ಸಮ್ಮತಿ ಎಂದರೇನು?

ಸಮ್ಮತಿಯು ಒಂದು ನಿರ್ದಿಷ್ಟ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸುವ ವ್ಯಕ್ತಿಯಿಂದ ಸ್ವಯಿಚ್ಛೆಯಿಂದ, ಗೊಂದಲಾರ್ಥಗಳಿಲ್ಲದ ಮತ್ತು ಸ್ಪಷ್ಟವಾದ ಒಪ್ಪಂದವಾಗಿದೆ. ಒಬ್ಬ ಮಹಿಳೆ ತಾನು ಯಾವುದಕ್ಕೆ ಸಮ್ಮತಿ ನೀಡುತ್ತಿದ್ದಾಳೆ ಮತ್ತು ಸಮ್ಮತಿಸಿದ ಕ್ರುತ್ಯದಿಂದಾಗುವ ಪರಿಣಾಮವನ್ನ ಅರಿತಿರಬೇಕು. ಅವಳು ದೈಹಿಕವಾಗಿ ಸಂಭೋಗ ಕ್ರಿಯೆಯನ್ನು ವಿರೋಧಿಸದಿದ್ದರೂ ಸಹ, ಅವಳು ಲೈಂಗಿಕ ಚಟುವಟಿಕೆಗೆ ಒಪ್ಪಿಗೆ ಸೂಚಿಸಿದ್ದಾಳೆ ಎಂದು ಅರ್ಥವಲ್ಲ.

 

ಕೆಳಗಿನ ಸಂದರ್ಭಗಳಲ್ಲಿ, ಮಹಿಳೆ ತನ್ನ ಒಪ್ಪಿಗೆಯನ್ನು ನೀಡಿದ್ದರೂ ಸಹ ಪುರುಷನು ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗುತ್ತದೆ1:

  • ಅವಳನ್ನು ಹಿಂಸಿಸುವುದಾಗಿ ಬೆದರಿಕೆಯೊಡ್ಡಿ ಅಥವಾ ಅವಳ ಜೀವಕ್ಕೆ ಬೆದರಿಕೆಯೊಡ್ಡಿ ಅಥವಾ ಅವಳ ಆತ್ಮೀಯರ ಪ್ರಾಣಕ್ಕೆ ಬೆದರಿಕೆಯೊಡ್ಡಿ ಬಲವಂತವಾಗಿ ಅವಳ ಒಪ್ಪಿಗೆಯನ್ನು ಪಡೆದಿದ್ದರೆ
  • ಪುರುಷನು ತಾನು ಆ ಮಹಿಳೆಯ ಪತಿ ಅಲ್ಲ ಎಂದು ತಿಳಿದಿದ್ದು ಮತ್ತು ಅವಳು ಆ ಪುರುಷನನ್ನು ತನ್ನ ಪತಿ ಎಂದು ಭಾವಿಸಿಕೊಂಡ ಮಾತ್ರಕ್ಕೆ  ಅವಳ ಒಪ್ಪಿಗೆ ನೀಡಿದ್ದರೆ
  • ಮನಸ್ಸಿನ ಅಸ್ವಸ್ಥತೆ ಅಥವಾ ಅಮಲು ಅಥವಾ ಪುರುಷನು ತನಗೆ ಹಾನಿಕಾರಕ ಪದಾರ್ಥವನ್ನು ನೀಡಿದ್ದರಿಂದ ಮಹಿಳೆಯು ತಾನು ಒಪ್ಪಿಗೆ ನೀಡುವ ಕ್ರಿಯೆಯ ಸ್ವರೂಪ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ
  • ಮಹಿಳೆ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ.

 

ಸಮ್ಮತಿ ಎಂದರೆ, ಸ್ವಯಿಚ್ಛೆಯಿಂದ

————————-

ಸ್ಪಷ್ಟವಾದ

————————-

ಗೊಂದಲಾರ್ಥಗಳಿಲ್ಲದ

ಬಲವಂತವಿಲ್ಲದ

ಬೆದರಿಕೆಯಿಂದಲ್ಲದ

ಪ್ರಜ್ಞಾಹೀನ ಸ್ಥಿತಿಯಲ್ಲಿರದ

—————————-

ಹೌದು ಎಂದರೆ ಹೌದು 

ಇಲ್ಲಾ ಎಂದರೆ ಇಲ್ಲಾ

—————————-

ಮದ್ಯ ಸೇವನೆ ಅಥವಾ ಇತರೇ ನಶೆಯಲ್ಲಿರದ

ಕೇಳಿಸದಂತೆ ಇರದ

 

ಒಂದೇ ಮನೆಯಲ್ಲಿ ಇರುವುದು ಎಂದರೇನು?

ನೀವು ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿಯ ಜೊತೆ ಕೆಳಗಿನ ಸಂದರ್ಭಗಳಲ್ಲಿ “ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದೀರಿ” ಎಂದು ಕಾನೂನಾತ್ಮಕವಾಗಿ ಪರಿಗಣಿಸಲಾಗುತ್ತದೆ:

ಕಿರುಕುಳ ಕೊಡುತ್ತಿದ್ದ ವ್ಯಕ್ತಿಯ ಜೊತೆ ಹಿಂದೆ ವಾಸ ಮಾಡುತ್ತಿದ್ದಿರಿ:

ಕಾನೂನಿನಡಿ ರಕ್ಷಣೆ ಹಾಗು ಪರಿಹಾರ ಬೇಕೆಂದಲ್ಲಿ, ನೀವು ಕಿರುಕುಳ ಕೊಡುತ್ತಿದ್ದ ವ್ಯಕ್ತಿಯ ಜೊತೆ ಪ್ರಸ್ತುತ ವಾಸವಾಗಿರಬೇಕು, ಅಥವಾ ಹಿಂದೆಂದೋ ವಾಸವಾಗಿದ್ದಿರಬೇಕು. ಆದರೆ, ನೀವು ದೂರು ನೀಡುವ ಸಮಯದಲ್ಲಿ ಅವರ ಜೊತೆ ವಾಸವಾಗಿರಬೇಕು ಎಂದೇನಿಲ್ಲ, ಹಾಗು ಹಿಂಸೆ ನಡೆಯುತ್ತಿದ್ದ ಸಮಯದಲ್ಲಿ ಅವರ ಜೊತೆ ವಾಸವಾಗಿರಬೇಕು ಎಂದೇನಿಲ್ಲ. ಕೇವಲ, ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ಯಾವಾಗಾದರೂ ನೀವು ವಾಸವಾಗಿದ್ದಿರಬೇಕು.

ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ಕೌಟುಂಬಿಕ ಸಂಬಂಧವಿರುವುದು:

ಕೌಟುಂಬಿಕ ಹಿಂಸೆಯ ಮೇರೆಗೆ ನಿಮಗೆ ರಕ್ಷಣೆ ಮತ್ತು ಪರಿಹಾರ ಬೇಕಿದ್ದಲ್ಲಿ, ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ನೀವು ವಾಸವಾಗಿದ್ದಿರಬೇಕು ಮತ್ತು ಅವರ ಜೊತೆ ಕೌಟುಂಬಿಕ ಸಂಬಂಧ ಹೊಂದಿರಬೇಕು. ಉದಾಹರಣೆಗೆ, ನೀವು ನಿಮ್ಮ ಅತ್ತೆಯ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದು, ಅವರಿಂದ ನಿಮಗೆ ಕೌಟುಂಬಿಕ ಹಿಂಸೆಯಾಗುತ್ತಿದ್ದಲ್ಲಿ, ನೀವು ರಕ್ಷಣೆ ಹಾಗು ಪರಿಹಾರ ಪಡೆಯಬಹುದು; ಯಾಕೆಂದರೆ, ಕಿರುಕುಳ ನೀಡುತ್ತಿರುವವರ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿದ್ದು, ಅವರ ಜೊತೆ ನೀವು ಒಂದೇ ಮನೆಯಲ್ಲಿ ವಾಸವಾಗಿದ್ದೀರಿ.

ಆದರೆ, ನೀವು ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದು, ಅವರ ಜೊತೆ ನಿಮಗೆ ಕೌಟುಂಬಿಕ ಸಂಬಂಧ ಇಲ್ಲದಿದ್ದರೆ, ಕೌಟುಂಬಿಕ ಹಿಂಸೆಯ ದೂರು ನೀವು ಕೊಡಲು ಸಾಧ್ಯವಿಲ್ಲ. ಉದಾಹರಣೆಗೆ, ನಿಮ್ಮ ಸೇವಕ ನಿಮ್ಮ ಜೊತೆ ಮನೆಯಲ್ಲಿ ವಾಸವಾಗಿದ್ದು, ನಿಮಗೆ ಅವರು ಹೊಡೆದರೆ, ಅವರ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ಸಲ್ಲಿಸಲು ಬರುವುದಿಲ್ಲ; ಯಾಕೆಂದರೆ, ಅವರ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿಲ್ಲ.

ಮನೆಯಲ್ಲಿ ಆಸ್ತಿ ಪಾಲು ಇರುವುದು/ಇಲ್ಲದಿರುವುದು:

ರಕ್ಷಣೆ ಹಾಗು ಪರಿಹಾರ ಪಡೆಯಲು, ನೀವು ವಾಸಿಸುತ್ತಿರುವ ಮನೆಯಲ್ಲಿ ನಿಮಗೆ ಪಾಲು ಇದೆಯೋ, ಇಲ್ಲವೋ ಎಂಬುದು ಅಪ್ರಸ್ತುತ. ಈ ಮನೆಯು ನಿಮ್ಮ/ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿಯ/ನಿಮ್ಮಿಬ್ಬರ ಜಂಟಿ-ಹೆಸರಲ್ಲಿರಬಹುದು, ಅಥವಾ ನಿಮ್ಮಿಬ್ಬರಲ್ಲಿ ಒಬ್ಬರು ಮನೆಯನ್ನು ಗುತ್ತಿಗೆ ಪಡೆದಿರಬಹುದು; ಅಥವಾ, ಮನೆ ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿಯೂ ಸೇರಿದ ಅವಿಭಜಿತ ಕುಟುಂಬಕ್ಕೆ ಸೇರಿರಬಹುದು, ಮತ್ತು ಆ ಮನೆಯ ಮೇಲೆ ನಿಮಗೆ ಕಾನೂನುಬದ್ಧವಾಗಿ ಯಾವ ಹಕ್ಕೂ ಇಲ್ಲದಿರಬಹುದು.

ಆದರೆ, ಮನೆ ನಿಮ್ಮ ಅತ್ತೆ-ಮಾವಂದಿರ, ಅಥವಾ ಕಿರುಕುಳ ಕೊಡುತ್ತಿರುವ ವ್ಯಕ್ತಿಯ ಇನ್ನಿತರ ನೆಂಟರ ಪ್ರತ್ಯೇಕ ಮತ್ತು ವೈಯಕ್ತಿಕ ಆಸ್ತಿಯಾಗಿದ್ದರೆ, ಆ ಮನೆಯಲ್ಲಿ ಪಾಲು ಕೇಳುವ ಯಾವ ಹಕ್ಕೂ ನಿಮಗಿರಲ್ಲ. ಆದಾಗ್ಯೂ, ನಿಮಗೆ ಆ ಮನೆಯಲ್ಲಿ ವಾಸಿಸುವ ಹಕ್ಕು ಇದೆಯೋ ಇಲ್ಲವೋ ಎಂಬುದನ್ನು, ಆಯಾ ಪ್ರಕರಣಗಳ ಸಂದರ್ಭಾನುಸಾರ ನ್ಯಾಯಾಲಯವು ತೀರ್ಮಾನಿಸುತ್ತದೆ. ನಿಮ್ಮ ಅತ್ತೆ-ಮಾವಂದಿರ ಮನೆಯಲ್ಲಿ, ನ್ಯಾಯಾಲಯವು ನಿಮಗೆ ವಾಸಿಸುವ ಹಕ್ಕು ಕೆಲ ಸಂದರ್ಭಗಳಲ್ಲಿ ನೀಡಬಹುದು.

