ಟ್ರಿಬ್ಯೂನಲ್ ನಿಂದ ಜೀವನಾಂಶ ಪಡೆದುಕೊಳ್ಳುವುದು

ಕೊನೆಯ ಅಪ್ಡೇಟ್ Sep 27, 2022

ತಂದೆ-ತಾಯಿ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯಿದೆ, ೨೦೦೭ರ ಅಡಿಯಲ್ಲಿನ ಜೀವನಾಂಶ ಟ್ರಿಬ್ಯೂನಲ್ ಗೆ ನೀವು ಜೀವನಾಂಶದ ಅರ್ಜಿ ಸಲ್ಲಿಸಬಹುದು. ಕೆಳಕಂಡ ಪ್ರದೇಶಗಳ ಟ್ರಿಬ್ಯೂನಲ್ ಗೆ ನೀವು ಅರ್ಜಿ ಸಲ್ಲಿಸಬಹುದು:

  • ನಿಮ್ಮ ಪ್ರಸ್ತುತ ವಾಸ ಸ್ಥಳ, ಅಥವಾ
  • ನಿಮ್ಮ ಮಾಜಿ ವಾಸ ಸ್ಥಳ, ಅಥವಾ
  • ನಿಮ್ಮ ಮಕ್ಕಳು/ ನೆಂಟರು ವಾಸಿಸುವ ಸ್ಥಳ

ಒಮ್ಮೆ ನೀವು ಟ್ರಿಬ್ಯೂನಲ್ ನಲ್ಲಿ ಅರ್ಜಿ ಸಲ್ಲಿಸಿದಲ್ಲಿ, ದಂಡ ಪ್ರಕ್ರಿಯಾ ಸಂಹಿತೆ, ೧೯೭೩ರ ಸೆಕ್ಷನ್ ೧೨೫ರ ಅಡಿಯಲ್ಲಿ (ಜೀವನಾಂಶದ ಹಕ್ಕು ಇದರದಿಯೂ ಇದೆ) ನೀವು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ಅರ್ಜಿ ಸಲ್ಲಿಸಿದ ನಂತರದ ಪ್ರಕ್ರಿಯೆ: ನೀವು ಅರ್ಜಿ ಸಲ್ಲಿಸಿದ ನಂತರ ನ್ಯಾಯಾಲಯವು ಇದರ ಬಗ್ಗೆ ನಿಮ್ಮ ಮಕ್ಕಳಿಗೆ ಸೂಚಿಸುತ್ತದೆ. ತದನಂತರ, ನ್ಯಾಯಾಲಯವು ಎರಡೂ ಪಕ್ಷಗಳು ಸ್ನೇಹಪರ ಒಪ್ಪಂದಕ್ಕೆ ಬರುವಂತೆ ಸಂಧಾನಾಧಿಕಾರಿಗಳ ನೇಮಕಾತಿ ಮಾಡಬಹುದು. ಒಂದು ವೇಳೆ ಇಂತಹ ಅಧಿಕಾರಿಗಳ ನೇಮಕಾತಿ ನ್ಯಾಯಾಲಯವು ಮಾಡದಿದ್ದರೆ, ಸ್ವತಃ ನ್ಯಾಯಾಧೀಶರು ಎರಡೂ ಪಕ್ಷಗಳ ಹೇಳಿಕೆಗಳನ್ನು ಕೇಳುತ್ತಾರೆ.

ನಿಮಗೆ ಎಷ್ಟು ಜೀವನಾಂಶ ಕೊಡಬೇಕೆಂದು ತೀರ್ಮಾನಿಸಲು ನ್ಯಾಯಾಲಯವು ವಿಚಾರಣೆಯನ್ನು ನಡೆಸುತ್ತದೆ. ಈ ವಿಚಾರಣೆ ಪೂರ್ಣ ಪ್ರಮಾಣದ ಕಾನೂನು ಕ್ರಮವಲ್ಲ. ಇಂತಹ ನ್ಯಾಯಾಲಯಗಳಲ್ಲಿ ವಕೀಲರ ಪ್ರಾತಿನಿಧ್ಯ ಕಾನೂನು ನಿಷೇಧಿಸಿದ್ದರೂ, ಹಲವು ಉಚ್ಚ ನ್ಯಾಯಾಲಯಗಳ ತೀರ್ಪುಗಳ ಪ್ರಕಾರ ವಕೀಲರ ಈ ಹಕ್ಕನ್ನು ನಿರ್ಬಂಧಿಸಲು ಆಗುವುದಿಲ್ಲ. ಈ ನ್ಯಾಯಾಲಯವು ಅನೌಪಚಾರಿಕವಾಗಿದ್ದರೂ ಕೂಡ, ಇದರ ಬಳಿ ಸಿವಿಲ್ ನ್ಯಾಯಾಲಯದ ಎಲ್ಲ ಅಧಿಕಾರಗಳು ಇರುತ್ತವೆ. ಉದಾಹರಣೆಗೆ, ಸಾಕ್ಷಿದಾರರ ಹಾಜರಿಯ ಆದೇಶ ನೀಡುವುದು, ಪ್ರಮಾಣವಚನದ ಮೇಲೆ ಸಾಕ್ಷಿ ತೆಗೆದುಕೊಳ್ಳುವುದು, ಇತ್ಯಾದಿ.

ನಿಮ್ಮ ಮಕ್ಕಳು/ ನೆಂಟರು ನಿಮ್ಮ ಕಾಳಜಿ ವಹಿಸಲು ನಿರ್ಲಕ್ಷಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿದು ಬಂದಲ್ಲಿ ಅವರು ನಿಮಗೆ ಮಾಸಿಕ ಜೀವನಾಂಶ ಕೊಡಬೇಕೆಂದು ನ್ಯಾಯಾಲಯವು ಆದೇಶಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ದಿನಾಂಕದಿಂದ ಜೀವನಾಂಶದ ಮೊತ್ತದ ಮೇಲೆ ೫-೮% ಬಡ್ಡಿಯನ್ನು ಕೊಡುವುದಾಗಿಯೂ ನ್ಯಾಯಾಲಯವು ಆದೇಶಿಸಬಹುದು. ನ್ಯಾಯಾಲಯದ ಆದೇಶದ ನಂತರವೂ ನಿಮ್ಮ ಮಕ್ಕಳು ನಿಮಗೆ ಜೀವನಾಂಶ ಕೊಡದಿದ್ದಲ್ಲಿ ನೀವು ಜೀವನಾಂಶ ಟ್ರಿಬ್ಯೂನಲ್ ಅಥವಾ ಇನ್ನಿತರ ನ್ಯಾಯಾಲಯಕ್ಕೆ ಹೋಗಿ ಈ ಆದೇಶವನ್ನು ಕಾರ್ಯಗತಗೊಳಿಸಬಹುದು.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.