ಕಾನೂನಿನಡಿ ಏನಾದರೂ ದೂರು ಮಾಡುವುದಿದ್ದರೆ ಯಾರಿಗೆ ಮಾಡಬೇಕು?

ವಿವಾಹ ಕುಲಸಚಿವರಿಂದ ಅಥವಾ ಅವರ ಉಪಸ್ಥಿತಿಯಲ್ಲಿ ಮದುವೆ ನೆರವೇರಬೇಕು ಎಂದು ಯಾರಾದರೂ ವಿವಾಹ ಸೂಚನೆಯ ಅರ್ಜಿ ಸಲ್ಲಿಸಿದ್ದಲ್ಲಿ, ಹಾಗು ಹೀಗಿರುವಾಗ ಕುಲಸಚಿವರು ವಿವಾಹ ಪ್ರಮಾಣಪತ್ರವನ್ನು ನೀಡದಿದ್ದಲ್ಲಿ ನ್ಯಾಯಾಲಯಕ್ಕೆ ಮೊರೆ ಹೋಗಬಹುದು. ಮುಂಬೈ, ಕೊಲ್ಕತ್ತಾ, ಮತ್ತು ಚೆನ್ನೈನಲ್ಲಿ ವಾಸಿಸುವರು ನೇರವಾಗಿ ತಮ್ಮ ತಮ್ಮ ಉಚ್ಚ ನ್ಯಾಯಾಲಯಕ್ಕೆ ಹೋಗಬಹುದಾದರೆ, ಇನ್ನಿತರರು ತಮ್ಮ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು.

ಅಲ್ಪವಯಸ್ಕರ ಮದುವೆಯ ವಿರುದ್ಧ ದೂರುಗಳು:

ಓರ್ವ ಕಕ್ಷಿದಾರರು ಅಲ್ಪವಯಸ್ಕರಿದ್ದಲ್ಲಿ (ಕ್ರಿಶ್ಚಿಯನ್ ಮದುವೆಗಳಿಗನ್ವವಯಾಗಿ ೨೧ರ ಕೆಳಗಿದ್ದಲ್ಲಿ), ಸೂಚನೆ ಸಿಕ್ಕ ಮೇಲೆ ಕನಿಷ್ಠ ೧೪ ದಿನಗಳವರೆಗೆ ವಿವಾಹ ಕುಲಸಚಿವರು, ಸೂಚನೆ ಸಿಕ್ಕ ಪ್ರಮಾಣಪತ್ರ ನೀಡಲು ಕಾಯಬೇಕು. ಆದಾಗ್ಯೂ, ಒಂದು ವೇಳೆ ಕಕ್ಷಿದಾರರಿಗೆ ೧೪ ದಿನಗಳ ವರೆಗೆ ಕಾಯಲು ಆಗದಿದ್ದಲ್ಲಿ ಸಂಬಂಧಿಸಿದ ಉಚ್ಚ ನ್ಯಾಯಾಲಯದಲ್ಲಿ ಸೂಚನೆ ಸಿಕ್ಕ ಪ್ರಮಾಣಪತ್ರವನ್ನು ೧೪ ದಿನಗಳವೊಳಗೆ ಪಡೆಯುವಂತೆ ಮನವಿ ಸಲ್ಲಿಸಬಹುದು. ಆದಾಗ್ಯೂ, ಈ ಆಯ್ಕೆಯು ಕೇವಲ ಕಲ್ಕತ್ತಾ, ಮುಂಬೈ, ಮತ್ತು ಚೆನ್ನೈನ ನಿವಾಸಿಗಳಿಗೆ ಲಭ್ಯವಿದೆ.

ಕೌಟುಂಬಿಕ ಹಿಂಸೆಯ ವಿರುದ್ಧ ದೂರು ಹೇಗೆ ದಾಖಲಿಸಬಹುದು?

ಯಾವುದೇ ರೀತಿಯ ಕೌಟುಂಬಿಕ ಹಿಂಸೆಯ ವಿರುದ್ಧ ದೂರು ದಾಖಲಿಸಲು, ನೀವು ಅಥವಾ ನಿಮ್ಮ ಪ್ರತಿ ಬೇರೆ ಯಾರಾದರೂ, ಕೆಳಗೆ ಪಟ್ಟಿ ಮಾಡಿರುವ ಅಧಿಕಾರಿಗಳನ್ನು ಭೇಟಿ ಮಾಡಬಹುದು:

೧. ಪೊಲೀಸ್ ಠಾಣೆಗೆ ಹೋಗುವುದು:

ನಿಮ್ಮ ವಾಸದ ಜಾಗದಲ್ಲಿನ ಪೊಲೀಸ್ ಠಾಣೆ, ಅಥವಾ ಬೇರೆ ಯಾವುದಾದರೂ ಪೊಲೀಸ್ ಠಾಣೆಗೆ ಹೋಗಿ ಕೌಟುಂಬಿಕ ಹಿಂಸೆಯ ವಿರುದ್ಧ ನಿಮ್ಮ ದೂರನ್ನು ದಾಖಲಿಸಬಹುದು. ಪೊಲೀಸರು ಎಫ್.ಐ.ಆರ್./ಡೀ.ಐ/ಆರ್.ಅನ್ನು ದಾಖಲಿಸುತ್ತಾರೆ, ಅಥವಾ ಮುಂದಿನ ಪ್ರಕ್ರಿಯೆಯನ್ನು ಅನುಸರಿಸಲು ಸಹಾಯವಾಗುವಂತೆ ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳಿಗೆ ಭೇಟಿ ನೀಡಲು ನಿರ್ದೇಶಿಸುತ್ತಾರೆ.

