ಆನ್ ಲೈನ್ ಬ್ಯಾಂಕ್ ವಂಚನೆಯಿಂದ ಸುರಕ್ಷಿತವಾಗಿರಲು ಗ್ರಾಹಕರು ಹೊಂದಿರುವ ಹಕ್ಕು

ಆನ್ ಲೈನ್ ಬ್ಯಾಂಕ್ ವಂಚನೆಯಿಂದ ರಕ್ಷಿಸಿಕೊಳ್ಳಲು ಯಾವುದೇ ಬ್ಯಾಂಕಿನ ಗ್ರಾಹಕರು ಈ ಕೆಳಕಂಡ ಹಕ್ಕುಗಳನ್ನು ಹೊಂದಿರುತ್ತಾರೆ.

  • ನಿಮ್ಮ ಬ್ಯಾಂಕ್ ಖಾತೆ ಮೂಲಕ ಜರುಗುವ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಎಸ್ಎಂಎಸ್ ಪಡೆಯಲು ಮತ್ತು ಈ ಉದ್ದೇಶಕ್ಕಾಗಿ ರಿಜಿಸ್ಟರ್ ಮಾಡಿಕೊಳ್ಳುವ ಹಕ್ಕು.

 

  • ನಿಮ್ಮ ಬ್ಯಾಂಕ್ ಖಾತೆ ಮೂಲಕ ಜರುಗುವ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಇ-ಮೇಲ್ ಅಲರ್ಟ್ ಪಡೆಯಲು ಮತ್ತು ಈ ಉದ್ದೇಶಕ್ಕಾಗಿ ರಿಜಿಸ್ಟರ್ ಮಾಡಿಕೊಳ್ಳುವ ಹಕ್ಕು.

ಬ್ಯಾಂಕಿನಲ್ಲಿ ದೂರು ದಾಖಲಿಸುವುದು

ಸಾಮಾನ್ಯವಾಗಿ ಎಲ್ಲ ಬ್ಯಾಂಕುಗಳು ಇಂತಹ ಉದ್ದೇಶಕ್ಕಾಗಿಯೇ ಮೀಸಲಾದ ಸಿಬ್ಬಂದಿಯನ್ನು ಹೊಂದಿರುತ್ತವೆ. ನಿಮ್ಮ ಡೆಬಿಟ್ / ಕ್ರೆಡಿಟ್ ಕಾರ್ಡಿನ ಹಿಂಭಾಗದಲ್ಲಿ ಹಾಗೂ ಬ್ಯಾಂಕಿನ ವೆಬ್ ಸೈಟಿನಲ್ಲಿ ಈ ಸಿಬ್ಬಂದಿಯ ಸಂಪರ್ಕ ಮಾಹಿತಿ ಲಭ್ಯವಿರುತ್ತದೆ. ಹೆಲ್ಪ್ ಡೆಸ್ಕ್ ಗಳ ದೂರವಾಣಿ ಸಂಖ್ಯೆಗಳನ್ನು ಎಟಿಎಂ ಯಂತ್ರದ ಮೇಲೆಯೂ ನಮೂದಿಸಲಾಗಿರುತ್ತದೆ. ನೀವು ಆನ್ ಲೈನ್ ವ್ಯವಹಾರಗಳಲ್ಲಿ ಹಣ ಕಳೆದುಕೊಂಡಲ್ಲಿ ತಕ್ಷಣವೇ ನಿಮ್ಮ ಬ್ಯಾಂಕನ್ನು ದೂರವಾಣಿ (ಆದ್ಯತೆ ಮೇರೆಗೆ) ಅಥವಾ ಇ-ಮೇಲ್ ಮೂಲಕ ಸಂಪರ್ಕಿಸತಕ್ಕದ್ದು. ನಿಮ್ಮ ದೂರು ಸಂಖ್ಯೆಯನ್ನು ಬರೆದಿಟ್ಟುಕೊಳ್ಳಲು ಮರೆಯಬೇಡಿ. ದೂರಿನ ಕುರಿತು ಯಾವುದೇ ಪತ್ರ ವ್ಯವಹಾರದಲ್ಲಿ ಈ ಸಂಖ್ಯೆಯನ್ನು ನೀವು ತಪ್ಪದೇ ನಮೂದಿಸತಕ್ಕದ್ದು. ನಿಮ್ಮ ಇ-ಮೇಲ್ ಸೀಕೃತಿಯ ಬಗ್ಗೆ ಬ್ಯಾಂಕ್ ನಿಮಗೆ ದೃಢಪಡಿಸಬೇಕು.

