ಪದಕೋಶ

ದೀಕ್ಷಾಸ್ನಾನ: ಒಬ್ಬ ವ್ಯಕ್ತಿಯ ಕ್ರಿಶ್ಚಿಯನ್ ಧರ್ಮಕ್ಕೆ ಸಾಂಪ್ರದಾಯಿಕವಾಗಿ ಪ್ರವೇಶವನ್ನು ಸೂಚಿಸುವ ಆಚರಣೆಗೆ ದೀಕ್ಷಾಸ್ನಾನ ಎನ್ನುತ್ತಾರೆ.

ಅಲ್ಪವಯಸ್ಕ: ಈ ಸಂದರ್ಭದಲ್ಲಿ, ಯಾರು ೨೧ರ ಕೆಳಗಿದ್ದು, ವಿಧವೆ/ವಿಧುರರಲ್ಲವೋ, ಅವರಿಗೆ ಕಾನೂನು ಅಲ್ಪಾವಯಸ್ಕರೆಂದು ಪರಿಗಣಿಸುತ್ತದೆ.

ಕಾನೂನು ಕ್ರಮ: ಆರೋಪಿಯ ವಿರುದ್ಧ, ಅವರು ತಪ್ಪಿತಸ್ಥರೋ ಅಲ್ಲವೋ ಎಂದು ಕಂಡುಹಿಡಿಯಲು ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದಕ್ಕೆ ಕಾನೂನು ಕ್ರಮ ಕೈಗೊಳ್ಳುವುದು ಎಂದರ್ಥ.

ಭಾರತೀಯ ಕ್ರಿಶ್ಚಿಯನ್: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಸ್ಥಳೀಯ ಭಾರತೀಯರ ಕ್ರಿಶ್ಚಿಯನ್ ವಂಶಸ್ಥ, ಮತ್ತು ಇಂತಹ ಮತಾಂತರಗೊಂಡ ವ್ಯಕ್ತಿಗಳಿಗೆ ಭಾರತೀಯ ಕ್ರಿಶ್ಚಿಯನ್ನರು ಎನ್ನುತ್ತಾರೆ.

ಕ್ರಿಶ್ಚಿಯನ್ ಕಾನೂನಿನಡಿ ಯಾರು ಮದುವೆಯಾಗಬಹುದು?

ದಂಪತಿಗಳಲ್ಲಿ ಯಾರಾದರೂ ಒಬ್ಬರು, ಅಥವಾ ಇಬ್ಬರೂ ಕ್ರೈಸ್ತಮತಕ್ಕೆ ಸೇರಿದವರಾಗಿದ್ದರೆ, ಆ ದಂಪತಿಗಳು ಕ್ರಿಶ್ಚಿಯನ್ ಕಾನೂನಿನಡಿ ಮದುವೆಯಾಗಬಹುದು. ಕಾನೂನಿನ ದೃಷ್ಟಿಯಲ್ಲಿ, ಯಾರು ಸಂಪೂರ್ಣವಾಗಿ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಇಟ್ಟಿದ್ದಾರೋ, ಅವರು ಕ್ರೈಸ್ತರು. ಹೀಗಿರುವಾಗ, ಅವರು ಇಗರ್ಜಿಯಲ್ಲಿ ದೀಕ್ಷಾಸ್ನಾನ ಪಡೆದಿರುವರೋ ಇಲ್ಲವೋ ಎಂಬುದು ಮುಖ್ಯವಾಗುವುದಿಲ್ಲ. ಬದಲಿಗೆ, ಅವರ ಕ್ರೈಸ್ತಮತದಲ್ಲಿನ ನಂಬಿಕೆಯ ನಿಖರತೆಯನ್ನು ಕಾನೂನು ಪರಿಶೀಲಿಸುತ್ತದೆ.

ಮದುವೆಯಾಗಲು ಕನಿಷ್ಟ ವಯಸ್ಸು:

ಮದುವೆಯಾಗಲು ಕಾನೂನು ಕನಿಷ್ಠ ವಯಸ್ಸನ್ನು ಸೂಚಿಸಿಲ್ಲವಾದರೂ, ಅಲ್ಪವಯಸ್ಕರ ಮದುವೆಗೆ ವಿಶಿಷ್ಟ ಕಾರ್ಯವಿಧಾನವನ್ನು ಉಲ್ಲೇಖಿಸಿದೆ. ಕ್ರಿಶ್ಚಿಯನ್ ಮದುವೆಯ ಸಂಬಂಧ ಪಟ್ಟಂತೆ, ೨೧ರ ಕೆಳಗಿನವರು, ಮತ್ತು ವಿಧವೆ/ವಿಧುರರಲ್ಲರವರು ಅಲ್ಪವಯಸ್ಕರು ಎಂದು ಕರೆಯಲ್ಪಡುತ್ತಾರೆ. ಆದಾಗ್ಯೂ, ಬಾಲ್ಯ ವಿವಾಹ ನಿಷೇಧ ಕಾಯಿದೆಯಡಿ, ೧೮ರ ಒಳಗಿನವರ ಎಲ್ಲ ಮದುವೆಗಳು ಅಮಾನ್ಯ ಹಾಗು ಅನೂರ್ಜಿತ (ಆ ಅಲ್ಪಾಯುವಿನ ಆಯ್ಕೆಯಂತೆ) ಎಂದು ಘೋಷಿಸಲಾಗಿದೆ. ಆ ಅಲ್ಪವಯಸ್ಕ ೧೮ರಿಂದ ೨೧ರ ನಡುವೆ ಇದ್ದು, ಅವರು ಕಾನೂನುಬದ್ಧವಾಗಿ ಮದುವೆಯಾಗಬೇಕೆಂದಲ್ಲಿ, ಅವರ ತಂದೆ, ತಾಯಿ, ಅಥವಾ ಪಾಲಕರು/ಪೋಷಕರ ಒಪ್ಪಿಗೆ ಬೇಕಾಗುತ್ತದೆ.

ಕ್ರಿಶ್ಚಿಯನ್ ಕಾನೂನಿನಡಿ ನಿಷೇಧಿಸಲಾದ ಮದುವೆಗಳು:

ಕೆಲವು ವೈಯಕ್ತಿಕ ಕಾನೂನುಗಳು ಯಾವ ವ್ಯಕ್ತಿ ಯಾರನ್ನು ಮದುವೆಯಾಗಬಹುದು ಎಂಬುದರ ಬಗ್ಗೆ ಕಟ್ಟಳೆಗಳನ್ನು ಹಾಕುತ್ತವೆ. ಉದಾಹರಣೆಗೆ, ಸಹೋದರ/ರಿಯರ ನಡುವೆ. ಕ್ರಿಶ್ಚಿಯನ್ ಕಾನೂನು ಕೂಡ ಇಂತಹ ಮದುವೆಗಳನ್ನು ಒಪ್ಪುವುದಿಲ್ಲ, ಮತ್ತು ಇವುಗಳನ್ನು ಅಮಾನ್ಯ ಎಂದು ಪರಿಗಣಿಸುತ್ತದೆ. ಆದರೆ, ವೈಯಕ್ತಿಕ ಕಾನೂನುಗಳ ಕಟ್ಟಳೆಗಳ ಹೊರಗೆ, ಯಾವುದೇ ವ್ಯಕ್ತಿಯು ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾಗಬಹುದು.