೨. ರಕ್ಷಣಾಧಿಕಾರಿಗಳನ್ನು ಭೇಟಿ ಆಗುವುದು:

ದೂರು ದಾಖಲಿಸಲು, ರಕ್ಷಣಾಧಿಕಾರಿಗಳು ನಿಮಗೆ ಮೊದಲನೆಯ ಸಂಪರ್ಕ ಬಿಂದು ಆಗುತ್ತಾರೆ. ಡಿ.ಐ.ಆರ್. ದಾಖಲಿಸಲು, ವಿತ್ತೀಯ ಪರಿಹಾರ, ರಕ್ಷಣೆ, ಇತ್ಯಾದಿ ಪರಿಹಾರಗಳನ್ನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು – ಇಂತಹ ಕೆಲಸಗಳಿಗೆ ಅವರು ನಿಮಗೆ ಸಹಯಾ ಮಾಡುತ್ತಾರೆ. ನಿಮ್ಮ ಕ್ಷೇತ್ರದ ರಕ್ಷಣಾಧಿಕಾರಿಗಳು ನಿಮಗೆ ಸಿಗಲಿಲ್ಲವೆಂದಲ್ಲಿ, ಅವರನ್ನು ಹುಡುಕಲು ಯಾವುದೇ ಸರ್ಕಾರೇತರ ಸಂಸ್ಥೆಗಳು ಅಥವಾ ಸಾಮಾಜಿಕ ಕಾರ್ಯಕರ್ತರ ಸಹಾಯವನ್ನು ನೀವು ಪಡೆಯಬಹುದು.

೩. ರಾಷ್ಟ್ರೀಯ/ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸುವುದು:

ರಾಷ್ಟ್ರೀಯ ಮಹಿಳಾ ಆಯೋಗವು, ಮಹಿಳೆಯರಿಗೆ ಉಂಟಾಗುವ ಕೌಟುಂಬಿಕ ಹಿಂಸೆ, ವರದಕ್ಷಿಣೆಗೆ ಸಂಬಂಧಿಸಿದ ಕಿರುಕುಳ, ಬಲಾತ್ಕಾರ, ಇನ್ನಿತರೇ ಅಪರಾಧಗಳ ದೂರುಗಳ ಮೇಲೆ ತನಿಖೆ ನಡೆಸುವ ಅಧಿಕಾರವುಳ್ಳ ರಾಷ್ಟ್ರೀಯ-ಮಟ್ಟದ ಸರ್ಕಾರಿ ಸಂಸ್ಥೆಯಾಗಿದೆ. ಕೆಳಗಿನಂತೆ

ರಾಷ್ಟ್ರೀಯ ಮಹಿಳಾ ಆಯೋಗವು ನಿಮ್ಮ ಸಹಾಯಕ್ಕೆ ಬರಬಹುದು:

  1. ಪೊಲೀಸರು ನಡೆಸುತ್ತಿರುವ ತನಿಖೆಗಳ ಮೇಲ್ವಿಚಾರಣೆ ಮತ್ತು ತನಿಖೆಯ ವೇಗ ಹೆಚ್ಚಿಸುವುದು
  2. ಎರಡೂ ಪಕ್ಷಗಳ ಮಧ್ಯೆಯ ಸಮಸ್ಯೆಯನ್ನು ಬಗೆಹರಿಸಲು ಸಮಾಲೋಚನೆ ಅಥವಾ ವಿಚಾರಣೆ ನಡೆಸುವುದು
  3. ಸ್ಥಾನೀಯ ವಿಚಾರಣೆ ನಡೆಸಿ, ಸಾಕ್ಷಿದಾರರನ್ನು ಪರಿಶೀಲಿಸಿ, ಪುರಾವೆಗಳನ್ನು ಸಂಗ್ರಹಿಸಿ, ಸಲಹೆಗಳುಳ್ಳ ವರದಿಯನ್ನು ಒಪ್ಪಿಸಲು ವಿಚಾರಣಾ ಸಮಿತಿಯನ್ನು ನೇಮಿಸುವುದು

೧೦೯೧ ಸಹಾಯವಾಣಿಯ ಮೂಲಕ, ಅಥವಾ e-mail ಮೂಲಕ, ಅಥವಾ ಆನ್ಲೈನ್ ದೂರು ದಾಖಲಿಸುವ ಮೂಲಕ ನೀವು ರಾಷ್ಟ್ರೀಯ ಮಹಿಳಾ ಆಯೋಗವನ್ನು ಸಂಪರ್ಕಿಸಬಹುದು. ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿಯಲ್ಲಿರುವ ಕಾರಣ, ಕರ್ನಾಟಕದ ಮಹಿಳಾ ಆಯೋಗವನ್ನು ಕೂಡ ನೀವು ಸಂಪರ್ಕಿಸಬಹುದು.