ಬ್ಯಾಂಕಿಂಗ್ ಕೋಡ್ಸ್ ಅಂಡ್ ಸ್ಟಾಂಡರ್ಡ್ಸ್ ಬೋರ್ಡ್ ಆಫ್ ಇಂಡಿಯಾ ಜಾರಿಗೆ ತಂದಿರುವ ಗ್ರಾಹಕ ಬದ್ಧತೆ ಸಂಹಿತೆ ಪ್ರಕಾರ ಗ್ರಾಹಕ ದೂರುಗಳನ್ನು  ಪರಿಹರಿಸಲು ನಿಯುಕ್ತಿಗೊಂಡಿರುವ ಅಧಿಕಾರಿಯ ಹೆಸರನ್ನು ಬ್ಯಾಂಕಿನ ಶಾಖೆಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.

ಶಾಖೆಯ ಮಟ್ಟದಲ್ಲಿ ನಿಮ್ಮ ದೂರು ಪರಿಹಾರವಾಗದಿದ್ದಲ್ಲಿ ಬ್ಯಾಂಕಿನ ರೀಜನಲ್ ಅಥವಾ ಜೋನಲ್ ಮ್ಯಾನೇಜರ್ ಅಥವಾ ಪ್ರಧಾನ ನೋಡಲ್ ಆಫೀಸರ್ ರವರನ್ನು ಶಾಖೆಯಲ್ಲಿ ಪ್ರದರ್ಶಿಸಿರುವ ವಿಳಾಸದಲ್ಲಿ ಸಂಪರ್ಕಿಸಿರಿ. ಸಾಮಾನ್ಯವಾಗಿ, ನಿಮ್ಮ ದೂರನ್ನು ಸ್ವೀಕರಿಸಿದ 30 ದಿನಗಳೊಳಗೆ ಬ್ಯಾಂಕ್ ತನ್ನ ಅಂತಿಮ ಉತ್ತರ ನೀಡುತ್ತದೆ ಅಥವಾ ದೂರನ್ನು ವಿಚಾರಣೆ ಮಾಡಲು ಹೆಚ್ಚಿನ ಕಾಲಾವಕಾಶ ಅಗತ್ಯವಿದ್ದಲ್ಲಿ ಅದಕ್ಕೆ ಕಾರಣಗಳನ್ನು ವಿವರಿಸುತ್ತದೆ. ಬ್ಯಾಂಕಿನ ಅಂತಿಮ ಉತ್ತರ ನಿಮಗೆ ತೃಪ್ತಿದಾಯಕವಾಗಿರದಿದ್ದಲ್ಲಿ ನೀವು ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನೂ ಸಹ ಬ್ಯಾಂಕ್ ನಿಮಗೆ ತಿಳಿಸುತ್ತದೆ.

ಬ್ಯಾಂಕಿಂಗ್ ಒಂಬಡ್ಸ್ಮನ್ಗೆ ದೂರು ಸಲ್ಲಿಸುವುದು

ಬ್ಯಾಂಕ್ ನಿಮಗೆ ನೀಡಿದ ಪರಿಹಾರ ತೃಪ್ತಿಕರವಾಗಿ ಕಂಡುಬರದಿದ್ದಲ್ಲಿ ಮತ್ತು ನೀವು ದೂರಿನ  ಕುರಿತು ಹೆಚ್ಚಿನ ವಿಚಾರಣೆಯನ್ನು ಬಯಸಿದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿಸಿರುವ ಬ್ಯಾಂಕಿಂಗ್ ಒಂಬಡ್ಸ್ಮನ್ ಮುಂದೆ ದೂರು ಸಲ್ಲಿಸಲು ಅವಕಾಶವಿದೆ. ಈ ಒಂಬಡ್ಸ್ಮನ್ ವ್ಯವಸ್ಥೆಯನ್ನು ಬ್ಯಾಂಕಿಂಗ್ ಒಂಬಡ್ಸ್ಮನ್ ಯೋಜನೆ, 2006 ರ ಅಡಿಯಲ್ಲಿ ಸ್ಥಾಪಿಸಲಾಗಿದೆ. ಯಾವುದೇ ಬ್ಯಾಂಕಿನ ಶಾಖೆಯು ಯಾವ ಒಂಬಡ್ಸ್ ಮನ್ ಅಧಿಕಾರವ್ಯಾಪ್ತಿಗೆ ಒಳಪಟ್ಟಿದೆ ಎಂಬ ಮಾಹಿತಿಯನ್ನು ಪ್ರತಿ ಬ್ಯಾಂಕ್ ತನ್ನ ಶಾಖೆಯಲ್ಲಿ ಪ್ರದರ್ಶಿಸತಕ್ಕದ್ದು. ಈ ಲಿಂಕ್ ಮೂಲಕ ಸಂಬಂಧಿಸಿದ ಬ್ಯಾಂಕಿಂಗ್ ಒಂಬಡ್ಸ್ಮನ್ ಗೆ ನಿಮ್ಮ ದೂರನ್ನು ಸಲ್ಲಿಸಬಹುದು.

