ಯಾವುದೇ ರೀತಿಯ ಕೌಟುಂಬಿಕ ಹಿಂಸೆಯ ವಿರುದ್ಧ ದೂರು ದಾಖಲಿಸಲು, ನೀವು ಅಥವಾ ನಿಮ್ಮ ಪ್ರತಿ ಬೇರೆ ಯಾರಾದರೂ, ಕೆಳಗೆ ಪಟ್ಟಿ ಮಾಡಿರುವ ಅಧಿಕಾರಿಗಳನ್ನು ಭೇಟಿ ಮಾಡಬಹುದು:
೧. ಪೊಲೀಸ್ ಠಾಣೆಗೆ ಹೋಗುವುದು:
ನಿಮ್ಮ ವಾಸದ ಜಾಗದಲ್ಲಿನ ಪೊಲೀಸ್ ಠಾಣೆ, ಅಥವಾ ಬೇರೆ ಯಾವುದಾದರೂ ಪೊಲೀಸ್ ಠಾಣೆಗೆ ಹೋಗಿ ಕೌಟುಂಬಿಕ ಹಿಂಸೆಯ ವಿರುದ್ಧ ನಿಮ್ಮ ದೂರನ್ನು ದಾಖಲಿಸಬಹುದು. ಪೊಲೀಸರು ಎಫ್.ಐ.ಆರ್./ಡೀ.ಐ/ಆರ್.ಅನ್ನು ದಾಖಲಿಸುತ್ತಾರೆ, ಅಥವಾ ಮುಂದಿನ ಪ್ರಕ್ರಿಯೆಯನ್ನು ಅನುಸರಿಸಲು ಸಹಾಯವಾಗುವಂತೆ ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳಿಗೆ ಭೇಟಿ ನೀಡಲು ನಿರ್ದೇಶಿಸುತ್ತಾರೆ.
೨. ರಕ್ಷಣಾಧಿಕಾರಿಗಳನ್ನು ಭೇಟಿ ಆಗುವುದು:
ದೂರು ದಾಖಲಿಸಲು, ರಕ್ಷಣಾಧಿಕಾರಿಗಳು ನಿಮಗೆ ಮೊದಲನೆಯ ಸಂಪರ್ಕ ಬಿಂದು ಆಗುತ್ತಾರೆ. ಡಿ.ಐ.ಆರ್. ದಾಖಲಿಸಲು, ವಿತ್ತೀಯ ಪರಿಹಾರ, ರಕ್ಷಣೆ, ಇತ್ಯಾದಿ ಪರಿಹಾರಗಳನ್ನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು – ಇಂತಹ ಕೆಲಸಗಳಿಗೆ ಅವರು ನಿಮಗೆ ಸಹಯಾ ಮಾಡುತ್ತಾರೆ. ನಿಮ್ಮ ಕ್ಷೇತ್ರದ ರಕ್ಷಣಾಧಿಕಾರಿಗಳು ನಿಮಗೆ ಸಿಗಲಿಲ್ಲವೆಂದಲ್ಲಿ, ಅವರನ್ನು ಹುಡುಕಲು ಯಾವುದೇ ಸರ್ಕಾರೇತರ ಸಂಸ್ಥೆಗಳು ಅಥವಾ ಸಾಮಾಜಿಕ ಕಾರ್ಯಕರ್ತರ ಸಹಾಯವನ್ನು ನೀವು ಪಡೆಯಬಹುದು.
೩. ರಾಷ್ಟ್ರೀಯ/ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸುವುದು:
ರಾಷ್ಟ್ರೀಯ ಮಹಿಳಾ ಆಯೋಗವು, ಮಹಿಳೆಯರಿಗೆ ಉಂಟಾಗುವ ಕೌಟುಂಬಿಕ ಹಿಂಸೆ, ವರದಕ್ಷಿಣೆಗೆ ಸಂಬಂಧಿಸಿದ ಕಿರುಕುಳ, ಬಲಾತ್ಕಾರ, ಇನ್ನಿತರೇ ಅಪರಾಧಗಳ ದೂರುಗಳ ಮೇಲೆ ತನಿಖೆ ನಡೆಸುವ ಅಧಿಕಾರವುಳ್ಳ ರಾಷ್ಟ್ರೀಯ-ಮಟ್ಟದ ಸರ್ಕಾರಿ ಸಂಸ್ಥೆಯಾಗಿದೆ. ಕೆಳಗಿನಂತೆ
ರಾಷ್ಟ್ರೀಯ ಮಹಿಳಾ ಆಯೋಗವು ನಿಮ್ಮ ಸಹಾಯಕ್ಕೆ ಬರಬಹುದು:
- ಪೊಲೀಸರು ನಡೆಸುತ್ತಿರುವ ತನಿಖೆಗಳ ಮೇಲ್ವಿಚಾರಣೆ ಮತ್ತು ತನಿಖೆಯ ವೇಗ ಹೆಚ್ಚಿಸುವುದು
- ಎರಡೂ ಪಕ್ಷಗಳ ಮಧ್ಯೆಯ ಸಮಸ್ಯೆಯನ್ನು ಬಗೆಹರಿಸಲು ಸಮಾಲೋಚನೆ ಅಥವಾ ವಿಚಾರಣೆ ನಡೆಸುವುದು
- ಸ್ಥಾನೀಯ ವಿಚಾರಣೆ ನಡೆಸಿ, ಸಾಕ್ಷಿದಾರರನ್ನು ಪರಿಶೀಲಿಸಿ, ಪುರಾವೆಗಳನ್ನು ಸಂಗ್ರಹಿಸಿ, ಸಲಹೆಗಳುಳ್ಳ ವರದಿಯನ್ನು ಒಪ್ಪಿಸಲು ವಿಚಾರಣಾ ಸಮಿತಿಯನ್ನು ನೇಮಿಸುವುದು
೧೦೯೧ ಸಹಾಯವಾಣಿಯ ಮೂಲಕ, ಅಥವಾ e-mail ಮೂಲಕ, ಅಥವಾ ಆನ್ಲೈನ್ ದೂರು ದಾಖಲಿಸುವ ಮೂಲಕ ನೀವು ರಾಷ್ಟ್ರೀಯ ಮಹಿಳಾ ಆಯೋಗವನ್ನು ಸಂಪರ್ಕಿಸಬಹುದು. ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿಯಲ್ಲಿರುವ ಕಾರಣ, ಕರ್ನಾಟಕದ ಮಹಿಳಾ ಆಯೋಗವನ್ನು ಕೂಡ ನೀವು ಸಂಪರ್ಕಿಸಬಹುದು.