ಯಾವುದೇ ವಿವಾಹವು ಕಾನೂನಿನಡಿ ಬಾಲ್ಯ ವಿವಾಹವೆಂದು ಪರಿಗಣಿಸಬೇಕಾದಲ್ಲಿ:
- ಮದುವೆಯಾಗುವ ಇಬ್ಬರೂ ಅಪ್ರಾಪ್ತ ವಯಸ್ಸಿನವರಾಗಿರಬೇಕು, ಅಥವಾ
- ಮದುವೆಯಾಗುವ ಕನಿಷ್ಠ ಒಬ್ಬರು ಅಪ್ರಾಪ್ತ ವಯಸ್ಸಿನವರಾಗಿರಬೇಕು.
ಕಾನೂನಿನಡಿ ಮಹಿಳೆಯರ ಮದುವೆಯ ವಯಸ್ಸು ೧೮, ಹಾಗು ಪುರುಷರದು ೨೧ ಆಗಿದೆ.
ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಪ್ರೌಢಾವಸ್ಥೆಯೇ (೧೫ ವರ್ಷಗಳು) ಮದುವೆಯ ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ನೀವು ೧೮/೨೧ ವರ್ಷಗಳ ಕೆಳಗಿದ್ದು, ಮದುವೆಯಾದರೆ, ನಿಮ್ಮ ಮದುವೆ ಅಕ್ರಮವಲ್ಲ. ಆದಾಗ್ಯೂ, ಬಾಲ್ಯ ವಿವಾಹ ಕಾನೂನಿನಡಿ, ಬೇಕಾದಲ್ಲಿ ನೀವು ನಿಮ್ಮ ಮದುವೆಯನ್ನು ರದ್ದುಗೊಳಿಸಬಹುದು.
ಬಾಲ್ಯ ವಿವಾಹಗಳು ಭಾರತದಲ್ಲಿ ಸಾವಿರಾರು ವರ್ಷಗಳಿಂದ ನಡೆಯುತ್ತಾ ಬಂದಿವೆ. ಈ ಸಾಮಾಜಿಕ ಸಮಸ್ಯೆಯನ್ನು ಪರಿಹರಿಸಲು ನಮ್ಮ ಕಾನೂನು ಬಾಲ್ಯ ವಿವಾಹ ನೆರವೇರಿಸುವುದನ್ನು
ನಿಷೇಧಿಸಿದೆ ಹಾಗು ಇಂತಹ ವಿವಾಹಗಳ ನಿರ್ವಹಣೆಯಲ್ಲಿ ತೊಡಗಿದವರಿಗೆ ಶಿಕ್ಷೆಯನ್ನು ವಿಧಿಸುತ್ತದೆ.
ಆದಾಗ್ಯೂ, ಅಪ್ರಾಪ್ತವಯಸ್ಕರು ಮದುವೆಯಾದಲ್ಲಿ ಕಾನೂನಿನಡಿ ಅದು ಅಮಾನ್ಯವಲ್ಲ. ಆದ ಮದುವೆಯನ್ನು ಮುಂದುವರಿಸಬೇಕೋ ಅಥವಾ ರದ್ದುಪಡಿಸಬೇಕೋ ಎಂಬ ನಿರ್ಧಾರ ಆ ಸಂಬಂಧಪಟ್ಟ ಮಕ್ಕಳದ್ದು.
ಭಾರತದ ಕೆಲವು ವೈಯಕ್ತಿಕ ಕಾನೂನುಗಳಡಿ (ಬೇರೆ ಬೇರೆ ಧರ್ಮಗಳ ಮದುವೆ, ವಿಚ್ಛೇದನ, ಇತ್ಯಾದಿ ವಿಷಯಗಳನ್ನು ನಿರ್ವಹಿಸುವ ಧಾರ್ಮಿಕ ಕಾನೂನುಗಳು), ಮಕ್ಕಳು ಪ್ರೌಢಾವಸ್ಥೆ ಮುಟ್ಟಿದ ಮೇಲೆ ವಿವಾಹದ ಅವಕಾಶವಿದೆ. ಇದು ಹೆಣ್ಣು ಮಕ್ಕಳು ೧೮ ಮುಟ್ಟುವ ಮುನ್ನ ಹಾಗು ಗಂಡು ಮಕ್ಕಳು ೨೧ ಮುಟ್ಟುವ ಮುನ್ನ ಸಂಭವವಿದೆ. ಹಲವಾರು ಪ್ರಕರಣಗಳಲ್ಲಿ ನಮ್ಮ ನ್ಯಾಯಾಲಯಗಳು ಇಂತಹ ಮದುವೆಗಳು ಅಮಾನ್ಯವಲ್ಲ ಎಂದು ತೀರ್ಪುಗಳನ್ನು ನೀಡಿವೆ. ಆದಾಗ್ಯೂ, ಸಂಬಂಧಪಟ್ಟ ಮಕ್ಕಳು ತಮ್ಮ ಮದುವೆಗಳನ್ನು ಬಾಲ್ಯ ವಿವಾಹ ಕಾನೂನಿನಡಿ ರದ್ದುಗೊಳಿಸುವ ಹಕ್ಕನ್ನು ಹೊಂದಿರುತ್ತಾರೆ.