ನಿಮ್ಮ ದೂರು ಪರಿಹಾರಕ್ಕಾಗಿ ಬ್ಯಾಂಕಿನ ಮಟ್ಟದಲ್ಲಿ ಲಭ್ಯವಿರುವ ಎಲ್ಲ ಮಾರ್ಗೋಪಾಯಗಳನ್ನು ಪ್ರಯತ್ನಿಸಿ ವಿಫಲರಾದ ನಂತರ ಮಾತ್ರವೇ ನೀವು ಬ್ಯಾಂಕಿಂಗ್ ಒಂಬಡ್ಸ್ಮನ್ ಮುಂದೆ ದೂರು ಸಲ್ಲಿಸಬಹುದಾಗಿದೆ. ನೀವು ನಿಮ್ಮ ಕುಂದುಕೊರತೆಗೆ ಸಂಬಂಧಿಸಿದಂತೆ ಯಾವುದಾದರೂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಲ್ಲಿ, ಉದಾಹರಣೆಗೆ, ಗ್ರಾಹಕ ದೂರು ಪರಿಹಾರ ವೇದಿಕೆ, ಸದರಿ ನ್ಯಾಯಾಲಯವು ಈ ಪ್ರಕರಣವನ್ನು ವಿಚಾರಣೆ ಮಾಡುತ್ತಿರುವ ಅವಧಿಯಲ್ಲಿ ನೀವು ಒಂಬಡ್ಸ್ಮನ್ ಮುಂದೆ ದೂರು ದಾಖಲಿಸುವಂತಿಲ್ಲ.

ನಿಮ್ಮ ದೂರಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಒಂಬಡ್ಸ್ಮನ್ ನೀಡಿದ ತೀರ್ಪು ನಿಮಗೆ ಸಮಾಧಾನ ನೀಡದಿದ್ದಲ್ಲಿ, ನೀವು ಮೇಲ್ಮನವಿ ಪ್ರಾಧಿಕಾರದ ಮೊರೆ ಹೋಗಬಹುದಾಗಿದೆ. ಬ್ಯಾಂಕಿಂಗ್ ಒಂಬಡ್ಸ್ಮನ್ ಯೋಜನೆಯನ್ನು ಜಾರಿಗೆ ತರುವ ಹೊಣೆಹೊತ್ತಿರುವ ಭಾರತೀಯ ರಿಸರ್ವ್ ಬ್ಯಾಂಕಿನ ಡೆಪ್ಯುಟಿ ಗವರ್ನರ್ ಈ ಮೇಲ್ಮನವಿ ಪ್ರಾಧಿಕಾರವಾಗಿ ಕಾರ್ಯ ನಿರ್ವಹಿಸುತ್ತಾರೆ. ಒಂಬಡ್ಸ್ಮನ್ ತೀರ್ಮಾನ ಹೊರಬಿದ್ದ 30 ದಿನಗಳ ಅವಧಿಯೊಳಗೆ ಮೇಲ್ಮನವಿಯನ್ನು ಸಲ್ಲಿಸತಕ್ಕದ್ದು.

ಆನ್ ಲೈನ್ ಬ್ಯಾಂಕ್ ವಂಚನೆ ತಡೆಯುವಲ್ಲಿ ಬ್ಯಾಂಕ್ ಗಳ ಹೊಣೆಗಾರಿಕೆ

ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನಡೆಸುವ ವಹಿವಾಟುಗಳಿಗೆ ಸಂಬಂಧಿಸಿದಂತೆ ಎಸ್ ಎಂ ಎಸ್ ಸೇವೆಗಳಿಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಬ್ಯಾಂಕುಗಳು ಗ್ರಾಹಕರಿಗೆ ತಿಳಿಸಬೇಕು. ಸೇವೆಗಳು ಲಭ್ಯವಿರುವ ಸಂದರ್ಭಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನಡೆಸುವ ವಹಿವಾಟುಗಳಿಗೆ ಸಂಬಂಧಿಸಿದಂತೆ ಇ-ಮೇಲ್ ಅಲರ್ಟ್ ಗಳಿಗೂ ಸಹ ನೋಂದಣಿ ಮಾಡಿಕೊಳ್ಳುವಂತೆ ಬ್ಯಾಂಕುಗಳು ಗ್ರಾಹಕರಿಗೆ ತಿಳಿಸಬೇಕು. 

ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಎಸ್ಎಂಎಸ್ ಅಲರ್ಟ್ ಗಳನ್ನು ಬ್ಯಾಂಕುಗಳು ಕಡ್ಡಾಯವಾಗಿ ಕಳುಹಿಸತಕ್ಕದ್ದು. ಇ-ಮೇಲ್ ಅಲರ್ಟ್ ಗಳು ಕಡ್ಡಾಯವೇನಲ್ಲ. ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಸೇವೆಗಳನ್ನು ಅನಧಿಕೃತವಾಗಿ ಬಳಕೆ ಮಾಡಿರುವುದರ ಕುರಿತು ದೂರುಗಳನ್ನು ನೀಡುವ ಸಲುವಾಗಿ/ಕಾರ್ಡ್ ಕಳವು ಇತ್ಯಾದಿ ಕುರಿತು ಗ್ರಾಹಕರು ಬ್ಯಾಂಕುಗಳಿಗೆ ವಿವಿಧ ಮಾಧ್ಯಮಗಳ ಮೂಲಕ (ಕನಿಷ್ಟ ಪಕ್ಷ ವೆಬ್ ಸೈಟ್, ಫೋನ್ ಬ್ಯಾಂಕಿಂಗ್, ಎಸ್ಎಂಎಸ್, ಇ-ಮೇಲ್, ಇಂನ್ಟ್ಂಟ್ ವಾಯ್ಸ್ ರೆಸ್ಪಾನ್ಸ್, ಪ್ರತ್ಯೇಕ ಉಚಿತ ಸಹಾಯವಾಣಿ, ಹೋಂ ಬ್ರಾಂಚ್ ಗೆ ಮಾಹಿತಿ ನೀಡುವುದು) ಮಾಹಿತಿ ನೀಡುವ ಸಲುವಾಗಿ 24×7 ಸೇವೆಗಳನ್ನು ಒದಗಿಸುವುದು. 

ಎಸ್ಎಂಎಸ್ ಮತ್ತು ಎ-ಮೇಲ್ ಅಲರ್ಟ್ ಗಳಿಗೆ ತಕ್ಷಣವೇ ಉತ್ತರಿಸುವ ಸೌಲಭ್ಯವನ್ನು ಬ್ಯಾಂಕುಗಳು ಗ್ರಾಹಕರಿಗೆ ಕಲ್ಪಿಸಬೇಕು. ಈ ಉದ್ದೇಶಕ್ಕಾಗಿಯೇ ಗ್ರಾಹಕರು ವೆಬ್ ಸೈಟ್ ನ್ನಾಗಲೀ ಇ-ಮೇಲ್ ವಿಳಾಸವನ್ನಾಗಲೀ ಹುಡುಕುವಂತಾಗಬಾರದು. ದೂರು ದಾಖಲಿಸಲು ನೇರ ಲಿಂಕನ್ನು ಬ್ಯಾಂಕುಗಳು ಒದಗಿಸತಕ್ಕದ್ದು ಮತ್ತು ಈ ಲಿಂಕಿನ ಹೋಂ ಪೇಜ್ ನಲ್ಲಿ ಅನಧಿಕೃತ ಎಲೆಕ್ಟ್ರಾನಿಕ್ ವಹಿವಾಟುಗಳ ಕುರಿತು ದೂರು ದಾಖಲಿಸಲು ಪ್ರತ್ಯೇಕವಾದ ಆಯ್ಕೆ ಇರತಕ್ಕದ್ದು. ಕಳವು/ವಂಚನೆ ಮಾಹಿತಿ ನೀಡುವ ವ್ಯವಸ್ಥೆಯು ಗ್ರಾಹಕರಿಂದ ದೂರು ದಾಖಲಾದ ತಕ್ಷಣವೇ ಪ್ರತಿಕ್ರಿಯೆ (ಸ್ವಯಂ ಚಾಲಿತ ಪ್ರತಿಕ್ರಿಯೆ ಸೇರಿದಂತೆ) ದೂರು ಸಂಖ್ಯೆಯೊಂದಿಗೆ ಗ್ರಾಹಕರಿಗೆ ಉತ್ತರಿಸುವ ವ್ಯವಸ್ಥೆ ಹೊಂದಿರತಕ್ಕದ್ದು. ಅಲರ್ಟ್ ಗಳು ತಲುಪಿದ ಸಮಯ ಮತ್ತು ದಿನಾಂಕವನ್ನು ಹಾಗು ಗ್ರಾಹಕನಿಂದ ಏನಾದರೂ ಪ್ರತಿಕ್ರಿಯೆ ಇದ್ದಲ್ಲಿ ಅದನ್ನೂ ಸಹ ಬ್ಯಾಂಕುಗಳು ದಾಖಲು ಮಾಡತಕ್ಕದ್ದು.

ಬ್ಯಾಂಕಿಗೆ ತಮ್ಮ ಮೊಬೈಲ್ ಸಂಖ್ಯೆ ಒದಗಿಸದ ಗ್ರಾಹಕರಿಗೆ ಎಟಿಎಂ ನಿಂದ ಹಣ ಪಡೆಯುವ ಸೌಲಭ್ಯ ಹೊರತುಪಡಿಸಿ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನಡೆಸಲಾಗುವ ಮತ್ತಾವುದೇ ಸೌಲಭ್ಯಗಳನ್ನು ನೀಡತಕ್ಕದ್ದಲ್ಲ. ಗ್ರಾಹಕರಿಂದ ಅನಧಿಕೃತ ವಹಿವಾಟಿನ ಮಾಹಿತಿ ಬರುತ್ತಿದ್ದಂತೆಯೇ ಬ್ಯಾಂಕುಗಳು ಆ ಖಾತೆಯಲ್ಲಿ 