ಕೌಟುಂಬಿಕ ಹಿಂಸೆಯ ನಿಮಿತ್ತ ಯಾರ ವಿರುದ್ಧ ದೂರು ದಾಖಲಿಸಬಹುದು?

ಕೌಟುಂಬಿಕ ಹಿಂಸೆಯ ನಿಮಿತ್ತ ನೀವು ಪುರುಷರು ಮತ್ತು ಮಹಿಳೆಯರ ವಿರುದ್ಧ ದೂರು ದಾಖಲಿಸಬಹುದು. ಕೆಳಗಿನವರ ವಿರುದ್ಧ ನೀವು ದೂರು ದಾಖಲಿಸಬಹುದು:

೧. ನಿಮ್ಮ ಕುಟುಂಬ: ಕೆಳಗಿನ ಸಂದರ್ಭಗಳಲ್ಲಿ, ನಿಮ್ಮ ಕುಟುಂಬದವರು ನಿಮಗೆ ಕೌಟುಂಬಿಕ ಹಿಂಸೆ ನೀಡುತ್ತಿದ್ದಲ್ಲಿ, ಅವರ ವಿರುದ್ಧ ದೂರನ್ನು ದಾಖಲಿಸಬಹುದು:

  • ಕಿರುಕುಳ ನೀಡುತ್ತಿರುವ ವ್ಯಕ್ತಿ ನಿಮ್ಮ ರಕ್ತ ಸಂಬಂಧಿಕರಾಗಿದ್ದರೆ. ಉದಾಹರಣೆಗೆ, ನಿಮ್ಮ ಅಪ್ಪ, ಅಣ್ಣ, ಇತ್ಯಾದಿ. – ಕಿರುಕುಳ ನೀಡುತ್ತಿರುವ ವ್ಯಕ್ತಿ ನಿಮ್ಮ ಮದುವೆಯಿಂದ ಸಂಬಂಧಿಕರಾಗಿದ್ದರೆ. ಉದಾಹರಣೆಗೆ, ಗಂಡ, ಅತ್ತೆ-ಮಾವ, ಇತ್ಯಾದಿ.
  • ಒಂದೇ ಮನೆಯಲ್ಲಿ ಅವಿಭಜಿತ ಕುಟುಂಬದ ಸದಸ್ಯರಾಗಿ ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿ ಹಾಗು ನೀವು ವಾಸವಾಗಿದ್ದಲ್ಲಿ. ಉದಾಹರಣೆಗೆ, ನಿಮ್ಮ ಅಜ್ಜಿ, ಸೋದರ ಮಾವ, ದತ್ತುಕ ಅಣ್ಣ/ತಮ್ಮ, ಇತ್ಯಾದಿ. ಆದಾಗ್ಯೂ, ಯಾರು ಹಿಂಸಾತ್ಮಕ ಕ್ರಿಯೆಯನ್ನು ಮಾಡುವಲ್ಲಿ ತೊಡಗಿರುತ್ತಾರೋ/ಮಾಡಲು ಸಹಾಯ ಮಾಡಿರುತ್ತಾರೋ, ಅವರ ವಿರುದ್ಧ ಮಾತ್ರ ನೀವು ದೂರು ದಾಖಲಿಸಬಹುದು. ಉದಾಹರಣೆಗೆ, ನೀವು ಹತ್ತು ಮಂದಿಯ ಅವಿಭಜಿತ ಕುಟುಂಬದ ಸದಸ್ಯರಾಗಿ ಒಂದೇ ಸೂರಿನಡಿ ವಾಸವಾಗಿದ್ದು, ನಿಮಗೆ ಕೇವಲ ನಿಮ್ಮ ಗಂಡ ಹಾಗು ಅತ್ತೆ ಕೌಟುಂಬಿಕ ಹಿಂಸೆ ಮಾಡಿದ್ದಲ್ಲಿ, ಇವರಿಬ್ಬರ ವಿರುದ್ಧ ಮಾತ್ರ ದೂರನ್ನು ಸಲ್ಲಿಸಬಹುದು.
  • ನಿಮ್ಮ ಲಿವ್-ಇನ್ ಸಂಗಾತಿ: ನಿಮ್ಮ ಲಿವ್-ಇನ್ ಸಂಗಾತಿ ನಿಮಗೆ ನೋವುಂಟು ಮಾಡಿದಲ್ಲಿ/ಕಿರುಕುಳ ಕೊಟ್ಟಲ್ಲಿ, ಅವರ ವಿರುದ್ಧ ದೂರು ದಾಖಲಿಸಬಹುದು.
  • ಅಲ್ಪವಯಸ್ಕರು: ಅಲ್ಪವಯಸ್ಕರು ನಿಮ್ಮ ಮೇಲೆ ಕೌಟುಂಬಿಕ ಹಿಂಸೆ ಎಸಗಿದರೆ, ಅವರ ವಿರುದ್ಧ ಕೂಡ ನೀವು ದೂರು ಸಲ್ಲಿಸಬಹುದು. ಉದಾಹರಣೆಗೆ, ನಿಮ್ಮ ಕುಟುಂಬದ ಒಬ್ಬ ೧೬ ವರ್ಷದ ಹುಡುಗ ನಿಮ್ಮ ಮೇಲೆ ಹಿಂಸೆ ಎಸಗಿದರೆ, ಅವನ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸಬಹುದು.

