ಒಬ್ಬ ಮಹಿಳೆಯಿಂದ ಕೌಟುಂಬಿಕ ಹಿಂಸೆಯ ದೂರು ಸಿಕ್ಕ ತಕ್ಷಣ ದಾಖಲಿಸುವ ವರದಿಯನ್ನು ಡಿ.ಐ.ಆರ್. ಎನ್ನುತ್ತಾರೆ. ಈ ವರದಿಯನ್ನು ರಕ್ಷಣಾಧಿಕಾರಿಗಳು ಅಥವಾ ಸೇವಾ ಕಾರ್ಯಕರ್ತರು ದಾಖಲಿಸುತ್ತಾರೆ. ಡಿ.ಐ.ಆರ್.ನಲ್ಲಿ ಸಂತ್ರಸ್ತೆಯ ಹೆಸರು, ವಯಸ್ಸು, ಕಿರುಕುಳ ಕೊಟ್ಟವರ ವಿವರಗಳು, ಹಿಂಸಾತ್ಮಕ ಘಟನೆಯ ವಿವರಗಳು, ಇತ್ಯಾದಿ ಮಾಹಿತಿಗಳು ಇರುತ್ತವೆ. ಡಿ.ಐ.ಆರ್.ಅನ್ನು ದಾಖಲಿಸಲು ಕೆಳಗಿನ ಅಧಿಕಾರಿಗಳನ್ನು ಭೇಟಿ ನೀಡಿ:
ರಕ್ಷಣಾಧಿಕಾರಿಗಳು:
ದೂರು ಸಿಕ್ಕ ನಂತರ ಡಿ.ಐ.ಆರ್.ಅನ್ನು ದಾಖಲಿಸಿ, ನಿಮ್ಮ ಕಾನೂನಾತ್ಮಕ ಹಕ್ಕುಗಳನ್ನು ನಿಮಗೆ ಪರಿಚಯಿಸುವುದು ರಕ್ಷಣಾಧಿಕಾರಿಗಳ ಜವಾಬ್ದಾರಿ. ನಿಮ್ಮ ಹತ್ತಿರ ಇಟ್ಟುಕೊಳ್ಳಲು ನಿಮಗೆ ಡಿ.ಐ.ಆರ್.ನ ಉಚಿತ ಪ್ರತಿಯನ್ನು ನೀಡಲಾಗುತ್ತದೆ. ಇದಾದಮೇಲೆ, ಡಿ.ಐ.ಆರ್. ಮತ್ತು ಸಂಬಂಧಿತ ಅರ್ಜಿಯನ್ನು ಪ್ರಕರಣವನ್ನು ಹೂಡಲು ನ್ಯಾಯಾಲಯಕ್ಕೆ ಕಳಿಸಲಾಗುತ್ತದೆ. ಡಿ.ಐ.ಆರ್.ಅನ್ನು ಪೊಲೀಸ್ ಅಧಿಕಾರಿಗಳು ಮತ್ತು ಸೇವಾ ಕಾರ್ಯಕರ್ತರಿಗೆ ಕೂಡ ಕಳಿಸಲಾಗುತ್ತದೆ.
ಸೇವಾ ಕಾರ್ಯಕರ್ತರು:
ನಿಮ್ಮಿಂದ ದೂರು ಸಿಕ್ಕ ತಕ್ಷಣ ಡಿ.ಐ.ಆರ್.ಅನ್ನು ದಾಖಲಿಸಿ, ನಿಮ್ಮನ್ನು ರಕ್ಷಣಾಧಿಕಾರಿಗಳ ಬಳಿ, ಅಥವಾ ನ್ಯಾಯಾಲಯಕ್ಕೆ ಕಳಿಸಬೇಕಾದದ್ದು ಸೇವಾ ಕಾರ್ಯಕರ್ತರ ಕರ್ತವ್ಯ. ನಿಮಗೆ ಶಾರೀರಿಕ ನೋವು ಉಂಟಾಗಿದ್ದಲ್ಲಿ, ವೈದ್ಯಕೀಯ ತಪಾಸಣೆ ನಡೆಸಲು ಸಹಾಯ ಮಾಡಿ, ನಿಮ್ಮ ವರದಿಯನ್ನು ರಕ್ಷಣಾಧಿಕಾರಿಗಳಿಗೆ, ಅಥವಾ ಪೊಲೀಸ್ ಥಾಣೆ ಕಳಿಸುವುದು ಕೂಡ ಅವರ ಕರ್ತವ್ಯ. ನಿಮಗೆ ಕಿರುಕುಳ ನೀಡಿರುವ ವ್ಯಕ್ತಿಯಿಂದ ದೂರವಿರಲು ಅವರು ನಿಮಗೆ ಆಶ್ರಯ ಮನೆಗಳನ್ನು ಸಂಪರ್ಕಿಸಲು ಕೂಡ ಸಹಾಯ ಮಾಡುತ್ತಾರೆ.