ಹೀಗಿದ್ದರೂ ಕೂಡ, ಕೆಲವು ಸಂದರ್ಭಗಳಲ್ಲಿ, ಕೆಲವು ಬಾಲ್ಯ ವಿವಾಹಗಳು ಸಂಪೂರ್ಣವಾಗಿ ಅಮಾನ್ಯ ಎಂದು ನಮ್ಮ ಕಾನೂನು ಪರಿಗಣಿಸುತ್ತದೆ.
ಬಾಲ್ಯ ವಿವಾಹವನ್ನು ನೆರವೇರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.
ವಿವಾಹವನ್ನು ನೆರವೇರಿಸುವುದು: ಯಾರಾದರೂ ಬಾಲ್ಯ ವಿವಾಹವನ್ನು ನೆರವೇರಿಸಿದಲ್ಲಿ, ಅಥವಾ ನೆರವೇರಿಸುವುದಕ್ಕೆ ಸಹಾಯ ಮಾಡಿದಲ್ಲಿ, ಅವರುಗಳು ಅಪರಾಧಿಗಳಾಗುತ್ತಾರೆ.
ಪಾಲಕರು/ಪೋಷಕರು ಬಾಲ್ಯ ವಿವಾಹ ನೆರವೇರಿಸಿದಾಗ: ಯಾವ ತಂದೆ-ತಾಯಿ/ಪಾಲಕರು/ಪೋಷಕರು/ಮಗುವಿನ ರಕ್ಷಣೆಯ ಜವಾಬ್ದಾರರು ಬಾಲ್ಯ ವಿವಾಹದಲ್ಲಿ ಭಾಗವಹಿಸುವುದಾಗಲಿ, ಅಥವಾ ಬಾಲ್ಯ ವಿವಾಹದ ಪ್ರಚಾರದಲ್ಲಾಗಲಿ ತೊಡಗುತ್ತಾರೋ, ಅವರು ಅಪರಾಧಿಗಳಾಗುತ್ತಾರೆ. ಬಾಲ್ಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಹಾಗು ಭಾಗವಹಿಸುವುದೂ ಕೂಡ ಅಪರಾಧ.
ಯಾರಾದರೂ ಈ ಅಪರಾಧಗಳಿಗೆ ಹೊಣೆ ಎಂದು ಸಾಬೀತಾದಲ್ಲಿ ಅವರಿಗೆ ೨ ವರ್ಷಗಳ ಕಠಿಣ ಸೆರೆವಾಸದ ಜೊತೆಗೆ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುತ್ತದೆ.
ಈ ಕಾನೂನಿನಡಿಯ ಎಲ್ಲ ಅಪರಾಧಗಳು ಸಂಜ್ನ್ಯೆಯ (cognisable) ಹಾಗು ಜಾಮೀನು-ರಹಿತ (non-bailable) ವಾಗಿವೆ. ಅಂದರೆ, ಪೊಲೀಸರು ನಿಮ್ಮನ್ನು ವಾರೆಂಟ್ ಇಲ್ಲದೆ ಬಂಧಿಸಬಹುದು, ಮತ್ತು ಬಂಧನದ ನಂತರ ಜಾಮೀನು ಸಿಗುವುದು ನಿಮ್ಮ ಹಕ್ಕಾಗಿರುವುದಿಲ್ಲ.