ನ್ಯಾಯಾಲಯಕ್ಕೆ ಹೋಗುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ, ನಿಮ್ಮ ಮೇಲೆ ಹಿಂಸೆ ಮಾಡಿರುವ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿರಬೇಕು, ಮತ್ತು ನೀವಿಬ್ಬರೂ ಒಂದೇ ಸೂರಿನಡಿ ವಾಸವಾಗಿದ್ದಿರಬೇಕು.

 

ಕೌಟುಂಬಿಕ ಹಿಂಸೆಯ ವಿರುದ್ಧ ದೂರು ನೀಡುವ ಸಮಯದ ಮಿತಿ

ಕೌಟುಂಬಿಕ ಹಿಂಸೆಯ ವಿರುದ್ಧ ದೂರು ನೀಡಲು ಯಾವುದೇ ನಿರ್ದಿಷ್ಟ ಸಮಯದ ಮಿತಿ ಇಲ್ಲ. ಆದರೆ, ಹಿಂಸೆ ನಡೆದ ಕಾಲಾವಧಿಯಲ್ಲಿ ನೀವು ಕಿರುಕುಳ ನೀಡಿದ ವ್ಯಕ್ತಿಯ ಜೊತೆ ಕೌಟುಂಬಿಕ ಸಂಬಂಧದಲ್ಲಿದ್ದೀರಿ ಎಂದು ನೀವು ಸಾಬೀತುಪಡಿಸಬೇಕಾಗುತ್ತದೆ. ಆದಾಗ್ಯೂ, ದೂರು ನೀಡಲು ತಡವಾಗಿದ್ದಲ್ಲಿ, ಅದರ ಕಾರಣಗಳನ್ನು ವಿವರಿಸಬೇಕಾಗಿ ನ್ಯಾಯಾಲಯವು ನಿಮಗೆ ಕೇಳಬಹುದು.

ಕೆಳಗಿನ ಸಂದರ್ಭಗಳಲ್ಲಿ ನೀವು ಕೌಟುಂಬಿಕ ಹಿಂಸೆಯ ದೂರನ್ನು ನೀಡಬಹುದು:

೧. ೨೦೦೫ರ ಮುಂಚೆ ನಡೆದ ಘಟನೆಗಳ ವಿರುದ್ಧ ದೂರು ನೀಡುವುದು:

ಕೌಟುಂಬಿಕ ಹಿಂಸೆ ಕಾನೂನು ೨೦೦೫ರಲ್ಲಿ ಜಾರಿಗೆ ಬಂದಿದ್ದರೂ ಕೂಡ, ೨೦೦೫ರ ಹಿಂದೆ ನಡೆದ ಹಿಂಸಾತ್ಮಕ ಘಟನೆಗಳ ವಿರುದ್ಧವೂ ಕೂಡ ರಕ್ಷಣೆ/ಪರಿಹಾರದ ಅರ್ಜಿ ಸಲ್ಲಿಸಲು ಕಾನೂನು ಅನುವು ಮಾಡಿಕೊಟ್ಟಿದೆ.

ನೀವು ಮಹಿಳೆಯಾಗಿದ್ದು, ೨೦೦೫ರ ಹಿಂದೆ ಹಿಂಸೆಗೆ ಒಳಗಾಗಿದ್ದಲ್ಲಿ, ಕಾನೂನಿನಡಿ ರಕ್ಷಣೆಗೆ ನೀವು ಅರ್ಹರಿದ್ದೀರಿ. ಈ ನಿಟ್ಟಿನಲ್ಲಿ, ನ್ಯಾಯಾಲಯದಲ್ಲಿ ನೀವು ಪ್ರಕರಣವನ್ನು ಹೂಡಬಹುದು. ಉದಾಹರಣೆಗೆ, ಸೀತಾ ಎಂಬ ಮಹಿಳೆ ೨೦೦೧ರಲ್ಲಿ ತಮ್ಮ ಅತ್ತೆಯಿಂದ ಕೌಟುಂಬಿಕ ಹಿಂಸೆಗೆ ಬಲಿಯಾಗಿದ್ದು, ಕೌಟುಂಬಿಕ ಹಿಂಸೆಯ ಕಾನೂನು ಅವರ ಮೇಲೆ ಹಿಂಸೆ ನಡೆದ ಮೇಲೆ ಜಾರಿಗೆ ಬಂದಿದ್ದರೂ ಕೂಡ, ಅವರು ನ್ಯಾಯಾಲಯಕ್ಕೆ ಹೋಗಿ ಪ್ರಕರಣ ಹೂಡುವ ಅರ್ಹತೆಯನ್ನು ಹೊಂದಿದ್ದಾರೆ.

