ಮುಸ್ಲಿಂ ವಿವಾಹ ಕಾನೂನಿನ ಪ್ರಕಾರ, ವಿಚ್ಛೇದನದ ನಂತರ ಹೆಂಡತಿ ಹಾಗು ಮಕ್ಕಳಿಗೆ ಗಂಡ ಜೀವನಾಂಶ ಕೊಡಬೇಕಾಗುತ್ತದೆ. ಹಾಗು, ಮುಸ್ಲಿಂ ಕಾನೂನಿನ ಪ್ರಕಾರ, ವಿಚ್ಛೇದನದ ನಂತರ ಗಂಡನಷ್ಟೇ ಹೆಂಡತಿಗೆ ಜೀವನಾಂಶ ಕೊಡಬೇಕಾಗುತ್ತದೆ, ಹೆಂಡತಿಯು ಗಂಡನಿಗೆ ಕೊಡಬೇಕಾಗಿಲ್ಲ. ನೀವು ನಿಮ್ಮ ಗಂಡನಿಂದ ಜೀವನಾಂಶ ಪಡೆಯಲು ಕೋರ್ಟಿಗೆ ಹೋಗಬಹುದು. ನಿಮ್ಮ ಗಂಡನ ಆರ್ಥಿಕ ಸಾಮರ್ಥ್ಯದ ಮೇಲೆ ನ್ಯಾಯಾಲಯವು ಜೀವನಾಂಶದ ಮೊತ್ತವನ್ನು ನಿರ್ಧರಿಸುತ್ತದೆ.
ಹೆಂಡತಿಗೆ ಜೀವನಾಂಶ:
ಮುಸ್ಲಿಂ ಕಾನೂನಿನಡಿ, ಕೆಳಗಿನ ಸಮಯಾವಧಿಗಳವರೆಗೂ ನಿಮಗೆ ನಿಮ್ಮ ಗಂಡನಿಂದ ಜೀವನಾಂಶ ಪಡೆಯುವ ಹಕ್ಕಿದೆ:
- ವಿಚ್ಛೇದನದ ನಂತರ ನಿಮ್ಮ ಇದ್ದತ್ ಕಾಲ ಮುಗಿಯುವ ತನಕ
- ನಿಮ್ಮ ಇದ್ದತ್ ಕಾಲ ಮುಗಿದು ನೀವು ಪುನರ್ವಿವಾಹವಾಗುವ ತನಕ
ನಿಮಗೆ ಸಿಗುತ್ತಿರುವ ಜೀವನಾಂಶದ ಮೊತ್ತ ನಿಮಗೆ ಕಡಿಮೆ ಬೀಳುತ್ತಿದ್ದರೆ ನೀವು ಅದನ್ನು ಸಂದರ್ಭಾನುಸಾರ ಹೆಚ್ಚಿಸಲು ಮನವಿ ಮಾಡಬಹುದು.
ನಿಮ್ಮ ಗಂಡ ಸತ್ತು ಹೋಗಿದ್ದರೆ, ನಿಮಗೆ ಜೀವನಾಂಶದ ಮೊತ್ತ ಸಿಗುವುದಿಲ್ಲ. ಆದಾಗ್ಯೂ, ಕೆಳಗಿನವರಿಂದ ನಿಮಗೆ ಜೀವನಾಂಶ ಪಡೆಯುವ ಆಯ್ಕೆ ಇದೆ:
- ನಿಮ್ಮ ಸಂಪತ್ತು ಮತ್ತು ಆಸ್ತಿಯ ಉತ್ತರಾಧಿಕಾರಿಗಳಾದ ನಿಮ್ಮ ಸಂಬಂಧಿಕರಿಂದ
- ನಿಮ್ಮ ಮಕ್ಕಳಿಂದ
- ನಿಮ್ಮ ತಂದೆ-ತಾಯಂದಿರಿಂದ
- ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ
ಜೀವನಾಂಶದ ಜೊತೆಗೆ, ನಿಮ್ಮ ನಿಕಾಹ್-ನಾಮಾದಲ್ಲಿ ನಮೂದಿಸಲಾದ ಮೆಹೆರ್ ಮೊತ್ತವನ್ನೂ ಕೂಡ ನೀವು ಪಡೆಯಲು ಅರ್ಹರಿದ್ದೀರಿ. ಈ ಮೆಹೆರ್ ಮೊತ್ತವನ್ನು ವಿಚ್ಛೇದನದ ಸಂದರ್ಭದಲ್ಲಿ, ಅಥವಾ ನಿಮ್ಮ ಗಂಡನ ನಿಧನದ ಸಂದರ್ಭದಲ್ಲಿ ನೀವು ಪಡೆಯಬಹುದು.