ನಿಮ್ಮನ್ನು ಕಿರುಕುಳ ಕೊಡುತ್ತಿರುವವರು ಮನೆಯಿಂದಾಚೆ ತಳ್ಳುತ್ತಿದ್ದಲ್ಲಿ, ಅಥವಾ ನಿಮಗೆ ಮನೆಯಲ್ಲಿರುವುದು ಸುರಕ್ಷಿತವಲ್ಲ ಎಂದು ಅನಿಸಿದ್ದಲ್ಲಿ, ನಿಮ್ಮ ವಕೀಲರು ಅಥವಾ ರಕ್ಷಣಾಧಿಕಾರಿಗಳ ಸಹಾಯದಿಂದ ನ್ಯಾಯಾಲಯದ ಸಹಾಯ ಪಡೆಯಬಹುದು. ನಿವಾಸದ ಆದೇಶ ಕೆಳಗಿನಂತೆ ನಿಮಗೆ ಅನುಕೂಲವಾಗುತ್ತದೆ:
೧. ಮನೆಯಲ್ಲಿ ವಾಸ ಮಾಡುವುದು:
ನಿವಾಸದ ಆದೇಶದ ಮೇರೆಗೆ, ಕಿರುಕುಳ ಕೊಡುತ್ತಿರುವವರು ನಿಮ್ಮನ್ನು ಮನೆಯಿಂದ ಆಚೆ ತಳ್ಳುವಂತಿಲ್ಲ, ಅಥವಾ ಆಚೆ ಹೋಗು ಅಂತ ಒತ್ತಾಯ ಮಾಡುವಂತಿಲ್ಲ ಎಂದು ನ್ಯಾಯಾಲಯ ತೀರ್ಪಿಸಬಹುದು. ನೀವು ದಂಪತಿಗಳಾಗಿ (ಗಂಡ-ಹೆಂಡತಿ, ಅಥವಾ ಲಿವ್-ಇನ್ ಸಂಗಾತಿಗಳಾಗಿ) ಯಾವ ಮನೆಯಲ್ಲಿ ವಾಸವಾಗಿದ್ದಿರೋ, ಆ ಮನೆಯಲ್ಲಿ ವಾಸಿಸುವ ಹಕ್ಕು, ಕೆಳಗಿನ ಸಂದರ್ಭಗಳಲ್ಲೂ ನಿಮಗಿದೆ:
- ಆ ಮನೆಯ ಮೇಲೆ ನಿಮಗೆ ಕಾನೂನಾತ್ಮಕ ಪಾಲು, ಹಕ್ಕು, ಅಥವಾ ಮಾಲೀಕತ್ವ ಇಲ್ಲದಿದ್ದರೂ
- ಕಿರುಕುಳ ಕೊಟ್ಟವರು ಆ ಮನೆಯಲ್ಲಿ ಇನ್ನು ವಾಸವಾಗಿಲ್ಲದಿದ್ದರೂ
- ಕಿರುಕುಳ ಕೊಟ್ಟವರಿಗೆ ಆ ಮನೆಯಲ್ಲಿ ಕಾನೂನಾತ್ಮಕ ಪಾಲು, ಹಕ್ಕು, ಅಥವಾ ಮಾಲೀಕತ್ವ ಇಲ್ಲದಿದ್ದರೂ
೨. ಕಿರುಕುಳ ಕೊಟ್ಟವರಿಂದ ನಿಮ್ಮನ್ನು ದೂರವಿಡುವುದು:
ಕಿರುಕುಳ ಕೊಟ್ಟವರಿಗೆ ಕೆಳಗಿನ ಆದೇಶಗಳನ್ನು ನ್ಯಾಯಾಲಯ ಕೊಡಬಹುದು:
- ಮನೆಯನ್ನು ಬಿಟ್ಟು ಹೋಗುವುದಾಗಿ. ಈ ಆದೇಶ ಕಿರುಕುಳ ಕೊಟ್ಟವರ ನೆಂಟರನ್ನುದ್ದೇಶಿಸಿ ಕೂಡ ಕೊಡಬಹುದಾಗಿದೆ. ಆದರೆ, ಕೇವಲ ಪುರುಷರ ವಿರುದ್ಧ ಈ ಆದೇಶವನ್ನು ಹೊರಡಿಸಬಹುದು.
- ಮನೆಯಲ್ಲಿ ಕಾಲಿಡದಂತೆ ಆದೇಶ ಹೊರಡಿಸುವುದು
೩. ನಿಮಗೆ ಪರ್ಯಾಯ ವಸತಿ ಸೌಲಭ್ಯ ಕಲ್ಪಿಸಿಕೊಡುವುದು:
ಕಿರುಕುಳ ಕೊಟ್ಟವರು ಕೆಳಗಿನ ಸೌಲಭ್ಯಗಳನ್ನು ನಿಮಗೆ ಒದಗಿಸಲಿ ಎಂದು ಆದೇಶ ಹೊರಡಿಸುವುದು:
- ಆರಾಮದಾಯಕ ಮತ್ತು ಗೌರವಾಂವಿತ ವಸತಿಗೆ ಬೇಕಾದ ಎಲ್ಲ ಅಗತ್ಯವಾದ ಸೌಲಭ್ಯಗಳುಳ್ಳ ಮನೆಯ ಒಂದು ಭಾಗ ನಿಮಗೆ ಕೊಟ್ಟು, ಆ ಭಾಗವನ್ನು ಅವರು ಪ್ರವೇಶಿಸುವಂತಿಲ್ಲ ಎಂದು ಆದೇಶಿಸುವುದು
- ನಿಮಗೋಸ್ಕರ ಬೇರೆ ಮನೆ ಖರೀದಿಸಿ, ಅಥವಾ ಬಾಡಿಗೆಗೆ ಧನ ಸಹಾಯ ಮಾಡಬೇಕೆಂಬ ಆದೇಶ.
೪. ನಿಮ್ಮ ಆಸ್ತಿ ಮತ್ತು ಹಣಕಾಸಿನ ವ್ಯವಹಾರಗಳನ್ನು ಕಾಪಾಡುವುದು:
ಕಿರುಕುಳ ಕೊಟ್ಟವರು ಕೆಳಗಿನ ಕೆಲಸಗಳನ್ನು ಮಾಡಬಾರದೆಂದು ನ್ಯಾಯಾಲಯ ಆದೇಶಿಸಬಹುದು:
- ಮನೆಯನ್ನು ಮಾರುವುದು, ಗುತ್ತಿಗೆಗೆ ಕೊಡುವುದು, ಅಥವಾ ಅಡುವು ಇಡುವುದು.
- ಜಂಟಿ-ಮಾಲೀಕತ್ವದಲ್ಲಿನ ಮನೆಯ ಮೇಲಿನ ಹಕ್ಕುಗಳನ್ನು ತ್ಯಜಿಸುವುದು. ಉದಾಹರಣೆಗೆ, ಆ ಮನೆಯನ್ನು ಮಾರುವುದು.
ನಿಮ್ಮ ಮತ್ತು ನಿಮ್ಮ ಮಗುವಿನ ರಕ್ಷಣೆಗೆ ಬೇಕಾದ ಬೇರೆ ಯಾವ ಶರತ್ತುಗಳನ್ನಾದರೂ ಪಾಲಿಸಬೇಕೆಂದು ನ್ಯಾಯಾಲಯವು ಆದೇಶಿಸಬಹುದು.