ಗಮನಿಸಬೇಕಾದ ವಿಷಯವೆಂದರೆ, ನೀವು ವಾಸಿಸುವ ಮನೆಯಲ್ಲಿಯೇ ಕೌಟುಂಬಿಕ ಹಿಂಸೆ ನಡೆದಿರಬೇಕು ಎಂದೇನಿಲ್ಲ. ಹಿಂಸೆ ಬೇರೆಲ್ಲೋ ಕೂಡ ನಡೆದಿರಬಹುದು.

ಮಗುವು ಯಾರೊಂದಿಗಾದರೂ ಲೈಂಗಿಕ ಸಂಬಂಧ ಹೊಂದಲು ಸಮ್ಮತಿ ನೀಡಬಹುದೇ?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

ಇಲ್ಲ. ಲೈಂಗಿಕ ಸಂಬಂಧ ಹೊಂದಲು ಸಮ್ಮತಿ ನೀಡುವ ಮಗುವಿನ ಸಾಮರ್ಥ್ಯವನ್ನು ಕಾನೂನು ಗುರುತಿಸುವುದಿಲ್ಲ. ಇದರರ್ಥ ವಯಸ್ಕರು (18 ವರ್ಷಕ್ಕಿಂತ ಮೇಲ್ಪಟ್ಟವರು) ಯಾವುದೇ ರೀತಿಯ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮಗುವನ್ನು (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಕೇಳಿದರೆ, ಮತ್ತು ಮಗು ಸ್ಪಷ್ಟವಾಗಿ ಹೌದು ಎಂದು ಹೇಳಿದರೂ ಅಥವಾ ಅವರು ಸಮ್ಮತಿ ಸೂಚಿಸಿದರೂ, ಈ ಚಟುವಟಿಕೆಯನ್ನು ಕಾನೂನಿನ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ.

ಮಕ್ಕಳ ನಡುವೆ ಸಮ್ಮತಿ

ಇಬ್ಬರು ಮಕ್ಕಳು ಸ್ವಇಚ್ಛೆಯಿಂದ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿದರೆ, ಅದನ್ನು ಸಹ ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಹುಡುಗಿಯರು ಮತ್ತು ಹುಡುಗರಿಗೆ ಸಮ್ಮತಿಯ ವಯಸ್ಸು 18 ವರ್ಷಗಳು. ನಮ್ಮ ವಿವರಣೆ “ಅಪರಾಧಗಳ ಆರೋಪ ಹೊತ್ತಿರುವ ಮಕ್ಕಳು” ನಲ್ಲಿ ಹೆಚ್ಚಿನ ಮಾಹಿತಿಯನ್ನು ಓದಿ.

ಪ್ರಾಪ್ತ ವಯಸ್ಕರ ಒಪ್ಪಿಗೆ

ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ (ಅಪ್ರಾಪ್ತ ವಯಸ್ಸಿನ) ಹುಡುಗಿಯೊಂದಿಗಿನ ಲೈಂಗಿಕತೆಯನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ, ಹುಡುಗಿ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಿದ್ದರೂ ಸಹ. ಉದಾಹರಣೆಗೆ, ಒಬ್ಬ ಪುರುಷನು ಹದಿನೇಳು ವರ್ಷದ ಹುಡುಗಿಯೊಂದಿಗೆ ಸಂಭೋಗಿಸಿದರೆ, ಅದು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ, ಇದು ಆ ಹುಡುಗಿ ಸಂಭೋಗಕ್ಕೆ ಒಪ್ಪಿದ್ದರೂ ಸಹ.

ಲಿವ್-ಇನ್ ಸಂಬಂಧಗಳು ಕೌಟುಂಬಿಕ ಹಿಂಸೆ ಕಾನೂನಿನಡಿ ಬರುತ್ತವೆಯೇ?

(ಮುನ್ಸೂಚನೆ: ಕೆಳಗೆ ಕೌಟುಂಬಿಕ ಹಿಂಸೆಯ ಬಗ್ಗೆ ಮಾಹಿತಿ ಇದ್ದು, ಇದು ಕೆಲ ಓದುಗರಲ್ಲಿ ಮಾನಸಿಕ ಗೊಂದಲ ಉಂಟು ಮಾಡಬಹುದು)

ನೀವು ನಿಮ್ಮ ಸಂಗಾತಿಯ ಜೊತೆ, ಮದುವೆಯಾಗದೆ, ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೆ, ನೀವು ಲಿವ್-ಇನ್ ಸಂಬಂಧದಲ್ಲಿ ಇದ್ದೀರಿ ಎಂದರ್ಥ. ಒಬ್ಬ ಮದುವೆಯಾಗದ ವಯಸ್ಕ ಸ್ತ್ರೀ ಮತ್ತು ಒಬ್ಬ ಮದುವೆಯಾಗದ ವಯಸ್ಕ ಪುರುಷ ಜೊತೆಗೆ ವಾಸಿಸುತ್ತಿದ್ದರೆ, ಅಥವಾ ಹಿಂದೆ ಯಾವಾಗೋ ಜೊತೆಗೆ ವಾಸಿಸಿದ್ದರೆ, ಅವರ ನಡುವಿನ ಸಂಬಂಧವನ್ನು “ಕೌಟುಂಬಿಕ ಸಂಬಂಧ” ಎಂದು ಪರಿಗಣಿಸಲಾಗುವುದು. ಮದುವೆಗಳಿಗೆ ಹೋಲಿಸಿದರೆ, ಲಿವ್-ಇನ್ ಸಂಬಂಧಗಳನ್ನು ಕಾನೂನು ನಿಯಂತ್ರಿಸುವುದಿಲ್ಲ. ಉದಾಹರಣೆಗೆ, ಲಿವ್-ಇನ್ ಸಂಬಂಧವನ್ನು ಜಾರಿಗೊಳಿಸಲು ಅದನ್ನು ನೋಂದಾಯಿಸಬೇಕಿಲ್ಲ, ಮತ್ತು ಸಂಬಂಧಧಿನದ ಹೊರಬರಲು ವಿಚ್ಛೇದನ ಬೇಕಿಲ್ಲ. ನಿಮಗೆ ಇಷ್ಟ ಬಂದಂತೆ ಸಂಬಂಧವನ್ನು ಅಂತ್ಯಗೊಳಿಸಬಹುದು.

