ಮಕ್ಕಳು ತಂದೆ-ತಾಯಂದಿರನ್ನು ನೋಡಿಕೊಳ್ಳುವುದು

ಭಾರತೀಯ ಕಾನೂನಿನ ಪ್ರಕಾರ ಎಲ್ಲ ವ್ಯಕ್ತಿಗಳು ತಮ್ಮ ತಂದೆ-ತಾಯಂದಿರನ್ನು ನೋಡಿಕೊಳ್ಳಬೇಕು ಮತ್ತು ಅವರ ಆಸರೆಯಾಗಬೇಕು ಎಂದಿದೆ. ಇಂತಹ ತಂದೆ-ತಾಯಂದಿರು ಜೈವಿಕವಾಗಿರಬಹುದು, ಮಲ ತಂದೆ-ತಾಯಿ ಆಗಿರಬಹುದು, ಅಥವಾ ದತ್ತು ತಂದೆ-ತಾಯಿ ಆಗಿರಬಹುದು. ತಂದೆ-ತಾಯಿ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯಿದೆ, ೨೦೦೭ರ ಅಡಿಯಲ್ಲಿ ಹಿರಿಯ ನಾಗರಿಕರು (೬೦ರ ಮೇಲಿರುವವರು) ಅವರ ವಯಸ್ಕ ಮಕ್ಕಳು ಅಥವಾ ಕಾನೂನಾತ್ಮಕ ಉತ್ತರಾಧಿಕಾರಿಗಳಿಂದ ಜೀವನಾಂಶ ಪಡೆಯಲು ಟ್ರಿಬ್ಯೂನಲ್ ಗೆ ಅರ್ಜಿ ಸಲ್ಲಿಸಬಹುದು. ಅವರು ತಮ್ಮನು ತಾವೇ ನೋಡಿಕೊಳ್ಳಲು ಆಗದಿದ್ದಲ್ಲಿ ಇಂತಹ ಅರ್ಜಿ ಸಲ್ಲಿಸಬಹುದಾಗಿದೆ.

ಹಿರಿಯ ನಾಗರಿಕರನ್ನು ತ್ಯಜಿಸಿದರೆ ಅಥವಾ ನಿರ್ಲಕ್ಷಿಸಿದರೆ ಶಿಕ್ಷೆ

ನೀವು ಒಬ್ಬ ಹಿರಿಯ ನಾಗರಿಕರನ್ನು ಯಾವುದೇ ಜಾಗದಲ್ಲಿ ಅವರನ್ನು ತ್ಯಜಿಸುವುದಕ್ಕಾಗಲಿ ಅಥವಾ ಅವರ ಕಾಳಜಿ ತೆಗೆದುಕೊಳ್ಳಬಾರದು ಎಂಬ ಉದ್ದೇಶದಿಂದ ಬಿಟ್ಟು ಹೋದಲ್ಲಿ, ನಿಮಗೆ ೩ ತಿಂಗಳ ಸೆರೆಮನೆ ವಾಸ ಮತ್ತು/ಅಥವಾ ೫೦೦೦ ರೂಪಾಯಿಗಳ ದಂಡ ವಿಧಿಸಲಾಗುವುದು. ಪೊಲೀಸರು ನ್ಯಾಯಾಲಯದ ಅನುಮತಿ ಇಲ್ಲದೆ ಆರೋಪಿಗಳನ್ನು ಬಂಧಿಸಬಹುದು. ಆದಾಗ್ಯೂ ಇದು ಜಾಮೀನು ನೀಡಬಹುದಾದ ಅಪರಾಧವಾಗಿದೆ. ನೀವು ಜಾಮೀನು ಪತ್ರದ ಮೊತ್ತ ನೀಡಬಹುದಾದಲ್ಲಿ ಸೆರೆಮನೆಯಿಂದ ಬಿಡುಗಡೆ ಹೊಂದಬಹುದು.