೨. ವಿಚ್ಛೇದನದ ನಂತರ ದೂರು ನೀಡುವುದು:

ನೀವು ವಿಚ್ಛೇದನದ ನಂತರವೂ ಕೌಟುಂಬಿಕ ಹಿಂಸೆಯ ದೂರನ್ನು ದಾಖಲಿಸಬಹುದು. ಉದಾಹರಣೆಗೆ, ಸೀಮಾ 2012 ರಲ್ಲಿ ಮದುವೆಯಾದರು. ತದನಂತರ, ಎರಡು ವರ್ಷಗಳ ಕಾಲ ಅವರ ಗಂಡನಿಂದ ಶಾರೀರಿಕ ಹಿಂಸೆಗೆ ಬಲಿಯಾದರು. ೨೦೧೪ರಲ್ಲಿ ಅವರು ತಮ್ಮ ಗಂಡಿಂದ ವಿಚ್ಛೇದನ ಪಡೆದರು. ೨೦೧೪ರ ನಂತರ ಅವರ ಮಾಜಿ ಗಂಡನ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸುವ ಹಕ್ಕು ಸೀಮಾರಿಗೆ ಇದೆ. ಯಾಕೆಂದರೆ, ಹಿಂಸೆ ನಡೆದ ಸಮಯದಲ್ಲಿ, ಅವರು ಕಿರುಕುಳ ನೀಡುತ್ತಿದ್ದ ವ್ಯಕ್ತಿಯ (ಗಂಡನ) ಜೊತೆ ಕೌಟುಂಬಿಕ ಸಂಬಂಧದಲ್ಲಿ ಇದ್ದರು.

 

ಡಿ.ಐ.ಆರ್. ಎಂದರೇನು?

ಒಬ್ಬ ಮಹಿಳೆಯಿಂದ ಕೌಟುಂಬಿಕ ಹಿಂಸೆಯ ದೂರು ಸಿಕ್ಕ ತಕ್ಷಣ ದಾಖಲಿಸುವ ವರದಿಯನ್ನು ಡಿ.ಐ.ಆರ್. ಎನ್ನುತ್ತಾರೆ. ಈ ವರದಿಯನ್ನು ರಕ್ಷಣಾಧಿಕಾರಿಗಳು ಅಥವಾ ಸೇವಾ ಕಾರ್ಯಕರ್ತರು ದಾಖಲಿಸುತ್ತಾರೆ. ಡಿ.ಐ.ಆರ್.ನಲ್ಲಿ ಸಂತ್ರಸ್ತೆಯ ಹೆಸರು, ವಯಸ್ಸು, ಕಿರುಕುಳ ಕೊಟ್ಟವರ ವಿವರಗಳು, ಹಿಂಸಾತ್ಮಕ ಘಟನೆಯ ವಿವರಗಳು, ಇತ್ಯಾದಿ ಮಾಹಿತಿಗಳು ಇರುತ್ತವೆ. ಡಿ.ಐ.ಆರ್.ಅನ್ನು ದಾಖಲಿಸಲು ಕೆಳಗಿನ ಅಧಿಕಾರಿಗಳನ್ನು ಭೇಟಿ ನೀಡಿ:

ರಕ್ಷಣಾಧಿಕಾರಿಗಳು:

ದೂರು ಸಿಕ್ಕ ನಂತರ ಡಿ.ಐ.ಆರ್.ಅನ್ನು ದಾಖಲಿಸಿ, ನಿಮ್ಮ ಕಾನೂನಾತ್ಮಕ ಹಕ್ಕುಗಳನ್ನು ನಿಮಗೆ ಪರಿಚಯಿಸುವುದು ರಕ್ಷಣಾಧಿಕಾರಿಗಳ ಜವಾಬ್ದಾರಿ. ನಿಮ್ಮ ಹತ್ತಿರ ಇಟ್ಟುಕೊಳ್ಳಲು ನಿಮಗೆ ಡಿ.ಐ.ಆರ್.ನ ಉಚಿತ ಪ್ರತಿಯನ್ನು ನೀಡಲಾಗುತ್ತದೆ. ಇದಾದಮೇಲೆ, ಡಿ.ಐ.ಆರ್. ಮತ್ತು ಸಂಬಂಧಿತ ಅರ್ಜಿಯನ್ನು ಪ್ರಕರಣವನ್ನು ಹೂಡಲು ನ್ಯಾಯಾಲಯಕ್ಕೆ ಕಳಿಸಲಾಗುತ್ತದೆ. ಡಿ.ಐ.ಆರ್.ಅನ್ನು ಪೊಲೀಸ್ ಅಧಿಕಾರಿಗಳು ಮತ್ತು ಸೇವಾ ಕಾರ್ಯಕರ್ತರಿಗೆ ಕೂಡ ಕಳಿಸಲಾಗುತ್ತದೆ.

