ಕೌಟುಂಬಿಕ ಹಿಂಸೆಯ ವಿರುದ್ಧ ದೂರು ನೀಡುವ ಸಮಯದ ಮಿತಿ

ಕೊನೆಯ ಅಪ್ಡೇಟ್ Nov 19, 2022

ಕೌಟುಂಬಿಕ ಹಿಂಸೆಯ ವಿರುದ್ಧ ದೂರು ನೀಡಲು ಯಾವುದೇ ನಿರ್ದಿಷ್ಟ ಸಮಯದ ಮಿತಿ ಇಲ್ಲ. ಆದರೆ, ಹಿಂಸೆ ನಡೆದ ಕಾಲಾವಧಿಯಲ್ಲಿ ನೀವು ಕಿರುಕುಳ ನೀಡಿದ ವ್ಯಕ್ತಿಯ ಜೊತೆ ಕೌಟುಂಬಿಕ ಸಂಬಂಧದಲ್ಲಿದ್ದೀರಿ ಎಂದು ನೀವು ಸಾಬೀತುಪಡಿಸಬೇಕಾಗುತ್ತದೆ. ಆದಾಗ್ಯೂ, ದೂರು ನೀಡಲು ತಡವಾಗಿದ್ದಲ್ಲಿ, ಅದರ ಕಾರಣಗಳನ್ನು ವಿವರಿಸಬೇಕಾಗಿ ನ್ಯಾಯಾಲಯವು ನಿಮಗೆ ಕೇಳಬಹುದು.

ಕೆಳಗಿನ ಸಂದರ್ಭಗಳಲ್ಲಿ ನೀವು ಕೌಟುಂಬಿಕ ಹಿಂಸೆಯ ದೂರನ್ನು ನೀಡಬಹುದು:

೧. ೨೦೦೫ರ ಮುಂಚೆ ನಡೆದ ಘಟನೆಗಳ ವಿರುದ್ಧ ದೂರು ನೀಡುವುದು:

ಕೌಟುಂಬಿಕ ಹಿಂಸೆ ಕಾನೂನು ೨೦೦೫ರಲ್ಲಿ ಜಾರಿಗೆ ಬಂದಿದ್ದರೂ ಕೂಡ, ೨೦೦೫ರ ಹಿಂದೆ ನಡೆದ ಹಿಂಸಾತ್ಮಕ ಘಟನೆಗಳ ವಿರುದ್ಧವೂ ಕೂಡ ರಕ್ಷಣೆ/ಪರಿಹಾರದ ಅರ್ಜಿ ಸಲ್ಲಿಸಲು ಕಾನೂನು ಅನುವು ಮಾಡಿಕೊಟ್ಟಿದೆ.

ನೀವು ಮಹಿಳೆಯಾಗಿದ್ದು, ೨೦೦೫ರ ಹಿಂದೆ ಹಿಂಸೆಗೆ ಒಳಗಾಗಿದ್ದಲ್ಲಿ, ಕಾನೂನಿನಡಿ ರಕ್ಷಣೆಗೆ ನೀವು ಅರ್ಹರಿದ್ದೀರಿ. ಈ ನಿಟ್ಟಿನಲ್ಲಿ, ನ್ಯಾಯಾಲಯದಲ್ಲಿ ನೀವು ಪ್ರಕರಣವನ್ನು ಹೂಡಬಹುದು. ಉದಾಹರಣೆಗೆ, ಸೀತಾ ಎಂಬ ಮಹಿಳೆ ೨೦೦೧ರಲ್ಲಿ ತಮ್ಮ ಅತ್ತೆಯಿಂದ ಕೌಟುಂಬಿಕ ಹಿಂಸೆಗೆ ಬಲಿಯಾಗಿದ್ದು, ಕೌಟುಂಬಿಕ ಹಿಂಸೆಯ ಕಾನೂನು ಅವರ ಮೇಲೆ ಹಿಂಸೆ ನಡೆದ ಮೇಲೆ ಜಾರಿಗೆ ಬಂದಿದ್ದರೂ ಕೂಡ, ಅವರು ನ್ಯಾಯಾಲಯಕ್ಕೆ ಹೋಗಿ ಪ್ರಕರಣ ಹೂಡುವ ಅರ್ಹತೆಯನ್ನು ಹೊಂದಿದ್ದಾರೆ.

೨. ವಿಚ್ಛೇದನದ ನಂತರ ದೂರು ನೀಡುವುದು:

ನೀವು ವಿಚ್ಛೇದನದ ನಂತರವೂ ಕೌಟುಂಬಿಕ ಹಿಂಸೆಯ ದೂರನ್ನು ದಾಖಲಿಸಬಹುದು. ಉದಾಹರಣೆಗೆ, ಸೀಮಾ 2012 ರಲ್ಲಿ ಮದುವೆಯಾದರು. ತದನಂತರ, ಎರಡು ವರ್ಷಗಳ ಕಾಲ ಅವರ ಗಂಡನಿಂದ ಶಾರೀರಿಕ ಹಿಂಸೆಗೆ ಬಲಿಯಾದರು. ೨೦೧೪ರಲ್ಲಿ ಅವರು ತಮ್ಮ ಗಂಡಿಂದ ವಿಚ್ಛೇದನ ಪಡೆದರು. ೨೦೧೪ರ ನಂತರ ಅವರ ಮಾಜಿ ಗಂಡನ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸುವ ಹಕ್ಕು ಸೀಮಾರಿಗೆ ಇದೆ. ಯಾಕೆಂದರೆ, ಹಿಂಸೆ ನಡೆದ ಸಮಯದಲ್ಲಿ, ಅವರು ಕಿರುಕುಳ ನೀಡುತ್ತಿದ್ದ ವ್ಯಕ್ತಿಯ (ಗಂಡನ) ಜೊತೆ ಕೌಟುಂಬಿಕ ಸಂಬಂಧದಲ್ಲಿ ಇದ್ದರು.

 

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.