ಜೀವನಾಂಶದ ಮೊತ್ತ

ತಂದೆ-ತಾಯಿಗೆ ಕೊಡಬೇಕಾದ ಜೀವನಾಂಶದ ಮೊತ್ತ ಎಲ್ಲರಿಗೂ ಸಮನಾಗಿರುವಂತೆ ಕಾನೂನು ನಿಗದಿಪಡಿಸಿಲ್ಲ. ಆಯಾ ಪ್ರಕರಣಗಳ ಸಂದರ್ಭಾನುಸಾರ ಈ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಈ ಕೆಳಗಿನ ಅಂಶಗಳ ಮೇಲೆ ನ್ಯಾಯಾಲಯವು ಜೀವನಾಂಶದ ಮೊತ್ತವನ್ನು ನಿಗದಿಪಡಿಸುತ್ತದೆ:

 • ಮಕ್ಕಳ/ಉತ್ತರಾಧಿಕಾರಿಯ ಅಂತಸ್ತು ಅಥವಾ ಜೀವನದ ಗುಣಮಟ್ಟ
 • ನಿಮ್ಮ ಅವಶ್ಯಕತೆಗಳು (ಸಮಂಜಸವಾಗಿ ಲೆಕ್ಕ ಹಾಕಲಾಗುತ್ತದೆ)
 • ನೀವು ನಿಮ್ಮ ಮಕ್ಕಳು/ಉತ್ತರಾಧಿಕಾರಿಯಿಂದ ಬೇರೆಯಾಗಿ ವಾಸಿಸುತ್ತಿದ್ದೀರೋ ಹೇಗೆ
 • ಮಕ್ಕಳ/ಉತ್ತರಾಧಿಕಾರಿಗಳ ಆದಾಯ, ಸಂಪತ್ತು, ಮತ್ತು ಆಸ್ತಿಯ ಮೌಲ್ಯ
 • ನಿಮ್ಮ ಆದಾಯ, ಸಂಪತ್ತು, ಮತ್ತು ಆಸ್ತಿಯ ಮೌಲ್ಯ
 • ಜೀವನಾಂಶ ಪಡೆಯಬೇಕಾದ ಒಟ್ಟು ವ್ಯಕ್ತಿಗಳು

 

ಹಿಂದೂ ಕಾನೂನಿನಡಿ ಜೀವನಾಂಶ

ಹಿಂದೂ ದತ್ತು ಮತ್ತು ಜೀವನಾಂಶ ಕಾಯಿದೆಯಡಿ ಯಾವುದೇ ಹಿಂದೂ, ಬೌಧ್ಧ, ಜೈನ, ಅಥವಾ ಸಿಖ್ ಧರ್ಮಕ್ಕೆ ಸೇರಿದ, ವಯಸ್ಸಾದ/ಅಶಕ್ತ, ಜೈವಿಕ ಅಥವಾ ದತ್ತು ತಂದೆ-ತಾಯಂದಿರು, ಅವರ ಗಳಿಕೆ ಮತ್ತು ಆಸ್ತಿಯಿಂದ ಜೀವನ ನಡೆಸಲು ಅಸಾಧ್ಯವಾದಾಗ ತಮ್ಮ ವಯಸ್ಕ ಮಕ್ಕಳಿಂದ ಜೀವನಾಂಶ ಪಡೆಯಬಹುದು. ಇದಲ್ಲದೆ, ಅವರ ಮಗ ಅಥವಾ ಮಗಳು ತೀರಿಹೋದಲ್ಲೂ ಕೂಡ, ಅವರ ಬಿಟ್ಟು ಹೋದ ಆಸ್ತಿ ಮತ್ತು ಸಂಪತ್ತಿನಲ್ಲಿ ಜೀವನಾಂಶದ ಹಕ್ಕು ತಂದೆ-ತಾಯಂದಿರಿಗೆ ಇರುತ್ತದೆ.

ದಂಡ ಪ್ರಕ್ರಿಯಾ ಸಂಹಿತೆಯಡಿ ಜೀವನಾಂಶ

ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ ೧೨೫ರ ಪ್ರಕಾರ ಸಾಕಾದಷ್ಟು ಸಂಪನ್ಮೂಲವಿರುವ ಯಾವುದೇ ವ್ಯಕ್ತಿಯು ತನ್ನ ಅವಲಂಬಿತ ತಂದೆ-ತಾಯಿಯನ್ನು ನಿರ್ಲಕ್ಷಿಸಿದರೆ, ಅಥವಾ ಅವರ ಪೋಷಣೆ ಮಾಡಲು ನಿರಾಕರಿಸಿದರೆ, ಪ್ರಥಮ ಶ್ರೇಣಿಯ ಹಿರಿಯ ನ್ಯಾಯಾಧೀಶರು ಅವರಿಗೆ ಜೀವನಾಂಶದ ರೂಪದಲ್ಲಿ ಮಾಸಿಕ ಭತ್ಯೆ ಕೊಡಬೇಕೆಂದು ಆದೇಶಿಸಬಹುದು. ಇಂತಹ ದೂರು ನೀಡಿ ಜೀವನಾಂಶದ ಆದೇಶವನ್ನು ಪಡೆಯುವ ಕ್ರಮವನ್ನು ತಿಳಿಯಲು ತಮ್ಮ ವಕೀಲರನ್ನು ಸಂಪರ್ಕಿಸಿ.