ಪೊಲೀಸ್ ಅಧಿಕಾರಿಗಳು:
ರಕ್ಷಣಾಧಿಕಾರಿಗಳು, ಅಥವಾ ಸೇವಾ ಕಾರ್ಯಕರ್ತರು ನಿಮಗೆ ಸಿಗಲಿಲ್ಲವೆಂದಲ್ಲಿ, ಹತ್ತಿರದ ಪೊಲೀಸ್ ಠಾಣೆಯನ್ನು ನೀವು ಸಂಪರ್ಕಿಸಬಹುದು. ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ, ಕೆಳಗಿನ ವರದಿಗಳನ್ನು ದಾಖಲಿಸಲು ಪೊಲೀಸ್ ಅಧಿಕಾರಿಗಳು ನಿಮಗೆ ಸಹಾಯ ಮಾಡುತ್ತಾರೆ:
೧. ಎಫ್.ಐ.ಆರ್.:
ಎಫ್.ಐ.ಆರ್.ಅನ್ನು ದಾಖಲಿಸಿ ಅಪರಾಧಿಕ ಪ್ರಕರಣವನ್ನು ಕಿರುಕುಳ ಕೊಟ್ಟ ವ್ಯಕ್ತಿಯ ವಿರುದ್ಧ ಹೂಡಬಹುದು. ನಿಮಗೆ ಅಪರಾಧಿಕ ದೂರನ್ನು ದಾಖಲಿಸುವ ಇಚ್ಛೆ ಇದ್ದಲ್ಲಿ, ಪ್ರಕರಣದ ಯಾವ ಹಂತದಲ್ಲಾದರೂ ಎಫ್.ಐ.ಆರ್.ಅನ್ನು ದಾಖಲಿಸುವ ಆಯ್ಕೆಯನ್ನು ಪೊಲೀಸ್ ಅಧಿಕಾರಿಗಳು ನಿಮಗೆ ಕೊಡುತ್ತಾರೆ.
೨. ಡಿ.ಐ.ಆರ್.:
ನಿಮಗೆ ಅಪರಾಧಿಕ ದೂರನ್ನು ದಾಖಲಿಸುವ ಇಚ್ಛೆ ಇಲ್ಲದಿದ್ದಲ್ಲಿ, ರಕ್ಷಣಾಧಿಕಾರಿಗಳು ಕಳಿಸಿದ ಡಿ.ಐ.ಆರ್.ನಲ್ಲಿನ ವಿವರಣೆಗಳ ಪ್ರಕಾರ ನಿಮ್ಮ ಜೊತೆಯಾದ ಕೌಟುಂಬಿಕ ಹಿಂಸೆಯ ವಿವರಗಳನ್ನು ತಮ್ಮ ದಿನಚರಿಯ ಡೈರಿಯಲ್ಲಿ ನಮೂದಿಸಬೇಕಾಗುತ್ತದೆ. ಈ ಮಾಹಿತಿ ಅವರ ಬಳಿ ಇಲ್ಲದಿದ್ದಲ್ಲಿ, ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ, ಡಿ.ಐ.ಆರ್.ಅನ್ನು ದಾಖಲಿಸಿ, ಅದರಲ್ಲಿರುವ ವಿವರಣೆಗಳ ಪ್ರಕಾರ ತಮ್ಮ ದಿನಚರಿಯ ಡೈರಿಯಲ್ಲಿ ವಿವರಗಳನ್ನು ನಮೂದಿಸುತ್ತಾರೆ.
ವೈದ್ಯಕೀಯ ಸೌಲಭ್ಯದ ಉಸ್ತುವಾರಿ ವ್ಯಕ್ತಿಗಳು:
ನೀವು ವೈದ್ಯಕೀಯ ಸೌಲಭ್ಯಕ್ಕೆ, ಡಿ.ಐ.ಆರ್.ಅನ್ನು ದಾಖಲಿಸದೆ ಭೇಟಿ ನೀಡಿದರೆ, ಆ ಸೌಲಭ್ಯದ ಉಸ್ತುವಾರಿ ಮುಖ್ಯಸ್ಥರು ಡಿ.ಐ.ಆರ್.ಅನ್ನು ದಾಖಲಿಸಿ, ರಕ್ಷಣಾಧಿಕಾರಿಗಳಿಗೆ ಅದನ್ನು ಕಳಿಸಬೇಕು.