ಮತ್ತಾವುದೇ ಅನಧಿಕೃತ ವಹಿವಾಟು ನಡೆಯದಂತೆ ತಡೆಯಲು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಆನ್ ಲೈನ್ ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ದೂರು ಸಲ್ಲಿಸುವುದು

ಪೋಲೀಸ್ ಸ್ಟೇಷನ್:

ಆನ್ ಲೈನ್ ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲು ನೀವು ಪೋಲೀಸ್ ಠಾಣೆಗೆ ತೆರಳಿದಲ್ಲಿ, ನಿಮಗೆ ಎಫ್.ಐ.ಆರ್ ದಾಖಲಿಸುವಂತೆ ತಿಳಿಸಲಾಗುವುದು. ನಿಮಗಾದ ಆನ್ ಲೈನ್ ವಂಚನೆ ಕುರಿತು ಎಲ್ಲ ಮಾಹಿತಿಯನ್ನು ನೀವು ಈ ಸಂದರ್ಭದಲ್ಲಿ ಒದಗಿಸತಕ್ಕದ್ದು.

ಆನ್ ಲೈನ್ ದೂರು:

ಪೋಲೀಸ್ ಸ್ಟೇಷನ್ನ ಸೈಬರ್ ಕ್ರೈಂ  ಶಾಖೆಯಲ್ಲಿ ಎಫ್.ಐ.ಆರ್ ದಾಖಲಿಸುವುದಲ್ಲದೆ, ನೀವು ಆನ್ ಲೈನ್ ನಲ್ಲೂ ಕೂಡ ಕೇಂದ್ರ ಗೃಹಖಾತೆಯ ಆನ್ ಲೈನ್ ಅಪರಾಧ ಮಾಹಿತಿ ಜಾಲತಾಣದಲ್ಲಿ ದೂರನ್ನು ಸಲ್ಲಿಸಬಹುದಾಗಿದೆ. ವಂಚನೆಯ ಘಟನೆ ಕುರಿತು ಸಂಪೂರ್ಣ ಮತ್ತು ವಿವರವಾದ ಮಾಹಿತಿಯನ್ನು ನೀಡುವುದರೊಡನೆ ದೂರನ್ನು ದಾಖಲಿಸಿರಿ. ಈ ವಂಚನೆಗೆ ಸಂಬಂಧಿಸಿದಂತೆ ನಿಮಗೆ ಬಂದ ಇ-ಮೇಲ್ ಅಥವಾ ಮೆಸೇಜುಗಳು ಸ್ಕ್ರೀನ್ ಷಾಟ್ ಗಳನ್ನು ಕೂಡ ನೀವು ಈ ಜಾಲತಾಣದಲ್ಲಿ ಅಪ್ ಲೋಡ್ ಮಾಡಬಹುದಾಗಿದೆ.

ಗ್ರಾಹಕರ ದೂರು ಪರಿಹಾರ ವೇದಿಕೆಯಲ್ಲಿ ಪ್ರಕರಣ ದಾಖಲು ಮಾಡುವುದು

ಗ್ರಾಹಕರ ದೂರು ಪರಿಹಾರ ವೇದಿಕೆಗಳನ್ನು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಥಾಪಿಸಲಾಗಿದೆ. ಎರಡು ಅಂಶಗಳ ಆಧಾರದ ಮೇಲೆ ನೀವು ಈ ವೇದಿಕೆಗಳಿಗೆ ದೂರು ಸಲ್ಲಿಸಬಹುದಾಗಿದೆ.

  • ನೀವು ಕಳೆದುಕೊಂಡ ಹಣದ ಮೊತ್ತ:
    • ಜಿಲ್ಲಾ ವೇದಿಕೆ: ರೂ.50ಲಕ್ಷದವರೆಗೆ.
    • ರಾಜ್ಯ ಆಯೋಗ: ರೂ. 50ಲಕ್ಷದಿಂದ ರೂ. 2ಕೋಟಿ
    • ರಾಷ್ಟ್ರೀಯ ಆಯೋಗ: ರೂ. 2ಕೋಟಿಗೂ ಮೇಲ್ಪಟ್ಟು

ನೀವು ಹಣ ಕಳೆದುಕೊಂಡ ಸ್ಥಳ:

  • ಹಣವನ್ನು ಕಳೆದುಕೊಂಡ ಸ್ಥಳದಲ್ಲಿ ಅಥವಾ ಎದುರುದಾರರು (ಎಂದರೆ, ಬ್ಯಾಂಕ್) ತನ್ನ ವ್ಯವಹಾರವನ್ನು ನಡೆಸುವ ಸ್ಥಳದಲ್ಲಿ ನೀವು ದೂರನ್ನು ಸಲ್ಲಿಸಬಹುದು.

