ಕೆಳಗಿನ ರೀತಿಗಳಲ್ಲಿ ನೀವು ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ದೂರು ನೀಡಬಹುದು:
ದೂರವಾಣಿ ಸಂಖ್ಯೆ – ೧೦೯೮ಕ್ಕೆ ಕರೆ ಮಾಡಿ:
೧೦೯೮ ಶುಲ್ಕ-ರಹಿತ ದೂರವಾಣಿ ಸಂಖ್ಯೆಯಾಗಿದ್ದು, ಭಾರತದಾದ್ಯಂತ ಚಾಲನೆಯಲ್ಲಿ ಇದೆ. ಮಕ್ಕಳ ಹಕ್ಕು ಮತ್ತು ಸಂರಕ್ಷಣೆಯತ್ತ ಕೆಲಸ ಮಾಡುತ್ತಿರುವ ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್ ಸಂಸ್ಥೆಯು ಈ ಸಂಖ್ಯೆಯನ್ನು ಚಾಲನೆಯಲ್ಲಿಟ್ಟಿದೆ. ಈ ಸಂಖ್ಯೆಗೆ ಯಾರಾದರೂ, ಖುದ್ದಾಗಿ ಮಕ್ಕಳು ಕೂಡ ಕರೆ ಮಾಡಿ ದೂರು ನೀಡಬಹುದು. ಬಾಲ ಕಾರ್ಮಿಕ ಪದ್ಧತಿಗಳನಂತಹ ಅಕ್ರಮ ಚಟಿವಟಿಕೆಗಳನ್ನು ನಿಲ್ಲಿಸಲು, ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಅಥವಾ ಕೆಲಸ ಮಾಡುತ್ತಿರುವ ಮಕ್ಕಳಿಗೆ ಈ ದೂರವಾಣಿ ಸಂಖ್ಯೆಯ ಬಗ್ಗೆ ತಿಳಿಹೇಳಬೇಕು.
ನೀವು ೧೦೯೮ಕ್ಕೆ ಕರೆ ಮಾಡಿದಾಗ, ಕರೆಯನ್ನು ಉತ್ತರಿಸಿದ ವ್ಯಕ್ತಿಗೆ ಕೆಳಗಿನ ವಿವರಗಳನ್ನು ನೀಡಬೇಕು:
- ಮಗುವಿನ ಹೆಸರು (ಗೊತ್ತಿದ್ದರೆ)
- ವಯಸ್ಸು (ಅಂದಾಜು)
- ಮಗುವಿನ ವಿವರಣೆ
- ವಿಳಾಸ (ಖಚಿತವಾದ ಸ್ಥಳ ಮತ್ತು ಹೆಗ್ಗುರುತನ್ನು ನೀಡಬೇಕು)
೧೦೯೮ಕ್ಕೆ ಕರೆ ಮಾಡಿದ ನಂತರ:
ನೀವು ನೀಡಿದ ವಿವರಗಳನ್ನು ಕರೆ ಉತ್ತರಿಸಿದ ವ್ಯಕ್ತಿ ಮಗು ಇರುವ ಜಿಲ್ಲೆಯಲ್ಲಿ ಕಾರ್ಯಗತವಾದ ಕೆಳಮಟ್ಟದ ಸಿಬ್ಬಂದಿಗಳಿಗೆ ತಿಳಿಸುತ್ತಾರೆ. ಈ ಕೆಳಮಟ್ಟದ ಸಿಬ್ಬಂದಿಗಳು, ಸಮಾಜ ಕಲ್ಯಾಣದತ್ತ ಕೆಲಸ ಮಾಡುತ್ತಿರುವ ಸಂಸ್ಥೆ ಮತ್ತು ಚೈಲ್ಡ್ ಲೈನ್ ಫೌಂಡೇಶನ್ ಸಂಸ್ಥೆಯ ಸದಸ್ಯರಾಗಿರುತ್ತಾರೆ. ಇವರು ಮಗುವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮಗೆ ಕರೆ ಮಾಡಬಹುದು. ವಿಚಾರಣೆ ನಡೆಸಿದ ನಂತರ, ಕೆಳಗಿನ ವಿಭಾಗಗಳ ಸಂಯೋಜನೆಯಲ್ಲಿ ಅಗತ್ಯವಾದ ಕ್ರಮ ತೆಗೆದುಕೊಳ್ಳುತ್ತಾರೆ:
- ಕಾರ್ಮಿಕ ವಿಭಾಗ
- ಪೊಲೀಸ್
- ಮಾನವ ಕಳ್ಳಸಾಗಾಣಿಕೆ ವಿರೋಧ ವಿಭಾಗ
- ಸರ್ಕಾರೇತರ ಸಂಸ್ಥೆಗಳು
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಕರೆ ಮಾಡುವುದು:
ಈ ಲಿಂಕಿನಲ್ಲಿ (https://kscpcr.karnataka.gov.in/page/Contact+Us/en) ಕೊಟ್ಟ ದೂರವಾಣಿ ಸಂಖ್ಯೆಗೆ ಕೂಡ ನೀವು ಕರೆ ಮಾಡಿ ದೂರು ನೀಡಬಹುದು.
