ಮಲ ಹೊರುವವರು ಅಂದರೆ ಯಾರು?

ಅನೈರ್ಮಲ್ಯವಾದ ಶೌಚಾಲಯಗಳಿಂದ, ತೆರೆದ ಚರಂಡಿಯಿಂದ, ತಗ್ಗಿನಿಂದ, ಅಥವಾ ರೈಲು ಹಳಿಗಳಿಂದ ಕೊಳೆಯದ ಮಾನವ ತ್ಯಾಜ್ಯವನ್ನು ತೆಗೆಯಲು ಉದ್ಯೋಗಕ್ಕಿಟ್ಟುಕೊಂಡ ವ್ಯಕ್ತಿಗಳನ್ನು ಮಲ ಹೊರುವವರು ಎನ್ನುತ್ತಾರೆ. ಇಂತಹ ವ್ಯಕ್ತಿಗಳು ಯಾರಿಂದಾದರೂ ಕೆಲಸಕ್ಕಿಟ್ಟುಕೊಂಡಿರಬಹುದು – ಅವರ ಹಳ್ಳಿಯ ಯಾವುದೇ ವ್ಯಕ್ತಿ, ಸಂಸ್ಥೆ, ಅಥವಾ ಗುತ್ತಿಗೆದಾರ. ಅವರು ಶಾಶ್ವತವಾದ ನಿಯಮಿತ ಉದ್ಯೋಗದಲ್ಲಿದ್ದಾರೋ, ಅಥವಾ ತಾತ್ಕಾಲಿಕ ಒಪ್ಪಂದದ ಮೇರೆಗೆ ಇಂತಹ ಕೆಲಸ ಮಾಡುತ್ತಿದ್ದಾರೋ ಎಂಬುದು ಮುಖ್ಯವಲ್ಲ.

ಸೂಕ್ತವಾದ ರಕ್ಷಣಾ ಕವಚದ ಜೊತೆಗೆ ಯಾವುದೇ ವ್ಯಕ್ತಿಯನ್ನು ಮಾನವ ತ್ಯಾಜ್ಯವನ್ನು ಸ್ವಚ್ಛಮಾಡಲು ಕೆಲಸಕ್ಕಿಟ್ಟುಕೊಂಡಿದ್ದಲ್ಲಿ ಅವರಿಗೆ “ಮಲ ಹೊರುವವರು” ಎಂದು ಪರಿಗಣಿಸಲಾಗುವುದಿಲ್ಲ.

ಸಫಾಯಿ ಕರ್ಮಚಾರಿಗಳು:

“ಸಫಾಯಿ ಕರ್ಮಚಾರಿಗಳು” (ಸ್ವಚ್ಛತಾ ಕಾರ್ಮಿಕರು) ಎಂಬ ಪ್ರತ್ಯೇಕ ಗುಂಪಿನ ಕಾರ್ಮಿಕರಿಗೆ ಕೆಲವು ಬಾರಿ “ಮಲ ಹೊರುವವರು” ಎಂದು ಕರೆಯುವುದುಂಟು. ಆದರೆ ಈ ಗುಂಪಿಗೆ ಸೇರಿದವರು ಪುರಸಭೆಗಳಲ್ಲಿ, ಸರ್ಕಾರದಲ್ಲಿ, ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಸ ಗುಡಿಸುವವರು/ ಸ್ವಚ್ಛತಾ ಕಾರ್ಮಿಕರಾಗಿರುತ್ತಾರೆ.

ಅನೈರ್ಮಲ್ಯವಾದ ಶೌಚಾಲಯ ಕಟ್ಟುವುದು ಅಕ್ರಮವೇ?

ಕೊಳೆಯುವ ಮುನ್ನವೇ ಮಾನವ ತ್ಯಾಜ್ಯವನ್ನು ವ್ಯಕ್ತಿಗಳು ಕೈಯ್ಯಾರೆ ತೆಗೆಯುವಂತಹ ಅನೈರ್ಮಲ್ಯವಾದ ಶೌಚಾಲಯವನ್ನು ಯಾವುದೇ ವ್ಯಕ್ತಿ, ಪುರಸಭೆ, ಪಂಚಾಯತಿ, ಅಥವಾ ಸಂಸ್ಥೆ ಕಟ್ಟಿಸುವುದು ಅಕ್ರಮವಾಗಿದೆ.