ಲಿವ್-ಇನ್ ಸಂಬಂಧಗಳು “ಮದುವೆಯ ರೀತಿಯಲ್ಲಿ” ಇದ್ದರೆ ಮಾತ್ರ ಅವುಗಳನ್ನು ಕಾನೂನು ಗುರುತಿಸುತ್ತದೆ. ಅಂದರೆ ಆ ಲಿವ್-ಇನ್ ಸಂಬಂಧಗಳಲ್ಲಿ, ಅವು ಕಾನೂನುಬದ್ಧವಾಗಿ ಗುರುತಿಸಲ್ಪಡದಿದ್ದರೂ ಸಹ, ಮದುವೆಯ ಕೆಲವು ಅತ್ಯಗತ್ಯ ಗುಣಲಕ್ಷಣಗಳು ಇರಬೇಕು. ಲಿವ್-ಇನ್ ಸಂಬಂಧಗಳ ಮೇಲೆ ತೀರ್ಪುಗಳನ್ನು ನೀಡುವಾಗ ನ್ಯಾಯಾಲಯಗಳು ಅವುಗಳನ್ನು ಮದುವೆಗಳಿಗೆ ಹೋಲಿಸಿ, ಅವುಗಳಲ್ಲಿ ಮದುವೆಯ ಅತ್ಯಗತ್ಯ ಗುಣಲಕ್ಷಣಗಳು ಇವೆಯೋ ಇಲ್ಲವೋ ಎಂದು ತೀರ್ಮಾನಿಸುತ್ತವೆ.

“ಮದುವೆಯಂತಹ” ಲಿವ್-ಇನ್ ಸಂಬಂಧಗಳು ಕೆಳಗಿನ ಅಂಶಗಳನ್ನು ಹೊಂದಿರುತ್ತವೆ ಎಂದು ಹಲವಾರು ತೀರ್ಪುಗಳಲ್ಲಿ ನ್ಯಾಯಾಲಯಗಳು ಹೇಳಿವೆ:

೧. ಸಂಬಂಧದ ಅವಧಿ:

ನೀವು ಮತ್ತು ನಿಮ್ಮ ಸಂಗಾತಿ, ಸ್ವೇಚ್ಛೆಯಿಂದ, ಸಾಕಷ್ಟು ಸಮಯದವರೆಗೆ (ಹಲವು ತಿಂಗಳುಗಳು ಅಥವಾ ವರ್ಷಗಳು), ಒಂದೇ ಮನೆಯಲ್ಲಿ ವಾಸವಾಗಿರಬೇಕು. ಕೇವಲ ಕೆಲವು ವಾರಗಳು, ಒಂದು ವಾರಾಂತ್ಯ, ಅಥವಾ ಒಂದು ರಾತ್ರಿ ಒಟ್ಟಿಗೆ ಕಳೆದರೆ ಅದು ಲಿವ್-ಇನ್ ಸಂಬಂಧ ಎನಿಸಲಾರದು.

೨. ಸಾರ್ವಜನಿಕವಾಗಿ ಜನರ ಜೊತೆ ಬೆರೆಯುವುದು:

ನೀವು ಮತ್ತು ನಿಮ್ಮ ಸಂಗಾತಿ ಗಂಡ-ಹೆಂಡತಿಯ ಹಾಗೆ ಸ್ನೇಹಿತರು, ನೆಂಟರು, ಮತ್ತು ಇನ್ನಿತರರ ಜೊತೆ ಸಾರ್ವಜನಿಕವಾಗಿ ಬೆರೆತಿರಬೇಕು.

೩. ವಯಸ್ಸು ಮತ್ತು ವೈವಾಹಿಕ ಸ್ಥಿತಿ:

ನೀವು ಮತ್ತು ನಿಮ್ಮ ಸಂಗಾತಿ ಮದುವೆಯಾಗಲು ಅರ್ಹರಾಗಿರಬೇಕು. ಅಂದರೆ, ನಿಮ್ಮಿಬರಿಗೂ ಲಿವ್-ಇನ್ ಸಂಬಂಧವನ್ನು ಪ್ರವೇಶಿಸುವ ಸಮಯದಲ್ಲಿ ಜೀವಂತ ಗಂಡ/ಹೆಂಡತಿ ಇರಬಾರದು, ಮತ್ತು ನೀವಿಬ್ಬರೂ ಮದುವೆಯ ವಯಸ್ಸು ತಲುಪಿರಬೇಕು – ಮಹಿಳೆಯರಿಗೆ ೧೮, ಮತ್ತು ಪುರುಷರಿಗೆ ೨೧.

೪. ಲೈಂಗಿಕ ಸಂಬಂಧ:

ನೀವು ಮತ್ತು ನಿಮ್ಮ ಸಂಗಾತಿಯ ನಡುವೆ, ಭಾವನಾತ್ಮಕ ಮತ್ತು ಆತ್ಮೀಯ ಆಸರೆಯುಳ್ಳ ಲೈಂಗಿಕ ಸಂಬಂಧವಿರಬೇಕು.

