ಬಾಲ್ಯ ವಿವಾಹದ ದೂರು ನೀಡುವುದು

ಸಂಬಂಧಪಟ್ಟ ಮಗು ಅಥವಾ ಇನ್ಯಾರಾದರೂ ಕೂಡ ಬಾಲ್ಯ ವಿವಾಹದ ವಿರುದ್ಧ ದೂರು ನೀಡಬಹುದು. ಬಾಲ್ಯ ವಿವಾಹ ಈಗಾಗಲೇ ನಡೆದಿದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಯಾಕೆಂದರೆ ಈ ದೂರು ಮದುವೆಯ ಮುಂಚೆ ಅಥವಾ ಆದಮೇಲೆ ಯಾವಾಗಾದರೂ ದಾಖಲಿಸಬಹುದು. ಕೆಳಕಂಡ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು:

೧೦೯೮ಕ್ಕೆ ಕರೆ ಮಾಡಿ:

೧೦೯೮ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಶುಲ್ಕರಹಿತ ದೂರವಾಣಿ ಸಂಖ್ಯೆಯಾಗಿದೆ. ಇದನ್ನು ಮಕ್ಕಳ ಹಕ್ಕು ಹಾಗು ಸಂರಕ್ಷಣೆಯತ್ತ ಕೆಲಸ ಮಾಡುತ್ತಿರುವ “ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್” ಎಂಬ ಸರ್ಕಾರೇತರ ಸಂಸ್ಥೆ ನಿರ್ವಹಿಸುತ್ತಿದೆ. ಈ ದೂರವಾಣಿ ಸಂಖ್ಯೆಗೆ, ಖುದ್ದಾಗಿ ಮಕ್ಕಳೇ, ಅಥವಾ ಇನ್ಯಾರಾದರೂ ಸಹ ಕರೆ ಮಾಡಿ ಮಾಹಿತಿಯನ್ನು ನೀಡಬಹುದು. ಆದ್ದರಿಂದ ನೀವು ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಕ್ಕಳು, ಅಥವಾ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಈ ದೂರವಾಣಿ ಸಂಖ್ಯೆಯ ಬಗ್ಗೆ ಹೇಳಿದರೆ, ಬಾಲಕಾರ್ಮಿಕ ಪಧ್ಧತಿಯಂತಹ ಅನೈತಿಕ ಚಟುವಟಿಕೆಗಳನ್ನು ನಾವು ನಿಯಂತ್ರಿಸಬಹುದಾಗಿದೆ.

ಪೊಲೀಸ್:

೧೦೦ ಸಂಖ್ಯೆಗೆ ಕರೆ ಮಾಡಿ ನೀವು:

  • ನಡೆಯುತ್ತಿರುವ ಬಾಲ್ಯ ವಿವಾಹದ ಬಗ್ಗೆ ದೂರು ನೀಡಬಹುದು, ಅಥವಾ
  • ನಡೆಯಲಿರುವ ಬಾಲ್ಯ ವಿವಾಹದ ಬಗ್ಗೆ ಕೂಡ ದೂರು ನೀಡಬಹುದು. ಇದಲ್ಲದೆ, ಖುದ್ದಾಗಿ ಪೊಲೀಸ್ ಠಾಣೆಗೆ ಹೋಗಿ ಎಫ್.ಐ.ಆರ್.ಅನ್ನು ದಾಖಲಿಸಬಹುದು.

ಬಾಲ್ಯ ವಿವಾಹ ನಿಷೇಧಾಧಿಕಾರಿಗಳು:

ನೀವು ಸ್ಥಳೀಯ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೂ ದೂರು ನೀಡಬಹುದು. ಅವರು ಅಪರಾಧಿಗಳ ವಿರುದ್ಧ ತಕ್ಷಣವೇ ಕ್ರಮ ಕೈತೆಗೆದುಕೊಳ್ಳುತ್ತಾರೆ.