ಸ್ಥಳೀಯ ಅಧಿಕಾರಿಗಳು ತಮ್ಮ ಕ್ಷೇತ್ರದಲ್ಲಿನ ಅನೈರ್ಮಲ್ಯವಾದ ಶೌಚಾಲಯಗಳ ಸಮೀಕ್ಷೆ ನಡೆಸಿ ಗುರುತಿಸಲಾದ ಎಲ್ಲ ಶೌಚಾಲಯಗಳ ಪಟ್ಟಿಯನ್ನು ಪ್ರಕಟಿಸಬೇಕು. ಶುಚಿಯಾದ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸುವುದು ಮತ್ತು ಅವುಗಳ ಕಾರ್ಯ ನಿರ್ವಹಣೆ, ಮತ್ತು ನೈರ್ಮಲ್ಯವನ್ನು ಕಾಪಾಡುವುದು ಸ್ಥಳೀಯ ಅಧಿಕಾರಿಗಳ ಕರ್ತವ್ಯವಾಗಿದೆ.

ಯಾರಾದರೂ ಮೊದಲ ಬಾರಿ ಅನೈರ್ಮಲ್ಯವಾದ ಶೌಚಾಲಯವನ್ನು ಕಟ್ಟಿಸಿದ್ದಲ್ಲಿ, ಅಥವಾ ಇಂತಹ ಶೌಚಾಲಯವನ್ನು ಕಟ್ಟಿಸಲು ಬೇರೆಯವರನ್ನು ತೊಡಗಿಸಿಕೊಂಡಿದ್ದಲ್ಲಿ/ ಉದ್ಯೋಗಕ್ಕಿಟ್ಟುಕೊಂಡಿದ್ದಲ್ಲಿ, ಅವರಿಗೆ ಗರಿಷ್ಟ ಒಂದು ವರ್ಷದ ಸೆರೆಮನೆ ವಾಸ ಮತ್ತು ೫೦೦೦೦ ರೂಪಾಯಿಗಳ ವರೆಗೆ ಜುಲ್ಮಾನೆಯ ದಂಡ ವಿಧಿಸಲಾಗುವುದು. ಎರಡನೆಯ ಬಾರಿ ಈ ತಪ್ಪು ಮಾಡಿದ್ದಲ್ಲಿ ಅವರಿಗೆ ಶಿಕ್ಷೆ- ಗರಿಷ್ಟ ೨ ವರ್ಷಗಳ ಸೆರೆಮನೆ ವಾಸ ಮತ್ತು ೧ ಲಕ್ಷ ರೂಪಾಯಿಗಳ ವರೆಗಿನ ದಂಡ.

ಅನೈರ್ಮಲ್ಯವಾದ ಶೌಚಾಲಯವನ್ನು ಪರಿವರ್ತಿಸುವುದು ಅಥವಾ ಕೆಡುವುದರ ಜವಾಬ್ದಾರಿ ಯಾರದ್ದು?

ಅನೈರ್ಮಲ್ಯವಾದ ಶೌಚಾಲಯವಿರುವ ಜಾಗದಲ್ಲಿ ವಾಸ ಮಾಡುತ್ತಿರುವ ವ್ಯಕ್ತಿಗಳ ಜವಾಬ್ದಾರಿ ಅದನ್ನು ಪರಿವರ್ತಿಸುವುದು ಅಥವಾ ನೆಲಸಮ ಮಾಡುವುದು. ಅನೈರ್ಮಲ್ಯವಾದ ಶೌಚಾಲಯವಿರುವ ಜಾಗ/ಸ್ವತ್ತಿನ ಮಾಲೀಕರು ಒಬ್ಬರಿಗಿಂತ ಹೆಚ್ಚುಇದ್ದಲ್ಲಿ, ಅದನ್ನು ಪರಿವರ್ತಿಸುವುದು ಅಥವಾ ನೆಲಸಮಮಾಡುವ ಖರ್ಚನ್ನು ಎಲ್ಲ ಮಾಲೀಕರು ಸಮನಾಗಿ ಹಂಚಿಕೊಳ್ಳಬೇಕಾಗುತ್ತದೆ.