೫. ಆರ್ಥಿಕ ವ್ಯವಸ್ಥೆ:

ಗಂಡ-ಹೆಂಡತಿಯರ ಹಾಗೆ ನೀವು ಮತ್ತು ನಿಮ್ಮ ಸಂಗಾತಿಯ ಮಧ್ಯೆ ಆರ್ಥಿಕ ವ್ಯವಸ್ಥೆಯಿರಬೇಕು. ಉದಾಹರಣೆಗೆ, ನಿಮ್ಮಿಬ್ಬರ ಆರ್ಥಿಕ ಸಂಪನ್ಮೂಲಗಳನ್ನು ನೀವು ಸಾಮಾನ್ಯ ನಿಧಿಯಾಗಿ ಸೇರಿಸಿ ಬಳಸುತ್ತಿದ್ದೀರಿ, ಮತ್ತು ಜಂಟಿ ಬ್ಯಾಂಕ್ ಖಾತೆಗಳು, ಆಸ್ತಿಗಳ ಮೇಲೆ ಜಂಟಿ ಒಡೆತನ, ದೀರ್ಘ ಕಾಲದ ಔದ್ಯೋಗಿಕ ಬಂಡವಾಳ ಹೂಡುವುದು, ಇನ್ನಿತರೇ ಉಪಕರಣಗಳ ಮೂಲಕ, ಆರ್ಥಿಕವಾಗಿ ಒಬ್ಬರನ್ನೊಬ್ಬರು ಬೆಂಬಲಿಸುತ್ತಿರಬೇಕು.

೬. ಕೌಟುಂಬಿಕ ವ್ಯವಸ್ಥೆ:

ನಿಮ್ಮಿಬ್ಬರಲ್ಲಿ ಒಬ್ಬರು, ವಿಶೇಷವಾಗಿ ಮಹಿಳೆಯಾದವರು, ಮನೆಯನ್ನು ನಡೆಸುವ/ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಲ್ಲಿ, ಹಾಗು ಮನೆಗೆಲಸ (ಸ್ವಚ್ಛ ಮಾಡುವುದು, ಅಡುಗೆ ಮಾಡುವುದು, ಮನೆಯ ನಿರ್ವಹಣೆ, ಇತ್ಯಾದಿ) ಮಾಡುತ್ತಿದ್ದಲ್ಲಿ, ನಿಮ್ಮ ಸಂಬಂಧ ಮದುವೆಯಂತಹ ಕೌಟುಂಬಿಕ ವ್ಯವಸ್ಥೆ ಎಂದು ಪರಿಗಣಿಸಲಾಗುತ್ತದೆ.

೭. ಪಕ್ಷಗಳ ಉದ್ದೇಶ ಮತ್ತು ನಡುವಳಿಕೆ:

ಅವರ ಸಂಬಂಧ ಏನು, ಸಂಬಂಧದೊಳಗಿನ ಅವರ ಪಾತ್ರ ಮಾತು ಕರ್ತವ್ಯಗಳು – ಇವುಗಳ ಬಗ್ಗೆ ಅವರ ಮಧ್ಯೆ ಇರುವ ಜಂಟಿ ಉದ್ದೇಶ ಅವರ ಸಂಬಂಧದ ಪ್ರಕೃತಿಯನ್ನು ನಿರ್ಧರಿಸುತ್ತದೆ. ೮. ಮಕ್ಕಳು: ಲಿವ್-ಇನ್ ಸಂಬಂಧದಲ್ಲಿ ಮಕ್ಕಳು ಇರುವುದು ಇದು “ಮದುವೆಯಂತಹ ಸಂಬಂಧ”, ಮತ್ತು ತಮ್ಮ ಸಂಬಂಧದ ಬಗ್ಗೆ ದೂರ ದೃಷ್ಟಿಯ ದೃಷ್ಟಿಕೋನವಿದೆ ಎಂಬುದನ್ನು ಬಲವಾಗಿ ಸೂಚಿಸುತ್ತದೆ.

ಮೇಲೆ ನೀಡಿರುವ ಮಾನದಂಡಗಳನ್ನು ಪೂರೈಸದಿದ್ದರೆ, ನ್ಯಾಯಾಲಯಗಳು ನಿಮ್ಮ ಸಂಬಂಧವನ್ನು ಲಿವ್-ಇನ್ ಸಂಬಂಧ ಎಂದು ಒಪ್ಪುವುದಿಲ್ಲ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಂದರೇನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಒಬ್ಬ ವ್ಯಕ್ತಿಯು ಒಂದು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವನ್ನು ಮಾಡಿರುವುದು ಯಾವಾಗ ಎಂದರೆ:

ಲೈಂಗಿಕ ಉದ್ದೇಶದಿಂದ ಒಂದು ಮಗುವನ್ನು ಸ್ಪರ್ಶಿಸಿದರೆ. ಇದು ಮಗುವಿನ ಯೋನಿ, ಶಿಶ್ನ, ಗುದದ್ವಾರ, ಸ್ತನ ಇತ್ಯಾದಿಗಳನ್ನು ಮುಟ್ಟುವುದನ್ನು ಒಳಗೊಂಡಿರುತ್ತದೆ. ಮಗುವನ್ನು ಅವರ ಸ್ವಂತ ಅಥವಾ ಬೇರೆಯವರ ಯೋನಿ, ಶಿಶ್ನ, ಗುದದ್ವಾರ, ಸ್ತನ ಇತ್ಯಾದಿಗಳನ್ನು ಸ್ಪರ್ಶಿಸಲು ಒತ್ತಾಯಿಸಿದರೆ. ಇದಕ್ಕೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಯ ಜೊತೆಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಅಪರಾಧಿಯು ನಂಬಿಕೆ ಅಥವಾ ಅಧಿಕಾರದ ಸ್ಥಾನದಲ್ಲಿದ್ದರೆ, ಇದು ಹೆಚ್ಚಿನ ಮಟ್ಟದ ಶಿಕ್ಷೆಯನ್ನು ಹೊಂದಿರುವ ಉಲ್ಬಣಗೊಂಡ ಲೈಂಗಿಕ ದೌರ್ಜನ್ಯ ಎಂದು ಕರೆಯಲ್ಪಡುವ ಹೆಚ್ಚಿನ ಅಪರಾಧವಾಗಿದೆ. ನಮ್ಮಈ ವಿವರಣೆಯಲ್ಲಿ ಇನ್ನಷ್ಟು ಓದಿ “ಅಧಿಕಾರದಲ್ಲಿರುವ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯದ ಉಲ್ಬಣಗೊಂಡ ಅಪರಾಧ ಅಂದರೆ ಯಾವುದು?”.