ಸೇವಾ ಕಾರ್ಯಕರ್ತರು:

ನಿಮ್ಮಿಂದ ದೂರು ಸಿಕ್ಕ ತಕ್ಷಣ ಡಿ.ಐ.ಆರ್.ಅನ್ನು ದಾಖಲಿಸಿ, ನಿಮ್ಮನ್ನು ರಕ್ಷಣಾಧಿಕಾರಿಗಳ ಬಳಿ, ಅಥವಾ ನ್ಯಾಯಾಲಯಕ್ಕೆ ಕಳಿಸಬೇಕಾದದ್ದು ಸೇವಾ ಕಾರ್ಯಕರ್ತರ ಕರ್ತವ್ಯ. ನಿಮಗೆ ಶಾರೀರಿಕ ನೋವು ಉಂಟಾಗಿದ್ದಲ್ಲಿ, ವೈದ್ಯಕೀಯ ತಪಾಸಣೆ ನಡೆಸಲು ಸಹಾಯ ಮಾಡಿ, ನಿಮ್ಮ ವರದಿಯನ್ನು ರಕ್ಷಣಾಧಿಕಾರಿಗಳಿಗೆ, ಅಥವಾ ಪೊಲೀಸ್ ಥಾಣೆ ಕಳಿಸುವುದು ಕೂಡ ಅವರ ಕರ್ತವ್ಯ. ನಿಮಗೆ ಕಿರುಕುಳ ನೀಡಿರುವ ವ್ಯಕ್ತಿಯಿಂದ ದೂರವಿರಲು ಅವರು ನಿಮಗೆ ಆಶ್ರಯ ಮನೆಗಳನ್ನು ಸಂಪರ್ಕಿಸಲು ಕೂಡ ಸಹಾಯ ಮಾಡುತ್ತಾರೆ.

ಪೊಲೀಸ್ ಅಧಿಕಾರಿಗಳು:

ರಕ್ಷಣಾಧಿಕಾರಿಗಳು, ಅಥವಾ ಸೇವಾ ಕಾರ್ಯಕರ್ತರು ನಿಮಗೆ ಸಿಗಲಿಲ್ಲವೆಂದಲ್ಲಿ, ಹತ್ತಿರದ ಪೊಲೀಸ್ ಠಾಣೆಯನ್ನು ನೀವು ಸಂಪರ್ಕಿಸಬಹುದು. ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ, ಕೆಳಗಿನ ವರದಿಗಳನ್ನು ದಾಖಲಿಸಲು ಪೊಲೀಸ್ ಅಧಿಕಾರಿಗಳು ನಿಮಗೆ ಸಹಾಯ ಮಾಡುತ್ತಾರೆ:

೧. ಎಫ್.ಐ.ಆರ್.:

ಎಫ್.ಐ.ಆರ್.ಅನ್ನು ದಾಖಲಿಸಿ ಅಪರಾಧಿಕ ಪ್ರಕರಣವನ್ನು ಕಿರುಕುಳ ಕೊಟ್ಟ ವ್ಯಕ್ತಿಯ ವಿರುದ್ಧ ಹೂಡಬಹುದು. ನಿಮಗೆ ಅಪರಾಧಿಕ ದೂರನ್ನು ದಾಖಲಿಸುವ ಇಚ್ಛೆ ಇದ್ದಲ್ಲಿ, ಪ್ರಕರಣದ ಯಾವ ಹಂತದಲ್ಲಾದರೂ ಎಫ್.ಐ.ಆರ್.ಅನ್ನು ದಾಖಲಿಸುವ ಆಯ್ಕೆಯನ್ನು ಪೊಲೀಸ್ ಅಧಿಕಾರಿಗಳು ನಿಮಗೆ ಕೊಡುತ್ತಾರೆ.

೨. ಡಿ.ಐ.ಆರ್.:

ನಿಮಗೆ ಅಪರಾಧಿಕ ದೂರನ್ನು ದಾಖಲಿಸುವ ಇಚ್ಛೆ ಇಲ್ಲದಿದ್ದಲ್ಲಿ, ರಕ್ಷಣಾಧಿಕಾರಿಗಳು ಕಳಿಸಿದ ಡಿ.ಐ.ಆರ್.ನಲ್ಲಿನ ವಿವರಣೆಗಳ ಪ್ರಕಾರ ನಿಮ್ಮ ಜೊತೆಯಾದ ಕೌಟುಂಬಿಕ ಹಿಂಸೆಯ ವಿವರಗಳನ್ನು ತಮ್ಮ ದಿನಚರಿಯ ಡೈರಿಯಲ್ಲಿ ನಮೂದಿಸಬೇಕಾಗುತ್ತದೆ. ಈ ಮಾಹಿತಿ ಅವರ ಬಳಿ ಇಲ್ಲದಿದ್ದಲ್ಲಿ, ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ, ಡಿ.ಐ.ಆರ್.ಅನ್ನು ದಾಖಲಿಸಿ, ಅದರಲ್ಲಿರುವ ವಿವರಣೆಗಳ ಪ್ರಕಾರ ತಮ್ಮ ದಿನಚರಿಯ ಡೈರಿಯಲ್ಲಿ ವಿವರಗಳನ್ನು ನಮೂದಿಸುತ್ತಾರೆ.