ಮರಣದ ನಂತರ ಜೀವನಾಂಶ

ನಿಮ್ಮ ಮಕ್ಕಳು/ಉತ್ತರಾಧಿಕಾರಿಗಳು ಸತ್ತ ಮೇಲೂ ಸಹ ನಿಮಗೆ ಜೀವನಾಂಶದ ಹಕ್ಕಿದೆ. ನೀವು ಅಶಕ್ತ ಅಥವಾ ಇಳಿ ವಯಸ್ಸಿನಲ್ಲಿದ್ದಲ್ಲಿ, ನಿಮ್ಮ ಅರ್ಜಿಯ ಮೇರೆಗೆ ನಿಮ್ಮ ಮಕ್ಕಳ/ಉತ್ತರಾಧಿಕಾರಿಗಳ ಸಂಪತ್ತು ಮತ್ತು ಆಸ್ತಿಯ ಒಂದು ಭಾಗ ನಿಮಗೆ ಕೊಡಬೇಕೆಂದು ನ್ಯಾಯಾಲಯವು ಆದೇಶಿಸಬಹುದು. ಇಂತಹ ಸಂದರ್ಭಗಳಲ್ಲಿ ನಿಮ್ಮ ಮಕ್ಕಳು/ಉತ್ತರಾಧಿಕಾರಿಗಳು ಸತ್ತ ನಂತರ ಅನ್ವಯವಾಗುವ ಉತ್ತರಾಧಿಕಾರದ ನಿಯಮಗಳನುಸಾರ ನಿಮ್ಮ ಜೀವನಾಂಶದ ಮೊತ್ತವನ್ನು ನಿರ್ಧರಿಸಲಾಗುತ್ತದೆ. ನಿಮಗೆ ದಕ್ಕುವ ಜೀವನಾಂಶದ ಮೊತ್ತವನ್ನು ಕೆಳಗಿನ ಅಂಶಗಳ ಮೇಲೆ ನ್ಯಾಯಾಲಯವು ನಿರ್ಧರಿಸುತ್ತದೆ:

 • ತಮ್ಮ ಸಾಲಗಳನ್ನು ತೀರಿಸಿದ ನಂತರ, ನಿಮ್ಮ ಮಕ್ಕಳು/ಉತ್ತರಾಧಿಕಾರಿಗಳ ಆಸ್ತಿಯ ಸಂಪೂರ್ಣ ಮೌಲ್ಯ (ಆಸ್ತಿಯಿಂದ ಬರುವ ಆದಾಯ ಸೇರಿದಂತೆ)
 • ಅವರ ಉಯಿಲಿನ (will) ನಿಬಂಧನೆಗಳು
 • ನಿಮ್ಮ ಜೊತೆಗಿನ ಅವರ ಸಂಬಂಧದ ಸ್ವರೂಪ ಮತ್ತು ನಿಕಟತೆ
 • ನಿಮ್ಮ ಅವಶ್ಯಕತೆಗಳು (ಸಮಂಜಸವಾಗಿ ಲೆಕ್ಕ ಹಾಕಲಾಗುತ್ತದೆ)
 • ಜೀವನಾಂಶಕ್ಕಾಗಿ ಅವರ ಮೇಲೆ ಅವಲಂಬಿಸಿರುವ ವ್ಯಕತಿಗಳ ಸಂಖ್ಯೆ