ಅತ್ಯಾಚಾರಕ್ಕೆ ಶಿಕ್ಷೆ

ಎಚ್ಚರಿಕೆ: ಈ ವಿವರಣೆಯು ದೈಹಿಕ ಹಿಂಸೆ ಮತ್ತು ಲೈಂಗಿಕ ಹಿಂಸಾಚಾರದ ಮಾಹಿತಿಯನ್ನು ಒಳಗೊಂಡಿರುವುದರಿಂದ, ಕೆಲವು ಓದುಗರು ಇದರಿಂದ ತೊಂದರೆಯಾಗಬಹುದು.

 

ಅತ್ಯಾಚಾರಕ್ಕೆ ಹತ್ತು ವರ್ಷಗಳ ಜೈಲು ಶಿಕ್ಷೆಯಿಂದ ಹಿಡಿದು ಜೀವಾವಧಿ ಶಿಕ್ಷೆ, ಜೊತೆಗೆ ದಂಡ ವಿಧಿಸಬಹುದು.2 ಭಾರತೀಯ ನ್ಯಾಯ ಸಂಹಿತೆ (BNS) ಎರಡು ರೀತಿಯ ಸೆರೆವಾಸವನ್ನು ವಿಧಿಸುತ್ತದೆ: ಸರಳ ಸೆರೆವಾಸ ಮತ್ತು ಕಠಿಣ ಸೆರೆವಾಸ. ಕಠಿಣವಾದ ಸೆರೆವಾಸವು ಸರಳ ಸೆರೆವಾಸಕ್ಕಿಂತ ಕಠಿಣವಾದ ಶಿಕ್ಷೆಯಾಗಿದೆ, ಇದು ಕಠಿಣ ಪರಿಶ್ರಮವನ್ನು ಒಳಗೊಂಡಿರುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಗಂಭೀರ ಅಪರಾಧಗಳಿಗೆ ಕಾಯ್ದಿರಿಸಲಾಗಿದೆ.

 

ಕೆಳಗಿನ ಸಂದರ್ಭಗಳಲ್ಲಿ ಶಿಕ್ಷೆಯು ಹೆಚ್ಚು ತೀವ್ರವಾಗಿರುತ್ತದೆ:

 

ಸಂತ್ರಸ್ತರು ಹದಿನಾರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಲ್ಲಿ 

 

ಸಂತ್ರಸ್ತರು ಹದಿನಾರು ವರ್ಷಕ್ಕಿಂತ ಕಡಿಮೆಯಿರುವಾಗ, ಶಿಕ್ಷೆಯು ದಂಡದೊಂದಿಗೆ, ಇಪ್ಪತ್ತು ವರ್ಷಗಳವರೆಗೆ ಜೈಲುವಾಸದಿಂದ ಜೀವಾವಧಿ ಶಿಕ್ಷೆಯಾಗಬಹುದು (ವ್ಯಕ್ತಿಯ ಉಳಿದ ನೈಸರ್ಗಿಕ ಜೀವನಕ್ಕೆ ಸೆರೆವಾಸ).3 ಸಂತ್ರಸ್ತರು ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಅಪರಾಧಿಗೆ ಮರಣದಂಡನೆಯನ್ನು ಸಹ ನೀಡಬಹುದು.4 ಸಂತ್ರಸ್ತರ ವೈದ್ಯಕೀಯ ವೆಚ್ಚಗಳು ಮತ್ತು ಪುನರ್ವಸತಿಯನ್ನು ಪೂರೈಸಲು ದಂಡವು ನ್ಯಾಯಯುತ ಮತ್ತು ಸಮಂಜಸವಾಗಿರಬೇಕು ಮತ್ತು ಇದನ್ನು ಸಂತ್ರಸ್ತರಿಗೆ ಪಾವತಿಸಲಾಗುತ್ತದೆ.

 

ಅತ್ಯಾಚಾರವು ಮಹಿಳೆಯ ಸಾವು ಅಥವಾ ನಿಷ್ಕ್ರಿಯ ಸ್ಥಿತಿಗೆ ಕಾರಣವಾದಾಗ

ಅತ್ಯಾಚಾರವು ಮಹಿಳೆಗೆ ತೀವ್ರ ಗಾಯವನ್ನು ಉಂಟುಮಾಡಿ ಅವಳ  ಸಾವಿಗೆ ಕಾರಣವಾದರೆ ಅಥವಾ ಅವಳನ್ನು ಶಾಶ್ವತವಾಗಿ ನಿಷ್ಕ್ರಿಯ ಸ್ಥಿತಿಯಲ್ಲಿ ಇರಿಸಿದರೆ, ಅಪರಾಧಿಗೆ ಇಪ್ಪತ್ತು ವರ್ಷಗಳವರೆಗೆ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ (ವ್ಯಕ್ತಿಯ ಉಳಿದ ಜೀವಿತಾವಧಿಯವರೆಗೆ ಜೈಲು), ಜೊತೆಗೆ ದಂಡ ಅಥವಾ ಮರಣ ದಂಡನೆ ವಿಧಿಸಬಹುದು.5

ಕೌಟುಂಬಿಕ ಹಿಂಸೆ ಅಂದರೇನು?

ಕೌಟುಂಬಿಕ ಹಿಂಸೆ ಅಂದರೇನು?