ಕ್ರಿಶ್ಚಿಯನ್ ಮದುವೆಯನ್ನು ಯಾರು ನೆರವೇರಿಸಬಹುದು?

ಕೆಳಗಿನವರು ಕಾನೂನುಬದ್ಧವಾಗಿ ಕ್ರೈಸ್ತಮತೀಯ ಮದುವೆಗಳನ್ನು ನೆರವೇರಿಸಬಹುದು:

  • ಚರ್ಚಿನಿಂದ ಪಾದ್ರಿ/ ಧಾರ್ಮ ಸಚಿವರಾಗುವ ದೀಕ್ಷೆ ಪಡೆದವರು
  • ಸ್ಕಾಟ್ಲೆಂಡಿನ ಇಗರ್ಜಿಯ ಪಾದ್ರಿಗಳು
  • ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ಮದುವೆ ನೆರವೇರಿಸಲು ಪರವಾನಗಿ ಪಡೆದ ಧರ್ಮ ಸಚಿವರು
  • ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ನೇಮಕಗೊಂಡ ವಿವಾಹ ಕುಲಸಚಿವರು. ಈ ಕುಲಸಚಿವರ ಉಪಸ್ಥಿತಿಯಲ್ಲಿ, ಅಥವಾ ಅವರ ನಾಯಕತ್ವದಲ್ಲಿ ಮದುವೆ ನೆರವೇರಬೇಕು.
  • ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ವಿವಾಹ ಪ್ರಮಾಣಪತ್ರ ಅನುದಾನಿಸುವ ಪರವಾನಗಿ ಪಡೆದ ಯಾವುದೇ ವ್ಯಕ್ತಿ.

ಸ್ಕಾಟ್ಲೆಂಡಿನ ಚರ್ಚಿನ ಧರ್ಮ ಸಚಿವರು, ಅಥವಾ ಪಾದ್ರಿಯವರಿಂದ ನೆರವೇರಿಸಲಾಗುವ ಎಲ್ಲ ಮದುವೆಗಳು, ಆ ಪಂಗಡದ ಚರ್ಚಿನ ನಿಯಮಗಳು, ವಿಧಿಗಳು, ಸಮಾರಂಭಗಳು, ಮತ್ತು ಸಂಪ್ರದಾಯಗಳ ಅನುಸಾರ ನಡೆಯಬೇಕಾಗುತ್ತವೆ. ಆದರೆ, ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ಪರವಾನಗಿ ಪಡೆದ ಧಾರ್ಮ ಸಚಿವರು, ವಿವಾಹ ಪ್ರಮಾಣಪತ್ರ ಅನುದಾನಿಸುವ ಪರವಾನಗಿ ಪಡೆದ ಯಾವುದೇ ವ್ಯಕ್ತಿ, ಅಥವಾ ಈ ಕಾಯಿದೆಯಡಿ ನೇಮಕಗೊಂಡ ವಿವಾಹ ಕುಲಸಚಿವರು ಮದುವೆ ನೆರವೇರಿಸುವುದಿದ್ದಲ್ಲಿ, ಈ ಕಾಯಿದೆಯಲ್ಲಿ ಉಲ್ಲೇಖಿಸಿರುವ ಕಾರ್ಯವಿಧಾನಾನುಸಾರ ಮದುವೆಯನ್ನು ನೆರವೇರಿಸಬೇಕಾಗುತ್ತದೆ. ಈ ಕಾರ್ಯವಿಧಾನಗಳು ಯಾರು ಮದುವೆಯನ್ನು ನೆರವೇರಿಸುತ್ತಿದ್ದಾರೆ ಎಂಬುದರ ಮೇಲೆ ಬದಲಾಗುವುದುಂಟು.

ಅಕ್ರಮವಾದ ಕ್ರಿಶ್ಚಿಯನ್ ಮದುವೆಗಳು ಯಾವುವು?

ಅಕ್ರಮ ಮದುವೆಗಳು ಕೆಲವು ಷರತ್ತುಗಳನ್ನು ಪಾಲಿಸದೆ ನಡೆದಿರುತ್ತವೆ. ಸಾಮಾನ್ಯವಾಗಿ, ಇಂತಹ ಮದುವೆಗಳು, ಶುರುವಿನಿಂದ ಅಮಾನ್ಯವೆಂದು ಪರಿಗಣಿಸಲಾಗುತ್ತವೆ. ಆದರೆ, ಕಾನೂನಿನ ಪ್ರಕಾರ ಮದುವೆಗಳಲ್ಲಿ ಅಕ್ರಮಗಳಿದ್ದಲ್ಲಿ ಅವುಗಳನ್ನು ಸುಧಾರಿಸಬಹುದಾಗಿದೆಯೋ ವಿನಃ, ಇಂತಹ ಮದುವೆಗಳು ಅಮಾನ್ಯವಾಗುವುದಿಲ್ಲ. ಮದುವೆಗಳು ಅಕ್ರಮವಾಗುವ ಕೆಲವು ಕಾರಣಗಳನ್ನು ಕೆಳಗೆ ಕೊಡಲಾಗಿವೆ. ದೋಷಗಳು ಇವುಗಳಲ್ಲಿ ಇರಬಹುದು:
೧. ಮದುವೆಯಾಗ ಬಯಸುವ ವ್ಯಕ್ತಿಗಳ ನಿವಾಸ ಸ್ಥಾನದ ಕುರಿತ ಹೇಳಿಕೆಯಲ್ಲಿ
೨. ಕಾನೂನಿನ ಪ್ರಕಾರ ಮದುವೆಗೆ ಯಾರ ಒಪ್ಪಿಗೆ ಬೇಕಾಗಿದೆಯೋ, ಆ ವ್ಯಕ್ತಿಯು ಒಪ್ಪಿಗೆ ಕೊಟ್ಟ ರೀತಿಯಲ್ಲಿ
೩. ಮದುವೆಯ ಸೂಚನೆಯಲ್ಲಿ
೪. ಮದುವೆಯ ಪ್ರಮಾಣಪತ್ರದಲ್ಲಿ
೫. ಮಾಡುವೆ ನಡೆದ ಸ್ಥಳ ಮತ್ತು ಸಮಯದಲ್ಲಿ
೬. ಮದುವೆಯ ನೋಂದಣಿಯಲ್ಲಿ

ಕ್ರಿಶ್ಚಿಯನ್ ಕಾನೂನಿನ ಪ್ರಕಾರ ಮದುವೆಯಾಗುವ ಬೇರೆ-ಬೇರೆ ಕಾರ್ಯವಿಧಾನಗಳಾವುವು?

