ಹಿಂದೂ ಮದುವೆಗಳಲ್ಲಿ ತಾತ್ಕಾಲಿಕ ಬೇರ್ಪಡೆಯುವಿಕೆ

ಮದುವೆಯ ಅಂತ್ಯವನ್ನು ಸೂಚಿಸುವ ವಿಚ್ಛೇದನವನ್ನು ಹೊರತುಪಡಿಸಿ ನೀವು ಮತ್ತು ನಿಮ್ಮ ಸಂಗಾತಿಗೆ ನಿಮಗೆ ನಿಜವಾಗಿಯೂ ವಿಚ್ಛೇದನ ಬೇಕಾಗಿದೆಯೋ ಇಲ್ಲವೋ ಎಂದು ಯೋಚಿಸಲು ಸಮಯ ಬೇಕಾದಲ್ಲಿ ಕೋರ್ಟಿನಲ್ಲಿ ನೀವು ತಾತ್ಕಾಲಿಕ ಬೇರ್ಪಡೆಯ ಅರ್ಜಿ ಸಲ್ಲಿಸಬಹುದಾಗಿದೆ.

ಈ ಆದೇಶದ ಮೂಲಕ ನೀವು ತಾತ್ಕಾಲಿಕವಾಗಿ ನಿಮ್ಮ ಸಂಗಾತಿಯಿಂದ ಬೇರೆಯಾಗಿದ್ದೀರಿ ಎಂದು ನ್ಯಾಯಾಲಯವು ಅಧಿಕೃತಗೊಳಿಸುತ್ತದೆ.

ನಿಮ್ಮ ಸಂಗಾತಿಯಿಂದ ತಾತ್ಕಾಲಿಕವಾಗಿ ಬೇರೆಯಾಗುವುದು ವಿಚ್ಛೇದನ ಪಡೆಯುವುದರಿಂದ ಕಾನೂನಾತ್ಮಕವಾಗಿ ಭಿನ್ನವಾಗಿದೆ. ಏಕೆಂದರೆ, ತಾತ್ಕಾಲಿಕ ಬೇರ್ಪಡೆಯಲ್ಲಿ ನಿಮ್ಮ ಮದುವೆ ಇನ್ನೂ ಅಸ್ತಿತ್ವದಲ್ಲಿರುತ್ತದೆ. ಆದ್ದರಿಂದ ತಾತ್ಕಾಲಿಕ ಬೇರ್ಪಡೆಯ ಸಮಯದಲ್ಲಿ ನೀವು ಕಾನೂನಾತ್ಮಕವಾಗಿ ಪುನರ್ವಿವಾಹವಾಗುವಂತಿಲ್ಲ.

ವಿಚ್ಛೇದನದ ಆಧಾರಗಳು ಹಾಗು ತಾತ್ಕಾಲಿಕ ಬೇರ್ಪಡೆಯ ಆಧಾರಗಳು ಒಂದೇ. ಆದರೆ ಈ ಎರಡರ ಕಾನೂನಾತ್ಮಕ ಪರಿಣಾಮಗಳು ಬೇರೆ ಬೇರೆ. ತಾತ್ಕಾಲಿಕ ಬೇರ್ಪಡೆಯಲ್ಲಿ ನೀವು ಹಾಗು ನಿಮ್ಮ ಸಂಗಾತಿ ಬೇರೆ ಬೇರೆ ವಾಸಿಸತೊಡಗಿದರೂ ಮದುವೆಯಾದ ದಂಪತಿಗಳೆಂದೇ ಕಾನೂನು ಪರಿಗಣಿಸುತ್ತದೆ.

ತಾತ್ಕಾಲಿಕ ಬೇರ್ಪಡೆಯ ಆದೇಶ ಕೋರ್ಟಿನಿಂದ ಬಂದ ಮೇಲೆ, ನೀವು ಮತ್ತು ನಿಮ್ಮ ಸಂಗಾತಿ ಈ ಕೆಳಕಂಡ ಎರಡು ಆಯ್ಕೆಗಳ ಮಧ್ಯೆ ಆರಿಸಿಕೊಳ್ಳಬಹುದು:

ಆಯ್ಕೆ ೧. ತಾತ್ಕಾಲಿಕ ಬೇರ್ಪಡೆಯ ನಿರ್ದೇಶವನ್ನು ರದ್ದುಪಡಿಸುವುದು: ನೀವು ತಾತ್ಕಾಲಿಕ ಬೇರ್ಪಡೆಯ ನಿರ್ದೇಶವನ್ನು ರದ್ದುಪಡಿಸಲು ಕೋರ್ಟಿನಲ್ಲಿ ಮನವಿ ಸಲ್ಲಿಸಬಹುದು. ಈ ನಿರ್ದೇಶ ರದ್ದುಗೊಂಡ ನಂತರ ನೀವು ಮತ್ತು ನಿಮ್ಮ ಸಂಗಾತಿ ರಾಜಿಯಾಗಿ ಮದುವೆಯಾದ ದಂಪತಿಗಳೆಂದು ಒಟ್ಟಿಗೆ ವಾಸಿಸಬಹುದು.