ಮಕ್ಕಳ ಕಲ್ಯಾಣ ಸಮಿತಿ:

ನೀವು ಬಾಲಾಪರಾಧಿ ನ್ಯಾಯಕ್ಕೆ ಸಂಬಂಧಪಟ್ಟ ಕಾನೂನಿನಡಿ ರಚಿಸಿದ ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿಯಲ್ಲೂ ತಮ್ಮ ದೂರು ಸಲ್ಲಿಸಬಹುದು. ಉದಾಹರಣೆಗೆ, ಕರ್ನಾಟಕದಲ್ಲಿ ಆಯಾ ಜಿಲ್ಲೆಗೆ ಸಂಬಂಧಿಸಿದ ಸಮಿತಿಗಳನ್ನು ನೀವು ಈ ಪಟ್ಟಿಯ ಪ್ರಕಾರ ಸಂಪರ್ಕಿಸಬಹುದು.

ಕೋರ್ಟಿನಲ್ಲಿ ದೂರು ದಾಖಲಿಸುವುದು:

ನೀವು ನೇರವಾಗಿ ನ್ಯಾಯಿಕ ದಂಡಾಧಿಕಾರಿ (ಮೊದಲನೇ ಶ್ರೇಣಿ) (Judicial Magistrate First Class), ಅಥವಾ ಮಹಾನಗರ ದಂಡಾಧಿಕಾರಿ (Metropolitan Magistrate) ಗಳ ಬಳಿ ಕೂಡ ದೂರು ಸಲ್ಲಿಸಬಹುದು. ಈ ಸಂದರ್ಭದಲ್ಲಿ, ನ್ಯಾಯಾಲಯವು ಪೊಲೀಸ್ ಅಥವಾ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಸಮಂಜಸ ಕ್ರಮ ಕೈಗೊಳ್ಳಲು ಆದೇಶಿಸುತ್ತದೆ.

ಬಾಲ್ಯ ವಿವಾಹ ತಡೆಗಟ್ಟಲು ನ್ಯಾಯಾಲಯದ ಅಧಿಕಾರ

ಬಾಲ್ಯ ವಿವಾಹ ನೆರವೇರಲಿದೆ, ಅಥವಾ ನೆರವೇರಿಸಲು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ನಂಬಲರ್ಹ ಮಾಹಿತಿ ನ್ಯಾಯಾಲಯಕ್ಕೆ ಸಿಕ್ಕರೆ, ಕೂಡಲೇ ಸಂಬಂಧಪಟ್ಟ ವ್ಯಕ್ತಿಗಳ ವಿರುಧ್ಧ ಅದು ನಿಷೇಧಾಜ್ಞೆಯನ್ನು ಹೊರಡಿಸಬಲ್ಲದು.

ಆರೋಪಿಗಳು ಈ ನಿಷೇಧಾಜ್ಞೆಯನ್ನು ರದ್ದುಪಡಿಸಲು ಅಥವಾ ಬದಲಾಯಿಸಲು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಬಹುದು. ನ್ಯಾಯಾಲಯವು ಖುದ್ದಾಗಿಯೂ ಕೂಡ ಆಜ್ಞೆಯನ್ನು ಹಿಂತೆಗೆದುಕೊಳ್ಳಬಹುದು ಅಥವಾ ಬದಲಾಯಿಸಬಹುದು.

ಇಂತಹ ನಿಷೇಧಾಜ್ಞೆ ಹೊರಡಿಸಿದ ಬಳಿಕ ಯಾವುದೇ ಬಾಲ್ಯ ವಿವಾಹ ನೆರವೇರಿದಲ್ಲಿ ಅದು ಕಾನೂನಿನ ಕಣ್ಣಿನಲ್ಲಿ ಅಮಾನ್ಯವಾಗಿರುತ್ತದೆ.