ಬ್ಯಾಂಕು ಉದಾಸೀನತೆಯಿಂದ ವರ್ತಿಸಿದೆ ಅಥವಾ ನಿಮಗೆ ಸೂಕ್ತ ಸೇವೆಯನ್ನು ಒದಗಿಸಿಲ್ಲ ಎಂದು ನಿಮಗೆ ಮನದಟ್ಟಾದಾಗ ಮಾತ್ರ ನೀವು ಗ್ರಾಹಕರ ದೂರು ಪರಿಹಾರ ವೇದಿಕೆಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಈ ವೇದಿಕೆಯು ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಿಲ್ಲ. ಸಾಮಾನ್ಯವಾಗಿ ಗ್ರಾಹಕರ ದೂರು ಪರಿಹಾರ ವೇದಿಕೆ ಮತ್ತು ಬ್ಯಾಂಕಿಂಗ್ ಒಂಬಡ್ಸ್ಮನ್ ಮುಂದೆ ಏಕಕಾಲಕ್ಕೆ ದೂರು ಸಲ್ಲಿಸಲಾಗುವುದಿಲ್ಲ.

ಗ್ರಾಹಕರ ಹೊಣೆಗಾರಿಕೆ

ಗ್ರಾಹಕರು ಹಣ ಪಾವತಿಗೆ ಸಂಬಂಧಿಸಿದ ಪಾಸ್ ವರ್ಡ್ ಇತ್ಯಾದಿ ಗುಪ್ತ ಸಂಕೇತಗಳನ್ನು ರಹಸ್ಯವಾಗಿಡತಕ್ಕದ್ದು ಮತ್ತು ಅವುಗಳನ್ನು ಯಾರೊಂದಿಗೂ ಹಂಚಿಕೊಳ್ಳತಕ್ಕದ್ದಲ್ಲ. ಗ್ರಾಹಕರು ಈ ರೀತಿಯ ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸಿದಲ್ಲಿ, ಅಜಾಗರೂಕತೆಯ ಕಾರಣದಿಂದಾಗಿ ಅವರ ಹೊಣೆಗಾರಿಕೆ ಹೆಚ್ಚುತ್ತದೆ. ಅನಧಿಕೃತ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಗ್ರಾಹಕರ ಹೊಣೆಗಾರಿಕೆಯನ್ನು (ಯಾವುದೇ ಪ್ರಮಾಣದವರೆಗೂ) ನಿರ್ಧರಿಸುವುದು ಬ್ಯಾಂಕಿನ ಜವಾಬ್ದಾರಿಯಾಗಿರುತ್ತದೆ. ಬ್ಯಾಂಕುಗಳು ತಮ್ಮ ವಿವೇಚನೆಯನ್ನು ಚಲಾಯಿಸಿ, ಗ್ರಾಹಕರನ್ನು ಅವರ ಹೊಣೆಗಾರಿಕೆಯಿಂದ ಸಂಪೂರ್ಣವಾಗಿ ಮುಕ್ತರಾಗಿಸಬಹುದಾಗಿದೆ. ಗ್ರಾಹಕರ ಅಜಾಗರೂಕತೆಯಿಂದಲೇ ಅವರು ವಂಚನೆಗೊಳಗಾಗಿದ್ದರೂ ಸಹ ಬ್ಯಾಂಕು ಈ ಕ್ರಮ ಕೈಗೊಳ್ಳಬಹುದಾಗಿದೆ. ಈ ಕೆಳಕಂಡ ಸಂದರ್ಭಗಳಲ್ಲಿ ಗ್ರಾಹಕರು ಯಾವುದೇ ರೀತಿಯ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.

  • ಬ್ಯಾಂಕಿನ ಸೇವೆಗಳಲ್ಲಿನ ನ್ಯೂನತೆಯಿಂದಾಗಿ, ಅಜಾಗರೂಕತೆಯಿಂದಾಗಿ ಅಥವಾ ವಂಚನೆಯಲ್ಲಿ ಸಹಭಾಗಿತ್ವದಿಂದ ಅನಧಿಕೃತ ವ್ಯವಹಾರವು ಜರುಗಿದ್ದಲ್ಲಿ. ಇಂತಹ ಸಂದರ್ಭಗಳಲ್ಲಿ ನೀವು ಅನಧಿಕೃತ ವ್ಯವಹಾರದ ಕುರಿತು ಬ್ಯಾಂಕಿಗೆ ಮಾಹಿತಿ ನೀಡಿದರೂ ಅಥವಾ ನೀಡದಿದ್ದರೂ ಗ್ರಾಹಕರ ಹೊಣೆಗಾರಿಕೆ ಶೂನ್ಯವಾಗಿರುತ್ತದೆ.
  • ಗ್ರಾಹಕ ಮತ್ತು ಬ್ಯಾಂಕು ಹೊರತುಪಡಿಸಿ ವ್ಯವಸ್ಥೆಯ ಮತ್ತಾವುದೋ ದೋಷದಿಂದಾಗಿ ಅನಧಿಕೃತ ವ್ಯವಹಾರ ಜರುಗಿದ ಸಂದರ್ಭದಲ್ಲಿ ಗ್ರಾಹಕ ಹೊಣೆಗಾರಿಕೆ ಶೂನ್ಯವಾಗಿರುತ್ತದೆ. ಈ ರೀತಿಯ ಪ್ರಕರಣಗಳಲ್ಲಿ ನೀವು ಅನಧಿಕೃತ ವಹಿವಾಟು ಕುರಿತ ಸಂದೇಶ ನಿಮಗೆ ತಲುಪಿದ ಮೂರು ದಿನಗಳೊಳಗೆ ಬ್ಯಾಂಕನ್ನು ಸಂಪರ್ಕಿಸತಕ್ಕದ್ದು.

