ಕೌಟುಂಬಿಕ ಹಿಂಸೆ ಅಂದರೇನು?
ಯಾವುದೇ ಮನೆಯಲ್ಲಿ, ಮಹಿಳೆ ಮತ್ತು ಅವಳ ಪಾಲನೆಯಲ್ಲಿರುವ ಮಗುವಿನ ಆರೋಗ್ಯ ಮತ್ತು ಸುರಕ್ಷತೆಗೆ ಧಕ್ಕೆ ತರುವಂತಹ ಹಿಂಸಾತ್ಮಕ ಅಥವಾ ಕಿರುಕುಳ ನೀಡುವ ವರ್ತನೆಗೆ ಕೌಟುಂಬಿಕ ಹಿಂಸೆ ಎನ್ನುತ್ತಾರೆ. ಕಾನೂನಿನ ಸಹಾಯದಿಂದ ನೀವು: -ತಕ್ಷಣ ರಕ್ಷಣೆ ಪಡೆದು ಹಿಂಸೆ ಮುಂದುವರೆಯದಂತೆ ತಡೆಯಬಹುದು. ತಕ್ಷಣ ರಕ್ಷಣೆ ಪಡೆಯಲು ನೀವು ಪೊಲೀಸ್, ರಕ್ಷಣಾಧಿಕಾರಿಗಳು, ಇನ್ನಿತರೇ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಕೆಳಗಿನ ಪರಿಹಾರಗಳನ್ನು ಪಡೆಯಲು ನ್ಯಾಯಾಲಯಕ್ಕೆ ಹೋಗಿ:
- ವಿತ್ತೀಯ ಪರಿಹಾರ, ವಾಸಿಸಲು ಬೇಕಾದ ಸ್ಥಳ, ಇತ್ಯಾದಿ ಪಡೆಯಬಹುದು
- ನಿಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಅಪರಾಧಿಕ ಫಿರ್ಯಾದು ನೀಡಬಹುದು
ಕೌಟುಂಬಿಕ ಹಿಂಸೆಯ ರೀತಿಗಳು:
ಹಿಂಸೆ ಕೇವಲ ಶಾರೀರಿಕವಾಗಿರಬೇಕಂತಿಲ್ಲ. ಕಾನೂನು ಲೈಂಗಿಕ ಹಿಂಸೆ, ಮೌಖಿಕ ನಿಂದನೆ, ಭಾವನಾತ್ಮಕ/ಮಾನಸಿಕ ಕಿರುಕುಳ, ವಿತ್ತೀಯ ಕಿರುಕುಳ, ಇನ್ನಿತರೇ ರೀತಿಗಳ ದೌರ್ಜನ್ಯಗಳನ್ನೂ ಸಹ ಗುರುತಿಸಿದೆ. ಉದಾಹರಣೆಗೆ, ನಿಮ್ಮ ಮೈದುನ ಪ್ರತಿದಿನ ನಿಮ್ಮನ್ನು ಮನೆಯಿಂದ ಆಚೆ ತಳ್ಳುವ ಬೆದರಿಕೆ ಹಾಕುತ್ತಿದ್ದಲ್ಲಿ, ಇದು ಭಾವನಾತ್ಮಕ ಕಿರುಕುಳ ಎಂದು ಪರಿಗಣಿಸಲಾಗುತ್ತದೆ.
ಕೌಟುಂಬಿಕ ಹಿಂಸೆಯ ಆವರ್ತನೆ:
ಹಿಂಸೆಯ ಏಕೈಕ ಕ್ರಿಯೆ/ಘಟನೆಯೂ ಕೌಟುಂಬಿಕ ಹಿಂಸೆ ಎಂದು ಪರಿಗಣಿಸಲಾಗುತ್ತದೆ. ನ್ಯಾಯಾಲಯಕ್ಕೆ ಹೋಗಲು ನೀವು ಸುದೀರ್ಘ ಕಾಲದಿಂದ ಹಿಂಸೆ ಸಹಿಸಿರಬೇಕಾಗುತ್ತದೆ ಎಂದೇನಿಲ್ಲ.