ನ್ಯಾಯಾಲಯ ಹಸ್ತಕ್ಷೇಪ ಮಾಡಬಲ್ಲ ಸನ್ನಿವೇಶಗಳು:

ನ್ಯಾಯಾಲಯವು ಬಾಲ್ಯ ವಿವಾಹಗಳಲ್ಲಿ ಈ ಕೆಳಗಿನ ಸಂದರ್ಭಗಳಲ್ಲಿ ಹಸ್ತಕ್ಷೇಪ ಮಾಡಬಹುದು:

  • ಸ್ವಯಂ ಪ್ರೇರಿತವಾಗಿ
  • ಬಾಲ್ಯ ವಿವಾಹ ನಿಷೇಧಾಧಿಕಾರಗಳು ಅಥವಾ ಇನ್ನೋರ್ವ ಸರ್ಕಾರೇತರ ಸಂಸ್ಥೆಯ ದೂರಿನ ಆಧಾರದ ಮೇಲೆ
  • ಅಕ್ಷಯ ತೃತಿಯಾಗಳಂತಹ ಮದುವೆಗೆ ಮಂಗಳಕರ ದಿನಗಳಂದು, ನ್ಯಾಯಾಲಯವೇ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಬಹುದು. ಈ ಸಂದರ್ಭಗಳಲ್ಲಿ, ಬಾಲ್ಯ ವಿವಾಹಗಳನ್ನು ತಡೆಗಟ್ಟಲು, ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಎಲ್ಲ ಅಧಿಕಾರಗಳೂ ಸಹ ನ್ಯಾಯಾಲಯಕ್ಕೆ ಇರುತ್ತವೆ.
  • ನಡೆಯಲಿರುವ ಬಾಲ್ಯ ವಿವಾಹದ ಬಗ್ಗೆ ಯಾವುದೇ ವ್ಯಕ್ತಿಯ ಬಳಿ ವೈಯಕ್ತಿಕ ಮಾಹಿತಿ ಇದ್ದಾಗ

ನ್ಯಾಯಾಲಯವು ಹೊರಡಿಸುವ ಸೂಚನೆ:

ನಿಷೇಧಾಜ್ಞೆಯನ್ನು ಜಾರಿಗೆ ತರುವ ಮುನ್ನ, ನ್ಯಾಯಾಲಯವು ಆರೋಪಿಗಳ ವಿರುಧ್ಧ ಸೂಚನೆಯನ್ನು ಹೊರಡಿಸಬೇಕಾಗುತ್ತದೆ. ಇದು ಅವರಿಗೆ ಪ್ರತಿರಕ್ಷೆ ಮಾಡಿಕೊಳ್ಳಲು ಅವಕಾಶ ನೀಡುವುದಕ್ಕಾಗಿ. ಆದರೆ, ತುರ್ತು ಸಂದರ್ಭಗಳಲ್ಲಿ, ಆರೋಪಿಗಳಿಗೆ ಇಂತಹ ಸೂಚನೆ ನೀಡದೆ ನ್ಯಾಯಾಲಯಗಳು ಬಾಲ್ಯ ವಿವಾಹದ ವಿರುಧ್ಧ ಮಧ್ಯಂತರ ಆದೇಶವನ್ನು ಹೊರಡಿಸಬಹುದು.

ಶಿಕ್ಷೆ:

ನಿಮ್ಮ ವಿರುಧ್ಧ ನ್ಯಾಯಾಲಯವು ತಾತ್ಕಾಲಿಕ ಆದೇಶವನ್ನು ಹೊರಡಿಸಿದ್ದಲ್ಲಿ, ಮತ್ತು ನೀವು ಅದನ್ನು ಅನುಸರಿಸದಿದ್ದಲ್ಲಿ, ನಿಮಗೆ ಗರಿಷ್ಟ ೨ ವರ್ಷಗಳ ಸೆರೆಮನೆ ವಾಸ ಹಾಗು/ಅಥವಾ ಗರಿಷ್ಟ ೧ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲಾಗುವುದು.