ವೈದ್ಯಕೀಯ ಸೌಲಭ್ಯದ ಉಸ್ತುವಾರಿ ವ್ಯಕ್ತಿಗಳು:

ನೀವು ವೈದ್ಯಕೀಯ ಸೌಲಭ್ಯಕ್ಕೆ, ಡಿ.ಐ.ಆರ್.ಅನ್ನು ದಾಖಲಿಸದೆ ಭೇಟಿ ನೀಡಿದರೆ, ಆ ಸೌಲಭ್ಯದ ಉಸ್ತುವಾರಿ ಮುಖ್ಯಸ್ಥರು ಡಿ.ಐ.ಆರ್.ಅನ್ನು ದಾಖಲಿಸಿ, ರಕ್ಷಣಾಧಿಕಾರಿಗಳಿಗೆ ಅದನ್ನು ಕಳಿಸಬೇಕು.

ರಕ್ಷಣಾಧಿಕಾರಿಗಳ ಪಾತ್ರವೇನು?

ನೀವು ಕೌಟುಂಬಿಕ ಹಿಂಸೆಯ ದೂರನ್ನು ದಾಖಲಿಸುವುದಾಗಿ ನಿರ್ಧರಿಸಿದ್ದಲ್ಲಿ, ರಕ್ಷಣಾಧಿಕಾರಿಗಳು ನಿಮ್ಮ ಮೊದಲ ಸಂಪರ್ಕ ಬಿಂದು ಆಗಿರುತ್ತಾರೆ. ನೀವು, ಅಥವಾ ನಿಮಗೆ ಗೊತ್ತಿರುವವರಿನ್ಯಾರಾದರೂ, ನಿಮ್ಮ ಜಿಲ್ಲೆಯ ಅಥವಾ ಹತ್ತಿರದ ಸ್ಥಳದ ರಕ್ಷಣಾಧಿಕಾರಿಗಳನ್ನು ಭೇಟಿ ನೀಡಿ, ಕರೆ ಮಾಡಿ, ಅಥವಾ ಪತ್ರದ ಮೂಲಕ, ಹಿಂಸೆಯ ದೂರನ್ನು ದಾಖಲಿಸಿ, ರಕ್ಷಣೆಯ ಮನವಿ ಮಾಡಬಹುದು. ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಲು ನೀವು:

  • ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಕೇಳಿಕೊಳ್ಳಬಹುದು.
  • ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೋಗಬಹುದು ಅಥವಾ ಕರೆ ಮಾಡಬಹುದು
  • ರಾಷ್ಟ್ರೀಯ/ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸಿ.
  • ಸರ್ಕಾರೇತರ ಸಂಸ್ಥೆಗಳು ಅಥವಾ ಸೇವಾ ಕಾರ್ಯಕರ್ತರನ್ನು ಸಂಪರ್ಕಿಸಿ.

ನಿಮ್ಮ ದೂರನ್ನು ರಕ್ಷಣಾಧಿಕಾರಿಗಳು ದಾಖಲಿಸುತ್ತಾರೆ. ನಿಮ್ಮ ಬಳಿ ಇಟ್ಟುಕೊಳ್ಳಲು ದೂರಿನ ಉಚಿತ ಪ್ರತಿಯನ್ನು ನೀವು ಅವರಿಂದ ಪಡೆಯಬಹುದು. ರಕ್ಷಣಾಧಿಕಾರಿಗಳು ಕೆಳಗಿನಂತೆ ನಿಮಗೆ ಸಹಾಯ ಮಾಡುತ್ತಾರೆ:

೧. ದೂರು ದಾಖಲಿಸುವುದು:

ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿವರಗಳು, ಸಂತ್ರಸ್ತೆಯ ವಿವರಗಳು, ಇತ್ಯಾದಿ ವಿವರಣೆಗಳುಳ್ಳ, ಕೌಟುಂಬಿಕ ಹಿಂಸೆಯ ಪ್ರಕರಣಗಳಲ್ಲಿ ದಾಖಲಿಸಲಾಗುವ “ಡಿ.ಐ.ಆರ್.” ಎಂಬ ಒಂದು ವಿಶೇಷ ವರದಿಯನ್ನು ದಾಖಲಿಸಲು ರಕ್ಷಣಾಧಿಕಾರಿಗಳು ನಿಮ್ಮ ಸಹಾಯ ಮಾಡುತ್ತಾರೆ. ನ್ಯಾಯಾಲಯದಲ್ಲಿ ನೇರವಾಗಿ ದೂರು ಸಲ್ಲಿಸಿ, ಕಾನೂನು ನೆರವು ಪಡೆಯುವಲ್ಲಿಯೂ ಸಹ ಅವರು ನಿಮ್ಮ ಸಹಾಯ ಮಾಡಬಲ್ಲರು.

