುದು, ಮಕ್ಕಳ ಹೊಣೆಗಾರಿಕೆ
 • ೬ರಿಂದ ೧೮ ತಿಂಗಳುಗಳವರೆಗೆ ಕಾಯುವುದು ನಿಮಗೆ ಇನ್ನೂ ಹೆಚ್ಚು ಸಂಕಟ ಹಾಗು ದುಃಖ ಕೊಡುವಂತಿದ್ದರೆ
 • ನೀವು ನಿಮ್ಮ ಸಂಗಾತಿಯಿಂದ ವಿಚ್ಛೇದನ ಬೇಕೆಂದು ಅರ್ಜಿ ಸಲ್ಲಿಸಿದ್ದಲ್ಲಿ, ನಂತರ ನೀವಿಬ್ಬರೂ ಪರಸ್ಪರ ಒಪ್ಪಿಗೆಯ ವಿಚ್ಛೇದನ ಪಡೆಯುವುದಾಗಿ ನಿರ್ಧರಿಸಿದ್ದಲ್ಲಿ.

ಹಿಂದೂ ವಿವಾಹ ಕಾನೂನಿನಡಿ ವಿಚ್ಛೇದನವನ್ನು ಎಲ್ಲಿ ಪಡೆಯಬಹುದು?

ನೀವು ಹಾಗು ನಿಮ್ಮ ಸಂಗಾತಿ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸಬಹುದು. ವಿಚ್ಛೇದನದ ಪ್ರಕರಣಗಳನ್ನು “ಕುಟುಂಬ ನ್ಯಾಯಾಲಯ” ಎಂಬ ಪ್ರತ್ಯೇಕ ನ್ಯಾಯಾಲಯಗಳು ನಿರ್ಧರಿಸುತ್ತವೆ. ಈ ಕೆಳಕಂಡ ಸ್ಥಳಗಳ ಕುಟುಂಬ ನ್ಯಾಯಾಲಯಗಳಲ್ಲಿ ನೀವು ವಿಚ್ಛೇದನದ ಅರ್ಜಿ ಸಲ್ಲಿಸಬಹುದು:

೧. ನಿಮ್ಮ ಮದುವೆಯಾದ ಊರು:

ನೀವು ಅಥವಾ ನಿಮ್ಮ ಸಂಗಾತಿ, ನೀವು ಮದುವೆಯಾದ ಊರಿನಲ್ಲಿರುವ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ನೀವು ಹಾಗು ನಿಮ್ಮ ಸಂಗಾತಿ ಬೆಂಗಳೂರಿನಲ್ಲಿ ಮದುವೆಯಾಗಿದ್ದಲ್ಲಿ, ಬೆಂಗಳೂರಿನ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿ ಸಲ್ಲಿಸಬಹುದು.

೨. ನಿಮ್ಮ ಸಂಗಾತಿ ವಾಸಿಸುವ ಊರು:

ನಿಮ್ಮ ಸಂಗಾತಿಯು ವಾಸಿಸುವ ಊರಿನಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ಉದಾಹರಣೆಗೆ, ನಿಮ್ಮ ಸಂಗಾತಿಯು ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದಲ್ಲಿ, ಹುಬ್ಬಳ್ಳಿಯ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿಯನ್ನು ಸಲ್ಲಿಸಬಹುದು.

೩. ನೀವಿಬ್ಬರೂ ಕೊನೆಯದಾಗಿ ಜೊತೆಗೆ ವಾಸಿಸಿದ್ದ ಊರು:

ನೀವು ಅಥವಾ ನಿಮ್ಮ ಸಂಗಾತಿಯು, ನೀವಿಬ್ಬರೂ ಕೊನೆಯದಾಗಿ ಜೊತೆಗೆ ವಾಸಿಸಿದ್ದ ಊರಿನಲ್ಲಿ ನಿಮ್ಮ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ನೀವು ಹಾಗು ನಿಮ್ಮ ಸಂಗಾತಿ ಮೈಸೂರಿನಲ್ಲಿ ಕೊನೆಯದಾಗಿ ಜೊತೆಗೆ ವಾಸಿಸಿದ್ದಲ್ಲಿ, ಮೈಸೂರಿನ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿಯನ್ನು ಸಲ್ಲಿಸಬಹುದು.

೪. ನೀವು ವಾಸಿಸುವ ಊರು:

ಹೆಂಡತಿ: ನೀವು ನಿಮ್ಮ ಗಂಡನಿಂದ ವಿಚ್ಛೇದನ ಬಯಸಿದ್ದಲ್ಲಿ, ನೀವು ವಾಸಿಸಿರುವ ಊರಿನಲ್ಲೇ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ನೀವು ಮಂಗಳೂರಿನಲ್ಲಿ ನೆಲೆಸಿದ್ದರೆ, ಮಂಗಳೂರಿನ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿಯನ್ನು, ನಿಮ್ಮ ಪತಿ ಮಂಗಳೂರಿನಲ್ಲಿ ಇಲ್ಲದಿದ್ದರೂ ಸಹ, ಸಲ್ಲಿಸಬಹುದು. ಗಂಡ ಹಾಗು ಹೆಂಡತಿ: ನಿಮ್ಮ ಸಂಗಾತಿ ವಿದೇಶಕ್ಕೆ ಹೋಗಿದ್ದಾಗ, ನೀವು ನೆಲೆಸಿದ್ದ ಊರಿನ ಕೋರ್ಟಿನಲ್ಲಿ ನಿಮ್ಮ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ದಯವಿಟ್ಟು ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ವಕೀಲರೊಂದಿಗೆ ವಿಚಾರಿಸಿ.