ರಾಜ್ಯ ಸರ್ಕಾರವು ಪರಿವರ್ತನೆಯ ಪ್ರಕ್ರಿಯೆಯಲ್ಲಿ ಶೌಚಾಲಯವಿರುವ ಜಾಗದಲ್ಲಿ ವಾಸ ಮಾಡುತ್ತಿರುವವರ ಸಹಾಯ ಮಾಡಬಹುದು. ಆದರೆ ಸರ್ಕಾರ ಸಹಾಯ ಮಾಡುತ್ತಿಲ್ಲ ಎಂಬ ಕಾರಣವನ್ನು ನೆಪಮಾಡಿಕೊಂಡು ಇಂತಹ ಶೌಚಾಲಯಗಳನ್ನು ೯ ತಿಂಗಳಿಗಿಂತ ಹೆಚ್ಚಿನವರೆಗೆ ಉಪಯೋಗಿಸಲು ಕಾನೂನಿನಡಿ ಅನುಮತಿ ಇಲ್ಲ. ಒಂದು ವೇಳೆ ೯ ತಿಂಗಳುಗಳ ಒಳಗೆ ಇಂತಹ ಅನೈರ್ಮಲ್ಯವಾದ ಶೌಚಾಲಯವನ್ನು ಅಲ್ಲಿ ವಾಸಿಸುವರು ಪರಿವರ್ತಿಸದಿದ್ದರೆ/ನೆಲಸಮ ಮಾಡದಿದ್ದರೆ, ೨೧ ದಿನಗಳ ಸೂಚನೆಯನ್ನು ಕೊಟ್ಟು ಸ್ಥಳೀಯ ಅಧಿಕಾರಿಗಳು ಈ ಕಾರ್ಯವನ್ನು ತಮ್ಮ ಕಯ್ಯಾರೆ ಮಾಡಬೇಕಾಗುತ್ತದೆ. ಹೀಗೆ ಮಾಡಿದ ನಂತರ ಬಂಡ ಖರ್ಚನ್ನು ಅಲ್ಲಿ ವಾಸಿಸುವರಿಂದ ವಸೂಲಿ ಮಾಡಬಹುದು.

ಮೊದಲ ಬಾರಿ ಕಾನೂನನ್ನು ಉಲ್ಲಂಘಿಸಿದವರಿಗೆ ಗರಿಷ್ಟ ಒಂದು ವರ್ಷದ ಸೆರೆಮನೆ ವಾಸ ಮತ್ತು ಗರಿಷ್ಟ ೫೦೦೦೦ ರೂಪಾಯಿಗಳಷ್ಟು ಜುಲ್ಮಾನೆಯ ದಂಡ ವಿಧಿಸಲಾಗುತ್ತದೆ. ಎರಡನೆಯ ಬಾರಿ ತಪ್ಪು ಮಾಡಿದವರಿಗೆ ಗರಿಷ್ಟ ೨ ವರ್ಷಗಳ ಸೆರೆಮನೆ ವಾಸ ಮತ್ತು ಗರಿಷ್ಟ ೧೦೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸಲಾಗುತ್ತದೆ.

ಮಲ ಹೊರುವವರನ್ನು ಕೆಲಸಕ್ಕಿಟ್ಟುಕೊಳ್ಳುವುದು ಕಾನೂನಾತ್ಮಕವಾಗಿ ಮಾನ್ಯವೇ?