ಆನ್ಲೈನ್ ದೂರು ನೀಡುವುದು:
ಕೇಂದ್ರೀಯ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಜಾಲತಾಣದಲ್ಲಿ ಬಾಲ ಕಾರ್ಮಿಕ ವಿಭಾಗದಲ್ಲಿ ನೀವು ಆನ್ಲೈನ್ ದೂರು ನೀಡಬಹುದು. ಇಲ್ಲಿ ಬಹುಮುಖ್ಯವಾಗಿ ಕೆಳಗಿನ ವಿವರಗಳನ್ನು ನೀಡಬೇಕಾಗುತ್ತದೆ:
- ಕೆಲಸ ಮಾಡುತ್ತಿರುವ ಮಗುವಿನ ಚಿತ್ರಣ/ವಿವರಣೆ
- ಮಗು ಕೆಲಸ ಮಾಡುತ್ತಿರುವ ರಾಜ್ಯ ಮತ್ತು ಜಿಲ್ಲೆ
- ನಿಮ್ಮ ವಿವರಗಳು – ಹೆಸರು, ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ, ಇತ್ಯಾದಿ.
ಪೊಲೀಸ್ ಠಾಣೆ:
ನೀವು ಕೇಳಿದ ಅಥವಾ ನೋಡಿದ ಬಾಲ ಕಾರ್ಮಿಕ ಪ್ರಕರಣದ ಬಗ್ಗೆ ದೂರು ನೀಡಲು ನೀವು ಪೊಲೀಸ್ ಠಾಣೆಗೆ ಹೋದರೆ, ಅಲ್ಲಿ ನಿಮಗೆ ಎಫ್.ಐ.ಆರ್.ಅನ್ನು ದರ್ಜಿಸಲು ಕೋರಲಾಗುತ್ತದೆ. ನೀವು ನೋಡಿದ ಬಾಲ ಕಾರ್ಮಿಕ ಪ್ರಕರಣದ ಬಗ್ಗೆ ಗೊತ್ತಿದ್ದ ಎಲ್ಲ ವಿವರಗಳನ್ನು ಇಲ್ಲಿ ನೀವು ನೀಡಬೇಕಾಗುತ್ತದೆ.
ಅಂಚೆ:
ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗಕ್ಕೆ, ಯಾವ ಭಾಷೆಯಲ್ಲಾದರೂ, ಶುಲ್ಕರಹಿತವಾಗಿ ನೀವು ದೂರು ಸಲ್ಲಿಸಬಹುದು. ಕೆಳಗಿನ ವಿಳಾಸಕ್ಕೆ ನಿಮ್ಮ ದೂರನ್ನು ಕಳಿಸಬಹುದು:
ಅಧ್ಯಕ್ಷರು, ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ, ೫ನೆ ಮಹಡಿ, ಚಂದ್ರಲೋಕ ಕಟ್ಟಡ, ೩೬, ಜನಪಥ್, ನವ ದೆಹಲಿ- ೧೧೦೦೦೧.