ವಿವಾಹ ಕಾರ್ಯವಿಧಾನವು ಯಾರು ಸಮಾರಂಭವನ್ನು ನೆರವೇರಿಸುತ್ತಿದ್ದಾರೆ ಎಂಬುದರ ಮೇಲೆ ನಿರ್ಭರಿಸುತ್ತದೆ. ಮದುವೆಯು ಯಾವುದೇ ಒಂದು ಪಂಗಡದ ಚರ್ಚಿನ ನಿಯಮಗಳನುಸಾರ ನಡೆಯುತ್ತಿದ್ದರೆ, ಕಾನೂನು ವಿವಾಹ ಕಾರ್ಯವಿಧಾನಗಳ ವಿವರಗಳನ್ನು ನೀಡುವುದಿಲ್ಲ. ಆದರೆ, ಕ್ರಿಶ್ಚಿಯನ್ ವಿವಾಹ ಕಾನೂನಿನಡಿ ನೇಮಕಗೊಂಡ ವಿವಾಹ ಕುಲಸಚಿವರು, ಅಥವಾ ಇನ್ನಿತರ ಪ್ರಮಾಣೀಕೃತ ಧರ್ಮ ಸಚಿವರು ಮದುವೆಯನ್ನು ನೆರವೇರಿಸುತ್ತಿದ್ದಲ್ಲಿ, ಆ ಕಾಯಿದೆಯಡಿಯ ಕಾರ್ಯವಿಧಾನವನ್ನು ಪಾಲಿಸಬೇಕಾಗುತ್ತದೆ.

ಪರವಾನಗಿ ಪಡೆದ ಧರ್ಮ ಸಚಿವರು ನೆರವೇರಿಸುವ ಮದುವೆಯ ಕಾರ್ಯವಿಧಾನವೇನು

ಪರವಾನಗಿ ಪಡೆದ ಧರ್ಮ ಸಚಿವರು ನೆರವೇರಿಸುವ ಕ್ರಿಶ್ಚಿಯನ್ ವಿವಾಹವನ್ನು ಕೆಳಗಿನ ನಾಲ್ಕು ಹಂತಗಳಲ್ಲಿ ವಿಭಜಿಸಲಾಗಿದೆ:

ಹಂತ ೧: ಪೂರ್ವಭಾವಿ ಸೂಚನೆಯನ್ನು ಹೊರಡಿಸುವುದು:
ಪರವಾನಗಿ ಪಡೆದ ಧರ್ಮ ಸಚಿವರು ವಿವಾಹವನ್ನು ನೆರವೇರಿಸಬೇಕು ಎಂದಲ್ಲಿ, ದಂಪತಿಗಳಲ್ಲಿ ಒಬ್ಬರು ಖುದ್ದಾಗಿ ಆ ಸಚಿವರಿಗೆ ವಿವಾಹ ಉದ್ದೇಶದ ಸೂಚನೆ ನೀಡಬೇಕು. ಆ ಸೂಚನೆಯಲ್ಲಿ ಕೆಳಕಂಡ ಮಾಹಿತಿ ಇರಬೇಕು:
೧. ದಂಪತಿಗಳಿಬ್ಬರ ಹೆಸರು, ಅಡ್ಡ ಹೆಸರು, ವೃತ್ತಿ, ಅಥವಾ ಆರ್ಥಿಕ ಸ್ಥಿತಿ
೨. ಇಬ್ಬರ ಪ್ರಸ್ತುತ ವಿಳಾಸ
೩. ಈ ವಿಳಾಸದಲ್ಲಿ ವಾಸ ಮಾಡುತ್ತಿರುವ ಅವಧಿ. ಒಂದು ತಿಂಗಳಿಗಿಂತ ಹೆಚ್ಚು ಈ ವಿಳಾಸದಲ್ಲಿ ವಾಸಿಸಿದ್ದರೆ, ಅದನ್ನು ಸೂಚನೆಯಲ್ಲಿ ತಿಳಿಸಬೇಕಾಗುತ್ತದೆ.
೪. ಮದುವೆಯ ಸ್ಥಳ – ಚರ್ಚು ಅಥವಾ ವೈಯಕ್ತಿಕ ನಿವಾಸ

ಕೆಳಗೆ ಸೂಚನೆಯ ನಮೂನೆ ಕೊಡಲಾಗಿದೆ:

ಇದಾದಮೇಲೆ ಧರ್ಮ ಸಚಿವರು ಈ ಸೂಚನೆಯನ್ನು ಚರ್ಚಿನ ಆವರಣದ, ಎಲ್ಲರಿಗೂ ಕಾಣುವಂತಹ/ಸಾರ್ವಜನಿಕ ಭಾಗದಲ್ಲಿ ಲಗತ್ತಿಸುತ್ತಾರೆ. ಒಂದು ವೇಳೆ ಮದುವೆಯು ವೈಯಕ್ತಿಕ ನಿವಾಸದಲ್ಲಿ ಜರುಗಲಿದ್ದರೆ, ಸಂಬಂಧಪಟ್ಟ ಜಿಲ್ಲಾ ವಿವಾಹ ಕುಲಪತಿಗಳಿಗೆ ಆ ಸೂಚನೆಯನ್ನು ಕಳುಹಿಸಲಾಗುತ್ತದೆ, ಹಾಗು ವಿವಾಹ ಕುಲಪತಿಗಳ ಕಚೇರಿಯ ಆವರಣದಲ್ಲಿ, ಎಲ್ಲರಿಗೂ ಕಾಣುವಂತಹ ಸಾರ್ವಜನಿಕ ಸ್ಥಳದಲ್ಲಿ ಆ ಸೂಚನೆಯನ್ನು ಪ್ರದರ್ಶಿಸಲಾಗುತ್ತದೆ. ಒಂದು ವೇಳೆ ಧರ್ಮ ಸಚಿವರು ಮದುವೆಯನ್ನು ನೆರವೇರಿಸಲು ನಿರಾಕರಿಸಿದರೆ, ಬೇರೋರ್ವ ಸಚಿವರಿಗೆ ವಿವಾಹ ಸೂಚನೆಯನ್ನು ಕಳಿಸಲಾಗುತ್ತದೆ, ಅಥವಾ, ವಿವಾಹ ಆಗಬಯಸುವ ದಂಪತಿಗಳಿಗೆ ಮರಳಿ ಕಳಿಸಲಾಗುತ್ತದೆ.