ಇಲ್ಲ. ಭಾರತದಲ್ಲಿ ವ್ಯಕ್ತಿಗಳನ್ನು ಮಲ ಹೊರುವವರನ್ನಾಗಿ ಕೆಲಸಕ್ಕಿಟ್ಟುಕೊಳ್ಳುವುದು ಅಕ್ರಮವಾಗಿದೆ. ಹಾಗು, ಯಾರಾದರೂ (ಪುರ ಸಭೆಗಳು ಮತ್ತು ಪಂಚಾಯತಿಗಳನ್ನು ಸೇರಿಸಿ) ಅಗತ್ಯವಾದ ರಕ್ಷಣಾತ್ಮಕ ಕವಚಗಳಿಲ್ಲದೆ ವ್ಯಕ್ತಿಗಳನ್ನು ಒಳಚರಂಡಿಗಳನ್ನು ಅಥವಾ ಸೆಪ್ಟಿಕ್ ಟ್ಯಾಂಕ್ ಗಳನ್ನೂ ಸ್ವಚ್ಛಗೊಳಿಸಲು ಕೆಲಸಕ್ಕಿಟ್ಟುಕೊಂಡರೆ, ಅದು ಕೂಡ ಕಾನೂನು ಬಾಹಿರವಾಗಿದೆ.

ಯಾರಾದರೂ ಹೀಗೆ ಮಾಡಿದರೆ ಕೆಳಗಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ:

ಜನರನ್ನು ಮಲ ಹೊರುವವರನ್ನಾಗಿ ಕೆಲಸಕ್ಕಿಟ್ಟುಕೊಳ್ಳುವುದು:

ಯಾರಾದರೂ ಮೊದಲ ಬಾರಿ ಜನರನ್ನು ಮಲ ಹೊರುವವರನ್ನಾಗಿ ಕೆಲಸಕ್ಕಿಟ್ಟುಕೊಂಡಲ್ಲಿ, ಅವರಿಗೆ ಗರಿಷ್ಟ ಒಂದು ವರ್ಷದ ಸೆರೆಮನೆ ವಾಸ ಮತ್ತು ಗರಿಷ್ಟ ೫೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸಲಾಗುತ್ತದೆ. ಇನ್ನು, ಎರಡನೇ ಬಾರಿ ಇದೆ ತಪ್ಪನ್ನು ಮಾಡಿದ್ದಲ್ಲಿ, ಅವರಿಗೆ ಗರಿಷ್ಟ ೨ ವರ್ಷಗಳ ಸೆರೆಮನೆ ವಾಸ ಮತ್ತು ಗರಿಷ್ಟ ೧೦೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸಲಾಗುವುದು.

ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕನ್ನು ಅಪಾಯಕಾರಿಯಾಗಿ ಸ್ವಚ್ಛಮಾಡುವುದಕ್ಕಾಗಿ ಜನರನ್ನು ಕೆಲಸಕ್ಕಿಟ್ಟುಕೊಳ್ಳುವುದು:

ಯಾರಾದರೂ ಮೊದಲ ಬಾರಿ ಜನರನ್ನು ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕನ್ನು ಅಪಾಯಕಾರಿಯಾಗಿ ಸ್ವಚ್ಛಮಾಡುವುದಕ್ಕಾಗಿ ಕೆಲಸಕ್ಕಿಟ್ಟುಕೊಂಡಿದ್ದಲ್ಲಿ, ಅವರಿಗೆ ಗರಿಷ್ಟ ೨ ವರ್ಷಗಳ ಸೆರೆಮನೆ ವಾಸ ಮತ್ತು ಗರಿಷ್ಟ ೨೦೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸಲಾಗುತ್ತದೆ. ಇದೆ ಅಪರಾಧವನ್ನು ಎರಡನೆಯ ಬಾರಿ ಮಾಡಿದ್ದಲ್ಲಿ, ಗರಿಷ್ಟ ೫ ವರ್ಷದ ಸೆರೆಮನೆ ವಾಸ ಮತ್ತು ಗರಿಷ್ಟ ೫೦೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸಲಾಗುತ್ತದೆ.