ಆಯ್ಕೆ ೨: ವಿಚ್ಛೇದನ ಪಡೆಯುವುದು: ನೀವು ಮತ್ತು ನಿಮ್ಮ ಸಂಗಾತಿ ರಾಜಿಯಾಗುವ ಪರಿಸ್ಥಿತಿಯಲ್ಲಿ ಇಲ್ಲವೆಂದರೆ ತಾತ್ಕಾಲಿಕ ಬೇರ್ಪಡೆಯ ನಿರ್ದೇಶದ ಒಂದು ವರ್ಷದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಈ ಒಂದು ವರ್ಷದ ಅವಧಿಯಲ್ಲಿ ನಿಮಗೆ ನಿಮ್ಮ ಸಂಗಾತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ. ಹಾಗೆಯೂ, ಈ ವೇಳೆಯಲ್ಲಿ ಮಕ್ಕಳ ಪಾಲನೆಯ ನಿರ್ಣಯವನ್ನು ನ್ಯಾಯಾಲಯವು ತೀರ್ಪಿಸುತ್ತದೆ.

ಹಿಂದೂ ವಿಚ್ಛೇದನವನ್ನು ಯಾವಾಗ ಪಡೆಯಬಹುದು

ಹಿಂದೂ ವೈವಾಹಕ ಕಾನೂನಿನಡಿ ಗುರುತಿಸಲಾದ ಆಧಾರಗಳ ಮೇಲಷ್ಟೇ ನೀವು ವಿಚ್ಛೇದನವನ್ನು ಪಡೆಯಬಹುದು. ಈ ಕಾನೂನಾತ್ಮಕ ಆಧಾರಗಳ ವ್ಯಾಪ್ತಿ ನಿಮ್ಮ ಸಂಗಾತಿಯ ಕಿರುಕುಳದಿಂದ ಹಿಡಿದು ಅವರ ಮಾನಸಿಕ ರೋಗದ ವರೆಗೆ ಹಬ್ಬಿದೆ.

ಭಾರತದಲ್ಲಿ, ವಿಚ್ಛೇದನ ಪಡೆಯಲು ಕಾನೂನು ನಿರ್ದಿಷ್ಟವಾದ ಆಧಾರಗಳನ್ನು ನೀಡಿದೆ:

ಕಿರುಕುಳ:

  • ನಿಮ್ಮ ಸಂಗಾತಿ ನಿಮ್ಮೊಡನೆ ಕ್ರೂರವಾಗಿ ವರ್ತಿಸಿದಾಗ
  • ನಿಮ್ಮ ಸಂಗಾತಿ ಬೇರೆಯವರ ಜೊತೆ ಲೈಂಗಿಕ ಸಂಭೋಗ ಮಾಡಿದಾಗ
  • ನಿಮ್ಮ ಸಂಗಾತಿ ನಿಮ್ಮನ್ನು ತೊರೆದಾಗ

ಅನಾರೋಗ್ಯ:

  • ನಿಮ್ಮ ಸಂಗಾತಿ ನಿಮಗೆ ಹಬ್ಬಬಹುದಾದ ಲೈಂಗಿಕ ರೋಗದಿಂದ ಬಳಲುತ್ತಿದ್ದಾಗ
  • ನಿಮ್ಮ ಸಂಗಾತಿಗೆ ಮಾನಸಿಕ ರೋಗವಿದ್ದಾಗ

ನಿಮ್ಮ ಸಂಗಾತಿಯ ಗೈರುಹಾಜರಿ:

  • ನಿಮ್ಮ ಸಂಗಾತಿಯು ನಿಮ್ಮಿಂದ ದೂರವಾದಾಗ
  • ನಿಮ್ಮ ಸಂಗಾತಿಯು ಕನಿಷ್ಠ ೭ ವರ್ಷದ ಹಿಂದೆ ಸತ್ತು ಹೋಗಿದ್ದಾರೆ ಎಂದು ನೀವು ಭಾವಿಸಿದ್ದಾಗ
  • ನಿಮ್ಮ ಸಂಗಾತಿಯು ವಸ್ತು ಪ್ರಪಂಚವನ್ನು ತ್ಯಜಿಸಿ ಯಾವುದೇ ಒಂದು ಧಾರ್ಮಿಕ ಸಂಪ್ರದಾಯವನ್ನು ಸೇರಿದಾಗ
  • ತಾತ್ಕಾಲಿಕ ಬೇರ್ಪಡೆಯ ನಿರ್ಣಯವಾದ ಒಂದು ವರ್ಷವಾದ ಮೇಲೆಯೂ ನೀವು ಹಾಗು ನಿಮ್ಮ ಸಂಗಾತಿ ಒಂದುಗೂಡದಿದ್ದಾಗ
  • ನಿಮ್ಮ ವೈವಾಹಿಕ ಬಾಧ್ಯತೆಗಳನ್ನು ಪುನರಾರಂಭಿಸಿ ಎಂದು ನ್ಯಾಯಾಲಯವು ಆದೇಶಿಸಿದ ಒಂದು ವರ್ಷದ ನಂತರವೂ ನೀವು ಈ ಆದೇಶವನ್ನು ಪಾಲಿಸದಿದ್ದಾಗ