ಕೌಟುಂಬಿಕ ಹಿಂಸೆಯ ನಿಮಿತ್ತ ನೀವು ಪುರುಷರು ಮತ್ತು ಮಹಿಳೆಯರ ವಿರುದ್ಧ ದೂರು ದಾಖಲಿಸಬಹುದು. ಕೆಳಗಿನವರ ವಿರುದ್ಧ ನೀವು ದೂರು ದಾಖಲಿಸಬಹುದು:
೧. ನಿಮ್ಮ ಕುಟುಂಬ: ಕೆಳಗಿನ ಸಂದರ್ಭಗಳಲ್ಲಿ, ನಿಮ್ಮ ಕುಟುಂಬದವರು ನಿಮಗೆ ಕೌಟುಂಬಿಕ ಹಿಂಸೆ ನೀಡುತ್ತಿದ್ದಲ್ಲಿ, ಅವರ ವಿರುದ್ಧ ದೂರನ್ನು ದಾಖಲಿಸಬಹುದು:
- ಕಿರುಕುಳ ನೀಡುತ್ತಿರುವ ವ್ಯಕ್ತಿ ನಿಮ್ಮ ರಕ್ತ ಸಂಬಂಧಿಕರಾಗಿದ್ದರೆ. ಉದಾಹರಣೆಗೆ, ನಿಮ್ಮ ಅಪ್ಪ, ಅಣ್ಣ, ಇತ್ಯಾದಿ. – ಕಿರುಕುಳ ನೀಡುತ್ತಿರುವ ವ್ಯಕ್ತಿ ನಿಮ್ಮ ಮದುವೆಯಿಂದ ಸಂಬಂಧಿಕರಾಗಿದ್ದರೆ. ಉದಾಹರಣೆಗೆ, ಗಂಡ, ಅತ್ತೆ-ಮಾವ, ಇತ್ಯಾದಿ.
- ಒಂದೇ ಮನೆಯಲ್ಲಿ ಅವಿಭಜಿತ ಕುಟುಂಬದ ಸದಸ್ಯರಾಗಿ ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿ ಹಾಗು ನೀವು ವಾಸವಾಗಿದ್ದಲ್ಲಿ. ಉದಾಹರಣೆಗೆ, ನಿಮ್ಮ ಅಜ್ಜಿ, ಸೋದರ ಮಾವ, ದತ್ತುಕ ಅಣ್ಣ/ತಮ್ಮ, ಇತ್ಯಾದಿ. ಆದಾಗ್ಯೂ, ಯಾರು ಹಿಂಸಾತ್ಮಕ ಕ್ರಿಯೆಯನ್ನು ಮಾಡುವಲ್ಲಿ ತೊಡಗಿರುತ್ತಾರೋ/ಮಾಡಲು ಸಹಾಯ ಮಾಡಿರುತ್ತಾರೋ, ಅವರ ವಿರುದ್ಧ ಮಾತ್ರ ನೀವು ದೂರು ದಾಖಲಿಸಬಹುದು. ಉದಾಹರಣೆಗೆ, ನೀವು ಹತ್ತು ಮಂದಿಯ ಅವಿಭಜಿತ ಕುಟುಂಬದ ಸದಸ್ಯರಾಗಿ ಒಂದೇ ಸೂರಿನಡಿ ವಾಸವಾಗಿದ್ದು, ನಿಮಗೆ ಕೇವಲ ನಿಮ್ಮ ಗಂಡ ಹಾಗು ಅತ್ತೆ ಕೌಟುಂಬಿಕ ಹಿಂಸೆ ಮಾಡಿದ್ದಲ್ಲಿ, ಇವರಿಬ್ಬರ ವಿರುದ್ಧ ಮಾತ್ರ ದೂರನ್ನು ಸಲ್ಲಿಸಬಹುದು.
- ನಿಮ್ಮ ಲಿವ್-ಇನ್ ಸಂಗಾತಿ: ನಿಮ್ಮ ಲಿವ್-ಇನ್ ಸಂಗಾತಿ ನಿಮಗೆ ನೋವುಂಟು ಮಾಡಿದಲ್ಲಿ/ಕಿರುಕುಳ ಕೊಟ್ಟಲ್ಲಿ, ಅವರ ವಿರುದ್ಧ ದೂರು ದಾಖಲಿಸಬಹುದು.
- ಅಲ್ಪವಯಸ್ಕರು: ಅಲ್ಪವಯಸ್ಕರು ನಿಮ್ಮ ಮೇಲೆ ಕೌಟುಂಬಿಕ ಹಿಂಸೆ ಎಸಗಿದರೆ, ಅವರ ವಿರುದ್ಧ ಕೂಡ ನೀವು ದೂರು ಸಲ್ಲಿಸಬಹುದು. ಉದಾಹರಣೆಗೆ, ನಿಮ್ಮ ಕುಟುಂಬದ ಒಬ್ಬ ೧೬ ವರ್ಷದ ಹುಡುಗ ನಿಮ್ಮ ಮೇಲೆ ಹಿಂಸೆ ಎಸಗಿದರೆ, ಅವನ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸಬಹುದು.
ನ್ಯಾಯಾಲಯಕ್ಕೆ ಹೋಗುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ, ನಿಮ್ಮ ಮೇಲೆ ಹಿಂಸೆ ಮಾಡಿರುವ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿರಬೇಕು, ಮತ್ತು ನೀವಿಬ್ಬರೂ ಒಂದೇ ಸೂರಿನಡಿ ವಾಸವಾಗಿದ್ದಿರಬೇಕು.