ಬಾಲ್ಯ ವಿವಾಹ ನಿಷೇಧಾಧಿಕಾರಿಗಳು

ಭಾರತದಲ್ಲಿ ರಾಜ್ಯ ಸರ್ಕಾರಗಳು ಬಾಲ್ಯ ವಿವಾಹ ನಿಷೇಧಾಧಿಕಾರಿಗಳನ್ನು ಬಾಲ್ಯ ವಿವಾಹಗಳನ್ನು ತಡೆಗಟ್ಟಲು ನೇಮಿಸಿವೆ. ಈ ಅಧಿಕಾರಿಗಳ ಜವಾಬ್ದಾರಿ ಬಾಲ್ಯ ವಿವಾಹಗಳ ಬಗ್ಗೆ ವರದಿ ಮಾಡುವುದು ಮತ್ತು ಅವುಗಳನ್ನು ತಡೆಗಟ್ಟುವುದಾಗಿದೆ. ಪ್ರತಿ ರಾಜ್ಯ ಸರ್ಕಾರವು ಈ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಕರ್ತವ್ಯಗಳನ್ನು ನಿರ್ಧರಿಸಿ ನಿಗದಿಪಡಿಸುತ್ತದೆ. ಈ ಕರ್ತವ್ಯಗಳು ಕೆಳಗಿನಂತಿವೆ:

  1. ಸಮಂಜಸ ಕ್ರಮಗಳನ್ನು ಕೈಗೊಂಡು ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು
  2. ಆರೋಪಿಗಳ ಮೇಲೆ ಮೊಕದ್ದಮೆ ಹೂಡುವುದಕ್ಕೆ ಅವರ ವಿರುಧ್ಧ ಪುರಾವೆ ಸಂಗ್ರಹಿಸುವುದು
  3. ಸ್ಥಳೀಯ ಜನರಿಗೆ ಬಾಲ್ಯ ವಿವಾಹದಲ್ಲಿ ಭಾಗವಹಿಸದಿರಿ ಹಾಗು ಇಂತಹ ವಿವಾಹಗಳಿಗೆ ಬೆಂಬಲ ನೀಡದಿರಿ ಎಂದು ಸಲಹೆ ಹಾಗು ಸಮಾಲೋಚನೆ ನೀಡುವುದು
  4. ಬಾಲ್ಯ ವಿವಾಹಗಳಿಂದ ಆಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಉದಾಹರಣೆಗೆ, ಪ್ರಸವದ ವೇಳೆ ತಾಯಿಯ ಮರಣ, ಅಪೌಷ್ಟಿಕತೆ, ಕೌಟುಂಬಿಕ ಹಿಂಸೆ, ಇತ್ಯಾದಿ.
  5. ಬಾಲ್ಯ ವಿವಾಹ ಸಮಸ್ಯೆಯ ಬಗ್ಗೆ ಸಮುದಾಯವನ್ನು ಸಂವೇದನಾಶೀಲಗೊಳಿಸುವುದು.
  6. ಬಾಲ್ಯ ವಿವಾಹದ ಘಟನೆಗಳು ಎಷ್ಟರ ಮಟ್ಟಿಗೆ, ಯಾವಾಗ, ಮತ್ತು ಎಲ್ಲೆಲ್ಲಿ ಸಂಭವಿಸುತ್ತಿವೆ ಎಂಬ ಅಂಕಿಅಂಶಗಳನ್ನು ನಿಯತಕಾಲಿಕವಾಗಿ ರಾಜ್ಯ ಸರ್ಕಾರಕ್ಕೆ ವರದಿ ಮಾಡುವುದು.

ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು, ರಾಜ್ಯ ಸರ್ಕಾರವು ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ, ಕೆಲವು ಷರತ್ತುಗಳು ಮತ್ತು ಮಿತಿಗಳೊಂದಿಗೆ, ಪೊಲೀಸ್ ಅಧಿಕಾರಿಗಳ ಅಧಿಕಾರಗಳನ್ನು ನೀಡಬಹುದು. ಇಂತಹ ಅಧಿಕಾರಗಳನ್ನು ರಾಜ್ಯದ ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯೊಂದನ್ನು ಪ್ರಕಟಿಸಿ ನೀಡಬಹುದಾಗಿದೆ.

ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚು ಮಾಹಿತಿ ಬೇಕಾದಲ್ಲಿ, ದಯವಿಟ್ಟು ಈ ಸರ್ಕಾರಿ ದಾಖಲೆಯನ್ನು ಓದಿ (೧೯-೨೨ ಪುಟಗಳು)