ಯಾವುದೇ ಮನೆಯಲ್ಲಿ, ಮಹಿಳೆ ಮತ್ತು ಅವಳ ಪಾಲನೆಯಲ್ಲಿರುವ ಮಗುವಿನ ಆರೋಗ್ಯ ಮತ್ತು ಸುರಕ್ಷತೆಗೆ ಧಕ್ಕೆ ತರುವಂತಹ ಹಿಂಸಾತ್ಮಕ ಅಥವಾ ಕಿರುಕುಳ ನೀಡುವ ವರ್ತನೆಗೆ ಕೌಟುಂಬಿಕ ಹಿಂಸೆ ಎನ್ನುತ್ತಾರೆ. ಕಾನೂನಿನ ಸಹಾಯದಿಂದ ನೀವು: -ತಕ್ಷಣ ರಕ್ಷಣೆ ಪಡೆದು ಹಿಂಸೆ ಮುಂದುವರೆಯದಂತೆ ತಡೆಯಬಹುದು. ತಕ್ಷಣ ರಕ್ಷಣೆ ಪಡೆಯಲು ನೀವು ಪೊಲೀಸ್, ರಕ್ಷಣಾಧಿಕಾರಿಗಳು, ಇನ್ನಿತರೇ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಕೆಳಗಿನ ಪರಿಹಾರಗಳನ್ನು ಪಡೆಯಲು ನ್ಯಾಯಾಲಯಕ್ಕೆ ಹೋಗಿ:

  • ವಿತ್ತೀಯ ಪರಿಹಾರ, ವಾಸಿಸಲು ಬೇಕಾದ ಸ್ಥಳ, ಇತ್ಯಾದಿ ಪಡೆಯಬಹುದು
  • ನಿಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಅಪರಾಧಿಕ ಫಿರ್ಯಾದು ನೀಡಬಹುದು

ಕೌಟುಂಬಿಕ ಹಿಂಸೆಯ ರೀತಿಗಳು:

ಹಿಂಸೆ ಕೇವಲ ಶಾರೀರಿಕವಾಗಿರಬೇಕಂತಿಲ್ಲ. ಕಾನೂನು ಲೈಂಗಿಕ ಹಿಂಸೆ, ಮೌಖಿಕ ನಿಂದನೆ, ಭಾವನಾತ್ಮಕ/ಮಾನಸಿಕ ಕಿರುಕುಳ, ವಿತ್ತೀಯ ಕಿರುಕುಳ, ಇನ್ನಿತರೇ ರೀತಿಗಳ ದೌರ್ಜನ್ಯಗಳನ್ನೂ ಸಹ ಗುರುತಿಸಿದೆ. ಉದಾಹರಣೆಗೆ, ನಿಮ್ಮ ಮೈದುನ ಪ್ರತಿದಿನ ನಿಮ್ಮನ್ನು ಮನೆಯಿಂದ ಆಚೆ ತಳ್ಳುವ ಬೆದರಿಕೆ ಹಾಕುತ್ತಿದ್ದಲ್ಲಿ, ಇದು ಭಾವನಾತ್ಮಕ ಕಿರುಕುಳ ಎಂದು ಪರಿಗಣಿಸಲಾಗುತ್ತದೆ.

ಕೌಟುಂಬಿಕ ಹಿಂಸೆಯ ಆವರ್ತನೆ:

ಹಿಂಸೆಯ ಏಕೈಕ ಕ್ರಿಯೆ/ಘಟನೆಯೂ ಕೌಟುಂಬಿಕ ಹಿಂಸೆ ಎಂದು ಪರಿಗಣಿಸಲಾಗುತ್ತದೆ. ನ್ಯಾಯಾಲಯಕ್ಕೆ ಹೋಗಲು ನೀವು ಸುದೀರ್ಘ ಕಾಲದಿಂದ ಹಿಂಸೆ ಸಹಿಸಿರಬೇಕಾಗುತ್ತದೆ ಎಂದೇನಿಲ್ಲ.

ಅಶಾರೀರಿಕ ಲೈಂಗಿಕ ನಡವಳಿಕೆ ಅಥವಾ ಲೈಂಗಿಕ ಕಿರುಕುಳ ಎಂದರೇನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಲೈಂಗಿಕ ಕಿರುಕುಳ ಎಂದರೆ ಮಗುವಿಗೆ ಇಷ್ಟವಿಲ್ಲದ ಅಶಾರೀರಿಕ ಲೈಂಗಿಕ ನಡವಳಿಕೆ, ಉದಾಹರಣೆಗೆ:

ಲೈಂಗಿಕವಾಗಿ ಮಾತನಾಡುವುದು ಮತ್ತು ಸನ್ನೆ ಮಾಡುವುದು

  • ಮಗುವಿಗೆ ಲೈಂಗಿಕವಾಗಿ ಮಾತನಾಡುವುದು, ಲೈಂಗಿಕವಾಗಿ ಸನ್ನೆ ಮಾಡುವುದು ಅಥವಾ ಲೈಂಗಿಕ ಅಂಗಗಳನ್ನು ತೋರಿಸುವುದು.
  • ಮಗುವಿಗೆ ಲೈಂಗಿಕ ವಸ್ತು ಅಥವಾ ಯಾವುದೇ ದೇಹದ ಲೈಂಗಿಕ ಭಾಗಗಳನ್ನು ತೋರಿಸುವುದು.
  • ಮಗುವಿನ ದೇಹದ ಭಾಗಗಳನ್ನು ಬೇರೆಯವರಿಗೆ ತೋರಿಸಲು ಒತ್ತಾಯಿಸುವುದು ಅಥವಾ ಕೇಳುವುದು.