ಬಹಳಷ್ಟು ಅಪರಾಧಗಳಲ್ಲಿ, ಆರೋಪಿಗಳ ಅಪರಾಧವನ್ನು ಸಾಬೀತುಪಡಿಸುವ ಜವಾಬ್ದಾರಿ ಸರ್ಕಾರಿ ಅಭಿಯೋಜಕರದ್ದಾಗಿರುತ್ತದೆ. ಆದರೆ, ಈ ಕಾನೂನು, ಬಾಲ್ಯ ವಿವಾಹ ನೆರವೇರಿದ್ದರೆ, ಆ ಮಕ್ಕಳ ಪಾಲಕ-ಪೋಷಕರೇ ಈ ವಿವಾಹವನ್ನು ತಡೆಯಲು ವಿಫಲರಾಗಿದ್ದಾರೆ ಎಂದು ಊಹಿಸುತ್ತದೆ.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಈ ಕಾನೂನಿನಡಿ ಮಹಿಳೆಯರಿಗೆ ಕೇವಲ ದಂಡ ವಿಧಿಸಬಹುದೇ ವಿನಃ ಅವರನ್ನು ಜೈಲಿನಲ್ಲಿ ಬಂಧಿಸಲು ಅನುಮತಿ ಇಲ್ಲ.
ಬಾಲ್ಯ ವಿವಾಹ ನೆರವೇರಿದ್ದಲ್ಲಿ, ವಿವಾಹದ ಸಮಯದಲ್ಲಿ ಯಾರು ಅಪ್ರಾಪ್ತ ವಯಸ್ಸಿನವರಾಗಿದ್ದರೋ, ಅವರಿಗೆ ಆ ವಿವಾಹವನ್ನು ರದ್ದುಗೊಳಿಸುವ ಆಯ್ಕೆ ಇರುತ್ತದೆ. ಆ ಬಾಲ್ಯ ವಿವಾಹವನ್ನು ಈ ಕೆಳಕಂಡ ರೀತಿಗಳಲ್ಲಿ ರದ್ದುಗೊಳಿಸಬಹುದು:
ಪ್ರಕರಣವನ್ನು ಎಲ್ಲಿ ದಾಖಲಿಸಬೇಕು?
ಬಾಲ್ಯ ವಿವಾಹವನ್ನು ರದ್ದುಗೊಳಿಸಿ ಎಂಬ ಮನವಿಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಬೇಕು.
ಪ್ರಕರಣವನ್ನು ಯಾರು ದಾಖಲಿಸಬೇಕು?
ಮನವಿದಾರರು ಅಪ್ರಾಪ್ತ ವಯಸ್ಕರಾಗಿದ್ದರೆ ಅರ್ಜಿಯನ್ನು ಅವರ ಪೋಷಕರು ಅಥವಾ ಹಿತೈಷಿಗಳಿಂದ ಸಲ್ಲಿಸಬೇಕು. ಇವರು ಬಾಲ್ಯ ವಿವಾಹ ನಿಷೇಧಾಧಿಕಾರಿಗಳೊಡನೆ ಈ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಪ್ರಕರಣವನ್ನು ಯಾವಾಗ ದಾಖಲಿಸಬಹುದು?
ಈ ಅರ್ಜಿಯನ್ನು ಸಲ್ಲಿಸಲು ಕಾನೂನಿನಡಿ ನಿರ್ದಿಷ್ಟವಾದ ಸಮಯದ ಮಿತಿಯಿದೆ. ಸಂಬಂಧಪಟ್ಟ ಅಪ್ರಾಪ್ತ ವಯಸ್ಕರು ಪ್ರಾಪ್ತ ವಯಸ್ಕರಾದ ಬಳಿಕ ೨ ವರ್ಷಗಳವರೆಗೆ ಮಾತ್ರ ಈ ಅರ್ಜಿಯನ್ನು ಸಲ್ಲಿಸಬಹುದು. ಅಂದರೆ, ಹುಡುಗಿಯರು, ಅವರ ಬಾಲ್ಯ ವಿವಾಹ ರದ್ದು ಪಡಿಸಲು ಮನವಿಯನ್ನು ೨೦ ವರ್ಷದೊಳಗೆ, ಹಾಗು ಹುಡುಗರು ೨೩ ವರ್ಷದೊಳಗೆ ಮಾತ್ರ ಸಲ್ಲಿಸಬಹುದಾಗಿದೆ.