ಒಂದು ಕಂಪನಿ/ಸಂಸ್ಥೆ ಜನರನ್ನು ಮಲ ಹೊರುವವರನ್ನಾಗಿ ಕೆಲಸಕ್ಕಿಟ್ಟುಕೊಳ್ಳುವುದು:

ಒಂದು ಕಂಪನಿ/ಸಂಸ್ಥೆ ಮಲ ಹೊರುವವರನ್ನು ಕೆಲಸಕ್ಕಿಟ್ಟುಕೊಂಡಂತ ತಪ್ಪು ಮಾಡಿದ್ದಲ್ಲಿ, ಅದನ್ನು ಮತ್ತು ಅದರ ಎಲ್ಲ ಉದ್ಯೋಗಿಗಳನ್ನು ತಪ್ಪಿತಸ್ಥರಾಗಿ ಘೋಷಿಸಲಾಗುತ್ತದೆ. ಇಂತಹ ಉದ್ಯೋಗಿಗಳು – ನಿರ್ದೇಶಕರು, ವ್ಯವಸ್ಥಾಪಕರು, ಕಾರ್ಯದರ್ಶಿಗಳು, ಅಥವಾ ಕಂಪನಿ/ಸಂಸ್ಥೆಯ ಇನ್ನಿತರ ಅಧಿಕಾರಿಗಳಾಗಿರಬಹುದು.

ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಜಾಲತಾಣಕ್ಕೆ ಭೇಟಿ ನೀಡಿ.

ಮಲ ಹೊರುವವರ ಪುನರ್ವಸತಿ ಹೇಗೆ ಮಾಡಬಹುದು?

ನಗರ ಮತ್ತು ಗ್ರಾಮ ಪ್ರದೇಶಗಳಲ್ಲಿ, ಪುರಸಭೆ ಅಥವಾ ಪಂಚಾಯತಿಯ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಮಲ ಹೊರುವ ಪದ್ಧತಿ ಆಚರಣೆಯಲ್ಲಿದೆ ಎಂದು ಅನುಮಾನ ಬಂದಲ್ಲಿ, ಸಮೀಕ್ಷೆ ನಡೆಸಿ, ಮಲ ಹೊರುವವರ ಪಟ್ಟಿಯನ್ನು ತಯಾರಿಸಬೇಕು. ಈ ಪಟ್ಟಿಯಲ್ಲಿರುವವರ ಪುನರ್ವಸತಿಯ ಜವಾಬ್ದಾರಿ ಸಂಬಂಧಪಟ್ಟ ಪುರಸಭೆ ಅಥವಾ ಪಂಚಾಯತಿಯದ್ದಾಗಿದೆ. ಕಾನೂನುಬದ್ಧವಾಗಿ ಮಲ ಹೊರುವವರ ಪುನರ್ವಸತಿ ಮಾಡಿಸುವುದು ಆ ಜಿಲ್ಲೆಯ ಜಿಲ್ಲಾಧಿಕಾರಿಗಳ ಕರ್ತವ್ಯವಾಗಿದೆ. ಜಿಲ್ಲಾಧಿಕಾರಿಗಳು ಅಥವಾ ರಾಜ್ಯ ಸರ್ಕಾರವು ಕೆಲ ಜವಾಬ್ದಾರಿಗಳನ್ನು ಪುರಸಭೆಯ ಕೆಳಮಟ್ಟದ ಅಧಿಕಾರಿಗಳಿಗೆ ನಿಯೋಜಿಸಬಹುದು. ಪುನರ್ವಸತಿಯ ಪ್ರಕ್ರಿಯೆ ಕೆಳಕಂಡಂತಿದೆ:

  • ತಕ್ಷಣದ ಸಹಾಯ: ೧ ತಿಂಗಳೊಳಗೆ ಭಾವಚಿತ್ರವಿರುವ ಗುರುತಿನ ಚೀಟಿ ಮತ್ತು ಹಣ ಕೊಡುವುದು.
  • ಮಕ್ಕಳ ಶಿಕ್ಷಣ: ಅವರ ಮಕ್ಕಳಿಗೆ ಸರ್ಕಾರಿ ವಿದ್ಯಾರ್ಥಿವೇತನ ಕೊಡಿಸುವುದು
  • ಆಸ್ತಿ: ಜಮೀನನ್ನು ಒದಗಿಸಿ, ಆ ಜಮೀನಿನ ಮೇಲೆ ಮನೆ ಕಟ್ಟಿಸುವುದಕ್ಕಾಗಿ, ಅಥವಾ ಈಗಾಗಲೇ ಕಟ್ಟಿದ ಮನೆಯನ್ನು ಕೊಳ್ಳುವುದಕ್ಕೆ ದುಡ್ಡು ಕೊಡಲು ಸರ್ಕಾರ ಯೋಜನೆಗಳನ್ನು ಬಿಡುಗಡೆ ಮಾಡಬೇಕು
  • ಇನ್ನಿತರ ಉದ್ಯೋಗಗಳಿಗೆ ತರಬೇತಿ ನೀಡುವುದು: ಇನ್ನಿತರ ಕೌಶಲ್ಯಗಳ ತರಬೇತಿಯನ್ನು ಸಂಬಂಧಪಟ್ಟ ವ್ಯಕ್ತಿ ಅಥವಾ ಅವರ ಪರಿವಾರದ ಇನ್ನೋರ್ವ ವಯಸ್ಕ ಸದಸ್ಯರಿಗೆ ನೀಡುವುದು
  • ಸಾಲ: ಮಲ ಹೊರುವವರು ಅಥವಾ ಅವರ ಕುಟುಂಬದ ವಯಸ್ಕ ಸದಸ್ಯರು ಇನ್ನೋರ್ವ ಉದ್ಯೋಗ ಕ್ಷೇತ್ರಕ್ಕೆ ಕಾಲಿಡಲು ಸಾಹಾಯವಾಗುವಂತೆ ಸಹಾಯಧನ ಅಥವಾ ಕಡಿಮೆ ಬಡ್ಡಿಯ ಸಾಲಗಳನ್ನು ಒದಗಿಸುವಂತಹ ಯೋಜನೆಗಳನ್ನು ಸರ್ಕಾರ ಹೊರತರಬೇಕು
  • ಇನ್ನಿತರ ಸಹಾಯ: ಬೇರೆ ಯಾವ ರೀತಿಯ ಕಾನೂನಾತ್ಮಕ ಅಥವಾ ಇನ್ನಿತರ ಸಹಾಯವನ್ನೂ ಮಾಡಲು ಸರ್ಕಾರ ಮುಂದೆ ಬರಬಹುದು
  • ಸರ್ಕಾರಿ ಯೋಜನೆಗಳು: “ಮಲ ಹೊರುವವರ ಪುನರ್ವಸತಿಗಾಗಿ ಸ್ವಯಂ ಉದ್ಯೋಗ ಯೋಜನೆ” ಎಂಬ ಯೋಜನೆಯನ್ನು ಕೇಂದ್ರ ಸರ್ಕಾರಸ್ಥಾಪಿಸಿದೆ. ಹಾಗು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ರಾಜ್ಯ ಮಟ್ಟದ ಸಂಪರ್ಕ ಸಂಸ್ಥೆಗಳ ಮೂಲಕ ಅನೇಕ ಸಾಲ ಯೋಜನೆಗಳನ್ನು ಹೊರತಂದಿದೆ.

 

ಸಫಾಯಿ ಕರ್ಮಚಾರಿಗಳ ಪರ ದೂರು ಹೇಗೆ ಸಲ್ಲಿಸಬೇಕು?

ಸಫಾಯಿ ಕರ್ಮಚಾರಿಗಳ ಕಾನೂನಿನ ಉಲ್ಲಂಘನೆಯ ಘಟನೆಗಳ ಬಗ್ಗೆ ನಿಮಗೆ ಅರಿವಿದ್ದಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ನೀವು ದೂರು ನೀಡಬಹುದು. ಈ ಆಯೋಗ ದೂರುಗಳ ಮೇಲೆ ವಿಚಾರಣೆ ನಡೆಸಿ, ಮುಂದಿನ ಕಾರ್ಯಾಚರಣೆಯ ಶಿಫಾರಸ್ಸಿನ ಜೊತೆ, ಪುರಸಭೆ ಮತ್ತು ಪಂಚಾಯತಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತದೆ.