ಯಾವುದೇ ವ್ಯಕ್ತಿಯು ನಿಮ್ಮ ಪಾಸ್ ವರ್ಡ್, ವಿದ್ಯುನ್ಮಾನ ಅಥವಾ ನಿಮ್ಮ ವಿಶಿಷ್ಟ ಗುರ್ತಿನ ಚಿಹ್ನೆಗಳನ್ನು ಮೋಸ ಮಾಡುವ ಅಪ್ರಾಮಾಣಿಕ ಉದ್ದೇಶದಿಂದ ಕಳವು ಮಾಡಿ, ಅವುಗಳನ್ನು ತನ್ನ ದುರುದ್ದೇಶಕ್ಕಾಗಿ ಬಳಸುವ ಕೃತ್ಯಕ್ಕೆ ಗುಪ್ತಮಾಹಿತಿ ಕಳವು ಎಂದು ಹೆಸರು. ಉದಾಹರಣೆಗೆ ನಿಮ್ಮ ಸಹಪಾಠಿ ನಿಮ್ಮ ಇನ್ಸ್ಟಾಗ್ರಾಂನ ಪಾಸ್ ವರ್ಡ್ ಕದ್ದಲ್ಲಿ, ಅದು ಗುಪ್ತಮಾಹಿತಿ ಕಳವು ಎನಿಸಿಕೊಳ್ಳುತ್ತದೆ. ಗುಪ್ತಮಾಹಿತಿ ಕಳವಿನ ಅಪರಾಧಕ್ಕಾಗಿ ಮೂರು ವರ್ಷಗಳವರೆಗಿನ ಸೆರೆವಾಸ ಮತ್ತು ಒಂದು ಲಕ್ಷರೂಪಾಯಿಗಳವರೆಗಿನ ದಂಡ ತೆರುವ ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ.
Theme: Media & Intellectual Property
ಕಪಟರೂಪ ಧಾರಣೆ
ಕಂಪ್ಯೂಟರ್ ಅಥವಾ ಮತ್ತಾವುದೇ ವಿದ್ಯನ್ಮಾನ ಉಪಕರಣದ ಸಹಾಯದಿಂದ ಮತ್ತೊಬ್ಬ ವ್ಯಕ್ತಿಯನ್ನು ಮೋಸಗೊಳಿಸಲು ಕೃತಕ ವ್ಯಕ್ತಿತ್ವವನ್ನು ಸೃಷ್ಟಿಸುವ ಕೃತ್ಯಕ್ಕೆ ಕಪಟರೂಪ ಧಾರಣೆ ಎಂದು ಹೆಸರು. ಉದಾಹರಣೆಗೆ, ನಿಮ್ಮ ಫೇಸ್ ಬುಕ್ ಪ್ರೊಫೈಲ್ ನ ಮೂಲಕ ನಿಮ್ಮದೇ ಚಿತ್ರವನ್ನು ನೀವೇ ಹಾಕಿದ್ದೀರಿ ಎಂದು ತೋರುವಂತೆ ಬೇರೆ ವ್ಯಕ್ತಿ ಪೋಸ್ಟ್ ಮಾಡಿದರೆ, ಅದು ಕಪಟರೂಪಧಾರಣೆಯ ಕೃತ್ಯ ಎನಿಸಿಕೊಳ್ಳುತ್ತದೆ. ಕಪಟರೂಪಧಾರಣೆಯ ಅಪರಾಧಕ್ಕಾಗಿ ಮೂರು ವರ್ಷ ಜೈಲುವಾಸ ಅಥವಾ ಒಂದು ಲಕ್ಷ ರೂಪಾಯಿಗಳ ಜುಲ್ಮಾನೆಯ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಅಶ್ಲೀಲ ಮಾಹಿತಿ ಮತ್ತು ಲೈಂಗಿಕ ದೌರ್ಜನ್ಯ
ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು ಮತ್ತು ಲೈಂಗಿಕ ದೌರ್ಜನ್ಯವನ್ನು ಕಾನೂನು ವಿವಿಧ ರೀತಿಯ ಅಪರಾಧಗಳನ್ನಾಗಿ ಪರಿಗಣಿಸಿ ದಂಡನೆ ವಿಧಿಸುತ್ತದೆ.
ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು:
ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಯಾವುದೇ ಮಹಿಳೆಯ ನಗ್ನಚಿತ್ರವನ್ನು ಯಾರಾದರೂ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದಲ್ಲಿ ಅಂತಹ ಕೃತ್ಯ ಅಪರಾಧ. ಮೊದಲನೇ ಬಾರಿಯ ಇಂತಹ ಅಪರಾಧಕ್ಕೆ ಮೂರು ವರ್ಷಗಳವರೆಗೆ ಸೆರೆವಾಸ ಮತ್ತು ಐದು ಲಕ್ಷ ರೂಪಾಯಿಗಳ ದಂಡ ವಿಧಿಸಬಹುದಾಗಿದೆ. ಪುನ: ಈ ರೀತಿಯ ಅಪರಾಧ ಎಸಗಿದಲ್ಲಿ, ಐದು ವರ್ಷಗಳವರೆಗೆ ಸೆರೆವಾಸ ಮತ್ತು ಹತ್ತು ಲಕ್ಷ ರೂಪಾಯಿಗಳ ದಂಡ ವಿಧಿಸಬಹುದಾಗಿದೆ.
ಲೈಂಗಿಕಕ್ರಿಯೆಗಳನ್ನು ಬಹಿರಂಗವಾಗಿ ತೋರಿಸುವಂತಹ ಮಾಹಿತಿಯನ್ನು ಹರಡುವುದು:
ಮೇಲಾಗಿ, ಯಾವುದೇ ವ್ಯಕ್ತಿ ಲೈಂಗಿಕ ಕ್ರಿಯೆಗಳನ್ನು ಬಹಿರಂಗವಾಗಿ ತೋರಿಸುವ ಚಿತ್ರ, ವಿಡಿಯೋ ಅಥವಾ ಮತ್ತಾವುದೇ ರೂಪದಲ್ಲಿ ಮಾಹಿತಿಯನ್ನು ಅಂತರ್ಜಾಲದಲ್ಲಿ ಹರಡಿದಲ್ಲಿ, ಆತನ ಕೃತ್ಯವನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಇಬ್ಬರು ವ್ಯಕ್ತಿಗಳ ನಡುವಿನ ಲೈಂಗಿಕ ಕ್ರಿಯೆಯ ವಿಡಿಯೋವನ್ನು ಅವರ ಅನುಮತಿ ಇಲ್ಲದೆ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದಲ್ಲಿ ಅದು ಶಿಕ್ಷಾರ್ಹ ಅಪರಾಧ. ಮೊದಲನೇ ಬಾರಿಯ ಇಂತಹ ಅಪರಾಧಕ್ಕೆ ಐದು ವರ್ಷಗಳವರೆಗೆ ಸೆರೆವಾಸ ಮತ್ತು ಹತ್ತು ಲಕ್ಷ ರೂಪಾಯಿಗಳ ದಂಡ ವಿಧಿಸಬಹುದಾಗಿದೆ. ಪುನ: ಈ ರೀತಿಯ ಅಪರಾಧ ಎಸಗಿದಲ್ಲಿ, ಏಳು ವರ್ಷಗಳವರೆಗೆ ಸೆರೆವಾಸ ಮತ್ತು ಹತ್ತು ಲಕ್ಷ ರೂಪಾಯಿಗಳ ದಂಡ ವಿಧಿಸಬಹುದಾಗಿದೆ.
ಅಶ್ಲೀಲತೆಯನ್ನು ವೀಕ್ಷಿಸುವಂತೆ ಒತ್ತಾಯಿಸುವುದು: ಒಬ್ಬ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲತೆಯನ್ನು ಆಕೆ ವೀಕ್ಷಿಸುವಂತೆ ಬಲವಂತ ಮಾಡುವುದು ಲೈಂಗಿಕ ದೌರ್ಜನ್ಯವೆನ್ನಿಸಿಕೊಳ್ಳುತ್ತದೆ. ಇದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. ಈ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಅಥವಾ ಜುಲ್ಮಾನೆ ಅಥವಾ ಎರಡೂ ದಂಡನೆಗಳನ್ನು ಅನುಭವಿಸಬೇಕಾಗುತ್ತದೆ.
ನಿಮ್ಮ ವೈಯುಕ್ತಿಕ ಭಾವಚಿತ್ರಗಳು ಮತ್ತು ವಿಡಿಯೋಗಳು
ನಿಮ್ಮ ವೈಯುಕ್ತಿಕ ಭಾವಚಿತ್ರಗಳ ಮತ್ತು ವಿಡಿಯೋಗಳನ್ನು ನಿಮ್ಮ ಅನುಮತಿ ಇಲ್ಲದೆಯೇ ಯಾರಾದರೂ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದಲ್ಲಿ ಅದು ಅಪರಾಧವಾಗುತ್ತದೆ. ಉದಾಹರಣೆಗೆ ವ್ಯಕ್ತಿಯೊಬ್ಬನ ಗುಪ್ತಾಂಗದ ಫೋಟೋವನ್ನು ಫೇಸ್ ಬುಕ್ಕಿನಲ್ಲಿ ಮತ್ತೊಬ್ಬ ವ್ಯಕ್ತಿ ಹಾಕಿದಲ್ಲಿ ಅದು ಆತನ ಖಾಸಗಿತನವನ್ನು ಉಲ್ಲಂಘಿಸಿದ ಅಪರಾಧವೆನಿಸಿಕೊಳ್ಳುತ್ತದೆ. ಈ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಅಥವಾ ಎರಡು ಲಕ್ಷ ರೂಪಾಯಿಗಳ ಜುಲ್ಮಾನೆ ಅಥವಾ ಎರಡೂ ದಂಡನೆಗಳನ್ನು ಅನುಭವಿಸಬೇಕಾಗುತ್ತದೆ.