೨. ಪೊಲೀಸರಿಗೆ ಮಾಹಿತಿ ನೀಡುವುದು:

ನೀವು ಹಿಂಸೆಗೆ ಒಳಗಾದ ಜಾಗದ ಪೊಲೀಸ್ ಠಾಣೆಗೆ, ಡಿ.ಐ.ಆರ್. ಮತ್ತು ನಿಮ್ಮ ವೈದ್ಯಕೀಯ ವರದಿಯ ಪ್ರತಿಗಳನ್ನು (ನಿಮ್ಮ ವೈದ್ಯಕೀಯ ತಪಾಸಣೆ ಆದಲ್ಲಿ) ಕಳಿಸುತ್ತಾರೆ. ಇದಾದಮೇಲೆ, ನಿಮಗೆ ಕಿರುಕುಳ ಕೊಟ್ಟವರಿಂದ ಇನ್ನು ಮೇಲೆ ಹಿಂಸೆ ಮುಂದುವರೆಯದಂತೆ, ಪೊಲೀಸರು ನೋಡಿಕೊಳ್ಳುತ್ತಾರೆ.

೩. ತಕ್ಷಣದ ರಕ್ಷಣೆ ಮತ್ತು ಆಸರೆ ನೀಡುವುದು:

ಕೆಳಗಿನಂತೆ ರಕ್ಷಣಾಧಿಕಾರಿಗಳು ನಿಮ್ಮ ಸಹಾಯ ಮಾಡಬಲ್ಲರು:

  • ನಿಮ್ಮ ರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ಮತ್ತು ನ್ಯಾಯಾಲಯದಿಂದ ನೀವು ಪಡೆಯಬಯಸುವ ಆದೇಶಗಳುಳ್ಳ “ರಕ್ಷಣಾ ಉಪಾಯವನ್ನು” ತಯಾರಿಸುವುದು
  • ನಿಮಗೆ/ನಿಮ್ಮ ಮಗುವಿಗೆ ಶಾರೀರಿಕವಾಗಿ ಪೆಟ್ಟು ಬಿದ್ದಲ್ಲಿ, ಯಾವುದೇ ವೈದ್ಯಕೀಯ ಸೌಲಭ್ಯದಿಂದ ನಿಮಗೆ ವೈದ್ಯಕೀಯ ನೆರವನ್ನು ಕಲ್ಪಿಸಿಕೊಡುವುದು
  • ಕಾನೂನು ನೆರವು, ಸಮಾಲೋಚನೆ, ವೈದ್ಯಕೀಯ ಸೌಲಭ್ಯಗಳು, ಆಶ್ರಯ ಮನೆ, ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸೇವಾ ಕಾರ್ಯಕರ್ತರನ್ನು ನಿಮಗೆ ಪರಿಚಯಿಸುವುದು

೪. ನಿಮ್ಮ ಕಾನೂನಾತ್ಮಕ ಹಕ್ಕುಗಳ ಬಗ್ಗೆ ನಿಮಗೆ ಮಾಹಿತಿ ನೀಡುವುದು:

ನಿಮ್ಮ ಜೊತೆ ಏನಾಗಿದೆ ಎಂದು ಸ್ಪಷ್ಟವಾಗಿ ನೀವು ತಿಳಿದುಕೊಳ್ಳಲೆಂದು ಬೇರೆ-ಬೇರೆ ರೀತಿಗಳ ಕೌಟುಂಬಿಕ ಹಿಂಸೆಗಳ ಬಗ್ಗೆ ನಿಮಗೆ ತಿಳಿಹೇಳುತ್ತಾರೆ. ಇದನ್ನು ಡಿ.ಐ.ಆರ್.ನಲ್ಲಿ ದಾಖಲಿಸಲಾಗುತ್ತದೆ. ಇದಾದಮೇಲೆ, ದೂರು ನೀಡಿದ ಬಳಿಕ ನೀವು ಕಾನೂನಿನಡಿ ಚಲಾಯಿಸಬಲ್ಲ ಹಕ್ಕುಗಳಾವುವು, ಮತ್ತು ನಿಮಗೆ ಸಿಗಬಲ್ಲ ಬೇರೆ-ಬೇರೆ ಪರಿಹಾರಗಳಾವುವು ಎಂಬುದನ್ನು ತಿಳಿಹೇಳುತ್ತಾರೆ.

೫. ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ನಿಮಗೆ ಬೆಂಬಲ ನೀಡುವುದು:

ರಕ್ಷಣಾಧಿಕಾರಿಗಳು:

  • ಜಿಲ್ಲಾ ಕಾನೂನು ನೆರವು ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ನೆರವು ಪಡೆಯುವಲ್ಲಿ ನಿಮ್ಮ ಸಹಾಯ ಮಾಡಬಲ್ಲರು
  • ನ್ಯಾಯಾಲಯದ ಪ್ರಕ್ರಿಯೆಯ ಸಂದರ್ಭದಲ್ಲಿ ನಿಮಗೆ/ನಿಮ್ಮ ಮಗುವಿಗೆ ಕಿರುಕುಳ ಕೊಟ್ಟವರಿಂದ ಒತ್ತಡ/ಹಿಂಸೆ ಆಗಲಾರದಂತೆ ನೋಡಿಕೊಳ್ಳಬಲ್ಲರು