 

ಅನಧಿಕೃತ ವಹಿವಾಟು ಕುರಿತು ಬ್ಯಾಂಕಿನಿಂದ ಸಂದೇಶ ಬರುವಲ್ಲಿ ನಾಲ್ಕರಿಂದ ಏಳು ಕೆಲಸದ ದಿನಗಳ ವಿಳಂಬವಾದಲ್ಲಿ, ಗ್ರಾಹಕ ಸೀಮಿತ ಹೊಣೆಗಾರಿಕೆಯನ್ನು ಹೊಂದಿರುತ್ತಾನೆ. ಅಂತಹ ಸಂದರ್ಭಗಳಲ್ಲಿ ಗ್ರಾಹಕನ ಹೊಣೆಗಾರಿಕೆಯು ವಹಿವಾಟಿನ ಮೊತ್ತ ಅಥವಾ ಈ ಕೆಳಗೆ ವಿವರಿಸಿದ ಮೊತ್ತಗಳಲ್ಲಿ ಯಾವುದು ಕಡಿಮೆಯೋ ಆ ಮೊತ್ತಕ್ಕೆ ಸೀಮಿತವಾಗಿರುತ್ತದೆ.

ಗ್ರಾಹಕನ ಗರಿಷ್ಟ ಹೊಣೆಗಾರಿಕೆ 

ಖಾತೆಯ ವಿಧ

ಗರಿಷ್ಟ ಹೊಣೆಗಾರಿಕೆ ಮೊತ್ತ
ಸಾಮಾನ್ಯ ಉಳಿತಾಯ ಖಾತೆ ರೂ.5,000/-
ಉಳಿದ ಎಲ್ಲ ರೀತಿಯ  ಉಳಿತಾಯ ಖಾತೆಗಳು, ಪ್ರೀ-ಪೇಯ್ಡ್ ಪೇಮೆಂಟ್ ಇನ್ಟ್ರುಮೆಂಟ್ಸ್, ಗಿಫ್ಟ್ ಕಾರ್ಡುಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಕರೆಂಟ್/ಕ್ಯಾಷ್ ಕ್ರೆಡಿಟ್/ಓವರ್ ಡ್ರಾಫ್ಟ್ ಖಾತೆಗಳು, ವ್ಯಕ್ತಿಗಳ ಹೆಸರಿನಲ್ಲಿರುವ ವಾರ್ಷಿಕ ರೂ. 25 ಲಕ್ಷದವರೆಗೆ (ವಂಚನೆಯ ಪ್ರಕರಣ ವರದಿಯಾಗುವ 365 ದಿನಗಳ ಮೊದಲು) ಬ್ಯಾಲೆನ್ಸ್ ಹೊಂದಿರುವ ಕರೆಂಟ್/ಕ್ಯಾಷ್ ಕ್ರೆಡಿಟ್/ಓವರ್ ಡ್ರಾಫ್ಟ್ ಖಾತೆಗಳು. ರೂ 5 ಲಕ್ಷ ಮಿತಿ ಹೊಂದಿರುವ ಕ್ರೆಡಿಟ್ ಕಾರ್ಡ್ ಗಳು ರೂ. 10,000/-
ಉಳಿದ ಎಲ್ಲ ರೀತಿಯ ಕರೆಂಟ್/ಕ್ಯಾಷ್ ಕ್ರೆಡಿಟ್/ಓವರ್ ಡ್ರಾಫ್ಟ್ ಖಾತೆಗಳು, ರೂ 5 ಲಕ್ಷಕ್ಕೂ ಹೆಚ್ಚಿನ ಮಿತಿ ಹೊಂದಿರುವ ಕ್ರೆಡಿಟ್ ಕಾರ್ಡ್ ಗಳು ರೂ. 25,000/-