ಮಹಿಳೆಯೊಬ್ಬಳು ಖಾಸಗಿ ಕ್ರಿಯೆಗಳಲ್ಲಿ ತೊಡಗಿರುವ ಭಾವಚಿತ್ರಗಳನ್ನು ತೆಗೆಯುವುದು, ನೋಡುವುದು ಅಥವಾ ಹರಡುವುದು ಕೂಡ ಅಪರಾಧ. ಈ ಪ್ರವೃತ್ತಿಯನ್ನು ಲೈಂಗಿಕತೃಪ್ತಿಯ ಗೀಳು ಎಂದು ಕರೆಯಲಾಗುತ್ತದೆ. ಈ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಮತ್ತು ಜುಲ್ಮಾನೆಯ ದಂಡನೆಗಳನ್ನು ಅನುಭವಿಸಬೇಕಾಗುತ್ತದೆ.
ಅಪಮಾನ
ಯಾವುದೇ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ನಿಮ್ಮ ಧರ್ಮ ಅಥವಾ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತಹ ಮಾತುಗಳನ್ನು ಆಡಿದಲ್ಲಿ ಅಥವಾ ಬರೆದಲ್ಲಿ ಅಂತಹ ಕೃತ್ಯ ಕಾನೂನು ಅಡಿಯಲ್ಲಿ ದಂಡನೀಯ ಅಪರಾಧ. ಉದಾಹರಣೆಗೆ, ನಿಮ್ಮ ಧರ್ಮವನ್ನು ಅವಹೇಳನಕಾರಿ ಭಾಷೆಯಲ್ಲಿ ಯಾರದಾರೂ ಫೇಸ್ ಬುಕ್ ನಲ್ಲಿ ನಿಂದಿಸಿದಲ್ಲಿ ಅವರ ಕೃತ್ಯ ಅಪರಾಧ. ಈ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಅಥವಾ ಜುಲ್ಮಾನೆ ಅಥವಾ ಎರಡೂ ದಂಡನೆಗಳನ್ನು ಅನುಭವಿಸಬೇಕಾಗುತ್ತದೆ.
ಆನ್ ಲೈನ್ ಖಾತೆಗೆ/ಗಣಕಯಂತ್ರಕ್ಕೆ ಅತಿಕ್ರಮ ಪ್ರವೇಶ
ಯಾವುದೇ ವ್ಯಕ್ತಿಯು ನಿಮ್ಮ ಪೂರ್ವಾನುಮತಿಯಿಲ್ಲದೆ ನಿಮ್ಮ ಆನ್ ಲೈನ್ ಖಾತೆಗೆ ಪ್ರವೇಶಿಸಿ ಮಾಹಿತಿಯನ್ನು ಪಡೆಯುವುದಾಗಲೀ ಅಥವಾ ನಿಮ್ಮ ಕಂಪ್ಯೂಟರ್ ನ ಹಾರ್ಡ್ ವೇರ್/ಸಾಫ್ಟ್ ವೇರ್ ಬಗ್ಗೆ ತಿಳುವಳಿಕೆ ಪಡೆದಲ್ಲಿ ಆ ವ್ಯಕ್ತಿಯು ಅತಿಕ್ರಮ ಪ್ರವೇಶ ಮಾಡಿದ ಅಪರಾಧಕ್ಕೆ ಗುರಿಯಾಗುತ್ತಾರೆ. ಉದಾಹರಣೆಗೆ, ನಿಮ್ಮ ಜಿ-ಮೇಲ್ ಖಾತೆಗೆ ನಿಮ್ಮ ಅನುಮತಿ ಇಲ್ಲದೆಯೇ ಮತ್ತೊಬ್ಬ ವ್ಯಕ್ತಿ ಪ್ರವೇಶ ಪಡೆಯುವುದು.
ಇಂತಹ ಅಪರಾಧ ಮಾಡಿದ ವ್ಯಕ್ತಿಯು ಒಂದು ಕೋಟಿ ರೂಪಾಯಿಗಳನ್ನು ಮೀರದಂತೆ ನಿಮಗೆ ನಷ್ಟಭರ್ತಿ/ಪರಿಹಾರದ ಮೊತ್ತವನ್ನು ನೀಡಲು ಹೊಣೆಗಾರರಾಗಿರುತ್ತಾರೆ. ಆದರೆ, ಅಪರಾಧಿಯು ದುರುದ್ದೇಶ ಮತ್ತು ಅಪ್ರಾಮಾಣಿಕತೆಯ ಉದ್ದೇಶದಿಂದ ನಿಮ್ಮ ಖಾತೆಗೆ ಪ್ರವೇಶಿಸಿದರು ಎಂಬ ಅಂಶವನ್ನು ಸಾಬೀತುಪಡಿಸಬೇಕಾಗುತ್ತದೆ.