ಹಿಂಬಾಲಿಸುವುದು ಮತ್ತು ಬೆದರಿಸುವುದು

  • ನೇರವಾಗಿ ಅಥವಾ ಪರೋಕ್ಷವಾಗಿ ಫೋನ್, ಎಸ್‌ಎಂಎಸ್, ಇಂಟರ್ನೆಟ್ ಅಥವಾ ಇನ್ನಾವುದೇ ರೀತಿಯಲ್ಲಿ ಮಗುವನ್ನು ಪದೇ ಪದೇ ಅಥವಾ ನಿರಂತರವಾಗಿ ವೀಕ್ಷಿಸುವುದು, ಅನುಸರಿಸುವುದು ಅಥವಾ ಸಂಪರ್ಕಿಸುವುದು.

ಯಾವುದೇ ರೀತಿಯ ಮಾಧ್ಯಮದಲ್ಲಿ ಮಗುವನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಬೆದರಿಕೆ ಹಾಕುವುದು ಅಥವಾ ಸುಳ್ಳು ಹೇಳುವುದು.

ಅಶ್ಲೀಲತೆಗೆ ಸಂಬಂಧಿತ

  • ಮಗುವಿಗೆ ಅಶ್ಲೀಲರಚನೆಗಳನ್ನು ತೋರಿಸುವುದು.
  • ಅಶ್ಲೀಲ ಕೃತ್ಯಗಳಲ್ಲಿ ಭಾಗವಹಿಸಲು ಮಗುವನ್ನು ಪ್ರಚೋದಿಸುವುದು ಅಥವಾ ಮನವೊಲಿಸುವುದು.

ಮಗುವಿಗೆ ಲೈಂಗಿಕ ಕಿರುಕುಳ ನೀಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯೊಂದಿಗೆ ದಂಡ ವಿಧಿಸಲಾಗುತ್ತದೆ.

ಸಾಮೂಹಿಕ ಅತ್ಯಾಚಾರ ಎಂದರೇನು?

ಎಚ್ಚರಿಕೆ: ಈ ವಿವರಣೆಯು ದೈಹಿಕ ಹಿಂಸೆ ಮತ್ತು ಲೈಂಗಿಕ ಹಿಂಸಾಚಾರದ ಮಾಹಿತಿಯನ್ನು ಒಳಗೊಂಡಿರುವುದರಿಂದ, ಕೆಲವು ಓದುಗರು ಇದರಿಂದ ತೊಂದರೆಯಾಗಬಹುದು.
ಸಾಮೂಹಿಕ ಅತ್ಯಾಚಾರವು ಅತ್ಯಾಚಾರ ಮಾಡುವ ಉದ್ದೇಶದಿಂದ ಅನೇಕ ಜನರು/ ಜನರ ಗುಂಪಿನಿಂದ ಮಹಿಳೆಯ ಮೇಲೆ ಮಾಡುವ ಅತ್ಯಾಚಾರವನ್ನು ಸೂಚಿಸುತ್ತದೆ. ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ, ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಅಪರಾಧಿ.6
ಸಾಮೂಹಿಕ ಅತ್ಯಾಚಾರಕ್ಕೆ7 ಇಪ್ಪತ್ತು ವರ್ಷಗಳ ಕಠಿಣ ಸೆರೆವಾಸದಿಂದ ಅಪರಾಧಿಯ ಉಳಿದ ಸಹಜ ಜೀವಿತಾವಧಿಯ ವರೆಗೆ ಜೈಲು ಶಿಕ್ಷೆ ಮತ್ತು ದಂಡವಾಗಿದೆ.
ಸಂತ್ರಸ್ತರು ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಶಿಕ್ಷೆಯು ದಂಡದ ಜೊತೆಗೆ ಅಪರಾಧಿಯ ಉಳಿದ ಜೀವಿತಾವಧಿಯ ವರೆಗಿನ ಜೀವಾವಧಿ ಶಿಕ್ಷೆಯಾಗಿದೆ ಅಥವಾ ಮರಣದಂಡನೆ.
ಇದಲ್ಲದೆ, ಸಂತ್ರಸ್ತರ ವೈದ್ಯಕೀಯ ವೆಚ್ಚಗಳು ಮತ್ತು ಪುನರ್ವಸತಿಯ ಪೂರೈಕೆಗಾಗಿ ಅಪರಾಧಿಗಳು ನ್ಯಾಯಯುತ ಮತ್ತು ಪೂರಕವಾದ ದಂಡವನ್ನು ಪಾವತಿಸಬೇಕು.ಪಡೆದ ದಂಡವನ್ನು ಸಂತ್ರಸ್ತರಿಗೆ ಪಾವತಿಸಲಾಗುತ್ತದೆ.
ಅಪರಾಧವನ್ನು ಪುನರಾವರ್ತಿಸಿದರೆ ಶಿಕ್ಷೆ
ಅಪರಾಧವನ್ನು ಪುನರಾವರ್ತಿಸಿದರೆ ಶಿಕ್ಷೆ
ಅತ್ಯಾಚಾರ/ಸಾಮೂಹಿಕ ಅತ್ಯಾಚಾರದ ಅಪರಾಧಕ್ಕಾಗಿ ಈ ಹಿಂದೆ ಯಾರಾದರೂ ತಪ್ಪಿತಸ್ಥರಾಗಿದ್ದರೆ ಮತ್ತು ನಂತರ ಅವರು ಮತ್ತೆ ಅತ್ಯಾಚಾರ/ಸಾಮೂಹಿಕ ಅತ್ಯಾಚಾರಕ್ಕಾಗಿ ತಪ್ಪಿತಸ್ಥರೆಂದು ಸಾಬೀತಾದರೆ, ಅವರಿಗೆ ಜೀವಾವಧಿ ಶಿಕ್ಷೆ (ಆ ವ್ಯಕ್ತಿಯ ನೈಸರ್ಗಿಕ ಜೀವನದ ಉಳಿದ ಅವಧಿಗೆ ಸೆರೆವಾಸ) ಅಥವಾ ಮರಣದಂಡನೆ ವಿಧಿಸಬಹುದು.8