ತಾತ್ಕಾಲಿಕ ಜೀವನಾಂಶ

ಮಾಸಿಕವಾಗಿ, ನಿಮ್ಮ ಮಕ್ಕಳು/ ನೆಂಟರು ನಿಮಗೆ ತಾತ್ಕಾಲಿಕ ಜೀವನಾಂಶ ಕೊಡಬೇಕೆಂದು ನೀವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ನಿಮ್ಮ ಮಕ್ಕಳು/ನೆಂಟರಿಗೆ ನಿಮ್ಮ ಅರ್ಜಿಯ ಬಗ್ಗೆ ತಿಳಿಸಿದ ೯೦ ದಿನಗಳ ಒಳಗೆ ನಿಮಗೆ ತಾತ್ಕಾಲಿಕ ಜೀವನಾಂಶ ಸಿಗುವುದೋ ಇಲ್ಲವೋ ಎಂದು ನ್ಯಾಯಾಲಯವು ತೀರ್ಮಾನಿಸುತ್ತದೆ. ವಿಶೇಷ ಸಂದರ್ಭಗಳಲ್ಲಿ ಈ ಸಮಯಾವಧಿಯನ್ನು ಇನ್ನೂ ೩೦ ದಿನಗಳ ವರೆಗೆ ನ್ಯಾಯಾಲಯವು ಹೆಚ್ಚಿಸಬಹುದಾಗಿದೆ. ನಿಮಗೆ ಸಿಕ್ಕಬಹುದಾದ ಅಂತಿಮ ಜೀವನಾಂಶದ ಮೊತ್ತ ಇದಲ್ಲ. ನಿಮಗೆ ಯಾವುದೇ ಜೀವನಾಂಶ ಸಿಗುವುದಿಲ್ಲ ಎಂದೂ, ಅಥವಾ ಜೀವನಾಂಶದ ಮೊತ್ತವನ್ನು ಹೆಚ್ಚಿಸಬೇಕು ಅಥವಾ ಕಡಿಮೆ ಮಾಡಬೇಕು ಎಂದು ನ್ಯಾಯಾಲಯವು ಅಂತಿಮ ಆದೇಶದಲ್ಲಿ ನಿರ್ಧರಿಸಬಹುದು.

ಟ್ರಿಬ್ಯೂನಲ್ ನಿಂದ ಜೀವನಾಂಶ ಪಡೆದುಕೊಳ್ಳುವುದು

ತಂದೆ-ತಾಯಿ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯಿದೆ, ೨೦೦೭ರ ಅಡಿಯಲ್ಲಿನ ಜೀವನಾಂಶ ಟ್ರಿಬ್ಯೂನಲ್ ಗೆ ನೀವು ಜೀವನಾಂಶದ ಅರ್ಜಿ ಸಲ್ಲಿಸಬಹುದು. ಕೆಳಕಂಡ ಪ್ರದೇಶಗಳ ಟ್ರಿಬ್ಯೂನಲ್ ಗೆ ನೀವು ಅರ್ಜಿ ಸಲ್ಲಿಸಬಹುದು:

 • ನಿಮ್ಮ ಪ್ರಸ್ತುತ ವಾಸ ಸ್ಥಳ, ಅಥವಾ
 • ನಿಮ್ಮ ಮಾಜಿ ವಾಸ ಸ್ಥಳ, ಅಥವಾ
 • ನಿಮ್ಮ ಮಕ್ಕಳು/ ನೆಂಟರು ವಾಸಿಸುವ ಸ್ಥಳ

ಒಮ್ಮೆ ನೀವು ಟ್ರಿಬ್ಯೂನಲ್ ನಲ್ಲಿ ಅರ್ಜಿ ಸಲ್ಲಿಸಿದಲ್ಲಿ, ದಂಡ ಪ್ರಕ್ರಿಯಾ ಸಂಹಿತೆ, ೧೯೭೩ರ ಸೆಕ್ಷನ್ ೧೨೫ರ ಅಡಿಯಲ್ಲಿ (ಜೀವನಾಂಶದ ಹಕ್ಕು ಇದರದಿಯೂ ಇದೆ) ನೀವು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ಅರ್ಜಿ ಸಲ್ಲಿಸಿದ ನಂತರದ ಪ್ರಕ್ರಿಯೆ: ನೀವು ಅರ್ಜಿ ಸಲ್ಲಿಸಿದ ನಂತರ ನ್ಯಾಯಾಲಯವು ಇದರ ಬಗ್ಗೆ ನಿಮ್ಮ ಮಕ್ಕಳಿಗೆ ಸೂಚಿಸುತ್ತದೆ. ತದನಂತರ, ನ್ಯಾಯಾಲಯವು ಎರಡೂ ಪಕ್ಷಗಳು ಸ್ನೇಹಪರ ಒಪ್ಪಂದಕ್ಕೆ ಬರುವಂತೆ ಸಂಧಾನಾಧಿಕಾರಿಗಳ ನೇಮಕಾತಿ ಮಾಡಬಹುದು. ಒಂದು ವೇಳೆ ಇಂತಹ ಅಧಿಕಾರಿಗಳ ನೇಮಕಾತಿ ನ್ಯಾಯಾಲಯವು ಮಾಡದಿದ್ದರೆ, ಸ್ವತಃ ನ್ಯಾಯಾಧೀಶರು ಎರಡೂ ಪಕ್ಷಗಳ ಹೇಳಿಕೆಗಳನ್ನು ಕೇಳುತ್ತಾರೆ.