ನ್ಯಾಯಾಲಯವು ಏನು ಮಾಡುತ್ತದೆ?
ಬಾಲ್ಯ ವಿವಾಹವು ರದ್ದುಗೊಂಡಾಗ, ವಿವಾಹದ ಸಮಯದಲ್ಲಿ ವಿನಿಮಯಗೊಂಡ ಎಲ್ಲ ಬೆಲೆಬಾಳುವ ವಸ್ತುಗಳು, ಹಣ, ಆಭರಣಗಳು, ಹಾಗು ಇತರೆ ಉಡುಗೊರೆಗಳನ್ನು ಪರಸ್ಪರ ಹಿಂತಿರುಗಿಸಿ ಎಂದು ಜಿಲ್ಲಾ ನ್ಯಾಯಾಲಯವು ಆದೇಶಿಸುತ್ತದೆ. ಉಡುಗೊರೆಗಳನ್ನು ಹಿಂತಿರುಗಿಸಲಾರದಂತಿದ್ದಲ್ಲಿ, ಅವುಗಳ ಮೌಲ್ಯದ ಹಣದ ಮೊತ್ತವನ್ನು ಹಿಂತಿರುಗಿಸುವುದಾಗಿ ನ್ಯಾಯಾಲಯವು ಆದೇಶಿಸುತ್ತದೆ.
ಬಾಲ್ಯ ವಿವಾಹ ಕೆಲವು ಸಂದರ್ಭಗಳಲ್ಲಿ ಸಂಪೂರ್ಣವಾಗಿ ಅಮಾನ್ಯವಾಗಿರುತ್ತವೆ. ಅಂದರೆ, ಕಾನೂನಿನ ದೃಷ್ಟಿಯಲ್ಲಿ ಈ ವಿವಾಹಗಳು ಆಗೇ ಇಲ್ಲ ಎಂದರ್ಥ. ಇಂತಹ ಅಮಾನ್ಯ ವಿವಾಹಗಳು ಈ ಕೆಳಕಂಡಂತಿವೆ:
- ಮದುವೆಯ ಸಲುವಾಗಿ ಅಲ್ಪವಯಸ್ಕರನ್ನು ಅಪಹರಿಸುವುದು
- ಅಲ್ಪವಯಸ್ಕರನ್ನು ಪ್ರಲೋಭನೆಗೊಳಿಸಿ ಮದುವೆಗೆ ಕೊಂಡೊಯ್ಯುವುದು
- ಅಲ್ಪವಯಸ್ಕರನ್ನು ಮದುವೆಯ ಸಲುವಾಗಿ ಮಾರಾಟ ಮಾಡುವುದು
- ಮದುವೆಯಾದ ಮೇಲೆ ಅಲ್ಪವಯಸ್ಕರ ಮಾರಾಟ ಅಥವಾ ಕಳ್ಳಸಾಗಾಣಿಕೆ ಮಾಡುವುದು
- ನ್ಯಾಯಾಲಯ ಬಾಲ್ಯ ವಿವಾಹದ ವಿರುಧ್ಧ ಆದೇಶ ಹೊರಡಿಸಿದ್ದರೂ ಸಹ ಇಂತಹ ವಿವಾಹವನ್ನು ನೆರವೇರಿಸುವುದು
ಬಾಲ್ಯ ವಿವಾಹವು ರದ್ದುಗೊಂಡಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಕಾನೂನು, ಬಾಲ್ಯ ವಿವಾಹದಿಂದಾಗಿ ಹುಟ್ಟಿದ ಎಲ್ಲ ಮಕ್ಕಳನ್ನು ಧರ್ಮಜ ಮಕ್ಕಳನ್ನಾಗಿ ಪರಿಗಣಿಸುತ್ತದೆ.