ಏಳು ದಿನಗಳ ಕಾಲಕ್ಕೂ ಹೆಚ್ಚಿನ ವಿಳಂಬವಾಗಿದ್ದಲ್ಲಿ ಗ್ರಾಹಕರ ಹೊಣೆಗಾರಿಕೆಯನ್ನು ಬ್ಯಾಂಕಿನ ಆಡಳಿತ ಮಂಡಳಿ ತೀರ್ಮಾನಿಸುತ್ತದೆ. ಖಾತೆಗಳನ್ನು ತೆರೆಯುವ ಸಂದರ್ಭದಲ್ಲಿಯೇ ಬ್ಯಾಂಕುಗಳು ಗ್ರಾಹಕರ ಹೊಣೆಗಾರಿಕೆ ಕುರಿತ ತಮ್ಮ ನೀತಿಯನ್ನು ವಿವರವಾಗಿ ತಿಳಿಸತಕ್ಕದ್ದು. ವ್ಯಾಪಕ ಪ್ರಚಾರಕ್ಕಾಗಿ ಬ್ಯಾಂಕುಗಳು ತಮ್ಮ ನೀತಿಯನ್ನು ಸಾರ್ವಜನಿಕ ವಲಯದಲ್ಲಿ ಪ್ರಚುರಗೊಳಿಸಬೇಕು. ಬ್ಯಾಂಕಿನ ಪ್ರಸ್ತುತ ಗ್ರಾಹಕರಿಗೆ ವೈಯುಕ್ತಿಕವಾಗಿ ಬ್ಯಾಂಕಿನ ನೀತಿಯನ್ನು ತಿಳಿಸಬೇಕು.

ಅನಧಿಕೃತ ವ್ಯವಹಾರವನ್ನು ರದ್ದು ಮಾಡುವುದು

ಅನಧಿಕೃತ ವ್ಯವಹಾರ ಕುರಿತು ಗ್ರಾಹಕರಿಂದ ಮಾಹಿತಿ ಬಂದ 10 ದಿನಗಳ ಅವಧಿಯೊಳಗೆ ಬ್ಯಾಂಕು ಆ ವ್ಯವಹಾರವನ್ನು ರದ್ದುಗೊಳಿಸಿ, ಸದರಿ ಅನಧಿಕೃತ ಎಲೆಕ್ಟ್ರಾನಿಕ್ ವ್ಯವಹಾರದಲ್ಲಿ ಒಳಗೊಂಡ ಹಣವನ್ನು ಗ್ರಾಹಕರ ಖಾತೆಗೆ ಪುನ: ಜಮೆ ಮಾಡುತ್ತದೆ. ಈ ಕ್ರಮ ಕೈಗೊಳ್ಳಲು ಬ್ಯಾಂಕುಗಳು ವಿಮಾ ಹಣ ಹೊಂದಾಣಿಕೆಯಾಗುವವರೆಗೂ ಕಾಯಬಾರದು. ಅನಧಿಕೃತ ವ್ಯವಹಾರ ನಡೆದ ದಿನದಂದು ಕಳೆದುಕೊಂಡ ಹಣದ ಮೊತ್ತವನ್ನು ಬ್ಯಾಂಕ್ ಜಮಾ ಮಾಡತಕ್ಕದ್ದು.

ಅನಧಿಕೃತ ವ್ಯವಹಾರಗಳ ಕುರಿತು ಬ್ಯಾಂಕಿಗೆ ಮಾಹಿತಿ ನೀಡುವಲ್ಲಿ ಗ್ರಾಹಕರ ಹೊಣೆಗಾರಿಕೆ

ತಮ್ಮ ಖಾತೆಯಲ್ಲಿ ಯಾವುದೇ ಅನಧಿಕೃತ ವ್ಯವಹಾರ ಕುರಿತು ತಕ್ಷಣವೇ ಅಥವಾ ಸಾಧ್ಯವಾದಷ್ಟು ಬೇಗ ಬ್ಯಾಂಕಿಗೆ ಮಾಹಿತಿ ನೀಡುವಂತೆ ಗ್ರಾಹಕರಿಗೆ ಸಲಹೆ ನೀಡತಕ್ಕದ್ದು. ಈ ರೀತಿ ಮಾಹಿತಿ ನೀಡಲು ತಡಮಾಡಿದಷ್ಟು ಬ್ಯಾಂಕ್/ಗ್ರಾಹಕರಿಗೆ ನಷ್ಟವಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ಎಸ್ ಎಂ ಎಸ್ ಕಳುಹಿಸಿದ ಸಮಯ ಮತ್ತು ಗ್ರಾಹಕರಿಂದ ಪ್ರತ್ಯುತ್ತರ/ಎಸ್ ಎಂಎಸ್ ಬಂದ ಸಮಯವನ್ನು ಬ್ಯಾಂಕ್ ದಾಖಲು ಮಾಡಿಕೊಂಡಿರುತ್ತದೆ. ಗ್ರಾಹಕರ ಹೊಣೆಗಾರಿಕೆಯನ್ನು ನಿರ್ಧರಿಸುವ ಸಲುವಾಗಿ ಹೀಗೆ ಮಾಡಲಾಗುತ್ತದೆ.