ಹಂತ ೨: ಸೂಚನಾ ರಶೀದಿ ಪಡೆದ ಪ್ರಮಾಣಪತ್ರ ನೀಡುವುದು:
ವಿವಾಹ ಸೂಚನೆ ಕೊಟ್ಟು ಕನಿಷ್ಟ ೪ ದಿನಗಳ ಬಳಿಕ, ಮದುವೆಯಾಗ ಬಯಸುವ ದಂಪತಿಗಳಲ್ಲಿ ಒಬ್ಬರು, ವಿವಾಹದಲ್ಲಿ ಯಾವ ರೀತಿಯ ಕಾನೂನಾತ್ಮಕ ಸಮಸ್ಯೆಗಳೂ ಇಲ್ಲವೆಂದು, ಧರ್ಮ ಸಚಿವರಲ್ಲಿ ಧೃಢೀಕರಣ ಪತ್ರ ಸಲ್ಲಿಸಬೇಕು. ದಂಪತಿಗಳಲ್ಲಿ ಒಬ್ಬರು ಅಲ್ಪವಯಸ್ಕರಾಗಿದ್ದರೆ, ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡಾಗಿದೆ ಎಂದು ಸಚಿವರಲ್ಲಿ ಧೃಢೀಕರಣ ಪತ್ರ ಸಲ್ಲಿಸಬೇಕು.

ಹಂತ ೩: ಮದುವೆಯ ಆಚರಣೆ:
ಇಂತಹ ಧೃಢೀಕರಣ ಪತ್ರಗಳನ್ನು ಸಲ್ಲಿಸಿದ ಬಳಿಕ, ಧರ್ಮ ಸಚಿವರು ಒಂದು ಪ್ರಮಾಣ ಪತ್ರವನ್ನು ನೀಡುತ್ತಾರೆ. ಇದಾದ ಎರಡು ತಿಂಗಳೊಳಗೆ ಸಚಿವರು ದಂಪತಿಗಳ ಮದುವೆ ನೆರವೇರಿಸಬೇಕು. ಧರ್ಮ ಸಚಿವರಲ್ಲದೆ, ಇಬ್ಬರು ಸಾಕ್ಷಿದಾರರು ಮಾಡುವೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು. ಒಂದು ವೇಳೆ ಪ್ರಮಾಣ ಪತ್ರ ಪಡೆದು ಎರಡು ತಿಂಗಳುಗಳಾಗಿಹೋಗಿದ್ದರೆ, ಈ ಸಂಪೂರ್ಣ ಪ್ರಕ್ರಿಯೆ ಮೊದಲಿನಿಂದ ಪುನಃ ಆರಂಭಿಸಬೇಕಾಗುತ್ತದೆ.

ಹಂತ ೪: ಮದುವೆಯ ನೋಂದಣಿ:
ಮದುವೆ ನಡೆದ ಮೇಲೆ ಅದರ ವಿವರಗಳನ್ನು ಧರ್ಮ ಸಚಿವರು ದಾಖಲಾ ಪುಸ್ತಕದಲ್ಲಿ ನಮೂದಿಸಬೇಕಾಗುತ್ತದೆ. ಈ ದಾಖಲೆಗೆ ಆ ಸಚಿವರು, ನವ ದಂಪತಿಗಳು, ಹಾಗು ಮದುವೆ ಸಮಾರಂಭದಲ್ಲಿ ಹಾಜರಿರುವ ಇಬ್ಬರು ಸಾಕ್ಷಿದಾರರು ಸಹಿ ಹಾಕಬೇಕು.
ವಿವಾಹ ದಾಖಲಾ ಪುಸ್ತಕದಲ್ಲಿನ ಈ ನೋಂದಣಿಯ ಪ್ರಮಾಣೀಕೃತ ಪ್ರತಿಯ ಮೇಲೆ, ಯಾವ ಅಧಿಕಾರಿಗಳ ಅಧೀನದಲ್ಲಿ ಈ ದಾಖಲಾ ಪುಸ್ತಕ ಇರುತ್ತದೆಯೋ, ಅವರ ಸಹಿ ಬೇಕಾಗುತ್ತದೆ. ಆ ಸಹಿಯಾದ ಬಳಿಕ, ದಂಪತಿಗಳು ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ ಎಂಬ ಪುರಾವೆಯಾಗುತ್ತದೆ ಈ ಪ್ರಮಾಣೀಕೃತ ಪತ್ರ.

ವಿವಾಹ ಕುಲಸಚಿವರಿಂದ ಮದುವೆ ನೆರವೇರಿಸುವ ಕಾರ್ಯವಿಧಾನವೇನು?

ವಿವಾಹ ಕುಲಸಚಿವರಿಂದ ನೆರವೇರುವ ಮದುವೆ ೪ ಹಂತಗಳಲ್ಲಿ ನಡೆಯುತ್ತದೆ:

ಹಂತ ೧: ಪೂರ್ವಭಾವಿ ಸೂಚನೆಯನ್ನು ಹೊರಡಿಸುವುದು:
ದಂಪತಿಗಳಿಬ್ಬರು ವಿವಾಹ ಕುಲಸಚಿವರ ನೇತೃತ್ವದಲ್ಲಿ ಮದುವೆಯಾಗಬೇಕೆಂದರೆ, ಅವರಲ್ಲಿ ಒಬ್ಬರು ಖುದ್ದಾಗಿ ಅವರು ವಾಸಿಸುವ ಜಿಲ್ಲೆಯ ವಿವಾಹ ಕುಲಸಚಿವರಿಗೆ ವಿವಾಹ ಉದ್ದೇಶದ ಸೂಚನೆ ನೀಡಬೇಕು. ದಂಪತಿಗಳಿಬ್ಬರೂ ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸ ಮಾಡುತ್ತಿದ್ದರೆ, ಆ ಎರಡೂ ಜಿಲ್ಲೆಗಳ ಕುಲಸಚಿವರಿಗೆ ಸೂಚನೆಯನ್ನು ನೀಡಬೇಕಾಗುತ್ತದೆ. ಈ ಸೂಚನೆಯು ನಿಗದಿತ ಸ್ವರೂಪದಲ್ಲಿದ್ದು, ಅದರಲ್ಲಿ ವಿವಾಹದ ಉದ್ದೇಶ ತಿಳಿಸಲಾಗಿರಬೇಕಾಗುತ್ತದೆ, ಹಾಗು ಕೆಳಗಿನ ವಿವರಗಳನ್ನು ಹೊಂದಿರಬೇಕಾಗುತ್ತದೆ:
೧. ದಂಪತಿಗಳ ಹೆಸರು, ಅಡ್ಡ ಹೆಸರು, ಹಾಗು ವೃತ್ತಿ
೨. ಅವರ ಪ್ರಸ್ತುತ ವಿಳಾಸ
೩. ಈ ವಿಳಾಸದಲ್ಲಿ ವಾಸಿಸಿದ್ದ ಸಮಯಾವಧಿ. ಒಂದು ತಿಂಗಳಿಗಿಂತ ಹೆಚ್ಚು ಈ ವಿಳಾಸದಲ್ಲಿ ವಾಸಿಸಿದ್ದರೆ, ಅದನ್ನು ಸೂಚನೆಯಲ್ಲಿ ತಿಳಿಸಬೇಕಾಗುತ್ತದೆ.
೪. ಮದುವೆ ನಡೆಯುವ ಸ್ಥಳ.