ಮಕ್ಕಳ ಪಾಲನೆ-ಪೋಷಣೆ:
ಮಕ್ಕಳ ಪಾಲನೆ-ಪೋಷಣೆಯ ಹೊಣೆ ಯಾರದ್ದಾಗಿರಬೇಕು ಎಂಬುದನ್ನು ಜಿಲ್ಲಾ ನ್ಯಾಯಾಲಯವು ಮದುವೆ ರದ್ದು ಮಾಡುವ ಮನವಿಯನ್ನು ಕೇಳುವ ಸಮಯದಲ್ಲಿ ತೀರ್ಮಾನಿಸುತ್ತದೆ. ಈ ನಿರ್ಣಯವನ್ನು ಮಾಡುವ ಹೊತ್ತಿನಲ್ಲಿ ನ್ಯಾಯಾಲಯವು ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬಹುದು:
- ನ್ಯಾಯಾಲಯವು ಪಾಲನೆ-ಪೋಷಣೆಯ ನಿರ್ಣಯವನ್ನು ಮಾಡುತ್ತಿರುವಾಗ ಅತಿಮುಖ್ಯವಾಗಿ ಮಗುವಿನ ಕಲ್ಯಾಣ ಮತ್ತು ಯೋಗಕ್ಷೇಮಕ್ಕೆ ಒತ್ತು ನೀಡುತ್ತದೆ.
- ಮಗುವಿನ ಯೋಗಕ್ಷೇಮಕ್ಕೆ ಸರಿ ಎನಿಸಿದರೆ ವಿರುದ್ಧ ಪಕ್ಷದವರಿಗೆ ಮಗುವನ್ನುಆಗಾಗ್ಗೆ ಭೇಟಿಯಾಗಲು ಅನುಮತಿ ನೀಡುತ್ತದೆ.
- ಜಿಲ್ಲಾ ನ್ಯಾಯಾಲಯವು ಗಂಡನಿಗೆ, ಅಥವಾ ಅವನ ತಂದೆ-ತಾಯಿ/ಪೋಷಕರಿಗೆ (ಗಂಡ ಅಪ್ರಾಪ್ತ ವಯಸ್ಕನಿದ್ದಾಗ), ಅವನ ಹೆಂಡತಿಯಾದ ಹುಡುಗಿಗೆ ಜೀವನಾಂಶ ಕೊಡುವುದಾಗಿ ಆದೇಶಿಸಬಹುದು.
೧೮ರ ಕೆಳಗಿನ ಹೆಣ್ಣು ಮಕ್ಕಳು ಮದುವೆಯಾದಲ್ಲಿ, ಹಾಗು ಅವರು ಮದುವೆಯನ್ನು ರದ್ದು ಮಾಡುವುದಾಗಿ ಮನವಿ ಸಲ್ಲಿಸಿದಲ್ಲಿ, ಅವರಿಗೆ ಕಾನೂನು ರಕ್ಷಣೆ ನೀಡುತ್ತದೆ.
ಜೀವನಾಂಶ ಕೊಡುವುದು:
ಅವಳ ಗಂಡ, ಅಥವಾ ಗಂಡನ ತಂದೆ-ತಾಯಿ/ಪೋಷಕರು (ಗಂಡ ಅಲ್ಪವಯಸ್ಕನಿದ್ದಾಗ) ಅವಳಿಗೆ ನಿಗದಿ ಪಡಿಸಿದ ಹಣವನ್ನು ಜೀವನಾಂಶವಾಗಿ ಕೊಡುವುದಾಗಿ ಜಿಲ್ಲಾ ನ್ಯಾಯಾಲಯವು ನಿರ್ದೇಶಿಸಬಹುದು.
ಈ ಜೀವನಾಂಶದ ಮೊತ್ತವನ್ನು ನಿರ್ಧರಿಸುವಾಗ, ಆಕೆಯ ಜೀವನಶೈಲಿ ಮತ್ತು ಜೀವನಾಂಶ ಕೊಡುವವರ ಆದಾಯವನ್ನು ನ್ಯಾಯಾಲಯವು ಪರಿಗಣಿಸುತ್ತದೆ. ಆ ಹುಡುಗಿ ಪುನರ್ವಿವಾಹವಾಗುವ ತನಕ ಈ ಜೀವನಾಂಶ ಕೊಡಬೇಕಾಗುತ್ತದೆ.
ನಿವಾಸಕ್ಕಾಗಿ ವ್ಯವಸ್ಥೆ:
ಆ ಹುಡುಗಿ ಪುನರ್ವಿವಾಹವಾಗುವವರೆಗೆ ಅವಳಿಗೆ ಸೂಕ್ತ ನಿವಾಸದ ವ್ಯವಸ್ಥೆ ಮಾಡಬೇಕೆಂದೂ ಸಹ ನ್ಯಾಯಾಲಯವು ನಿರ್ದೇಶಿಸಬಹುದು.