ನಿಮಗೆ ಎಷ್ಟು ಜೀವನಾಂಶ ಕೊಡಬೇಕೆಂದು ತೀರ್ಮಾನಿಸಲು ನ್ಯಾಯಾಲಯವು ವಿಚಾರಣೆಯನ್ನು ನಡೆಸುತ್ತದೆ. ಈ ವಿಚಾರಣೆ ಪೂರ್ಣ ಪ್ರಮಾಣದ ಕಾನೂನು ಕ್ರಮವಲ್ಲ. ಇಂತಹ ನ್ಯಾಯಾಲಯಗಳಲ್ಲಿ ವಕೀಲರ ಪ್ರಾತಿನಿಧ್ಯ ಕಾನೂನು ನಿಷೇಧಿಸಿದ್ದರೂ, ಹಲವು ಉಚ್ಚ ನ್ಯಾಯಾಲಯಗಳ ತೀರ್ಪುಗಳ ಪ್ರಕಾರ ವಕೀಲರ ಈ ಹಕ್ಕನ್ನು ನಿರ್ಬಂಧಿಸಲು ಆಗುವುದಿಲ್ಲ. ಈ ನ್ಯಾಯಾಲಯವು ಅನೌಪಚಾರಿಕವಾಗಿದ್ದರೂ ಕೂಡ, ಇದರ ಬಳಿ ಸಿವಿಲ್ ನ್ಯಾಯಾಲಯದ ಎಲ್ಲ ಅಧಿಕಾರಗಳು ಇರುತ್ತವೆ. ಉದಾಹರಣೆಗೆ, ಸಾಕ್ಷಿದಾರರ ಹಾಜರಿಯ ಆದೇಶ ನೀಡುವುದು, ಪ್ರಮಾಣವಚನದ ಮೇಲೆ ಸಾಕ್ಷಿ ತೆಗೆದುಕೊಳ್ಳುವುದು, ಇತ್ಯಾದಿ.

ನಿಮ್ಮ ಮಕ್ಕಳು/ ನೆಂಟರು ನಿಮ್ಮ ಕಾಳಜಿ ವಹಿಸಲು ನಿರ್ಲಕ್ಷಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿದು ಬಂದಲ್ಲಿ ಅವರು ನಿಮಗೆ ಮಾಸಿಕ ಜೀವನಾಂಶ ಕೊಡಬೇಕೆಂದು ನ್ಯಾಯಾಲಯವು ಆದೇಶಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ದಿನಾಂಕದಿಂದ ಜೀವನಾಂಶದ ಮೊತ್ತದ ಮೇಲೆ ೫-೮% ಬಡ್ಡಿಯನ್ನು ಕೊಡುವುದಾಗಿಯೂ ನ್ಯಾಯಾಲಯವು ಆದೇಶಿಸಬಹುದು. ನ್ಯಾಯಾಲಯದ ಆದೇಶದ ನಂತರವೂ ನಿಮ್ಮ ಮಕ್ಕಳು ನಿಮಗೆ ಜೀವನಾಂಶ ಕೊಡದಿದ್ದಲ್ಲಿ ನೀವು ಜೀವನಾಂಶ ಟ್ರಿಬ್ಯೂನಲ್ ಅಥವಾ ಇನ್ನಿತರ ನ್ಯಾಯಾಲಯಕ್ಕೆ ಹೋಗಿ ಈ ಆದೇಶವನ್ನು ಕಾರ್ಯಗತಗೊಳಿಸಬಹುದು.