ಕೆಳಗೆ ಸೂಚನೆಯ ನಮೂನೆ ನೀಡಲಾಗಿದೆ:

ಈ ಸೂಚನೆಯನ್ನು ವಿವಾಹ ಕುಲಸಚಿವರು ತಮ್ಮ ಕಚೇರಿಯಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಲಗತ್ತಿಸುತ್ತಾರೆ, ಮತ್ತು ವಿವಾಹ ಸೂಚನಾ ಪುಸ್ತಕದಲ್ಲಿ ನೋಂದಾಯಿಸುತ್ತಾರೆ.

ಹಂತ ೨: ಸೂಚನಾ ರಶೀದಿ ಪಡೆದ ಪ್ರಮಾಣಪತ್ರ ನೀಡುವುದು:
ಕುಲಸಚಿವರಿಗೆ ವಿವಾಹ ಸೂಚನೆ ಕೊಟ್ಟು ಕನಿಷ್ಟ ೪ ದಿನಗಳ ಬಳಿಕ, ಮದುವೆಯಾಗ ಬಯಸುವ ದಂಪತಿಗಳಲ್ಲಿ ಒಬ್ಬರು, ವಿವಾಹದಲ್ಲಿ ಯಾವ ರೀತಿಯ ಕಾನೂನಾತ್ಮಕ ಸಮಸ್ಯೆಗಳೂ ಇಲ್ಲ, ಮತ್ತು ಅವರು ವಿವಾಹ ಕುಲಸಚಿವರ ಅಧಿಕಾರದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯಲ್ಲಿಯೇ ವಾಸಿಸುತ್ತಿದ್ದಾರೆ ಎಂದು ಕುಲಸಚಿವರಿಗೆ ಪ್ರಮಾಣ ವಚನ ನೀಡಬೇಕು. ದಂಪತಿಗಳಲ್ಲಿ ಒಬ್ಬರು ಅಲ್ಪವಯಸ್ಕರಾಗಿದ್ದರೆ, ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡಾಗಿದೆ ಎಂದು ಪ್ರಮಾಣ ವಚನ ನೀಡಬೇಕು.

ಇಂತಹ ಧೃಢೀಕರಣವಾದ ಮೇಲೆ ಕುಲಸಚಿವರು ನಿಗದಿತ ಸ್ವರೂಪದಲ್ಲಿ ದಂಪತಿಗಳಿಗೆ ಪ್ರಮಾಣ ಪಾತ್ರ ನೀಡುತ್ತಾರೆ. ಹೀಗೆ ಪ್ರಮಾಣ ಪಾತ್ರ ಪಡೆದು ಎರಡು ತಿಂಗಳುಗಳ ಒಳಗೆ ಆ ದಂಪತಿಗಳು ಕುಲಸಚಿವರ ಉಪಸ್ಥಿತಿಯಲ್ಲಿ, ಅಥವಾ ಇನ್ನೋರ್ವ ವಿವಾಹ ಕುಲಸಚಿವರ ನೇತೃತ್ವದಲ್ಲಿ ಮದುವೆಯಾಗಬಹುದು. ಕೆಳಗೆ ಸೂಚನಾ ರಶೀದಿ ಪಡೆದ ಪ್ರಮಾಣ ಪಾತ್ರದ ನಮೂನೆ ನೋಡಿ:

ಹಂತ ೩: ಮದುವೆಯ ಆಚರಣೆ:
ಮೇಲೆ ಕಂಡ ಪ್ರಮಾಣ ಪತ್ರವನ್ನು ಮದುವೆಯ ಸಮಯದಲ್ಲಿ ಕುಲಸಚಿವರಿಗೆ ಒಪ್ಪಿಸಬೇಕಾಗುತ್ತದೆ. ಮದುವೆಯನ್ನು ಖುದ್ದಾಗಿ ವಿವಾಹ ಕುಲಸಚಿವರೇ, ಅಥವಾ ಅವರಿಂದ ನೇಮಕಗೊಂಡ ಅಧಿಕೃತ ವ್ಯಕ್ತಿ ನೆರವೇರಿಸುತ್ತಾರೆ. ಕುಲಸಚಿವರಲ್ಲದೆ, ಇಬ್ಬರು ಸಾಕ್ಷಿದಾರರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಒಂದು ವೇಳೆ ಪ್ರಮಾಣ ಪತ್ರ ಪಡೆದು ಎರಡು ತಿಂಗಳುಗಳಾಗಿಹೋಗಿದ್ದರೆ, ಈ ಸಂಪೂರ್ಣ ಪ್ರಕ್ರಿಯೆ ಹೊಸ ಸೂಚನಾ ಪತ್ರದಿಂದ ಪುನಃ ಆರಂಭಿಸಬೇಕಾಗುತ್ತದೆ.

ಹಂತ ೪: ಮದುವೆಯ ನೋಂದಣಿ:
ಮದುವೆ ನಡೆದ ಮೇಲೆ ಅದರ ವಿವರಗಳನ್ನು ವಿವಾಹ ಕುಲಸಚಿವರು ದಾಖಲಾ ಪುಸ್ತಕದಲ್ಲಿ, ನಿಗದಿತ ಸ್ವರೂಪದಲ್ಲಿ ನಮೂದಿಸಬೇಕಾಗುತ್ತದೆ. ಈ ದಾಖಲೆಗೆ ಆ ಕುಲಸಚಿವರು, ಮದುವೆ ನೆರವೇರಿಸಿದ ಅಧಿಕೃತ ವ್ಯಕ್ತಿ (ಕುಲಸಚಿವರಲ್ಲದೆ ಇನ್ನೋರ್ವ ವ್ಯಕ್ತಿ ಮದುವೆ ನೆರವೇರಿಸಿದ್ದಲ್ಲಿ) ನವ ದಂಪತಿಗಳು, ಹಾಗು ಮದುವೆ ಸಮಾರಂಭದಲ್ಲಿ ಹಾಜರಿರುವ ಇಬ್ಬರು ಸಾಕ್ಷಿದಾರರು ಸಹಿ ಹಾಕಬೇಕು.

ವಿವಾಹ ದಾಖಲಾ ಪುಸ್ತಕದಲ್ಲಿನ ಈ ನೋಂದಣಿಯ ಪ್ರಮಾಣೀಕೃತ ಪ್ರತಿಯ ಮೇಲೆ, ಯಾವ ಅಧಿಕಾರಿಗಳ ಅಧೀನದಲ್ಲಿ ಈ ದಾಖಲಾ ಪುಸ್ತಕ ಇರುತ್ತದೆಯೋ, ಅವರ ಸಹಿ ಬೇಕಾಗುತ್ತದೆ. ಆ ಸಹಿಯಾದ ಬಳಿಕ, ದಂಪತಿಗಳು ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ ಎಂಬ ಪುರಾವೆಯಾಗುತ್ತದೆ ಈ ಪ್ರಮಾಣೀಕೃತ ಪತ್ರ.ವಿವಾಹ ಕುಲಸಚಿವರಿಗೆ ನಿಗದಿತ ಶುಲ್ಕವನ್ನು ನೀಡಿ, ಅವರ ಅಧೀನದಲ್ಲಿ ಇರುವ ವಿವಾಹ ದಾಖಲಾ ಪುಸ್ತಕವನ್ನು ಯಾವಾಗಾದರೂ ಪರಿಶೀಲಿಸಬಹುದು.

ವಿವಾಹ ಪ್ರಮಾಣಪತ್ರಗಳನ್ನು ನೀಡುವ ಅಧಿಕೃತ ವ್ಯಕ್ತಿಯಿಂದ ಮದುವೆ ನೆರವೇರಿಸುವ ಕಾರ್ಯವಿಧಾನ:

ಕಾನೂನಿನ ಪ್ರಕಾರ, ವಿವಾಹ ಪ್ರಮಾಣಪತ್ರವನ್ನು ನೀಡುವ ಅಧಿಕಾರವುಳ್ಳ ವ್ಯಕ್ತಿಯು ರೋಮನ್ ಕ್ಯಾಥೋಲಿಕ್ ಧರ್ಮದವರಲ್ಲದ ಭಾರತೀಯ ಕ್ರಿಶ್ಚಿಯನ್ನರ ಮದುವೆಯನ್ನು ಮಾತ್ರ ಪ್ರಮಾಣೀಕರಿಸಬಹುದು. ಈ ನಿಬಂಧನೆಗಳ ಪ್ರಕಾರ, ಯಾವುದೇ ಇಬ್ಬರು ಭಾರತೀಯ ಕ್ರಿಶ್ಚಿಯನ್ನರು, ಪೂರ್ವಾಭಾವಿ ಸೂಚನೆಯನ್ನು ನೀಡದೆ, ಕೆಳಗಿನ ಷರತ್ತುಗಳನ್ನು ಪೂರೈಸಿ ಮದುವೆಯಾಗಬಹುದು:
೧. ವರ ೨೧ರ ಮೇಲಿದ್ದು, ವಧು ೧೮ರ ಮೇಲಿರಬೇಕು.
೨. ಇವರಿಬ್ಬರಿಗೂ ಜೀವಂತ ಗಂಡ/ಹೆಂಡತಿ ಇರಬಾರದು.
೩. ಕಾನೂನು ನಿಗದಿಪಡಿಸಿದ ಪ್ರಮಾಣವಚನವನ್ನು ಇವರಿಬ್ಬರೂ, ವಿವಾಹ ಪ್ರಮಾಣಪತ್ರಗಳನ್ನು ನೀಡುವ ಅಧಿಕೃತ ವ್ಯಕ್ತಿ ಹಾಗು ಇಬ್ಬರು ಸಾಕ್ಷಿದಾರರ ಸಮಕ್ಷಮ ಸ್ವೀಕರಿಸಬೇಕು.

ಒಂದು ಪಕ್ಷದಿಂದ ಅರ್ಜಿಯನ್ನು ಸ್ವೀಕರಿಸಿದ್ದಲ್ಲಿ, ಪರವನಾಗಿ ಪಡೆದ ವ್ಯಕ್ತಿಯು ಮೇಲಿನ ಷರತ್ತುಗಳು ಈಡೇರಿವೆಯೋ ಇಲ್ಲವೋ ಎಂದು ಪರಿಶೀಲಿಸಿ, ಮದುವೆಯಾಗಲು ಪ್ರಮಾಣಪತ್ರವನ್ನು ನೀಡುತ್ತಾರೆ. ಇಂತಹ ಪ್ರಮಾಣಪತ್ರವನ್ನು ಪಡೆಯಲು ನೀಡಬೇಕಾದ ಶುಲ್ಕ ೨೫ ಪೈಸೆಯಾಗಿದೆ. ಈ ಪ್ರಮಾಣಪತ್ರವು ಮದುವೆಯ ನಿರ್ಣಾಯಕ ಪುರಾವೆಯಾಗಿದೆ.

ಭಾರತದಾದ್ಯಂತವೂ ಕ್ರಿಶ್ಚಿಯನ್ ಮದುವೆಯ ಕಾರ್ಯವಿಧಾನವು ಒಂದೇ ತರಹವಿದೆಯೇ?

ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆ ಕ್ರಿಶ್ಚಿಯನ್ ಮದುವೆಗಳಿಗೆ ಸಂಬಂದ್ಧಿಸಿದ್ದು, ಟ್ರಾವಂಕೋರ್-ಕೊಚಿನ್ ಮತ್ತು ಮಣಿಪುರ್ ರಾಜ್ಯಗಳನ್ನು ಹೊರತುಪಡಿಸಿ ಬೇರೆಲ್ಲ ಕಡೆ ಅನ್ವಯವಾಗುತ್ತದೆ.
೧. ಮಣಿಪುರದಲ್ಲಿ ಕ್ರಿಶ್ಚಿಯನ್ ಮದುವೆಗಳು ಸಾಂಪ್ರದಾಯಿಕ ನಿಯಮಗಳು ಮತ್ತು ವೈಯಕ್ತಿಕ ಕಾನೂನುಗಳ ಆಧಾರದ ಮೇಲೆ ನಡೆಯುತ್ತವೆ.
೨. ಟ್ರಾವಂಕೋರ್-ಕೊಚಿನ್ ಪ್ರಸ್ತುತದಲ್ಲಿ ಕೇರಳ ಮತ್ತು ತಮಿಳು ನಾಡು ರಾಜ್ಯಗಳ ಭಾಗವಾಗಿದೆ. ಕೇರಳದ ಕೊಚಿನ್ ಪ್ರದೇಶದಲ್ಲಿ ಕ್ರಿಶ್ಚಿಯನ್ ಮದುವೆಗಳು ಕೊಚಿನ್ ಕ್ರಿಶ್ಚಿಯನ್ ನಾಗರಿಕ ವಿವಾಹ ಕಾಯಿದೆ, ೧೯೨೦ರ ಪ್ರಕಾರ ನಡೆಯುತ್ತವೆ. ಮಾಜಿ ರಾಜ್ಯದ ಟ್ರಾವಂಕೋರ್ ಪ್ರದೇಶ ಕೇರಳ ಹಾಗು ತಮಿಳು ನಾಡಿನ ದಕ್ಷಿಣ ಭಾಗದಲ್ಲಿ ವಿಸ್ತಾರಗೊಂಡಿದೆ. ಹೀಗಿರುವಾಗ, ತಮಿಳು ನಾಡು ಭಾರತೀಯ ಕ್ರಿಶ್ಚಿಯನ್ ವಿವಾಹ ಕಾನೂನನ್ನು ಅದರ ಟ್ರಾವಂಕೋರ್ ಭಾಗವನ್ನು ಸೇರಿಸಿ ಇಡೀ ರಾಜ್ಯಕ್ಕೆ ಅನ್ವಯಿಸಿದರೆ, ಕೇರಳ ಹಾಗೆ ಮಾಡಿಲ್ಲ. ಆದ್ದರಿಂದ ಕೇರಳದ ದಕ್ಷಿಣ ಭಾಗದಲ್ಲಿ (ಮಾಜಿ ಟ್ರಾವಂಕೋರ್) ಕ್ರಿಶ್ಚಿಯನ್ ಮದುವೆಗಳು ಬೇರೆ-ಬೇರೆ ಪಂಗಡಗಳ ಚರ್ಚುಗಳ ಆಂತರಿಕ ಕಾನೂನುಗಳನ್ನಾಧರಿಸಿ ನಡೆಯುತ್ತವೆ.

ಕ್ರಿಶ್ಚಿಯನ್ ಕಾನೂನಿನಡಿ ಅಲ್ಪವಯಸ್ಕರು ಹೇಗೆ ಮದುವೆಯಾಗಬಹುದು?

ಕ್ರಿಶ್ಚಿಯನ್ ಕಾನೂನಿನ ಪ್ರಕಾರ ಯಾರು ೨೧ರ ಕೆಳಗಿದ್ದು, ವಿಧವೆ/ವಿಧುರರಲ್ಲವೋ, ಅವರು ಅಲ್ಪವಯಸ್ಕರು. ಒಂದು ವೇಳೆ ಮದುವೆ ಆಗಲಿಚ್ಛಿಸುವ ಒಬ್ಬರು ಅಲ್ಪವಯಸ್ಕರಿದ್ದರೆ, ಅವರ ತಂದೆಯ ಅನುಮತಿ ಬೇಕಾಗುತ್ತದೆ. ತಂದೆ ಜೀವಂತವಿಲ್ಲದಿದ್ದರೆ, ರಕ್ಷಕರ, ಮತ್ತು ರಕ್ಷಕರಿಲ್ಲದಿದ್ದರೆ ತಾಯಿಯ ಅನುಮತಿ ಬೇಕಾಗುತ್ತದೆ. ಒಂದು ವೇಳೆ ಇವರ್ಯಾರೂ ಮದುವೆಯ ಸಮಯದಲ್ಲಿ ಭಾರತದಲ್ಲಿ ವಾಸಮಾಡುತ್ತಿಲ್ಲವಾದರೆ, ಅವರ ಅನುಮತಿ ಬೇಕಾಗುವುದಿಲ್ಲ.

ಆದಾಗ್ಯೂ, ಬಾಲ್ಯ ವಿವಾಹ ನಿಷೇಧ ಕಾಯಿದೆಯ ಪ್ರಕಾರ ಎಲ್ಲ ಮಕ್ಕಳ (೧೮ರ ಕೆಳಗಿನವರು) ಮದುವೆಗಳು, ಅವರ ಆಯ್ಕೆಯಂತೆ ಅನೂರ್ಜಿತವಾಗಿವೆ. ಕಾನೂನಿನ ಪ್ರಕಾರ, ಮಕ್ಕಳು ವಯಸ್ಕರಾದ ಎರಡು ವರ್ಷಗಳ ಒಳಗೆ ಮದುವೆಯನ್ನು ರದ್ದುಗೊಳಿಸಲು ಕೋರ್ಟಿಗೆ ಮನವಿ ಸಲ್ಲಿಸಬಹುದು.

ಪರವಾನಗಿ ಪಡೆದ ಧರ್ಮ ಸಚಿವರಿಂದ, ಅಥವಾ ಅವರ ಉಪಸ್ಥಿತಿಯಲ್ಲಿ ನೆರವೇರಿಸುವ ಮದುವೆಯ ಕಾರ್ಯವಿಧಾನ:
ಅಲ್ಪವಯಸ್ಕರು ಕಾನೂನಿನಡಿ ಮದುವೆಯಾಗಬೇಕೆಂದಲ್ಲಿ, ಧರ್ಮ ಸಚಿವರು ಕೆಳಗಿನ ಕಾರ್ಯವಿಧಾನ ಅನುಸರಿಸುತ್ತಾರೆ:
೧. ಧರ್ಮ ಸಚಿವರು ಅಲ್ಪವಯಸ್ಕರಿಂದ ಮದುವೆಯಾಗಬಯಸುವ ಸೂಚನೆ ಪಡೆದಲ್ಲಿ ಅದನ್ನು ಜಿಲ್ಲಾ ವಿವಾಹ ಕುಲಸಚಿವರಿಗೆ ಕಳಿಸಬೇಕು.
೨. ಇದಾದ ಮೇಲೆ, ಆ ಸೂಚನೆಯನ್ನು ಆ ಜಿಲ್ಲೆಯ ಇನ್ನೆಲ್ಲ ವಿವಾಹ ಕುಲಸಚಿವರಿಗೆ ಕಳಿಸಲಾಗುತ್ತದೆ, ಹಾಗು ಅವರ ಕಚೇರಿಗಳಲ್ಲಿನ ಸಾರ್ವಜನಿಕ ಸ್ಥಳದಲ್ಲಿ, ಎಲ್ಲರಿಗೂ ಕಾಣಿಸುವಂತೆ ಪ್ರದರ್ಶಿಸಲಾಗುತ್ತದೆ.
೩. ಮದುವೆಗೆ ಮನ್ನಣೆ ಕೊಡುವ ಅಧಿಕಾರ ಯಾರಿಗಿದೆಯೋ, ಅವರು ಮದುವೆಗೆ ಒಪ್ಪದಿದ್ದರೆ, ಲಿಖಿತ ರೂಪದಲ್ಲಿ ಅವರ ತಿರಸ್ಕಾರವನ್ನು ಧರ್ಮ ಸಚಿವರಿಗೆ ಸಲ್ಲಿಸಬೇಕು. ಈ ಸಂದರ್ಭದಲ್ಲಿ, ಆ ಧರ್ಮ ಸಚಿವರು ಸಮರ್ಪಕ ವಿಚಾರಣೆ ನಡೆಸದೆ ವಿವಾಹ ಪ್ರಮಾಣ ಪತ್ರವನ್ನು ಕೊಡಲಾರರು. ಇಂತಹ ಆಕ್ಷೇಪಣೆ ವಿವಾಹ ಸೂಚನೆ ಪಡೆದ ಪ್ರಮಾಣ ಪತ್ರ ಪಡೆಯುವ ಮುನ್ನವೇ ವ್ಯಕ್ತ ಪಡಿಸಬೇಕು.
೪. ಯಾವ ಆಕ್ಷೇಪಣೆಯೂ ಇಲ್ಲದಿದ್ದರೂ ಕೂಡ, ಧರ್ಮ ಸಚಿವರು ಪ್ರಮಾಣ ಪತ್ರ ನೀಡಲು, ಮದುವೆಯಾಗಬಯಸುವ ಸೂಚನೆ ಪಡೆದು ೧೪ ದಿನಗಳ ವರೆಗೆ ಕಾಯಬಹುದು.
೫. ವಿವಾಹ ಪ್ರಮಾಣ ಪತ್ರ ಒಮ್ಮೆ ಕೊಟ್ಟ ಮೇಲೆ ಮದುವೆಯ ಸಮಾರಂಭ ಮತ್ತು ನೋಂದಣಿಯ ಕಾರ್ಯವಿಧಾನ ಮೇಲ್ಕಂಡಂತೆ ಇರುತ್ತದೆ.

ವಿವಾಹ ಕುಲಸಚಿವರಿಂದ ಅಥವಾ ಅವರ ಉಪಸ್ಥಿತಿಯಲ್ಲಿ ಮದುವೆ ನೆರವೇರಿಸುವ ಕಾರ್ಯವಿಧಾನ:
ಅಲ್ಪವಯಸ್ಕರು ಕಾನೂನುಬದ್ಧವಾಗಿ ಮದುವೆಯಾಗಬಯಸಲು, ವಿವಾಹ ಕುಲಸಚಿವರು ಕೆಳಗಿನ ಕಾರ್ಯವಿಧಾನವನ್ನು ಪಾಲಿಸುತ್ತಾರೆ:
೧. ಅಲ್ಪವಯಸ್ಕರು ಮದುವೆಯಾಗಬಯಸುವ ಸೂಚನೆಯನ್ನು ವಿವಾಹ ಕುಲಸಚಿವರಿಗೆ ಸಲ್ಲಿಸಿದಾಗ ಅವರು ಆ ಜಿಲ್ಲೆಯ ಇನ್ನೆಲ್ಲ ವಿವಾಹ ಕುಲಸಚಿವರಿಗೆ ಆ ಸೂಚನೆಯನ್ನು ಕಳಿಸುತ್ತಾರೆ, ಮತ್ತು ಅವರೆಲ್ಲರ ಕಚೇರಿಗಳ ಸಾರ್ವಜನಿಕ ಸ್ಥಳದಲ್ಲಿ, ಎಲ್ಲರಿಗೂ ಕಾಣಿಸುವಂತೆ ಆ ಸೂಚನೆಯನ್ನು ಪ್ರದರ್ಶಿಸಲಾಗುತ್ತದೆ.
೨. ಮದುವೆಗೆ ಮನ್ನಣೆ ಕೊಡುವ ಅಧಿಕಾರ ಯಾರಿಗಿದೆಯೋ, ಅವರು ಮದುವೆಗೆ ಒಪ್ಪದಿದ್ದರೆ, ಲಿಖಿತ ರೂಪದಲ್ಲಿ ಅವರ ತಿರಸ್ಕಾರವನ್ನು ವಿವಾಹ ಕುಲಸಚಿವರಿಗೆ ಸಲ್ಲಿಸಬೇಕು. ಈ ಸಂದರ್ಭದಲ್ಲಿ, ಆ ಕುಲಸಚಿವರು ಸಮರ್ಪಕ ವಿಚಾರಣೆ ನಡೆಸದೆ ವಿವಾಹ ಪ್ರಮಾಣ ಪತ್ರವನ್ನು ಕೊಡಲಾರರು. ಇಂತಹ ಆಕ್ಷೇಪಣೆ ವಿವಾಹ ಸೂಚನೆ ಪಡೆದ ಪ್ರಮಾಣ ಪತ್ರ ಪಡೆಯುವ ಮುನ್ನವೇ ವ್ಯಕ್ತ ಪಡಿಸಬೇಕು.
೩. ಒಂದು ವೇಳೆ ಒಪ್ಪಿಗೆಯನ್ನು ಕೊಡದಿದ್ದವರು ಮಾನಸಿಕವಾಗಿ ಅಸ್ವಸ್ಥವಾಗಿದ್ದರೆ, ಅಥವಾ (ತಂದೆಯಲ್ಲದವರು) ಅನ್ಯಾಯವಾಗಿ ಒಪ್ಪಿಗೆಯನ್ನು ನೀಡದಿದ್ದರೆ, ಮದುವೆಯಾಗಬಯಸುವ ದಂಪತಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಮುಂಬೈ, ಚೆನ್ನೈ, ಮತ್ತು ಕೋಲ್ಕತಾದಲ್ಲಿ ವಾಸಿಸುವ ದಂಪತಿಗಳು ಆಯಾ ಉಚ್ಚ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಬಹುದು, ಮತ್ತಿನ್ನಿತರರು ಅವರವರ ಜಿಲ್ಲಾ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಬಹುದು.
೪. ಇನ್ನು, ವಿವಾಹ ಕುಲಸಚಿವರಿಗೆ ಒಪ್ಪಿಗೆ ನೀಡದಿದ್ದ ವ್ಯಕ್ತಿಯ ಅಧಿಕಾರದ ಮೇಲೆ ಸಂದೇಹವಿದ್ದಲ್ಲಿ, ಅವರು ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು.
೫. ಯಾವ ಆಕ್ಷೇಪಣೆಯೂ ಇಲ್ಲದಿದ್ದರೂ ಕೂಡ, ವಿವಾಹ ಕುಲಸಚಿವರು ಪ್ರಮಾಣ ಪತ್ರ ನೀಡಲು, ಮದುವೆಯಾಗಬಯಸುವ ಸೂಚನೆ ಪಡೆದು ೧೪ ದಿನಗಳ ವರೆಗೆ ಕಾಯಬಹುದು.
೬. ವಿವಾಹ ಪ್ರಮಾಣ ಪತ್ರ ಒಮ್ಮೆ ಕೊಟ್ಟ ಮೇಲೆ ಮದುವೆಯ ಸಮಾರಂಭ ಮತ್ತು ನೋಂದಣಿಯ ಕಾರ್ಯವಿಧಾನ ಮೇಲ್ಕಂಡಂತೆ ಇರುತ್ತದೆ.